ದುಡಿತವು ದುಡ್ಡಿನ ತಾಯಿ; ಅಷ್ಟೇ ಅಲ್ಲ, ಅದರ ಅರ್ಥ ಪುರುಷಾರ್ಥದ ಸ್ಪಷ್ಟಸಾಧನೆಯೂ ಆಗಿದೆ. ದುಡಿತದಲ್ಲಿ ಅರ್ಥವಿದೆ; ಸಾರ್ಥಕ್ಯವಿದೆ. ಸಂತೋಷವಿದೆ, ಸಮಾಧಾನವೂ ಇದೆ. ಅಂತೆಯೇ ಗೃಹಿಣಿ ದುಡಿಯುವಾಗ ಆಕೆಯ ಬಾಯಿಂದ ಹಾಡು ಹೊಮ್ಮುತ್ತದೆ. ಹಾಡು ಹಿಗ್ಗಿನ ಲಕ್ಷಣ. ಕಾವ್ಯಮಾನಂದಾಯ ಎಂದು ಶಿಷ್ಟರು ಹೇಳಿದರೆ, ಹಾಡು ಹಿಗ್ಗಿಗಾಗ ಎನ್ನುತ್ತಾಳೆ ಗರತಿ. ಹಾಡಿ ಹಿಗ್ಗಬೇಕು, ಹಿಗ್ಗಿಗಾಗಿ ಹಾಡಬೇಕು, ದುಡಿಮೆಯ ಶ್ರಮದಿಂದ ಹುಟ್ಟಿಕೊಳ್ಳುವ ಕಾವನ್ನು ಹಾಡು ತಣಿಸುತ್ತದೆ. ಹಾಡಿಲ್ಲದ ದುಡಿಮೆ ಕತ್ತೆಯ ಧಾವತಿ.

ಸುಮ್ಮನೆ ಬೀದರೆ ಬೀಳದು ಕಲ್ಲು
ನಾಗಸೊರದಂತೆ ದನಿಯೆತ್ತಿ | ಹಾಡಿದರ
ಗಮ್ಮನೆ ಬೀಳುವದು ಕಲ್ಲು ||

ಪದ ಬರುವುದಿಲ್ಲವೆಂದರೆ ಶರಣಾಗು ಎನ್ನುತ್ತಾಳೆ ಗರತಿ. “ನನ್ನದೆಯಲ್ಲಿ ಪದವುಂಟು” ಎಂದು ಆಕೆಗೆ ವಿಶ್ವಾಸವಿದೆ. ಎದೆ ಎದೆಯಲ್ಲಿ ಪದ ಮೂಡಿಸಿದವಳು, ಕೃಷ್ಣನ ತಂಗಿ ಸುಭದ್ರೆಯೆಂದು ಆಕೆ ನಂಬಿದ್ದಾಳೆ. ಯುದ್ಧರಂಗದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದಂತೆ, ಶ್ರೀಕೃಷ್ಣನ ತಂಗಿ ಸುಭದ್ರೆಯು ಗರತಿಗಾಗಿ ಕುಟುಂಬರಂಗದಲ್ಲಿ ಸಂಸಾರ ಗೀತೆಯನ್ನು ತ್ರಿಪದಿಗಳ ರೂಪದಲ್ಲಿ ಒದಗಿಸಿದಳೆಂದು ತೋರುತ್ತದೆ, ಅದನ್ನು ಅನುಸರಿಸಿ ಗರತಿಯು ಬೀಸುಕಲ್ಲಿಗೆ ಪ್ರಾರ್ಥಿಸುವುದೇನೆಂದರೆ:

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗಿಯ
ಜಲ್ಲಜಲ್ಲನೆ ಉದರಮ್ಮ | ನಾನಿನಗೆ
ಬೆಲ್ಲದಾರತಿಯ ಬೆಳಗೇನು ||

