ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮದ ಅಧಿಷ್ಠಾತ್ರಿ ದೇವತೆಯೆನಿಸಿದ ಶ್ರೀಮಾತೆಯವರಿಗೆ ಒಬ್ಬ ಶಿಷ್ಯರು ಕೇಳಿದರಂತೆ – “ಸಂಕಟಗಳು ಏತಕ್ಕಾಗಿ ಬರುತ್ತವೆ ತಾಯೀ?” ಆ ಪ್ರಶ್ನೆಗೆ – “ವೆಂಕಟರಮಣ ಅನಿಸುವ ಸಲುವಾಗಿ” ಎಂಬ ಉತ್ತರಬಂದಿತಂತೆ. ಸಂಕಟ ಬಂದ ಮೇಲೆ ವೆಂಕಟರಮಣ ಅನ್ನುವುದಕ್ಕಿಂತ ಆ ಮುಂಚೆಯೇ ವೆಂಕಟರಮಣ ಅನ್ನುತ್ತಿದ್ದರೆ ಸಂಕವೇ ಬರಲಿಕ್ಕಿಲ್ಲ. ಬಂದರೂ ಅದು ಬಾಧಿಸಲಿಕ್ಕಿಲ್ಲ. ಲೀಲಾಜಾಲವಾಗಿ ಬಂದು ಹೋಗಬಹುದು. ಶಿವಶಿವ ಎಂದರೆಸಿಡಿಲೆಲ್ಲ ಬಯಲಾಗುವನ್ನುವುದು ನಮ್ಮವರಿಗೆ ಅದರಲ್ಲಿ ಗರತಿಗೆ ನಿಚ್ಚಳವಾಗಿ ತಿಳಿದಿದೆ. ಕಲ್ಲು ಬಂದು ಎರಗಿದರೂ ಕಡೆಗಾಗುವುದರಿಂದ ಶಿವನೆಂಬ ಶಬ್ದ ಬಿಡಬೇಡ ಎಂದು ಆಕೆ ತನ್ನ ಮನಸ್ಸಿಗೆ ಗಟ್ಟಿಗೆ ಗಟ್ಟಿಸಿಹೇಳುತ್ತಾಳೆ.

ಆಸರಕಿ ಅಳದಿಟ್ಟೆ ಬ್ಯಾಸರಕಿ ಬಳದಿಟ್ಟೆ
ಚಿಂತಿಕಾಲಾಗ ತುಳದಿಟ್ಟೆ

ಎನ್ನುವ ಧೀರನುಡಿ ಯಾರದು? ನಮ್ಮ ತಾಯಿ-ಅಕ್ಕಂದಿರದೇ ಅಲ್ಲವೇ? ನಳ, ಹರಿಶ್ಚಂದ್ರ, ಪಾಂಡವರು ಪಟ್ಟಪಾಡು ಅಂಥ ಇಂಥದಲ್ಲ; ಮನುಷ್ಯನನ್ನು ಮಣ್ಣು ಮಾಡಿ ಚೆಲ್ಲುವಂಥದು; ಸುಣ್ಣದ ಹರಳುಮಾಡಿ ಸುಡುವಂಥದು. ನಿಜವಾಗಿಯೂ ಸುಖಿಗಳೆನಿಸುವ ಅವರೇ ಅಷ್ಟೊಂದು ಕಷ್ಟಪಟ್ಟಿರುವಾಗ ನಮ್ಮ ನಿಮ್ಮಂಥವರು ಯಾವ ಗಿಡದತೊಪ್ಪಲು?

ಸೀತೆ-ದ್ರೌಪದಿಯರ ದುಃಖ ದುಮಮಾನಗಳ ಕಥೆ ಕೇಳಿದರಗರತಿ ಹೇಳುತ್ತಾಳೆ – “ಸೀತಾದೇವಿಯಷ್ಟು ಸಿರಿಯ ಕಂಡವರಿಲ್ಲ. ದ್ರೌಪದಿಯಷ್ಟು ಹರಲಿಹೊತ್ತವರಿಲ್ಲ, ಈ ಲೋಕದಲ್ಲಿ,ಜನಕರಾಯನಂಥ ರಾಜತಪಸ್ವಿಯ ಮಗಳೆನಿಸಿ, ಶ್ರೀ ರಾಮನಂಥ ಅವತಾರಿಯ ಸತಿಯೆನಿಸಿ ಸೀತಾದೇವಿ ಕಾಡಿನಲ್ಲಿ ಬನಕೆ ತೊಟ್ಟಿಲುಕಟ್ಟಿ ಲವಕುಶರನ್ನು ತೂಗಿದಳು. ಹೆಣ್ಣು ಮೂಕವಾಗಿ, ತೊಟ್ಟಿಲು ತೂಗುವುದು ಸಾಧ್ಯವೇ ಇಲ್ಲ. ಜೋಗುಳ ಹಾಡದೆ ಇರುವುದುಂಟೇ? ಹಾಡು ಹಿಗ್ಗಿನ ಕುರುಹು ಎಂದಾಗ “ಸೀತಾದೇವಿ ನಗುತ್ತ ವನವಾಸ ಕಳೆದಾಳೋ” ಎನ್ನುವ ಮಾತಿನಲ್ಲಿ ಅತಿಶಯೋಕ್ತಿಯೇನಿರಲಾರದು.

