ಧರ್ಮವೆನ್ನುವುದು ನಾಲ್ಕು ಪುರುಷಾರ್ಥಗಳಲ್ಲಿ ಒಂದಾಗಿದೆ. ಅದು ಪುರುಷಾರ್ಥವೆನಿಸಿದರೂ, ಪುರುಷರಿಗಷ್ಟೇ ಮೀಸಲಾಗಿಲ್ಲ. ಸ್ತ್ರೀಯರೂ ಆ ಪೌರುಷವನ್ನು ಸಾಧಿಸಬಹುದಾಗಿದೆ. ತಿರುಗಿ ಕೇಳಿದರೆ, ಸ್ತ್ರೀಯರೇ ಅದನ್ನು ಸಹಜಕ್ರಮದಿಂದ ಸಮರ್ಪಕವಾಗಿ ಸಾಧಿಸಿತೋರಿಸಿದ್ದಾರೆ. ಅದಕ್ಕಾಗಿಯೇಅವರು ಗರತಿಯರೆನಿಸಿದ್ದಾರೆ. ಗರತಿ ಹಾಡುವ ಮತ್ತು ಹಾಡಿದ ಹಾಡುಗಳೆಂದರೆ ಆ ಧರ್ಮಸಿದ್ಧಿಯ ಸಂಹಿತೆಯೇ ಆಗಿದೆ. ಗರತಿಯ ಧರ್ಮಕ್ಕೆ ಸತ್ತಬಳಿಕ ಸಿಗಬಲ್ಲ, ಜೀವ ವಿಮಾ ಪದ್ಧತಿಯ ಮೋಕ್ಷದ ಗುರಿಯಿಲ್ಲ. ಆಕೆಯದು ಬಾಳಧರ್ಮ, ಜಗತ್ತಿನಲ್ಲಿಯೇ ಪ್ರಖ್ಯಾತರಾದ ಅನೇಕ ಮಹಾಶಯರು ಬಾಳಜಂಜಡವನ್ನು ತೊಲಗಿಸುವೆನೆಂದು ಹೇಳಿ, ಬಾಳನ್ನೇ ತೊರೆದು ಅರಣ್ಯ ಸೇರಿದರು. ಸಂಸಾರಕ್ಕೆ ಬೆನ್ನು ತೋರಿಸಿ ಸನ್ಯಾಸಿಯಾದರು. ಸಂಸಾರಬಿಟ್ಟವರಿಗೆ ಸಂಸಾರಧರ್ಮದ ಸಿದ್ಧಿಯಾಗಬಲ್ಲದೇ ಎಂದು, ಇಂದು ಜಗತ್ತು ಕೇಳುವಂತಾಗಿದೆ. ಈಸ ಬರುವವರೆಗೆ, ಮಡುವಿನಲ್ಲಿ ಬೀಳಬೇಡ ಎನ್ನುವ ಹಿತೋಕ್ತಿಯನ್ನು ಅನುಸರಿಸಿದವನು ಎಂದೆಂದಿಗೂ ಈಸಬಲ್ಲವನಾಗಲಾರನು. ಅಂಗಳದಲ್ಲಿಯೋ ಪಡಸಾಲೆವನೇ ಜೈಸಬಲ್ಲವನೂ ಆಗಬಲ್ಲನು. ಆ ಕೆಲಸವನ್ನು ಗಂಡಸರಿಗಿಂತ ಹೆಂಗಸರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಡಿದ್ದು ಕಂಡು ಬರುತ್ತದೆ.

ಸಂಸಾರದೊಡನೆ ಅಸಹಕಾರ ಮಾಡಿದವರಲ್ಲಿ ಗಂಡಸರೇ ಹೆಚ್ಚು. ಸಂಸಾರದ ಕಾಯ್ದೆ ಭಂಗ ಮಾಡಿದವರ ಸಂಖ್ಯೆಯೂ ಗಂಡಸರದೇ ಹೆಚ್ಚು. ಹೆಂಗಸರು ಬಹುತರವಾಗಿ ಆ ಅಡ್ಡದಾರಿ ತುಳಿದದ್ದು ಕಡಿಮೆ. ಸಂಸಾರವನ್ನು ಉದಾತ್ತಗೊಳಿಸುವ ಎತ್ತುಗಡೆ ನಡೆಯಿಸಿ ಸಾವಿಲ್ಲದ ಕೇಡಿಲ್ಲದ ಪತಿಯನ್ನು ಪಡೆದು, ದಿವ್ಯಸಂಸಾರವನ್ನು ಸಂಗಳಿಸಿದ ಅಕ್ಕಮಹಾದೇವಿಯಂಥವರು ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದು. ಪಗಡೆಯಾಟವನ್ನೇ ಬಿಟ್ಟುಕೊಟ್ಟು, ಅದರ ಘರ್ಷಣೆ ತಪ್ಪಿಸಿಕೊಳ್ಳುವುದಕ್ಕಿಂತ ಪಗಡೆಯನ್ನು ಕ್ರೀಡಾಮನೋಭಾವದಿಂದ ಆಡಿ ಜಂಜಾಟಕ್ಕೆ ಆಸ್ಪದವೇ ಇಲ್ಲದಂತೆ ಮಾಡಿಕೊಳ್ಳುವುದರಲ್ಲಿ ಹಿರಿಮೆಯಿದೆ, ಜಾಣ್ಮೆಯಿದೆ.

