ಸಮೃದ್ಧವಾದ ದಾಂಪತ್ಯ ಜೀವನವೊಂದು ಕೊಡ ಹಾಲು ಇದ್ದಂತೆ. ಆ ಹಾಲಿನಲ್ಲಿ ಒಂದೇ ಒಂದು ಉಪ್ಪಿನ ಹರಳು ಬಿದ್ದರೆ, ಅದೆಲ್ಲ ಕೆಟ್ಟು ವಿಷವಾಗುವುದು. ದಾಂಪತ್ಯ ಜೀವನದ ಕೊಡ ಹಾಲು ಕೆಡಿಸುವ ಉಪ್ಪಿನ ಹರಳು ಯಾವುದೆಂದರೆ ಗಂಡನಲ್ಲಿರುವ ಹೊರಬುದ್ದಿಯ ಹವ್ಯಾಸ. ಅದು ನಿಜವೋ ಹಾರುಸುದ್ದಿಯೋ – ಎಂಬುದನ್ನು ಗೃಹಿಣಿ ಹಲವು ವಿಧದಲ್ಲಿ ಪರೀಕ್ಷಿಸುವಳು. ದುರ್ವಾಸನೆ ಮೂಗಿಗೆ ಬಡಿಯುವುದು. ಗಂಡನನ್ನು ಸರಿದಾರಿಗೆ ತರದೆ ಬಿಡುವುದಿಲ್ಲವೆಂದು ಹೂಣಿಕೆ ತೊಡುವಳು. ಆ ಹೂಣಿಕೆಯನ್ನು ಕೇಳಿದರೆ ಎದೆ ನಡುಗುವುದು.

ಆರ್ಯಾಣದಡವ್ಯಾಗ ಯಾರಾಣಿ ಕೊಡಲೆವ್ವ
ಸೂರ್ಯ ನಿನ್ನಾಣಿ ಶಿವನಾಣಿ | ಕೊಟ್ಟರ
ಆರ್ಯಾಣ ಗೆದ್ದು ಬರುವೇನ ||

ಅತ್ತೆ, ಮಾವ, ಭಾವ ಮೊದಲು ಮಾಡಿಕೊಂಡು ಮನೆತನವೇ ಸುಖದ ನೆಲಾಯಗಿರಲು ಪತಿದೇವರಿಗೆ ಈ ದೆವ್ವ ಹೇಗೆ ಬಡಕೊಂಡಿತು? ಮುಂಬೆಳಗಿನಲ್ಲಿ ದಿನತಪ್ಪದೆ ಹಾರಯಿಸುತ್ತಿದ್ದ ಪವಿತ್ರ ಹಾರಯಿಕೆಗೊಂದು ನುಸಿ ಹಿಡಕೊಂಡಿತೇ? ಎಂದೇನೇನೋ ಯೋಚನೆಯಲ್ಲಿ ತೊಡಗುವಳು.

ಅತ್ತೆ ಅತ್ತೀಕಾಯಿ ಮಾವ ಮಲ್ಲಿಗೆ ಹೂವ
ಭಂಗಾರ ಕೋಲ ಹಿರಿಭಾವ | ನನ ಮನಿಯ |
ಅರಿಸಿಣ ಕೆನೆಯು ಅರಸರು ||

ಎನ್ನುವ ರೀತಿಯಲ್ಲಿ ಕಂಗೊಳಿಸುವ ಚೆಂಗಳಸವೇ ಜೋಲಿಟ್ಟಿತಲ್ಲ ಎಂಬ ಕಳವಳಕ್ಕೀಡಾಗಿದ್ದರೂ ಎದೆಗೆಟ್ಟಿರಲಿಲ್ಲ. ಹಿಂದೊಮ್ಮೆ ತನ್ನ ಔದಾರ್ಯವನ್ನು ಕೊಚ್ಚಿಕೊಳ್ಳುವ ಸಲುವಾಗಿ ಆಡಿದ ಮಾತು ನೆನಪಾದರೆ ಅವಳಿಗೇ ನಾಚಿಕೆಯನಿಸುತ್ತಿರಬಹುದು.

