ಶ್ರೀರಾಮತೀರ್ಥ ಸ್ವಾಮಿಗಳು ಹೇಳುವಂತೆ, ಪ್ರೇಮವಿಕಾಸವೇ ಮದುವೆಯ ಉದ್ದೇಶವಾದರೂ ಸಾಧನೆಯಿಲ್ಲದೆ ಅದು ಸಿದ್ಧಿಸದು. “ಹೆಣ್ಣೂ ಮಾಯೆಯಲ್ಲ, ಗಂಡೂ ಮಾಯೆಯಲ್ಲ. ಮನದ ಮುಂದಿನ ಆಶೆಯೇ ಮಾಯೆ ಎಂದು ಶಿವಶರಣರು ನಿಚ್ಚಳಗೊಳಿಸಿದ್ದಾರೆ. ಬಣ್ಣದ ದಂಪತಿಗಳು ಪರಸರರನ್ನು ಮಾಯೆಯೆಂದು ಬಗೆಯದೆ, ಮನದ ಮುಂದಣ ಆಶೆಯನ್ನು ತೃಪ್ತಿಗೊಳಿಸಿಕೊಳ್ಳುವ ಎತ್ತುಗಡೆ ಮನೆತನದಲ್ಲಿ ಮೊಟ್ಟ ಮೊದಲು ನಡೆಯಬೇಕಾಗಿದೆ. ಬಣ್ಣದ ಕೋಣೆಯಲ್ಲಿ ಪಾತ್ರಧಾರಣಮಾಡಿ, ರಂಗಭೂಮಿಗೆ ಬರುವಷ್ಟರಲ್ಲಿ ನಮ್ಮನ್ನು ನಾವು ಮರೆತುಬಿಡುತ್ತೇವೆ. ಮಾತುಕತೆಗಳೂ, ವಿಚಾರ ವಿವೇಚನೆಗಳೂ ಬದಲಾಗಿ ಬಿಡುತ್ತವೆ. ವೇಷಧಾರಿ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದರೂ ವೇಷದಂತೆ ಬಾಷೆ ನುಡಿಯತೊಡಗುತ್ತದೆ. ತಮಗಿಲ್ಲದ ರೂಪ-ಸೌಂದರ್ಯಗಳನ್ನು ಪರಸ್ಪರರಲ್ಲಿ ಕಂಡು, ಅವು ತನ್ನವಾಗಬೇಕೆಂಬ ಸ್ವಾಭಾವಿಕ ಹಂಬಲವನ್ನು ತಳೆಯುತ್ತವೆ. ಕಣ್ಣು ಅರಳಿದಲ್ಲಿ, ಕಣ್ಣು ಹೊರಳಿದಲ್ಲಿ ಅದನ್ನೇ ಕಾಣಬೇಕೆಂಬ ತವಕವು ತಲೆಯ್ತುತ್ತಲೇ ಇರುತ್ತದೆ.

ಮಡದಿ ತವರಿಗೆ ಹೋದ ಮಾತ್ರಕ್ಕೆ ಗಂಡನಿಗೆ ತಹವಹವುಂಟಾಗುತ್ತದೆ.ಅಂದುಕೊಳ್ಳುತ್ತಾನೆ “ಅಡಗೀಯ ಮನಿಯಾಗ ಮಡದೀಯ ಸುಳುವಿಲ್ಲ. ಅಡಗಿ ಬಾಯೀಗಿ ರುಚಿಯಿಲ್ಲ”

ಇತ್ತ ಹೆಂಡತಿಗಾದರೂ ಸಮಾಧಾನವೆಲ್ಲಿ? ಅಗಲಿಕೆಯು ಆಕೆಯನ್ನೂ ಕಂಗಾಲಗೊಳಿಸುತ್ತದೆ.

