“ತನ್ನಂಗ ತನ್ನ ಮಗಳಂಗ ನೋಡಿದರ ಕಣ್ಣ ಮುಂದಾದ ಕೈಲಾಸ” ಎಂಬ ತ್ರಿಪದಿಯ ಚುಟುಕವನ್ನು ನೋಡಿದರೆ, ಪರರನ್ನು ತನ್ನಂತೆ ಇಲ್ಲವೇ ತನ್ನ ಮಗುವಿನಂತೆ ಬಗೆಯಬೇಕು. ಹಾಗೆ ಮಾಡಿದರೆ ಅದು ಒಂದು ಕೈಲಾಸ ಬಿನ್ನಾಣವೇ ಆಗಿ ಕಂಗೊಳಿಸುತ್ತದೆ. ಮಗಳಂಗ ಎನ್ನುವ ಶಬ್ದದಲ್ಲಿ ಮಗನಂಗ ಎನ್ನುವ ಅರ್ಥವೂ ಹುದುಗಿಕೊಂಡಿದೆಯೆಂದೇ ಭಾವಿಸಬೇಕು. ತಾನು ಅಂದರೆ ತನ್ನ ಮಗ ಅಥವಾ ಮಗಳು. ತನ್ನಂತೆ ಪರರ ಬಗೆಯುವ ಸಾಧನೆಯಲ್ಲಿ ಇದು ಪ್ರಪ್ರಥಮ ಪಾಠವೆನಿಸುವುದಿಲ್ಲವೇ?

ವಧುವರರು ಲಗ್ನಬಂಧನದಿಂದ ಗಂಡ ಹೆಂಡಿರಾಗಿ ಸತಿಪತಿಗಳನಿಸಿದರು. ಅದೊಂದು ಪ್ರೇಮದ ವಿಕಾಸವೆಂದು ಹೇಳಿಯಾಗಿದೆ. ಆದರೆ ಅದು ಪರಿಶುದ್ಧಗೊಳ್ಳಬೇಕಾಗಿದೆ. ನಿಷ್ಕಾಮ ಪ್ರೇಮವೋ ನಿರ್ವ್ಯಾಜ ಪ್ರೇಮವೋ ಆಗಿ ಪರಿಣಮಿಸಿಬೇಕಾಗಿದೆ. ಅದಕ್ಕೆ ಸಾಧನಕ್ಷೇತ್ರ ಮನೆತನವೇ. ದಾಂಪತ್ಯ ಜೀವನವು ಚಿಗುರಿದಾಗ ಮಗುವೊಂದು ಮೈದಳೆದು ಉಡಿಗೆ ಬರುತ್ತದೆ. ಅದರಿಂದ ದಂಪತಿಗಳು ತನ್ನಂತೆ ಪರರ ಬಗೆಯುವ ಪಾಠಕಲಿಯಬೇಕಾಗಿದೆ.

ಬಿತ್ತು ಭೂಮಿಗಳ ಸಂಗಳಿಕೆಗೆ ಕಾರಣರಾದ ದಂಪತಿಗಳು ಆ ಮಗುವಿಗೆ ತಾಯಿ ತಂದೆಗಳೆನಿಸುತ್ತಾರೆ. ತಾಯಿಯ ರಕ್ತದಾನದಿಂದ ಮಗು ಮೈದಳೆಯುತ್ತದೆ. ಆ ಮಗು ಮೈದೊಟ್ಟು ಭೂಮಿಗೆ ಅತಿಥಿಯಂತೆ ಬಂದು ಮನೆಯವನೇ ಆಗಿಬಿಡುತ್ತಾನೆ. ಮಗು ಮಾನವನ ತಂದೆಯೆನಿಸುತ್ತಾನೆ. ಆ ಮಗು ಕೇಳಬಲ್ಲದು ತಂದೆಗೆ – ನಾನು ನಿನ್ನ ಮಗುವೋ ಅಥವಾ ನಿನ್ನ ತಂದೆಯೋ?

