“ಸತಿ ಪತಿಯರು ಕೂಡಿ, ರತಿಕ್ರೀಡೆಗಳನಾಡಿ ಪತನವಾದಿಂದ್ರಿಯ ಪ್ರತಿಮೆಯ ದೇಹ”ವಾದರೂ ಅದನ್ನು ತೊಟ್ಟು ಬಂದ ಹೆಂಗೂಸು ಹುಟ್ಟಿದ ಮನೆಗೆ ಮಗಳಾಗಿ, ಕೊಟ್ಟ ಮನೆಗೆ ಸೊಸೆಯಾಗಿ, ಕೊಟ್ಟವನಿಗೆ ಸತಿಯಾಗಿ; ಹುಟ್ಟಿದ ಮಗುವಿಗೆ ತಾಯಾಗಿ ಒಂದೇ ಜನ್ಮದಲ್ಲಿ ನಾಲ್ಕು ಅವತಾರಗಳನ್ನು ತಳೆಯುತ್ತದೆ. ಇವೆಲ್ಲ ಜೀವಿತ ಮರಣಗಳೇ ಸೈ. ಹುಟ್ಟಿದ ಮನೆ, ಹಡೆದ ತಾಯಿತಂದೆ, ಬಂಧುಬಳಗ, ನೆರೆಹೊರೆ ಮೊದಲಾದ ಸಂಬಂಧಗಳನ್ನು ಬಿಟ್ಟುಕೊಡುವುದಾಗಲಿ ಅವುಗಳನ್ನು ಅಗಲುವುದಾಗಲಿ ಮರಣಕ್ಕಿಂತ ಕಠಿಣ. ಸಾಯುವುದೇ ಸುಲಭ. ಸಾವನ್ನಪ್ಪಿದಾಗ ಉಳಿದ ಸಂಬಂಧಗಳೆಲ್ಲ ತಾವಾಗಿ ಕಳಚಿ ಬೀಳುವವು. ಆದರೆ ಜೀವ ಉಳಿಸಿಕೊಂಡು ಸಂಬಂಧಗಳನ್ನು ತೊರೆಯುವದೆಂದರೆ ದುರ್ಮರಣವನ್ನು ಅಪ್ಪಿದಂತೆ. ಮದುವಣಗಿತ್ತಿ ಮೊದಗಿತ್ತಿಯಾಗಿ ಅತ್ತೆಯ ಮನೆಯನ್ನು ಪ್ರವೇಶಿಸಿ, ಸೊಸೆಯಾಗಿ ಹೊಸ್ತಿಲಿಗೆ ಶುಭವನ್ನು ಬರೆಯುವಳು. ಕೈ ಹಿಡಿದ ನಲ್ಲನಿಗೆ ಅರ್ಧಾಂಗಿಯಾಗಿ, ಜೀವನದ ಜೊತೆಗಾರ್ತಿಯಾಗಿ ಮಾರ್ಪಡುವದೆಂದರೆ ಅದ್ಭುತ ರಸಾಯನದ ಪರಿಪಾಕವೇ ಸರಿ, ಮುಂದೆ ಮಗುವಿನ ತಾಯಿಯಾಗುವ ರೀತಿಯು ಕೊಡದಲ್ಲಿ ಕುಂಬಳ ಬೀಜವೂರಿ ಬಳ್ಳಿಯೆಬ್ಬಿಸಿ ಕುಂಬಳಕಾಯಿ ಪಡೆಯುವಂಥ ದುಸ್ಸಾಧ್ಯ ಕಮ್ಮಟವೇ ಅದಾಗಿದೆ. ಅದು ದುರ್ಮರಣ ಆತ್ಮಹತ್ಯೆಗಳಿಗಿಂತ ಕ್ರೂರ-ಕಠೋರವೆಂದು ತೋರಿದರೂ ಶಿವಶಕ್ತಿಯ ಕೈ ಚಲಕದಿಂದ ಅದೊಂದು ಆಟ ಮಾಟವಾಗಿಯೇ ತೋರ್ಪಡುವದು. ಈ ಎಲ್ಲ ಕ್ರಿಯೆಗಳನ್ನು ಬಗೆದೇ ಗರತಿ ಹಾಡಿದ್ದಾಳೆ.

ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದೆ
ನಾ ಹುಟ್ಟಿ ಮನೆಗೆ ಎರವಾದೆ | ಹಡೆದವ್ವ |
ನೀ ಕೊಟ್ಟ ಮನೆಗೆ ಹೆಸರಾದೆ ||

