ರತ್ನಾಕರನ “ಭರತೇಶ ವೈಭವ” ಎಂಬ ಕಾವ್ಯದಲ್ಲಿ ಭರತೇಶ ರಾಜನು ಹಲವು ದಿನಗಳ ನಿರಾಹಾರ-ಉಪವಾಸಗಳಂಥ ಕಠೋರನೋಂಪಿಯನ್ನು ಕೈಕೊಂಡಾಗ, ಅವನ ಕೋಮಲ ಕಾಯರಾದ ಹೆಂಡಿರೂ ಪತಿಯೊಡನೆ ಉಪವಾಸ ವೃತವನ್ನು ಕೈಕೊಳ್ಳಲು ತವಕಿಸುವುದು ಕಂಡು, ಭರತೇಶನ ತಾಯಿಯು ಸೊಸೆಯರಿಗೆ “ಉಪವಾಸದಂಥ ಕಠೋರ ವೃತವನ್ನು ನೀವೇಕೇ ಕೈಕೊಂಡು ಬಳಲುವಿರಿ? ನಿಮ್ಮೆಲ್ಲರ ಪರವಾಗಿ ನಿಮ್ಮ ಪತಿ ಒಬ್ಬ ಮಾತ್ರ ವೃತ ಕೈಕೊಂಡರೆ ಸಾಕಲ್ಲವೆ? ಎಂದಾಗ ಎಳೆವರಿಯದ ಆ ಸೊಸೆಯಂದಿರು ಏನೆಂದು ಮರುನುಡಿದರು ಗೊತ್ತೆ?…

ಉದರ ಪೋಷಣಕಾಗಿ ಬಹು ಜನ್ಮ ಸಂದುದು,
ವಿದಾತಾತ್ಮ ಪೋಷಣಕಾಗಿ?”

ಈ ವೃತ್ತ ನೋಂಪಿಗಳನ್ನು ಕೈಕೊಳ್ಳಬೇಕಡವೇ?

ನಮ್ಮ ನಾಡ ಗರತಿಯು ಆತ್ಮಪೋಷಣಕ್ಕಾಗಿ ದಿನ ನಿತ್ಯದಲ್ಲಿ ಹಲವಾರು ಸಹಜ ಕ್ರಮಗಲನ್ನು ಅನುಸರಿಸುತ್ತ ಬಂದಿದ್ದಾಳೆ. ಬೆಳಗು ಮುಂಜಾನೆ ನಿದ್ರೆಯಿಂದ ಎಚ್ಚತ್ತ ಕೂಡಲೇ ಮೊಟ್ಟ ಮೊದಲಿಗೆ ಭೂಮಿತಾಯಿಯನ್ನು ತಪ್ಪದೆ ನೆನೆಯುತ್ತಾಳೆ.

ಏಳುತಲೆ ಎದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗಿ ಬೆಳೆಯೋಳೆ | ಭೂಮಿ ತಾಯೆ
ಎಂದ್ದೊಂದು ಗಳಿಗಿ ನೆನೆವೆನು ||

ಆ ಬಳಿಕ – ಶರಣೆಂದೆ ಶಿವನಿಗೆ ಶರಣೆಂದೆ ಗುರುವಿಗೆ

ಶರಣೆಂದು ಶಿವನ ಮಡದಿಗೆ | ಗೌರಮಗೆ
ಶರಣೆಯ ಕಲ್ಲು ಹಿಡಿದೇನು ||
ಕಲ್ಲೀಗಿ ಮುಕ್ಕುಹಾಕಿ ಎಲ್ಲ ದೇವರ ನೆನೆದೆ
ಅಕ್ಕಮಹಾದೇವಿಯ ಅರಸರ | ಮಲ್ಲಯ್ಯನ |
ಮಕ್ ಹಾಕು ಮೊದಲೆ ನೆನೆದೇನ ||

ಪ್ರಾರ್ಥನೆಯಿಂದ ಪ್ರಾರಂಭವಾದ ದೈನಿಕ ಜೀವನವು, ಹಲವು ಉದಾತ್ತ ವಿಚಾರಗಳನ್ನು ಮೆಲಕು ಹಾಕುತ್ಕ, ಕೈಕೊಂಡ ಕಾಯಕವನ್ನು ನಿಸ್ತರಿಸುವ ಕ್ರಿಯೆಯು ಸಹಜ ಯೋಗವೆನಿಸುವಂತಿದೆ.

