ಜೀವ ಬೇರೆ, ಜೀವನ ಬೇರೆ, ಜೀವವಿರುವಲ್ಲೆಲ್ಲ ಜೀವನವಿರದು. ಜೀವವೆನ್ನುವುದು ರಸ ವಿರಸಗಳ ಬೊಗಸೆಯೊಳಗಂದ ಹಾಯ್ದು ಸಮರಸದತ್ತ ಸಾಗಬೇಕಾಗಿದೆ. ಸಮರಸದ ದಾರಿಯನ್ನು ತಲುಪಿದಾಗ ಜೀವ್ನ ಪ್ರಾರಂಭವಾಗುತ್ತದೆ. ಸಾಮರಸ್ಯವೇ ನಿಜವಾದ ಜೀವನದ ಕುರುಹು.

ಗೃಹಿಣಿಯ ಕಾರ್ಯಕ್ಷೇತ್ರ ಸೀಮಿತವಾದರೂ ಅದು ಅತ್ಯಂತ ಮಹತ್ತರವಾದದ್ದು. ಮನೆ, ಮಕ್ಕಳು, ಬಳಗ, ನೆರೆಹೊರೆ ಇವುಗಳಡನೆ ಸುಸಂಬಂಧ. ಮದುವೆ, ಮುಂಜೆ, ಶೋಭನ, ಕುಪ್ಪಸ ಮಾಡುವುದು, ತೊಟ್ಟಿಲಲ್ಲಿ ಹಾಕುವುದು ಮೊದಲಾದವುಗಳನ್ನು ಸುಸಂಬದ್ಧವಾಗಿ ಆಚರಿಸುವುದು. ದೇವರು ದಿಂಡಿರು, ಹರಕೆ ವೃತ, ಜಡೆತೆಗೆಯುವುದು, ಮುತ್ತಯ್ದೆಯರನ್ನು ಉಣ್ಣಿಸುವುದು, ಕುಲಗುರುಗಳ ಸೇವೆ, ಅತಿಥಿಗಳ ಸತ್ಕಾರ ಮೊದಲಾದ ಕಾರ್ಯಕ್ರಮಗಳನ್ನು ಮುಂದುವರಿದು ನಿಸ್ತರಿಸುವುದು. ಹಬ್ಬ ಹುಣ್ಣಿವೆಗಳನ್ನು ಮನೆತನಕ್ಕೆ ಒಪ್ಪುಂತೆ ಒಪ್ಪುಗೊಳಿಸುವುದು. ಇವೆಲ್ಲ ಗೃಹಿಣಿಯರ ಕುಶಲಕರ್ಮಗಳಾಗಿವೆ. ಕುಶಲಕರ್ಮಗಳೆಲ್ಲ ಅನಿವಾರ್ಯವಾದರೂ ಆರ್ಥಿಕ ಮುಗ್ಗಟ್ಟಿನಲ್ಲಿ ಹಾಸಿಗೆ ಇದ್ದಷ್ಟು ಕಾಲುಚಾಚುವಂತೆ ಸಲಹ ನೀಡುವುದೂ ಗೃಹಿಣಿಯ ಆದ್ಯಕರ್ತವ್ಯವಾಗಿದೆ.

