ವ್ಯಕ್ತಿಗಿತ್ತ ಜನ್ಮ

ಗರತಿಯೆಂದರೆ ಒಂದು ವ್ಯಕ್ತಿ; ಹೆಣ್ಣು ವ್ಯಕ್ತಿ; ಅಬಲೆಯೆನಿಸಿಕೊಳ್ಳುವ ವ್ಯಕ್ತಿ. ವ್ಯಕ್ತಿಯಾಗಿ ದಾನವಾಗಿ ಕೊಟ್ಟಿತು ಸಂತಾನವೇ ವ್ಯಕ್ತಿ ದಾನವೆಂದು ಸ್ಥೂಲವಾಗಿ ಹೇಳಬಹುದು. ಅದೂ ಸುಳ್ಳಲ್ಲ. ಆದರೆ ಅದೆಷ್ಟೇ ವ್ಯಕ್ತಿದಾನವಲ್ಲ. ಅಷ್ಟೇ ನೋಡಿದರೂ ಅದೇನು ಸಣ್ಣದಲ್ಲ. ಬಯಕೆ, ಬಸಿರು, ಪ್ರಸವವೇದನೆ, ಮಗುವಿಗೆ ಹೊಟ್ಟೆ ಕಡಿದರೆ ತಾಯಾಗಿ ಅಜಿವಾನ ತಿನ್ನುವುದು, ಬಾಯತುತ್ತು ಮಗುವಿನ ಬಾಯಿಗೆ ಇಡುವುದು. ಇದು ತಾಯಿಯಾದ ಗರತಿಯ ಚಾಂದ್ರಾಯಣಿ ವೃತವಾಯಿತು. ಅಕ್ಕನ ಹರಕೆ, ತಂಗಿಯ ಮಂಗಲ, ಅಜ್ಜಿಯ ಆಶೀರ್ವಾದ, ಅತ್ತೆಯ ಕಕ್ಕುಲತೆ, ಅತ್ತಿಗೆಯ ಅಭಿಮಾನ ಇವೆಲ್ಲ ಸಪ್ತನದಿಗಳ ನೀರಿನಂತೆ ಒಬ್ಬುಳಿಗೂಡಿ ಬಂದು ವ್ಯಕ್ತಿಯನ್ನು ದೀಕ್ಷಾಸ್ನಾನ ಮಾಡಿಸುತ್ತವೆ. ಅವುಗಳನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ನೋಡಿ ಬಿಡೋಣ-

ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡೀಗಿ ಎತ್ತು ದುಡಿದಂಗ | ಬಾಳೆಲೆಯ |
ಹಾಸ್ಯುಂಡು ಬೀಸಿ ಒಗೆದಾಂಗ ||

ಮೊದಲಿಗೆ ಬಾಲೆಗೆ ಮಕ್ಕಳಿಲ್ಲದ ಜನ್ಮವೇ ವ್ಯರ್ಥವೆಂದು ತೋರುವದು. ಜನ್ಮ ವ್ಯರ್ಥವಾದರೆ ಜೀವನವೆಂತು ಸಾರ್ಥಕ? ಜೀವನಕ್ಕಾಗಿ ದುಡಿಮೆ ಬೇಕು. ಅಂಥ ದುಡಿಮೆ ಬಾಡಿಗೆ ಎತ್ತಿನದೆಂದೂ, ಊಟಕ್ಕಾಗಿ ಹಾಸಿದ ಬಾಳೆ ಎಲೆಯೆಂದೂ ತಿಳಿಯಲಾಗಿದೆ. ಅಡಿಗೆಯಲ್ಲ; ಅಂಬಲಿ ಅಲ್ಲ ಸಿಹಿಯಲ್ಲ, ಕಹಿಯೂ ಅಲ್ಲ. ಊಟ ಮುಗಿದ ಕೂಡಲೇ ಬೀಸಿ ಒಗೆಯುವಂಥದು! ದುಡಿಮೆ ಬಾಡಿಗೆ ಎತ್ತಿನದು; ದುಡಿದು ಉಂಡರೂ ಆಕೆಯ ಪಾಲಿಗೆ ಆ ಊಟ ಹಂಗಿನದಾಗಿ ತೋರುವದು. “ಹಂಗೀನ ಬಾನ ಉಣಲಾರೆ” ಎನ್ನುವ ಹೆಣ್ಣು ಆಗಿ ಹುಟ್ಟಿದ್ದರಿಂದಲೇ ಬಂಜೆಯೆಂಬ ಶಬ್ದ ಹೊರಬೇಕಾಯಿತು. ಹೆಣ್ಣು ಮಣ್ಣಾಗಿದ್ದರೆ ಸಾರ್ಥಕವಾಗುತ್ತಿತ್ತು !

ಹೆಣ್ಣು ಆಗುವದಕ್ಕಿಂತ ಮಣ್ಣು ಆಗುದು ಲೇಸು
ಮಣ್ಣಿನ ಮ್ಯಾಲ ಮರವಾಗಿ |
ಇದ್ದರ |
ಬಂದವರಿಗೆಲ್ಲ ನೆರಳವ್ವ ||

