ಮಿತ್ರರಾದ ಸಿಂಪಿಲಿಂಗಣ್ಣನವರು ರಸಿಕರು, ಗುಣಗ್ರಾಹಿಗಳು. ಸ್ವಾಭಾವಿಕವಾಗಿ ಬೆಳೆದುನಿಂತ ಜನಪದಸಾಹಿತ್ಯವೆಂಬ ಸುಂದರಬನದಿಂದ ಘಮಘಮಿಸುವ ನಾನಾತರದ ಹೂಗಳನ್ನಾಯ್ದು “ಗರತಿಯ ಬಾಳಸಂಹಿತೆ” ಎಂಬ ಮಾಲೆಯನ್ನು ಹೆಣೆದಿದ್ದಾರೆ. ಇದನ್ನು ಅಳವಡಿಸಿಕೊಂಡವಳೇ ಗರತಿ.

ಮಹಿಳೆ ಒಂದೇ ಜನ್ಮದಲ್ಲಿ ನಾಲ್ಕು ಅವತಾರಗಳನ್ನು ತಳೆಯುತ್ತಾಳೆ. ಹುಟ್ಟಿದ ಮನೆಗೆ ಮಗುವಾಗಿ, ಕೊಟ್ಟಮನೆಗೆ ಸೊಸೆಯಾಗಿ, ಪತಿಗೆ ಸತಿಯಾಗಿ, ತಾನು ಜನ್ಮಕೊಟ್ಟ ಮಗುವಿಗೆ ತಾಯಾಗಿ-ಹೀಗೆ ಲೇಖಕರು ಗರತಿಯ ಚತುರವತಾರದ ಅದ್ಭುತಪವಾಡವನ್ನು ಇಲ್ಲಿ ಬಣ್ಣಿಸಿದ್ದಾರೆ. ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಹೋಗಿ ಅಲ್ಲಿಯ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭವೇ? ಅದೆಷ್ಟು ಭಾವನೆಗಳ ತಿಕ್ಕಾಟ, ಅದೆಷ್ಟು ಮಾನಸಿಕ ಒತ್ತಡ ಆಕೆಗೆ! ಈ ಸ್ಥಿತ್ಯಂತರದಲ್ಲಿ ಆಕೆ ಅನುಭವಿಸಿದ ನೋವು-ನಲಿವು, ಕಷ್ಟ-ಕಾರ್ಪಣ್ಯ, ಹಿಗ್ಗು-ಮುಗ್ಗುಗಳನ್ನು ಗರತಿಯು ಹಾಡಿನ ರೂಪದಲ್ಲಿ ವ್ಯಕ್ತಪಡಿಸಿದ್ದಾಲೆ. ಒಂದು ಸಹಜ ಕ್ರಮವೆಂಬಂತೆ ಗರತಿ ಅವುಗಳನ್ನು ಎದುರಿಸಿದ್ದಾಳೆ.

ಆಕೆಯ ಪ್ರಯತ್ನಕ್ಕೆ ಒಂದೊಂದು ಸಲ ಯಶದೊರೆತಿರಲಿಕ್ಕಿಲ್ಲ ಆಗೀಗ ಅವಳು ಎರಡವಿರಲೂಬಹುದು. ಆದರೆ ಒಮ್ಮೆಯೂ ಆಕೆ ತನ್ನ ಕರ್ತವ್ಯಪಾಲನೆಯಿಂದ ಮುಖತಿರುಹಿಲ್ಲ. ಅದೆಷ್ಟೋ ಸಾರೆ ಪುರುಷನು ಬದುಕನ್ನು ಎದುರಿಸಲಾರದೆ ಪಾಲಾಯನ ಮಾಡಿದ್ದುಂಟು. ಈ ಮಾತನ್ನು ಲೇಖಕರು ಬಹುಮಾರ್ಮಿಕವಾಗಿ ಹೇಳಿದ್ದಾರೆ. –

ಆದರೆ ಗರತಿ ಈ ಜಂಜಡದಲ್ಲಿಯೇ ಉಳಿದು ಅದನ್ನೆದುರಿಸಿ ತಿಳಿಗೊಳಿಸುವುದೇ ತನ್ನ ಬಾಳಧರ್ಮವೆಂದು ಬಗೆದಿದ್ದಾಳೆ. ಆಕೆ ಸಂಸಾರದ ಅಡಿಗಲ್ಲು. ಕುಟುಂಬ ಸಂಸ್ಥೆಯ ಅಧ್ಯಕ್ಷೆ ಈ ಸಂಸಾರ ಚಕ್ರದ ಮಧ್ಯದಲ್ಲಿ ಮೇಟಿಕಂಬವಾಗಿ ಜ್ಯೋತಿ ತಪ್ಪದಂತೆ ಸ್ಥಿರವಾಗಿ ನಿಂತಿದ್ದಾಳೆ.