ಕಮಳದ ಹೂನಿನ್ನ ಕಾಣದೆ ಇರಲಾರೆ
ಮಲ್ಲೀಗೇ ಮಾಯೆ ಬಿಡಲಾರೆ | ಕೇದಿಗೆ |
ಗರಿ ನಿನ್ನ ಅಗಲಿ ಇರಲಾರೆ ||

ಅಗಲಿಕೆಯು ದಂಪತಿಗಳಿಗೆ ಕಣ್ಣು ಕಟ್ಟಿದಂತಾಗಿ ಎಲ್ಲೆಲ್ಲಿಯೂ ಏನೆಲ್ಲವೂ ಭಣಭಣವೆನಿಸುತ್ತದೆ. ಶಕುಂತಲೆಗೆ ಕಣ್ವಾಶ್ರಮದಲ್ಲಿ ಚಂಡು ಮಲ್ಲಿಗೆಯ ದುಂಡು ಮೊಗ್ಗೆಗಳು ದಂಡೆಗೆ ಸಿಗಲಾರದಂತಾದವೇ? ಮುಟ್ಟಿದರೆ ಬಾಡುವ ಶಿರಸಲ ಹೂಗಳು ಆಕೆಯ ಕಿವಿಗೆ ಇಲ್ಲದಾದವೆನ್ನಬೇಕೆ? ಗೆಳತಿಯರಿದ್ದರು, ಸಂಗಡಿಗರಿದ್ದರು, ಆದರೂ ಆಶ್ರಮದಲ್ಲಿ ಶಕುಂತಲೆಯ ಮನಸ್ಸು ವಿವ್ಹಲಗೊಂಡಿತ್ತು ದುಷ್ಯಂತನಿಲ್ಲದ್ದಕ್ಕೆ. ಅಲ್ಲಿ ದುಷ್ಯಂತನ ಮನಸ್ಸೂ ವಿವ್ಹಲಗೊಂಡಿರಲೇಬೇಕಲ್ಲವೇ? ನವದಂಪತಿಗಳಿಗೆಲ್ಲ ಈ ಮಾತು ಸಂಪೂರ್ಣವಾಗಿ ಅನ್ವಯಿಸತ್ತದೆ.

ಹಗಲು ಇರುಳಿನ ಕಡೆಗೆ ಹೊರಟಂತೆ, ಕೂಡಿಕೆಯು ದುಡಿಕೆಯತ್ತ ದಾರಿ ಮಾಡಿಕೊಡುತ್ತದೆ. ಹುಸಿಮುನಿಸಿನಿಂದ ಆರಂಭಗೊಂಡು ಹಸಿಮುನಸಿವರೆಗೆ ಆರೋಹಣ ಅವರೋಹಣಗಳು ನಡೆಯುತ್ತವೆ. ‘‘ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ” ಎಂದು ಮಗುವನ್ನು ಕುರಿತು ನುಡಿಯುವಂತೆ, ನೀನು ಕಚ್ಚಾಡಿದರೊಂದು ರುಚಿ, ನೀನು ಗುದ್ದಾಡಿದರೊಂದು ರುಚಿಯೆಂದು ಬಾಯಿಬಿಚ್ಚಿ ನುಡಿಯದಿದ್ದರೂ, ಅದು ದಂಪತಿಗಳಿಗೆ ಅಪ್ಯಾಯಮಾನವಾಗಿರುತ್ತದೆ. ಅಂತೆಯೇ ಗರತಿ ಹಾಡುತ್ತಾಳೆ ಮೈಮರೆತು –

ಗಂಡ ಹೆಂಡಿರ ಜಗಳ ಗಂಧ ತೀಡಿದಂಗ
ನಿಂಗಕ ನೀರು ಎರಧಂಗ | ಹಿರಿಹೊಳೆಯ |
ಗಂಗಮ್ಮ ಸಾಗಿಹರಿಧಂಗ ||”