‘ಕಂದನ ಕುಡು ಶಿವನೆ ಬಂಧನ ಬಿಡಲಾರೆ’ನೆಂದು ಇಲ್ಲಿ ಶಿವನಲ್ಲಿ ಮೊರೆಯಿಡುವಳು. ಅಲ್ಲಿ ವಿಠಲನ ಗುಡಿಯಲ್ಲಿ ಎಷ್ಟೋ ಹೊತ್ತು ನಿಂತು ನಿಂತು ಬಟ್ಟ ಕುಂಕುಮವೆಲ್ಲ ಬೆವೆತು ಹೋಯಿತು – ‘ಟೋಪ್ಪೀಗಿ ಮಗನ ದಯ ಮಾಡೋ’ ಎಂದು ಅಂಗಲಾಚುವಳು. ಆಗಲೂ ಆ ಬಾಲೆಗೆ ಸಂತಾನ ಚಿಂತೆಯೇ ಪ್ರಚೋದಿತವಾಗುತ್ತದೆ. ಇಂಥ ಒರಳುಕಲ್ಲುಗಳ ಉಪಯೋಗ ಮಾಡಬಲ್ಲ ಸೊಸೆಯಿಲ್ಲ. ಸೊಸೆಯೇ ಇಲ್ಲದಿದ್ದರೆ ಮಗನೂ ಇಲ್ಲ. ಮಗನಿಲ್ಲದಿದ್ದರೆ-ಮಾನೌಮಿಯ ದಿವಸ ಬನ್ನಿಮುಡಿಯುವವರಾರು? ಅದೇ ಚಿಂತೆಯೊಳಗೆ ನಿಂತಾಗ ತಲೆಬಾಗಿಲ ಕಡೆಗೆ ಲಕ್ಷ್ಯ ಹೋಗುತ್ತದೆ ಅದೇನು? ಯಾರೋ ಮಾತಾಡಿದಂತೆ ಕೇಳಿಸಿತು. ಅದಾರು ಅಲ್ಲಿ-ಎಂದು ಬಾಗಿಲಿಗೋಡುವಳು. ಅಲ್ಲಾರಿದ್ದಾರೆ ಮಾತಾಡುವವರು? ಮನೆಯ ಮುಂದಿನ ಅಂಜೂರಿಯ ಗಿಡದಲ್ಲಿ ಟೊಂಗೆಟೊಂಗೆಗೂ ಕುಳಿತು ಗಿಳಿಗಳು ಮಾತಾಡುತ್ತಿವೆ! ಗಿಳಿಗಳ ಮಾತು ಯಾರಿಗೂ ತಿಳಿಯುವದಿಲ್ಲ. ಯಾಕಂದರೆ ಅವು ಪಂಡಿತವಕ್ಕಿ! ಆದರೆ ನಮ್ಮ ಗರತಿಯ ಆ ಮಾತಿನರ್ಥವನ್ನು ಗುರುತಿಸಿದಳು. ಏನೆಂದರೆ- ‘‘ಬಂಜಿ ನಿನ್ನ ಬದುಕು ಹೆವರಿಗೆ” ಆಕೆ ಮತ್ತಿಷ್ಟು ದುಗುಡಗೊಂಡಳು. ಆ ದುಗುಡು ಬೆಳಗುಮುಂಜಾನೆ ಬೀಸುವಕಲ್ಲಿನ ಮುಂದೆ ಹಿಟ್ಟಾಗಿ ಉದುರಿತು; ಹಾಡಾಗಿ ಹರಿಯಿತು-

ಬಂಜಿ ಬಾಗಿಲ ಮುಂದೆ ಅಂಜೂರಿ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲ ಗಿಣಿ ಕೂತು | ಹೇಳ್ಯಾವ |
ಬಂಜಿ ನಿನ ಬದುಕು ಹೆರವರಿಗೆ ||

ಈ ಅನುಭವವು ಸೀತಾಮಾತೆಗೂ ಬಂದಿದೆ; ಈ ಅನುತಾಪದಲ್ಲಿ ಅವಳೂ ಬೆಂದಿದ್ದಾಳೆ. ಅದನ್ನವಳು ಲಕ್ಷ್ಮೀಶ ಕವಿಯ ಬಾಯಿಂದ ಅರಿಕೆಪಡಿಸಿದಂತಿದೆ. ಅದನ್ನಿಲ್ಲಿ ಕಾಣಿಸಲಾಗಿದೆ.

ಕಂದನಡುವ ಬಾಲಲೀಲೆಯಂ ನೋಡಿ ತೊದ
ಲೊಂದಿದಿನಿವಾತನುರ ಕೇಳ್ದು ಮುದ್ದಿನ ಮುದ್ದೆ
ಯಂದದಂಗವನೆತ್ತಿಕೊಂಡು ನಳಿದೊಳ್ಗಳಿಂದಪ್ಪಿ ಕೆಂಗುರುಳ್ಗಳೊಲೆವ ||

ಮುಂದಲೆಯ ಕಂಪನಾಘ್ರಾಣಿಸಿ ತೊರೆದ ಜೊಲ್ಲ
ಚೆಂದುಟಿಯ ಬಾಯ್ದೆರೆಯನೂದೆ ಚುಂಬಿಸಿ ಸೊಗಸು
ಗುಂದದಾಯೆಂದು ಪಂಚೇಂದ್ರಯ ಪ್ರೀತಿಯಂ
ಪಡೆವರಿನ್ನಾವ ಕೃತರೋ ||

ಲಕ್ಷ್ಮೀಶನ ಮಾತು ಇದೊಂದು ಪದ್ಯದಿಂದ ಮುಗಿಯಲಿಲ್ಲ. ಬಂಜೆಯ ಬಗೆಯನ್ನು ಬಗೆದು ತೋರಿಸುವುದಕ್ಕೆ ಆತನಿಗೆ ಶಬ್ದ ಸಾಲದೆ ಹೋಗಿದೆ. ಆದರೆ ಗರತಿಯು ತನ್ನ ಬಗೆಯನ್ನು ಬಗೆ ತುಂಬುವಂತೆ ಹನ್ನೆರಡು ಶಬ್ದಗಳಲ್ಲಿ ಹೇಳಿಬಿಟ್ಟಿದ್ದಾಳೆ. ಇರಲಿ ಇದು ಬಂಜಿಯ ಒಡಲ ಕಳವಳ. ಇನ್ನು ಆ ಗರತಿಯು ಹೊಟ್ಟಿಲಾದ ಬಳಿಕ, ಬಸುರಿಯ ಭಾವವನ್ನೂ ಬಯಲಿಗಿರಿಸಿದ್ದಾಳೆ. ಅದು ಸಹ ಅತ್ಯಂತ ಹೃದಯಸ್ಪರ್ಶಿಯೇ ಆಗಿದೆ. ಏನೆಂದರೆ- ಬಸುರಿಯಾದ ಗರತಿಯ ಶರೀರಾಲಸ್ಯ, ಆಹಾರವರ್ಜ್ಯ, ಬವಳಿಬರೋಣ, ಆಯಾಸ ಮೊದಲಾದ ನೂರು ಸಂಕಟಗಳನ್ನೂ ಗರತಿ ಮರೆತು ಸಹ ಹಾಡಿಕೊಂಡಂತೆ ಇಲ್ಲ. ಆ ಜೀವಸೃಷ್ಟಿಯ ಹೊರ ಆಕೆಗೆ ಹೂವಿಗಿಂತ ಹಗುರಾಗಿ ತೋರುವದು.

