ಜಗತ್ತಿನ ಸಂಕ್ಷೇಪರೂಪವೆಂದರೆ ಕುಟುಂಬ ಸಂಸ್ಥೆ. ಅದು ಲೋಕವೃಕ್ಷದ ಒಂದು ಬೀಜವೆಂದೂ ಹೇಳಬಹುದು. ಮಾನವೈಕ್ಯದ ತರಬೇತಿ ಕೇಂದ್ರವೇ ಅದಾಗಿದೆ. ಕುಟುಂಬ ಅಂದರೆ ಮನೆತನ. ಅದೊಂದು ಬಂಗಾರದ ಭರಣಿ, ಅದರಲ್ಲಿ ಬೆಟ್ಟದನೆಲ್ಲಿ, ಸಮುದ್ರದ ಉಪ್ಪು ಒಟ್ಟಿಗೆ ಬೆರೆತು ಉಪ್ಪಿನಕಾಯಿ ಆಗಬೇಕಾಗಿದೆ, ಉಪ್ಪಿನಕಾಯಿ ಊಟಕ್ಕೆ ಮೊದಲು ಎನಿಸಿದೆ. ಅದೇ ಜಗತ್ತಿನ ಸಾರಸರ್ವಸ್ವದಲ್ಲಿ ಸ್ವಾರಸ್ಯ ಹುಟ್ಟಿಸುವಂಥದು. ಪ್ರೇಮವನ್ನು ವಿಸ್ತರಿಸುವ ಉಪಾಯವೇ ಮದುವೆಯ ಉದ್ದೇಶವೆಂದು ಹೇಳಲಾಗಿದೆ. ಅದು ಸತಿಯಿಂದ ಮಾತ್ರ ಸಾಧ್ಯ. ತನ್ನಂತೆ ಪರರ ಬಗೆಯುವ ರೂಢಿ ಮಾಡಿಸುವುದೇ ಸಂತಾನದಿಂದ ಬಯಸತಕ್ಕ ಪರಿಣಾಮ. ಒಟ್ಟಿನಲ್ಲಿ ಕುಟುಂಬ ಸಂಸ್ಥೆಗೆ ಏಕತೆಯ ಪಾಠವನ್ನು ಕಲಿಸಿಕೊಡುವ ಪಾಠಶಾಲೆಯನ್ನು ಅಡ್ಡಿಯಿಲ್ಲ. ಕುಟುಂಬ ಎಂಬ ಶಬ್ದಕ್ಕೆ ಎರಡು ಅರ್ಥಗಳಿವೆ. ಮನೆತನ ಮತ್ತು ಹೆಂಡತಿ ಎಂದು ಮುಖದಲ್ಲಿ ಬಾಯಿ ಮುಖ್ಯವಾದುದರಿಂದ ಅದಕ್ಕೂ ಮುಖವೆಂದು ಹೇಳುತ್ತಾರೆ. ಇಡಿಯ ಶರೀರದಲ್ಲಿ ಹೊಟ್ಟೆಯು ಮುಖ್ಯವಾದುದರಿಂದ ಶರೀರವು ಒಡಲೆನಿಸಿದಂತೆ ಹೊಟ್ಟೆಯೂ ಒಡಲೆನಿಸಿದೆ. ಅದೇ ವಿಧವಾಗಿ ಕುಟುಂಬದಲ್ಲಿ ಮಹತ್ವದ ಪಾತ್ರವಾದುದರಿಂದ ಸತಿಗೆ ಕುಟುಂಬವೆನ್ನುತ್ತಾರೆಂದು ಹೇಳಲಡ್ಡಿಯಿಲ್ಲ. ಪತಿಯು ಕುಟುಂಬದಲ್ಲಿ ಗೃಹಸ್ಥ ಮಾತ್ರ. ಮನೆತನದವ ಎಂಬರ್ಥ ಅದಕ್ಕೆ.