ಗಂಡ ಪಂಡಿತರಾಯ ರಂಡೀಯ ಮಾಡಿದರ
ಭಂಡ ಮಾಡವರ ಮಗಳಲ್ಲ | ಕೊರಳಾನ
ಗುಂಡು ಬೇಡಿದರ ಕೊಡುವೆನ ||

“ಅತ್ತೆ ಕಲಿಸಿದ ಕಳವು, ಗಂಡ ಕಲಿಸಿದ ಹಾದರ” ಎನ್ನುವ ಗಾದೆ ವೇದಕ್ಕೆಸಮಾನವಾಗಿ ನಿಂತಿರುವಾಗ ಅದನ್ನು ಮಾರ್ಪಡಿಸುವ ಹಾಗೂ ಬೇರ್ಪಡಿಸುವ ಪ್ರಸಂಗ ಬಂದೀತೆ? ರಂಡಿ ಮಾಡುವ ಗಂಡನಿಗೆ ಕೊರಳೊಳಗಿನ ಗುಂಡು ಕೊಟ್ಟು ಉತ್ತೇಜಿಸ ನಿಂತ ಹೆಂಡತಿ ಗಂಡನಿಗೆ ಪರ್ಯಾಯದಿಂದ ಹೊರಬುದ್ದಿಯನ್ನು ಕಲಿಸಿದಂತಾಗುವುದಿಲ್ಲವೇ?

ಎಲ್ಲಿ ಹೋಗಿದ್ದಿ ನನ್ನ ಮಲ್ಲಿಗೆಂಥರಾಯಾ
ಎಲ್ಲಾರು ನನ್ನ ಬಯ್ದಾರು | ಆಕತಿಯ |
ನಿಲ್ಲಿಸಿ ಕೇಳು ನಿನ ಕುದರೀಗೆ |

ಇದರಲ್ಲಿ ಬರುವ “ಆಕತಿ” ಯಾವುದಿರಬೇಕು? “ಎಲ್ಲಾರು ನನ್ನ ಬಯ್ದಾರು” ಎಂದು ಹೇಳಿಕೊಳ್ಳುವ ಘಟನೆ ಎಂಥದಿರಬೇಕು? ಗಂಡಪಂಡಿತರಾಯನ ಭಂಡಲೀಲೆಯೇ ಇರಬಹುದೆಂದು ಯಾರಿಗಾದರೂ ತೋರುತ್ತದೆ. ಚಂಚಲ ಮನಸ್ಸಿನ ಹೊಂಚಿನ ದೃಷ್ಟಿಯನ್ನು ಗಂಡನಲ್ಲಿ ಎಂದೋ ಕಂಡಿದ್ದಳು ಹೆಂಡತಿ. ಹೆಚ್ಚಾಗಿ ಮನೆಯಲ್ಲಿಯೇ ಮಡಗುವ ಮಡದಿಯಾದರೊ ಹಾರು ಹಕ್ಕಿಯ ಪುಚ್ಚ ಎಣಿಸಬಲ್ಲ ಚಾಣಾಕ್ಷಳಾಗಿರುತ್ತಾಳೆ. ನೀರಲ್ಲಿ ಹರಿದಾಡುವ ಮೀನಿನ ಹೆಜ್ಜೆಯನ್ನು ಗುರುತಿಸಬಲ್ಲ ಚತುರೆಯಾತ್ತಾಳೆ ಆಕೆ.

ಕಾಗೀಗಿ ಕಣ್ಣಿಟ್ಟ ಕರಿಯ ಹುಬ್ಬಿನ ಜಾಣ
ಮಾವಿನ ಹಣ್ಣು ಮನಿಯಾಗ | ಇಟಗೊಂಡು |
ನೀರಲಕ್ಯಾಕ ನೆದರಿಟ್ಟಿ ||