ಹೆಂಗಸು ಅಕ್ಷರಗಳಲ್ಲಿ ಸ್ವರವಿದ್ದ ಹಾಗೆ,ಗಂಡಸು ವ್ಯಂಜನ ಮಗುಗಳು ಸ್ವರದಲ್ಲಿಯೂ ಸೇರದ, ವ್ಯಂಜನದಲ್ಲಿಯೂ ಸೇರದ ಆಯೋಗವಾಹ. ಅಂದರೆ ಅಂ ಅಃ ಸ್ವರಗಳಿಗೆ ಸ್ವತಂತ್ರೋಚ್ಚಾರವಿದೆ, ವ್ಯಂಜನಗಳಿಗೆ ಹಾಗಿಲ್ಲ, ಸ್ವರ ಸೇರಿಸಿದಾಗಲೇ ಅವುಗಳಿಗೆ ಅಸ್ತಿತ್ವ. ಬಾಳಿನಲ್ಲಿ ಹೆಂಗಸೇ ನಿಜವಾದ ಸೂತ್ರಧಾರಿಯಾಗಿದ್ದರೂ, ನಟಿಯೆನಿಸಿಕೊಳ್ಳವದರಲ್ಲಿ ಆಕೆಗೆ ಪರಮ ಸಂತೋಷ, ಪೂರ್ಣ ಸಂತೃಪ್ತಿ ಸೃಷ್ಟಿಕರ್ತನಾದ ದೇವನು ಆದಿಯಲ್ಲಿ, ತಾಯಿ ತಂದೆಗಳಿಲ್ಲದ ಕಂದ-ಸ್ವಯಂಭೂ ಆಗಿದ್ದರೂ ಸಾಂಬ (ಸ+ಅಂಬ) ನೆನಿಸುತ್ತಾನೆ. ಲೀಲೆ ತಪ್ಪಿದಲ್ಲಿ ಸ್ವಯಂಭೂ ಎನಿಸಿದವನೆ, ಲೀಲೆಯಾದರೆ ಉಮಾಪತಿಯೆನಿಸುವನಲ್ಲವೇ? ಉಮೆಯಿಲ್ಲದೆ ಪತಿಗೆ ಅಸ್ತಿತ್ವವೆಲ್ಲಿ? ಉಮೆಯನ್ನು ಮುಂದುಮಾಡಿಕೊಂಡು ಹೊರಟವನೇ ಉಮಾಪತಿ. ಶಿವನ ಶಕ್ತಿಯೇ ಆಗಿದ್ದರೂ ಆಕೆಯದು ಶಿವನಶಕ್ತಿಯೆನಿಸಿದೆ.