ವಾಲ್ಮೀಕಿಋಷಿ ರಾಮಾಯಣಕಂಡಂತೆ ಸೀತಾಯಣಕಂಡಂತಿಲ್ಲ. ಆದರೆ ನಮ್ಮ ಗರತಿಯು ರಾಮಾಯಣಕ್ಕಿಂತ ಸೀತಾಯಣವನ್ನೇ ಹೆಚ್ಚಾಗಿ ಕಂಡಂತೆತೋರಿಸುತ್ತದೆ. ಆ ಮಾತು ಕೆಳಗೆ ಕಾಣಿಸಿದ ಪದ್ಯದಿಂದ ಸ್ಪಷ್ಟ ಆಗಿರುತ್ತದೆ.

ಅಡವಿ ಆರ್ಯಾಣದಾಗ ಹಡೆದಾಳ ಸೀತಮ್ಮ
ತೊಡಿಯ ತೊಳಿಯಾಕ ನೀರಿಲ್ಲ | ಹನುಮಂತ |
ಸೇತುಗಟ್ಯಾನ ಸಮುದರಕ ||

ಅತಿರಥನೆನಿಸಿದ ದಶರಥರಾಯನ ಸೊಸಿ, ರಾಮನ ನಿಕಟ ನೆರಳಾದ ಲಕ್ಷ್ಮಣನ ಅತ್ತಿಗೆ, ವಿಷ್ಣುವಿನ ಆರನೇ ಅವತಾರವೆನಿಸಿದ ಶ್ರೀ ರಾಮನ ಅರ್ಧಾಂಗಿಯಾದ ಸೀತಾದೇವಿಯ ಹೆರಿಗೆ ರಾಜಭವನದಲ್ಲಾಗದೆ, ಅರಣ್ಯದಲ್ಲಿ ಆದದ್ದೇ ಮೊದಲು ನೀಲಿಕೆಟ್ಟ ಮಾತು. ಹೆರಿಗೆಯಾದ ಬಳಿಕ ಆಕೆಯತೊಡೆ ತೊಳೆಯಲಿಕ್ಕೆ ನೀರಿಲ್ಲವೆಂದರೆ? ಪೃಥ್ವಿಯ ಮುಕ್ಕಾಲು ಭಾಗವನ್ನು ಆವರಿಸಿರುವ ಸಮುದ್ರಕ್ಕೆ ಸೇತುಕಟ್ಟಿದಹನುಮಂತನಂಥ ದೈತ್ಯ ಪರಾಕ್ರಮಿಯ ನೆರವುಳ್ಳ ಸೀತಾಮಾತೆಗೂ ಆ ದುರ್ದಶೆಯೇ? ಜಗತ್ತಿನ ದುಃಖದುಮ್ಮಾನಗಳನ್ನು ಇಷ್ಟೊಂದು ಸೂಕ್ಷ್ಮವಗಿ ನಿರೀಕ್ಷಿಸಿದ ಗರತಿ ದುಃಖ-ಸಂಕಟ, ಭಯ ಗಂಡಾಂತರಗಳನ್ನು ಅದೆಂತು ಲೆಕ್ಕಿಸಿಯಾಳು?

