ಮೊದಲಗಿತ್ತಿಯಾಗಿ ಅತ್ತೆಯ ಮನೆಗೆಬಂದ ಸೊಸೆಯೆಂದರೆ ತೊತ್ತಿಗಿಂತ ತೊತ್ತಾದ ಪಡಿದೊತ್ತೇ ಸರಿ. ತವರುಮನೆಯಲ್ಲಿ ತಾಯಿತಂದೆಗಳು ಲೇವಳಮಾಡಿ ಸಲಹಿದ ತನ್ನನ್ನು ಏಳಲ ಮಾಡಿದರೆ ಆಕೆಯ ಜೀವ ತಾಳಿಕೊಂಡೀತೆ?” ಎಂಥಲ್ಲಿ ಕೊಟ್ರೀ ಹಡೆದಮ್ಮ” ಎಂದು ಮನದಲ್ಲಿಯೆ ಮರ ಮರ ಮರುಗದೆ ಇರಲಾರಳು, ಬೀಸು ಕಲ್ಲಿನ ಮುಂದೆ ಅಂತಃ ಸಾಕ್ಷಿಯಾಗಿ ತೋಡಿಕೊಳ್ಳುವ ಹಾಡು ಏನೆಂದರೆ-

ಚಿಂತಾಕು ಇಡಲಿಲ್ಲ ಚಿಂತೆಬಿಟ್ಟಿರಲಿಲ್ಲ
ಎಂಥಲ್ಲಿ ಕೊಟ್ಟೆ ಹಡೆದವ್ವ | ನಡುಮನಿ
ಜಂತಿ ಜರಿದ್ಹಂಗ ಜರದೇನ ||

ಈ ಸೋಸೆಯ ಪಾಡು ಇನ್ನೂ ಒಳ್ಳೆಯದಂದೇ ಹೇಳಬೇಕು. ಕೆಲವೊಂದು ಮೊದಲಗಿತ್ತಿಯರ ಪಾಡು ಇದಕ್ಕಿಂತ ನಿಕೃಷ್ಟವಾಗಿರುವುದುಂಟು. “ಹುಟ್ಟಿದಮನೆ ಹೋಳಿಹುಣ್ಣಿವೆ, ಕೊಟ್ಟಮನೆ ಶಿವರಾತ್ರಿ” ಆಗಿರುವುದುಂಟು. ಅಲ್ಲಿ ಹೊಯ್ಕೊಳ್ಳುವ ಹಬ್ಬ, ಇಲ್ಲಿ ಉಪವಾಸದ ಉತ್ಸವ. ಮನೆಕೆಲಸ ಮೈ ಮುರಿದು ಮಾಡುವಷ್ಟು. ಮೇಲೆ ಕೂಲಿಯ ಕೆಲಸಮಾಡಿ ಒಂದಿಷ್ಟು ಗಳಿಸಿ ತರಬೇಕು. ಇಂಥ ಪ್ರಸಂಗದಲ್ಲಿ ತವರು ಮನೆಯನ್ನು ಮರೆವುದೆಂತು? ಇದುಸಾಕು, ಅದು ಸಾಕುಸಾಕು.

ಈಗೊದಗಿದ ಪರಿಸ್ಥಿತಿ ಹಿಂದೆ ಬೇಡಬಯಸಿದ್ದೇ ಆಗಿದೆಯೆಂದು ಶ್ರೀಮಾತೆ ಹೇಳುತ್ತಾರೆ. ಆದ್ದರಿಂದ ಈಗಲಾದರೂ ಒಳ್ಳೆಯದನ್ನು ಬೇಡಿ, ಭವಿಷ್ಯದಲ್ಲಿ ಕಲ್ಯಾಣವನ್ನು ಹಾರಯಿಸುವ, ಎತ್ತುಗಡೆ ನಡೆಸಬೇಕು.

ಆಕಳಂಥಾ ಅತ್ತಿ ಗೋಕುಲದಂಥಾ ಮಾವ
ಶ್ರೀಕೃಷ್ಣನಂಥ ಪತಿರಾಯ | ಇದ್ದರ
ಸಾಕೀದ ತವರು ಮರೆತೇನ ||

ಇದು ಬಹಳ ಉಚ್ಚತರದ ಹಾರಯಿಕೆಯಾಯಿತು. ಗೋಕುಲ ಶ್ರೀ ಕೃಷ್ಣರಂಥವರ ಸಂಪರ್ಕವೆಂದರೆ ಈ ಸೀಮೆಯದಲ್ಲ. ಗಗನಗೋಪುರವೇ ಆಗಿದೆ. ತನಗೊಪ್ಪುವ ಹಾಗೂ ಸಣ್ಣಬಾಯಿಗೆ ದೊಡ್ಡ ತುತ್ತಲ್ಲದ ಪರಿಸರವನ್ನ ಹಾರಯಿಸುವುದು ವಾಸ್ತವಿಕ. ಅದು ಕೈಗೆಟಕುವುದು ಅಸಾಧ್ಯವೂ ಅಲ್ಲ, ದುಸ್ಸಾಧ್ಯವೂ ಅಲ್ಲ. ಅಂಥ ಹಾರಯಿಕೆ ಯಾವುದು ಹಾಗಾದರೆ?