ಗಂಡಹೆಂಡಿರಲ್ಲಿ ನಡೆಯುವ ಜಗಳವುಗಂಧ ತೀಡಿದಂತಾಗಿ ಸುವಾಸನೆ ಬೀರತೊಡಗುತ್ತದೆ. ನೀರಿನ ಅಗತ್ಯವಿಲ್ಲೆಂದರೂ ಲಿಂಗಕ್ಕೆ ನೀರೆರೆದದ್ದು ವ್ಯರ್ಥವೂ ಅಲ್ಲ, ಅವ್ಯರ್ಥವೂ ಅಲ್ಲ. ತುಂಬಿದ ಹಿರಿಹೊಳೆಗೆ ಮುಂದೆ ಸಾಗುವುದೇ ಒಂದು ಸಹಜ ಕ್ರಮವಾಗಿರುತ್ತದೆ. ಬಯ್ದಾಟ, ಹೊಯ್ದಾಟಗಳಲ್ಲಿಯೂ ಲೀಲಾಭಾವವಿದೆ ಸ್ವಾಭಾವಿಕವಾಗಿದೆ. ಅಂತೆಯೇ“ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ” ಎಂಬ ಲೋಕೋಕ್ತಿಯಲ್ಲಿ ಸಂಪೂರ್ಣ ಸತ್ಯವಡಗಿದೆ. ಅದರಲ್ಲಿ ಸಂಪೂರ್ಣ ಸ್ವಾರಸ್ಯವೂ ಅಡಗಿದೆ. ಉಂಡು ಮಲಗುವವರೆಗೆ ದಂಪತಿಗಳಲ್ಲಿ ಕಾಣಿಸಿಕೊಳ್ಳುವ ರೊಚ್ಚು-ಕಿಚ್ಚುಗಳೆಲ್ಲ ಉಂಡುಮಲಗಿದ ಬಳಿಕ, ಕೆಲಹೊತ್ತು ಕಚ್ಚಾಟ- ಗುದ್ದಾಟಗಳ ವಾಸನೆ ಸುಳಿದು; ಬಳಿಕ ಎಲ್ಲವೂ ತಮ್ಮಣಿಗೊಳ್ಳುತ್ತದೆ. ವ ತದೊಂದಿಗೆ ಅವರಣವೂ ತಣ್ಣಗಾಗಿ ಬಿಡುವುದರಿಂದ ಸುಖನಿದ್ದೆ ಬೆಳೆದು, ಸವಿಕನಸು ಬೀಳುವವು.

ಮಡದಿಯನ್ನು ಬಿಟ್ಟು ಪರನಾಡಿಗೆ ಹೊರಟ ಪತಿರಾಯಿರ ಆವಸ್ತೆ ಅಸ್ತವ್ಯಸ್ತತೆಗಳನ್ನು ಕಂಡ ಬಳಗದವರು ತಮ್ಮಲ್ಲೆ ತಾವು ಕೇಳಿಕೊಳ್ಳುವರು; “ಊರೀಗಿ ಹೋಗುವರ ಮಾರ‍್ಯಾಕ ಬಾಡ್ಯಾವ | ಗೀರಗಂಧ್ಯಾಕ ಬೆವತಾವ? ಕಾರಣ ತಿಳಿದಿದ್ದೇ ಇದೆ. ಮಡದಿಯನ್ನು ಅಗಲಿ ಪರನಾಡಿಗೆ ಪತಿರಾಯ ಹೊರಟಿದ್ದಾರೆ. ಮಡದಿ ಮಾತ್ರ ಬಾಯಿ ಮುಚ್ಚಿಯೋ ಬಾಯಿ ಬಿಚ್ಚಿಯೋ ಕೇಳಿಕೊಳ್ಳುವಳು.” ಎಂದ ಬರತೀರಿ ನನ್ನ ಗಂಧದ ರತಿಗಾರ? ಎಂದ ಬರತೀರಿ ನನಗ್ಹೇಳ”

ಮಡದಿಯಲ್ಲಿ ತೋರ್ಪಟ್ಟ ತವರ್ಮನೆಯ ಹಂಬಲವನ್ನು ಗಂಡನೆ ಹಿಂಗಿಸಬಲ್ಲನು. ಯಾಕೆಂದರೆ ಮಡದಿ ಕುಂಡು ಹಿಡಿದಂತೆ, ತಾನು ಹಣಚಿಬಟ್ಟು, ಪತಿ ಅದರ ಮೇಲಿರುವ ಕುಂಕುಮ. ಹಣಚಿಬೊಟ್ಟು ಕುಂಕುಮಗಳ ಹತ್ತಗಡೆ ವಾಸ್ತವಿಕವೂ ಆಗಿದೆ. ಉಚಿತವೂ ಆಗಿದೆ. ಅದು ತಪ್ಪಿದರೆ ತವರಿನ ನೆನಹು ತಾಕಲಾಡುತ್ತದೆ.