ತತ್ತಿ ಹೋಗಿ ಬತ್ತಿಯಾಗುವವರೆಗೆ ತಾಯ ಕಣ್ಣರಿಕೆಯಲ್ಲಿ ಪಾಲನೆ ಪೋಷಣೆ ನಡೆಯುತ್ತವೆ. ತಾಯ ಎದೆ ಹಾಲು ಪೋಷಣೆಯನ್ನು ಒದಗಿಸಿದರೆ ಆಕೆಯ ಬಾಯ ಲಾಲಿ ಲಾಲನೆಯನ್ನು ಒದಗಿಸುತ್ತದೆ. ನಿಟಕುನೀರಿನ ಎದೆಹಾಲು, ಅಕ್ಕರೆಯನ್ನು ಉಕ್ಕಿಸುವ ಬಾಯಲಾಲಿ ಇವೆರಡೂ ಮಗುವನ್ನು ಇಡಿಯಾಗಿ ಬೆಳೆಸುತ್ತವೆ. ಅವುಗಳಲ್ಲಿ ಅದಾವ ಪೌಷ್ಟಿಕವಿದೆಯೋ ಅದೆಂಥ ಪೌಷ್ಟಿಕವಿದೆಯೋ ದೇವರಿಗೆ ಗೊತ್ತು. ಮಗು ಅಳವುದೆಂದು ಮೊಲೆಯೂಡಿಸಿದರೂ ಹಸಿವೆ ಹಿಂಗದಿರಬಹುದು.ಆಗ ಅದು ಹಸಿವೆಗಾಗಿ ಅತ್ತುದಲ್ಲವೆಂದು ತಿಳಿದು, ತಾಯಿ ಲಾಲಿಯನ್ನು ಹಾಡುವಳು. ಒಮ್ಮೊಮ್ಮೆ ಹಾಲಿಗಿಂತ ಲಾಲಿಯೇ ಹೆಚ್ಚಿನ ಪರಿಣಾಮ ಬೀರುವುದನ್ನು ಕಾಣುತ್ತೇವೆ.

“ಲಾಲೀಯ ಹಾಡಿದರ ಲಾಲೀಸಿಕೇಳ್ಯಾನ | ಹಾಲ ಹಂಬಲ ಮರೆತಾನ” ಎಂಬ ಚುಟಿಕೆ ಮತ್ತು “ಜೋಗುಳ ಹಾಡಿದರ ಆಗಳೇ ಕೇಳ್ಯಾನ | ಹಾಲ ಹಂಬಲ ಮರೆತಾನ | ಕಂದಯ್ಯಗ | ಜೋಗುಳದಾಗ ಅತಿಮುದ್ದ” ಎಂಬ ತ್ರಿಪದಿ ಏನು ಹೇಳಿಕೊಡುತ್ತದೆ. ಗೊತ್ತೇ? ಲಾಲಿಯು ಹಾಲಿಗಿಂತ ಹೆಚ್ಚಿನ ಪರಿಣಾಮ ಬೀರಬಹುದಾಗಿದೆ. ಗೊತ್ತೇ?        ಲಾಲಿಯು ಹಾಲಿಗಿಂತ ಹೆಚ್ಚಿನ ಪರಿಣಾಮ ಬೀರಬಹುದಾಗಿದೆ. ಹಾಲಿನ ಹಂಬಲವನ್ನು ಹಿಂಗಿಸುವ ಲಾಲಿಯ ಬೆಂಬಲವು ಮಗುವಿನ ಬೇಸರವನ್ನು ಹಿಂಗಿಸುವುದು.

ಮಗುವೆಂದರೆ ಅವ್ಯಕ್ತಲೋಕದ ಬಾಲನಟ, ತಾಯ ಹೊಟ್ಟೆಯೇ ಆತನಿಗೆ ಬಣ್ಣದ ಕೋಣೆ, ಅಲ್ಲಿ ವೇಷತೊಟ್ಟು ರಂಗಭೂಮಿಗೆ ಬರುತ್ತಾನೆ. ತಾಯಿ ಹಿಮ್ಮೇಳದ ಹಾಡುಗಾರ್ತಿ, ಪಾತ್ರಕ್ಕೆ ಸಂಗೀತ ಒದಗಿಸುವವಳು ತಂದೆಯೋ ಕಥೆ ಮುಂದುವರಿಸುವ ಭಾಗವತ. ಆ ಅವ್ಯಕ್ತ ಲೋಕದ ಬಾಲನಟನ ರೂಪವನ್ನು ಬಣ್ಣಿಸಲು ತಾಯಿಯೇ ಸಮರ್ಥಳು. ತಾಯಿ ಹಾಡುವ ಕವಿ ಮಗು ಹಾಡುಕೇಳುವ ಕವಿಕುವರ. ತಂದೆ ಅದನ್ನು ಕಂಡು ತಣಿಯುವ ಕವಿ. ಅದೊಂದು ರಸಿಕ ಹಾಗೂ ಮೂಕಕವಿಗಳ ಕಿರುಮೇಳ.