ರಾಗೀಕಲ್ಲೇ, ನಾನು ನಿನ್ನನ್ನು ದಣಿಸಿದೆ; ನಿನ್ನ ನಿದ್ರೆ ಕೆಡೆದೆ; ಬಲದೋಳನ್ನು ತೂಗಿ ನಾನು ನಿನ್ನನ್ನು ಬಿಡುತ್ತೇನೆ. ಕುಕ್ಕಿಯಲ್ಲಿ ರಾಗಿಯನ್ನುತೆಗೆದುಕೊಂಡು ಮತ್ತೆ ರಾತ್ರಿಗೆ ಬರುತ್ತೇನೆ – ಎಂದು ಬೋಳಯಿಸಿ ಭರವಸೆ ಕೊಡುತ್ತಾಳೆ.

“ಕಲ್ಲುದೈವ, ಒರಳುದೈವ, ಮೊರದೈವ, ಒನಕೆದೈವ” ಎಂದು ಪೂಜಿಸುವವರನ್ನು ಕುರಿತು, ಶರಣರು ತಮ್ಮ ವಚಲ್ಗಳಲ್ಲಿ ಹೀಗಳಿದದ್ದು ತೆಗಳಿದ್ದು ಕಂಡುಬರುತ್ತದೆ. ಆದರೆ ತಮ್ಮ ಉಪಕರಣವನ್ನು ಪ್ರೀತಿಸುವುದೂ ಅವುಗಳೊಡನೆ ಆತ್ಮೀಯತೆಯಿಂದ ನಡಕೊಳ್ಳುವುದೂ ಒಳ್ಳೆಯ ಸಂಪ್ರದಾಯ. ಅದರಿಂದ ತಮ್ಮ ಕೆಲಸ ಸುಗಮಗೊಳ್ಳುವುದೆಂದು ಗರತಿ ಭಾವಿಸಿದ್ದಾಳೆ. ಈ ಭಾವನೆಯನ್ನು “ಕ್ರಿಸ್ತಾನುಕರಣ”ವು ಒಳಿತಾಗಿ ಎತ್ತಿಹಿಡಿದಿದೆ.

ದೇವನಬ್ಬ ನಾಮ ಹಲವು, ನಂಬಿದ ಸತಿಗೆ ಗಂಡನೊಬ್ಬನೇ ಕಾಣಿರೋ ಎನ್ನುವ ಮಾತು ಗರತಿಯಲ್ಲಿ ಮೈಯುಂಡುಹೋಗಿದೆ; ರಕ್ತಗತವೂ ಆಗಿದೆ. ಗಂಡನೊಬ್ಬನನ್ನು ಅವನ ಅಂತಸ್ಥಕ್ಕೆ ತಕ್ಕ ರೀತಿಯಲ್ಲಿ ಪ್ರೀತಿಸಿದರೆ ಆಯಿತೇ? ಭಾವ-ಮೈದುನ, ಅತ್ತಿಗೆ-ನೆಗೆಣ್ಣಿಯರನ್ನು, ಅತ್ತೆಮಾವಂದಿರನ್ನು ಅವರವರ ಮಟ್ಟಕ್ಕೆ ಅನುಸಾರವಾಗಿ ಪ್ರೀತಿಸುವುದು ತಪ್ಪೇ? ಅಲ್ಲ. ಅದು ವಾಸ್ತವಿಕವೇ ಆಗಿದೆ; ಸಹಜಕ್ರಿಯೆಯೂ ಆಗಿದೆ; ಸೂಕ್ತಕ್ರಮವೂ ಆಗಿದೆ. ಅಲ್ಲವೇ?

