ಜನಾಂಗಕ್ಕೆ ಸಲ್ಲಿಸಿದ ಆದರ್ಶ

ಗರತಿಯ ಜೀವನಕ್ಕೆ ಜೀವಾಳವಾಗಿ ಇಡಿಯ ಜೀವಮಾನವನ್ನೆಲ್ಲ ಕೃತಜ್ಞತೆಯು ಹರಹಿರುತ್ತದೆ. ಕೃತಜ್ಞತೆಯೆಂದರೆ ಮಾನವತೆಯೇ. ಕರುಣೆ-ಕೃತಜ್ಞತೆಗಳು ಅಂತರಾತ್ಮನ ಗುಣ ವಿಶೇಷಗಳೆಂದು ಶ್ರೀತಾಯಿಯವರು ಹೇಳುತ್ತಾರೆ. “ಇಳೆ ನಿಮ್ಮ ದಾನ”ವೆಂದು ಜಗತ್ತಿನ ತಂದೆಯಲ್ಲಿ ಕೃತಜ್ಞತೆ ತೋರಿಸಿದ್ದಾರೆ. ಗರತಿಯಾದರೋ ತವರುಮನೆಯನ್ನೂ, ತಾಯಿ ತಂದೆಗಳನ್ನೂ ಕೃತಜ್ಞತೆಯಿಂದ ಸ್ಮರಿಸುತ್ತಾಳೆ. ಕೃತಜ್ಞತೆಯ ಪ್ರಮಾಣವು ಹೆಚ್ಚಾದಂತೆ ಕೃತಜ್ಞತಾ ಬುದ್ಧಿಯು ಮೈಗೂಡಿ ನಿಲ್ಲುತ್ತದೆ.

ಕಣ್ಣೆಂಜಲ ಕಾಡಿಗೆ ಬಾಯೆಂಜಲ ವೀಳ್ಯವ
ಯಾರೆಂಜಲುಂಡಿ ನನ ಮನವೆ | ಹಡೆದೌವ್ನ |
ಬಾಯೆಂಜಲುಂಡು ಬೆಳೆದೇನ ||

ಎಂದು ತಾಯಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾಳೆ.

ತಂದೀಯ ನೆನೆದರೆ ತಂಗಳ ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದೌವ್ನ | ನೆನೆದರ |
ಮಾಸೀದ ತಲೆಯು ಮಡಿಯಾಯ್ತು ||

ಎಂದು ತಾಯಿತಂದೆಗಳಿಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾಳೆ.

ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಲಿರುವ ಕರಕೀಯ | ಕುಡಿಯಂಗ |
ಹಬ್ಬಲೆ ಅವರ ರಸಬಳ್ಳಿ ||

ಎಂದು ಹರಕೆ ಕೊಟ್ಟು-

ಕಾಸೀಗಿ ಹೋಗಲಾಕ ಏಸೊಂದು ದಿನ ಬೇಕ
ತಾಸ್ಹೊತ್ತಿನ್ಹಾದಿ ತವರೂರ | ಮನಿಯಾಗ |
ಕಾಸಿ ಕುಂತಾಳ ಹಡೆದವ್ವ ||

ಎಂದು ತವರುಮನೆಯು ಕಾಶಿ ರಾಮೇಶ್ವರಗಳಂಥ ಪುಣ್ಯಪ್ರದವಾದ ಯಾತ್ರಾಸ್ಥಳವೆಂದೂ ತಾಯಿ ಅಲ್ಲಿಯ ಅಧಿದೈವತವೆಂದೂ ಬಗೆದಿರುವಳು. ಈ ಬಗೆಯು ಅವಳ ವಿಶಾಲ ಹೃದಯವನ್ನು ತೋರ್ಪಡಿಸುತ್ತದೆ.

ಚಿಂತಾಕು ಇಟಗೊಂಡು ಚಿಪ್ಪಾಡಿ ಬಳೆಯುವ ಬಾಲಿ
ಚಿಂತಿಲ್ಲವೇನು ನಿನಗಿಷ್ಟು | ನಿಮ್ಮ ರಾಯ |
ಅಲ್ಲೊಬ್ಬಳ ಕೂಡ ನಗತಾನ ||

ಎಂದು ಕೇಳಿದವರಿಗೆ –

ನಕ್ಕರ ನಗಲೆವ್ವ ನಗೆಮುಖದ ಖ್ಯಾದೀಗಿ
ನಾ ಮುಚ್ಚಿ ಮುಡಿದ ಪರಿಮಳ | ದ ಹೂವ |
ಅವಳೊಂದು ಬಾರಿ ಮುಡಿಯಲೇ ||

ಎಂದು ಮರುನುಡಿಯುತ್ತಾಳೆ. ಬಂಗಾರದ ತೋಳಬಂದಿಯಿಡುವಷ್ಟು ಐಶ್ವರ್ಯವಂತೆಯಾಗಿದ್ದರೂ ಚಿಪ್ಪಾಟಿ ಬಳೆಯುವಂಥ ಕೊಳಚಿ ಕೆಲಸ ಮಾಡುವುದಕ್ಕೆ ಮನಸ್ಸು ತೊಡಗಿಸಿದ ಗರತಿಗೆ ಯಾರೋ ಕೇಳುತ್ತಾರೆ. “ಇದೆಲ್ಲ ಸಿಂಗಾರವಾಯ್ತು. ಚಿಪ್ಪಾಟಿ ಬಳೆಯುವಂಥ ಸಣ್ಣ ದೊಡ್ಡ ಹೊಣೆಯ ಕೆಲಸ ವಹಿಸಿ ತೊತ್ತು ದುಡಿದಂತೆ ದುಡಿಯುವ ನೀನು ಬರೀ ಜೀತದಾಳು. ದರೆ ನಿಮ್ಮ ರಾಯರ ಒಲುಮೆಯೇ ಕಾಣುವದಿಲ್ಲ. ಅವನು ಅಲ್ಲಿ ಬೇರೊಬ್ಬಳ ಕೂಡ ನಗೆಯಾಡುತ್ತ ತನ್ನ ನಲುಮೆಯನ್ನು ಸೊರೆ ಮಾಡುತ್ತಿದ್ದಾನೆ.” ಇದನ್ನು ಕೇಳಿದರೆ ಇನ್ನಾರಾದರೂ ಕ್ಷುಲ್ಲಕ ಬುದ್ಧಿಯ ಹೆಂಗುಸಾಗಿದ್ದರೆ, ಗಂಡನ ಮೇಲೆ ಸಿಟ್ಟಾಗಿ ತನ್ನ ಆಭರಣಗಳನ್ನೆಲ್ಲ ಕಳಕಿ ಹಾಕಿ, ಮನೆಯಂಗಳ ಕೆಲಸಕ್ಕೆ ಕೈಹಾಕದೆ ಮುನಿಸಿಗೊಂಡು ಮಲಗಿಬಿಡುತ್ತಿದ್ದಳು. ಆದರೆ ಗರತಿಯಾದವಳು ಹಾಗೆ ಮಾಡಲಿಲ್ಲ. ತನ್ನ ಗಂಡನು ಹುಟ್ಟಾ ನಗೆ ಮುಖದವನು. ಬಿಚ್ಚಿದ ಕೇದಗೆಯಂತೆ ಅರಳಿ ಪರಿಮಳ ಸೂಸುವಂಥವನು. ಅಂಥ ಕೇದಗೆಯನ್ನು ಮನೆಯವಳು ಮರ್ಯಾದೆಯಿಂದ ಮುಡಿದರೆ, ಮುಗಿಯದು. ಅದನ್ನು ಇನ್ನೊವರೊಮ್ಮೆ ಏಕೆ ಮುಡಿಯಬಾರದು? ಒಂದು ಬಾರಿ ಅವಳೂ ಮುಚ್ಚು ಮರ್ಯಾದೆಯಿಂದ ಮುಡಿಯಲೆಂದು ಸಮಾಧಾನದಿಂದ ಪ್ರತಿ ನುಡಿಯುವಳು. ಹೆಂಗಸಾದವಳಿಗೆ ಈ ತ್ಯಾಗವಾಗಲಿ ದೊಡ್ಡ ಮನಸ್ಸಾಗಲಿ ಕಲಿತರೆ ಬರಲಾರದು. ಅದಕ್ಕೆ ಹಿರಿದಾಗ ಸಂಸ್ಕಾರಬೇಕು. ವಂಶ ಪರಂಪರೆಯಿಂದ ಬಂದ ರಕ್ತಗುಣಬೇಕು. ಅದಕ್ಕೇ ಹುಟ್ಟುಗುಣವೆನ್ನುವರು. ಸಂಸ್ಕೃತಿಯೆಂದರೂ ಅದೇ ಸರಿ. ಇಂಥ ಉದಾರವಾದ ಸಂಸ್ಕೃತಿಯು ಹೆಣ್ಣಿನಂದವನ್ನು ನೂರ್ಮಡಿಸುತ್ತದೆ. ಅದರಿಂದ ಆಕೆಯ ಒಲುಮೆ ನೆಲದಗಲವಾಗಿ ಹರಹುತ್ತದೆ. ಆದರೆ ಇಲ್ಲಿ ಗಂಡಿನ ನೀತಿಯು ಕ್ಷಮ್ಯವೆಂದಲ್ಲ.