ಮಗುವಿನ ಮುಖ ಬಂಗಾರದ್ದು, ಅದು ತೆಂಗಿನ ನೀರಿನಿಂಮದಲೇ ತೊಳೆಯಲು ಆರ್ಹವಾದದ್ದು, ಆ ಕುರಿತು ತಾಯಿ ಹಾಡುವ ಲಾಲಿಯನ್ನು ಯಾರು ಕೇಳಿಲ್ಲ?

ಆಡಿಬಾ ಎನಕಂದಾ ಅಂಗಾಲ ತೊಳದೇನ
ತೆಂಗೀನಕಾಯಿ ತಿಳಿನೀರ | ತಕ್ಕೊಂಡು |
ಭಂಗಾರಮಾಲಿ ತೊಳೆದೇನ ||

ತೊಟ್ಟಿಲಲ್ಲಿ ಮಲಗಿದ ಮಗು ತೊಳೆದ ಮುತ್ತಿನಂತೆ ಕಂಗೋಳಿಸುತ್ತದೆ ನೋಡಿದರೆ ದೃಷ್ಟಿಯಾದೀತು. ಪೃಷ್ಟಿ ತೆಗೆಯಲಿಕ್ಕೆ ಹಿಡಿಮುತ್ತೇ ಬೇಕು.

ತೊಟ್ಟಿಲದಾಗೊಂದು ತೊಳೆದ ಮುತ್ತನ್ನು ಕಂಡೆ
ಹೊಟ್ಟೆ ಮ್ಯಾಲಾಗಿ ಮಲಗ್ಯಾನ | ಕಂದೈಗ |
ಮುತ್ತೀನ ದೃಷ್ಟಿ ತೆಗೆದೇನ ||

ಕಸೂತಿ ಹಾಕಿದ ಕರಿಯಂಗಿ ಮೈಯಲ್ಲಿ, ಚಾವುಳ ತಲೆತುಂಬ, ಅಂಗಳದಲ್ಲಾಡುವ ನವಿಲಾಟಕ್ಕಿಂತ ಮಿಗಿಲಾದ ವಿಪರೀತ ಆಟವನ್ನು ರಂಗಯ್ಯ ಪಡಸಾಲೆಯಲ್ಲಿ ಆಡುವನು.

ಕರಿಯಂಗಿ ಕಸೂತಿ ತಲೆತುಂಬ ಜಾವುಳ
ಅಂಗಳದಾಗ ನವಿಲಾಟ | ಅದಕ್ಕಿಂತ
ರಂಗಯ್ಯನಾಟ ವಿಪರೀತ ||

ಆ ಕಂದಯ್ಯನನ್ನು ಮಾವನಾದವನು ಬಣ್ಣಿಸುವ ಬಗೆ ಹೇಗೆಂದರೆ –

ಕಾಡಿಗ್ಹಚ್ಚಿದ ಕಣ್ಣು ತೀಡಿಯಾಡಿದ ಹುಬ್ಬ
ಮಾವೀನಹೋಳು ನಿನಕಣ್ಣು | ಕಂದಯ್ಯ |
ಮಾವಬಣ್ಣೀಸಿ ಕರೆದಾನ ||

ಮಗುವಿನ ಆಟ-ಮಾಟಗಳನ್ನು ಕಂಡವರು, ಬಗೆದೋರಿದಂತೆ ಬಣ್ಣಿಸುವಲ್ಲಿ ಕವಿಗಳನ್ನು ಕ್ಷಣದ ಮಟ್ಟಿಗೆ ಮೀರಿಸುವರೆಂದೇ ಹೇಳಬೇಕು.