ತವರು ಮನೆಯ ತಾವರೆಯ ಕೊಳ, ಗಂಡನ ಮನೆ ದೇವಾಲಯ, ಅತ್ತೆ -ಮಾವ, ಗಂಡ-ಮೈದುನ ಮೊದಲಾದವರೆಲ್ಲ ಅದರೊಳಗಿನ ದೇವತೆಗಳು. ದೇವತೆಗಳಿಗೆ ನೆರಳು ನೀಡಿದ ತಾವರೆ ಮರಳಿ ತಾವರೆ ಕೊಳ್ಳಕ್ಕೆ ಹೋಗಬೇಕಿಲ್ಲ. ಆದರೆ ಕುಂಜರವು ವನವ ನೆನೆವಂತೆ, ಹೆಣ್ಣು ಹರೆಯಳಿದ ಹಣ್ಮು ಮುದಿಕೆಯಾದರೂ ತವರನ್ನು ಮರೆಯುವಂತಿಲ್ಲ, ಸಂಬಂಧ ತಪ್ಪಿಸುವಂತಿಲ್ಲ. ನೆನೆಯುತ್ತಲೆ ಇರುತ್ತಾಳೆ. ತಾವರೆ ಹುಟ್ಟಿನ ಕೊಳ್ಳಕ್ಕೆ ಅದೊಂದು ಪರಮ ಶ್ರೇಯಸ್ಕರವಾದ ಸಂಗತಿಯೇ ಆಗಿದೆ. ಅದು ಅತ್ತೆಮನೆಯ ದೇವತೆಗಳಿಗೆ ನೀಡಿದ ನೆರಳು; ರಮಣೀಯವಾದದ್ದು. ಆ ತಾವರೆಯ ಹಿರಿಮೆ, ಮೇಲ್ಮನೆ ಸಹಜ ಕ್ರಮದಲ್ಲಿ ಅರಳಿದ್ದು. ಹೂ ಅಂದರೆ ಭಕ್ತಿಯ ಸ್ಥೂಲ ರೂಪವಂತೆ. ಅದು ದೇವ ಪೂಜೆಗೆ ಅರ್ಪಿತವಾದರ ಕಟ್ಟೆಯ ಕಲ್ಲು ಕಟ್ಟೆಗೆ ಕುಳಿತಂತೆ; ಕೆರೆಯ ನೀರು ಕೆರೆಗೆ ಕೂಡಿದಂತೆ. ತಾವರೆ ಮರಳಿ ಕೊಳದ್ದಾಗ ಲಾರದೆಂದರೂ ಅದು ಕೊಳ್ಳವನ್ನು ಹೃನ್ಮಂದಿರದಲ್ಲಿ ಕಳಕಳಿಸುತ್ತಲೇ ಇರುತ್ತದೆ. ಆರುಜನ ಸೊಸೆಯಂದಿರನ್ನು ನಡೆಯಿಸಿಕೊಳ್ಳುವ ಅತ್ತೆಯಾದರೂ ಆಕೆಯಲ್ಲಿ ತವರಿನ ಹಂಬಲ ಗರಿ ಗೆದರಿಯೇ ನಿಂತಿರುತ್ತದೆ; ಹಸುರಾಗಿಯೇ ಉಳಿದಿರುತ್ತದೆ. ತವರು ಮನೆಯ ಹಂಗ ನೂಲು ಆಕೆಯ ಕೊರಲಿಗೆ ಕೊಂಡಿಯಾಗಿ ಚಿರಕಾಲ ಸಂಗಡಿಸುವದು.

ಕಣ್ಣೆಂಜಲ ಕಾಡಿಗೆ ಬಾಯೆಂಜಲವೀಳ್ಯದ
ಯಾರೆಂಜಲುಂಡಿ ನನಮನವೇ | ಹಡೆದವ್ನ
ಬಾಯೆಂಜಲುಂಡು ಬೆಳೆದೇನ ||

ಎನ್ನುವ ನೆನಹು ಹೆಣ್ಣಿನೆದೆಯಲ್ಲಿ ಕೊರೆದು ಬರೆದಂತಾಗಿರುತ್ತದೆ. ಅಂತೆಯೇ ಆಕೆ ತಂದೀಯ ನೆನೆದರೆತಂಗೂಳ ಬಿಸಿಯಾಗುವದೆಂದೂ, ಗಂಗಾದೇವಿ ನನ್ನ ಹಡೆದವ್ವನ ನೆನೆದರೆ ಮಾಸಿದ ತಲೆ ಮಡಿಯಾಗುವದೆಂದೂ ಬಗೆದುಂಬಿದ್ದಾಳೆ. ಲೆಕ್ಕವಿಲ್ಲದ ಬಳಗವೆಲ್ಲ ಒಳೆಯೊಳಗಿನ ಸಾವಿರಕೊಳ್ಲಿಗಳೆಂದೂ, ತಾಯಿ ಮಾತ್ರ ಜ್ಯೋತಿಯೆಂದೂ ಆಕೆ ಭಾವಿಸಿದ್ದಾಳೆ. ರಾಗಿಯ ಒಣ ರೊಟ್ಟಿ, ರಾಜಗೋಳಿಯಪಲ್ಲೆ ತಿನ್ನುವ ಬಡತನದ ನೆಲೆಯಾದರೂ, ತವರಿಗೆ ಹೋಗಿ ನಾಲ್ಕುದಿನ ಇದ್ದು ಬರಬೇಕೆನ್ನುವ ಬಯಕೆ ಯಾವಾಗಲೂ ಹಸಿರಾಗಿರುತ್ತದೆ ಆಕೆಯಲ್ಲಿ. “ತಾಯಿಯ ಮನೆಗ್ಹೋಗಿ ಬಾಯಿಬೇಡಿದ್ದುಂಡೆ” ನೆಂದೇ ಹೇಳುವದರಲ್ಲಿ ಅತಿಶಯೋಕ್ತಿಯಿರಬಹುದು. ಆದರೆ ಅದು ಸುಳ್ಳಸಂಗತಿಯೇನಲ್ಲ. ಶಾವಿಗಿ-ಸೈದಾನ ಉಣ್ಣುವಾಗ ಹಡೆದವ್ವನ ಮುಖ ಕಂಡರೆ ಮೊಲೆಹಾಲು ಉಂಡಂತಾಗುವದೆಂಬ ಅನುಭವವು. ಬರಿ ಅನುಭವ ಮಾತ್ರ ಆಗಿರದೆ, ಉದಾತ್ತ ಅನುಬಾವವೂ ಆಗಿದೆಯೆಂದು ಎದೆತಟ್ಟಿ ಹೇಳಬಹುದಾಗಿದೆ. ಏನಾದರೂ ಅದು ಹಾಲುಂಡ ತವರಲ್ಲವೆ?

ತಾಯಿ ಕಟ್ಟಿದ ಬುತ್ತಿಯೆಂದರೆ ತರತರದ ಯಾಲಕ್ಕಿಯದು. ಅದನ್ನು ಬಿಚ್ಚಿ ಉಣ್ಣುವುದಕ್ಕೆ ಭೀಮರತಿಯ ತೀರವೇ ತಕ್ಕತಾಣ. ತವರು ಮನೆಯ ದೀಪವನ್ನು ತವರೇರಿ ನೋಡಿ ಹತ್ತುಬೆರಳು ಹಣೆಗೆ ಹಚ್ಚಿ ಶರಣೆನ್ನದೆ ಹೆಣ್ಣು ಇರಬಹುದೇ? ಗಂಜೀಯ ಕುಡಿದರೂ ಗಂಡನ ಮನೆಲೇಸು ಎನ್ನುವಳು, ತವರುಮನೆಯನ್ನು ಹರಸದೆ ಇರಲಾರಳು.