ಕರುಣ ಬಂದರೆ ಕಾಯೋ ಮರಣಬಂದರೆ ಒಯ್ಯೋ
ಕರುಣಿ ಕಲ್ಯಾಣ ಬಸವಣ್ಣ | ಕಾಶಿಲಿಂಗ
ಕಡೆತನಕಾಯೋ ಅಭಿಮಾನ ||

ಕಾಪಾಡುವುದೂ ಕೊಲ್ಲುವುದೂ ದೇವನಿಚ್ಛೆ, ಗರತಿ ಯಾವುದಕ್ಕೂ ಸಿದ್ದಳು. ಬದುಕುವುದೇ ಆದರೆ ಅಭಿಮಾನವನ್ನು ಉಳಿಸಿಕೊಂಡು ಬದುಕಬೇಕು. ಅಂತೆಯೇ “ಕಡೆತನ ಕಾಯೋ ಅಭಿಮಾನ” ಎಂದು ಗರತಿ ಮೊರೆಯಿಡುತ್ತಾಳೆ. “ನಾ ಮಾಡೇನೆಂಬ ಅಳವಿಲ್ಲ, ಮಲ್ಲಯ್ಯ ನೀ ನಡಿಸು ನನ್ನ ಸರುವೆಲ್ಲ” ಎಂದು ಮೊರೆಯುತ್ತಾಳೆ.

ಕೊಡುವ ದೇವನಿಗೇ ಬೇಡುವಳಲ್ಲದೆ ತನ್ನಂತೆ ಕೈಯೊಡ್ಡುವ ಬಿಕನಾಶಿಗೆ ಗರತಿ ಬೇಡುವವಳಲ್ಲ. ಜೋಗದವರ ಮನೆಗೆ ಜೋಗದವರು ಹೋಗಿ ಪ್ರಯೋಜನವಿಲ್ಲವೆಂದು ಬಗೆಯುತ್ತಾಳೆ. ಆಕೆ ಗಟ್ಟಿಗಟ್ಟಿಯಾಗಿ ತಿಳಕೊಂಡುಬಿಟ್ಟಿದ್ದಾಳೆ. ಏನೆಂದರೆ –

ಮಂದೇನು ಕೊಟ್ಟೀತ, ಮನವೇನು ದನಣಿದೀತ
ಮುಂಜಾನದಾನ ಗಿರಿಮಲ್ಲ | ಕೊಟ್ಟರೆ
ಮನಿತುಂಬಿ ನಮ್ಮ ಮನತುಂಬಿ |.

ಕೈತುಂಬ ಕೊಡುವವರೂ, ಉಡಿತುಂಬ ನೀಡುವವರು ಸಿಕ್ಕಾರು. ಆದರೆ ಮನೆತುಂಬುವಷ್ಟು, ಮನ ತುಂಬುವಷ್ಟು ನೀಡುವ ಮಹಾದಾನಿ ದೇವನೊಬ್ಬನೇ ಎಂಬುದನ್ನು ಗರತಿ ಯಾವ ಕಾಲಕ್ಕೂ ಮರೆಯಲಾರಳು. ಆಕೆಗೆ ಬಂಗಾರದ ವಸ್ತು ಬೇಡ, ಸಿಂಗಾರದ ಒಡವೆ ಬೇಡ, ಮುಡಿಯುವದಕ್ಕೆ ಹೂ ಕೇದಿಗೆ ಬೇಡ, ಶರಣರ ನೆನಹೇ ಆಕೆಗೆ ಸಿರಿ-ಸಿಂಗಾರಗಳನ್ನೆಲ್ಲ ಒದಗಿಸುತ್ತದೆ.