ಹೆಣ್ಣು ಮಾಯೆಯೂ ಅಲ್ಲ ಮಾರಿಯೂ ಅಲ್ಲ. ಪ್ರತ್ಯಕ್ಷ ಕಪಿಲಸಿದ್ದ ಮಲ್ಲಿಕಾರ್ಜುನನೆಂದು ಶರಣರು ಕಂಡು ಹಿಡಿದರು, ಮನಗಂಡರು. ೧೨ನೇ ಶತಮಾನದಲ್ಲಿ ಅಂದಿನಿಂದಲೇ ಕಾಮಿನೀಕಾಂಚನಗಳ ಬಗ್ಗೆ ಇದ್ದ ತಿರಸ್ಕಾರವು ಅರ್ಧ ಮೆತ್ತಗಾಯಿತು, ಸಪ್ಪಗೂ ಆಯಿತು. ಇಪ್ಪತ್ತನೇ ಶತಮಾನದಲ್ಲಂತೂ ಹೆಂಡತಿಯನ್ನು ಪ್ರತ್ಯಕ್ಷ ಕಪಿಲ ಸಿದ್ಧಮಲ್ಲಿಕಾರ್ಜುನನೆಂದು ಬಗೆದು, ಭಾವಿಸಿ, ಬಾಳಿದವರು ಅನೇಕರಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರು ಕೈಹಿಡಿದ ಸತಿಯನ್ನು ಜಗಜ್ಜನನಿಯ ಪ್ರತಿನಿಧಿಯೆಂದು ಮನ್ನಿಸಿದರು. ಪೂಜಿಸದರು. ಮ.ಗಾಂಧಿ ಅವರಿಗೆ ಪಡುವಣದ ಅತಿಥಿಯೊಬ್ಬರು, ಕಸ್ತೂರಿಬಾ ಅವರನ್ನು ತೋರಿಸಿ ಕೇಳಿದರಂತೆ “ಇವರು ನಿಮ್ಮ ತಾಯಿಯೇ” ಎಂದು. ಅದಕ್ಕೆ ಗಾಂಧಿಯವರು ನಕ್ಕು – “ಅಹುದು, ನನ್ನನ್ನು ಕಸ್ತೂರಬಾ ಚಿಕ್ಕಂದಿನಿಂದಲೂ ತಾಯಿಯಾಗಿ ಹೊಟ್ಟೆ ಬೆನ್ನು ನೋಡುತ್ತಾ ಬಂದಿದ್ದಾರೆ” ಎಂದು ನುಡಿದರಂತೆ. ಶ್ರೀ ಅರವಿಂದರಾದರೋ ಪತಿಯ ಸಂಕಲ್ಪವು ಸತಿಯಲ್ಲಿ ಮಾರ್ದನಿಗೊಡಬೇಕೆಂದು ಅಪೇಕ್ಷಿಸಿ ಆ ಎತ್ತುಗಡೆ ನಡೆಸಿದರು.

ಧರ್ಮವೆನ್ನುವದು ಒಂದು ದರ್ಶನವೆಂದು ಭಾವಿಸಿಲ್ಲ ಹೆಣ್ಣು. ಆಕೆ ಧರ್ಮ ಮೂಲವಾದ ದಯೆಯನ್ನೇ ಪರಾಂಬರಿಸಿದವಳು. ಅರ್ಥ-ಕಾಮಗಳನ್ನು ಅಧರ್ಮಕ್ಕೆ ಅಧೀನಗೊಳಿಸಿದವಳು, ಮೋಕ್ಷವನ್ನು ಲೆಕ್ಕಕ್ಕೆ ತಂದವಳೇ ಅಲ್ಲ. ಹುಟ್ಟಾ ಬಂಧ ಮುಕ್ತಳೆಂದು ಬಗೆದವಳು. ಬಂಧಿತರೆಂದು ಬಗೆದವರಿಗೇ ಬಿಡುಗಡೆಯ ಅಥವಾ ಮೋಕ್ಷದ ಚಿಂತೆ. ಅರ್ಥ, ಕಾಮಗಳನ್ನು ಧರ್ಮಕ್ಕೆ ಅಳವಡಿಸಿಕೊಳ್ಳುವುದು ಬಂಧಮುಕ್ತರಿಗೆ ಮಾತ್ರ ಧ್ಯ. ಅವರು ಸಾಧಿಸಬೇಕಾದದ್ದು ಧರ್ಮವನ್ನು ದಯೆಯೇ ಆ ಧರ್ಮಕ್ಕೆ ಮೂಲ ಎನ್ನುವುದು ಅವರಿಗೆ ಗೊತ್ತಿದೆ. ಹೆಣ್ಣು ತನ್ನ ಸಂತಾನಕ್ಕೆ ಬಾಳಿನಲ್ಲಿ ಧರ್ಮಶಿಕ್ಷಣ ನೀಡುವುದಕ್ಕೆ ಬಾಳಧರ್ಮದ ಸಿದ್ಧಿಯನ್ನು ಮಾತ್ರ ಪಡೆದರೆ ಸಾಕಾಗದು. ದೈವಿಕೃಪೆಯನ್ನೂ ಪಡೆದವಳಾಗಬೇಕು. ಮೇಲಿನ ಭಾಗವತ ಶಕ್ತಿ ತಾಯಹಕ್ಕಿಯಂತೆ ಕೆಳಗಿಳಿದು ಬರುವಂತೆ, ಅಂತರಂಗದ ಕೂಸು ಮರಿಯಾಗಿ, ಮಗುವಾಗಿ ಕೂಗಬೇಕು. ಮಗುವಿನಂತಲ್ಲ,“ಕೂಗು ಕೂಗು ಮನವೇ, ಮಾತೆಯ ಕೂಗುವ ರೀತಿಯಲಿ” ಎಂದು ರಾಮಕೃಷ್ಣ ಪರಮಹಂಸರು ತಾವು ಹೇಳುವ ಬೋಧನೆಯನ್ನು ಅವರು ಬಹುಶಃ ಹೆಣ್ಣು ಮಕ್ಕಳಿಂದಲೇ ಕಲಿತುಕೊಂಡಿರಬೇಕು, ಮಾಸ್ತಿ ಶ್ರೀನಿವಾಸರು “ನಿನ್ನ ಮಕ್ಕಳು ನಿನ್ನ ಕರೆವ ದನಿ ಯಾವದೋ ಅದನ್ನು ನನಗೆ ನೀಡು ಚೆನ್ನಕೇಶವಾ” ಎಂದು ಪ್ರಾರ್ಥಿಸಿಕೊಂಡಿದ್ದಾರೆ, ಆ ಭಾವವು ಅವರಿಗೆ ತಾಯ ಮೊಲೆ ಹಾಲಿನೊಂದಿಗೆ ಮೈಗೂಡಿರಬೇಕಲ್ಲವೇ?