ತವರು ಮನೆಯನ್ನು ಮರೆತು, ಅತ್ತೆ ಮನೆ ಅಳವಡುವವರೆಗಿನ ನಡುಗಾಲವೆಂದರೆಸಂಧಿ ಕಾಲವೇ ಸರಿ. ಅದು ಮೂರು ಸಂಜೆ ಆಗಿರಬಹುದು ಇಲ್ಲವೇ, ಮುಸುಕಿನ ಮುಂಜಾವು ಆಗಿರಬಹುದು. ಆದರೆ ಅದು ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಒಮ್ಮೆ ಹಗಲಿನ ಆವೇಶ ಕಾಣಿಸಿದರೆ, ಇನ್ನೊಮ್ಮೆ ರಾತ್ರಿಯ ಅಭಾಸ ಗೋಚರಿಸುವದು. “ಎಂಥಾ ಮಗಳಿಗೆ ಎಂಥಾ ಮನೆ ಸಿಕ್ಕಿತು” ಎಂದು ಕನವರಿಸ ಪ್ರಸಂಗದಂತೆ, “ಇಂಥ ಮಗಳಿಗೆ ಅಂಥದು ಸಿಗದೆ ಇನ್ನೆಂಥದು ಸಿಕ್ಕೀತು” ಎಂದು ಹರ್ಷಿಸುವ ಸಂದರ್ಭವೂ ತಾಯಿಯಾದವಳಿಗೆ ಬಾರದೆ ಹೋಗಲಾರದು.

ಅತ್ತಿಗೆ ಹಡೆಯಲಿ ಹೆತ್ತೆಮ್ಮೆ ಕರೆಯಲಿ
ಹಿತ್ತಲಬಾಳಿ ಚಿಗಿಯಲಿ | ಅತ್ತೆಂದು |
ಅತ್ತಿಗೆಯ ಮಗಳು ಕರೆಯಲಿ ||
ಒಲ್ಲದ ಒಗೆತನ ಎಲ್ಲಿತ್ತೋ ಮಗಳೀಗಿ
ಬೆಲ್ಲಕ ಬೇವು ಕಲತಂಗ | ಅಡವ್ಯಾನ |
ಕಲ್ಲೀಗಿ ಧಾರಿ ಎರೆಧಂಗ ||
ಮಲ್ಲೀಗಿಯಂಥಾ ಮಗಳೀಗಿ ಎಲ್ಲಿತ್ತೋ ಒಗೆತನ
ಹುಲ್ಲಾಗ ಬೆಂಕಿ ಒಗೆಧಂಗ | ಗುಡ್ಡದ
ಕಲ್ಲೀಗಿ ಧಾರಿ ಎರೆಧಂಗ ||
ಅತ್ತಿಮನಿಯ ಊಟ, ಮಟ ಮಟ ಮದ್ಯಾಣ

ಇಂಥ ಪರಿಸ್ಥಿತಿಯ ಸುಳುಹು ಕಾಣುವ ಮಗಳು, ಅತ್ತೆಯ ಮನೆಗೆ ಹೋಗುವ ಪ್ರಸಂಗದಲ್ಲಿ, “ಹೋಗಂದ್ರ ಹೋಗಳು, ಹೊಸ್ತಲ ದಾಟಳು. ಮಾರಿ ನೋಡಿ ನೋಡಿ ಅಳತಾಳ | ಹ್ಯಾಂಗತ್ತಿ ಮನೆಗೆ ಕಳುಹಾಲೇ?” ಎಂದು ಕಳವಳಿಸುವ ಅನುಭವ ಪಡೆದವರೆಷ್ಟಿಲ್ಲ? ತಾಯಿ ಹೇಳುತ್ತಾಳೆ.

“ಸೋದರ ಮಾವನ ಸೊಸೆಯಾಗು ನನ ಮಗಳ? ಬಿಸಿಲಾಗ ನೀರ ತರಗೊಡನ” ಅದು ಸಾಧಿಸಿದಂತೆ, ಅಣ್ಣನ ಮನೆಯ ಇದಿರುಗುಬಸ ಸಾಧಿಸಿದರೆ ತಾಯಿಯು ಹೊತ್ತಲ್ಲದ ಹೊತ್ತಿನಲ್ಲಿ ಬೀಸಲು ಕುಳಿತು, “ಕಣ್ಣ ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ | ಬಣ್ಣಕ ನನ್ನ ಸೊಸಿ ಚೆಲುವಿ” ಎಂದು ಹಾಡಿಯೇ ಹಾಡುವಳು. ಆದರೆ ಬೆಳಗಾಗಿ ಬಿಸಿಲು ಬಿದ್ದರೂ ಮುಸುಕುಹಾಕಿ ಮಲಗಿಕೊಂಡಿರುವ ಮಗಳನ್ನು ಎಬ್ಬಿಸುವ ರೀತಿಯೇ ಬೇರೆ ತಾಯಿಯದು-

ವಾರೀಗಿ ಪುರುಷರ ತೋಳಮ್ಯಾಲಿನ ನಿದ್ದಿ
ಏಳ ನನಮಗಳ ಬೆಳಗಾಗಿ | ದೊಡ್ಯಾನ |
ಕೀಲ ಕರುಗೋಳು ಮೊಲೆಯುಂಡು ||

ಅದರಂತೆ ಸೊಸೆಯಾಗಿ ಬಂದ ಅಣ್ಣನ ಮಗಳಿಗೆ ಹೇಳಿಕೊಡುವ ನಯ-ನೀತಿಯ ರೀತಿ ಎಂಥದೆಂದರೆ –

ನನ್ನ ಅಣ್ಣನ ಮಗಳ, ನನ್ನ ಹೋಲಲಿಬ್ಯಾಡ
ನನ್ನಲ್ಲಿ ಭಾರಿಗುಣವಿಲ್ಲ | ಹೇಮರಡ್ಡಿ |
ಮಲ್ಲಮ್ಮಗ್ಹೋಲ ನನಸೊಸಿಯೇ ||

ಇನ್ನೊಬ್ಬ ತಾಯಿಯ ಕಳವಳವೇ ಬೇರೊಂದು ಬಗೆಯದು.