ಶರಣರ ನೆನೆದರ ಸರಗೀಯ ಇಟಾಂಗ
ಹವಳ ಮಲ್ಲಿಗಿ ಮುಡಿದಂಗ | ಕಲ್ಯಾಣ
ಶರಣರ ನೆನೆಯೊ ನನ ಮನವೇ ||

ನಮ್ಮ ಗರತಿಯ ಈ ಹಾರಯಿಕೆಗೂ, ರತ್ನಾಕರ ಕವಿ ಹೇಳುವ ತನ್ನ ಅನುಭಾವಕ್ಕೂ ಏನು ಅಂತರವಿದೆ ಹೇಳಬಲ್ಲೆವೇ? ಆ ಕವಿಯ ಅನುಭಾವ ಎಂಥದೆಂದರೆ-

ಸಿರಿಗೇನು ಕಡಿಮೆ ಸಿಂಗರಕೇನು ಕಡಿಮೆ ಸೌಂ
ದರಕೇನು ಕಡಿಮೆ ನೀನಿರಲು |
ಎರವಿಲ್ಲದೆನ್ನಂತರಂಗದೊಳಿರುಪ್ರಭು
ಧುರನೆ ಚಿದಂಬರ ಪುರುಷ ||

ಅದೇ ಅನುಭಾವವನ್ನು ಹರಿಹರ ಕವಿಯು ಬೇರೊಂದು ರೀತಿಯಲ್ಲಿ ಹೇಳುವನು. ಹೇಗೆಂದರೆ – “ನಿನ್ನ ಕೆರ್ಪಂ ಪಿಡಿದವನ ಚರಣ ಆರ ಮುಕುಟದೊಳು ಬೀಳದು ದೇವಾ?” ಪರಮಾತ್ಮನ ಕಾಲಕೆರಹುಗಳನ್ನು ಗಟ್ಟಿಯಾಗಿ ಹಿಡಕೊಂಡ ಭಕ್ತನ ಚರಣಗಳು, ರಾಜನ ಕೀರಿಟದ ಮೇಲೆ ಬೀಳುವಂತೆ ಅಂದು ರಾಜಕೀರಿಟಕ್ಕಿಂತ ಉನ್ನತಸ್ಥಾನದಲ್ಲಿ ಭಕ್ತನ ಚರಣಗಳು ನಿಲ್ಲುವವು ಎಂದರ್ಥ.

ದೇವ ನಾಮವನ್ನು ಗರತಿ ತನ್ನ ನಾಲಗೆಯ ಮೇಲೆ ನಿತ್ಯಬಿತ್ತಿ ನಿತ್ಯ ಬೆಳೆಯುವ ಕೃಷಿ ಕಾಯಕದವಳು. ಅಂತೆಯೇ ಆಕೆ ಸಾರಿ ಸಾರಿ ಹೇಳುತ್ತಾಳೆ.

ನಾರಾಯಣಾ ನಿನ್ನ ನಾಮದ ಬೀಜವ
ನಾನೆಲ್ಲಿ ಬಿತ್ತಿ ಬೆಳೆಯಲಿ | ನಿನ್ನ ನಾಮ |
ನಾಲೀಗಿ ಮೇಲೆ ಬೆಳೆದೇನೋ ||

ಉಳ್ಳವರು ಶಿವಾಲಯ ಮಾಡುವಂತೆ, ನೆಲವಿದ್ದವರೂ ತೋಟ ಮಾಡುವರು. ಆದರೆ ಬಡವಿಯಾದ ಗರತಿಗೆ, ನಾಲಗೆಯನ್ನೇ ದೇವನಾಮವನ್ನು ಬಿತ್ತಿಬೆಳೆಯುವ ಹೊಲ ಮಾಡಿಕೊಳ್ಳಲು ಮಾತ್ರ ಸಾಧ್ಯವಿದೆ. ಆಕೆಯ ನಿಲುಮೆ ಪ್ರಭುದೇವರ ಈ ಸಿರಿ ನುಡಿಗೆ ಸಾಟಿಯಾಗಿರುವುದೆಂದೇ ಹೇಳಬಹುದಾಗಿದೆ. ಆ ಸಿರಿನುಡಿಯಾವುದೆಂದರೆ

ಹುಟ್ಟಿದ ಗಿಡುವಿನ ಬಿಟ್ಟೆಲೆಯ ತಂದು
ಮುಟ್ಟದೆ ಪೂಜಿಸು ನಮ್ಮ ಗುಹೇಶ್ವರನ

ಆಪೂಜೆಯ ಫಲ ಪ್ರಯೋಜನ ಏನೆಂಬುದನ್ನೂ ಹೇಳದೆ ಬಿಟ್ಟಿಲ್ಲ ಪ್ರಭುದೇವರು! ಅದು ಕೆಳಗೆ ಕಾಣಿಸಿದ ಅವರದೆ ವಚನದಲ್ಲಿ ಸ್ಪಷ್ಟಗೊಳಿಸಲಾಗಿದೆ.