ಮನೆತನದ ಹಿರಿಯನನ್ನು ಅಪ್ಪ, ಅಜ್ಜ, ಕಕ್ಕ, ಮಾವ, ಯಜಮಾನ, ಧನಿಯ ಎಂದು ಬೇರೆ ಬೇರೆ ಆಪ್ತರು ಕೂಗುವಂತೆ, ಮಹಾಮನೆಯ ಒಡೆಯನನ್ನು ತಮಗೊಪ್ಪುವ ರೀತಿಯಲ್ಲಿ ಕೂಗುವುದು ಭೂಷಣವೇ ಆಗಿದೆ; ಸಮ್ಮತವೂ ಆಗಿದೆ. ಕೃಷ್ಣ, ನಾರಾಯಣ, ಶಿವ, ಹರಿ, ಮಲ್ಲಯ್ಯ, ಬಲಭೀಮ, ಬಸವಣ್ಣ, ಎಲ್ಲಮ್ಮ, ಜಕ್ಕವ್ವ ಎಂಬ ಹೆಸರುಗಳೆಲ್ಲ ಒಬ್ಬನೇ ದೈವತದ ವಿವಿಧ ಶಕ್ತಿಗಳಿಗೆ ಅರ್ಥಪೂರ್ಣವಾಗಿ ಬಳಸುವ ಶಬ್ದಗಳೇ ಆಗಿವೆ. ಇಲ್ಲಿಯೇ ಇದೆ ಸರ್ವಧರ್ಮ ಸಮನ್ವಯದ ಕೀಲಿ. ಅನೇಕದಲ್ಲಿ ಏಕತೆ ಇಲ್ಲಿಯೇ ಕಂಗೊಳಿಸುತ್ತದೆ. ಗರತಿಯ ಮನಕ್ಕೊಪ್ಪುವ ದೈವಶಕ್ತಿಯನ್ನು ಅಕ್ಕರೆಯ ಹೆಸರಿನಲ್ಲಿ ಹಾಡಿ, ಕೊಂಡಾಡಿ ಹತ್ತಗಡೆಯನ್ನು ತೋರ್ಪಡಿಸುವುದು ಸಹಜ ಕ್ರಮವೇ ಆಗಿದೆ.

ಭಂತ್ನಾಳ ಶರಣಯ್ಯ ನಾ ನಿನ್ನ ಮಗಳಯ್ಯ
ಲೇಸಗಿತ್ತೆಯ್ಯ ಬಡವೆಯ್ಯ | ನನಮ್ಯಾಲ
ಸಾಸೀವಿ ಕಾಳಷ್ಟು ದಯವಿರಲಿ ||

“ತಂದೇ, ನಾನು ನಿನ್ನ ಮಗಳು. ಸಕಲ ಜೀವರಿಗೆ ಲೇಸನೆಬಯಸುವ ಲೇಸಗಿತ್ತಿ, ಆದರೆ ಬಡವಿ. ಬಡವಿಗೆ ತಕ್ಕಂತೆ ದಯೆನೀಡು; ಅದು ಸಾಸಿವಿ ಕಾಳಿನಷ್ಟಿದ್ದರೂ ಸಾಕು.” ಎಂಬ ಅಭೀಪ್ಸೆ, ಹೃದಯದ ಹಾರಯಿಕೆ. ಆಕೆ ಬೇಡುವುದು ಧರ್ಮದ ಮೂಲವಾದ ದಯೆ ಮಾತ್ರ ಆಗಿರದೆ, ಒಲಿದು ಎತ್ತಿಕೊಳ್ಳುವ ಕೃಪೆಯೂ ಆಗಿದೆ. ದಯೆ ಧರ್ಮಧ ದಾರಿಯಾಗಿದ್ದರೆ, ಕೃಪೆ ಮಾತ್ರ ದೈವದೊಲುಮೆ ಆಗಿದೆ. ಸಾಸಿವೆ ಕಾಳಿನಷ್ಟು ಅದು ಬೆಂಬಲಕ್ಕೆ ನಿಂತರೂ ಪ್ರಪಂಚದೊಳಗಿನ ಸರ್ವಪ್ರಕಾರದ ಭಯ, ಸಂಕಟ, ತೊಂದರೆಗಳಿಂದ ಕಾಪಾಡುತ್ತದೆಂದು ಶ್ರೀ ಅರವಿಂದರು ಹೇಳುತ್ತಾರೆ. ಹೆಣ್ಣಿನ ಜನ್ಮವನ್ನು ಮಣ್ಣು ಮಾಡಬೇಕೆಂದೂ, ಅದನ್ನು ಸುಣ್ಣದ ಹರಳುಮಾಡಿ ಸುಡಬೇಕೆಂದೂ ಹೂಣಿಕೆ ತೊಟ್ಟ ಗರತಿ ದುಡಿತದಲ್ಲಿರುವ ಮಿಡಿತ ಎಂಥದೆಂಬುದನ್ನು ಸ್ಪಷ್ಟಗೊಳಿಸುತ್ತಾಳೆ.