ಸೊಸಿಯು ಬರತಾಳಂತ ಖುಷಿಭಾಳಮನದಾಗ
ಸೊಸಿಬಂದು ಮಗನ ಕಸುಗೊಂಡು | ಬಾಳ್ವಾಗ
ಮುಗಿಲೀಗಿ ಬಾಯಿ ತಗಳದಾಳ ||

ಮಲ್ಲಾಡಕ್ಕೆ ಹೆಣ್ಣು ಕೊಡಬಾರದಂತೆ. ಯಾಕೆಂದರೆ ಅಲ್ಲಿ ನೀರು ಹೊತ್ತು ಹೊತ್ತು ತಲೆ ದಡ್ಡವಾಗುವದು; ಭತ್ತ ಕುಟ್ಟು-ಕುಟ್ಟಿ ಕೈ ದಡ್ಡವಾಗುವದು.

“ಮಗನನ್ನ ಕಸುಗೊಳ್ಳುವಳೇನೋ ಸೊಸಿ” ಎಂದು ತಾಯಿ ಎದೆ ಧಡ-ಧಡಿಸುತ್ತಿರುವಾಗ, ಮೊದಲಗಿತ್ತಿಯು ರಾಯರ ಹಚ್ಚಡ ಪದರೊಳಗಿನ ಅಚ್ಚಮಲ್ಲಿಗೆ ಹೂವಿನ ಸಂಪರ್ಕ ಸುಖದಲ್ಲಿ ತವರು ಮನೆಯನ್ನು ಮರೆಯತೊಡಗುವಳು. “ರಾಯರನ ಬಿಟ್ಟು ಹ್ಯಾಂಗ ಬರಲೇ ಹಡೆದವ್ವ” ಎಂದು ಕೇಳುವಳು. ಸತಿಪತಿಗಳೊಂದಾಗುವ ರಸಾಯನವೇ ಒಂದು ಮೈಜುಮ್ಮೆನಿಸುವ ಅದ್ಭುತಕುದಿತವಾಗಿದೆ.

ಮಡದಿತವರಿಗೆ ಹೋಗಿಯಾಳೆಂದರೆ – “ಅಡಗೀಯ ಮನಿಯಾಗ ಮಡದೀಯ ಸುಳುವಿಲ್ಲ | ಅಡಗಿ ಬಾಯೀಗಿ ರುಚಿಯಿಲ್ಲ” ಎಂದು ಮಗನು ಅವ್ವನಿಗೆ ಬಾಯಿಬಿಚ್ಚಿ ಹೇಳದೆ ಗತ್ಯಂತರವಿಲ್ಲದಾಗುವದು. ಅದರಂತೆ, ಮಡದಿಯನ್ನು ಬಿಟ್ಟು ಪರನಾಡಿಗೆ ಹೊರಟ ಗಂಡನಲ್ಲಿ ಹುಟ್ಟಿಕೊಂಡ ಹಗರಣ ಹೇಳುವಂತಿದೆ. “ಊರೀಗೆ ಹೋಗುವರ ಮಾರ‍್ಯಾಕ ಬಾಡ್ಯಾವ | ಗೀರಗಂಧ್ಯಾಕ ಬೆವತಾವ” ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಎಷ್ಟೂ ಇಲ್ಲ. “ಎಂದ ಬರತೀರಿ ನನ್ನ ಗಂಧದ ರತಿಗಾರ” ಎಂದುಕೇಳಬೇಕೆಂದರೆ ಧೈರ್ಯಸಾಲದು ಹೆಂಡತಿಗೆ. ಆವಾಗ ಬೀಸುವ ಕಲ್ಲಿನ ಮುಂದೆ ಕುಳಿತು, ಬೀಸುವ ನೆವದಲ್ಲಿ ಈ ಹಾಡು ಕರೆಯದೆ ಬರುತ್ತದೆ ಆಕೆಯ ಬಾಯಿಂದ.

ಕಮಳದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಬಿಡಲಾರೆ | ಕೇದಿಗೆ
ಗರಿ ನಿನ್ನನಗಲಿ ಇರಲಾರೆ ||

ಅಗಲಿದ ಪತಿ ಸತಿಯ ಪಾಲಿಗೆ ಕಮಳದ ಹೂ! ಮಲ್ಲಿಗೆ !! ಕೆದಿಗೆಯ ಗರಿ!!! ಅದೇ ಆಕರ್ಷಣೆ ಸತಿಪತಿಗಳನ್ನು ಒಂದಾಗಿಸುವ ಕ್ರಿಯೆ ನಡೆಸುತ್ತದೆನ್ನಬೇಕು.

ನಿನ್ಯೇ ಬರಬೇಕಿತ್ತು ಪತಿರಾಯ, ಬರಲಿಲ್ಲ, ಹಲ್ಲಿಗೆ ಜಾಚೇಲಿ ಹಚ್ಚುವ ಮುಂಬೆಳಗಿನಿಂದ ಆರಂಭವಾದ ಆತುರದ ನಿರೀಕ್ಷೆಯು ಆಲಸ್ಯವಾಗಿ ಪರಿಣಮಿಸಿ – “ಇಂದಿನ ರಾತ್ರಿ ಹ್ಯಾಂಗ ಕಳೆಯಲೇ” ಎನ್ನುವ ದಂದುಗಕ್ಕೆ ಈಡಾಗುತ್ತಾಳೆ. ಓರಗೆಯ ಪುರುಷನೆಂದರೆ, ಹಣಚಿ ಬಟ್ಟಿನ ಮೇಲೆ ಹರಿದಾಡುವ ಕುಂಕುಮವಂತೆ. ಹಣಚಿ ಬಟ್ಟು ಒತ್ತಟ್ಟಿಗೆ, ಕುಂಕುಮ ಒತ್ತಟ್ಟಿಗೆ ಆದರೆ ಗತಿಯೇನು? ತಿಂಗಳಿಗೊಮ್ಮೆ ತಚಪ್ಪದೆ ಮೂಡಿ ನಿಲ್ಲುವ ಚಂದ್ರಾಮ ತಡೆಯುವ ಕಾರಣವೇನು?

ಸತಿಯ ಪಾಲಿಗೆ ಬಳಗವೆಲ್ಲಬಂಗಾರದೊಡವೆಗಳಂತಾಗಿದ್ದರೆ, ಪತಿಮಾತ್ರ ಅದರೊಳಗಿನ ಗುಳದಾಳಿ.