ಇತರ ಪಾತ್ರಗಳೆಲ್ಲ ಅವಳ ಸುತ್ತಲು ತಿರುಗುತ್ತವೆ. ಈ ದೃಷ್ಟಿಕೋನವನ್ನು ಲೇಖಕರು ಗರತಿಹಾಡಿನ ತ್ರಿಪದಿಗಳಿಂದಲೇ ಬಹುಕಲಾತ್ಮಕವಾಗಿ ನಿರೂಪಿಸಿದ್ದಾರೆ.ಅದು ಇಂದಿನ ಮಹಿಳೆಯರಿಗೆ ಬಾಳಸಂಹಿತೆಯಾಗಿ ಮಾರ್ಗದರ್ಶನ ಮಾಡುವಂತಿದೆ.

ಶ್ರೀ ಸಿಂಪಿ ಅವರ ಆಯ್ಕೆಯಲ್ಲಿ ಒಂದು ಕ್ರಮವಿದೆ. ಗರತಿಯು ಬದುಕಿನ ವಿವಿಧ ರಂಗಗಳಲ್ಲಿ ತನ್ನ ಪಾತ್ರವನ್ನು ಹೇಗೆ ಆತ್ಮವಿಶ್ವಾಸದಿಂದ ನಿರ್ವಹಿಸುತ್ತಾಳೆ ಎಂಬುದನ್ನು ಈ ಹಾಡುಗಳು ಸ್ಪಷ್ಟಪಡಿಸುತ್ತವೆ. ಪುರುಷ ಕಮಲಪತ್ರದಂತೆ ಸಂಸಾರಸಾಗರದ ಹೊರಗೇ ಇರುವವನು. ಸಂಸಾರದ ಜಂಜಡದಲ್ಲಿ ಸದಾ ಕಾಲ ಸುತ್ತಾಡುವವಳು ಮಹಿಳೆಯೇ. ಬಾಲ್ಯದಲ್ಲಿ ತಾಯಿತಂದೆಗಳಿಗೆ ಅಕ್ಕರೆಯ ಮಗುವಾಗಿ ಬೆಳೆದಿರುತ್ತಾಳೆ. ತನ್ನ ಸಖಿಯರೊಡನೆ ಹರ್ಷದಿಂದ ಕಾಲಕಳೆದಿರುತ್ತಾಳೆ. ವಯಸ್ಸಿಗೆ ಬಂದ ಕೂಡಲೇ ಪ್ರೀತಿಯ ಬಂಧುಬಾಂಧವರನ್ನೆಲ್ಲ ತೊರೆದು ಮೊದಲಗಿತ್ತಿಯಾಗಿ ಪತಿಯಮನೆಗೆ ತೆರಳಬೇಕು. ಅಲ್ಲಿ ಅತ್ತೆ -ನಾದಿನಿಯರಿಗೆ ಅಂಜುತ್ತ ಅಳುಕುತ್ತ ಕಾಲ ಕಳೆಯಬೇಕು. ಹೊಸಮನೆ, ಹೊಸಜನ, ಹೊಸ ವಾತಾವರಣ ಹೆಚ್ಚು ಮಾತಾಡಲು ಆಕೆಗೆ ಸಂಕೋಚ. ಏನು ಮಾಡಲೂ ಭಯ, ತಾಯಿಯ ನೆನಹು ತವರಿನ ಹಂಬಲ. ಈ ಕಾಲಕ್ಕೆ ತೀವ್ರವಾಗಿರುತ್ತದೆ. ತಾನು ಅತ್ತೆಯ ಮನೆಗೆ ಬರುವಾಗ ತನ್ನ ತಾಯಿಹೇಳಿದ ಬುದ್ಧಿಯ ಮಾತು ಸದಾಸ್ಮರಣೆಯಲ್ಲಿರುತ್ತದೆ.

ಅತ್ತೀಯ ಮನಿಯಾಗ ಹತ್ತಾರು ಬಯರ
ಉತ್ತರಬ್ಯಾಡ ನನಮಗಳ | ನಿಮ್ಮತ್ತೆ
ಉತ್ತಮರ ಮಗಳೆಂದು ನುಡಿದಾಳು ||

ಅತ್ತೆಯಬಾಯಿಂದ ತಾನು ಉತ್ತಮರ ಮಗಳೆಂದು ಅನಿಸಿಕೊಳ್ಳುವಲ್ಲಿ ಸೊಸೆಯ ಜೀವನಕ್ಕೆ ಸಾರ್ಥಕ್ಯವಿದೆ.