ಹಾವು ಅಂದರ ಜೀವ ಹರಣವ ಹಾರ್ಯಾವ
ಹಾವಲ್ಲ ಹಂಪಿ ವಿರುಪಾಕ್ಷಿ | ನಿನ ಮುಂದ |
ಹಾವಾಗಿ ಗಂಗಿ ಹರಿದಾಳ ||

ಹಾವೆಂದರೆ ಯಾರಿಗಾದರೂ ಹೆದರಿಕೆ, ಆದರೆ ಹಾವಿನಂತೆ ಹರಿವ ಗಂಗೆಯೆಂದರೆ ಅದೇತರ ಹೆದರಿಕೆ? ಬಾಳಿನಲ್ಲಿ ಅಡಿಗಡಿಗೆ ಬಂದೆರಗುವ ಎರಡುರ ತೊಡರುಗಳಿಗಾಲಿ, ದುಃಖ ಸಂಕಟಗಳಿಗಾಗಲಿ ಗರತಿ ಹೆದರಲಾರಳು. ಆಕೆ ಅಬಲೆಯೆನಿಸಿದರೂ ಧೀರತೆಯಿಂದ ಭಯವನ್ನು ಬಯಲುಗೊಳಿಸಿಕೊಳ್ಳಬಲ್ಲ ಸಬಲೆ. ಆದರೆ ಆಕೆಗಿರುವ ಅಂಜಿಕೆಯೇ ಬೇರೆ, ಕುಟುಂಬ ಸಂಸ್ಥೆಗೆ ಬಿರುಕು ಬೀಳದಂತೆ ಎಚ್ಚರವಹಿಸುವ ಸಂದರ್ಭದಲ್ಲಿ ಆಕೆ ಹಲವಾರು ಅಂಜಿಕೆಗಳನ್ನು ಉಳಿಸಿಕೊಂಡು ಬಂದಿದ್ದಾಳೆ. “ಚಿಂತಿ ಮಾಡಲಿ ಬ್ಯಾಡ ಛೀ ಹುಚ್ಚಿ ಹಡೆದವ್ವ | ಚಿಂತ್ಯಾಗ ಕಾಯಿ ಇಳಿತರ” ಎನ್ನುವುದರ ಮರ್ಮವರಿತಿದ್ದರೂ ಕುಶಲತೆಯಿಂದ ಕರ್ಮಮಾಡಿ ಅದನ್ನು ಯೋಗವಾಗಿ ಮಾರ್ಪಡಿಸಿಕೊಂಡಿದ್ದಾಳೆ. ಅಂಜಿಕೆಯೂ ಆಕೆಗೆ ಕರ್ಮಕೌಶಲ್ಯವೇ ಆಗಿದೆ.

ಅತ್ತಿಮಾವನಿಗಂಜಿ ಸುತ್ತೇಳು ನೆರಿಗಂಜಿ
ಮತ್ತನಲ್ಲನ ದನಿಗಂಜಿ | ನಡೆದರ |
ಎಂಥ ಉತ್ತಮರ ಮಗಳೆಂದ ||

ಹುಟ್ಟಿದ ಮನೆಗೆ ಶ್ರೇಯಸ್ಸು ತರುವುದಕ್ಕಾಗಿ “ಎಂಥ ಉತ್ತಮರ ಮಗಳು” ಎನಿಬೇಕಾಗಿದೆ ಅವಳಿಗೆ. ಆದ್ದರಿಂದ ಆಕೆ ಕುಟುಂಬ ಸಂಸ್ಥೆಯ ಸದಸ್ಯರಿಗಾಗಲಿ, ನೆರೆ ಹೊರೆಯವರಿಗಾಗಿಲಿ ಅಂಜುವುದು ಪುಕ್ಕತನದಿಂದಲ್ಲ ಅದು ಆಕೆಯ ಸದುವಿನಯ.

“ಸದುವಿನಯವೇ ಸದಾಶಿವನ ದಯೆಯಯ್ಯ” ಎನ್ನುವ ಶರಣರ ಸೂಳ್ ನುಡಿಯು ಆಕೆಯ ಪಾಲಿಗೆ ಒಳ್ನಡೆಯಾಗಿ ಪರಿಣಮಿಸಿದೆ.

“ಎನಗಿಂತ ಕಿರಿಯರಾರಿಲ್ಲವಯ್ಯ” ಎನ್ನವಲ್ಲಿ ಬಸವಣ್ಣನು ತನ್ನ ಕಿಗ್ಗುಳತನವನ್ನು ಕಂಡುಕೊಳ್ಳದೆ, ಜಗತ್ತು ಹಿರಿಯದು, ತಾನದರ ಮುಂದೆ ಕಿರಿಯ ಎನ್ನುವ ಭಾವವನ್ನೇ ಬಗೆದಿದ್ದನೆಂದು ಹೇಳಬೇಕು, ಗರತಿ ಅಂಜುವುದು ಹೆದರಿ ಬೆದರಿ ಮುದುರಿಯಾಗುವ ಮಾದಿರಯಲ್ಲ. ನಯ ವಿನಯಗಳ ಸಂಗಳಿಕ, ಗರತಿಯ ಮನವು ಪರಿಪಾಕಗೊಂಡಿದ್ದು, ಆಕೆಯ ಹೃದಯ ಸಿಹಿ ಮಾಧುರ್ಯವನ್ನು ಒಳಗೊಂಡಿದ್ದು. ಆಕೆಯಲ್ಲಿ ಕನಿಕರಗುಣವು ಕೆನೆಗಟ್ಟಿದೆ. ಕರಣಾಭಾವವು ಕೊನೆಮುಟ್ಟಿದೆ. ಇಲ್ಲಿ ಆಕೆ ತಮ್ಮನಿಗೆ ಹೇಳುವ ಬುದ್ಧಿವಾದವನ್ನಿಷ್ಟು ಕೇಳೋಣ –