ಅತ್ತೆ ಅತ್ತಿಕಾಯಿ ಮಾವ ಮಲ್ಲಿಗೆ ಹೂ
ಭಂಗಾರಗೋಲ ಹಿರಿಭಾವ | ನನ ಮನಿಯ
ಅರಿಸೀಣ ಕೆನೆಯು ಅರಸರು ||

ಹೀಗೆ ಒಂದೊಂದು ಶಬ್ದದಲ್ಲಿ ಬಳಗದ ಒಳಚಿತ್ರವನ್ನು ರೇಖಿಸಿಕೊಟ್ಟಿದ್ದಾಳೆ, ಆ ಗರತಿ. ಅರ್ಧಾಂಗಿಯು ತಾಯಾಗಿ ಬಿಟ್ಟರೆ “ನಡೆದಾಡುವ ಭೂಮಿ” ಎನಿಸುತ್ತಾಳೆ.

ಹೆಣ್ಣಿನ ನಾಲ್ಕು ಅವತಾರಗಳನ್ನು ಕುರಿತು ಹೆಚ್ಚು ವಿವರಿಸಲು ಇಲ್ಲಿ ಅವಕಾಶವಿಲ್ಲ. ದಶಾವತಾರಗಳನ್ನು ಕುರಿತು ನಾವೆಲ್ಲರೂ ಕೇಳಿದ್ದೇವೆ. ಅವುಗಳನ್ನು ಬಿಟ್ಟು ಈ ನಾಲ್ಕು ಅವತಾರಗಳು ಎಲ್ಲಿಂದ ಬಂದವು? ಅವು ಬಾಳಕಮ್ಮಟದ ದುರ್ದಶಾವತಾರಗಳೇ ಇರಬಹುದು. ಧರ್ಮಗ್ಲಾನಿಯಾದಾಗಲೆಲ್ಲ ಧರ್ಮವನ್ನು ಕಾಪಾಡುವುದರ ಸಲುವಾಗಿ ಪರಮಾತ್ಮನು ಅವತಾರ ತೊಟ್ಟು ಬರುವನಂತೆ. ಅದೆಷ್ಟು ಧರ್ಮಗ್ಲಾನಿಯಾದರೂ ಅವತಾರಿಯು ಕಾಪಾಡುವ ಮಟ್ಟಿಗಾದರೂ ಧರ್ಮಾಂಶವು ಉಳಿದಿರಲೇಬೇಕಲ್ಲವೇ? ಅಷ್ಟೂ ಧರ್ಮಾಂಶವಿಲ್ಲದಿದ್ದರೆ, ಅವತಾರಿಗೆ “ತೊಲಗು” ಎಂದು ಕೆಂಪುಬಾವುಟ ತೋರಿಸಬೇಕಾಗುತ್ತದೆ. ಆದರೆ ನಮ್ಮ ಹೆಣ್ಣಿನ ಚತುರವತಾರಗಳು, ಬಾಳಧರ್ಮವನ್ನು ಬಿತ್ತಿಬೆಳೆದು ತೋರಿಸುವಂಥ ಪ್ರಾತ್ಯಾಕ್ಷಿಕೆಯೇ ಆಕೆಯ ಅವತಾರೋದ್ದೇಶವಾಗಿದೆ. ಆ ಉದ್ದೇಶವನ್ನು ಪುರುಷಾವತಾರಗಳು ಸಾಧಿಸಲಾರವೆಂದು, ಸ್ತ್ರೀ ಅವತಾರಗಳು ಮನೆಮನೆಗೂ ಇಳಿದುಬರಬೇಕಾಗಿದೆ. ಹೆಣ್ಣಾಗಿ ಹುಟ್ಟಿದ್ದಕ್ಕೆ ಇದೇ ಸಾರ್ಥಕತೆ.

ಹತ್ತು ಗಂಡ್ಹಡೆದರು ಮತ್ತೆ ಬಂಜೆಂಬರು
ದಟ್ಟೀಯ ಉಡುವ ಧರಣೀಯ | ಹಡೆದರೆ
ಮಕ್ಕಳ ತಾಯೆಂದು ಕರಕೆದಾರ ||

ಹೆಣ್ಮು ಹಡೆದವಳೇ ಮಕ್ಕಳ ತಾಯೆನಿಸುವಾಗ ಆಕೆಯ ಹೆಣ್ಣು ಸಂತಾನದ ನಾಲ್ಕು ಸ್ವರೂಪಗಳು ಏಕಾಗಲಾರವು?

 


. ಕುಟುಂಬ ಸಂಸ್ಥೆ

 