ಮನೆತನವು ಏಕತೆಯನ್ನು ಸಾಧಿಸುವ ಸಾಧನೆಯ, ಪ್ರಯೋಗಶಾಲೆಯೆಂದೂ ಹೇಳಬಹುದಾಗಿದೆ. ಗಂಡಹೆಂಡಿರನ್ನು ಒಂದುಗೂಡಿಸುವ ಮದುವೆ, ಪ್ರೇಮವಿಸ್ತರಣಕ್ಕೆ ನಾಂದಿಯಾದಂತೆ, ಅಲ್ಲಿ ಹುಟ್ಟಿ ಬಂದ ಸಂತಾನವು ಆ ಗಂಡ ಹೆಂಡಂದಿರಿಗೆ ಅಂದರೆ ತನ್ನ ತಾಯಿ ತಂದೆಗಳಿಗೆ ತನ್ನಂತೆ ಪರರ ಬಗೆಯು ಬಗೆಯನ್ನು ಆಡಾಡುತ್ತ ಕಲಿಸುತ್ತದೆ. ಇದೆಲ್ಲ ಏಕತೆಯ ರಸಾಯನವೇ ಆಗಿದೆ. ಭರಣಿಯೊಳಗಿನ ಉಪ್ಪಿನಕಾಯಿ ಒಮ್ಮೊಮ್ಮೆ ಇಲ್ಲದೆ ಬಹಳಸಾರೆ ಕೈತಪ್ಪಿನಿಂದಲೇ ಕಣ್ತಪ್ಪಿನಿಂದಲೋ ಕೆಟ್ಟು ಹೋಗುವುದನ್ನು ಕಂಡಿದ್ದೇವೆ. ಹುಳುಗಳು ಹುಟ್ಟಿಕೊಂಡು ಅದರಲ್ಲಿ ಬುಚಗುಡುವುದೂ ಉಂಟು. ಸಾವಿರಗಟ್ಟಲೇ ಹುಳುಗಳು ಹುಟ್ಟಿಕೊಳ್ಳುವುದು ಸಗಣಿಯಲ್ಲಿ ಮಾತ್ರ. ಇಲ್ಲಿ “ಸಗಣಿಯಲ್ಲಿ ಸಾವಿರ ಹುಳುಗಳು ಹುಟ್ಟವೇ ಅಯ್ಯ” ಎನ್ನುವ ಬಸವವಾಣಿಯನ್ನು ಸ್ಮರಿಸಿಕೊಳ್ಳಬಹುದು ಹೀಗೆ ಉಪ್ಪಿನಕಾಯಿಯ ಭರಣಿ ನರಕದ ಕುಂಡವೇ ಆಗಿ ಬಿಟ್ಟು ಮೂಲೋದ್ದೇಶವನ್ನೇ ವಿಫಲಗೊಳಿಸುವುದನ್ನು ಬಹಳಕಡೆ ಕಾಣುತ್ತೇವೆ. ಬಹು ಮಟ್ಟಿಗೆ ವಿಫಲತೆಯನ್ನೇ ಕಾಣಲಾಗುವದೆಂದು ಅದರ ಉದ್ದೇಶವೇ ತಪ್ಪೆಂದು ಬಗೆಯಲಾಗದು. ಕುಣಿಯಬಾರದಿದ್ದವನು ಅಂಗಳವೇ ಡೊಂಕು ಎನ್ನುವನು. ತಾನು ಹೊರಬೇಕಾದ ತಪ್ಪನ್ನು ಅಂಗಳದ ಮೇಲೆ ಹೇರುವ ವಿಧಾನದಂತೆ, “ಸಂಸಾರೆಂಬುದು ಬಲುಕೆಟ್ಟ, ಇದನಾವ ಸೂಳಿಮಗ ಮಾಡಿಟ್ಟ” ಎಂದು ತಂತಿಬಾರಿಸಿದರೆ, ಕೆಟ್ಟಿದ್ದು ಸರಿಪಡುವದಿಲ್ಲ. ವೇಗಪೂರಿತ ಸೈಕಲ್ ಇರಿಸಿಕೊಂಡವನು, ಅದಕ್ಕೆ ಸುಸಮರ್ಥವಾದ ಬ್ರೆಕ್‌ನ್ನು ಸಂಗಳಿಸಲು ಮರೆಯಬಾರದು.