ಆಡು ಮಕ್ಕಳ ಕಂಡು ಬೇಡಿತ್ತ ನನ್ನ ಜೀವ
ಕೇಳಿದ್ದನೇನ ಶಿವರಾಯ | ಹೊಟ್ಟ್ಯಾಗ |
ಮೂಡಿದ್ದಾನೇನು ಮಗರಾಯ ||

“ಕಂದ ಹುಟ್ಟುವಾಗ ಕುಂದ್ಯಾವಕ್ಕನ ಮಾರಿ”, “ಬ್ಯಾನೀಯ ತಿನುವಾಗ ಬ್ಯಾಡವ್ವ ಮಕ್ಕಳು”- ಇವೆರಡೇ ಮಾತುಗಳನ್ನು ಮಾತ್ರ ಗರತಿ ಆಡಿ-ಹಾಡಿ ತನ್ನೆದೆಯ ಬಗೆಯನ್ನು ಬಯಲಿಗೆ ಹಾಕಿದ್ದಾಳೆ. ಒಂಬತ್ತು ತಿಂಗಳಲ್ಲಿ ಬಸುರಿ ಬಯಸಿದ್ದನ್ನೂ, ಅದನ್ನು ಒದಗಿಸಿ ಕೊಟ್ಟಿದ್ದನ್ನೂ – “ಒಂದಂಬುತಿಂಗಳಿಗೆ ಒಂದೇನು ಬಯಸ್ಯಾಳ” ಎಂದು ಆರಂಭವಾಗುವ ಪದ್ಯದಲ್ಲಿ ಕಾಣಬಹುದು. ಅಂಗೈಯಗಲುಪ್ಪಾ ಎಳೆಹುಣಸಿ, ಎರಡೆಲಿಗೊಂಡ ಎಳೆಮಾವ, ಮೂಡಲ ದಿಕ್ಕಿನ ಮಗಿಮಾವ, ಕಾಕೀಯ ಹಣ್ಣು ಕೈತುಂಬ, ಕೊಯ್ದ ಮಲ್ಲೀಗಿ ನನಿದಂಡಿ, ಆರಾಕಿದ ಬಾನ ಕೆನಿಮಸರ, ಕಂಟಲ್ಯಾಲಕ್ಕಿ ಕೊಡತುಪ್ಪ- ತಿಂಗತಿಂಗಳಿಗೆ ಬಸುರಿಯು ಬಯಸುವ ಈ ಸಾಹಿತ್ಯವನ್ನು ಮನದಂದರೆ, ದಿವ್ಯಲೋಕದ ಇನ್ಯಾವುದೋ ಸತ್ವವನ್ನು ಬರಮಾಡಿಕೊಳ್ಳುವ-ಸ್ವಾಗತಿಸುವ ಸಿದ್ಧತೆಯಂತೆ ತೋರಿಬರುತ್ತಿದೆ. ಆಯಾ ತಿಂಗಳಲ್ಲಿ ಕೇಳುವ ಬಯಕೆಯ ವಸ್ತುಗಳನ್ನು ಆಗಾಗಿನ ಆಯಾಸ ಭಾರಗಳನ್ನು ಇಳಿಸುವುದಕ್ಕೆ ಔಷಧಿ ಪಥ್ಯಾಹಾರಗಳೋ ಎನ್ನುವಂತಿವೆ. ಅಂತೆಯೇ ಆಪ್ತೇಷ್ಟರು ತಮ್ಮಣಿಕೆಯಂತೆ ಸವಿಯಡಿಗೆಯನ್ನು ಸಜ್ಜುಗೊಳಿಸಿ ಉಣಬಡಿಸಿದರೆ, ಅದನ್ನು ಬಾಯಿಗೆ ಹಾಕಿಕೊಳ್ಳಲಿಕ್ಕಾಗುವದಿಲ್ಲ.

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಬಿಲಿ
ಬಿಸಿಯ ಹೂರಣಗಡಬ ಬಿಳಿಯ ಬೆಲ್ಲ
ರಸಬಾಳಿ ಕಬ್ಬ ಸುಲಿದು ಮುಂದಿಟ್ಟರೆ
ಇಸಮಾಡಿ ಒಂದ ತುತ್ತ ತಿಂದೇನ ತಾಯಿ ||

ಆಕಳ ಹಾಲಿನಲ್ಲಿ ಪರಡಿ ಪಾಯಸ ಮಾಡಿ, ಯಾಲಕ್ಕಿ ಪತ್ರಿಗಳನ್ನು ಅದರಲ್ಲಿ ಹದಗೊಳಿಸಿ, ದೊಣ್ಣಿ ತುಂಬ ತುಪ್ಪ ತಂದು ಮುಂದಿಟ್ಟರೆ – “ಬಟ್ಟೆದ್ದಿ ಬಾಯಲ್ಲಿ ಇಡುವ” ಬಸುರಿಯು, “ಎಳ್ಳ ಹಚ್ಚಿದ ರೊಟ್ಟಿ, ಎಣ್ಣಿಬದನಿಕಾಯಿ, ಮಸರ ಕಲಸಿದ ಬುತ್ತಿ, ಬೆಲ್ಲ ಬೆಳವಲದ್ಹಣ್ಣ” ಬೇಡುವಳು “ಕುಂತರ ಆಕಡಿಕಿ, ನಿಂತರ ತೂಕಡಿಕಿ”ಯೆಂದು ಹೋಳೀಹುಣ್ಣಿಮೆಯ ಸುತ್ತು ತನುಗಾಳಿ ಬೀಸುವಾಗ ಬೆಳಕಿಂಡಿ ಮುಚ್ಚಿಸಿ, ಬಣ್ಣದ ಹಚ್ಚಡವನ್ನು ಬಿಗಿಯಾಗಿ ಹೊಚ್ಚುಕೊಂಡು ಕಣ್ಣು ತುಂಬ ನಿದ್ದೆ ಮಾಡಬಯಸುವಳು. ಬಯಕೆಯ ಈ ವೈಚಿತ್ರ್ಯವನ್ನು ಬಗೆದರೆ, ಅವ್ಯಕ್ತಲೋಕದ ವೈಚಿತ್ರ್ಯವು ಬಸುರಿಯ ಹೊಟ್ಟೆಯೊಳಗೆ ನಡೆದಿರುವಂತೆ ತೋರದೆ ಇರಲಾರದು.