ಹೇಳಿಕೇಳಿ ಅವನು ಕರಿಯ ಹುಬ್ಬಿನ ಜಾಣ. ಕಾಗಿಗೇ ಕಣ್ಣಿಡತಕ್ಕವನು. ಮಾವಿನ ಹಣ್ಣಿಗಿಂತ ನೀರಲಹಣ್ಣೇ ಅವನಿಗೆ ಆಗಿ ಬರುತ್ತದೆ. ಹೆರವರ ಹೆಣ್ಣಿಗಾಗಿ ಆ ಜಾಣ ಹೊರಗೆ ಮಲಗ ತೊಡಗಿದಾಗಲೇ ಕೈ ಹಿಡಿದವಳು ಕಳವಳಕ್ಕೀಡಾದಳು. ಅದನ್ನು ಇನ್ನಾರ ಮುಂದೆ ತೋಡಿಕೊಳ್ಳುವುದು? ನಡೆಪಥದಲ್ಲಿ ತಾಯಿಯೇ ಆಗಿರುವ ಹಿರಿಯಮ್ಮನ ಮುಂದೆ ತನ್ನ ಹೊಟ್ಟೆಯೊಳಗಿನ ಸಂಕಟವನ್ನು ಬಿಚ್ಚಿಡಲು ಆಕೆ ಸಾಂತ್ವನ ಪಡಿಸಿದ್ದು ಹೇಗೆಂದರೆ –

ಪರಿಮಳದರಸರು ಪರನಾರಿಗ್ಹೋದರ
ಮನಿ ಮಡದಿ ಬಾಯಿ ಬಿಡಬ್ಯಾಡ | ತಾವ್ತಮ್ಮ
ಮನಹೇಸಿ ಮನಿಗಿ ಬರತಾರ ||

ಪರಿಮಳದರಸರು ಮನಹೇಸಿ ಮನೆಗೆ ಬರುವುದು ನಿಶ್ಚಿತವಾಗಿ ಸಾಧಿಸುವ ವಿಷಯವಲ್ಲ. ನಿರ್ಧನನಾದ ನಂತರ ಜ್ಞಾನ ಬಂದು ಉಪಯೋಗವೇನು? ಹೇಳಿ ಕೇಳಿ ಅದು ಮುಗಿಲಮೇಲಿನ ಚಿಕ್ಕೆ. ರಾತ್ರಿಕಾಲದಲ್ಲಿ ಮೂಡಿದರೆ ಮಾತ್ರ ಕಣ್ಣಿಗೆ ಬೀಳಬಲ್ಲದು. ಹಗಲು ಮೂಡಿ ಪ್ರಯೋಜನವೇನು?

ಮುಗಿಲಮ್ಯಾಲಿನ ಚಿಕ್ಕಿ ಹಗಲು ಮೂಡಿದರೇನ
ಅಗಲಿ ಇರುವವರ ಗೊಡವೇನ | ಮಾಣಿಕ |
ಹಾವಿನ ಬದಿಲಿದ್ದು ಫಲವೇನ ||

ಎಂದು ನಿಟ್ಟುಸಿರಿಡುವಳು. ಮಾಣಿಕವಾದರೇನಾಯಿತು. ಹಾವಿನ ಬಳಿಯಲ್ಲಿದೆಯಲ್ಲ! ಹೊರಬುದ್ಧಿಯ ಸವಿಗಂಡವನು ಸರಿದಾರಿಗೆ ಬರುವುದೇ ದುಸ್ಸಾಧ್ಯ. ಸರಿದಾರಿಗೆ ಬರುವ ಹೊತ್ತಿಗೆ ಇಳಿವಯಸ್ಸಾಗಿರುತ್ತದೆ. ಸಿರಿವಂತನಿಗೆ ನಿರ್ಧನತೆಯುಂಟಾಗಿರುತ್ತದೆ. ಮೈಯಲ್ಲಿ ಹಸಿ, ಕಿಸೆಯಲ್ಲಿ ಬಿಸಿಯಿರುವವರೆಗೆ ಸೂಳಿಯ ಸಾನ್ನಿಧ್ಯ ಕಳಕೊಳ್ಳುವಂತಿಲ್ಲ.