ನಾವೆಲ್ಲರೂ ಪೃಥ್ವಿಯ ಮಕ್ಕಳು, ಪೃಥ್ವಿಯು ಒಂದು ನೆಲವನ್ನೂ ಮೂರು ಜಲವನ್ನು ಧರಿಸಿದೆ. ಗಂಡು ನೆಲಕ್ಕೆ ಪ್ರತೀಕವಾದಂತೆ, ಹೆಣ್ಣು ಜಲವನ್ನು ಪ್ರತಿನಿಧಿಸುತ್ತದೆ. ಭೂಮಾತೆಯೆನಿಸಿದ ಪೃಥ್ವಿಯೇ ಒಂದು ಮಹಾತಾಯಿ, ನಿಜವಾಗಿ ನೋಡಿದರೆ ನಾವೆಲ್ಲರೂ ಹೆಣ್ಣಿನ ಮಕ್ಕಳು. ತಪ್ಪಿ ಗಂಡುಸಾಗಿದ್ದೇವೆ, ಕವಿ, ಮುನಿ, ತಪಸ್ವಿ, ವೀರ, ವಿಜ್ಞಾನಿ, ಇವರೆಲ್ಲರೂ ಹೆಣ್ಣಿನ ತಳಿಯೇ, ಪೃಥ್ವಿಯ ಎರಡು ಕ್ರಿಯೆಗಳನ್ನು ನಿರ್ವಹಿಸುತ್ತದೆ. ತನ್ನ ಮೈಸುತ್ತು ತಿರುಗುವುದು ಒಂದು ಕ್ರಯೆಯಾದರೆ, ಸೂರ್ಯನ ಸುತ್ತು ತಿರುಗುವುದು ಇನ್ನೊಂದು ಕ್ರಿಯೆ. ಪೃಥ್ವಿಯ ಮಕ್ಕಳಾದ ನಮಗೂ ಆ ಎರಡು ಕ್ರಿಯೆಗಳು ಅನಿವಾರ್ಯವಾಗಿವೆ. ಮೈ ಸುತ್ತು ತಿರುಗಿ ಹಗಲು ರಾತ್ರಿಗಳನ್ನು ಬರಮಾಡಿಕೊಳ್ಳುವಂತೆ ಪೃಥ್ವಿಯು ಸೂರ್ಯನ ಸುತ್ತು ತಿರುಗಿ ಋತುಮಾನಗಳನ್ನು ಒದಗಿಸಿಕೊಳ್ಳುತ್ತದೆ. ಹಗಲು ರಾತ್ರಿಗಳು ಎಚ್ಚರು ನಿದ್ರೆಗಳಿಂದ ನವಜನ್ಮನಿತ್ಯ ಮರಣಗಳನ್ನು ಎರೆಯುತ್ತವೆ. ಋತುಮಾನಗಳು ಚಿಳಿ ಮಳೆ ಬಿಸಿಲುಗಳಿಂದ ನವಜೀವನವನ್ನು ಪವಣಿಸುತ್ತವೆ. ಒಂದು ವೈಯಕ್ತಿಕವಾಗಿದ್ದರೆ ಇನ್ನೊಂದು ಸಾಮಸ್ತಿಕವಾಗಿದೆ. ಅವೆರಡನ್ನೂ ಹೊಂದುಗೂಡಿಸಿ ಒಂದುಗೊಳಿಸುವುದೇ ಬಾಳಧರ್ಮ.