ಒಂದು ಜೀವವು ಮೈದೊಟ್ಟು ಜೀವ ತುಂಬಿ ಭೂಮಿಗೆ ಬರಬೇಕಾದರೆ ವ್ಯಕ್ತ ಅವ್ಯಕ್ತ ಲೋಕಗಳೆರಡರಲ್ಲಿಯೂ ಏನೇನೋ ಗಡಿಬಿಡಿ ನಡೆಯುವುದು ಹಾಗಿರಲಿ, ಹಿರಿಯ ಆಪ್ತರೆಲ್ಲ ಹೃದಯ ತುಂಬಿ ಕೊಡುವ ಹರಕೆಯನ್ನಿಟ್ಟು ಕೇಳುವಂತಿವೆ-

ಅತ್ತಿ ಕಾಯಿ ತಂದು ಅತ್ತೆ ಉಡಿಯಲ್ಲಿ ತುಂಬಿ
ಅತ್ತೆಯೆದ್ದು ಹರಕಿ ಕುಡತಾಳ |ತಂಗೆವಗ |
ಹತ್ತು ಮಕ್ಕಳ ಹಡೆಯೆಂದು ||

ಮಾವಿನ ಕಾಯಿ ತಂದು ಮಾವ ಉಡಿಯಲ್ಲಿ ತುಂಬಿ
ಮಾಯದ ಮಕ್ಕಳ ಹಡೆಯೆಂದು | ತಂಗೆವಗ |
ಮಾವ ಬಂದ್ಹರಕಿ ಕೊಡತಾನ ||

ಬಾಳಿಕಾಯಿ ತಂದು ಭಾವ ಉಡಿಯಲ್ಲಿ ತುಂಬಿ
ಭಾವ ಎದ್ದು ಹರಕಿ ಕೊಡತಾನ | ತಂಗವ್ವ |
ಭಾಳ ಮಕ್ಕಳ ಹಡೆಯವ್ವಾ ||

ಹಿರಿಯರ ಈ ಹರಕೆಗಳೂ, ಆಪ್ತೇಷ್ಟರು ನಡೆಯಿಸುವ ಮಂಗಲೋತ್ಸವಗಳೂ ಒಬ್ಬ ದೇವಿಗೆ ನಡೆಯಿಸುವ ಭಕ್ತಿ- ಉಲ್ಲಾಸಗಳಂತೆ ತೋರುವವು. ಹೀಗೆ ಒಂಬತ್ತು ತಿಂಗಳು ಹೇಗೋ ಸರಿಯುವವು. ಅದರೆ ಪ್ರಸವವೇದನೆಯನ್ನು ಜಗಜ್ಜನನಿಯಲ್ಲದೆ ಇನ್ನಾರು ಸಹಿಸಿಕೊಂಡಾರು? ಹುಟ್ಟಾ ಗೊತ್ತಿಲ್ಲದ ಆ ಬಾಲೆಗೆ ಮೊದಲು ಹೊಟ್ಟೆ ಕುಟ್ಟೆಂದು, ನಡುವನ್ನು ಕೊಡಲಿಯಿಂದ ಕಡಿದಂತಾಗುತ್ತಿದ್ದೀತು. ಹೊತ್ತುಹೊತ್ತಿಗೊಮ್ಮೆ ಕತ್ತಿಯಿಂದ ಕಡೆದಂತೆ, ತಾಸುತಾಸಿಗೊಮ್ಮೆ ತಾಳ ಬಾರಿಸಿದಂತೆ, ಅನಿಸುವದಲ್ಲದೆ-

ಥರಥರ ನಡಗೂತ ತೊಡಿಗೊಳು ಅದರುತ
ತುರುಬಿನ ಕೂದಲು ಬಾಯೆಳಗಿಡವೂತ
ಒಡಿಗಾಯಿ ಹಿಡಿಗಾಯಿ ಒಡೆಯೆ ತೆಂಗಿನಕಾಯಿ
ಒಡೆಯ ಪರವೂತಮಲ್ಲ ಕಡೆಗಾದರೂ ಮಾಡ್ಯಾನಲ್ಲ

ಇಷ್ಟಾಗುವುದಕ್ಕೆ ದೇವರು ಕಣ್ಣು ತೆರೆದನೆಂದೂ, ಕೊಡದೊಳಗಿನ ಕುಂಬಳ ಕಾಯನ್ನು ಆತನೇ ಕಡೆಗಾಣಿಸಬಲ್ಲನೆಂದೂ ಭಕ್ತಿಯಿಂದ ದೇವರಿಗೆ ಕೈ ಮುಗಿದವರು.

ದೇವರ ಮನಿಯಾಗ ಜೋಡೆರಡು ದೀವಿಗೆ
ದ್ವಾರೇದ ಕೈಯಲ್ಲಿ ತಲೆಗುಂಬ | ಇಟಗೊಂಡು |
ಕಂದನ ಹಡೆದು ಮಲಗ್ಯಾಳ ||

ಬ್ಯಾನಿಯ ತಿನುವಾಗ ಬ್ಯಾಡವ್ವ ಮಕ್ಕಳು – ಎನಿಸಿದ್ದನ್ನೂ ಬಾಗಿ ಬಚ್ಚಲ ಹೊಗುವಾಗ “ನೂರೊಂದು ಫಲದ ಕುಡು ಶಿವನೇ” ಎನ್ನುವುದನ್ನೂ ಲಕ್ಷ್ಯಿಸಬೇಕಾಗಿದೆ.