ಸೂಳೀಗಿ ಹೋಗವನ ಸುಲಿದು ಮಟ್ಟೀಕಟ್ಟಿ
ಊರಹೊರಗವನ ಹೆಡಮುರಗಿ | ಕಟ್ಟಿದರ
ಸೂಳೆಬ ಶಬ್ದ ಬಿಡುವಲ್ಲ ||

ಹೊರಬುದ್ಧಿಯಲ್ಲಿ ಮೂರು ನಿಲುಮೆಗಳಿರುತ್ತವೆ. ಮೊದಲ ನಿಲುಮೆಯಲ್ಲಿ ಗಂಡಸನೇ ಸೂಳೆಯನ್ನು ಹಿಡಿದಿರುತ್ತಾನೆ. ಆಗ ತಪ್ಪಿಸಿಕೊಳ್ಳಬೇಕೆನ್ನುವ ಬುದ್ಧಿಬಂದರೆ ಸಹಜವಾಗಿ ಸಾಧ್ಯವಾಗುತ್ತದೆ. ಯಾಕೆಂದರೆ ಸೂಳೆಯನ್ನು ಹಿಡಿದವನೇ ಗಂಡಸು. ಹಿಡಿದವನು ಬಿಡುವುದು ಸುಲಭ, ಸಹಜ. ಎರಡನೇ ನಿಲುವಿನಲ್ಲಿ ವಿಟನು ಸೂಳೆಯನ್ನೂ, ಸೂಳೆ ವಿಟನನ್ನೂ ಹಿಡಿದಿರುತ್ತಾರೆ. ಆವಾಗ ಬಿಡಿಸಿಕೊಳ್ಳುವುದಕ್ಕೆ ಬಿಗಿಯೆನಿಸುವುದು. ವಿಟ ಬಿಟ್ಟರೂ ಸೂಳೆ ಹಿಡಿದಿರುತ್ತಾಳೆ! ಇನ್ನು ಮೂರನೇ ನಿಲುಮೆಯಲ್ಲಿ ವಿಟನ ಕೈ ಸೋತದ್ದರಿಂದ ಸೂಳೆಯನ್ನು ಬಿಟ್ಟಿರುತ್ತಾನೆ. ಆದರೆ ಸೂಳೆ ಮಾತ್ರ ಆತನನ್ನು ಗಟ್ಟಿಯಾಗಿ ಹಿಡಿದಿರುತ್ತಾಳೆ. ಆವಾಗ ಗಂಡಸು ಅಲ್ಲಿಂದ ಪಾರಾಗಲಾರನು. ನಿರ್ಜೀವ-ನಿರ್ಧನನಾದಾಗ ಸೂಳೆ ಕೈಬಿಟ್ಟು ಚೆಲ್ಲಿಹಾಕುತ್ತಾಳೆ.

ಅತೃಪ್ತ ಜೀವಿಯಾದ ಗಂಡಸು ಪರಹೆಣ್ಣನ್ನು ದಿಟ್ಟಿಸಿ ನೋಡುತ್ತಾನೆ. ಹರಕೊಂಡು ತಿನ್ನುವಂತೆ ಆಸೆ ಬೀರುತ್ತಾನೆ. ಆದರೆ ಫಲವೇನು? ಸೇದಿಭಾವಿನೋಡಿ ನಾಯಿ ಸಂತೋಷಪಡುವಂತೆ, ಭಾವಿಯೇನೋ ಕಂಡಿತು. ನಾಯಿಗೆ ನೀರಡಿಕೆ. ಆದರೆ ಅದು ಸೇದಿಭಾವಿ, ಭಾವಿಯ ನೀರು ಕೈಗೆಟಕುವ ಬಗೆ ಹೇಗೆ? ಬಾಯಿಗೆ ಬೀಳುವುದಂತೂ ದೂರವೇ ಉಳಿಯಿತು.