ತನ್ನನ್ನು ರಕ್ಷಿಸುವವನನ್ನು ಧರ್ಮವು ರಕ್ಷಿಸುತ್ತದೆಂದು ಹೇಳಲಾಗುತ್ತದೆ. ಹೊಂದಿ ಒಂದಾಗುವದೇ ಧರ್ಮ. ಹೊರೆಯೊಳಗಿನ ಕಟ್ಟಿಗೆಗಳು ಒಂದು ಕಟ್ಟಿನಲ್ಲಿದ್ದರೂ ಆ ಹೊಂದುಗೂಡಿಕೆ ನಿರ್ಜೀವವಾಗಿದೆ. ಹಿಂಡಿನೊಳಗಿನ ಕುರಿಗಳು ಒಂದು ಗುಂಪಿನಲ್ಲಿದ್ದರೂ ಆ ಹೊಂದಾಣಿಕೆಗೆ ತಿಳುವಳಿಕೆಯಿಲ್ಲ. ಹೊಂದಾಣಿಕೆಗೆ ತಿಳುವಳಿಕೆ ಹಾಗೂ ಸಜೀವತೆ ಎರಡು ಬೇಕು. ಅರಿತು ಜೀವತುಂಬಿ ಒಂದಾಗುವದೇ ಧರ್ಮ | ಅಂಥ ಧರ್ಮ ಸಾಧನೆಗಾಗಿಯೇ ನಮ್ಮ ಗರತಿ ಮೈದಾಳಿ ಬಂದಿದ್ದಾಳೆಂದು ತೋರುತ್ತದೆ.

ಗಂಡಾ ಗುಂಡಿನ ಗಂಡಿನ ಆತನ ವ್ಯಂಜನ ಸ್ವಬಾವಕ್ಕೆ ಹೆಣ್ಣು ಗಂಡು ಗಾಡಿಯ ಸ್ವರವನ್ನು ಸಂಯೋಜಿಸಿ ಜಗತ್ತನ್ನು ಸಮತೋಲದಲ್ಲಿ ಇರಿಸಲು ಯತ್ನಿಸುತ್ತ ಬಂದಿದೆ. ಹುಟ್ಟಿ ಬರುವ ಒಂದುಕೂಸಿಗಾಗಿ ಎರಡು ಸ್ತನಲ್ಲಿ ಹಾಲು ತುಂಬಿರಿಸಿ ಪಾಲಿಸುವ ಹಾಗೂ ಮುದ್ದಿಟ್ಟು ಲಾಲಿಸುವ ಕ್ರಮವನ್ನು ಮುಂದುವರಿಸಿಕೊಂಡು ಬಂದಿದೆ. ಹೊಸ ಮೈ ಹೊತ್ತು ಅದಕ್ಕೆ ರಕ್ತದಾನ ಮಾಡಿ, ಮುಗುಳುದುಟಿಗೆ ಮಾತಿನ ಮುದ್ರೆ, ಹಾಕಿ, ಮನುಷ್ಯನನ್ನು ಮಾನವಮರಿಯನ್ನಾಗಿ ಮಾಡುವ ಅಖಂಡ ಕ್ರಮವನ್ನು ಬೇಸರಿಯದೆ, ಅಸಡ್ಡೆ ಮಾಡದೆ ಸಾಗಿಸಿಕೊಂಡು ಬಂದ ಶಿವಶಕ್ತಿ ಗರತಿಯಲ್ಲಿ ಅವಿತಿದೆ. ಮನ್ವಂತರದ ಮರಿಯನ್ನು ಕಂಡು ಹಾಡಿ ಹಿಗ್ಗುವುದೂ, ಹಿಗ್ಗಿಗಾಗಿ ಹಾಡುವುದೂ ಅನಿವಾರ್ಯವಾದಂತೆ ವಾಸ್ತವಿಕವೂ ಆಗಿದೆ. ಮಾಟವನ್ನು ಆಟವಾಗಿಸಿ, ಆಕಾಶದೆತ್ತರದಲ್ಲಿ ಹಾರುತ್ತಿರುವ ಗಾಳಿಪಟವನ್ನು ಕೈಮೀರದಂತೆ ಕೈಜಾರದಂತೆ ಹಿಡಿದು ನಿಲ್ಲಿಸಲು ನೂಲೆಳೆ ಮಾತ್ರ ಸಾಕಾಗದೆ, ಅದನ್ನು ಹಿಡಿದುಕೊಂಡು ನಿಂತವನೊಬ್ಬನು ಇರಲೇ ಬೇಕೆಂಬುದನ್ನು ಗರತಿ ಮರೆತಿಲ್ಲ.ಇದೇ ಆಕೆಯ ವೈಶಿಷ್ಟ್ಯ.