ಗರತಿ ಜನಾಂಗಕ್ಕೆ ನೀಡಿದ ಅಪ್ರತಿಮವಾದ ದಾನ ಒಂದೇ ಎರಡನೇ? ಎಣಿಸಿ ನೋಡಿದರೆ ಸಾವಿರಾರು. ನಮ್ಮ ಸಂಸ್ಕೃತಿಯ ಮಂದಿರವನ್ನು ರಚಿಸುವುದಕ್ಕೆ ಬೇಕಾಗುವ ಒಂದೊಂದು ಕಲ್ಲೂ ಕುಶಲ ಶಿಲ್ಪಿಯ ಕೈಯಿಂದ ನುರುಪಡಿಯಾಗಿ ಬಂದಿರುವಂತೆ ತೋರುತ್ತದೆ. ಗರತಿಯು ಜನಾಂಗಕ್ಕೆ ಶಂಕರಾಚಾರ್ಯ, ಅಲ್ಲಮಪ್ರಭು, ರತ್ನಾಕರ, ಹರಿಹರರನ್ನು ಹೆತ್ತುಕೊಟ್ಟು, ನಾಡಿನ ಮೆದುಳನ್ನು ಬೆಳೆಸಿದ್ದಾಳೆ. ವಿಕ್ರಮ, ಶಿವಾಜಿ, ಪುಲಿಕೇಶಿ, ನೆಪೋಲಿಯನನಂಥ ಪರಾಕ್ರಮಿಗಳನ್ನು ಹಡೆದು ಪರಾಕ್ರಮಣವನ್ನು ತಡೆಯುವ ನಾಡಿನ ಬಾಹುಬಲವನ್ನು ಹೆಚ್ಚಿಸಿದ್ದಾಳೆ. ಅದರಂತೆ ನಾಡಿನ ಅರ್ಥಸಂಪತ್ತಿನ್ನು ಹೆಚ್ಚಿಸಿದ್ದಾಳೆ; ಆತ್ಮ ಸಂಪತ್ತಿಯನ್ನು ನಾಡಿನಲ್ಲಿ ತುಂಬಿದ್ದಾಳೆ; ಸೇವಾಬುದ್ಧಿಯನ್ನು ವರ್ಧಿಸಿದ್ದಾಳೆ. ಬಸವಣ್ಣ, ವಿದ್ಯಾರಣ್ಯ, ಟೀಪು, ವಿವೇಕಾನಂದ, ಜಗದೀಶ ಚಂದ್ರರೇ ಮೊದಲಾದ ಮಹಾಮಹಿಮರೆಲ್ಲ ಗರತಿಯ ಮಕ್ಕಳೇ ಆಗಿದ್ದಾರೆ; ಗರತಿಯ ರಕ್ತ ಮಾಂಸಗಳಿಂದಲೇ ತಮ್ಮ ಮೈಕಟ್ಟಿಕೊಂಡು ಬಂದವರಾಗಿದ್ದಾರೆ. ಮಾಯಾವತಿಯು ತಾಯಿಯಾಗಿ ಸಿದ್ಧಾರ್ಥನನ್ನು ಹಡೆದು ಜನಾಂಗಕ್ಕೆ ಕೊಟ್ಟರೆ, ಯಶೋಧರೆಯು ಕೈಹಿಡಿದ ಹೆಂಡತಿಯಾಗಿ ಜನಾಂಗಕ್ಕೆ ಬುದ್ಧದೇವರನ್ನು ನೀಡಿದಳು. ಗದಾಧರನನ್ನು ಹಡೆದವಳು ಚಂದ್ರಮಣಿದೇವಿಯಾದರೆ, ಶ್ರೀರಾಮಕೃಷ್ಣ ಪರಮಹಂಸರು ನಮಗೆ ದೊರಕೊಂಡಿದ್ದು ಶಾರದಾಮಣಿದೇವಿಯಿಂದ. ಮಾದಲಾಂಬಿಕೆಯು ಬಾಗೇವಾಡಿಯ ಬಸವಣ್ಣನನ್ನು ನಾಡಿಗೆ ನೀಡಿದರೆ, ನೀಲಗಂಗಾದೇವಿಯು ಕಲ್ಯಾಣ ಬಸವನನ್ನು ಪಡೆದು ಕನ್ನಡ ಜನಾಂಗಕ್ಕೆ ಧಾರೆಯೆರೆದಳು. ಜನಾಂಗದ ಮೇಲ್ಮೈಗೆ ಅನೇಕ ಮಹಾಮಹಿಮರು ಅನೇಕ ವಿಧದಲ್ಲಿ ಕಾರಣರಾಗಿದ್ದಾರೆ. ಧರ್ಮಪ್ರಸಾರಕದಿದ್ದಂತೆ ಧರ್ಮಾಸ್ಥಾಪಕರೂ ಆಗಿಹೋಗಿದ್ದಾರೆ. ರಾಜ್ಯ ಸ್ಥಾಪಕರಿದ್ದಂತೆ ರಾಜ್ಯ ನಿರ್ಮಾಣಕರೂ ಆಗಿದ್ದಾರೆ. ಅಜರಾಮರವಾದ ತತ್ವಗ್ರಂಥಗಳನ್ನು ರಚಿಸಿದ ತತ್ವಜ್ಞಾನಿಗಳ ಜೊತೆಗೆ, ಸಾವಿಲ್ಲದ ಕೇಡಿಲ್ಲದ ಮಹಾಕಾವ್ಯಗಳನ್ನು ಹಾಡಿದ ಕವಿಪುಂಗವರೂ ಇದ್ದಾರೆ. ನಾಡಸೇವಕರೂ, ಸಮಾಜ ಸುಧಾರಕರೂ ಇಲ್ಲದೆ ಇಲ್ಲ. ಸ್ವಾರ್ಥತ್ಯಾಗ ಮಾಡಿದವರಿಗೂ ಆತ್ಮ ಬಲಿದಾನವನ್ನು ಮಾಡಿದವರಿಗೂ ವೀರಗಲ್ಲು-ಮಾಸ್ತಿಯ ಕಲ್ಲುಗಳೇ ಸಾಕ್ಷಿಯಾಗಿ ನಿಂತಿವೆ. ಅನೇಕ ಮಹಾಪುರುಷರು ಜನಾಂಗದ ಸಂಸ್ಕೃತಿಯನ್ನು ಮೇಲೆತ್ತುವುದಕ್ಕಾಗಿ ಕಾರಣರಾಗಿದ್ದಾರೆ. ಲೋಕಕಲ್ಯಾಣಕ್ಕೂ ಧರ್ಮಸಂರಕ್ಷಣಕ್ಕೂ ರಾಜ್ಯ ಕ್ರಾಂತಿಗೂ ಕಾರಣರಾದರು. ಪುರುಷರೇ ಬಹುಮಂದಿಯೆಂಬುದನ್ನು ಒಪ್ಪಿಕೊಳ್ಳಲೇಬೇಕಾದರೂ ಅವರನ್ನು ಹೆತ್ತು ಕೊಟ್ಟವರು, ಒತ್ತೆಗೊಟ್ಟವರು, ಮಾರುಗೊಟ್ಟವರು ಅವರ ತಾಯಿ, ಅಕ್ಕ-ತಂಗಿ, ಹೆಂಡತಿಯರೇ ಅಲ್ಲವೇ? ಶ್ರೀರಾಮಕೃಷ್ಣ ಪರಮಹಂಸರು ಜಟಿಲವಾದ ಅನೇಕ ಸಾಧನೆಗಳನ್ನು ಮಾಡಿ ಲೆಕ್ಕವಿಲ್ಲದಷ್ಟು ಸಿದ್ಧಿಗಳನ್ನು ಪಡೆದರು; ಸರ್ವಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡರು; ನರೇಂದ್ರನಂಥ ಅನೇಕ ವಿದ್ಯಾವಂತರ ಗುಂಪಿಗೆ ತಮ್ಮ ಅನುಭಾವವನ್ನು ಮನಗಾಣಿಸಿಕೊಡುವ ಆಚಾರ್ಯದೇವರಾಗಿನಿಂತರು. ಆ ಹೊತ್ತಿಗೆ ಅವರ ಧರ್ಮಪತ್ನಿಯಾದ ಶಾರದಾಮಣಿದೇವಿಯು ತವರು ಮನೆಯಿಂದ ಪತಿಯ ಬಳಿಗೆ ಬಂದಳು. ಆಚಾರ್ಯರು ದೇವಿಯನ್ನು ತಿರಸ್ಕರಿಸಲಿಲ್ಲ; ಮುಖಮರೆ ಮಾಡಿಕೊಳ್ಳಲಿಲ್ಲ, ಓಡಿಹೋಗಲಿಲ್ಲ; ಕಿವಿಯಲ್ಲಿ ಬೊಟ್ಟು ಹಾಕಿಕೊಂಡು ತಮ್ಮ ಹೊಣೆ ತಪ್ಪಿಸಿಕೊಳ್ಳಲಿಲ್ಲ; -“ಇಷ್ಟೆಲ್ಲ ಸಿದ್ಧಿ-ಸಾಕ್ಷಾತ್ಕಾರಗಳನ್ನು ಪಡೆದು, ಆ ಅನುಭವಜ್ಞಾನವನ್ನು ಜನಾಂಗಕ್ಕೆ ಸಲ್ಲಿಸುವ ಸೇವಾಕಾರ್ಯವನ್ನು ಕೈಕೊಂಡಿದ್ದೇನೆ. ಇದನ್ನು ಮಾಡುವುದಕ್ಕೆ ನನಗೆ ಒಪ್ಪಿಗೆಕೊಡು; ಇಲ್ಲವೇ, ಸಂಸಾರ ಮಾಡಿಕೊಂಡಿರುವುದಕ್ಕೆ ತಿಳಿಸು ಎರಡರಲ್ಲಿ ಯಾವುದನ್ನು ಕೈಗೊಂಡರೂ ನಾನು ಸಿದ್ಧನೇ” ಎಂದಾಗ, ಶಾರದಾಮಣಿದೇವಿಯು ಪತಿಯನ್ನು ಸಂಸಾರಕ್ಕೆಳೆಯದೆ, ಅವನ ಕಾರ್ಯಕ್ಕೆ ಬಿಟ್ಟುಕೊಟ್ಟಳ್ಳದೆ ತಾನು ಬೆಂಬಲ-ಮುಂಬಲವಾಗಿ ನಿಂತಳು. ಶ್ರೀ ಅರವಿಂದರು ಹೇಳುವ ಪತಿಯ ಧ್ಯೇಯವಾಕ್ಯಗಳು ಸತಿಯ ಹೃದಯದಿಂದ ಪಡಿನುಡಿಕೊಡುತ್ತಿರಬೇಕೆ”ನ್ನುವ ಮಾತಿಗೆ ಇದೇ ಉದಾಹರಣೆಯಾಗಲಾರದೇ? ತಿಪ್ಪೆಯಲ್ಲಿ ರತ್ನವು ಬಿದ್ದುಹೋಗುತ್ತಿರುವಂತೆ, ಮಹಮ್ಮದ ಪೈಗಂಬರರು ಬಡತನದಲ್ಲಿ ತೊಳಲುತ್ತ ತಮ್ಮ ದಿವ್ಯಗುಣಗಳನ್ನು ಮಸುಕುಗೊಳಿಸುತ್ತಿರುವುದನ್ನು ಕಂಡು ಶ್ರೀಮಂತೆಯಾದ ಪತ್ನಿಯು, ಸಂಸಾರದ ಯಾವ ವ್ಯವಹಾರವನ್ನೂ ಅವರ ತಲೆಗೆ ತಗುಲದಂತೆ, ಪೈಗಂಬರರಿಗೆ ಅವರ ಏಕಾಂತ, ತತ್ವಚಿಂತನಗಳಿಗೆ ಬಿಟ್ಟುಕೊಟ್ಟರು. ಈ ಮಾತೂ ಗರತಿಯು ಜನಾಂಗಕ್ಕಿಂತ ಮಹಾದಾನದ ಒಂದು ಉದಾಹರಣೆಯಾಗಲಾರದೇ?