ಹಣಚಿ ಬಟ್ಟಿನ ಮ್ಯಾಲ ಹರಿದಾಡೂ ಕುಂಕುಮ
ವಾರೀಗಿ ಪುರುಷ ಇದರೀಗಿ | ಕುಂತರ |
ಹೆಚ್ಚಿನ ತವರ ಮರತೇನ ||

“ಎಲ್ಲೆಲ್ಲಿ ನೋಡಿದರ ಎಲ್ಲಾರು ಇದ್ದಾರೆ. ನಾನು ಮಾತ್ರ ಕಾಣಿಸೋದಿಲ್ಲ! ನಾನಿದ್ದದ್ದೇ ಸುಳ್ಳೇ?” ಎಂದು ಕೇಳಿಕೊಳ್ಳುವುದು ಸಹಜ ಕ್ರಮ. ನೇರದಾರಿ, ಆದರೆ ಮಡದಿಗನಿಸುತ್ತದೆ. “ಎಲ್ಲೆಲ್ಲಿ ನೋಡಿದರ ನಲ್ಲನಂಥವರಿಲ್ಲ” ಅವನನ್ನು ಕಂಡಾಗ ಅವನ ಮುಖದಲ್ಲಿ ಒಡೆದು ಕಾಣಿಸುವಂಥದು ಹವಳದಂಥ ಹಲ್ಲು. ಅವನ ಸೊಲ್ಲು ಕೇಳಿಬಂದರೆ ಅದೊಂದು ಸಮಾಧಾನದ ಗುಟಿ.

ಕೂಡಿಕೆಯಲ್ಲಿ ಒಂದಾಗಿ ಬೆರೆಯುವ ಸಾಧನೆ ನಡೆದಾಗ ಅದೆಂಥದೋ ವಿರಸಮೊಳೆತು ಹಾಲು ಹುಳಚಿಡಹತ್ತುವುದು. ಆಗ ದೂಡಿಕೆಯಿಂದ ನೆಮ್ಮದಿಯನ್ನು ಕಾಣಬೇಕೆಂಬ ಆಶೆ ಉತ್ಪನ್ನವಾಗುವುದು. “ವಾರೀಗಿ ಪುರುಷರು ಊರೀಗಿ ಹೋದರ | ನಾನಿ ನಿನಕಣ್ಣು ಒಳಹೊರಗೆ” ಎಂದು ಇನ್ನಾರೋ ಕೇಳುವಂಥ ಪರಿಸ್ಥಿತಿ ಉಂಟಾಗುತ್ತದೆ. ಅದರೊಂದಿಗೆ ಸರಸ ಜೀವನದ ಚಿತ್ರಹವುರಾಗಿ ನೆನಹಿನ ತೆರೆಯಲ್ಲಿ ಮೂಡತೊಡಗುತ್ತದೆ.