ತವರು ಮನೆಯಲ್ಲಿ ಹಸುಳೆಯಾಗಿರುವಾಗಲೇ ತಾಯಲಾಲಿಯನ್ನೂ ಜೋಗುಳವನ್ನು ಆಲಿಸಿ ಆನಂದಪಟ್ಟವಳು. ಅಜ್ಜಿಯ ಬಳಿಯಲ್ಲಿ ಕುಳಿತು ಕತೆ ಕತೆ ಕಾರಣಕೇಳಿ ಹಿಗ್ಗಿ ಹೋದವಳು. ಒಗಟು ಒಡಗತೆಗಳ ಮರ್ಮವನ್ನು ಅರಿತು ಕೇಕೆ ಹಾಕಿದವಳು. ರಸಿಕತೆಯಿಂದ ಬೀಗಿ ಮೂಕಕವಿಯಾದವಳು. ಹಾಡುಕೇಳಿ ಹಿಗ್ಗುವವಳು, ಹಾಡುಬರದಿದ್ದರೂ ತರಲತನನ ಗುಣಗುಣಿಸುವವಳು. ಹಸುಳೆ ಕೊಡುಗೂಸಾಗಿ, ಮದುವಣಿಗಳಾಗಿ, ಮೊದಲಗಿತ್ತಿಯಾಗಿ ಅತ್ತೆಯ ಮನೆಸೇರಿ ತಾಯಿಯಾಗುವ ಸಿದ್ಧತೆ ನಡೆಸುತ್ತಾಳೆ. ಹೊದೆದ ಹಚ್ಚಡಪದರು ಮುಖವನ್ನು ಮುಸುಕಿರಲು, ಒಂದೊಂದು ಮಾತು ಹೇಳಿನಗುವ ನಗಿಸುವ ಗಂಡನ ಹಲ್ಲುಗಳೇ ಹಚ್ಚಡ ಪದರೊಳಗಿನ ಬಿಚ್ಚು ಮಲ್ಲಿಗೆ. ಅಂಥ ಪರಿ ಶುಭ್ರಮಲ್ಲಿಗೆಯನ್ನು ತನ್ನ ಮೇಲೆ ಬಿಚ್ಚಿಯೊಗೆವ ರಾಯರನ್ನು ಬಿಟ್ಟು ತವರು ಮನೆಗೆ ಹೇಗೆ ಬರಲಿ ಎಂದು ಕೇಳುವ ಮಟ್ಟಿಗೆ ಆ ಸರಸಸಂಬಬೆಧವು ಅಳವಟ್ಟಿರುತ್ತದೆ.

ಗಂಡ ಹೆಂಡಿರಲ್ಲಿ ವಾದ-ಸಂವಾದ ನಡೆದಾಗ ಕೊಂಕುನುಡಿ ಕತ್ತೆತ್ತಿ ಬರುವುದು ಸಹಜಕ್ರಮ, ಕೊಂಕುನುಡಿ ಚೇಳಿನಕೊಂಡೆಯಾಗಗೊಡದೆ, ಅದು ಕಿವಿ ಸೇರಿ ಹೃದಯಕ್ಕಿಳಿದ ಒಂಕು ಕೊಳವೆಯಾಗುವಂತೆ ಎಚ್ಚರವಹಿಸುವುದು ಒಳ್ಳೆಯದು, ಅದು ಉಭಯರಿಗೂ ಕಲ್ಯಾಣಕರ ವಾದ ಪಥ್ಯದೂಟ.

“ಮಾತು ಮನೆಕೊಂಡಿತು” ಎಂಬ ಲೋಕೋಕ್ತಿಯುಂಟು.“ಮಾತಿಗೆ ಮಾತು ಮಥಿಸಿದರೆ ವಿಧಿಬಂದು ಆತುಕೊಂಡಿಹುದು” ಎಂದು ಸರ್ವಜ್ಞ ಹೇಳುತ್ತಾನೆ. ಇವೆರಡು ಎಚ್ಚರಿಕೆಗಲನ್ನು ಲೆಕ್ಕಿಸದೇ, ಸತಿಪತಿಯರು ಮಾತುಬೆಳೆಸಿದರೆ ಅಲ್ಲಿ ವಿರಸವುಂಟಾಗುವುದು ನಿಶ್ಚಿಯ. ಅಂಥ ವಿರಸವು ಸುಳಿಯದಂತೆ ಚೋಕೆಯಾಗಿ, ಮಾತಿಗೊಂದು ಪಡಿಮಾತು ನುಡಿದರೆ ಅದು ಸರಸೋಕ್ತಿಯೆನಿಸುವುದು.

ಒಮ್ಮೆ, ಗಂಡಹೆಂಡಿರು ಉಂಡು ಮಲಗಿದರು. ಆದರೆ ಇಬ್ಬರಿಗೂ ನಿದ್ರೆ ಬರಲಿಲ್ಲ. ಅದಕ್ಕೆ ಕಾರಣವನ್ನು ಕೇಳುತ್ತಾನೆ ಗಂಡ. ಹೆಂಡತಿ ಕಾರಣವನ್ನು ಹೇಳುತ್ತಾಳೆ.