ಇದೆಲ್ಲ ಕಥೆಯ ವ್ಯಕ್ತಿದಾನದ ಒಂದು ಮಗ್ಗಲಾಯಿತು. ಇದು ಒಳ ಮಗ್ಗಲು, ಇನ್ನು ಮೇಲೆ ಒಂದಿಷ್ಟು ಹೊರಮಗ್ಗಲಿನ ಕಥೆ ಅರಿಯೋಣ. “ಮಕ್ಕಳು ಕುಡು ಶಿವನೆ ಮತ್ತೊಂದು ನಾ ಒಲ್ಲೆ- ಬಡತನ ನನಗಿರಲಿ. ಭಾಳ ಮಕ್ಕಳಿರಲಿ” ಎಂದು ಬೇಡುವ ಗರತಿಗೆ ಅಂಥ ಬೆಂಬಲವೇನಿದ್ದೀತು? ಹತ್ತು ಮಂದಿಯೊಡನೆ ಹರುನೀರು ಹೊತ್ತು ತರುವ ಕೆಲಸ ಮಾಡಿ ಬದುಕುವ ಪರಿಸ್ಥಿತಿಯಿದ್ದರೂ ಮುತ್ತೈದೆತನ ಕೊಡು ಶಿವನೆ ಎನ್ನುವಳು. ಭತ್ತ ಕೊಡು ಶಿವನೆ, ಅನುಗಾಲ ಮಕ್ಕಳಿಗೆ ನುಚ್ಚಂಬಲಿ ಮಾಡಿ ಸಲುವೇನು. ಮ್ಯಾಗ ಗುರುವಿನ ದಯವಿರಲಿ | ನನ ಗುರುವೆ | ಬಡತನದ ಚಿಂತೆ ನಿನಗಿರಲಿ. ಬಡತನವೊಂದೇ ಇದ್ದರೂ ಎಂಥ ಕೆಚ್ಚೆದೆಯ ಸಂಸಾರಿಗನೂ ಎದೆಯೊಡಕೊಳ್ಳಬಹುದಾಗಿದೆ; ಅದರೊಂದಿಗೆ ಬಹಳ ಮಕ್ಕಳು ಬೇರೆ ಹುಟ್ಟದರೆ, ಸಂಸಾರದ ಬೇರುಗಳೆಲ್ಲ ಒಂದೇಟಿಗೆ ಕತ್ತರಿಸಿ ಹಾಕಿದಂತೆಯೇ ಆಗುತ್ತದೆ. ಅದರೆ ಕೈಹಿಡಿದ ಗಂಡು, ದಯೆ ನೀಡಿದ ಗುರು ಇಬ್ಬರ ಆಶ್ರಯದಿಂದ ಜಗತ್ತಿನ ತೀರ ಹಿರಿಯ ಎರಡು ಹಗೆಗಳೊಡನೆ ಹೋರಾಡಲು ಅಣಿಯಾಗುತ್ತಾಳೆ. ಕೂಸೆಂದರೆ ಆಕೆಗೆ ತೊಟ್ಟಿದೊಳಗಿನ ತೊಳೆದ ಮುತ್ತು.ಕರಿಯಂಗಿ ಕಸೂತಿ, ತಲೆತುಂಬ ಜಾವುಳ ಆ ಮಗುವಿಗೆ. ಮಗುವಿನ ಆಟ ನವಿಲಾಟಕ್ಕಿಂತ ಮಿಗಿಲು. ಆ ಬಾಲಕ ಗುಲಗಂಜಿ ಗಿಡಕ್ಕೆ ಗುರಿಯಿಡುವವ. ಅಂಥ ಬಾಲಕನನ್ನು ಕಂಡರೆ ಬಾಲೆಯರು ಬಸುರು ಬಯಸುವರು. ದೇಶದಿಂದ ಬಂದ ಗಿಳಿಗಳು, ಅವನ ಬಳಿಗೆ ಬಂದು ಮಾತಾಡಿಸುತ್ತ-“ಕೂಸೇ, ನೀನು ದಾರಮಗ?” ಎಂದು ಕೇಳಬೇಕು.

ತವರೂರಿಗೋದ್ಹಾಗ ನವಿಲ ಬಣ್ಣದ ಪಕ್ಷಿ
ತಲಿಬ್ಯಾನಿಯೆದ್ದು ಅಳತಿತ್ತ | ಕಂದನ |
ಚೆಲುವೀಕಿ ನೋಡಿ ನಗುತಿತ್ತ ||

ಅಂಥ ಕೂಸ ಕಾಯದ ಹಾಲಿನ ಕೆನೆ ಬೇಡಿ ಅಳುವ ಹಟಮಾರಿ. ಅವನು ಹಾಲು ಬೇಡಿ ಅಳುವನು. ಕೋಲು ಬೇಡಿ ಕುಣಿವನು. ಮೊಸರ ಬೇಡಿ ಕೆಸರು ತುಳಿವ ಕಂದನ ಕುಸಲದ ಗೆಜ್ಜೆ ಕೆಸರಾದರೂ ತಾಯಿ ಆಡಿ ಬಂದ ಮಗುವಿನ ಅಂಗಾಲು ತೆಂಗಿನ ನೀರಿನಿಂದ ತೊಳೆಯಲಿಕ್ಕೂ ಸಿದ್ಧಳು. ಒಮ್ಮೊಮ್ಮೆ ಬಿಂದಿಗಿ ಹಾಲು ಸುರುವೆಂದೂ ಸಂಜೆಯ ಚಂದ್ರನನ್ನು ತಂದು ನಿಲ್ಲಿಸೆಂದೂ ಕಿರಿಕಿರಿ ಮಾಡುವ ಕಂದನಿಗೆ ದೃಷ್ಟಿ ತೆಗೆಯಲಿಕ್ಕೆ ಮುತ್ತೇ ಬೇಕು. ಮೊರೆ ತೊಳೆಯಲಿಕ್ಕೆ ಹಾಲೇ ಬೇಕು. ನಗುವ ಮಕ್ಕಳನ್ನು ಕಂಡು ನಲಿಯುವುದು ಸುಲಭ ಆದರೆ ಆಳುವ ಮಗುವಿನಲ್ಲಿಯೂ ಅಮೌಲ್ಯತೆಯನ್ನು ಕಾಣುವದಕ್ಕೆ ತಾಯ ಹೃದಯವೇ ಬೇಕು. ಅಳುವಕಂದನ ತುಟಿ ಆಕೆಗೆ ಹವಳದ ಕುಡಿಯಂತೆ ಕಾಣಿಸಿ, ಕುಡಿಹುಬ್ಬು ಬೇವಿನೆಸಳಂತೆ ಕಂಗೊಳಿಸಿ, ಕಣ್ನೋಟ ಶಿವನ ಕೈಯಲಗಿನಂತೆ ಬೆಳಗುವದು. ಕಂದನ ಅಳುವಿನಿಂದಲೂ ಲೋಕ ಪ್ರಯೋಜನವುಂಟೆಂದು ಗರತಿಯು ನಂಬಿದ್ದಾಳೆ.