ಊರದ ಚೇಳಿಂಗೆ ಏರದ ವಿಷಕ್ಕೆ
ಜಗವೆಲ್ಲ ಹೊರಳಿ ಉರಳಿ ನೆರಳಾಡುತ್ತಿದೆ

ಅದರ ನಿವಾರಣೆಯೇ ಆ ಪೂಜೆಯ ಪರಮಫಲ; ಪ್ರಯೋಜನ. ಅದರಂತೆ ಗರತಿಯು ನಡೆಯಿಸುವ ನಾರಾಯಣ ನಾಮದ ಕೃಷಿಯೂ ಆ ಪರಮ-ಫಲ, ಪ್ರಯೋಜನಗಳನ್ನು ಒದಗಿಸುವುದು ಸಾಮಾನ್ಯ ವಿಷಯವಲ್ಲ.

ಎಚ್ಚರಿಕೆಯಲ್ಲಿ ನಡೆಯಿಸುವ ದೇವನಾಮದ ಅನುಸಂಧಾನವನ್ನು ಗರತಿಯು ನಿದ್ರೆಯಲ್ಲಿಯೂ ನಡೆಯಿಸುವುದು ಆಕೆಯ ಅಂತರ್ಯದ ಅರುಹಿನ ದ್ಯೋತಕವೇ ಆಗಿದೆ.

ನಿದ್ದಿಗಣ್ಣಿಲಿ ಕಂಡೆ ಸುದ್ದ ಗುರುವಿನ ಪಾದ
ಎದ್ದು ನೋಡಿದರ ನಿರಬಯಲು | ಗುರುವಿನ
ರುದ್ರರನ ಮಹಿಮೆ ತಿಳಿಯಾವ ||

ತನ್ನ ದೈವತವು ಹೂವಿನಲ್ಲಿ ಹುದುಗಿರುವುದನ್ನು, ಮಾಲೆಯಲ್ಲಿ ಮಲಗಿರುವುದನ್ನು, ಮೊಗ್ಗೆಯಲ್ಲಿ ಕಣ್ಣು ತೆರೆದಿರುವುದನ್ನು ಗರತಿ ಕಾಣಬಲ್ಲವಳಾಗಿದ್ದಾಳೆ. ಆಕೆ ನಿದ್ರೆ ಎಚ್ಚಿರುಗಳ ಆಚೆಯಲ್ಲಿರುವ ಅರುಹಿನಲ್ಲಿ ನೆಲೆಸಿ ನಿಂತಿರುವಳೆಂದು ಹೇಳಬಹುದಾಗಿದೆ.

ತನ್ನ ಮನಕ್ಕೆ ಬಂದ ದೈವತವನ್ನು ನೇರವಾಗಿ ಸಂಧಿಸುವ ಹಾಗೂ ತೋರವಾಗಿ ಸಂಬಂಧಿಸುವ ಸಂದರ್ಭವನ್ನು ಆಕೆ ಅರಿತುಕೊಂಡಿದ್ದಾಳೆ. ಪ್ರಕೃತಿಯೆಲ್ಲ ತಮ್ಮಣಿಗೊಂಡಾಗ ಪುರುಷನು ಜಾಗ್ರತನಾಗಿರುವ ಸುಸಂಧಿಯನ್ನು ಆಕೆ ವ್ಯರ್ಥವಾಗಿ ಕಳಕೊಳ್ಳುವದಿಲ್ಲ. ಅಂಥ ಪ್ರಸಂಗದಲ್ಲಿ ದೇವಸ್ಮರಣೆಗೆ ತೊಡಗಿ ಅಂತಃ ಪುರುಷನ ಜಾಗ್ರತಿಯನ್ನು ಅಂತರಾಳದಲ್ಲಿ ಅನುಭವಿಸುವುದು ಸಣ್ಣ ಮಾತೆ? ಆಕೆ ಹೇಳುತ್ತಾಳೆ.