ಹರದಿ ಪಾರ್ವತಿದೇವಿ ಪರಮ ಸಂತೋಷದಲಿ
ಸರಸವಾಡುತ ತನ್ನ ಪುರುಷರೊಡನೆ |
ವರ ಭಾದ್ರಪದ ಶುದ್ಧ ತದಿಗೆ ನಾಳೇ ದಿನ
ಅರಸರೆ ತೌರೂರಿಗ್ಹೋಗಿ ಬರುವೆ
ಇಲ್ಲಿಂದ ಹೋದರೆ ಅಲ್ಲಿ ನಿನಗಾರುಂಟು
ಚೆಲ್ಲೆಗಂಗಳ ನೀರೆ ತಿಳಿದು ಪೇಳೆ |
ಎಲ್ಲರೇತಕೆ ಸ್ವಾಮಿ ಮೂರು ದಿನವಿದ್ದು ನೀ-
ಮ್ಮಲ್ಲಿಗೇ ಸೇವೆಗೆ ಒದಗಿ ಬರುವೆ ||

ಆ ಮಾತಿಗೆ ಶಿವನು ಮೂರು ದಿನವೇಕೆ, ಐದು ದಿನ ಮೀರಿ ಏಳು ದಿವಸ ದಾರಿ ನೋಡುವೆ. ಆಗಲೂ ನೀನು ಬಾರದಿದ್ದರೆ ನೀನು ನನಗೆ ಮೀರಿದವಳೆಂದು ತಿಳಿಯುವೆ. ಹೋಗಿ ಬಾ ಎಂದನು. ಅದರಂತೆ ಪಾರ್ವತಿ ತವರು ಮನೆಗೆ ಹೋದಳು. ಒಂದೆರಡು ದಿನಗಳಲ್ಲಿ ಬಂದೂ ಬಿಟ್ಟಳು.

ನಾಗಭೂಷಣ ತಾನು ನಗುತ ಗೌರಿಯ ಕಂಡು
ಹೋಗಿ ಬಂದ್ಯಾ ನಿನ್ನ ತೌರೂರಿಗೆ |
ಈಗೇನು ಕೊಟ್ಟರು ಇನ್ನೇನು ಕೊಡುವರು
ಬೇಗದಲಿ ಹೇಳು ಹೇಗೆಂದ ಹರನು ||

ಗೌರಿಯು ಮರುನುಡಿದಳು. ಏನೆಂದರೆ – “ತಂದೆ ಗಿರಿರಾಯನು ತುಂಬ ಬಡವನು. ಅಲ್ಲದೆ ಮುದುಕನು. ಇನ್ನೇನು ಕೊಟ್ಟಾನು”

ಅಲ್ಪಸ್ವಲ್ಪವೆಂದು ಕೊಪ್ಪರಿಗೆ ಒಹಣವಿತ್ತು
ಎಪ್ಪತ್ತು ಆನೆಕುದುರೆಗಳನಿತ್ರು
ಒಪ್ಪದಲಿ ಬಳಸೆಂದು ಹೊನ್ನು ಕಲಶವನಿತ್ರು
ನಮ್ಮೋರು ಬಡವರಿನ್ನೇನೀವರು?
ಆರು ಹೇರ್‌
ಸಣ್ಣಕ್ಕಿ ಆರು ಹೇರರಿಸಿನ
ಆರು ಹೇರಡಿಕೆ ಒಂದಡಿಗೆ ಬೆಲ್ಲ
ಆರು ಕೊಳಗ ಮೆಣಸು ನೂರು ಕಾಯಿತ್ತರು
ನಮ್ಮೋರು ಬಡವರಿನ್ನೇನೀವರು?