ಕಂದಯ್ಯ ಅತ್ತರ ಕಣಿಗೀಲ ಕಾತಾವ |
ಒಣಗಿದ್ದ ಬಾಳಿ ಚಿಗತಾವ | ಬಾಲನ |
ಬರಡಾಕಳೆಲ್ಲ ಹಯನಾಗೆ ||

ಅವನ ಹಟಮಾರಿತನಕ್ಕೆ ವೀರಭದ್ರನ ಅವತಾರವೆನ್ನುವಳು. ಮಾಯಾಯರ ಹಿಂದೆ ಮಗ ಬಂದರೆ ‘ಗಾಳಿ ದೇವರ ಕೂಡ ಗೂಳಿ ದೇವರ ಬಂದಂ’ತೆ ಕಾಣುವಳು. ಸಾರಿಸಿಟ್ಟ ಮನೆಯಲ್ಲಿ ಮಕ್ಕಳು ನೀರು ಚೆಲ್ಲಾಡಿದರೆ ಗಿಳಿ-ಪಾರಿವಾಳಗಳು ಆಡಿದಂತೆ ತಾಯಿಗೆ ಹಿಗ್ಗು. ಓಣ್ಯಾಗ ಅವಿಚಾರಿ, ಮನಿಯಾಗ ರಿಪಿಗೇಡಿ, ಆಡಹೋದಲ್ಲಿ ಕಿಡಿಗೇಡಿ-ಇಂಥವರನ್ನು ಅಳವಿನಲ್ಲಿ ಇರಿಸಿಕೊಳ್ಳುವದೇ ಬಿಗಿ. ಇಂಥ ಮಗುವಿದ್ದರೂ ಹಡೆದವಳಿಗೆ ಸುಖ ಕೊಡದೆ ಇರುವುದಿಲ್ಲ. ಆತನ ಸಿಳಿದಾಟ ತಂಗಾಳಿಯ ತೀಟ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ |
ಕೂಸು ಕಂದಯ್ಯ ಒಳಹೊರಗ | ಆಡಿದರ |
ಬೀಸಣಿಕೆ ಗಾಳಿ ಸುಳಿದಾವ ||

ಹಡೆಯುವ ಮೊದಲು ಬಯಕೆ ಬಸಿರುಗಳನ್ನು ತಾಳಿಕೊಂಡು, ಪ್ರಸವ ವೇದನೆಯನ್ನು ಸಹಿಸಿ, ಪ್ರತ್ಯಕ್ಷ ಮಗುವಿನ ಅಳು-ನಗುಗಳೆರಡರಲ್ಲಿಯೂ ಸುಖವನ್ನು ಕಾಣುತ್ತ, ಅವ್ಯಕ್ತ ಲೋಕದೊಳಗಿನ ಒಂದು ಜೀವಕ್ಕೆ ಮೈಕೊಟ್ಟದ್ದು ತಾಯಿ ಕೈಯತ್ತಿ ಕೊಟ್ಟ ವ್ಯಕ್ತಿದಾನವಲ್ಲವೇ ಅದು? ಅದೆಷ್ಟು ಸುಲಭವೋ? ದುರ್ಲಭವೋ? ಸಹಜವೋ? ನಿರ್ಣಯಿಸುವದು ಕಠಿಣ. ಆದರೆ ಕೃತಜ್ಞತೆಯೇ ಮಾನವನ ಹಿರಿಮೆಗೆ ಅಳತೆಗೋಲಾಗಿರುವದರಿಂದ ಆ ದೃಷ್ಟಿಯಿಂದ ತಾಯಿಯಾದ ಗರತಿಯ ಈ ದಾನವು ದಿವ್ಯದಾನವೇ ಅಹುದು.

ಕುಟುಂಬ ಸಂಸ್ಥೆಯ ಪೋಷಣೆ

ತವರುನಾಡಿನ ಹಿಮಶಿಖರದಿಂದ ಗರತಿಯ ಬೋರೊಂದು ಕುಟುಂಬಕ್ಕೆ ಹೆಂಡತಿಯೆಂದೋ ಸೊಸೆಯೆಂದೋ ಸೇರ್ಪಡೆಯಾಗುವಳು. ಆಗ ಅತ್ತಿಗೆಯೆಂದೂ, ಕೆಲವರು ನೆಗೆಣ್ಣಿಯೆಂದೂ ಕರೆಯುವರು. ಬಿಸಿಲು ಮಾಗಿ ಬೆಳದಿಂಗಳಾದಂತೆ ಹೆಂಡತಿ ಪರಿಪಕ್ವ ದೆಶೆಯಲ್ಲಿ ತಾಯಾಗಿ, ಸೊಸೆ ಪಾಡುಗೊಂಡು ಅತ್ತೆಯಾಗಿ ಮಾರ್ಪಡುವಳಷ್ಟೇ? ಆ ಗರತಿಯ ಕುಟುಂಬದವರಿಗೆಲ್ಲ ತಾಯಿಯಲ್ಲದಿದ್ದರೂ ತಾಯ ಸ್ವರೂಪವನ್ನು ಧರಿಸುತ್ತಿರುವದುಂಟು. ಮಕ್ಕಳಿಗೆ ಹಡೆದ ತಾಯಿ; ಆಳುದೊತ್ತುಗಳಿಗೆ ಪಡೆದ ತಾಯಿ. ಗಂಡನಿಗೆ ಭೋಜೆಷು ಮಾತೆಯಾಗುತ್ತಾಳೆ. ಸೊಸೆಯಂದಿರಿಗೂ ತಾಯ್ತನವನ್ನು ತೋರಿಸಬಲ್ಲವಳು. ಅದು ಹೇಗೆಂದರೆ-

ತನ್ನಂಗ ನೋಡಿದರ ಭಿನ್ನಿಲ್ಲ ಭೇದಿಲ್ಲ |
ತನ್ನಂಗ ತನ್ನ ಮಗಳಂಗ | ನೋಡಿದರ |
ಕಣ್ಣ ಮುಂದಾದ ಕೈಲಾಸ ||