“ನಿನಗಿದ್ದ ದಾರಿ ನನಗಿಲ್ಲವೇ? ಎಂದು ಕೇಳುವ ಹೆಂಡತಿ ಗಂಟುಬಿದ್ದರೆ, ಗಂಡಯ್ಯನ ಗತಿ ಏನಾದೀತು? ಗಂಡನು ಸೂಳೆಯಂಗಳದಲ್ಲಿ ಕಾಲ್ಮರೆಯಾಗಿ ಬಿದ್ದರೇನು, ಹೆಂಡತಿಗೆ ಗಂಡನೇ ಅಲ್ಲವೇ? ಅದರಲ್ಲಿಯೂ ಮದುವೆಯ ಗಂಡ. ಅವನ ಪುಣ್ಯದಿಂದ ಗರತಿಯ ಹಣೆ ಕುಂಕುಮ ಕಾಣುವುದು! ಗಲ್ಲ ಅರಿಸಿಣ ಕಾಣುವುದು! ಕೊರಳಲ್ಲಿ ಗುಳ್ಳು, ಕಾಲಲ್ಲಿ ಕಾಲುಂಗುರ ಈ ವೈಭವವನ್ನುಕಳಕೊಳ್ಳಬೇಕೆ? ಗಂಡನನ್ನು ಕಳಕೊಂಡು ಅಂದರೆ ಸೂಳೆಗೆ ಒತ್ತಿಗೊಟ್ಟು ತಣ್ಣಿಸಿದ್ದರೆ ಮುತ್ತಯ್ದೆತನ ಉಳಿಯುವುದಿಲ್ಲವೇ? ಅದೇ ಭಾಗ್ಯ. ಸೌಭಾಗ್ಯ!

ಮದುವೆಯ ಹೆಂಡತಿಯಿದ್ದರೂ, ಆಕೆ ಮಕ್ಕಳ ತಾಯಿಯಾಗಿದ್ದರೂ ಗಂಡನು ಉಡಿಕೆಯಾಗಿ, ಪಳಗಿದ ಹೆಂಗಸನ್ನು ಮನೆಗೆ ತರುತ್ತಾನೆ. ಉಡಕಿಯ ಹೆಂಡತಿ ಉಡಿಯೊಳಗಿನ ಅಂಗವಂತೆ. ಆದರೆ ಕಿರಿಬೆರಳು ಹಿಡಿದ ಮಡದಿಯೊಂದಿಗೆ ಸಿಡಿಪಿಡಿ ಏಕೆ? ಕೈಲಾಗದ್ದು ಮೈ ಪರಚಿಕೊಳ್ಳುವಂತೆ. ಸಹನೆಯೆನ್ನುವುದು ಹೆಂಗಸಿಗಿರುವ ಇನ್ನೊಂದು ಹೆಸರು. ಆಕೆ ನಡೆದಾಡುವ ಭೂಮಿಯೆನ್ನುವುದು ಹದಿನಾರಾಣೆ ಸತ್ಯ.

ಮಗನನ್ನು ತಾಯಿಯಿಂದ ಕಸಗೊಂಡು ಸೊಸೆ ಗಂಡನನ್ನಾಗಿಸಿಕೊಳ್ಳುವಂತೆ, ಹೆಂಡತಿಯಿಂದ ಗಂಡನನ್ನು ಅಗಲಿಸಿ ತನ್ನವನನ್ನಾಗಿ ಮಾಡಿಕೊಳ್ಳುತ್ತಾಳೆ ಸೂಳೆ. ತಾಯಿ ಬೊಬ್ಬಿಡುತತಾಳೆ. ಹೆಂಡತಿ ಶಂಖ ಹೊಡೆಯುತ್ತಾಳೆ. ಹೆಂಡತಿಗೆ ಒಬ್ಬ ಗಂಡು ಮಗ ಜೊತೆಯಾಗಿದ್ದರೆ, ಗಂಡನ ಗೊಡವೆಯನ್ನೇ ಬಿಟ್ಟು ಕೊಡುತ್ತಾಳೆ. “ಎಲ್ಲಿ ಹೋಗಿದ್ದಿರಿ ರಾಯ” ಎಂದು ಕೇಳುವುದನ್ನು ಬಿಟ್ಟು ಕೊಡುತ್ತಾಳೆ.

ಅರ್ಧರಾತ್ರಿ ಕಳೆದರೂಮ್ನೆಗೆ ಬರಲಿಲ್ಲದ ಗಂಡ ಬಂದಾಗ ಹೆಂಡತಿ ಕೇಳುತ್ತಾಳೆ –

“ನೀವೆಲ್ಲಿ ಹೋಗಿ ಬಂದ್ರಿ? ನೀವೆಲ್ಲಿ ಆಡಿಬಂದ್ರೀ?”