ಹೀಗೆಯೇ ಐದು ಹರಿವಾಣ, ಐದು ದೀವಿಗೆ ಕಂಬ, ಐದು ತಪ್ಪೇಲಿ, ಹದಿನಾಲ್ಕು ಚೆಂಬು, ಐದು ಬಿಂದಿಗೆ, ಐದು ಪಟ್ಟೇಸೀರೆ, ಐದು ಬಣ್ಣದ ಸೀರೆ, ಐದು ಸಕಲಾತಿ, ಐದು ಶಾಲು, ಐದು ರತ್ನಗಂಬಳಿ, ಪಟ್ಟಮಂಚ ಕೊಟ್ಟರು; ಮತ್ತು ಕರೆವ ಹಸು ಹದಿನಾರು, ಕಾಲಾಳು ನೂರಾರು, ಕರೆವ ಎಮ್ಮೆ ಎಂಟು, ಕರುಗಳೆಂಟು, ಕರೆದು ಕಾಸಿಕೊಡುವ ದಾಸಿಯರನ್ನಿತ್ತರು. ಕಸ್ತೂರಿ-ಕುಂಕುಮ, ತೊಡುವ ಕುಪ್ಪಸರಾಸಿ, ನುಡಿವ ಗಿಳಿ ಕೊಟ್ಟರು. ಕಡಲ ಮುತ್ತಯ್ದೆಯರು ಉಡಿ ತುಂಬಿದರೆಂದು ಪಾರ್ವತಿಯು ಮುಗಿಲಾರದ ಹೆಸರನ್ನು ಅಸಂಖ್ಯವಾಗಿ ಹೇಳಿ ಬಡವರಾದ ತವರವರು ಇಷ್ಟೇ ಕೊಟ್ಟರೆಂದು ಒಮ್ಮೆ ಮಾತು ಮುಗಿಸುವಳು. ಶಿವನು-

ಇಷ್ಟದ ಮಗಳೆಂದು ಇಷ್ಟನೂ ನಿನಗಿತ್ತು ಎ
ಳ್ಳಷ್ಟನಾದರೂ ಎನಗೆ ಕೊಡಲಿಲ್ಲೇ?

ಎಂದು ಕೇಳಿಯೇ ಬಿಡುವನು. ಜಾಣೆಯಾದ ಪಾರ್ವತಿಯು ಅದಕ್ಕೆ ಮರು ನುಡಿದುದು ಹೇಗೆಂದರೆ-

ಇಷ್ಟನೂ ನನಗಿತ್ತು ಎನ್ನನೆ ನಿನಗಿತ್ತು
ಸೃಷ್ಟಿಗೊಡೆಯನೆ ಕೇಳೆಂದಳಾಕೆ ||

ಅದೇ ಪ್ರಕಾರ, ಗರತಿಯಾದವಳು ತಾನೇ ನಿಂತು ಜನಾಂಗ ಕಲ್ಯಾಣವನ್ನು ಪ್ರತ್ಯಕ್ಷ ಮಾಡಿರಲಿಕ್ಕಿಲ್ಲವಾದರೂ, ಆ ಕಾರ್ಯವನ್ನು ಮಾಡಿ ಮುಗಿಸಬಲ್ಲ ಶಕ್ತಿವೀರರನ್ನೇ ನಿರ್ಮಿಸಿಕೊಟ್ಟಿದ್ದಾಳೆ. ಗಿರಿರಾಯನು ಅಳಿಯನಿಗೆ ಪ್ರತ್ಯಕ್ಷವಾಗಿ ಏನೂ ಕೊಡಲಿಲ್ಲವಾದರೂ, ಸರ್ವವನ್ನೂ ಮಗಳಿಗಿತ್ತು ಅಂಥ ಮಗಳನ್ನೇ ಅಳಿಯನಿಗೆ ಕೊಟ್ಟಿದ್ದಾನೆ. ಜನಾಂಗದ ಉದ್ಧಾರವನ್ನೆಸಗಬಲ್ಲ ಮಕ್ಕಳೆಂಬ ವಸ್ತು ಒಡವೆಗಳೊಂದಿಗೆ ಗರತಿಯು ತನ್ನನ್ನೇ ಶಿವನಿಗೆ ಅಂದರೆ ಜನಾಂಗಕ್ಕೆ ನೀಡಿಕೊಂಡಿದ್ದಾಳೆ. ಜನಾಂಗದ ಪ್ರಗತಿಯೆಂಬುದೆಲ್ಲ ಈವರೆಗೆ ಗರತಿಯಿಂದಲೇ ಆಗಿದೆಯೆಲ್ಲದೆ ಇನ್ನಾರಿಂದಲೂ ಆಗಿಲ್ಲವೆಂದು ಒಂದೇ ಮಾತಿನಲ್ಲಿ ಹೇಳಬಹುದಾಗಿದೆ. ಗರತಿಯ ಮಹಾತ್ಯಾಗವನ್ನು ಉದಾಹರಿಸಲು “ಕೆರೆಗೆ ಹಾರ”ವಾದ ಕಲ್ಲನಕೇರಿ ಮಲ್ಲನಗೌಡನ ಸೊಸೆ ಭಾಗೀರಥಿಯ ಹೆಸರೊಂದೇ ಸಾಕು. ಆ ಹೆಸರೊಂದನ್ನೇ ಕುಸುರಿಸಬೇಕಾಗಿದ್ದರೆ ಅದರ ಹಿನ್ನೆಲೆಯನ್ನು ಸಾಕಷ್ಟು ಚಿತ್ರಿಸಲೇಬೇಕು. ಆ ಕಥೆ ಹೀಗಿದೆ-

ಕಲ್ಲನಕೇರಿ ಮಲ್ಲನಗೌಡನು ಒಂದು ಕೆರೆ ಕಟ್ಟಿಸಿ, ಊರಿನ ನೀರ ತೊಂದರೆಯನ್ನು ನಿವಾರಿಸಲೆಳಸುತ್ತಾನೆ. ಕೆರೆಗೆ ನೀರು ಬರುವುದಿಲ್ಲ. ಹೊತ್ತಿಗೇ ತೆಗಿಸಿ ಕೇಳಿದರೆ- “ಹಿರಿಸೊಸೆ ಮಲ್ಲವ್ನ ಕೆರೆಗೆ ಹಾರ ಕೊಡಬೇಕು” ಎಂದು ಉಪಾಯ ಹೊರಟಿತು.

“ಹಿರಿಸೊಸೇನ ಕೊಟ್ಟರೆ ಹಿರಿತನಕ್ಕೆ ಯಾರಿಲ್ಲ
ಕಿರಿಸೊಸೆ ಭಾಗೀರತೀನ್ಹಾರ ಕೊಡಬೇಕು”

ಎಂದು ಗೌಡನ ಮನೆಯಲ್ಲಿ ತೀರ್ಮಾನವಾಯಿತು. ಆ ಸುದ್ದಿಯನ್ನು ಕೇಳಿ ಮತ್ತಾವಳಾದರೂ ಸೊಸೆಯಾಗಿದ್ದರೆ ಅದೆಷ್ಟು ಬೊಬ್ಬಾಟ ಮಾಡಿ, ಅತ್ತು ಕರೆದು, ಕೂಗಿ ಆಕ್ರೋಶ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಹೆಣಗುತ್ತಿದ್ದಳೋ ತಿಳಿಯದು. ಭಾಗೀರತಿ ಆ ನಿರ್ಣಯವನ್ನು ಕಿವಿಯಾರೆ ಕೇಳಿದಷ್ಟರಿಂದ ಕೆರೆಗೆ ಹಾರವಾಗಲು ಸಿದ್ಧಳೇ ಆದಳು. ಅಷ್ಟರಲ್ಲಿ ತನ್ನ ತಾಯಿ-ತಂದೆ-ಅಕ್ಕ-ಗೆಳತಿಯರನ್ನು ಕಂಡುಬರೋಣವೆಂದು ಹೊರಟಳು. ಅಲ್ಲಿ ಅವರಿಗೂ ಆ ಸುದ್ದಿ ಹೇಳಲಿಲ್ಲ. ತಪ್ಪಿಸಿಕೊಳ್ಳುವ ಮನಸ್ಸಿದದರೆ ತಾಯ್ತಂದೆಗಳ ಮುಂದೆ ತನ್ನ ದುರವಸ್ಥೆಯನ್ನು ಹೇಳಿ ಅವರ ಸಹಾಯ ಪಡೆಯಬಹುದಾಗಿತ್ತು. ಆದರೆ ಆ ಭಾಗೀರತಿಯು ಊರ ಕಲ್ಯಾಣಕ್ಕಾಗಿ ತಾನು ಬಲಿಯಾಗಿಬಿಟ್ಟರೆ ಜೀವನವು ಸಾರ್ಥಕಗೊಳ್ಳುವದೆಂದು ಎಣಿಸಿದಳು.