ಎನ್ನುವಲ್ಲಿ “ತನ್ನ ಮಗಳ್ಹಂಗ” ನೋಡುವದು ಸೊಸೆಗೆ ಎಂದು ಅರ್ಥವಾಗುವದರಿಂದ ಗರತಿ ಸೊಸೆಗೆ ತಾಯಿಯೆನಿಸುವಳೆನ್ನುವುದರಲ್ಲಿ ಸಂಶಯವಿಲ್ಲ. ಆ ತಾಯಿಗೆ ಕೌಟುಂಬಿಕ ಸಂಸ್ಥೆಯಲ್ಲಿ ಅದೆಂಥ ಹೊಣೆಗಾರಿಕೆ; ಅವೆಂಥ ಕಠೋರ ನಿಯಮಗಳನ್ನು ಅವಳು ಪಾಲಿಸಬೇಕಾಗುವದು;-ಎಂಬುದನ್ನು ಅರಿತುಕೊಂಡರೆ ಆಶ್ಚರ್ಯವಾಗಬಹುದು. ಮನೆಯ ಒಡತಿಗೆ ಹಿರಿಯರೊಂದಿಗೆ ವರ್ತಿಸುವ ಪ್ರಸಂಗವಿರುವಂತೆ ಕಿರಿಯರೊಂದಿಗೆ ವ್ಯವಹರಿಸುವ ಪ್ರಸಂಗವೂ ಬರುತ್ತದೆ. ತಿಳಿದವರೊಡನೆಯೂ ತಿಳಿಗೇಡಿಗಳೊಡನೆಯೂ ವ್ಯವಹರಿಸಬೇಕಾಗುತ್ತದೆ. ಹಿರಿಯರು ತಿಳಿದವರು ಇದ್ದಲ್ಲಿ ದೈನ್ಯದಿಂದಲೂ ಕಿರಿಯರು, ತಿಳಿಗೇಡಿಗಳು ಇದ್ದಲ್ಲಿ ತುಸು ಬಿರುಸಾಗಿಯೂ ನಡೆಕೊಳ್ಳುವುದು ಅನಿವಾರ್ಯವಿರುತ್ತದೆ. ಹಾಗಿದ್ದಲ್ಲಿ ಆ ವೃತ್ತಿಗಳ ಕಾಲ್ಪನಿಕ ರೇಷೆಯನ್ನು ಮೀರಿ ಹೋಗತಕ್ಕದ್ದಲ್ಲ.

ಕಂಡ ಕಂಡವರೊಳು ಕಡುದೈನ್ಯವಡೆಯದು
ದ್ದಂಡೆಯೆನಿಸಿ ತಾನಿರದೆ ||
ಗಂಡನ ಘನತೆಯೆಂತಂತು ಪೆರ್ಮೆಯ ಕೈ –
ಕೊಂಡೆಸೆವುದು ಕೋವಿದೆಯರು ||

ಎಂಬ ಮಾತನ್ನು ಅವಳು ಮರೆತಿರಲಾರಳು, ಇದಕ್ಕಿಂತಲೂ ಕಠಿಣವಾದ ಇನ್ನೊಂದು ನೀತಿಯನ್ನು ಗರತಿಯು ಆಚರಿಸುವಳು. ಭಾವ, ಮೈದುನ, ಗಂಡ, ಮಾವಂದಿರುಳ್ಳ ಆ ಸಂಸಾರಕ್ಕೆ ಅವಳು ತಾಯ ಸ್ವರೂಪಳೇ ಆದರೇನು? ಹೊಟ್ಟೆಯಲ್ಲಿ ಬಂದ ಮಗನಾಗಿದ್ದರೂ ಅವನು ಪ್ರಾಯಕ್ಕೆ ಬಂದಾಗ, ತಳೆಯಬೇಕಾದ ಭಾವನೆಯನ್ನು ಈ ಕೆಳಗಿನ ಪದ್ಯದಲ್ಲಿ ಕಾಣಬಹುದುದಾಗಿದೆ.

ಬಸಿರೊಳು ಬಂದ ಕುವರನಾದದೊಡಮೇನು
ಪೊಸವರೆಯದ ಪುರುಷನನು
ಒಸೆದು ನಿಟ್ಟಿಸಿಯೋಡಲೋಜೆಯೊಳ್ಪಗಳ ಬ-
ಣ್ಣಿಸಲಾಗದು ಭಾವೆಯರು

ಕೆಳಗಿನ ಪ್ರಕೃತಿಯಲ್ಲಿ ಅಂದರೆ, ಶರೀರ, ಪ್ರಾಣ, ಬುದ್ದಿಗಳೇ ತಾನೆಂಬ ಅರಿವಿನಲ್ಲಿ ಈ ನಿಲುಮೆಯನ್ನು ಇಟ್ಟುಕೊಳ್ಳುವುದೇ ವಾಸ್ತವಿಕವಾಗಿರುತ್ತದೆ. ಆದರೆ ಮೇಲಿನ ಪ್ರಕೃತಿಯಲ್ಲಿ ಅಂದರೆ ಶರೀರ, ಪ್ರಾಣ, ಬುದ್ಧಿಗಳು ಯಾರವೋ ಅವರೇ ತಾನೆಂಬ ಅರುವಿನಲ್ಲಿ ಜೀವನ ನಡೆಸುವುದಕ್ಕೆ ಬೇರೊಂದು ನಿಲುಮೆಯನ್ನು ತಳೆಯಬೇಕಾಗುತ್ತದೆ. ಅಕ್ಕಮಹಾದೇವಿಯ ಜೀವನವನ್ನು ಇಲ್ಲಿ ಉದಾಹರಿಸಬಹುದಾಗಿದೆ. ಇಂಥ ಮಹಿಮಾಶಾಲಿನಿಯ ಜೀವನವು ಗರತಿಯರಿಗೆ ಆದರ್ಶವೆಂದು ಹೇಳುವುದು ಸಹ ತಪ್ಪುಗೆಟ್ಟಾದೀತು. ಗರತಿ ಮಾಯೆಯ ಮುಸುಕು ಧರಿಸಿ, ಗಂಡ, ಮಗ, ಗೆಳತಿ, ಮಗಳು, ತನ್ನ ಧನ ಎನ್ನುತ್ತ ಅದರಲ್ಲಿಯೇ ತಾದಾತ್ಮ್ಯವನ್ನು ಹೊಂದಿದವಳಾಗಿರುತ್ತಾಳೆ. ಅಕ್ಕಮಹಾದೇವಿಯು ಮಾಯೆಯ ಮುಸುಕನ್ನು ಕಳೆದೊಗಿದವಳಾದ್ದರಿಂದ ಗಂಡ, ಮಗ, ಗೆಳತಿ, ಮಗಳು ಮೊದಲಾದವರ ವೇಷಗಾರಿಕೆ ಗೊತ್ತಾಗಿ ಅವರು ಯಾರೆಂಬುದನ್ನು ಅರಿತುಕೊಳ್ಳುತ್ತಾಳೆ. ಆದ್ದರಿಂದ ಅಕ್ಕಮಹಾದೇವಿಯು, ‘“ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ. ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಲಾರರು” ಎಂದು ಹೇಳುವ ವಚನದಲ್ಲಿ ಜನಸಾಮಾನ್ಯರೆಲ್ಲ ಮಾಯೆಯ ಮುಸುಕಿನಲ್ಲಿದ್ದುಕೊಂಡಿದ್ದಾರೆಂದೂ, ಪರಮಾತ್ಮನು ಅದನ್ನು ಉದ್ದೇಶಪೂರ್ವಕವಾಗಿ ಹಾಗೆ ರಚಿಸಿದ್ದಾನೆಂದೂ ತಿಳಿದುಬರುವುದು.