ಜಗತ್ತಿನ ಸಂಕ್ಷೇಪರೂಪವೆಂದರೆ ಕುಟುಂಬ ಸಂಸ್ಥೆ. ಅದು ಲೋಕವೃಕ್ಷದ ಒಂದು ಬೀಜವೆಂದೂ ಹೇಳಬಹುದು. ಮಾನವೈಕ್ಯದ ತರಬೇತಿ ಕೇಂದ್ರವೇ ಅದಾಗಿದೆ. ಕುಟುಂಬ ಅಂದರೆ ಮನೆತನ. ಅದೊಂದು ಬಂಗಾರದ ಭರಣಿ, ಅದರಲ್ಲಿ ಬೆಟ್ಟದನೆಲ್ಲಿ, ಸಮುದ್ರದ ಉಪ್ಪು ಒಟ್ಟಿಗೆ ಬೆರೆತು ಉಪ್ಪಿನಕಾಯಿ ಆಗಬೇಕಾಗಿದೆ, ಉಪ್ಪಿನಕಾಯಿ ಊಟಕ್ಕೆ ಮೊದಲು ಎನಿಸಿದೆ. ಅದೇ ಜಗತ್ತಿನ ಸಾರಸರ್ವಸ್ವದಲ್ಲಿ ಸ್ವಾರಸ್ಯ ಹುಟ್ಟಿಸುವಂಥದು. ಪ್ರೇಮವನ್ನು ವಿಸ್ತರಿಸುವ ಉಪಾಯವೇ ಮದುವೆಯ ಉದ್ದೇಶವೆಂದು ಹೇಳಲಾಗಿದೆ. ಅದು ಸತಿಯಿಂದ ಮಾತ್ರ ಸಾಧ್ಯ. ತನ್ನಂತೆ ಪರರ ಬಗೆಯುವ ರೂಢಿ ಮಾಡಿಸುವುದೇ ಸಂತಾನದಿಂದ ಬಯಸತಕ್ಕ ಪರಿಣಾಮ. ಒಟ್ಟಿನಲ್ಲಿ ಕುಟುಂಬ ಸಂಸ್ಥೆಗೆ ಏಕತೆಯ ಪಾಠವನ್ನು ಕಲಿಸಿಕೊಡುವ ಪಾಠಶಾಲೆಯನ್ನು ಅಡ್ಡಿಯಿಲ್ಲ. ಕುಟುಂಬ ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ. ಮನೆತನ ಮತ್ತು ಹೆಂಡತಿ ಎಂದು ಮುಖದಲ್ಲಿ ಬಾಯಿ ಮುಖ್ಯವಾದುದರಿಂದ ಅದಕ್ಕೂ ಮುಖವೆಂದು ಹೇಳುತ್ತಾರೆ. ಇಡಿಯ ಶರೀರದಲ್ಲಿ ಹೊಟ್ಟೆಯು ಮುಖ್ಯವಾದುದರಿಂದ ಶರೀರವು ಒಡಲೆನಿಸಿದಂತೆ ಹೊಟ್ಟೆಯೂ ಒಡಲೆನಿಸಿದೆ. ಅದೇ ವಿಧವಾಗಿ ಕುಟುಂಬದಲ್ಲಿ ಮಹತ್ವದ ಪಾತ್ರವಾದುದರಿಂದ ಸತಿಗೆ ಕುಟುಂಬವೆನ್ನುತ್ತಾರೆಂದು ಹೇಳಲಡ್ಡಿಯಿಲ್ಲ. ಪತಿಯು ಕುಟುಂಬದಲ್ಲಿ ಗೃಹಸ್ಥ ಮಾತ್ರ. ಮನೆತನದವ ಎಂಬರ್ಥ ಅದಕ್ಕೆ.

ಮನೆತನವು ಏಕತೆಯನ್ನು ಸಾಧಿಸುವ ಸಾಧನೆಯ, ಪ್ರಯೋಗಶಾಲೆಯೆಂದೂ ಹೇಳಬಹುದಾಗಿದೆ. ಗಂಡಹೆಂಡಿರನ್ನು ಒಂದುಗೂಡಿಸುವ ಮದುವೆ, ಪ್ರೇಮವಿಸ್ತರಣಕ್ಕೆ ನಾಂದಿಯಾದಂತೆ, ಅಲ್ಲಿ ಹುಟ್ಟಿ ಬಂದ ಸಂತಾನವು ಆ ಗಂಡ ಹೆಂಡಂದಿರಿಗೆ ಅಂದರೆ ತನ್ನ ತಾಯಿ ತಂದೆಗಳಿಗೆ ತನ್ನಂತೆ ಪರರ ಬಗೆಯು ಬಗೆಯನ್ನು ಆಡಾಡುತ್ತ ಕಲಿಸುತ್ತದೆ. ಇದೆಲ್ಲ ಏಕತೆಯ ರಸಾಯನವೇ ಆಗಿದೆ. ಭರಣಿಯೊಳಗಿನ ಉಪ್ಪಿನಕಾಯಿ ಒಮ್ಮೊಮ್ಮೆ ಇಲ್ಲದೆ ಬಹಳಸಾರೆ ಕೈತಪ್ಪಿನಿಂದಲೇ ಕಣ್ತಪ್ಪಿನಿಂದಲೋ ಕೆಟ್ಟು ಹೋಗುವುದನ್ನು ಕಂಡಿದ್ದೇವೆ. ಹುಳುಗಳು ಹುಟ್ಟಿಕೊಂಡು ಅದರಲ್ಲಿ ಬುಚಗುಡುವುದೂ ಉಂಟು. ಸಾವಿರಗಟ್ಟಲೇ ಹುಳುಗಳು ಹುಟ್ಟಿಕೊಳ್ಳುವುದು ಸಗಣಿಯಲ್ಲಿ ಮಾತ್ರ. ಇಲ್ಲಿ “ಸಗಣಿಯಲ್ಲಿ ಸಾವಿರ ಹುಳುಗಳು ಹುಟ್ಟವೇ ಅಯ್ಯ” ಎನ್ನುವ ಬಸವವಾಣಿಯನ್ನು ಸ್ಮರಿಸಿಕೊಳ್ಳಬಹುದು ಹೀಗೆ ಉಪ್ಪಿನಕಾಯಿಯ ಭರಣಿ ನರಕದ ಕುಂಡವೇ ಆಗಿ ಬಿಟ್ಟು ಮೂಲೋದ್ದೇಶವನ್ನೇ ವಿಫಲಗೊಳಿಸುವುದನ್ನು ಬಹಳಕಡೆ ಕಾಣುತ್ತೇವೆ. ಬಹು ಮಟ್ಟಿಗೆ ವಿಫಲತೆಯನ್ನೇ ಕಾಣಲಾಗುವದೆಂದು ಅದರ ಉದ್ದೇಶವೇ ತಪ್ಪೆಂದು ಬಗೆಯಲಾಗದು. ಕುಣಿಯಬಾರದಿದ್ದವನು ಅಂಗಳವೇ ಡೊಂಕು ಎನ್ನುವನು. ತಾನು ಹೊರಬೇಕಾದ ತಪ್ಪನ್ನು ಅಂಗಳದ ಮೇಲೆ ಹೇರುವ ವಿಧಾನದಂತೆ, “ಸಂಸಾರೆಂಬುದು ಬಲುಕೆಟ್ಟ, ಇದನಾವ ಸೂಳಿಮಗ ಮಾಡಿಟ್ಟ” ಎಂದು ತಂತಿಬಾರಿಸಿದರೆ, ಕೆಟ್ಟಿದ್ದು ಸರಿಪಡುವದಿಲ್ಲ. ವೇಗಪೂರಿತ ಸೈಕಲ್ ಇರಿಸಿಕೊಂಡವನು, ಅದಕ್ಕೆ ಸುಸಮರ್ಥವಾದ ಬ್ರೆಕ್‌ನ್ನು ಸಂಗಳಿಸಲು ಮರೆಯಬಾರದು.