ತಾವರೆಯ ಗಿಡಿಹುಟ್ಟಿ ದೇವರಿಗೆ ನೆರಳಾದೆ | ನಾ ಹುಟ್ಟಿ ಮನೆಗೆ
ಎರವಾದೆ | ಹಡೆದವ್ವ | ನೀಕೊಟ್ಟ ಮನೆಗೆ ಹೆಸರಾದೆ

ಎಂಬ ಮಾತು ಆಕೆಯ ಹೃದಯದಿಂದ ಹೊರಹೊಮ್ಮಿದೆ. ಅತ್ತೆಯ ಕೈಯಲ್ಲಿ ಬೇಸರವಿಲ್ಲದೆ ದುಡಿಯುತ್ತಾಳೆ. ತನ್ನ ಆಲಸ್ಯವನ್ನು ಬದಿಗೊತ್ತಿ ಪತಿಯಸೇವೆ ಮಾಡುತ್ತಾಳೆ. ತವರಿನ ನೆನಹು ಒತ್ತರಸಿದರೂ ಹೊರಗೆ ಅದನ್ನು ತೋರಗೊಡುವುದಿಲ್ಲ.

ಅತ್ತೆಮಾವನಿಗಂಜಿ ಸುತ್ತೇಳು ನೆರೆಗಂಜಿ
ಮತ್ತೆ ನಲ್ಲನ ದನಿಗಂಜಿ | ನಡೆದರ
ಎಂಥ ಉತ್ತಮರ ಮಗಳಂದ ||

ಒಮ್ಮೆ ತವರಿಗೆ ಹೋಗುವ ಬಗ್ಗೆ ತನ್ನ ಪತಿಯೊಡನೆ ಮೆಲ್ಲಗೆ ಮಾತೆತ್ತುತ್ತಾಳೆ. ಆತನಿಗಾದರೂ ಇನ್ನೂ ಹರೆಯದ ಹಬ್ಬ. ಹೆಂಡತಿಯನ್ನು ಅಗಲಿ ಇರಲಾರ. ತನ್ನನ್ನು ನೋಡಿ ತವರು ಮನೆಯೆನ್ನುತ್ತಾನೆ. ಆಕೆಗೆ ಸಿಟ್ಟು ಬರುತ್ತದೆ. ಹಟಮಾಡುತ್ತಾಳೆ. ಆಗ ಆತನು ಮನಸ್ಸಿಲ್ಲದ ಮನಸ್ಸಿನಿಂದ ಕೊನೆಯ ಉಪಾಯ ಕೈಕೊಳ್ಳುತ್ತಾನೆ.

ಮಡದೀನ ಬಡಿದಾನ ಮನದಾಗ ಮರಗ್ಯಾನ
ಒಳಗ್ಹೋಗಿ ಸೆರಗ ಹಿಡಿಯೂತ | ಕೇಳ್ಯಾನ |
ನಾ ಹೆಚ್ಚೊ ನಿನ್ನ ತವರ್ಹೆಚ್ಚೋ ||

ಹೀಗೆ ಸರಸ ವಿರಸಗಳಿಂದ ಕೂಡಿದ ಬದುಕನ್ನು ಎದುರಿಸುತ್ತಾಳೆ. ಮುಂದೆ ಬಯಕೆ, ಬಸಿರು, ಹೆರಿಗೆ, ಮಗುವಿನ ಲಾಲನೆ-ಪಾಲನೆ ಹೀಗೆ ಸಂಸಾರದ ಹಲವಾರು ಎರಡರು-ತೊಡರುಗಳನ್ನು ಎದುರಿಸುತ್ತ, ಮೈಮುರಿದು ದುಡಿಯುತ್ತಾಳೆ. ದುಡಿಮೆಯಲ್ಲಿ ಸಣ್ಣಾಗುತ್ತಾಳೆ, ಹಣ್ಣಾಗುತ್ತಾಳೆ. ಆದರೆ ಅದಕ್ಕೆ ಬೇಸರಪಡುವುದಿಲ್ಲ. ಸಂಕಟಗಳಿಗಂಜಿ ಬದುಕನ್ನೇ ತೊರೆದು ಓಡಿಹೋಗುವ ಸನ್ನ್ಯಾಸಿಯ ಮನೋಭಾವ ಆಕೆಯಲ್ಲಿ ಎಂದು ಸುಳಿಯುವದಿಲ್ಲ. ಸಂಕಟಗಳನ್ನು ಎದುರಿಸಲು ಬಲಕೊಡು – ಎಂದು ಭಗವಂತನಲ್ಲಿ ಬೇಡುತ್ತಾಳೆ. “ಆಸರಿಕೆ ಅಳದಿಟ್ಟೆ, ಬ್ಯಾಸರಿಕೆ ಬಳದಿಟ್ಟೆ, ಚಿಂತಿ ಕಾಲಾ ತುಳದಿಟ್ಟೆ, ಚಿಂತಿ ಕಾಲಾ ತುಳದಿಟ್ಟೆ” ಎಂದು ನುಡಿಯುವಷ್ಠು ಆತ್ಮವಿಶ್ವಾಸ ಅವಳಲ್ಲಿ.