ಸರದು ನಾ ಮಲಗಟಿಗೆ ಸರಗೀಯ ಕೊಂಡ್ಯೊತ್ತಿ
ಕಾಲುಂಗುರೊತ್ತಿ ಬಳಿಯೊತ್ತಿ | ರಾಯರ |
ನತ್ತೊತ್ತಿ ನಿದ್ರಿ ಬಾರದ ||

ರಾಯರು ಬರಿಗೈಬಂಟರೆಂದು ತೋರುತ್ತದೆ.ಸರಗಿ, ಬಳಿ, ಕಾಲುಂಗರ, ನತ್ತು ಇವುಗಳನ್ನು ಒದಗಿಸಲು ರಾಯರು ಅಸಮರ್ಥರಾಗಿದ್ದರು. “ಒಲುವೆ ನಮ್ಮ ಬದುಕು” ಎಂಬ ನಿಲುಮೆ ಉಭಯರಿಗೂ ಸಮ್ಮತವಾಗಿತ್ತು.ಆದರೆ ಸತಿಯು ಹಾಸ್ಯಕ್ಕಾಗಿ ಕೊಂಕು ನುಡಿಯಲ್ಲಿ “ಸರಗಿಯ ಕೊಂಡಿ ಒತ್ತಿತ್ತು. ಕಾಲುಂಗುರ ಒತ್ತಿತ್ತು, ಬಳೆ ಒತ್ತಿತ್ತು, ನತ್ತು ಒತ್ತಿತ್ತು. ಆ ಕಾರಣದಿಂದ ನಿದ್ರೆಬಾರದಾಗಿದೆ” ಎಂದು ಮೆಲ್ಲನೆ ನುಡಿದಳಲ್ಲದೆ, ನಿಮಗೇಕೆ ನಿದ್ರೆ ಬರಲ್ಲೊಲ್ಲದು ಎಂದು ಕೇಳಿದಳು.

ಸತಿಯಾಡಿದ ಕೊಂಕ ಮಾತಿಗೆ ಸಿಟ್ಟಿಗೇಳದೆ, ಗಂಡನು ಕೊಂಕಿಗೊಂದು ಮರುಕೊಂಕು ನುಡಿಯುತ್ತಾನೆ –

ಜಾಡಿ ಜಮಖಾನ್ಯೊತ್ತಿ ಕಂಬಳಿಯ ಕರಿಯೊತ್ತಿ
ಉಂಗುರುಡಗೂಣಿ ಖಡೆಯೊತ್ತಿ | ಸತಿಯಳ |
ಮುರುವೊತ್ತಿ ನಿದ್ದೆಬಾರದ ||

ಅಳಿಯನಾದವನಿಗೆ ಹೆಂಡತಿಯ ತವರವರು ಹಾಸಿಗೆ ಹೊದಿಕೆ ಎಂದುಜಾಡಿ – ಜಮಖಾನೆ – ಕಂಬಳಿಗಳನ್ನು ಮತ್ತು ಉಂಗುರ – ಉಡುಗುಣಿ – ಖಡೆಗಳನ್ನುಕೊಡುವುದು ವಾಡಿಕೆ. ಆದರೆ ಇಲ್ಲಿ ಅಳಿಯನಿಗೆ ಹಾಸಿಗೆ ಹೊದಿಕೆಗಳನ್ನು ಕೊಟ್ಟಿದ್ದರೋ ಇಲ್ಲವೋ! ಕೊಟ್ಟಿದ್ದರೆ ಉತ್ತಮವಾದವುಗಳನ್ನು ಕೊಟ್ಟಿರಲಿಕ್ಕಿಲ್ಲ. ಉಂಗುರ, ಉಡಗುಣಿ,ಖಡೆಗಳ ವಿಷಯವೂ ಅಂತೆಯೇ ಎಂದು ತಿಳಿಯೋಣ. ಜಾಡಿ-ಕಂಬಳಿಗಳ ಕೆರೆ ಹಾಗೂ ಉಂಗುರ-ಕಡಗಗಳ ಏಣು ಒತ್ತಿ ನಿದ್ರೆ ಬಾರದಾಗಿರದೆಯೆಂದು ಗಂಡನು ಪ್ರತಿನುಡಿದದ್ದು ಕಲಹಕೋಲಾಹಲಕ್ಕೆ ಕಾರಣವಾಗದೆ, ಸರಸೋಕ್ತಿಗಳಿಗೆ ಕಾರಣವಾದಂತೆ ತೋರುತ್ತದೆ.