ಕೀರ್ತಿಕಾಯರಾದ ಶ್ರೀ ಬೇಂದೆರ‍್ಯವರು ಹೇಳುತ್ತಾರೆ. “’ಬೀದರ ಹೈದ್ರಾಬಾದಗಳ ಉತ್ತರ ತುದಿಯಿಂದ ನೀಲಗಿರಿ, ಕೊಯಿಮತ್ತೂರಿನ ದಕ್ಷಿಣ ತುದಿಯವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶನವು ಗರತಿಯ ಹಾಡಗಳಲ್ಲಿದೆ’ ನಾಡು ಒಂದೆಂಬುವ ನಿದರ್ಶನವು ಗರತಿಯ ಹಾಡುಗಳಲ್ಲಿದ್ದರೆ, ಅವುಗಳ ಉದ್ದೇಶವೂ ಅವು ಇರಿಸಿಕೊಂಡ ಗುರಿಯೂ ಒಂದೇ ಆಗಿದೆಯೆನ್ನಲು ಅಡ್ಡಿಯೇನು? ಆ ಉದ್ದೇಶ ಆ ಗುರಿ ಯಾವುದೆಂದರೆ, ಕುಟುಂಬ ಸಂಸ್ಥೆಯಲ್ಲಿ ಏಕತೆಯನ್ನು ಅಳವಡಿಸುವುದು.

ಪ್ರತಿಯೊಬ್ಬ ಗೃಹಿಣಿಯು ಅಭೀಪ್ಸೆಪಡುವುದೇನಂದರೆ – ಮುತ್ತೈಯ್ದೆತನಕೊಡು, ಮಕ್ಕಳ ಕೊಡು, ಮಾರಾಯರ ಮುಂದೆ ಮರಣಕೊಡು, ಇದೇ ಸುಸಮೃದ್ಧ ಜೀವನದ ಹಾರಯಿಕೆ. ನಿಜವಾದ ಅರ್ಥದಲ್ಲಿ ಅಕ್ಷರಶಃ ಮುತ್ತೈಯ್ದೆಯಾಗಿ ಗಂಡ ಹಾಗೂ ಮಕ್ಕಳೊಡನೆ ನೂರುವರುಷ ಬಾಳುವುದು ಅಂಥ ಮನೆತನದಲ್ಲಿ ನೂರು ವರುಷ ಕಾಲವು ಬಡನೂರು ವರ್ಷಗಳೆನಿಸುವುದರಲ್ಲಿ ಸಂಶಯವೇನು? ಬಡನೂರು ವರ್ಷಗಳನ್ನು ಹರುಷದಿಂದ ಕಳೆಯಬಲ್ಲ ಮನೆತನವು ಏಕತೆಯನ್ನು ಸಾಧಿಸುವುದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದು ನಿಶ್ಚಯವೆಂದೇ ಹೇಳಬೇಕಾಗುತ್ತದೆ.