ಅಂತಃಪುರದಲ್ಲಿ ಸಕಲರಾಜ ವೈಭವದಿಂದ ಮೆರೆಯಬೇಕಾದ ಸೀತಾದೇವಿಯು ಹೆರಿಗೆಯ ಕಾಲಕ್ಕೆ ಪಟ್ಟ ವನವಾಸ ಅಷ್ಟಿಷ್ಟಲ್ಲ. ವಾಲ್ಮೀಕಿ ರಾಮಾಯಣವನ್ನು ಬರೆದಿದ್ದರೆ, ಕನ್ನಡದ ಗರತಿ ಸೀತಾಯಣವನ್ನು ಬರೆದಿದ್ದಾಳೆ.

ಅಡವಿ ಆರ್ಯಾಣದಾಗ ಹಡೆದಾಳ ಸೀತಮ್ಮ
ತೊಡಿಯ ತೊಡಿಯಾಕ ನೀರಿಲ್ಲ | ಹನುಮಂತ |
ಸೇತು ಕಟ್ಟಾನ ಸಮುದರಕ ||

ರಾಮಾಯಣವನ್ನು ಕಂಡಂತೆ ವಾಲ್ಮೀಕಿ ಸೀತಾಯಣವನ್ನು ಕಾಣಲಿಲ್ಲ ಎಂದು ಲೇಖಕರ ಅಭಿಪ್ರಾಯ.

ಕನ್ನಡ ನಾಡಿನ ಗರತಿ ಬಡತನದಲ್ಲಿ ಬೆಳೆದುಬಂದವಳು. ಆದರೂ ಸ್ವಾಭಿಮಾನಿ. ಪ್ರಸಂಗ ಬಂದರೆ ಪ್ರಾಣವನ್ನೇ ಕೊಟ್ಟಾಳು. ಸ್ವಾಭಿಮಾನವನ್ನು ಎಂದಿಗೂ ಮಾರಿಕೊಳ್ಳಲಾರಳು. ಒಮ್ಮೆ ಓರ್ವ ಚೆಲುವೆ ಎತ್ತಿನ ಮೇಲೆ ಕುಳಿತು, ಅತ್ತೆಯಮನೆಗೆ ಹೊರಟಿದ್ದಳು. ದಾರಿಯಲ್ಲಿ ಕಿತ್ತೂರ ದೊರೆಯ ಕಣ್ಣು ಅವಳ ಮೇಲೆ ಬಿದ್ದಿತು. ಅವಳ ಚಲುವಿಕೆ ಆತನ ಮನಸ್ಸನ್ನು ಆಕರ್ಷಿಸಿತು. “ಕಾಮಾತುರಾಣಾಂ ನಭಯಂ ನ ಲಜ್ಜಾಂ” ಎನ್ನುವಂತೆ ಆತ ಕೇಳಿಯೇ ಬಿಟ್ಟ.

ಅತ್ತೆಯ ಮನೆ ಸೊಸೆ ಎತ್ತೇರಿ ಬರುವಾಗ
ಕಿತ್ತೂರ ದೊರೆಯು ನೆದರಿಟ್ಟು | ಕೇಳ್ಯಾನ
ಹತ್ತು ರೂಪಾಯಿ ಮೊಗದೋರ ||

ಅವಳ ಪ್ರತಿಕ್ರಿಯೆಯನ್ನು ಲೇಖಕರ ಮಾತಿನಲ್ಲಿಯೇ ಕೇಳೋಣ –

“ಆ ಮಾತು ಕೇಳಿ ಆಕೆ ಬೆದರಲೂ ಇಲ್ಲ, ಬೆಚ್ಚಲೂ ಇಲ್ಲ. ನಾಚಿಕೊಂಡು ಮುಖ ತಗ್ಗಿಸಲೂ ಇಲ್ಲ. ದೋಚಿಕೊಂಡು ಓಡಿ ಹೋಗಲೂ ಇಲ್ಲ ಚೊಕ್ಕಟವಾದ ಮಾತಿನಲ್ಲಿ ಮರುನುಡಿದಳು.”