ಅರಸು ತೂಕದನಲ್ಲ ಗಳಿಸುವ ಮೈದುನ
ನಡಿಸಿಕೊಳ್ಳುವತ್ತಿ ಸಿರಿಗಂಗಿ | ಮನಿಯಾಗ
ಬದುಕು ಮಾಡೂದು ಅರಿದೇನ ||

ಬಯ್ದು ಹೇಳಿದವರು ಬುದ್ದಿ ಹೇಳಿದರು, ನಕ್ಕು ಹೇಳಿದವರು ಕೆಡಕು ಹೇಳಿದರು. ಅತ್ತೆ, ಗಂಡ ಹಾಗೂ ಭಾವ ಅವರು ಕ್ರಮವಾಗಿ ಹಿರಿಯರು. ಹಿರಿಯರಾಗಿ ಹಿರಿತನದಿಂದ ಪಾಠ ಕಲಿಸುವಾಗ ಸಿಡಿಪಿಡಿ ಮಾಡಲಿ, ಬಯ್ಯಲಿ, ಒಮ್ಮೊಮ್ಮೆ ಕೈತಪ್ಪಿ ಹೊಡೆಯಲಿ, ಆದರೆ ಗೂಳಿಬಿದ್ದಾಗ ಆಳಿಗೊಂದು ಕಲ್ಲು ಒಗೆದಂತೆ, ಒಂದು ಮೊಲಕ್ಕೆ ಒಂಬತ್ತು ನಾಯಿಬಿಟ್ಟಂತೆ ಸಣ್ಣವರೆನ್ನದೆ ದೊಡ್ಡವರೆನ್ನದೆ, ತಿಳಿದೋ ತಿಳಿಯದೆಯೋ ಕೈತೊಳಕೊಂಡು ಬೆನ್ನು ಹತ್ತಿದರೆ ಸೊಸೆ ಏನುಮಾಡಬೇಕು? ತವರವರಂತೂ ಕೊಟ್ಟ ಹೆಣ್ಣು ಕುಲಕ್ಕೆ ಹೊರತು, ಕೊಳ್ಳಿ ಒಲೆಯಲ್ಲೆ ಉರಿಯಬೇಕು -ಎನ್ನುವ ನೀತಿಯನ್ನಿ ಕಿವಿಮರಕುಟ್ಟುವಂತೆ ಹೆಣ್ಣಿಗೆ ಹೇಳಿದರೆ; “’ಕರುಣದಿ ಕಾಯೊ ಗೋಪಾಲಾ | ನಾ | ದುರುಳರ ವಶವಾದೆ ರುಕ್ಮೀಣೀಲೋಲಾ’ ಎಂದು ಪ್ರಾರ್ಥಿಸುವುದೇ ದಾರಿ ಆಕೆಗೆ. ರುಕ್ಮಿಣೀಲೋಲನು ಸಕಾಲಕ್ಕೆ ತನ್ನ ನೆರವನ್ನು ಒದಗಿಸದಿದ್ದರೆ, ಆತನ ಬಳಿಗೇ ಹೋಗುವ ಸಿದ್ಧತೆಯನ್ನೇ ಆಕೆ ನಡೆಯಿಸಬೇಕಾಗುತ್ತದೆ. “ದಾರಿಯಾವುದಯ್ಯ ವೈಕುಂಠದ ದಾರಿಯಾವುದಯ್ಯ” ಎಂದು ಕೇಳುವುದು ಯಾರಿಗೆ? ತನಗೆ ಸರಿದೋರಿದ ಇಲ್ಲವೆ ಸಿಕ್ಕ ದಾರಿ ಹಿಡಿದು ಸಾಗಬೇಕಲ್ಲವೇ? ಬಾವಿಗೋಕೆರೆಗೋ ಬೀಳಬೇಕು; ಉರಲು ಹಾಕಿಕೊಂಡೋ, ಉಟ್ಟಬಟ್ಟೆಗೆ ಬೆಂಕಿತಗುಲಿಸಿಕೊಂಡೋ ಅಸುನೀಗಬೇಕು. ಅಂಥ ಅಕ್ರಮ ಪ್ರಯತ್ನ ನಡೆಸುವಾಗ ಅಕಸ್ಮಾತ್ ಉಳಿದುಕೊಂಡರೆ? ಅಡಿಗಡಿಗೂ ಸಾವಿನ ಸಂಕಟಕ್ಕೆ ಮೈಯೊಡ್ಡಬೇಕು; ಮನವೊಡ್ಡಬೇಕು. ಸಾವು ಸಹ ಅತ್ತೆಮನೆಯ ಮೇಲುಗಟ್ಟಿದರೆ ಹೆಣ್ಣಿನ ಗತಿಯೇನು?