ಕೂಸು ನನಕಂದಯ್ಯ ಕೇಸಬಿಟ್ಟಾಡಾಗ
ದೇಶದಿಂದೆರಡು ಗಿಣಿಬಂದು | ಕೇಳ್ಯಾವ
ಕೂಸ ನೀದಾರ ಮಗನೆಂದು ||

ಈಸಾಡುವ ಇಳಿಗೂದಲನ್ನು ಹೊತ್ತು ಆಡುವಾಗ, ಅದಾವುದೋ ದೇಶದಿಂದ ಹಾರಿಬಂದ ಗಿಣಿಗಲು ಅಚ್ಚರಿಯಿಂದ ಕೇಳುತ್ತವೆ – ಕೂಸೇ, ನೀನು ದಾರಮಗ – ಎಂದು, ಕಂಡಕಂಡ ಮಗುಗಳಿಗೆ ಕೇಳುವವೇ? ಸಿಕ್ಕ ಸಿಕ್ಕ ಮಕ್ಕಳಿಗೆ ನುಡಿವಕ್ಕಿಗಳು ನುಡಿಸುವವೇ? ಒಂದು ಸಂದರ್ಭದಲ್ಲಿ ತಾಯಿ ಮಗುವಿನೊಡನೆ ತವರೂರಿಗೆ ಹೋಗಿದ್ದಳು. ದಾರಿಯಲ್ಲಿ ಒಂದು ನವಿಲು ತಲೆಬೇನೆಯಿಂದ ಒರಲುತ್ತಿದ್ದರೂ ಆ ಮಗುವಿನ ಚಿಲ್ವಿಕೆಯನ್ನು ಕಂಡು ನಗತೊಡಗಿತಂತೆ.

ತವರೂರಿಗ್ಹೋದಾಗ ನವಿಲು ಬಣ್ಣದಪಕ್ಷಿ
ತಲಿಬ್ಯಾನಿಯೆದ್ದು ಅಳತಿತ್ತ | ಕಂದನ
ಚೆಲುವೀಕಿ ನೋಡಿ ನಗತಿತ್ತ |

ಅತ್ತರೆ ಒಬ್ಬನೇ ಅಳಬೇಕಾಗುತ್ತದೆ. ನಕ್ಕರೆ ನಾಲ್ವರು ಜೊತೆಗೂಡುತ್ತಾರೆ ಎನ್ನುವ ಮಾತಿಗೆ ಸಾಕ್ಷಿಯಾಗಿದೆ ಈ ಸಂಗತಿ. ಕಂದನ ಚೆಲುವಿಕೆಯಲ್ಲಿ ಮುಗುಳುನಗೆಯು ಚೆಲ್ಲುವರಿದಿರಲೇಬೇಕು. ಅಂತೆಯೇ ಆತನ ಮುಗುಳುನಗೆಯಲ್ಲಿ ನವಿಲುಪಾಲ್ಗೊಂಡಿತು. ಪರಿಣಾಮವಾಗಿ ತಲೆನೋವಿನ ಗಸಣೆಯನ್ನು ಕಳಕೊಂಡಿತೇನೋ. ಮುಗುಳುನಗೆಯ ಪರಮಾವಧಿ ಪರಿಣಾಮವನ್ನು ತಿಳಿದನಾವು, ಮಗುವಿನ ಅಳುವಿನ ಅಪರಾವಧಿ ಪರಿಣಾಮವನ್ನೂ ಅರಿತುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಮಗು ಅಳಲು ತೊಡಗಿತೆಂದರೆ ಯಾರು ರಂಬಿಸಿದರೂ, ಹೇಗೆ ರಂಬಿಸಿದರೂ ಪ್ರಯೋಜನವಾಗುವುದಿಲ್ಲ. ಆ ಅಳುವಿನ ಅಬ್ಬರ ಆರ್ಭಟಗಳನ್ನು ಕಂಡು, ಹೋಗಿ ಬರುವವರು, ಸುತ್ತೇಳು ನೆರೆಯವರು ಯಾತಕಳುತಾನೆಂದು ಎಲ್ಲಾರು ಕೇಳ್ಯಾರ! ಆ ಮಗುವಿಗೆ ಕಾಯದ ಹಾಲಿನ ಕೆನೆ ಬೇಕಂತೆ! ಹಾಲು ಕಾಯದಿದ್ದೆ ಕೆನೆ ಬರುವುದೆಂತು? ಹಾಲು ಕಾಯುವವರೆಗೆ ತಡೆಯಲಾಗುವುದಿಲ್ಲವೆಂದರೆ, ಗತಿಯೇನು? ಸೂಜಿಯ ಹಿನ್ನೆಯೊಳಗಿಂದ ಆನೆಹಾಯಿಸೆನ್ನುವುದೂ, ಮುಗಿಲ ಮೇಲಿನ ಚಂದ್ರನನ್ನು ತಂದು ಕೈಯಲ್ಲಿಡಬೇಕೆಂದು ಕೇಳುವುದೂ ಮಗುಗಳ ವಿಚಿತ್ರ ಹಟಗಳೇ ಆಗಿರುತ್ತವೆ. ಆದರೆ ನಮ್ಮ ನಿಮ್ಮ ಮನೆಯಲ್ಲಿ ಮಕ್ಕಳು ಏನನ್ನು ಬೇಡಿ ಚಂಡಿ ಹಿಡಿಯುವವೋ ಆ ವಿಷಯವನ್ನರಿತರೂ ಪರಮಾಶ್ಚರ್ಯವುಂಟಾಗದಿರದು.