ತಾಯವ್ವನ ಬೈಬ್ಯಾಡ ತಿಳಿಗೇಡಿ ನನತಮ್ಮ
ಭಾಳ ದಿನದಾಕಿ ಹಡೆದವ್ವಗ | ಬೈದರ |
ಭಾಳ ಮರುಗ್ಯಾಳ ಮನದಾಗ ||

ಇಷ್ಟಕ್ಕೆ ಮುಗಿಯದೆ, ಇನ್ನೂ ಮುಂದೆಸಾಗಿ ಅವ್ವನ ಹಿರಿಮೆ – ಗರಿಮೆಗಳನ್ನು ಮನಮುಟ್ಟುವಂತೆ ನಿರೂಪಿಸುತ್ತಾಳೆ.

ಗಂಡ ಸತ್ತವ್ವಗ ರಂಡಮುಂಡೆನಬೇಡ
ಕಂದನ ಹಿಡಿದು ತಪಹಾಳೆ | ಅವಳೀಗಿ |
ಗಂಗಾದೇವೆಂದು ಕರಿಬೇಕ ||

ಹೃದಯದಿಂದ ಹೊರಬಿದ್ದ ಈ ವಾಣಿ ನೇರವಾಗಿ ಹೃದಯವನ್ನು ತಲಪುಪುವುದರಲ್ಲಿ ಸಂಶಯವೇ ಇಲ್ಲ. ತಮ್ಮನ ಹೃದಯ ಪಲ್ಲಟಕ್ಕೆ ಅಕ್ಕನ ಈ ಹಾರ್ದಿಕಬೋಧೆ ತೀರ ನೇರವಾಗಿ, ಸಹಜ ಹಾಳತವಾಗಿದೆ.

ದುಃಖ ಸಂಕಟಗಳೇ ಬರದಿರಲೆಂದು ಗರತಿ ಹಾರಯಿಸಲಾರಳು. ಹಾಗೆ ಯಾವ ದೇವನನ್ನು ಪ್ರಾರ್ಥಿಸಲಾರಳು. ತೊಡಕು – ತೊಂದರೆಗಳನ್ನು ಎದುರಿಸುವ ಬಲನೀಡೆಂದು ಆಕೆ ಹಾರಯಿಸಿದ್ದಾಳೆ; ಸ್ತುತಿಸಿದ್ದಾಳೆ. ಅದು ವಾಸ್ತವಿಕದಾರಿಯೇ ಸೈ. ಬಡತನಕ್ಕೆ ಬೆದರದೆ, ಬಹುಮಕ್ಕಳ ಸಂಖ್ಯೆಗೆ ಸೊಪ್ಪು ಹಾಕದೆ, ಗುರುವಿನ ದಯೆಯಿಂದ ಅಗ್ನಿದಿವ್ಯವನ್ನು ಸಾಧಿಸಬಲ್ಲವಳೇ ಗರತಿ, ಹಲವು ಸಾರೆ ಗರತಿಯಲ್ಲಿ ಗಂಡಸಿನಲ್ಲಿಯೂ ಕಾಣಸಿಗದ ಧೈರ್ಯ, ಕೆಚ್ಚು ಇರುವುದನ್ನು ಕಾಣಬಹುದಾಗಿದೆ; ಮನಗಾಣಬಹುದಾಗಿದೆ. ಸದಾ ವೆಂಕಟರಮಣ ಎನ್ನುತ್ತಿರುವವರಿಗೆ ಸಂಕಟ ಗಳೇತಕ್ಕೆ ಬಂದಾವು? ಬಂದರೂ ಅವು ಸಂಕಟಗಳೆಂದು ಅದೇಕೆ ತೋರಿಸಿಕೊಂಡಾವು?