ಸಣ್ಣ ಸೊಸೆ ಭಾಗೀರತಿ ತವರುಮನೆಗೆ ಹೋದಾಳು
ಮನೆಮುಂದ ಹೋಗುದಕ ಅವರಪ್ಪ ಬಂದಾನು
“ಎಂದಿಲ್ಲದ ಭಾಗೀರತಿ ಇಂದ್ಯಾಕ ಬಂದೆವ್ವ;?
ಬಾಡೀದ ಮಾರ್ಯಾಕ ಕಣ್ಣಾಗ ನೀರ್ಯಾಕ?”

ಎಂದು ಕೇಳಿದಾಗ ಆಕೆ ನಮ್ಮ ಅತ್ತೆಮಾವಂದಿರು ನಮ್ಮನ್ನು ಬೇರೆ ಇಡುತ್ತಾರೆಂದು ಸುಳ್ಳು ಕಾರಣವನ್ನು ಹೇಳಿದಳು. “ಬೇರೆ ಇಟ್ಟರೆ ಹೊಲ ಮನೆ ಕೊಡುತೀನಿ” ಎಂದು ತಂದೆ ಸಮಾಧಾನ ಹೇಳಿದರೆ – “ಹೊಲ ಮನೆ ಒಯ್ದು ಹೊಳೆದಂಡ್ಯಾಗ ಹಾಕಪ್ಪ” ಎಂದು ನುಡಿದವಳೇ ತಾಯಿಯ ಕಡೆಗೆ ಹೋದಳು. ತಾಯಿಯು ಆಕೆಯ ಅಳುಮೋರೆಯ ಕಾರಣ ಕೇಳುವರು. ಆಕೆಗೂ ಅದೇ ಕಾರಣವನ್ನು ಭಾಗೀರಥಿ ಹೇಳಿದಳು. “ಅತ್ತೆ ಮಾವಂದಿರು ಬೇರೆಯಿಟ್ಟರೆ ವಾಲಿಜೋಡು ಕೊಡುತ್ತೇನೆ” ಎಂದು ತಾಯಿ ಸಮಾಧಾನಪಡಿಸಿದರೆ –“ವಾಲಿಯ ಜೋಡೊಯ್ದು ಒಲಿಯಾಗ ಹಾಕವ್ವ” ಎಂದು ನುಡಿದು, ಅಕ್ಕನ ಬಳಿಗೆ ಬರುವಳು. ಅಲ್ಲಿಯೂ ಅದೇ ಪ್ರಶ್ನೆ, ಅದೇ ಉತ್ತರ. ಕೊನೆಯಲ್ಲಿ ಗೆಳತಿಯ ಮನೆಗೆ ಹೋಗಲು, ಗೆಳತಿಯು ಅಂಜುತ್ತ ಅಳುಕುತ್ತ ಭಾಗೀರಥಿಯ ಸಂಕಟದ ಕಾರಣವನ್ನು ಹೊಟ್ಟೆಹೊಕ್ಕು ಕೇಳುವಳು. ಅದಕ್ಕೆ ಭಾಗೀರತಿ ಹೊಟ್ಟೆ ಬಿಚ್ಚಿ ಹೇಳುವಳು-

“ಅಂಜಬೇಡ ಗೆಳತಿ ಅಳುಕಬೇಡ ಗೆಳತಿ
ನಮ್ಮತ್ತೆ ನಮ್ಮಾವ ಕೆರೆಗ್ಹಾರ ಕೊಡತಾರಂತ
ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕು”

ಭಾಗೀರತಿ ಅತ್ತೆಯ ಮನೆಗೆ ಮರಳಿ ಬರುವ ಹೊತ್ತಿಗೆ, ಮನೆಯಲ್ಲಿ ಕೆರೆಗೆ ಹಾರಕೊಡುವ ದಿನದ ಸಿದ್ಧತೆ ನಡೆದಿದ್ದವು. ಆತ್ಮಾರ್ಪಣ ಮಾಡುವ ವ್ಯಕ್ತಿ ಅತ್ತರೆ, ಕಣ್ಣೀರು ಕರೆದರೆ, ಇಲ್ಲವೆ ಮನಸ್ಸು ಉದಾಸೀನ ಮಾಡಿದರೆ, ಆ ಅರ್ಪಣವು ಪರಮಾತ್ನಿಗೆ ಸಲ್ಲುವದಿಲ್ಲವಂತೆ. ಅಂಥ ಕೆಲಸವನ್ನು “ಕಾಡುವ ದೇವರ ಕಾಟ ಕಳೆದಂತೆ” ಮಾಡಬಾರದಂತೆ. ಹಾರದ ಸಿದ್ಧತೆ ಮಾಡುವುದರಲ್ಲಿ ಭಾಗೀರಥಿಯೂ ಭಾಗಿಯಾದಳು. “ತಾಯಿತಂದೆಗಳ ಮುಖವು ಇಷ್ಟರಲ್ಲಿ ಎರವಾಗುವದಲ್ಲ! ಗಂಡನ ಮುಖವು ಮರೆಯಾಗುವುದಲ್ಲ!” ಎಂಬ ತಳಮಳವು ಆಕೆಯ ಹೊಟ್ಟೆಯಲ್ಲಿ ನಡೆದೇ ಇರಬೇಕೆಂದು ತೋರುತ್ತದೆ.

ಬ್ಯಾಳೀಯ ಹಸಮಾಡ್ತ ಬಿಟ್ಟರು ಕಣ್ಣೀರು.
“ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು?”
“ಬ್ಯಾಳ್ಯಾಗಿನ ಹಳ್ಳು ಬಂದು ಕಣ್ಣಾಗ ಬಿತ್ತು ಮಾವ”
ಅಕ್ಕಿಯ ಹಸಮಾಡ್ತ ಉಕ್ಕ್ಯಾವ ಕಣ್ಣೀರು
“ಎಂದಿಲ್ದ ಭಾಗೀರಥಿ ಇಂದ್ಯಾಕ ಕಣ್ಣೀರು?”
“ಅಕ್ಕ್ಯಾಗಿನ ಹಳ್ಳೊಂದು ಕಣ್ಣಾಗ ಬಿತ್ತತ್ತಿ.”

ಆ ಬಳಿಕ ಗಂಗೆಯನ್ನು ಪೂಜಿಸುವುದಕ್ಕೆ ಬೇಕಾಗುವ ಸಲಕರಣೆಗಳೆಲ್ಲವೂ ಸಿದ್ಧವಾದವು. ಉಕ್ಕುವ ನೀರಿನಲ್ಲಿ ಅಕ್ಕಿಯನ್ನೂ ಸಕ್ಕರಿ-ಹಾಲಲ್ಲಿ ಶಾವಿಗೆಯನ್ನೂ ಸುರುವಿದರು. ಹತ್ತು ಕೊಪ್ಪರಿಗೆಗಳಲ್ಲಿ ಜಳಕಕ್ಕೆ ನೀರು ಕಾಯ್ದವು. ಜಳಕ ಮಾಡಿರೆಂದರೆ ನಿಂಗವ್ವ ನೀಲವ್ವ ಒಲ್ಲೆಂದರು. ಗಂಗವ್ವ ಗೌರವ್ವ ಒಲ್ಲೆಂದರು. ಭಾಗೀರಥಿ ಮಾತ್ರ ಹೇಳಿದ ಕೂಡಲೇ ಜಳಕ ಮಾಡಿದಳು.