ಆದಿ ಯಂತ್ರದ ಮೂಲ ಮಂತ್ರದಂತೆ ಕುಟುಂಬಕ್ಕಿರುವ ಮಹತ್ತಾದ ಪ್ರಾರ್ಥನೆ ಯಾವುದೆಂದರೆ –

ತನ್ನಂಗ ನೋಡಿದರ ಭಿನ್ನಿಲ್ಲ ಭೇದಿಲ್ಲ
ತನ್ನಂಗ ತನ್ನ ಮಗಳಂಗ | ನೋಡಿದರ
ಕಣ್ಣ ಮುಂದಾದ ಕೈಲಾಸ ||

ಗೃಹಿಣಿಯು ಈ ಮಹಾಮಂತ್ರವನ್ನು ಬೆಳಗಿನ ಜಾವದಲ್ಲಿ ಬೀಸು ಕಲ್ಲಿನ ಮುಂದೆ ಸ್ವರದೊಡನೆ ಹಾಡಿ ಉದ್ಘೋಷಿಸುತ್ತಾಳೆ. ನಿತ್ಯದ ಮರಣವಾದ ನಿದ್ರೆಯಿಂದ ಎಚ್ಚತ್ತು ಪುನರ್ಜನಮ್ಮವನ್ನು ಪಡೆದ ಬಳಿಕ ಮೊಟ್ಟಮೊದಲನೇ ಮಾತೆಂದರೆ ಅದೇ ಆ ಮಹಾಮಂತ್ರ. ಶುಭ ಹಾರೆಯಿಕೆಯಿಂದ ಆರಂಭವಾದ ಇಡಿಯ ದಿನವು ಶುಭಪ್ರದವಾಗಿ ಪರಿಣಮಿಸಲಿಕ್ಕೆ ದಾರಿಯಾಗುತ್ತದೆಂದು ಎದೆತಟ್ಟಿ ಹೇಳಬಹುದಾಗಿದೆ.

ಈ ಕೆಳಗಿನ ತ್ರಿಪದಿಗಳು ಕುಟುಂಬದ ಏಕತೆಗೆ ಅದೆಷ್ಟು ಸಹಾಯಕವಾಗಿವೆ ನೋಡಿರಿ.

ಅತಿಗೆಯ ಅರಸೇನ ತಾಯಿ ಕುಮಾರೇನ
ಮಕ್ಕಳಿಗಿ ಮಾವ ನನಗಣ್ಣ | ಬಂದರ |
ನಿತ್ಯದೀವಳಿಗೆ ಮನಿಯಾಗ ||
ಮಗಳ ಮಾವಬಂದ ಸೊಸಿಯ ಅಪ್ಪ ಬಂದ
ಯಾರಿಟ್ಟು ಯಾರ ಕಳುಹಲೆ | ನನ್ನಣ್ಣ |
ಮಗಳಿಟ್ಟು ಸೊಸಿಯ ಕರೆದೊಯ್ಯೋ ||

ಅತ್ತಿಗೆಯ ರಸು, ತಾಯಕುಮಾರ, ಮಕ್ಕಳಿಗೆ ಮಾವ, ಮಗಳ ಮಾವ, ಸೊಸಿಯ ಅಪ್ಪ ಬೇರೆ ಬೇರೆ ಅಲ್ಲ, ಒಬ್ಬನೇ. ಬೆರಳುಗಳು ಬೇರೆ ಬೇರೆ ಆಗಿದ್ದರೂ ಒಂದೇ ಕೈಗಿರುವ ಅನುಪಮ ಪಲ್ಲವಗಳೇ ಆಗಿವೆ. ಮಗಳು ಮತ್ತು ಸೊಸೆ ಇಬ್ಬರೂ ಆದಾವ ಕಾರಣದಿಂದಲೋ ಒತ್ತಟ್ಟಿಗಿರುವಾಗ ಆಕೆಯ ಅಣ್ಣನು ಹಬ್ಬಕ್ಕೆಂದು ಕರೆಯಬಹುವನು. ಯಾರನ್ನು? ತನ್ನ ಮಗಳನ್ನೋ? ಅಕ್ಕನಮಗಳನ್ನೋ? ಯಾರಿಟ್ಟು ಯಾರಕಳುಹಲೆಂದು ಅಕ್ಕ ಅನುಮಾನಿಸಿದರೂ, ಮಗಳಿಟ್ಟು ಸೊಸಿಯ ಕರೆದೊಯ್ಯಲು ಹೇಳುತ್ತಾಳೆ, ಈ ಮಾತಿನಲ್ಲಿಯೂ ಮೋಡಿಯಿದೆ. ಯಾರ ಮಗಳನ್ನಿಡುವುದು? ತನ್ನ ಮಗಳನ್ನೋ ಅಣ್ಣನ ಮಗಳನ್ನೋ? ಯಾರ ಸೊಯೆನ್ನು ಕರೆದೊಯ್ಯುವುದು? ತನ್ನ ಸೊಸೆಯನ್ನೋ ಅಣ್ಣನ ಸೊಸೆಯನ್ನೋ? ಯಾರನ್ನು ಕರೆದೊಯ್ದರೂ ಸಂತೋಷವೇ. ಒಂದು ಮನೆಗಲ್ಲ ಎರಡೂ ಮನೆಗೆ ಸಂತೋಷ, ಹಿಗ್ಗು. ಇಂಥ ನಡವಳಿಕೆಯಲ್ಲಿಯೂ ಏಕತೆಯ ಉಸಿರು ಮಿಡಿಯುತ್ತಿಲ್ಲವೇ?