ಕೀರ್ತಿಕಾಯರಾದ ಶ್ರೀ ಬೇಂದೆರ‍್ಯವರು ಹೇಳುತ್ತಾರೆ. “’ಬೀದರ ಹೈದ್ರಾಬಾದಗಳ ಉತ್ತರ ತುದಿಯಿಂದ ನೀಲಗಿರಿ, ಕೊಯಿಮತ್ತೂರಿನ ದಕ್ಷಿಣ ತುದಿಯವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶನವು ಗರತಿಯ ಹಾಡಗಳಲ್ಲಿದೆ’ ನಾಡು ಒಂದೆಂಬುವ ನಿದರ್ಶನವು ಗರತಿಯ ಹಾಡುಗಳಲ್ಲಿದ್ದರೆ, ಅವುಗಳ ಉದ್ದೇಶವೂ ಅವು ಇರಿಸಿಕೊಂಡ ಗುರಿಯೂ ಒಂದೇ ಆಗಿದೆಯೆನ್ನಲು ಅಡ್ಡಿಯೇನು? ಆ ಉದ್ದೇಶ ಆ ಗುರಿ ಯಾವುದೆಂದರೆ, ಕುಟುಂಬ ಸಂಸ್ಥೆಯಲ್ಲಿ ಏಕತೆಯನ್ನು ಅಳವಡಿಸುವುದು.

ಪ್ರತಿಯೊಬ್ಬ ಗೃಹಿಣಿಯು ಅಭೀಪ್ಸೆಪಡುವುದೇನಂದರೆ – ಮುತ್ತೈಯ್ದೆತನಕೊಡು, ಮಕ್ಕಳ ಕೊಡು, ಮಾರಾಯರ ಮುಂದೆ ಮರಣಕೊಡು, ಇದೇ ಸುಸಮೃದ್ಧ ಜೀವನದ ಹಾರಯಿಕೆ. ನಿಜವಾದ ಅರ್ಥದಲ್ಲಿ ಅಕ್ಷರಶಃ ಮುತ್ತೈಯ್ದೆಯಾಗಿ ಗಂಡ ಹಾಗೂ ಮಕ್ಕಳೊಡನೆ ನೂರುವರುಷ ಬಾಳುವುದು ಅಂಥ ಮನೆತನದಲ್ಲಿ ನೂರು ವರುಷ ಕಾಲವು ಬಡನೂರು ವರ್ಷಗಳೆನಿಸುವುದರಲ್ಲಿ ಸಂಶಯವೇನು? ಬಡನೂರು ವರ್ಷಗಳನ್ನು ಹರುಷದಿಂದ ಕಳೆಯಬಲ್ಲ ಮನೆತನವು ಏಕತೆಯನ್ನು ಸಾಧಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದು ನಿಶ್ಚಯವೆಂದೇ ಹೇಳಬೇಕಾಗುತ್ತದೆ.

ಆದಿ ಯಂತ್ರದ ಮೂಲ ಮಂತ್ರದಂತೆ ಕುಟುಂಬಕ್ಕಿರುವ ಮಹತ್ತಾದ ಪ್ರಾರ್ಥನೆ ಯಾವುದೆಂದರೆ –

ತನ್ನಂಗ ನೋಡಿದರ ಭಿನ್ನಿಲ್ಲ ಭೇದಿಲ್ಲ
ತನ್ನಂಗ ತನ್ನ ಮಗಳಂಗ | ನೋಡಿದರ
ಕಣ್ಣ ಮುಂದಾದ ಕೈಲಾಸ ||

ಗೃಹಿಣಿಯು ಈ ಮಹಾಮಂತ್ರವನ್ನು ಬೆಳಗಿನ ಜಾವದಲ್ಲಿ ಬೀಸು ಕಲ್ಲಿನ ಮುಂದೆ ಸ್ವರದೊಡನೆ ಹಾಡಿ ಉದ್ಘೋಷಿಸುತ್ತಾಳೆ. ನಿತ್ಯದ ಮರಣವಾದ ನಿದ್ರೆಯಿಂದ ಎಚ್ಚತ್ತು ಪುನರ್ಜನಮ್ಮವನ್ನು ಪಡೆದ ಬಳಿಕ ಮೊಟ್ಟಮೊದಲನೇ ಮಾತೆಂದರೆ ಅದೇ ಆ ಮಹಾಮಂತ್ರ. ಶುಭ ಹಾರೆಯಿಕೆಯಿಂದ ಆರಂಭವಾದ ಇಡಿಯ ದಿನವು ಶುಭಪ್ರದವಾಗಿ ಪರಿಣಮಿಸಲಿಕ್ಕೆ ದಾರಿಯಾಗುತ್ತದೆಂದು ಎದೆತಟ್ಟಿ ಹೇಳಬಹುದಾಗಿದೆ.

ಈ ಕೆಳಗಿನ ತ್ರಿಪದಿಗಳು ಕುಟುಂಬದ ಏಕತೆಗೆ ಅದೆಷ್ಟು ಸಹಾಯಕವಾಗಿವೆ ನೋಡಿರಿ.