“ಬೆಟ್ಟಂಬು ಬ್ಯಾಸಗಿ ತನುಗಾಳಿಗೆ ಹೋಗಿದ್ದೆವು”

“ಎದೆಯ ಮೇಲೆ ಎಳೆಚಂದ್ರನಂತೆ ಗಾಯಗೊಂಡಿದೆ. ಅದೆಲ್ಲಿ ಹಾದು ಬಂದ್ರಿ?”

“ಬಾಳೆಯ ಬನದಲ್ಲಿ ಹಾದು ಬರುವಾಗ ಬಾಳೆಯ ಗರಿ ತಾಕಿದೆ.”

ಹೀಗೆ ಒಂದು ಸುಳ್ಳನ್ನು ಸತ್ಯಮಾಡಿ ತೋರಿಸುವ ಸಲುವಾಗಿ ನೂರು ಸುಳ್ಳುಗಳ ಶರಬಿ ಸುತ್ತುತ್ತಾನೆ ಗಂಡ. ಒರೆಗೆ ಹಚ್ಚುವ ಸಲುವಾಗಿ ಹೆಂಡತಿ ಪ್ರಶ್ನೆ ಮಾಡುತ್ತಲೆ ಇದ್ದಾಗ, ಗಂಡ ನಿರುತ್ತರನಾಗಿ ಸಿಟ್ಟಿಗೆದ್ದು ಆಣೆ ಮಾಡಲು ಸಿದ್ಧನಾಗುತ್ತಾನೆ.

ತೋಳುದ್ದ ತಲೆಗಿಂಬು ಮಾರುದ್ದ ಹಾಸೀಗಿ
ಮಾಣಿಕದಂಥ ಮಗ ಮುಂದ | ಮಲಗಿದರ
ಮಾರಾಯರ ಗೊಡವೆ ನಮಗೇನ ||

ಎನ್ನುವ ನಿಲುಮೆಗೆ ಬಂದ ಹೆಂಡತಿ ಗಂಡನ ಹಾದಿಗೆ ಅಡ್ಡಬರದೆ, ತನ್ನ ಮಟ್ಟಿಗೆ ತಾನು ಹಾಯಾಗಿರುತ್ತಾಳೆ. ರಟ್ಟೆಯಲ್ಲಿ ಚಿಂತಾಕು ಇಟ್ಟುಕೊಳ್ಳುವ ಶ್ರೀಮಂತಿಕೆ ಇದೆ. ಆರೆಂಟು ಎತ್ತುಗಳ ದೊಡ್ಡ ಕಮತವಿದೆ ಮನೆಯಲ್ಲಿ. ಆದರೆ ತನ್ನ ಮನೆಗೆಲಸ ತಾನು ಅಕ್ಕರೆಯಿಂದ ಮಾಡುತ್ತಾಳೆ. ಎಷ್ಟೂ ಅಸವಿಸಿಗೊಳ್ಳುವುದಿಲ್ಲ. ಆಕೆ ಆಸರಿಕೆಯನ್ನು ಅಳದಿಟ್ಟು, ಬೇಸರಿಕೆಯನ್ನು ಬಳದಿಟ್ಟು, ಚಿಂತೆಯನ್ನು ಕಾಲಲ್ಲಿ ತುಳದಿಟ್ಟು ನೆಮ್ಮದಿಯಲ್ಲಿರುತ್ತಾಳೆ.

ಅಂಥ ಸಂದರ್ಭದಲ್ಲಿ ಯಾವಳೋ ಹಿತಚಿಂತಕಳು ಒಂದುಸುದ್ದಿಯನ್ನು ಆಕೆಯ ಕಿವಿಯಲ್ಲಿ ಉಸುರುತ್ತಾಳೆ-

ಚಿಂತಾಕು ಇಟಗೊಂಡು ಚಿಪ್ಪಾಟ ಬಳಿಯುವ ಬಾಲಿ
ಚಿಂತಿಲ್ಲವೇನು ನಿನಗಿಷ್ಟು | ನಿಮ್ಮರಾಯ |
ಅಲ್ಲೊಬ್ಬಳ ಕೂಡ ನಗತಾನೆ ||

ಅದನ್ನು ಕೇಳಿ ಆ ಗರತಿ ಬೆರಗುಬಟ್ಟಳೇ? ಬೇಸರು ಪಟ್ಟಳೇ? ಕಕ್ಕಾವಿಕ್ಕಿಯಾದಳೇ? ದಿಙ್ಮೂಢಳಾದಳೇ? ಏನೂ ಇಲ್ಲ. ನಗುನಗುತ್ತಲೆ ಸಹಜವಾಗಿ ಮರುನುಡಿದಳು.

