ಶಕ್ತಿದೇವತೆಯ ಆರಾಧನಾ ಸಂಪ್ರದಾಯದಲ್ಲಿ ದೇವಿಯ ಮಹಿಮೆಗಳನ್ನು ಭಕ್ತಿಯಿಂದ ಸ್ತುತಿಸುವಾಗ ಹಿನ್ನೆಲೆಯಲ್ಲಿ ನುಡಿಸುವ ವಾದ್ಯಕ್ಕೆ ಚೌಡಿಕೆಯೆನ್ನುತ್ತಾರೆ. ಈ ಸಂಪ್ರದಾಯವು ಇಡಿಯ ಕರ್ನಾಟಕದ ತುಂಬ ಪ್ರಚಲಿತವಿದೆ. ಕರ್ನಾಟಕದಲ್ಲಿ ಅದರ ಮುಖ್ಯ ಕೇಂದ್ರಗಳು ನಾಲ್ಕು ಇವೆಯೆಂದು ಹೇಳುತ್ತಾರೆ. ಉಚ್ಚಂಗಿ (ಜಿ. ಬಳ್ಳಾರಿ), ಚಂದ್ರಗುತ್ತಿ (ಜಿ. ಶಿವಮೊಗ್ಗ), ಹುಲಗಿ (ಜಿ. ರಾಯಚೂರು), ಸವದತ್ತಿ (ಜಿ. ಬೆಳಗಾವಿ), ಇವೇ ಆ ನಾಲ್ಕು ಕೇಂದ್ರಗಳು. ಇವುಗಳಲ್ಲಿ ಸವದತ್ತಿ ಪ್ರಸಿದ್ಧವಾದ ಯಾತ್ರ ಸ್ಥಳವಾಗಿದೆ. ಕೊಗಟನೂರು, ಜತ್ತಿಗಳಲ್ಲಿಯೂ ಎಲ್ಲಮ್ಮನ ದೇವಸ್ಥಾನಗಳು ಪ್ರಸಿದ್ಧವಾಗಿವೆ. ಆದರೆ ಸವದತ್ತಿಯು ಹೊರನಾಡುಗಳಿಂದ ಅಸಂಖ್ಯ ಭಕ್ತರನ್ನು ಆಕರ್ಷಿಸಿದೆ.

ಚೌಡಿಕೆ ನುಡಿಸುವವರಿಗೆ ಜೋಗಿ, ಜೋಗತಿ ಎಂದು ಕರೆಯುತ್ತಾರೆ. ಅವರು ಎಲ್ಲಮ್ಮ ದೇವಿಯ ಸೇವೆಗಾಗಿ ದೀಕ್ಷೆ ಪಡೆದವರು.

ಕಾರ್ತವೀರ್ಯರಸು, ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ಕಾಮಧೇನುವಿಗೆ ಆಶೆಪಟ್ಟು, ಋಷಿಯನ್ನು, ಕೊಂದು ಅದನ್ನು ಎಳೆದೊಯ್ಯುತ್ತಾನೆ. ಅದಕ್ಕಾಗಿ ಋಷಿ ಪತ್ನಿ ರೇಣುಕೆಯು, ದುಃಖ ವಿವ್ಹಲಳಾಗಲು, ಆಕೆಯ ಮಗ ಪರಶುರಾಮನು ಕಾರ್ತಈರ್ಯನನ್ನು ಕೊಂದು ಕಾಮಧೇನುವನ್ನು ಮರಳಿ ತರುತ್ತಾನೆ. ಕಾರ್ತವೀರ್ಯನ ಶರೀರದ ಭಾಗಗಳಿಂದ ಚೌಡಿಕೆಯೆಂಬ ವಾದ್ಯ ರಚಿಸಿ, ನುಡಿಸಿ ತಾಯಿಯನ್ನು ಸಾಂತ್ವನಗೊಳಿಸುತ್ತಾನೆ. ಕಾರ್ತವೀರ್ಯನ ಹೊಟ್ಟೆಯೇ ಚೌಡಿಕೆಯ ಕೊಳಗ, ಕರುಳೇ ತಂತಿ, ಕೈಯೇ ಸರಿಗೋಲು, ಬೆರಳೇ ಬಾರಿಸುವ ಕಡ್ಡಿ, ಮುಂದೆ ಮರುತಂತಿ ಮತ್ತು ಚರ್ಮ ಈ ಮೂರು ಸೇರಿ ಇಂದಿನ ಚೌಡಿಕೆಯಾಗಿದೆ.