ಅತಿಗೆಯ ಅರಸೇನ ತಾಯಿ ಕುಮಾರೇನ
ಮಕ್ಕಳಿಗಿ ಮಾವ ನನಗಣ್ಣ | ಬಂದರ |
ನಿತ್ಯದೀವಳಿಗೆ ಮನಿಯಾಗ ||
ಮಗಳ ಮಾವಬಂದ ಸೊಸಿಯ ಅಪ್ಪ ಬಂದ
ಯಾರಿಟ್ಟು ಯಾರ ಕಳುಹಲೆ | ನನ್ನಣ್ಣ |
ಮಗಳಿಟ್ಟು ಸೊಸಿಯ ಕರೆದೊಯ್ಯೋ ||

ಅತ್ತಿಗೆಯ ರಸು, ತಾಯಕುಮಾರ, ಮಕ್ಕಳಿಗೆ ಮಾವ, ಮಗಳ ಮಾವ, ಸೊಸಿಯ ಅಪ್ಪ ಬೇರೆ ಬೇರೆ ಅಲ್ಲ, ಒಬ್ಬನೇ. ಬೆರಳುಗಳು ಬೇರೆ ಬೇರೆ ಆಗಿದ್ದರೂ ಒಂದೇ ಕೈಗಿರುವ ಅನುಪಮ ಪಲ್ಲವಗಳೇ ಆಗಿವೆ. ಮಗಳು ಮತ್ತು ಸೊಸೆ ಇಬ್ಬರೂ ಆದಾವ ಕಾರಣದಿಂದಲೋ ಒತ್ತಟ್ಟಿಗಿರುವಾಗ ಆಕೆಯ ಅಣ್ಣನು ಹಬ್ಬಕ್ಕೆಂದು ಕರೆಯಬಹುವನು. ಯಾರನ್ನು? ತನ್ನ ಮಗಳನ್ನೋ? ಅಕ್ಕನಮಗಳನ್ನೋ? ಯಾರಿಟ್ಟು ಯಾರಕಳುಹಲೆಂದು ಅಕ್ಕ ಅನುಮಾನಿಸಿದರೂ, ಮಗಳಿಟ್ಟು ಸೊಸಿಯ ಕರೆದೊಯ್ಯಲು ಹೇಳುತ್ತಾಳೆ, ಈ ಮಾತಿನಲ್ಲಿಯೂ ಮೋಡಿಯಿದೆ. ಯಾರ ಮಗಳನ್ನಿಡುವುದು? ತನ್ನ ಮಗಳನ್ನೋ ಅಣ್ಣನ ಮಗಳನ್ನೋ? ಯಾರ ಸೊಯೆನ್ನು ಕರೆದೊಯ್ಯುವುದು? ತನ್ನ ಸೊಸೆಯನ್ನೋ ಅಣ್ಣನ ಸೊಸೆಯನ್ನೋ? ಯಾರನ್ನು ಕರೆದೊಯ್ದರೂ ಸಂತೋಷವೇ. ಒಂದು ಮನೆಗಲ್ಲ ಎರಡೂ ಮನೆಗೆ ಸಂತೋಷ, ಹಿಗ್ಗು. ಇಂಥ ನಡವಳಿಕೆಯಲ್ಲಿಯೂ ಏಕತೆಯ ಉಸಿರು ಮಿಡಿಯುತ್ತಿಲ್ಲವೇ?

ಕುಟುಂಬದ ನೆಮ್ಮದಿಗೂ ಏಕತೆಗೂ ತ್ಯಾಗವೇ ಮಹತ್ತಾದ ಉಪಾಯವೆಂದು ಮಹಾನುಭಾವರು ಹೇಳುತ್ತಾರೆ. ಆ ತ್ಯಾಗವು ಅರಣ್ಯವಾಸಿಗಳಾದ ಸನ್ಯಾಸಿಗಳದಲ್ಲ. ಗ್ರಾಮವಾಸಿಯಾದ ಗೃಹಸ್ಥಾಶ್ರಮದವರ ಕಟ್ಟಾಚರಣೆ ಆಗಿದೆ.

ಹೆಣ್ಣಿನ ಕಾಯವ ಮಣ್ಣು ಮಾಡಲಿ ಬೇಕ
ಸುಣ್ಣಧರಳಾಗಿ ಸುಡಬೇಕ | ಜನುಮ |
ಮಣ್ಣು ಮಾಡಿ ಮೃತ್ಯು ಗೆದಿಬೇಕ ||

ಈ ತ್ಯಾಗವು ಮರಣದ ಮಾದರಿಯಲ್ಲ; ಸಾವಿನ ದಾರಿಯೂ ಅಲ್ಲ. ಬದುಕಿ ಸಾಯುವ ಅಥವಾ ಸತ್ತೂ ಬದುಕವ ಪರಮೋಪಾಯ, ಅದರಲ್ಲಿ ದುಡಿತವಿದೆ. ಇಡಿಯ ಮನೆತನಕ್ಕೆ ಸುಖವಾಗಲೆನ್ನುವ ತುಡಿತವಿದೆ, ಏಕತೆಯ ಮಿಡಿತವಿದೆ, ಹಿಡಿತವೂ ಇದೆ. ಗೃಹಿಣಿ ಮನಸ್ಸು ಮಾಡಿ, ಮಹಾಸತಿಯಾಗುವುದಕ್ಕೆ ಸನ್ನದ್ದಳಾದರೆ, ಏಕತೆಯು ಮನೆತನವನ್ನು ಅರಸುತ್ತ ಬರುವದು. ಅಷ್ಟೇ ಸಾಧಿಸಿದರೂ ಅದು ನಾಡಿನೊಂದಿಗೆ ಮಾನವ ಕುಲವನ್ನು ಕೆಲವಂಶದಲ್ಲಿ ಮೇಲಕ್ಕೆತ್ತಿದಂತೆಯೇ. ಇದೇ ಸಹಜವಾದ ಸಾರ್ಥಕಜೀವನ. ಎಡಹುವ ಅಂಜಿಕೆ ನಡೆವವನಿಗಿರುವುದಲ್ಲದೆ, ಕುಳಿತವನಿಗಲ್ಲ. ಕುಳಿತು ಕೆಡುವುದಕ್ಕಿಂತ ಮಾಡಿ ಕೆಡುವದೇ ಒಳ್ಳೆಯದು, ಸಾಹಸದ ಕಾಲು ದಾರಿಯಲ್ಲಿ ಇದೇ ಊರುಗೋಲಾಗಬಲ್ಲದು. ಮುಕ್ಕಾಲಿನಲ್ಲಿ ನಡೆಯುವ ರೀತಿಯಿದು, ಮೂರು ಪಾದಗಳಿಂದ ಮೂಲೋಕವನ್ನೇ ಅಳೆಯಲಿಲ್ಲವೇ ವಾಮನ ಮೂರ್ತಿ. ಅದೊಂದು ಅವತಾರ ಕಾರ್ಯ, ಅವತಾರಿಯ ಯುಕ್ತಿ.