ತಾಯವ್ನ ನೆನೆಯೂದು ಯಾಯಾಳಿಯಾ ಹೊತ್ತು
ಊರೆಲ್ಲ ಉಂಡು ಮಲಗಾನ | ಬೆಳಿಚುಕ್ಕಿ |
ಹೊಂಡಾಗ ಅವಳ ನೆನೆದೇನ ||

ಊರೆಲ್ಲ ಉಂಡು ಮಲಗಿದ ಬಳಿಕ ಉಂಟಾಗುವ ಗಾಢ ಪ್ರಶಾಂತತೆಯಂತೆ, ಬೆಳ್ಳಿಚುಕ್ಕಿ ಹೊರಡುವಾಗ ಹರಡಿರುವ ಗೂಢ ಪ್ರಶಾಂತತೆ ಆಕೆಯ ಅಂತರಂಗವನ್ನು ಆಕರ್ಷಿಸುತ್ತದೆ.

ಮೂಗುತಿಯನ್ನು ಮೆಚ್ಚಿಕೊಂಡ ಗರತಿ, ಮೂಗು ಮಾಡಿದವನನ್ನು ಅದಕಿಕಂತ ಮಿಗಿಲಾಗಿ ಮೆಚ್ಚಿಕೊಂಡಿದ್ದಾಳೆ. ಅಂಥ ಮೂಗಿಗೆ ಮೂಗುತಿ ಒದಗಿಸಿಕೊಟ್ಟ ಮುತ್ತಯ್ಯನನ್ನು ಮರೆಯುವಂತಿಲ್ಲ. ಮೂಗುತಿ, ಮೂಗು, ಮುತ್ತಯ್ಯ ಇದ್ದರೂ ಮುತ್ತಯ್ದೆತನವಿಲ್ಲದಿದ್ದರೆ ಪ್ರಯೋಜನವೇನು? ಮುತ್ತಯ್ದೆತನವಿದ್ದರೂ ಮಕ್ಕಳಿಲ್ಲದ ಬಂಜೆಯಾಗಿ ಉಳಿದರೆ ಅದೆಲ್ಲವೂ ನಿಷ್ಪ್ರಯೋಜನವೇ ಸರಿ.

ಮುತ್ತಿನ ಮೂಗುತಿ ಮುತ್ಯಾ ಮಾಡಿಸಿಕೊಟ್ಟ
ಮುತ್ತಯ್ದೆತನವ ಶಿವಕೊಟ್ಟ | ಮೇಲಿರುವ |
ಮುಕ್ಕಣ್ಣ ಕೊಟ್ಟ ಮಕ್ಕಳನ ||

ಮುತ್ತಯ್ದೆತನ ಕೊಟ್ಟ ದೈವತಕ್ಕೆ ಶಿವ ಎಂದ ಗರತಿ, ಮಕ್ಕಳನ್ನು ದಯಪಾಲಿಸಿದ ದೈವತಕ್ಕೆ ಮಕ್ಕಣ್ಣನೆಂದು ಕರೆದಳು. ಎರಡು ಕಣ್ಣುಳ್ಳವರಾರೂ ಮಕ್ಕಳನ್ನು ಕೊಡಲಾರರು. ಆ ಕೊರತೆ, ಮೂರು ಕಣ್ಣುಳ್ಳವನಿಗೆ ಮಾತ್ರ ಕಾಣಿಸಬಲ್ಲದು. ಮುಕ್ಕಣ್ಣನಿಗೆ ಕೃಪಾಶಕ್ತಿಯೂ ಇರುವುದರಿಂದ ಮಕ್ಕಳನ್ನು ಕರುಣಿಸುವನು. ಅದು ಅವನಿಗೆ ಸಹಜ ಕ್ರಿಯೆ ಆಗಿದೆ.