ಹಾಸೀಗಿ ಹಾಸೆಂದ ಮಲ್ಲೀಗಿ ಮುಡಿಯಂದ
ಬ್ಯಾಸತ್ತರ ಮಡದಿ ಮಲಗೆಂದ | ನನರಾಯ
ತನನೋಡಿ ತವರ ಮರಿಯಂದ ||

ಪತಿ ಹೇಳಿದ ಮಾತು ಹೊಟ್ಟೆಯೊಳಗಿನ ಹರಳು ಕರಗಿಸುವಂಥದು. ಆದರೆ ಅದಕ್ಕೂ ಮಿಗಿಲಾಗಿ ತವರುಮನೆಯ ನೆನಹು ಮನ-ಬುದ್ಧಿಗಳೆರಡನ್ನೂ ಕರಗಿಸಿ, “ತವರುಮನೆಗೆ ಕಳಿಸಿದಿರಿ; ಅಥವಾ ನಾನೇ ಹೋಗುವೆನು” ಎಂದು ಛಲಹಿಡಿದಾಗ, ಅದನ್ನು ಬಗೆಹರಿಸಲಿಕ್ಕಾಗದೆ, ಕೈ ಲಾಗದ್ದು ಮೈಯೆಲ್ಲ ಹರಕೊಳ್ಳುವಂತೆ ಗಂಡನು ಸಿಟ್ಟಿಗೆದ್ದು ಮಡದಿಯನ್ನು ಬಡಿಯುವನು, ಆಕೆ ಬಡಿಸಿಕೊಂಡು ಒಳಗೆ ಹೋಗಿ ಬಿದ್ದುಕೊಳ್ಳುವಳು.

ಮನಸ್ಸು ಹೊಯ್ದಾಡಿ ತಲೆಕಾಯಲು ಸಿಟ್ಟಿನಲ್ಲಿ ಮಡದಿಯನ್ನೇನೋ ಬಡಿಯುವನು. ಆದರೆ ಮರುಕ್ಷಣದಲ್ಲಿ ಕರುಣೆ ಹುಟ್ಟಿಕೊಂಡಾಗ ಅದು ಏನೇನು ಮಾಡಿಸಿತು ತಿಳಿಯೋಣ.

ಮಡದೀನ ಬಡಿದಾನ ಮನದಾಗ ಮರಗ್ಯಾನ
ಒಳಗ್ಹೋಗಿ ಸೆರಗಹಿಡಿಯುತ | ಕೇಳ್ಯಾನ |
ನಾ ಹೆಚ್ಚೋ ನಿನ್ನ ತವರ್ಹೆಚ್ಚೋ ||

ಆ ಮಾತು ಮಡದಿಯ ಮನಹೊಕ್ಕು, ಮೈ ಹೊಕ್ಕು ಹೃದಯವನ್ನು ತಟ್ಟಲು, ಆಕೆ ಸಮತೂಕಕ್ಕೆ ಬರುವಳು, ಕರ್ತವ್ಯಕೈಮಾಡಿ ಕರೆದಂತಾಯಿತು, ಎದ್ದಳು.

ಸಿರಿಗಂಧ ಚಕ್ಕಿ ಒಡೆದು ನಡೆದು ಒತ್ತಲುತುಂಬಿ
ತಿರುಗಾಡಿ ನೀರು ಬೆರಸೇನ | ನನಮನಿಗಿ
ಹಿಡಿಹೊನ್ನು ತರುವ ಹಿರಿಯರಿಗೆ ||

ಆಕೆಗೆ, ಒಮ್ಮೆ ಗಂಡನ ಪುಂಡಾಟ ನೆನಪಿಗೆ ಬರುವಂತೆ, ಇನ್ನೊಮ್ಮೆ ಗಂಧದೆಣ್ಣೆ ಹಚ್ಚಿಕೊಂಡು ಗಂಗೆಯಲ್ಲಿ ನಿಂತು ನಗುತ್ತಿರುವ ದೃಶ್ಯ ನೆನಪಿಗೆ ಬರುವುದು. ಅಷ್ಟರಲ್ಲಿ ಬುದ್ದಿ ಅಡ್ಡ ಬಂದು ಹೇಳುವುದೇನೆಂದರೆ –