ಅಕ್ಕನಾದವಳು ತಮ್ಮನಿಗೆ ಮಗಳನ್ನು ಕೊಟ್ಟು ಲಗ್ನ ಮಾಡಿದಳೆಂದು ಕಾಣುತ್ತದೆ. ಸೊಸೆಯಾದವಳಿಗೆ ಅತ್ತೆಯ ಮನೆಯಾಗಿರದೆ ಅಜ್ಜಿಯ ಮನೆಯೇ ಆಗಿತ್ತು ಹೊಸನಂಟುತನವಲ್ಲ. ಗಂಡ ಅಂದರೆ ಸೋದರಮಾವನು, ಸೋದರ ಸೊಸೆಯೊಂದಿಗೆ ಚಿಕ್ಕಂದಿನಿಂದಲೂ ಸಲಿಗೆಯಿಂದ ಚಕ್ಕಂದವಾಡುತ್ತ ಬಂದವನು. ವಿನೋದವು ತುಸು ಕೈಮೀರಿತೇನೋ, ಸೊಸೆ ಬಾಯಿಪಾಠವಾದರೂ ಮೌನದಿಂದ ಅಳುತ್ತ ಕುಳಿತಳು. ಆಗ ಅಜ್ಜಿ ಕೇಳುತ್ತಾಳೆ ಮಗನಿಗೆ ಅಂದರೆ ಮೊಮ್ಮಗಳ ಗಂಡನಿಗೆ.

ಮಾತಿನ ಮಡದೀಗಿ ಸೂತರದ ಗೊಂಬೀಗಿ
ಯಾತರಲೆ ಹೊಡದ್ಯೊನನತಮ್ಮ |ನಿನ್ನಾಕಿ |
ಮಾತಿಲ್ದೆ ಅಳುತ ಕುಂತಾಳೋ ||

ಮಗನ ಅಥವಾ ಮೊಮ್ಮಗಳ ಗಂಡನ ಉತ್ತರ ಹೀಗಿದೆ –

ಕಾರಿ ಹಣ್ಮಿಲೆ ಹೊಡೆದೆ ಕಮಳದ್ದೊವಿಲೆ ಹೊಡೆದೆ
ತ್ವಾಟದಾಗಿರುವ ಗಜಲಿಂಬಿ | ಲ್ಹೋಡೆದರ
ಮೋಜೀಲಳತಾಳ ಹಡೆದವ್ವ ||

ಮೋಜಿನಿಂದ ಹೊಡೆದ ಪೆಟ್ಟು ಮೋಜಿನಿಂದ ಅಳಹಚ್ಚುತ್ತದೆ. ಕಾಕಿಹಣ್ಣು – ಕಮಲದ ಹೂಗಳಿಂದ ಹೊಡೆದಾಗ ಪರಿಣಾಮ ಬೀರಿದಂತೆ ತೋರುವುದಿಲ್ಲ. ಆದರೆ ಗಜಲಿಂಬಿಯಿಂದ ಹೊಡೆದಾಗ ಹತ್ತಿದ ಪೆಟ್ಟು ಅಳುವು ಮಾತ್ರ ತಲ್ತಲ್ಲದೆ, ಕವಳು ಹತ್ತಿ ಬೀಳಿಸಲಿಲ್ಲ. ಇದೇ ಪುಣ್ಯ.