ಜಳಕಾನ ಮಾಡ್ಯಾಳು ಭಂಗಾರ ಬುಟ್ಟಿ ತುಂಬ್ಯಾಳು
ಭಂಗಾರ ಬುಟ್ಟಿ ತುಂಬ್ಯಾಳು ಸಿಂಗಾರಸಿಂಬಿ ಮಾಡ್ಯಾಳು
ಸಿಂಗಾರಸಿಂಬಿ ಮಾಡ್ಯಾಳು ಮುಂದ ಮುಂದ ಹೊರಟಳು
ಮುಂದ ಮುಂದ ಭಾಗೀರತಿ ಹಿಂದ್ಹಿಂದ ಎಲ್ಲಾರು
ಗಂಗಿಪೂಜಿ ಮಾಡ್ಯಾರು ಬೆಲಪತ್ರಿ ಏರಿಸ್ಯಾರು
ಸೀರಿ ಕುಬಸ ಏರಿಸ್ಯಾರು ಹೂವಿನದಂಡಿ ಮುಡಿಸ್ಯಾರು
ಹೂವಿನದಂಡಿ ಮುಡಿಸ್ಯಾರ ನೇವದಿ ಮಾಡ್ಯಾರು
ನೇವದಿ ಮಾಡ್ಯಾರು ಎಲ್ಲಾರು ಉಂಡಾರು
ಎಲ್ಲಾರು ಉಂಡಾರು ಉಳಿದದ್ದು ತುಂಬ್ಯಾರು
ಉಳಿದದ್ದು ತುಂಬ್ಯಾರು ಭಂಗಾರಬುಟ್ಟಿ ಹೊತ್ತಾರು

ಹೀಗೆ ಹೊರಡುವುದಕ್ಕೆ ಬಂಗಾರಬಟ್ಟಲು ಮರೆತು ಬಂದುದು ನೆನಪಿಗೆ ಬಂದಿತು. ಬಟ್ಟಲು ತರುವುದಕ್ಕೆ ಗಂಗವ್ವನಾಗಲಿ ಗೌರವ್ವನಾಗಲಿ ಹಿಂದಿರುಗಲೊಪ್ಪಲಿಲ್ಲ. ನಿಂಗವ್ವ – ನೀಲವ್ವ ಒಲ್ಲೆಂದರು. ಭಾಗೀರತಿ ಏಕೆ ಹೆದರುವಳು? ಆಕೆ ಹಿಂದಿರುಗಿ ನಡೆದು ಬಂಗಾರಬಟ್ಟಲು ಕೈಯಲ್ಲೆತ್ತಿಕೊಂಡಳು-

ಒಂದು ಮೆಟ್ಲೇರುದಕ ಪಾದಕ ಬಂದಳು ಗಂಗಿ
ಎರಡು ಮೆಟ್ಲೇರುದಕ ಪಾದ ಮುಣಗಸ್ಯಾಳು ಗಂಗಿ
ಮೂರು ಮೆಟ್ಲೇರುದಕ ಮೊಣಕಾಲಿಗೆ ಬಂದಳು ಗಂಗಿ
ಐದು ಮಟ್ಲೇರುದಕ ತುಂಬಿ ಹರಿದಾಳು ಗಂಗಿ
ಸಣ್ಣ ಸೊಸೆ ಭಾಗೀರತಿ ಕೆರೆಗ್ಹಾರವಾದಳು.

ಇಲ್ಲಿಗೆ ಭಾಗೀರತಿಯ ಕಥೆ ಮುಗಿಯಿತು. ಆದರೆ ದಂಡಿಗೆ ಹೋದ ಆಕೆಯ ಗಂಡನ ಕಥೆ ವಿಸ್ತಾರವಾಗಿ ಹಬ್ಬಿ ಸೊಗಸಾಗಿ ಮುಗಿದಿದೆ. ಭಾಗೀರತಿಯು ಕಾಲ್ಪನಿಕ ಹೆಂಗುಸಾಗಿದ್ದರೆ, ಸೀತಾದೇವಿಯೂ ಕವಿಸೃಷ್ಟಿಯೇ ಅನ್ನಬೇಕಾದೀತು. ಹೂಗಳನ್ನಾಯ್ದು ಮಾಲೆಮಾಡಿದಂತೆ ಗರತಿಯ ಒಳ್ಳೆಯ ಗುಣಗಳನ್ನೆಲ್ಲ ಒತ್ತಟ್ಟಿಗೆ ಕೂಡಿಸಿಕೊಟ್ಟಂತೆ ಭಾಗೀರತಿ ಕಾಣಿಸಿಕೊಳ್ಳಬಹುದು; ನಮ್ಮ ಜನತೆ ಇಂಥ ಆದರ್ಶ ಗರತಿಯನ್ನು ಹಾರೈಸಿದ್ದಾದರೂ ಇದೆಯೆನ್ನಬಹುದಲ್ಲ. ಸೀತಾದೇವಿಯೂ ಅಷ್ಟೇ ಅನ್ನಬೇಕಾದೀತು. ಕಲ್ಲನಕೇರಿ ಎಲ್ಲಿದೆಯೋ ತಿಳಿಯದಿದ್ದರೂ ಆ ಊರ ಕೆರೆಯ ಬಗೆಗೆ ಇರುವ ಕಥೆಯೂ, ಆ ಕಥೆಯಿಂದ ಹಾಡು ಹುಟ್ಟಿಕೊಂಡು ಹಬ್ಬಿವೆ. ಹಲಸಂಗಿ ಕೋಟೆಯೂ ಭದ್ರವಾಗಿ ನಿಲ್ಲುವುದಕ್ಕೆ ಜಕ್ಕವ್ವನೆಂಬ ಮಾದಿಗರ ಗರತಿಯೂ ತ್ಯಾಗ ಮಾಡಿದ ಇಂಥದೇ ಕಥೆಯನ್ನು ಕೇಳುತ್ತೇವೆ. ಆಕೆಯ ಬಲಿ ತಕ್ಕೊಂಡು ಹೆಡೆಯೆತ್ತಿನಿಂತ ಕೋಟೆಯೂ, ಆ ತ್ಯಾಗಕ್ಕಾಗಿ ಜಕ್ಕವ್ವನ ವಂಶದವರಿಗೆ ಸಿಕ್ಕ ‘ವತನ’ವೂ ಇನ್ನೂ ಕಾಣಸಿಗುತ್ತವೆ. ಅದರಂತೆ ಶ್ರೀ ಮಾಸ್ತಿಯವರು ಹಾಡಿದ ‘ಚಿಕ್ಕಮಲ್ಲಮ್ಮನ’ ಉದಾತ್ತ ಆದರ್ಶವನ್ನು ಇನ್ನೆಲ್ಲಿ ನೋಡುವೆವು? ಅವರು ಸುರಿದ ‘ಕನ್ನಡ ನಾಡಿನ ಪೂರ್ವದ ಕತೆ’ಯನ್ನು ಇಲ್ಲಿ ನೆನೆಯಿಸಿಕೊಳ್ಳಬಹುದು. ಆ ಕಥೆ ನಡೆದ ಸ್ಥಳ ಮಿಡಿಗೇಶಿಯಂತೆ. ವೆಂಕಟರಮಣ ಸಿರಿಮಲ್ಲೇಶನ ಕೃಪೆಗೀಡಾದ ಸೀಮೆ. ಅಲ್ಲಿ ಹಿಂದಕ್ಕೆ ಮಲ್ಲಮ್ಮನೆಂಬವಳು ಆಗಿಹೋದಳಂತೆ. ಅವಳನ್ನು ಅಕ್ಕರೆಯಾಗಿ ಎಲ್ಲರೂ ಚಿಕ್ಕ ಮಲ್ಲಮ್ಮ ಎನ್ನುತ್ತಿದ್ದರಂತೆ ಅವಳದು ಮಾತುಗಳಿಗೆ ಸಿಕ್ಕಲಾರದ ಚೆಲುವು. ಆದರೂ-

ಚಿನ್ನದ ಪುತ್ಥಳಿ ಗಂದದ ಗೊಂಬೆ
ರನ್ನದ ಕನ್ನಡಿ ಇನ್ನೇನೆಂಬೆ.
ಚೆಲ್ಲಗಂಗಳು ಹುಲ್ಲೆಯ ನಡಿಗೆ
ಮಲ್ಲಿಗೆಯಂಥಾ ಸುದ್ದದ ಮನಸು
ಮಾತನಾಡಿದಳೊ ಮುತ್ತಿನ ಮಳೆಯೊ
ಪ್ರೀತಿಸಿ ನಕ್ಕಳೊ ಬೆಳಕಿನ ಬೆಳೆಯೋ
ಸತ್ಯವಂತರು ಒಮ್ಮೆ ನೋಡಿದರೆ
ಮತ್ತೆ ನೋಡುವರೋ ದೇವಿಯೆ ಎಂದು

ಇದು ದೇಹದ ಚೆಲುವು. ಆಕೆಯ ನಡತೆಯ ಚೆಲುವು ಇದಕ್ಕೂ ಮಿಗಿಲಾಗಿತ್ತು. ತಂದೆ ತಾಯಿ, ಬಂಧುಬಳಗ, ಮಂದಿ ಎಲ್ಲರಿಗೂ ಮೆಚ್ಚಾಗಿರುವಳು. ಕೈಹಿಡಿದಾತನ ಮನವೊಲಿಸಿ, ಮೋಹದ ಮಂಗಳಮೂರುತಿ ಎನಿಸಿದವಳು. ಗೆಳತಿಯರು ಎತ್ತಿ ಮುದ್ದಿಸಲು ಒಬ್ಬ ಚಿಣ್ಣನನ್ನೂ ಹಡೆದಿರುವಳು.