ಹತ್ತು ನಿನರೂಪಾಯಿ ನತ್ತೀನ ಬೆಲೆಯಿಲ್ಲ.
ಅತ್ತೀ ಹೊಟ್ಟೇಲಿ ಅರ್ಜುನ | ಕಾಲಾನ
ಮೆಟ್ಟಿನ ಬೆಲೆಯು ನಿನಗಿಲ್ಲ ||

“‘ಅಭಿಮಾನಿಗಳ್, ಅತ್ಯುಗ್ರರ್, ಗಭೀರಚಿತ್ತರ್; ವಿವೇಕಿಗಳ್ ನಾಡವರ್ಗಳ್’ ಎಂದು ಪ್ರಾಚೀನ ಕವಿ ನುಡಿಯುವಾಗ, ಈ ಗರತಿಯಂಥ ಮಹಿಳೆಯರು ಆತನ ಗಮನದಲ್ಲಿರಬೇಕು.

ಮಗು ಎಂದರೆ ತಾಯಿಗೆ ಎಲ್ಲಿಲ್ಲದ ಹಿಗ್ಗು ಮಗುವಿಗಾಗಿ ಏನೆಲ್ಲ ತೊಂದರೆ ಸಹಿಸಲೂ ಸಿದ್ದಳು. ನೂರೊಂದು ಆಡಿಸುತ್ತಾಳೆ. ನೂರೊಂದು ವಿಧವಾಗಿ ರಂಬಿಸುತ್ತಾಳೆ. “ಹೆಣ್ಣಿನ ಹಂಬಲವೆಲ್ಲ ಕುದಿಕುದಿದು ಅದು ಕಂದನಾಗಿ ಅವತರಿಸಿ ಬಂದಾಗ ಆಕೆಗಾಗುವ ಆನಂದ-ಅಚ್ಚರಿ ಬಣ್ಣಿಸಲು ಸಾಧ್ಯವೇ? ಬೇಂದ್ರೆ ಅವರು ಅನ್ನುತ್ತಾರೆ.

ನನ್ನ ಮನಸಿನ ಹಂದರದಲ್ಲಿದ್ದ ಒಲವಿನ ಮಿಡಿಯೇ
ನನ್ನ ಕನಸಿನ ಗುಡಿಯಲ್ಲಿದ್ದ ನಲವಿನ ಕೈಪಿಡಿಯೇ
ನನ್ನ ಬಯಕೆಗಳ ಬಸಿರಲ್ಲಿ ಮೊಳೆದ,
ನನ್ನ ಬಸಿರಿನ ಬಯಕೆಯಲ್ಲಿ ಹೊಳೆದ
ಮುದ್ದು ಮಗುವೇ, ಬಂದೆಯಾ ಇಂದು ಕಂದನಾಗಿ ನನ್ನೊಡಲಲ್ಲಿ?”

ಲೇಖಕರ ಮಾತಿನಲ್ಲಿ ಹೇಳಬೇಕಾಗದರೆ – ಮಗುವೆಂದರೆ ಅವ್ಯಕ್ತ ಲೋಕದ ಬಾಲನಟ. ತಾಯಹೊಟ್ಟೆಯೇ ಆತನಿಗೆ ಬಣ್ಣದ ಕೋಣೆ, ಅಲ್ಲಿ ವೇಷತೊಟ್ಟು ರಂಗಭೂಮಿಗೆ ಬರುತ್ತಾನೆ. ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಗರತಿ ಹಾಡುತ್ತಾಳೆ-

ತೊಟ್ಟಿಲದೊಳಗೊಂದು ತೊಳೆದ ಮುತ್ತನೆಕಂಡೆ
ಹೊಟ್ಟೆ ಮೇಲಾಗಿ ಮಲಗ್ಯಾನ | ಕಂದೈಗ |
ಮುತ್ತಿನದೃಷ್ಟಿ ತೆಗೆದೇನ ||

ಮಗು ತನ್ನ ಒಡನಾಡಿಗಳೊಡನೆ ಅಂಗಳದಲ್ಲಿ ಆಡಿ, ಮೈ ಮುಖಕ್ಕೆಲ್ಲ ಮಣ್ಣು ಬಳಿದುಕೊಂಡು ಬರುತ್ತಾನೆ. ಆದರೆ ತಾಯಿಗೆ ಆತನ ಕೈಕಾಲು ಮುಖ ತೊಳೆಯಲು ಬೇಸರವೇ ಇಲ್ಲ.