ಗರತಿ ದುರ್ದೈವದಿಂದ ವೈಧವ್ಯವನ್ನು ಎದುರಿಸುತ್ತಾಳೆ. ಬಡತನವನ್ನು ಸಹಿಸುತ್‌ತಾಳೆ, ಬಹು ಮಕ್ಕಳ ಜಂಜಾಟವನ್ನು ನಿರ್ವಹಿಸುತ್ತಾಳೆ. ಏತರಬಲದಿಂದ? ಪಡೆದುಕೊಂಡ ದೈವೀ ಕೃಪೆಯಿಂದ. ಇಂದಿನ ಯುಗವು ಗರತಿಯ ಇಂಥ ನಿಲುಮೆಯನ್ನು ಸಮ್ಮತಿಸಲಿಕ್ಕಿಲ್ಲ. ಒಲುಮೆಯನ್ನು ಒಪ್ಪಿಕೊಳ್ಳಲಿಕ್ಕಿಲ್ಲ. ಆದರೆ ಗರತಿ ಮಾತ್ರ ತನ್ನ ಶ್ರದ್ಧೆಯನ್ನು ಅಚಲವಾಗಿರಿಸಿ ಕೊಂಡು ಸಂಸಾರವನ್ನು ಗೆಲ್ಲುತ್ತಾಳೆ. “ಕೊಲುವೆನೆಂಬ ಭಾಷೆ ದೇವನದು. ಗೆಲುವೆನೆಂಬ ಭಾಷೆ ಭಕ್ತನದು” ಎಂಬ ಅಮರ ನುಡಿಯನ್ನು ಸಾರ್ಥಕಗೊಳಿಸುವ ಎತ್ತುಗಡೆ ನಡೆಸಿಯೇ ತೀರುತ್ತಾಳೆ.

“ಮಂದಿ ಮಕ್ಕಳಳಗ ಛಂದಾಗಿ ಹೊಂದಿರಬೇಕ, ಮಂದೀ ಬಾಯಾಗ ಇರಬೇಕ” ಎಂಬ ಮಹದುದ್ದೇಶವನ್ನು ಇರಿಸಿಕೊಂಡಿದ್ದರಿಂದ ಆಕೆ ಸಂಸಾರಕ್ಕೆ ಬೆಂದೋರಿ ಓಡಿ ಹೋಗುವವರನ್ನು ತಡೆದು ನಿಲ್ಲಿಸಿ, ಈ ಮಾತು ಹೇಳುವುದಕ್ಕೆ ಸಮರ್ಥಳಾಗಿದ್ದಾಳೆ.

ಅಡವಿ ಸೇರಲು ಬೇಡ, ಜಡೆಯ ಬೆಳಸಲು ಬೇಡ
ಮಡದೀಯ ನೀನು ಬಿಡಬೇಡ | ದೃಢದಿಂದ |
ನಡೆ ನುಡಿಯಲ್ಲಿ ಕೆಡಬೇಡ ||