ಚೌಡಿಕೆಯ ಜೋಗಯ್ಯನಿಗೆ ವಿಶೇಷ ಉಡುಪು ಇರುವುದಿಲ್ಲ. ಹಣಿಯಲ್ಲಿ ದೇವಿಯ ಭಂಡಾರ, ಕೊರಳಲ್ಲಿ ಮಣಿ, ಹೆಗಲಲ್ಲಿ ಜೋಳಿಗೆ ತೀರಿತು, ಜೋಗಿತಿಯಾದರೆ ಹಣೆಯಲ್ಲಿ ಅಗಲವಾದ ಕುಂಕುಮ, ಭಂಡಾರ ಮುಡಿಯಲ್ಲಿ ಹೂವು, ಕಾಲಿಗೆ ಗೆಜ್ಜೆ, ತಲೆಯ ಮೇಲೆ ದೇವಿಯ ಪ್ರತೀಕವಾದ ಬಿಂದಿಗೆ ಅಥವಾ ಜಗ, ಬಿಂದಿಗೆಯ ಬಾಯಿಗೆ ನವಿಲುಗರಿ, ವೀಳೆಯದೆಲೆ ಮುಂತಾದವುಗಳನ್ನಿಟ್ಟು ಮುಂಭಾಗಕ್ಕೆ ಎಲ್ಲಮ್ಮನ ಮೂರ್ತಿಯನ್ನು ಅಳವಡಿಸಿ ಅಲಂಕರಿಸಿರುತ್ತಾರೆ.

ಹಾಡಿ ಕುಣಿಯುವ ಜೋಗಿ-ಜೋಗಿತಿಯರಲ್ಲಿ ಹಿಮ್ಮೇಳ, ಮುಮ್ಮೇಳ ಇರುವುದುಂಟು. ಶಾಪಕ್ಕೀಡಾದ ಗಂಡಸರೂ ಸೀರೆಯುಟ್ಟು, ಚೌಡಿಕೆ ಬಾರಿಸುತ್ತ ಮೇಳದೊಂದಿಗೆ ತಿರುಪೆಯೆತ್ತಿ ಉಪಜೀವಿಸುತ್ತಾರೆ. ಚೌಡಿಕೆಯ ನಾದ-ಪೆಟ್ಟುಗಳನ್ನು ಕೇಳುತ್ತಲಿದ್ದರೆ, ಪ್ರಾಣ ಶಕ್ತಿ ಜಾಗೃತವಾಗಿ ಪುನಃ ಪುರುಷತ್ವ ಪ್ರಾಪ್ತವಾಗುವುದೆಂದು ಹೇಳುತ್ತಾರೆ. ಚೌಡಿಕೆಯವರು ಮುಖ್ಯವಾಗಿ ರೇಣುಕೆಯ ಮಹಿಮೆಗಳನ್ನು ಹಾಡುವವರಲ್ಲದೆ ಜನಪದ ಕಥಾ ಪ್ರಸಂಗಗಳನ್ನೂ ನಡೆಸುತ್ತಾರೆ. ಕಥಾಪ್ರಸಂಗ ನಡೆಸುವಾಗ ಪ್ರಧಾನ ಗಾಯಕನು ಚೌಡಿಕೆ ಹಿಡಿದು ನಿಲ್ಲುತ್ತಾನೆ. ಅವನ ಅಕ್ಕಪಕ್ಕದಲ್ಲಿ ಶ್ರುತಿಗಾಯಕ ಮತ್ತು ಇಬ್ಬರು ಹಿಮ್ಮೇಳದವರು ಇರುವುದುಂಟು.