ಆಡಿ ಬಾ ಎನಕಂದ ಅಂಗಾಲ ತೊಳದೇನ
ತೆಂಗೀನಕಾಯಿ ತಿಳಿನೀರ | ತಕ್ಕೊಂಡು |
ಬಂಗಾರ ಮಾರಿ ತೊಳದೇನ ||

ಒಂದೊಂದು ಸಲ ಮಗು ಹಟಮಾಡುವುದು ಸ್ವಾಭಾವಿಕ. ಏನು ಕೊಟ್ಟರೂ ಸಮಾಧಾನವಿಲ್ಲ. ಮಗುವಿನ ಹಟ ತಾಯಬಾಯಿಂದಲೇ ಕೇಳಬೇಕು –

ಕಂದನ ಕಿರಿಕಿರಿ ಇಂದೇನ ಹೇಳಲಿ
ಬಿಂದೀಗಿ ಹಾಲು ಸುರುವೆಂದ | ಛಂಜೀಯ
ಚಂದ್ರಮನ ತಂದು ನಿಲಿಸೆಂದ ||

ಲೇಖಕರು, ಒಬ್ಬ ಒಕ್ಕಲಿಗನ ಜೀವನವನ್ನೂ, ತನ್ನ ದುಡಿಮೆಯಲ್ಲಿ ಆತ ಪಡೆಯುವ ಆನಂದವನ್ನೂ ಬಹು ರಮ್ಯವಾಗಿ ಬಣ್ಣಿಸಿದ್ದಾರೆ.

ಭೂಮಿ ತಾಯಿಯ ಚೊಚ್ಚಿಲಮಗನೆನಸಿದ ಒಕ್ಕಲಿಗನ ಐಶ್ವರ್ಯದ ಮುಂದೆ ಅರಮನೆಯ ಸಡಗರವನ್ನು ನಿವಾಳಿಸಿಬೇಕು. ಐಶ್ವರ್ಯವೆನ್ನುವುದು ಈಶ್ವರನ ಅಕ್ಷಯಸಾನಿಧ್ಯ. ದುಡಿಮೆಗೆ ಹಿಂಜರಿಯದ ಸಮರ್ಥ ಮೈ ಕಟ್ಟು ಹಾಲು ಹಯನಗಳಿಂದ ಕೈ ತೊಳಕೊಳ್ಳುವ ಸಿರಿಯೊಟ್ಟು ಯಾವುದಕ್ಕೂ ಅವನ ಕೈಮೇಲೆ ಕೊಡುಗೈ ದೊರೆಯೆಂದರೆ ಅವನೇ. ಹೊಲ ಉತ್ತಲಿ, ತೋಟದಲ್ಲಿ ಮೊಟ್ಟೆ ಹೊಡೆಯಲಿ, ಬೀಳು ಭೂಮಿಯಲ್ಲಿ ದನ ಮೇಯಿಸಲಿ, ಕುರಿದಡ್ಡಿಯಲ್ಲಿ ನಾಯಿಗಳ ಜೊತೆಗೆ ಮಲಗಿಕೊಳ್ಳಲಿ – ಎಲ್ಲವೂ ಚಂದವೇ ಯಾವ ಕೆಲಸಕ್ಕೆ ನಿಂತರೂ ಮುಖ ಅರಳುವದು ಅದನ್ನು ಕಂಡ ಅಕ್ಕ-ತಂಗಿಯರು ಹಿರಿ -ಹಿರಿ ಹಿಗ್ಗುವರು.

ಅವನಿಗೆ ದುಡಿಮೆ-ಉದ್ಯೋಗ ಬರೀ ಹೊಟ್ಟೆಯ ಪಾಡಲ್ಲ. ಕೈಲಾಸದ ಸುಖ ತಂದು ಒದಗಿಸುವ ಉಪಾಯ. ತೋಟಕ್ಕೆ ಹೋದ ಅಣ್ಣನು, ತನ್ನ ಕೆಲಸದಲ್ಲಿ ಊಟದ ಹಂಬಲವನ್ನೇ ಮರೆಯುವನು. ಮನೆಗೆ ಹೊರಟರೆ ಬರುವಾಗ ಯಾಲಕ್ಕಿಯ ಗೊನೆಗಳ ಬಾನಿನಿಂತು ಹಾಲು ಸುರಿಯುವವಂತೆ. ಆ ಬಗ್ಗೆ ತ್ರಿಪದಿಗಳನ್ನು ಗರತಿ ಹಾಡಿದ್ದುಂಟು. ದನಕರುಗಳೆಂದರೆ ಒಕ್ಕಲಿನ ಮನೆಯವರಿಗೆಲ್ಲ ತಮ್ಮ ಕುಟುಂಬದ ಸದಸ್ಯರಿದ್ದಂತೆ, ಅಷ್ಟು ಮಮತೆ ಅಷ್ಟು ಮೋಹ ಅವುಗಳ ಮೇಲೆ, ತನ್ನ ತಮ್ಮನ ಎತ್ತು ಅಂದರೆ ಅಕ್ಕನಿಗೆ ಅದೆಷ್ಟು ಅಭಿಮಾನ!