ಹಾಗೂ ಉಂಟು, ಹೀಗೂ ಉಂಟು, ಭಿನ್ನವಾದ ಅಭಿರುಚಿಯಿದೆ ಲೋಕದಲ್ಲಿ. ಕೆಂಪು ಕಪ್ಪುಗಳ ಮೇಲು ಕೀಳಾಟ, ಕರ್ರಿಗಿನವರು ಕಾಗದ ಮೇಲೆ ಕೆಂಪಗಿನವರು ಮೊಚ್ಚೆಯ ಮೇಲೆ ಎನ್ನುವ ಲೋಕೋಕ್ತಿಯಿದೆ. “ಮಾವಿನ ಹಣ್ಣು ಮನಿಯಾಗ ಇಟಗೊಂಡು, ನೀರಲಕ್ಯಾಕ ಮನವಿಟ್ಟ” ಎಂದು ಕೇಳಿದವರೂ ಉಂಟು.

ಕಪ್ಪು ಹೆಂಡತಿಯಂತ ಕರಕರಿ ಮಾಡಬ್ಯಾಡ
ನೀಲರಲದ ಹಣ್ಣು ಬಲುಕಪ್ಪು || ಇದ್ದರು |
ತಿಂದು ನೋಡಿದರ ರುಚಿಬಾಳ ||

ಎಂಬ ಹಾಡಿಗೆ ಮಾರ್ನುಡಿಗೊಡುವ ಹಾಡು ಯಾವುದೆಂದರೆ –

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯಹಣ್ಣು ಅತಿಕೆಂಪು | ಇದ್ದರು |
ಒಡೆದು ನೋಡಿದರ ಹುಳಭಾಳ ||

ಇದು ಹೆಣ್ಣು ಮಕ್ಕಳಲ್ಲಿ ಹುದುಗಿರುವ ರಸಿಕತನದ ಮಾದರಿ, ಮೆಚ್ಚಿದ ನಾಯಿಗೆ ಮರಣವೂ ಸುಖವಂತೆ ಒಬ್ಬರ ಕಣ್ಣಿಗೆ ಕೆಂಪು ಹೆಣ್ಣು ಆಕರ್ಷಕವಾದರೆ, ಇನ್ನೊಬ್ಬರ ಕಣ್ಣಿಗೆ ಕರೆಹೆಣ್ಣು ಮನಸೆಳೆಯುವಂಥದು. ಗುಣದೋಷಗಳು ಎರಡರಲ್ಲಿಯೂ ಉಂಟು. ಕೆಂಪು ಹೆಣ್ಣಿಗೆ ಮನ ಸೋತವನಿಗೆ ಆಡಿಸಾಡುವ ರೀತಿ ಹೇಗೆಂದರೆ –

ಕೆಂಪನ ಹೆಣ್ಣಿಗೆ ಸಂಪೀಗಿ ತೆನಿಯಿಂದ
ಅಂತರಲೆ ಬೆಳೆವ ಎಳೆಹುಣಚಿ | ಕಾಯೀಗಿ |
ಎಂಥವರು ಬಾಯಿ ಬಿಡತಾರ ||

ಕಪ್ಪು ಹೆಣ್ಣೆಂಬುದು ಕಂತೆ ಕುಳ್ಳಿರಿಸಿದ ಲಿಂಗವೆಂದು ಉಪಾಸಿಸುವವನನ್ನು ಕುರಿತು ಇನ್ನೊಬ್ಬರು ಇನ್ನೊಂದು ಬಗೆಯಲ್ಲಿ ಆಡಿಸಾಡುತ್ತಾರೆ.