ಕುಟುಂಬದ ನೆಮ್ಮದಿಗೂ ಏಕತೆಗೂ ತ್ಯಾಗವೇ ಮಹತ್ತಾದ ಉಪಾಯವೆಂದು ಮಹಾನುಭಾವರು ಹೇಳುತ್ತಾರೆ. ಆ ತ್ಯಾಗವು ಅರಣ್ಯವಾಸಿಗಳಾದ ಸನ್ಯಾಸಿಗಳದಲ್ಲ. ಗ್ರಾಮವಾಸಿಯಾದ ಗೃಹಸ್ಥಾಶ್ರಮದವರ ಕಟ್ಟಾಚರಣೆ ಆಗಿದೆ.

ಹೆಣ್ಣಿನ ಕಾಯವ ಮಣ್ಣು ಮಾಡಲಿ ಬೇಕ
ಸುಣ್ಣಧರಳಾಗಿ ಸುಡಬೇಕ | ಜನುಮ |
ಮಣ್ಣು ಮಾಡಿ ಮೃತ್ಯು ಗೆದಿಬೇಕ ||

ಈ ತ್ಯಾಗವು ಮರಣದ ಮಾದರಿಯಲ್ಲ; ಸಾವಿನ ದಾರಿಯೂ ಅಲ್ಲ. ಬದುಕಿ ಸಾಯುವ ಅಥವಾ ಸತ್ತೂ ಬದುಕವ ಪರಮೋಪಾಯ, ಅದರಲ್ಲಿ ದುಡಿತವಿದೆ. ಇಡಿಯ ಮನೆತನಕ್ಕೆ ಸುಖವಾಗಲೆನ್ನುವ ತುಡಿತವಿದೆ, ಏಕತೆಯ ಮಿಡಿತವಿದೆ, ಹಿಡಿತವೂ ಇದೆ. ಗೃಹಿಣಿ ಮನಸ್ಸು ಮಾಡಿ, ಮಹಾಸತಿಯಾಗುವುದಕ್ಕೆ ಸನ್ನದ್ದಳಾದರೆ, ಏಕತೆಯು ಮನೆತನವನ್ನು ಅರಸುತ್ತ ಬರುವದು. ಅಷ್ಟೇ ಸಾಧಿಸಿದರೂ ಅದು ನಾಡಿನೊಂದಿಗೆ ಮಾನವ ಕುಲವನ್ನು ಕೆಲವಂಶದಲ್ಲಿ ಮೇಲಕ್ಕೆತ್ತಿದಂತೆಯೇ. ಇದೇ ಸಹಜವಾದ ಸಾರ್ಥಕಜೀವನ. ಎಡಹುವ ಅಂಜಿಕೆ ನಡೆವವನಿಗಿರುವುದಲ್ಲದೆ, ಕುಳಿತವನಿಗಲ್ಲ. ಕುಳಿತು ಕೆಡುವುದಕ್ಕಿಂತ ಮಾಡಿ ಕೆಡುವದೇ ಒಳ್ಳೆಯದು, ಸಾಹಸದ ಕಾಲು ದಾರಿಯಲ್ಲಿ ಇದೇ ಊರುಗೋಲಾಗಬಲ್ಲದು. ಮುಕ್ಕಾಲಿನಲ್ಲಿ ನಡೆಯುವ ರೀತಿಯಿದು, ಮೂರು ಪಾದಗಳಿಂದ ಮೂಲೋಕವನ್ನೇ ಅಳೆಯಲಿಲ್ಲವೇ ವಾಮನ ಮೂರ್ತಿ. ಅದೊಂದು ಅವತಾರ ಕಾರ್ಯ, ಅವತಾರಿಯ ಯುಕ್ತಿ.