ಹಂತೀಯ ನಮ್ಮೆತ್ತು ಹಂತೀಲಿ ಬಂದವರ
ಸೆರಗೀಲಿ ಸುಂಕ ಒರಸೀನಿ | ತಮ್ಮನ
ಹಂತೀಯ ಎತ್ತು ಹದಿನಾರು ||

ನಮ್ಮ ಗರತಿ ಭಾವುಕಳು. ಭಗವಂತನಲ್ಲಿ ಭಕ್ತಿಶ್ರದ್ದೆ ಉಳ್ಳವಳು. ಬೆಳಗಿನ ಜಾವ ಎದ್ದ ಕೂಡಲೇ ಭೂಮಿ ತಾಯಿಗೂ ಶಿವಪಾರ್ವತಿಯರಿಗೂ ಗುರುಗಳಿಗೂ ವಂದಿಸಿ ತನ್ನ ದೈನಂದಿನ ಕಾರ್ಯ ಆರಂಭಿಸುತ್ತಾಳೆ. ಒಮ್ಮೆ ಭಕ್ತಿಯ ಪರವಶತೆಯಲ್ಲಿ ತೆಗೆದ ಉದ್ಗಾರ ಇಂತಿದೆ –

ಇಂದು ನನ್ನಂಗಳ ಶ್ರೀಗಂಧ ನಾತಾವ
ಬಂದಿದಾನೇನ ಶ್ರೀಹರಿ | ನನ ಮನೆಗೆ |
ಗಂಧದ ಮಡುವ ತುಳಕೂತ ||

ಈ ನುಡಿಯ ಮರ್ಮವನ್ನುಲೇಖಕರು ಎರಡು ದೃಷ್ಟಾಂತಗಳಿಂದ ಬಹು ಮಾರ್ಮಿಕವಾಗಿ ನಿರೂಪಿಸಿದ್ದಾರೆ. ಅಧರಸೇನ ಎಂಬಬಂಗಾಲಿ ಸದ್‌ಗ್ರಹಸ್ಥರು ಕಲೆಕ್ಟರ ಆಗಿದ್ದರು. ಅವರು ಶ್ರೀ ರಾಮಕೃಷ್ಣ ಪರಮಹಂಸರ ಭಕ್ತರೂ ಆಗಿದ್ದರು. ಗುರುಗಳು ಅವರ ಮನೆಗೆ ಬಂದಾಗಲೆಲ್ಲ ಮನೆಯು ಸುವಾಸನೆಯಿಂದ ಇಡುಗುತ್ತಿತ್ತಂತೆ. ಇನ್ನೊಂದು ಇನ್ನೊಂದು ದೃಷ್ಟಾಂತ ಎಂದರೆ – ಲೋಣಿ ಇಂಡಿ ತಾಲ್ಲೂಕಿನಲ್ಲಿಯ ಒಂದು ಚಿಕ್ಕ ಗ್ರಾಮ. ಧಾರವಾಡ ತಪೋವನದ ಶ್ರೀ ಕುಮಾರಸ್ವಾಮಿಗಳು ಪ್ರತಿವರ್ಷ ಆ ಊರಿಗೆ ಭೆಟ್ಟಿಕೊಟ್ಟು ತಿಂಗಳೊಪ್ಪತ್ತು ಅಲ್ಲಿ ವಾಸಿಸುತ್ತಿದ್ದರು. ಅವರಿಗಾಗಿ ಭಕ್ತರ ಮನೆಯಲ್ಲಿ ಒಂದು ಕೋಣೆ ಕಾಯ್ದಿಡಲಾಗಿತ್ತು. ಅದನ್ನು ಯಾರೂ ಉಪಯೋಗಿಸುತ್ತಿದ್ದಿಲ್ಲ. ಯಾವಾಗಲೂ ಕೋಣೆಗೆ ಬೀಗ ಇರುತ್ತಿತ್ತು. ಆಗೀಗ ಕಸಗುಡಿಸಿ ಸ್ವಚ್ಛಮಾಡಲು ಮಾತ್ರ ಅದನ್ನು ತೆರೆಯುತ್ತಿದ್ದರು. ಆಗ ಕೋಣೆಯ ತುಂಬೆಲ್ಲ ಸುವಾಸನೆ ಇರುತ್ತಿತ್ತ. ಮಹಾಪುರುಷರ ಸಾನ್ನಿಧ್ಯಕ್ಕೂ ಸುವಾಸನೆಗೂ ಒಂದು ಅವಿನಾಭಾವ ಸಂಬಂಧ ಇದ್ದಂತೆ ತೋರುತ್ತದೆ. ಇದೊಂದು ಶ್ರೇಷ್ಠತರವಾದ ಆಧ್ಯಾತ್ಮಿಕ ಸತ್ಯವಾಗಿದೆ. ಆಧ್ಯಾತ್ಮಿಕ ಶ್ರೇಣಿಯಲ್ಲಿ ಮನಕ್ಕಿಂತಲೂ ಹೆಚ್ಚು ಉನ್ನತವಾದ ಒಂದು ಹಂತ ತಲುಪಿದಾಗ ಇಂಥ ಆಧ್ಯಾತ್ಮಿಕ ಅನುಭವಗಳು ಉಂಟಾಗುವವೆಂದು ಪಾಂಡಿಚೇರಿಯ ಶ್ರೀಮಾತೆಯವರೂ ಶ್ರೀ ಅರವಿಂದರೂ ಹೇಳುತ್ತಾರೆ. ಇಂಥ ಅನುಭವ ಪಡೆದ ಕನ್ನಾಡ ಗರತಿ ಅನುಭಾವಿಯೇ ಆಗಿರಬೇಕು ಎಂದು ಲೇಖಕರು ಸರಿಯಾಗಿ ಗುರುತಿಸಿದ್ದಾರೆ.