ಆದಿಯಲ್ಲಿ ರೇಣುಕೆಯಾಗಿ
ತ್ರೇತದೊಳಗೆ ಜಾನಕಿಯಾಗಿ
ದ್ವಾಪರದಲ್ಲಿ ದ್ರೌಪದಿಯಾಗಿ
ಕಲಿಯುಗದಲ್ಲಿ ಎಲ್ಲಮ್ಮನೆನಿಸಿದೆ ||
ದಂಡ ದೈತ್ಯರ ಹೊಡೆದು
ರುಂಡ ಚೌಡಿಕಿ ಮಾಡಿ
ಪರಶುರಾಮನ ಪಡೆದೀ
ಆನಂದಾದೇವಿ-
ಪರಶುರಾಮನ ಪಡೆದೀ ||

ಚೌಡಿಕೆಯವರಲ್ಲಿ ಎರಡು ವಿಧ. ಮನೆತನದ ಸಂಪ್ರದಾಯದಂತೆ ದೀಕ್ಷೆ ಪಡೆದು, ಮನೆ ದೇವತೆಯನ್ನು ಸ್ತುತಿಸಿ, ಹಬ್ಬ ಹುಣ್ಣಿವೆಗಳಲ್ಲಿ ದೇವಿಯ ಜೋಳಿಗೆ, ಚೌಡಿಕೆ ಹಿಡಿದು ಮನೆಮನೆಗೆ ಹೋಗಿ ಹಾಡಿ ಕುಣಿದು ಭಿಕ್ಷೆ ಸ್ವೀಕರಿಸುವುದು ಒಂದು ವರ್ಗ. ಇನ್ನೊಂದು ವರ್ಗವೆಂದರೆ, ವೃತ್ತಿ ಗಾಯಕರು. ಇವರೂ ದೀಕ್ಷೆ ಪಡೆದವರೇ. ಆದರೆ ಒಂದು ಕಡೆ ನೆಲೆನಿಂತವರಲ್ಲ. ಊರುಗಳನ್ನು ಸುತ್ತಿ ಕಥಾಪ್ರಸಂಗಗಳನ್ನು ನಡೆಸುತ್ತಾರೆ. ಇದೇ ಜೀವನಾಧಾರ ಅವರಿಗೆ, ಅವರು ಹುಟ್ಟು ಕಲಾವಿದರು.

ಕೆಲವೆಡೆ ಜೋಗಿಯ ಹಾಡಿನ ಗತ್ತಿಗೆ ಜೋಗಿತಿಯ ಕುಣಿತ, ಇವರ ಅಭಿನಯದ ಮತ್ತೊಂದು ರೂ. ಜೋಗಿತಿಯರು ತಲೆಯ ಮೇಲೆ ದೇವಿಯ ಪ್ರತೀಕವಾದ ಸಿಂಗರಿಸಿದ ತಾಮ್ರದ ಕೊಡ ಇಲ್ಲವೆ ಬಿಂದಿಗೆ, ಅಥವಾ ಜಗಹೊತ್ತು ವಿವಿಧ ಭಂಗಿಗಳ್ಲಲಿ ಕುಣಿಯುತ್ತಾರೆ. ಹೆಣ್ಣು ದೇವತೆಯ ಜಾತ್ರೆಯೋ ಉತ್ಸವವೋ ನಡೆದಲ್ಲೆಲ್ಲ ಚೌಡಿಕೆಯ ಮೇಳಗಳು ಸೇರುವುದು ನಿಶ್ಚಯ.