ಊರ ಸೀರೆಗೆ ಅಸಗ ತಡಬಡಗೊಂಬಂತೆ
ಹೊನ್ನೆನ್ನದು ಮಣ್ಣೆನ್ನದು ಹೆಣ್ಣನ್ನದು ಎಂದು-
ನೆನೆನೆನೆದು ನಿಮ್ಮ ನರಿಯದ ಕಾರಣ
ಕೆಮ್ಮನೆ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ

ಇದನ್ನರಿತ ಜೀವ ಶರಣವೆನಿಸಿತು. ಇದನ್ನರಿಯದ ಜೀವ ಮಾನವವೆನಿಸಿತು. ಶರಣನ ಜೀವನಕ್ಕೆ ಹೊಲಬು ಹಾದಿಯೊಂದಿದೆ; ಮಾನವನ ಬಾಳುವೆಗೆ ಹೊಲಬು ಹಾದಿ ಇನ್ನೊಂದಿದೆ. ಒಂದು ಅಕ್ಕನ ಹಾದಿ. ಇನ್ನೊಂದು ಗರತಿಯ ಹಾದಿ. ಗರತಿಯು ತನ್ನ ಗಂಡನನ್ನು ಕುರಿತು ಹಿಂಡು ಮಂದ್ಯಾಗಿನ ಪುಂಡ; ರಾಯರಿಗೆ ಎಂಥ ಸಿರಿಗಂಗಿ ಹಡೆದಾಳೆ! ವಾರೀಗಿ ರಾಯವಾಲೀಗಿ ವಜ್ರಜಡಿದ್ಹಾಂಗ! ಆತನ ಕಾಲ ಹಿಮ್ಮಡವು ಕಮಲದಂತೆ! ಸಂಜೆಯೆ ಚಂದರನಿಗಿಂತ ಬಲು ಚೆಲುವ!! ರಾಯರಿಗಿಂತ ಭಾರಿ ಗುಣದವರಿಲ್ಲ. ನಮಗ ನಮ ರಾಯ ಬಡವೇನು? ಬಂಗಾರ ಮಾಲ ಇದ್ಹಾಂಗ! ರಾಯರು ಹಣಚಿಬಟ್ಟು ಇದ್ದಂತೆ; ತಾನು ಅದರ ಮೇಲೆ ಹರಿದಾಡುವ ಕುಂಕುಮದ ಹಾಗೆ! ಅತ್ತೀ, ನಿಮ್ಮ ಹೊಟ್ಟೆವರು ಅಸಲ ಪಂಡಿತರಾಯ! ಇಂಥವರನ್ನು, ಶಿವನಲ್ಲಿ ನಿಂತು ಬೇಡಿ ಪಡೆದಿರುವೆ. ಊದೀನ ಕಡ್ಡೆಂಗ ಬಳಕೂವ ದೊರಿ ಕೂಡ ಬದುಕು ಮಾಡೂದು ಬಹು ಚಂದ-ಹೀಗೆ ಹೇಳುವಳು.

ಅಕ್ಕನು ಅದೇ ಗಂಡನಿಗೆ ಏನೆನ್ನುವಳು ಕೇಳಿರಿ-

“ಒಳಗಿನ ಗಂಡನವ್ವಾ. ಹೊರಗಿನ ಮಿಂಡನವ್ವಾ… ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು.”

ಕುಟುಂಬ ಸಂಸ್ಥೆಯ ಸಂರಕ್ಷಣೆಗೆ ಗರತಿಯ ನಿಲುಮೆ ಹೆಚ್ಚು ಪ್ರಯೋಜನಕಾರಿ. ಅಕ್ಕನ ಬದುಕು ಇನ್ನೂ ಮುಂದುವರಿದು ಸಾಗುವಾಗಿನ ಅಭ್ಯಾಸದ ಪಾಠವಾದೀತು. ಗಂಡಸುಮಗನು ಯಶಸ್ವಿಯಾದರೆ ತನ್ನ ಮನೆತನಕ್ಕೆ ಕೀರ್ತಿ, ಯಶಸ್ಸು. ಆದರೆ ಹೆಣ್ಣುಮಗಳು ಯಶಸ್ವಿಯಾದರೆ ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಕೀರ್ತಿ ಯಶಸ್ಸು ದೊರೆಯುವವು.

ತಾವರಿಯ ಗಿಡಹುಟ್ಟಿ ದೇವರಿಗೆ ನೆರಳಾದಿ
ನಾ ಹುಟಟಿ ಮನೆಗೆ ಎರವಾದೆ | ಹಡೆದವ್ವ |
ನೀ ಕೊಟ್ಟ ಮನೆಗೆ ಹೆಸರಾದೆ ||

ಹುಟ್ಟಿದ ಮನೆಗೆ ಎರವಾದರೂ ಚಿಂತೆಯಿಲ್ಲ ಕೊಟ್ಟ ಮನೆಗೆ ಹೆಸರು ತರುವುದಕ್ಕಿಂತ ಹೆಚ್ಚಿನ ಪ್ರಯೋಜನ ಹೆಣ್ಣಿಗೆ ಇನ್ನಾವುದಿದೆ? ಬಾಳಿನಲ್ಲಿ ಗೆಲುವು ಪಡೆಯುವುದು ಅಸಾಧ್ಯವೇನಲ್ಲ; ಆದರೆ ಸುಸಾಧ್ಯವೂ ಆಗಲಾರದು. ದುಸ್ಸಾಧ್ಯ ಮಾತ್ರ ಅಹುದು.

ಹೆಣ್ಣೀನ ಕಾಯವ ಮಣ್ಣು ಮಾಡಲಿಬೇಕ
ಸುಣ್ಣದ್ಹಳ್ಳಾಗಿ ಸುಡಬೇಕ | ಈ ಜಲುಮ |
ಮಣ್ಣು ಮಾಡಿ ಮರ್ತ್ಯಗೆದಿಬೇಕ