ಹೀಗೆ ಲೇಖಕರು ಗರತಿಯ ಜೀವನದ ಸಮಗ್ರ ದರ್ಶನವನ್ನೇ ಈ ಗ್ರಂಥದಲ್ಲಿ ಮೂಡಿಸುತ್ತಾರೆ. ಕೊನೆಗೆ ಬಹು ಬೆಲೆಯುಳ್ಳ ಮಾತನ್ನು ಹೇಳಿದ್ದಾರೆ.

“ಯುದ್ಧರಂಗದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದಂತೆ, ಶ್ರೀಕೃಷ್ಣನ ತಂಗಿ ಸುಭದ್ರೆಯು ಗರತಿಗಾಗಿ ಕುಟುಂಬರಂಗದಲ್ಲಿ ಸಂಸಾರ ಗೀತವನ್ನು ತ್ರಿಪದಿಗಳ ರೂಪದಲ್ಲಿ ಒದಗಿಸಿದಳೆಂದು ತೋರುತ್ತದೆ. ಗರತಿಯ ಹೃದಯಾಳದಿಂದ ಬರುವ ಈ ಹಾಡುಗಳು ಮಂತ್ರಗಳಿದ್ದಂತೆ. ಅಂತೆಯೇ ಅವು ಸಂಸಾರವೇದವೆನಿಸಿವೆ.”

ಶ್ರೀ ಸಿಂಪಿಲಿಂಗಣ್ಣನವರಿಗೆ ಜಾನಪದಸಾಹಿತ್ಯ ಕರತಲಾಮಲಕವಾಗಿದೆ. ಜನಪದಸಾಗರದಲ್ಲಿ ಅವರು ಬಹು ಲೀಲಾಜಾಲವಾಗಿ ಈಸಾಜಬಲ್ಲರು, ಪ್ರತಿಯೊಂದು ಹಾಡಿನ ಹಿನ್ನೆಲೆಯನ್ನು ಬಹುಸರಸವಾಗಿ ನಿರೂಪಿಸಿದ್ದಾರೆ. ಗಂಡೆ ಹೆಂಡಿರ ಪ್ರೀತಿ-ಕಲಹ, ಮೋಹ ಮುನಿಸು, ಸಂಸಾರದ ಸರಸ-ವಿರಸ, ಮಕ್ಕಳ ಆಟ ಕಂಡಾಗ ತಾಯಿಗುಂಟಾಗುವ ಹರುಷ, ಅತ್ತೆ-ಸೊಸೆಯರ ಇರಸು-ಮುರಸು ಇವೆಲ್ಲ ಈ ಗ್ರಂಥದಲ್ಲಿ ಬಹುರಮ್ಯವಾಗಿ ಮೂಡಿಬಂದಿವೆ. ಶ್ರೀ ಸಿಂಪಿ ಅವರದು ಸಿದ್ಧ ಲೇಖನಿ. ಈ ಲೇಖನಿಯಿಂದ ಮೂಡಿ ಬಂದುದೆಲ್ಲ ಸರಸಸಾಹಿತ್ಯವೇ ಆಗಿದೆ.

ಚಡಚಣ ಎಂ.ಆರ್. ಜಹಗೀರದಾರ, ಎಂ.ಎ. ಬಿ.ಇಡಿ.
ನಿವೃತ್ತ ಮುಖ್ಯಾಧ್ಯಾಪಕ
ದಿ. ೧೪.೩.೧೯೮೪