ಜೋಗಿತಿಯಾಗಿ ದೀಕ್ಷೆ ಪಡೆದ ಹೆಣ್ಣು ಮದುವೆಯಾಗುವಂತಿಲ್ಲ. ಇದೊಂದು ಬಗೆಯ ದೇವದಾಸಿ ಪದ್ಧತಿಯೇ ಸರಿ. ಇತ್ತೀಚೆಗೆ ಈ ಪದ್ಧತಿ ಮೆಲ್ಲನೆ ವಿರಳವಾಗುತ್ತ ನಡೆದಿದೆ. ಕೆಲವರು ತಮ್ಮ ಹೆಣ್ಣು ಮಕ್ಕಳಿಗೆ ದೀಕ್ಷೆ ಕೊಡಿಸಿದರೂ ಅವರನ್ನು ದೇವದಾಸಿಯರಾಗಲು ಬಿಡುತ್ತಿಲ್ಲ; ಗೃಹಿಣಿಯರಾಗಿ, ದೈವರಾಧನೆ ನಡೆಸಲು ಅವರಿಗೆ ಅವಕಾಶ ಕೊಡುತ್ತಾರೆ. ಈ ಕ್ರಮ ಒಳ್ಳೆಯದೆಂದು ತೋರುತ್ತದೆ.

ಕರ್ನಾಟಕದಲ್ಲಿ ಚೌಡಿಕೆ ಸಂಪ್ರದಾಯವು ಒಂದು ಪಂಗಡದವರಿಗೆ ಅಥವಾ ಮತದವರಿಗೆ ಮಾತ್ರ ಸೇರಿದ್ದಲ್ಲ ಮರಾಠಿಗರು, ಹರಿಜನರು, ಕುರುಬರು ಈ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದಾರೆಂದು ಹೇಳಲಾಗುತ್ತದೆ.

ಎಲ್ಲಮ್ಮನ ಜಾತ್ರೆಯಲ್ಲಿ ಅಲ್ಲಾನದೇನು-ಎಂಬ ಲೋಕೋಕ್ತಿಯನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಚೌಡಿಕೆಯವರು ಹಾಡುವ ಅನೇಕ ರಚನೆಗಳನ್ನು ಮಹಮ್ಮದಿಯರು ರಚಿಸಿದ್ದುಂಟು. ಇದು ಆಶ್ಚರ್ಯವಲ್ಲವೇ? ಇಲ್ಲಿ ಹಲಸಂಗಿ ಖಾಜೇಭಾಯಿ ಹಾಗೂ ಸಾವಳಗಿ ಮಹಮ್ಮದ ಸಾಹೇಬ ಇವರ ಹೆಸರು ಉದಾಹರಿಸಬಹುದು. ಹೆಣ್ಣು ಮಕ್ಕಳು ರಚಿಸಿದ ಹಾಡುಗಳನ್ನೂ ಚೌಡಿಕೆಯವರು ಹಾಡುತ್ತಾರೆ. ಕಾಶೀಬಾಯಿ ಎಂಬವಳ ಹಾಡು ಕೇಳಸಿಗುತ್ತವೆ. ಆದರೆ ಆಕೆ, ಎಲ್ಲಿಯವಳು, ಎಂದಿನವಳು ಸ್ಪಷ್ಟವಾಗಿ ತಿಳಿಯಬೇಕಾಗಿದೆ. “ದೇವಿ ನೀನ ಮಾಯಿ ನೀನ” ಮೊದಲಾದ ಹಾಡುಗಳ ಧಾಟಿ ಹಾಗೂ ಶಬ್ದಜೋಡಣೆಗಳು, ಚೌಡಿಕೆಯ ಸದ್ದು ಹಾಗೂ ತಾಳಗತ್ತಿಗೆ ತುಂಬ ಹೊಂದಿಕೊಂಡಿವೆಯೆಂದು ಕೇಳಿದವರೆಲ್ಲರೂ ಒಪ್ಪಿಕೊಳ್ಳುತ್ತಾರೆ.