ಗರತಿ ದುಡಿಮೆಯಲ್ಲಿ ಗಟ್ಟಿಗಳಾಗುವುದಕ್ಕೆ ಹಾಡಿನಮಿಡಿತವೆಂಬ ಪೌಷ್ಠಿಕವನ್ನು ಮೆಲ್ಲುತ್ತಾಳೆ. ಅದರಿಂದ ಆಕೆಯ ಪುಕ್ಕತನ ಕಾಲ್ದೆಗೆಯುತ್ತದೆ. ನೆರೆಹೊರೆಯವರ ಅಂಜಿಕೆಗಾಗಲಿ, ಹುಲಿಕರಡಿಗಳ ಹೆದರಿಕೆಗಾಗಲಿ ಆಕೆ ಸೊಪ್ಪುಹಾಕುವವಳಲ್ಲ. ತವರುಮನೆಯ ರಕ್ತಗುಣದ ಬೆಂಬಲದೊಂದಿಗೆ, ಅತ್ತೆಯ ಮನೆಯ ಶಕ್ತಗುಣದ ಹಿಂಬಲವೂ ಆಕೆಗೆ ಭೀಮರಕ್ಷೆಯನ್ನು ಒದಗಿಸುತ್ತದೆ. ಆಕೆಯೇ ಹೇಳುತ್ತಾಳೆ.

ಅಂಜೀಕಿ ತೋರಿದರ ಅಂಜುವರಮಗಳಲ್ಲ
ಮಂಜಾನದಾನ ಹುಲಿಕರಡಿ | ತೋರಿದರ
ಅಂಜಿತಿರುಗುವರ ಸೊಸಿಯಲ್ಲ ||

ಆಕೆಯ ಹೃದಯದಂತೆ ಮನಸ್ಸೂ ಕನ್ನಡಿಯಾಗಿದೆ. ಅಷ್ಟೇ ಅಲ್ಲ, ಆಕೆಯೊಂದುಇಡಿ ಗನ್ನಡಿಯೇ ಆಗಿರುವುದರಿಂದ, ಅದರ ಮುಂದೆ ನಿಂತವರ ರೂಪವೇ ಅದರಲ್ಲಿ ಪಡಿ ಮೂಡುತ್ತದೆ. ನಗೆಮುಖದಂತೆ ಗಂಟೂಮೋರೆಯು ಆ ಕನ್ನಡಿಯಲ್ಲಿ ಯಥಾವತ್ತಾಗಿ ಪ್ರತಿರೂಪಿಸುತ್ತದೆ.

ಹಚ್ಚಿಕೊಂಡವ್ವಗ ಚೊಚ್ಚೀಲ ಮಗಳಾದೆ
ಬಿಟ್ಟಾಡಿಕೊಳ್ಳವ ವೈರೀಯ | ಮನಿಮುಂದ |
ಬಿಚ್ಚುಗತ್ತ್ಯಾಗಿ ಹೊಳೆದೇನ ||

ಇದಕ್ಕೆಲ್ಲ, ಬಲಭೀಮನ ಭೀಮರಕ್ಷೆಯೇ ಕಾರಣವೆನ್ನಬೇಕು. ಯಾಕಂದರೆ, ಕೊಡಹೊತ್ತು ನೀರುತರುವ ದುಡಿಮೆಯನ್ನು ನಿಸ್ತರಿಸುವಾಗ ಆಕೆಯ ಮಿಡಿತ ಎಂಥದೆಂದರೆ –

ಹಗೋಗಾಗ ಎಡಕಾದ ಬರುವಾಗ ಬಲಕಾದ
ಈಗ ನನ್ನ ಕೊಡಕ ಇದಿರಾದ | ಬಲಭೀಮ
ಕೊಡ ಹೊತ್ತು ಕೈಯ ಮುಗಿದೇನ ||

ದುಡಿಮೆಯೇ ದೈವ ಪೂಜೆಯಂದು ಭಾವಿಸಿದಂತಿದ್ದ ಗರತಿಯ ಕಸವ ಹೊಡದ ಕೈಗೆ ಕಸ್ತೂರಿಯ ಸುವಾಸನೆ, ಸೆಗಣಿ ಬಳಿದ ಕೈ ಎಸಳ ಯಾಲಕ್ಕಿಯ ಕಂಪು ಸಂಗಳಿಸುತ್ತದೆಂದು ಹಿಂಜರಿಯದೆ ಹೇಳುತ್ತಾಳೆ.