ಮಗುವಿನ ಹಠದ ವೈವಿಧ್ಯಗಳನ್ನು ತಾಯಭಾಷೆಯಲ್ಲಿಯೇ ತಿಳಿಯಬೇಕು.

ಹಾಲಬೇಡಿ ಅತ್ತಾನ ಕೋಲಬೇಡಿ ಕುಣಿದಾನ
ಮೊಸರಬೇಡ ಕೆಸರ ತುಳಿದಾನ | ಕಂದಯನ
ಕುಸರೀನಗೆಜ್ಜೆ ಕೆಸರಾಗಿ ||
ಕಂದನ ಕಿರಿಕಿರಿ ಇಂದೇನು ಹೇಳಿ
ಬಿಂದೀಗಿಹಾಲು ಸುರುವೆಂದ | ಛೆಂಜಿಯ
ಚಂದ್ರಮನ ತಂದು ನಿಲಿಸೆಂದ ||

ಇದೆಲ್ಲ ಮನೆಯಲ್ಲಿ ನಡೆಯಿಸುವ ಹಠಗಳ ಮಾದರಿಯಾಯಿತು.ಮನೆಯಿಂದ ಹೊರಬಿದ್ದ ಮಗನ ತುಂಟತನ, ಕಿಡಿಗೇಡಿತನ, ಜಗಳಗಂಟತನ ಇವುಗಳ ಮಾದರಿಯೇ ಬೇರೆ.

ಓಣ್ಯಾಗ ಅವಿಚಾರಿ ಮನಿಯಾಗ ರಿಪಿಗೇಡಿ |
ಆಡ ಹೋದಲ್ಲಿ ಕಿಡಿಗೇಡಿ | ಬಾಳಾನ |
ಹ್ಯಾಂಗ ಸಂಬಂಳಸಲೆ ಹಡೆದಮ್ಮ ||
ಕಂದವ್ವ ಕಾಡಿದರ ರಿಂದವ್ವ ಮನಿಗೆಲಸ
ಕಂದೆಲ್ಲಿ ಆಡ್ಯಾನ ಕಡಗೆಲ್ಲಿ ಛಲ್ಲ್ಯಾನ
ದುಂಡ ಮುತ್ತೆಲ್ಲಿ ಉದರ್ಯಾವ | ಕಂದನ |
ಬಿಂದೂಲಿ ಕಂಡವರು ಕೊಡಿರವ್ವ ||
ಕಂದಯ್ಯ ಅಳದೀರೊ ಕವಳೀಯ ಹಣ್ಣೀಗಿ
ತುಂಬುಚ್ಚಿ ಬೀಳ್ವ ಮಗಿಮಾವ | ನೀಬೇಡಿ |
ಅಳದಿರೋ ರಾಮ ಲಕ್ಷಮಣ ||
ಸಾರಿಸಿದ ಮನಿಯಾಗ ನೀರ್ಯಾರು ಛಲ್ಲ್ಯಾರ
ಪಾರಿವಾಳಾಡಿ ಗಿಣಿಯಾಡಿ | ಹಡೆದವ್ನ
ಮೊಮ್ಮಕ್ಕಳಾಡಿ ಮನಗ್ಯಾರ ||

ಮಗುವಿನ ಹಟದ ವೈವಿಧ್ಯಗಳನ್ನು ಲೆಕ್ಕಿಸದೆ, ಅವುಗಳಿಗಾಗಿ ತಲೆಕೊಡಿಸಿಕೊಳ್ಳದೆ, ಮಗು ನಕ್ಕರೊಂದು ರುಚಿಯನಿಸುವಂತೆ, ಅತ್ತರೂ ಒಂದು ರುಚಿಯೆಂದು ಬಗೆದು, ಭಾವಿಸುವ ತಾಯಿಯ ಸಹನೆ ಇನ್ನಾರಿಗೂ ಬಾರದು. ಆಕೆ ಮಗುವಿನ ಅಳುವಿನಲ್ಲಿಯೂ ಒಂದು ಸೌಂದರ್ಯವನ್ನು ಕಾಣಬಲ್ಲವಳಾಗಿದ್ದಾಳೆ.