ನಕ್ಕರೆ ನಗಲೆವ್ವ ನಗೆಮುಖದ ಕ್ಯಾದಿಗಿ
ನಾ ಮುಚ್ಚಿ ಮುಡಿವ ಪರಿಮಳ | ದಾ ಹೂವ
ಅವಳೊಂದು ಘಳಿಗೆ ಮುಡಿಯಲಿ ||

“ಮೊದಲೇ ನಗೆಮುಖದ ಕೇದಿಗೆ. ಅದು ನಾ ಮುಚ್ಚಿ ಮುಡಿವ ಪರಿಮಳದ ಹೂ. ಪಾಪ! ಅವಳಿಗೆಲ್ಲಿ ಸಿಗಬೇಕು? ಸಹಜವಾಗಿ ಸಿಕ್ಕಾಗ ಅವಳೊಂದು ಗಳಿಗೆ ಮುಡಿಯಲಿ ಎನ್ನುವ ಸಹಾನುಭೂತಿಯು ನಮ್ಮ ಗರತಿಯಲ್ಲಲ್ಲದೆ ಇನ್ನೆಲ್ಲಿ ಸಿಕ್ಕೀತು? ಜೀವನಸಿದ್ದಿಯಲ್ಲಿ ಕ್ಷಮೆಯೆನ್ನುವುದು ಅದ್ಭುತ ಸಿದ್ಧಿ. ಅಂಥ ಸಿದ್ಧಿಯನ್ನು ಗರತಿಯು ಅತುಲ ಶ್ರೀಮಂತಿಕೆಯಲ್ಲಿಯೂ ಅಪಾರ ದುಡಿಮೆಯಿಂದ ಸಾಧಿಸಿದಳೆಂದರೆ, ಜೀವನವು ಅವಳ ಪಾಲಿಗೆ ಅದೆಂಥ ಸಹಜಯೋಗ? ಬಾಳ ಕಡವಲು ಬಿಟ್ಟು, ಸನ್ಯಾಸದ ಕಾಡಿನಲ್ಲಿ ಈಸ ಕಲಿಯುವ ಎತ್ತುಗಡೆ ನಡೆಸದೆ, ಆಕೆ ಗಟ್ಟಿಜೀವ ಮಾಡಿ ಜೀವನದ ಮಡುವಿನಲ್ಲಿಯೇ ಧುಮುಕಿ ಮುಳುಗುತ್ತ ತೇಲುತ್ತ ಈಸ ಕಲಿತವಳು. “ಈಸಬೇಕು ಇದ್ದು ಜೈಸಬೇಕು” ಎಂದು ಪುರಂದರದಾಸರು ಹಾಡಿದರು. ಗರತಿ ಅದನ್ನು ನಡೆದು ತೋರಿಸಿದಳು. ಗೃಹವೆಂಬ ರಂಗಸ್ಥಳದಲ್ಲಿ ಗೃಹಿಣಿ ಸಾಧಿಸಿ ಗಳಿಸಿದ ಜ್ಞಾನವನ್ನು ತ್ರಿಪದಿಯಲ್ಲಿ ಹಾಡಿ ಹಾಡಿ, ಗೃಹಿಣೀ ಗೀತವನ್ನು ಸ್ತ್ರೀ ಜಾತಿಗೇ ಹೇಳಿಕೊಟ್ಟಳು. ಬರೆದಿಟ್ಟ ಗ್ರಂಥವಲ್ಲವಾದರೂ ಅದು ಆಕಾಶದಡವಿಯಲ್ಲಿ ಪ್ರತಿಧ್ವನಿಸುತ್ತಲೇ ಇದೆ.