ಕರ್ರನ ಹೆಣ್ಣೀಗಿ ಕಮಳದ ಹೂವೆಂದ
ಕರಲಾಗ ಬೆಲೆವ ಕಡಲಿಯ | ಗಿಡಕಾಗಿ |
ಧೂರಿ ಮಗ ತೇಜಿ ಇಳಿದಾನ ||

ಹಡೆದತಾಯಿ, ಪಡೆದ ಅತ್ತೆ, ತಾಯ ಕರುಳಿನಲ್ಲಿ ಹುದುಗಿರುವ ಜೀವ ಚೇತನ ಬೇರೆ, ಅತ್ತೆಯ ಹೊಟ್ಟೆಯಲ್ಲಿ ಅಡಗಿರುವ ಭಾವಚೇತನ ಬೇರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಒಮ್ಮೊಮ್ಮೆ ಆ ನಿಲುಮೆ ತಿರುಗು ಮುರಗೂ ಆಗಬಹುದು. ಒಂದಕ್ಕೊಂದು ಹತ್ತಿಕೊಂಡಂತಿದ್ದರೂ ನೆಲ ಮುಗಿಲುಗಳ ಅಂತರಕ್ಕೆ ಅಳತೆಯಿಲ್ಲ. ಅದನ್ನು ಕೆಳಗಿನ ಎರಡು ತ್ರಿಪದಿಗಳು ಸ್ಪಷ್ಟಪಡಿಸುತ್ತವೆ.

ಅತ್ತೆ ಸತ್ತರೆ ಸೊಸೆಯು ಏನೆಂದು ಮರಗಳುವಳು
ಹಿತ್ತಲ ಕದವ ತಡಕೊಂಡು | ನಮ್ಮನೆ |
ಮೃತ್ಯುದೇವತೆಯೆ ತೊಲಗಿತು ||

ತಾಯಿ ಸತ್ತರೆ ಮಗಳು ಏನೆಂದು ಕೊರಗುವಳು
ಬಾಗಿಲ ಕದ ಹಿಡಕೊಂಡು | ನಮ್ಮನೆ |
ಭಾಗ್ಯದೇವತೆಯೇ ನಡೆಯಿತು ||

ಕವಿಯೆನಿಸಿದವನು ಕಾಂತೆಯ ಮಾತಿನಂಥ ಸವಿ ನುಡಿಯನ್ನು ರಚಿಸಿದರೆ, ಕವಿಯನ್ನು ಹಡೆದವಳು ಕಾಂತೆಯ ಮಾತನ್ನೇ ಕವಿತೆಯಾಗಿ ಮಾರ್ಪಡಿಸುವಳು, ತೋರ್ಪಡಿಸುವಳು. ಕೆಳಗೆಕಾಣಿಸಿದ ಈ ತ್ರಿಪದಿ ಭಾಗವಗೀತೆಯೋ ಬೆಡಗಿನ ಬಿನ್ನಾಣವೋ ಅಥವಾ ಅವೆರಡರ ಇಮ್ಮೈಯೋ ತಿಳಿಯುವವರು ವಿರಳ.

ಬಾಯಾಗ ಹಲ್ಲಿಲ್ಲ ಎದಿಮ್ಯಾಲ ಮಲಿಯಿಲ್ಲ
ನೂರೊಂದು ಮಕ್ಕಳ ಹಡೆದೆವ್ವ | ಕಾಳವ್ವ |
ತಿಪ್ಪಿಯ ಕೆದರುತ ಹೊರಟೆವ್ವ ||