ಒಳ್ಳೆಯ ಮಗಳು ಒಳ್ಳೆಯ ಗೆಳತಿ
ಒಳ್ಳೆಯ ಸೊಸೆ ಬಹು ಒಳ್ಳೆಯ ಹೆಂಡತಿ
ಚೆಲುವು ಹೆಚ್ಚೊ ಗುಣ ಹೆಚ್ಚೊ ಎಂಬುದು
ತಿಳಿಯದೊ ಅವಳನು ನೋಡಿದ ಜನಕೆ.

ಎಂದು ಅವಳ ಮಹಿಮೆಯನ್ನು ಒಂದೇ ಮಾತಿನಲ್ಲಿ ಗುರುತಿಸಬಹುದು. ಅಂಗಳದೊಳಗಣ ಮಲ್ಲಿಗೆಯಂತೆ ಬೆಳೆದು ನಿಂತ ಮಲ್ಲಮ್ಮನ ಬಾಳು ನೋಡಿ ಸಹಿಸದ ಕೆಲವು ಕುಹಕರು ಆಕೆಯ ಬದುಕನ್ನು ಕೆಡಿಸಿದರು. ಗಿಳಿಯನ್ನು ಬೆಕ್ಕು ಕದಿಯುವ ಹಾಗೆ, ಆಕೆಯನ್ನು ಘಾತುಕರು ಕದ್ದೊಯ್ದರು. ಭಂಡರು ರತ್ನವನ್ನು ಕೆಡಿಸಿದರು. ಗಂಡ, ತಂದೆ, ಮಾವ, ಮೈದುನರೆಲ್ಲ ಸುತ್ತುವರಿದು ಹುಡುಕಿದರೂ ಸಿಗದಿರಲು ದುಃಖದ ಮಡುವಿನಲ್ಲಿ ಮುಳುಗಿದರು. ಒಮ್ಮೆ ಒಂದು ಬೆಳಗಿನಲ್ಲಿ ಅವಳು ಮನೆಯ ಮುಂದೆ ಬಿದ್ದಿರುವುದು ಕಾಣಿಸಿತು-

ಕಳೆಯಳಿದು ಕಂದಿ ಕುಂದಿದ ಮುಖವೊ
ಬೆಳಕಳಿದು ಬೆಂದು ನೊಂದಿದ ಕಣ್ಣು
ಬೇರು ಕಿತ್ತೊಗೆದ ಮಲ್ಲಿಗೆ ಬಳ್ಳಿ
ಕ್ರೂರ ರಾಕ್ಷಸನು ನುಂಗಿದ ಚಂದ್ರ
ಬಾಳು ಸಾಕು ಸಾಕೆನುತಿಹ ರೀತಿ
ಗೋಳೆ ಹೆಣ್ಣಾಯಿತೊ ಎನೆ ರೂಪು.

ಜನವೆಲ್ಲ ಈಕೆಯನ್ನು ನೋಡಿದರು. ಮರಳಿ ಬಂದಳೆಂದು ಎಲ್ಲರಿಗೂ ಆನಂದವಾಯಿತು. ‘ಒಳಗೆ ಬಾ’ ಎಂದರು; ‘ಬಾರೆನು’ ಎಂದಳು. ‘ಹೊಲಸಾಗಿದೆ ನನ್ನೊಡಲಿದು’ ಎಂದು ನುಡಿದಳು. ಗಂಡನಿಗೂ ಮಂದಿಗೂ ಸತ್ಯದ ಮಾತನ್ನು ಮತ್ತೇನು ಹೇಳಿದರೆಂದರೆ- ನಾ ಕೆಟ್ಟುಹೋದೆ. ಎನ್ನಾಶೆಯನ್ನು ಬಿಟ್ಟುಬಿಡಿರಿ. ನಾನು ಬಾಳಲಾರೆನು. ಆ ಬಳಿಕ ತನಗೆ ಈ ಅವಸ್ಥೆ ಗೀಡುಮಾಡಿದ ಭಂಡಮಕ್ಕಳ ಗುರುತು ಹೇಳಿ, ಎಂಜಲಾದ ಈ ಮೈಯನ್ನು ನಾನು ಸಂಜೆಯ ಮೊದಲೇ ಸುಡಬೇಕೆಂದಳು. ಹೀಗೆಂದ ನುಡಿ, ದುಃಖಾತಿಶಯದಲ್ಲಿ ಆಡಿದ್ದೆಂದು ಕೇಳಿದವರು ತಿಳಕೊಂಡರು. ಕ್ಷಣ ತಡೆದು ಮೈದುನನ್ನು ಹತ್ತಿರಕ್ಕೆ ಕರೆದು-“ದೇಗುಲದ ಮುಂದೆ ಹೊಂಡವನು ಮಾಡಿರಿ” ಎಂದು ಹೇಳಿದ್ದನ್ನು ಕೇಳಿ ಮಂದಿಯೆಲ್ಲ ಭಯದಿಂದ ನಡುಗಿ ಹೋಯಿತು. “ಅಯ್ಯೋ! ಇದೆಂಥ ಮಾತು ! ಮೈ ಸುಟ್ಟುಕೊಳ್ಳುವುದೇ? ಬೇಡ” ಎಂದು ಕೂಡಿದವರೆಲ್ಲ ಅಂಗಲಾಚಿದರೂ. ಹಡೆದ ತಾಯಿ ಬಂದು-ನೀನಾವ ತಪ್ಪೂ ಮಾಡಿಲ್ಲವಲ್ಲ-ಎಂದಳು. ‘ಇಂಥ ಹಠ ಹಿಡಿಯಬಾರದು’ ಎಂದು ತಂದೆ ಹೇಳಿದನು. ಅತ್ತೆ, ಮಾವ, ಮೈದುನ, ಭಾವ ಎಲ್ಲರೂ ಹೇಳಿದರು. “ಭಂಡರನ್ನು ಕೊಂದುಹಾಕುವೆ” ಎಂದು ಗಂಡನು ಧೈರ್ಯ ಹೇಳಿದನು. ಗೆಳತಿಯೊಬ್ಬಳು ಒಳಗಿಂದ ಮಗುವನ್ನು ತಂದು ಮುಂದಿಳಿಸಿದಳು. ಆದರೇನು? ಅವರೆಲ್ಲರಿಗೂ ಮಲ್ಲಮ್ಮ ನಿತ್ತುದು ಒಂದೇ ಉತ್ತರ-

ಬಲ್ಲವರಿಗೆ ನಾ ಹೇಳುವಳಲ್ಲ
ಭಂಡರೆಂಜಲಿನ ಒಡಲನು ನನ್ನ
ಗಂಡಗೆ ಬಡಿಸಲು ಒಲ್ಲದು ನನಗೆ
ಹೆಂಡ ಸೋಕಿದ ಭಾಂಡದಿ ದೇವರು
ದಿಂಡರ ಹಾಲನು ಇರಿಸೆನು ನಾನು
ಅಂಬಲಿ ಉಂಡು ಎಸೆದ ಹಾಳೆಯಲಿ
ತಂಬಿಡಟ್ಟುವೆನೆ ದೇವರ ಮುಂದೆ?