ಅರಿಕೆಯಿಲ್ಲದ ಅತ್ತೆ, ತಾನೂ ಒಮ್ಮೆ ಆ ಮನೆಗೆ ಸೊಸೆಯಾಗಿಬಂದು ಕಾಲಕ್ರಮೇಣ ಅತ್ತೆಯಾದ ವಿಷಯ ಇತಿಹಾಸವನ್ನು ಮರೆತೇ ಬಿಟ್ಟಿರುತ್ತಾಳೆ.

ಮಾತೀಗಿ ಮಲಕಿಲ್ಲ ರೀತೀಗಿ ತೊಡಕಿಲ್ಲ
ಸಾಸೀವಿ ಕಾಳ ಹುಳುಕಿಲ್ಲ | ಅತ್ತೀಗಿ |
ಸೋಸಿ ನಡೆದರೆ ಅರಿಕಿಲ್ಲ ||

ಈ ಗೊಂದಲದಲ್ಲಿ ಮಾವಯ್ಯನ ಹೆಸರೇ ಬರಲಿಲ್ಲವಲ್ಲ ! ದಿವಂಗತನಾಗಿರುವನೋ ಅಂಥ ಪದವನ್ನು ಮನೆಯಲ್ಲಿಯೇ ಪಡೆದಿರುವನೋ ತಿಳಿಯದು. ಮಾವಯ್ಯನ ತರುವಾಯ ಭಾವಯ್ಯ “ತಂದೆಯಡಗಿದ ಬಳಿಕ ನೀನೇ ತಂದೆ” ಅನ್ನಬೇಕಲ್ಲವೇ ಅವನಿಗೆ ಚಿಕ್ಕ ತಮ್ಮಗಳು? ಅವರದೂ ತಮ್ಮನ ಹೆಂಡತಿಯ ಮೇಲೆ ಟಬರು. ಪತಿಯ ನೆರಳಿನಂತೆ ಅನುಸರಿಸಿ ಬಂದ ಭಾವಯ್ಯನ ಮಡದಿಯ ರೀತಿ, ಭಾವಯ್ಯ ಮಾವಯ್ಯನ ಸ್ಥಾನಕ್ಕೆ ಬಂದವನು ನೆಗೆಣ್ಣಿಯು ಚಿಕ್ಕತ್ತೆ ಅಂದರೆ ಸಹಾಯಕ ಅತ್ತೆಯಾದವಳು.ಆದ್ದರಿಂದ ಸೊಸೆ ಅವರೆಲ್ಲರ ಕಾಟ ಕೀಟಲೆಗಳನ್ನು ಸಹಿಸುವುದಕ್ಕೆ ಅನುಮಾನಿಸಲೇಬಾರದು.

ಭಾವಯ್ಯ ಮುನಿದರ ಬಲಗಾಲ ಹಿಡದೇನ
ಭಾವಯ್ಯನ ಮಡದಿ ನೆಗೆಣ್ಣಿ | ಮುನಿದರ
ಬಾರಕ್ಕನೆಂದು ಕರೆದೇನ ||

ಆ ತರ್ವಾಯ ಬರುವುದು ಪತಿಯ ಅಂದರೆ ಮಾರಾಯರ ಸರತಿ ಅವನನ್ನು ಅನುಸರಿಸಿ ಮೈದುನದೊರೆ, ಅವರೆಲ್ಲರ ಎದ್ದಲಗಾಟವನ್ನು ಸೊಸೆತಾಳಿಕೊಳ್ಳುವದೆಂತು? ತಾಳಿಕೊಳ್ಳುವುದೆಂದರೆ ಅದೇ ಆಶ್ಚರ್ಯ. ಆ ಸಂದರ್ಭದ ತಪ್ಪೊಪ್ಪಿಗೆಯನ್ನು ಗರತಿ ಬೀಸುಕಲ್ಲಿನ ಸಾಕ್ಷಿಯಾಗಿ ಅಂತರಂಗಕ್ಕೆ ಒಪ್ಪಿಸುತ್ತಾಳೆ.