ಅಳುವ ಕಂದನ ತುಟಿಯು ಹವಳದ ಕುಡಿಯಂಗ
ಕುಡಿಹುಬ್ಬ ಬೇವಿನೆಸಳಂಗ | ಕಣ್ಣೋಟ |
ಶಿವನ ಕೈಯಲಗ ಹೊಳೆದಂಗ ||

ಇಂಥ ಸೌಂದರ್ಯಾನುಭೂತಿಯ ಸ್ವಭಾವವುಳ್ಳ ತಾಯಿಯ ಸಹನೆಯೂ ಒಮ್ಮೊಮ್ಮೆ ಕವಳಿಸದಿರದು. ತಾಳಬೇಕು, ಅಹುದು. ಆದರೆ ತಾಳಮೇಳ ತಪ್ಪಿದರೆ ತಾನೂ ಕುಳಿತು ಅಳುವುದೇ ದಾರಿಯಾಗುತ್ತದೆ.

ಅತ್ತಾನ ಕಾಡ್ಯಾನ ಮತ್ತೇನು ಬೇಡ್ಯಾನ
ಮೆತ್ತ ಮೆತ್ತನ ಧಿಮಕವ | ಕೊಟ್ಟರ |
ಗುಪ್ಪುಚ್ಚಿಪ್ಪಾಗಿ ಮಲಗ್ಯಾನ ||

ಮಗು ಅಳುಬುರುಕ ಇರಬಹುದು. ಹಟಮಾರಿ ಇರಬಹುದು. ಕಿಡಿಗೇಡಿ ಇರಬಹುದು ಜಗಳಗಂಟನಿರಬಹುದು. ಆದರೆ ತಾಯಿ ಅದನ್ನು ಅಲ್ಲಗಳೆಯಬಹುದಾದರೂ ಮಗುವನ್ನು ಒಲ್ಲಗಳೆಯಲಾರಳು.

ಅತ್ತರ ಅಳಲೆವ್ವ, ಕೂಸು ನನಗಿರಲಿ
ಕೆಟ್ಟರ ಕೆಡಲಿ ಮನಿಗೆಲಸ | ಕಂದನಂಥ
ಮಕ್ಕಳಿರಲೆವ್ವ, ಮನಿತುಂಬ ||

ಅಳಬುರಕನಾಗಿ ಮನೆಕೆಲಸವನ್ನು ತಡೆಯುವ ಹಾಗೂ ಕೆಡಿಸುವ ಮಗುವಿನ ಉಪಟಳಕ್ಕೆ ತಾಯಿ ಬೇಸತ್ತರೂ, ಈ ಕಂದನಂಥ ಮಕ್ಕಳಿರಲೆವ್ವ ಮನಿತುಂಬ ಎಂದು ಹಾರಿಯಿಸುತ್ತಾಳೆ. ಮಗುವಿನಿಂದಾದ ಬೇಸರವನ್ನು ಮರುಕ್ಷಣದಲ್ಲಿಯೇ ಮರೆತು, ಏನೆಂದು ಹಾಡಿಕೊಳ್ಳುವಳು ಕೇಳಿರಿ –

ಅಳುಬಂದು ಅತ್ತರಿಯ ಹಸ್ತುಬಂದುಂಡರಿಯ
ಎತ್ತಿಕೊಳ್ಳೆಂಬ ಹಟವರಿಯ | ನನಕಂದ |
ಅಳದಾತ ಅತ್ತ ಬಗೆಯೇನ ||

ಹೀಗೆ ತಾಯಿಯು ವಿರೋಧ ಪರಿಸ್ಥಿತಿಯನ್ನೂ, ಪ್ರತಿಪ್ರಸಂಗವನ್ನೂ ಒಳ್ಳೆಯರ್ಥದಲ್ಲಿ ಗ್ರಹಿಸಿ, ತನ್ನಂತೆ ಪರರ ಬಗೆಯುವ ಪಾಠವನ್ನು ಅಭ್ಯಸಿಸುವುದು ಆಕೆಯ ಹಾಡುಗಳಲ್ಲಿ ಕಂಡಂತೆ, ನಡವಳಿಕೆಯಲ್ಲಿಯೂ ಕಂಡು ಬರುವುದು. ಎಷ್ಟಾದರೂ ತಾಯಿ ಜಗಜ್ಜನನಿಯ ಪ್ರತಿನಿಧಿ? ಅಲ್ಲವೇ ನಡೆದಾಡುವ ಭೂಮಿ ಅಲ್ಲವೇ?