ಇವೆಲ್ಲಕ್ಕೂ ಮಿಗಿಲಾಗಿ ಪತಿಯ ಮೇಲೆ ಭಕ್ತಿಯಿರದಿದ್ದರೆ, ಕುಟುಂಬ ಸಂಸ್ಥೆಯ ಏಕತೆಗೆ ದಾರಿಯಿಲ್ಲದಾಗುವದು. ದೇವನೊಲುಮೆಯೂ ದೂರನಿಲ್ಲುವದು.

ಪೂಜಿ ಮಾಡಿದರೇನ ಪ್ರತಿ ಏರ್ಸಿದರೇನ
ಪತಿ ಮೇಲೆ ಭಕ್ತಿಯಿರದಿದ್ದ | ಗೆಳದೆವ್ವ
ಮಾದೇವ ಹ್ಯಾಂಗ ಒಲಿದಾನು |

ಪತಿಯ ಮೇಲೆ ಸತಿಗೆ, ಸತಿಯ ಮೇಲೆ ಪತಿಗೆ ಭಕ್ತಿಯೋ ಪ್ರೀತಿಯೋ ಇರುವದು ಉಭಯರಿಗೂ ಕಲ್ಯಾಣಕರ. ಅದು ವಾಸ್ತವಿಕವೂ ಆಗಿದೆ. ಅಲೌಕಿಕವನ್ನು ನಿರ್ವಹಿಸಿಕೊಂಡು ಆತನ ದಾರಿಯನ್ನು ಸುಗಮಗೊಳಿಸಬೇಕು. ಅದೊಂದು ಅಲೌಕಿಕಕ್ಕೆ ಹಿರಿದಾದ ಸಹಾಯವು ಆಗಿದೆ. ಆವಾಗ ಪತಿಯು ಗಳಿಸಿದ ಆಧ್ಯಾತ್ಮಿಕ ಸಂಪತ್ತಿಗೆ ಸತಿಯು ಸಹಜವಾಗಿಯೇ ಸಹಭಾಗಿಯಾಗುವಳು. ಶ್ರೀರಾಮಕೃಷ್ಣ ಪರಮಹಂಸರು ಹೇಳುವಂತೆ ಕಿಸೆಯೊಳಗಿನ ಅಡಿಕೆಹೊಳನ್ನು ತೆಗೆದುಕೊಂಡುವುದಕ್ಕಿಂತ ಸುಲಭವಾಗಿ, ಸಹಜವಾಗಿ, ಪತಿಯು ತಾನು ಗಳಿಸಿದ ಆಧ್ಯಾತ್ಮಕ ಸಂಪತ್ತನ್ನು ಸತಿಗೆ ಪಾಲುಗೊಡಲು ಸಾಧ್ಯ. ಅಂಥ ಸುಪ್ರಸಂಗವನ್ನು ಗಳಿಸಿದ ದಾಂಪತ್ಯ ಜೀವನವೇ ಧನ್ಯ. ಪತಿಯೇ ದೇವರೆನ್ನುವುದು ಅಲ್ಲಿಯೇ ಸಾರ್ಥಕಗೊಳ್ಳುತ್ತದೆ. ಪತಿಯ ಮೇಲಿನ ಭಕ್ತಿಯೆನ್ನುವುದು ಅಲ್ಲಿಯೇ ಒಪ್ಪುಗೊಳ್ಳುತ್ತದೆ.

ಕುಟುಂಬ ಸಂಸ್ಥೆಯಲ್ಲಿ ನಾಯಕ-ನಾಯಕಿ ಪಾತ್ರವಹಿಸಿದ ದಂಪತಿಗಳು, ಉದರಪೋಷಣವನ್ನು ಗಮನಿಸುವುದು ಅನಿವಾರ್ಯವಾದರೂ, ಆತ್ಮ ಪೋಷಣವನ್ನು ಲೆಕ್ಕಿಸುವುದು ಅದಕ್ಕಿಂತ ಹೆಚ್ಚು ಅನಿವಾರ್ಯವಾಗಿದೆ. ಅಂಥ ಆದರ್ಶವನ್ನು ಗರತಿಯು ಕಣ್ಣ ಮುಂದೆ ಇರಿಸಿಕೊಂಡಿದ್ದು ನಿಚ್ಚಳವಾಗಿ ಕಂಡುಬರುತ್ತದೆ.