ಮಾರಾಯರು ಬಯ್ದರ ಬಾರವು ಕಣ್ಣೀರು
ಮಾರಾಯರ ತಮ್ಮ ಮೈದುನ | ಬಯ್ದರ
ಮಾಡಿಲ್ಲದ ಮಳೆಯು ಸುರಿದಂಗ ||

ತಾನು ತನ್ನತ್ತೆಯೊಡನೆ ಸರಿಯಾಗಿ ನಡಕೊಳ್ಳಲಿಲ್ಲವೇ? ಆಕೆಗೆ ಅಪಚಾರವನ್ನೇನಾದರೂ ಮಾಡಿದೆನೇ? ಆ ಪಾಪದ ಫಲವೇ ಇಲ್ಲಿ ನನ್ನನ್ನು ತಿಕ್ಕಿ ಮುಕ್ಕರಿಸುತ್ತಿರುವುದೇ – ಎಂದು ಗರತಿ ಅನುತಾಪ ಪಡಬಹುದಾಗಿದೆ. ಅತ್ತಿಗೆಯೆಂದರೆ ಹೆತ್ತಾಯ ಸರಿಯೆಂದು ಭಾವಿಸಿದವಳು ನಾನು. ಮೈದುನನಿಗೆ ನಾನು ಅತ್ತಿಗೆ, ಅವನು ಅತ್ತಿಗೆಯೊಡನೆ ಹೆತ್ತಾಯಿಯಂತೆ ವರ್ತಿಸಬೇಡವೇ? ಆತನ ಅಪರಾಧವು ಕ್ಷಮ್ಯವೆನಿಸದು. ಅಂತೆಯೇ ನಾನು ಒಳಗೊಳಗೆ ಕುದಿಕುದಿದು ಬೇಯಬೇಕಾಗಿದೆ.

ಮೈದುನ ಬಯ್ದರ ಹೊಯ್ದ ಹೋಳಿಗೆಯಾದೆ
ಕೊಯ್ದ ಮಲ್ಲೀಗಿ ನೆನೆಯಾದೆ | ಮರ್ತ್ಯಾದಾಗ |
ಅತ್ತೀಗಿ ಹೆತ್ತಾಯಿ ಸರಿಯೆಂದ ||

ಈ ಎಲ್ಲ ನವಗ್ರಹಗಳೊಡನೆ ಗಂಡನೂ ದಶಮಗ್ರಹವಾಗಿ ಸೇರಿಕೊಂಡರೆ ಗರತಿಗೆ ಇನ್ನಾವ ದಾರಿ? ಇಷ್ಟಾಗಿಯೂ ಸೇರದ ಗಂಡಯ್ಯನನ್ನು ಏನೆಂದು ಕರೆದಳು ಗೊತ್ತೇ? “ಬಾರೋ ಗಂಡಯ್ಯ ಮಲಗೋಣ, ಮಂಚದ ಮೇಲೆ ತಾಳೆ ಹೂವಿನ ತಲೆದಿಂಬ” ಉಂಡರುಟ್ಟರೂ ಸೇರದ, ಮಂಡೆ ಬಾಚಿದರೂ ಸೇರದ ಪತಿರಾಯ ತಾಳೆ ಹೂವಿನ ತಲೆದಿಂಬಕ್ಕೆ ತಲೆಕೊಟ್ಟು ಮಂಚದ ಮೇಲೆ ಪವಡಿಸಲು ಒಲ್ಲೆನ್ನಲಿಲ್ಲ. ಅಂಥ ಸಂದರ್ಭದಲ್ಲಿ ಗರತಿಪತಿ ದೇವನಿಗಾಗಿ ದೇವನಲ್ಲಿ ಮೊರೆಯಿಟ್ಟಿದ್ದೇನೆಂದರೆ –

ಉಂಡರುಟ್ಟರು ಸೇರ ಮಂಡೆ ಬಾಚರು ಸೇರ
ಗಂಡನಲ್ಲ ಕಾಣೋ ದುಸ್ಮಾನ | ಹೊಟ್ಟೇಲೆ
ಕೆಂಡದಂತೆ ಮೂಡೋರಘುರಾಮ ||

ಕೆಂಡದಂತೆ ಮೂಡಿ ಬಂದೇ ರಘುರಾಮ. ಪ್ರತಿ ಪರಶುರಾಮನಂತೆ ತಂದೆಯ ದುಸ್ಮಾನತನದ ತಲೆಯನ್ನು ಕತ್ತರಿಸಿ ಹಾಕಲೆನ್ನುವುದೇ ಆಕೆಯ ಅಭೀಪ್ಸೆ. ಆ ಬಳಿಕ ಗರತಿ ಅತ್ತೆ ಮನೆಯ ಅರಸಿಯಾಗುವುದಕ್ಕೆ ಸುಗಮದಾರಿಯಾಗುವುದು.