ಎಂದು ತನ್ನ ನಿಶ್ಚಯವನ್ನು ಹೇಳಿಯೇ ಬಿಟ್ಟಳು. ಅವಳನ್ನು ನಿಶ್ಚಯದಿಂದ ಕದಲಿಸುವುದಕ್ಕೆ ಯಾರಿಗೂ ಶಕ್ಯವಾಗಲಿಲ್ಲ. ಇದನ್ನೆಲ್ಲ ನೋಡಿ ತಮ್ಮ ಮೈದುನರು ಹೊರಟುಹೋಗಿ ಗುಡಿಯ ಮುಂದೆ ಕೊಂಡವನ್ನಗೆದು ಝಿಗಿ ಝಿಗಿ ಹೊಳೆಯುವ ಕೆಂಡದ ಹೊಂಡವನ್ನು ಮಾಡಿದರು. ಎಲ್ಲರೂ ಅನಿವಾರ್ಯವಾಗಿ ತನ್ನ ಈ ಕ್ರೂರ ಪಂಥಕ್ಕೆ ಒಪ್ಪಿರಲು, ಮಲ್ಲಮ್ಮನು ಬಿನ್ನಯಿಸಿದ್ದೇನೆಂದರೆ-

ಹೇಸಿಕೆಯಾಗಿಹ ಮೈಯನು ಬಿಟ್ಟು
ಮಾಸದ ಹೊಸದೊಂದೊಡಲನು ತೊಟ್ಟು
ಮರಳಿ ನಾ ಬರುವೆ ಅಪ್ಪಾ ಅಮ್ಮಾ
ತಿರುಗಿ ಬದುಕುವೆನು ಅತ್ತೆ ಮಾವ
ನೂರು ಜನ್ಮಕೂ ಈ ಗಂಡನನೇ
ಸೇರಿ ಸಿಂಗರದಿ ಬಾಳುವೆ…..

ಮಲ್ಲಮ್ಮ ಮದುವೆಗೆ ಹೋಗುವ ಹುಡಿಯ ಹಾಗೆ ಹದುಳ ನುಡಿದಳು, ಸಂತಯಿಸಿದಳು. ತರ್ವಾಯ ಮಲ್ಲಮ್ಮ ಜಳಕ ಮಾಡಿ ಒಪ್ಪುವ ಸೀರೆಯುಟ್ಟು, ಚಂದವಾದ ಕುಪ್ಪಸ ತೊಟ್ಟು, ಹಣೆಗೆ ಕುಂಕುಮವಿಟ್ಟುಕೊಂಡಳು. ವಂಕಿ, ಜಮಕಿ, ನಾಗರ ಜಡೆಬಿಲ್ಲೆ, ಕಂಕಣ, ಪಿಲ್ಲೆ, ಉಂಗುರುಗಳನ್ನು ಧರಿಸಿಕೊಂಡಳು. ತಾಯಿ ತಂದೆ, ಅತ್ತೆ ಮಾವ ಮೊದಲಾದ ಹಿರಿಯರ ಬಳಿಗೆ ಬಂದು ಕಾಲಿಗೆರಗಿ, ಮುಂದಿನ ಜನ್ಮವು ಚೆನ್ನಾಗುವಂತೆ ಹರಸುವದಕ್ಕೆ ಕೇಳಿಕೊಂಡಳು. ತಲೆತಗ್ಗಿಸಿ ಕುಳಿತ ಗಂಡನ ಬಳಿ ಬಂದು ಅವನ ಕಾಲಿಗೆರಗಿ-

“ನಾನು ಕೇಳಿ ಬಂದಷ್ಟೂ ದಿವಸ
ಮಾನದಿಂದ ಬಾಳಿಸಿದಿರಿ ನನ್ನ
ನನ್ನ ಪುಣ್ಯ ಇಲ್ಲಿಗೆ ಕೊನೆಯಾಯ್ತು,
ಅನ್ನೆಯವಾಯಿತು ನನ್ನದು ಬಾಳು;
ಒಬ್ಬರನುಳಿದು ಹೋಗಲು ನನಗೆ
ನಿಬ್ಬರವಾಗಿದೆ ಮನದಲಿ ದುಃಖ
ಒಂಟಿಯಾಗಿ ಇರಬೇಡಿರಿ ಹರೆಯದಿ,
ನಂಟರಲ್ಲಿ ತಕ್ಕವಳನು ತಂದು
ಬಾಳಿರಿ, ಅಳಬೇಡಿರಿ, ನನ್ನಾಣೆ”

ಎಂದು ಅಗ್ನಿಕುಂಡದ ಬಳಿಗೆ ಬಂದಳು. ದೇಶವೆಲ್ಲ ಮಿಡಿಗೇಶಿಗೇ ಬಂದಿತೆನ್ನುವಂತೆ ಜನ ಸೇರಿದ್ದಾರೆ. ಅಗ್ನಿಯ ಝಳಕ್ಕೆ ಅಡಿಯ ಕಲ್ಲುಗಳು ಛಟ ಛಟ ಸಿಡಿಯುತ್ತಿವೆ. ಮಲ್ಲಮ್ಮ ಗುಡಿಹೊಕ್ಕು ದೇವರನ್ನು ಪೂಜಿಸಿ ಬಂದಳು.

“ಕೆಂಡ ಬಂದು ಕೆಂಡದಲಿ ಸೇರುವಳು
ಕಂಡ ಮಾತು ಇದು ಅಂಜಿಕೆ ಬೇಡ,
ಸಂಕಟಪಡಿಸೆನು ಮಲ್ಲಮ್ಮನನು
ಶಂಕೆಯ ಬಿಡಿರಿ….”

ಎನ್ನುವಂತೆ ಅಗ್ನಿದೇವನು ತನ್ನದೆಯನ್ನು ಬಗೆದು ತೋರಿದನು. ಮಲ್ಲಮ್ಮ ಹಿರಿಯರಿಗೆ ಕೈಮುಗಿದಳು. ಬರುವೆನೆಂದು ಗೆಳತಿಯರಿಗೆ ಹೇಳಿದಳು. ಗಂಡನ ಕಾಲಿಗೆ ಮುಂಡೆಯನಿಟ್ಟು ಮುತ್ತು ಕೊಟ್ಟಳು. ಅಳುವ ಕಂದನ ಬಳಿಗೆ ಹೋಗಿ ಮುದ್ದಿಸಿದಳು. “ವೆಂಕಟರಮಣ ಸಿರಿಮಲ್ಲೇಶಾ, ಬಿಂಕದ ದೇವರೆ ಸಲಹಿರಿ” ಎಂದು. ಕೊಕ್ಕರೆ ನೀರನ್ನು ಹೋಗುವಂತೆ ಬೆಂಕಿಯ ಹೊಂಡವನ್ನು ಮಲ್ಲಮ್ಮನು ಹೊಕ್ಕಳು! ಅದನ್ನು ಕಂಡವರು ನಡುಗಿದರು. ಕತೆ ಕೇಳಿದವರು ನಡುವರು, ಹೇಳಿದವರೂ ನಡುಗಿದರು; ಹೇಸಿದ ಅವಳ ಮೈ ಬೆಂದುಹೋದರೂ ಅವಳ ಶುಭ್ರ ಕೀರ್ತಿ ಮಾಸದೆ ಉಳಿಯಿತು. ಹಿಂದಿನವರು ಪ್ರತಿಮೆಯೊಂದನ್ನು ಕೆತ್ತಿ ನಿಲ್ಲಿಸಿ ಅವಳ ಹೆಸರು ನಿಲ್ಲಿಸಿದರು. ಗರತಿಯಾದ ಚಿಕ್ಕ ಮಲ್ಲಮ್ಮನಂಥವರ ಸುಂದರ ಜೀವನವೆಲ್ಲವೂ ಜನಾಂಗಕ್ಕೆ ಸಲ್ಲಿಸಿದ ಮಹಾದಾನವಾಗುವದು. ಜನಾಂಗದ ಹಿಮಾಲಯವು ಗೌರಿಶಂಕರ ಕಾಂಚನಗಂಗೆಗಳಂಥ ಉತ್ತುಂಗ ಶಿಖರವನ್ನು ತಳೆಯುವದಕ್ಕೆ ಇಂಥ ಅಸಂಖ್ಯ ಗರತಿಯರೇ ಕಾರಣರಾಗುತ್ತಾರೆ. ಅವರ ಚರಿತ್ರೆ, ಕೀರ್ತಿ, ಹಿರಿಮೆ ಇವೆಲ್ಲವೂ ಅಂದಿನಿಂದ ಸರ್ವ ಜನಾಂಗಕ್ಕೆ ಆದರ್ಶಪ್ರಾಯವೂ ಅಭಿಮಾನಾಸ್ವದವೂ ಆಗಿವೆಯೆಂದು ಹೇಳದೆ ಗತ್ಯಂತರವೇ ಇಲ್ಲ. ಗರತಿಯರಿಗೆ ಇಂಥ ಔದಾರ್ಯ, ತ್ಯಾಗಬುದ್ಧಿ, ವಿಶಾಲ ಮನಸ್ಸು ಬರುವುದಕ್ಕೆ ಪರಂಪರೆಯಾಗಿ ಬಂದ ಅವರ ಜೀವನನಿಷ್ಠೆಯೇ ಕಾರಣವಾಗಿರುವುದು.