ಅರಸ ಒಳ್ಳೆವರಂತ ವಿರಸವಾಡಲಿಬೇಡ
ವರುಷದ ಮಾತು ಮನದಾಗ | ಇಟಗೊಂಡು
ಪರಸಿಗ್ಹೋದಲ್ಲಿ ತಗದಾರ ||

ಮಡದಿ ಮನಸ್ಸಿಗೆ ಹೇಳಿದಳು – ವಿರಸವಾಡಲಿಬೇಡ, ಯಾಕೆಂದರೆ ಅದು ಮರಣಕ್ಕೆ ದಾರಿ. ವಿರಸ ಮರಣವಲ್ಲವೇ? “ಸರಸಜನನ ವಿರಸಮರಣ” ಎಂದಿಲ್ಲವೇ ಕವಿವಾಣಿ? ಜೀವನಕ್ಕೆ ಬೇಕಾದುದು ಸಮರಸ. “ಸಮರಸವೇ ಜೀವನ” ವನಿಸಿದೆ. ಅತ್ತಿ ಹೂವಿನ ಸೀರೆಯುಟ್ಟು, ಅಚ್ಚೇರಿನ ವಂಕಿಯಿಟ್ಟು ನೂರುಮಾತು ಹೇಳಿದರೂ ಫಲವಿಲ್ಲ.ಯಾಕೆಂದರೆ ಮನೆಪುರುಷರು ಇಚ್ಛೆಯವರಲ್ಲ. ಅದರ ಮನವನ್ನು ಮುಟ್ಟುವ, ಹೃದಯವನ್ನು ತಟ್ಟುವ ಮೃದುವಚನಗಳಿಂದ ಸದಾಶಿವನನ್ನು ಒಲಿಸುವುದು ಸಂಗಮವೆನ್ನುವುದು ಆಕೆಗೆಕ್ರಮೇಣ ತಿಳಿದುಬರುತ್ತದೆ.

ಕಟ್ಟಾಣಿ ಗುಂಡೀಗಿ ಸಿಟ್ಟು ಮಾಡಲಿಬ್ಯಾಡ
ಬಿಟ್ಟು ಬಂದೀದ ಬಳಗೆಲ್ಲ | ಪತಿಪುರುಷ
ಕಟ್ಯಾರ ತಮ್ಮ ಪದರಾಗ ||

ಮನೆತನವು ಲಂಡೋಬಂಡೋ ರಾಜ್ಯವಾದಾಗ, ಪತಿಯು ತಾಯಿ-ತಂದೆಗಳ ಸಂತೋಷಕ್ಕಾಗಿ ಮತ್ತು ಮನೆತನದ ನೆಮ್ಮದಿಗಾಗಿ ಬೇರೊಂದು ಲಗ್ನವಾಗುವ ವಿಚಾರ ನಡೆಸಿದ್ದು, ಮಡದಿಗೆ ಅದರ ಸುಳುಹು ಹೇಗೋ ಹತ್ತುವುದು. ಆದರೆ ಅದಕ್ಕಾಗಿ ಬೀದಿಗೆ ಹೋಗಿ ನಿಲ್ಲುವುದು ಸರಿಯಲ್ಲವೆನಿಸಿತು ಆಕೆಗೆ. ಏನು ಮಾಡಿದಗಳು ಮುಂದಿನ ಯುಕ್ತಿ?

ರಾಯಬರತಾರಂತ ರಾತ್ರೀಲಿ ನೀರಿಟ್ಟ
ರನ್ನ ಬಚ್ಚಲಕ ಮಣಿಹಾಕಿ, ಕೇಳೇನ |
ಸಣ್ಣವಳ ಮ್ಯಾಲ ಸವತ್ಯಾಕ ||

ತಾನಿನ್ನೂ ಸಣ್ಣವಳು, ಹಡೆಯುವ ಹಂಗಾಮು ಮೀರಿಲ್ಲ. ಚೆಲುವಿಕೆಯಲ್ಲಿಯೂ ಕಡಿಮಯಿಲ್ಲ. ‘ಆಳುವವನಿಗೆ ಅರವತ್ತು ಹೆಂಡಿರು’ ಎಂದು ಗಂಡಸು ಹೇಳಿಕೊಳ್ಳಬಹುದು. ಆದರೆ ಅದರ ಪರಿಣಾಮದತ್ತ ನೋಡಬೇಡವೇ?