ಬಚ್ಚ ಬಾಯಿ, ಒಣಗಿದ ಎದೆ. ಹಡೆದ ಮಕ್ಕಳೋ ನೂರಾರು. ಹೊಟ್ಟೆಯ ಪಾಡಿಗೇನು ದಾರಿ? ತಿಪ್ಪಿ ಕೆದರಿದಾಗ ಸಿಕ್ಕಿದ್ದೇ ಊಟ. ಹಣ್ಣು ಶರೀರದ ಹಾಗೂ ಬಹುಮಕ್ಕಳಿಗೆ ಜನ್ಮ ಕೊಟ್ಟ ಮುದ್ರಿಕೆ ತನ್ನ ಹಾಗೂ ಮಕ್ಕಳ ಹೊಟ್ಟೆಗೆ ಏನು ಹಾಕುವಳು? ತಿಪ್ಪೆಯಲ್ಲಿ ಚೆಲ್ಲಲಾಗಿರುವ ಹಳಸು ಹೊತ್ತಕ ಅನ್ನದ ಚೂರು. ಆ ಮುದುಕಿಯ ಹೆಸರು ಕಾಳವ್ವನಿದ್ದುದನ್ನು ಕೋಳೆವ್ವ ಮಾಡಿದರೆ, ಆ ತ್ರಿಪದಿಯು ವಿಚಿತ್ರವಾದ ಸತ್ಯಚಿತ್ರವಾದ ಬೇರೊಂದು ಅರ್ಥವನ್ನೇ ನೀಡುತ್ತದೆ. ತಿಪ್ಪಿಕೆದರಿ ನೂರಾರು ಮಕ್ಕಳನ್ನು ಸಲಹುವ ಕೋಳೆವ್ವ ಮುಪ್ಪಿನ ಮುದಿಕೆಯಾಗಿದ್ದಾಳೆನ್ನುವುದಕ್ಕೆ ಬಾಯಾಗ ಹಲ್ಲಿಲ್ಲ, ಎದಿಯಾಗ ಮಲಿಯಿಲ್ಲ ಎನ್ನುವುದೇ ಸಾಕ್ಷಿ.

ಒಬ್ಬ ಗೆಳತಿಯ ರೂಪರೇಷೆಗಳನ್ನು ಎಳೆದು ತೋರಿಸುವ ವಿಚಿತ್ರ ರೀತಿಯನ್ನು ಇಲ್ಲಿ ಕಾಣಬಹುದು –

ಮೂಗುತಿ ಮುಂಭಾರ ತುರುಬಿನ ಹಿಂಭಾರ
ಸೇರಿನ ವಂಕೆ ಕೈ ಭಾರ | ನನ ಗೆಳದಿ
ನಾ ಕೊಟ್ಟ ಸೀರಿನಿನಿರಿ ಭಾರ ||

ಮುಂಭಾರಕ್ಕೆ ಮೂಗುತಿ. ಹಿಂಭಾರಕ್ಕೆ ತುರುಬು. ಪ್ರತಿಯೊಂದು ತೋಳಿನಲ್ಲಿ ಸೇರು ಸೇರುವಂಕಿ. ಎಡಬಲ ಭಾಗಗಳಲ್ಲಿ ಸಮತೋಲ ಕಾಯ್ದುಕೊಂಡವು. ಇನ್ನು ಗೆಳತಿಕೊಟ್ಟ ಸೀರೆಯ ನಿರಿ ಭಾರವು ಏತರ ಸಮತೋಲ ಕಾಯ್ದು ಕೊಳ್ಳುವ ಸಲುವಾಗಿ ಎಂಬುದನ್ನು ತುಸು ಯೋಚಿಸಿದರೆ ತಿಳಿಯುವಂತಿದೆ. ನಿತಂಬವೇ ಆ ಹಿಂಭಾಗವಾಗಿರಬಹುದೇ?

ಹೆಣ್ಣು ಮಕ್ಕಳು ತಮ್ಮ ಪ್ರಕೃತಿಗೊಪ್ಪುವ ರೀತಿಯಲ್ಲಿ ರಸಿಕರಾಗಿದ್ದದ್ದು ಸ್ಪಷ್ಟ. ಅಂತೆಯೇ ಅವರಲ್ಲಿ ಕೆಲಸ ಮಾಡುವ, ಹುರುಪು, ಮಕ್ಕಳನ್ನಾಡಿಸುವ ಉತ್ಸಾಹ ಕಂಡು ಬರುತ್ತದೆ. ಕೊಟ್ಟು ಹಿಗ್ಗಬೇಕು. ಕರಕೊಂಡು ತಿನ್ನಬೇಕು ಎನ್ನುವ ಸಹಜ ಬುದ್ಧಿ ಹೆಣ್ಣು ಮಕ್ಕಳಲ್ಲಿ ಕಂಡುಬರುವುದಕ್ಕೆ ರಸಿಕತನದಿಂದ ಗಳಿಸಿಕೊಂಡ ಹಾರ್ದಿಕ ವಿಶಾಲಭಾವನೆಯೇ ಕಾರಣವಾಗಿದೆ.