ಅಂಗೀಯ ಮೇಲಂಗಿ ಛಂದೇನೊನನರಾಯ
ರಂಬಿ ಮ್ಯಾಲ ರಂಬಿ ಪ್ರತಿರಂಬಿ | ಬಂದರ |
ಛಂದೇನೊ ರಾಯ ಮನಿಯಾಗ ||

ಬೆಳಗಿನ ಜಾವದಲ್ಲಿ ಆ ಗರತಿ ಬೀಸುಕಲ್ಲಿನ ಮುಂದೆ ಕುಳಿತು ಬೀಸತೊಡಗಿದಾಗ ಬೇಡವೆಂದರೂ ಒಂದು ಹಾಡು ಆಕೆಯ ಬಾಯಿಂದ ನುಸುಳುವುದು. ಸಕ್ಕರೆನಿದ್ರೆಯಲ್ಲಿದ್ದ ಗಂಡನಿಗೆ ಆ ಹಾಡು ಪರ್ಯಾಯವಾಗಿ ನೀತಿಯನ್ನು ಉಸುರಿರಬಹುದು.

ಇಬ್ಬರ್ಹೆಂಡಿರನಾದ ಏಡಿಯ ಮುಳ್ಳಾದ
ಕೋಡಗನಾದ ಕಪಿಯಾದ | ಬಾಲೇರು |
ಮಾಡಿದ್ದ ಸಿಂಬಿ ಅರಿವ್ಯಾದ ||

ಹೊರಬುದ್ಧಿಗೆ ಬಲಿಯಾದ ಗಂಡನನ್ನು ಸಮದಾರಿಗೆ ತರುವ ಬಗೆ ಹೇಗೆಂದು ತನ್ನಲ್ಲಿ, ತನ್ನವರಲ್ಲಿ ಚಿಂತಿಸುತ್ತಿರುವಾಗ “ಬಾಯಿಬಿಡಬೇಡ, ಮನ ಹೇಸಿ ಮನಿಗಿ ಬರತಾರ” ಎಂಬ ಸಲಹೆ ಬಂದಿತು.

ಗರತಿಯೆಂದರೆ ಕವಿತೆಕಟ್ಟುವ ಗಾಯಿತ್ರಿಯಿದ್ದಂತೆ, ಕವಿತೆ ಹಾಡುವ ಕವಿಯಿತ್ರಿಯೂ ಆಗಿದ್ದಾಳೆ. ಆಕೆಯ ತಲೆಯಲ್ಲಿ ಕಾವ್ಯವಸ್ತುವಂತೂ ಇದ್ದೇ ಇದೆ. ಅದೇ ಗಂಡನ ಹೊರ ಬುದ್ಧಿಯ ವಿಷಯ. ಇತ್ತೀಚೆಗೆ ಅವರ ಹಾಸಿಗೆಗಳೂ ಬೇರೆ ಬೇರೆ ಆಗಿದ್ದವೆಂದು ತೋರುತ್ತದೆ. ವಾಡಿಕೆಯಂತೆ ಬೆಳಗಿನಲ್ಲಿ ಬೀಸುವ ಕಾಯಕವನ್ನು ಆರಂಭಿಸಿದಳು ಗರತಿ. ಅಂದು ಹಾಡುವ ಹಾಡಿನಲ್ಲಿ ತನ್ನ ಹಾಡೇ ಹವಣಿಸಿ ಹಣಕಿಟ್ಟಿತು.

ಹೆರವರ‍್ಹೆಣ್ಣಿಗಾಗಿ ಹೊರಗ ಮಲಗುವ ಜಾಣ
ಗಿಡಿದ ಮ್ಯಾಲೆರಡು ಗಿಣಿಕೂತು | ನುಡಿದಾವು
ಎರವನ್ನೋ ರಾಯನಿನ ಜೀವ ||

ಗಿಳಿಯ ಮಾತು ಕೇಳಿಸಿದ್ದು ಮಡದಿಗೆ. ಆ ಮತಿನ ಅರ್ಥವಾದದ್ದು ಗಂಡನಿಗೆ. ಇದೆಲ್ಲ ಪ್ರೇಮವಿಕಾಸದ ಸಾಧನೆಯಲ್ಲಿ ಬರುವ ಒಂದೊಂದು ಪಾಠವಲ್ಲವೇ?