“ತನ್ನಂಗ ನೋಡಿದರೆ ಭಿನ್ನಿಲ್ಲ ಭೇದಿಲ್ಲ” ಎಂದು ಗರತಿ ಹಾಡಿದರೆ “ತನ್ನಂತೆ ಬಗೆದೆಡೆ ಕೈಲಾಸ ಬಿನ್ನಾಣವಕ್ಕು” ಎಂದು ಸರ್ವಜ್ಞ ಹಾಡುತ್ತಾನೆ. ಆ ಎರಡೂ ಹಾಡುಗಳ ಪೂರ್ತಿ ಪಾಠ ಒಂದೇ ಆಗಿದೆ. ಕಣ್ಣ ಮುಂದಾದ ಕೈಲಾಸ ಎಂದು ಗರತಿ ಸ್ಪಷ್ಟಪಡಿಸುವಂತೆ, ಕೈಲಾಸ ಬಿನ್ನಾಣವಕ್ಕು – ಎಂದು ಸರ್ವಜ್ಞ ನಿಚ್ಚಳಗೊಳಿಸುತ್ತಾನೆ.

ತನ್ನಂಗ ನೋಡುವುದು ಸುಲಭವೆಂದು ತಿಳಿಯಲಾಗದು. ತನ್ನನ್ನೇ ಸರಿಯಾಗಿ ನೋಡಿಕೊಳ್ಳಲಾರದವನು, ತನ್ನಂತೆ ಪರರ ಬಗೆದರೆ ಏನು ಪ್ರಯೋಜನ? “ಹಿಗ್ಗುವ ಮುಗ್ಗುವ ನೆಗ್ಗುವ ತಗ್ಗುವ, ಅಗ್ನಿಯೊಳಗೆ ದಗ್ಧವಾಗುವ ದೇಹಕ್ಕೆ ಹಿಗ್ಗುವಿಯಾಕೋ” ಎಂದು ದಾಸರು ಕೇಳಿದ್ದು ನಿಜ. ಆದರೆ ಯiವ ಪ್ರಸಂಗದಲ್ಲಿ, ಏತಕ್ಕಾಗಿ ಹಾಗೆ ಕೇಳಿದರೋ ತಿಳಿಯದು. ತನ್ನ ದೇಹವನ್ನೇ ಅಸಡ್ಡೆ ಮಾಡಿದವನು ತನ್ನನ್ನೂ ಅಸಡ್ಡೆ ಮಾಡದಿರುವನೇ? ತನ್ನ ಹೊಟ್ಟೆ ಹಸಿದಿಲ್ಲವೆಂದಾಗ, ಅನ್ನಿಗರ ಹೊಟ್ಟೆಗಳೂ ಹಸಿದಿಲ್ಲವೆಂದು ಭಾವಿಸಿ, ಅವರನ್ನು ಉಪವಾಸಿ ಕೆಡಹುವ ನೀತಿಯು, ತನ್ನಂತೆ ಪರರ ಬಗೆಯು ನೀತಿಯಾಗಲಾರದು.

ಯಾರ ಹೊಟ್ಟೆ ಕಡಿದರೆ ಯಾರು ಅಜಿವಾನ ತಿನ್ನಬೇಕು? ಈಲೋಕೋಕ್ತಿಯು ತನಗೆ ಅಡಸಿದ ಆಪತ್ತನ್ನು ತಾನೇ ಭೋಗಿಸಬೇಕಲ್ಲದೆ, ಅನ್ಯರಾರೂ ಅದರಲ್ಲಿ ಪಾಲುಗೊಳ್ಳುವುದಿಲ್ಲ – ಎಂಬರ್ಥವನ್ನು ನೀಡುತ್ತದಷ್ಟೇ? ಆದರೆ ಕೂಸಿನ ಹೊಟ್ಟೆ ನೋಯತೊಡಗಿದಾಗ ತಾಯಿಯಾದವಳು ಅಜಿವಾನ ತಿಂದು, ಅದರ ಕಿವಿಯಲ್ಲಿ ಊದುವುದಿಲ್ಲವೇ? ಇನ್ನೊಬ್ಬರಿಗೆ ಆಡಸಿದ ಆಪತ್ತನ್ನು ಯಾವುದೇ ರೀತಿಯಲ್ಲಿಹಗುರುಗೊಳಿಸಬಹುದಾಗಿದೆ.

ಕಡಬುಕೊಟ್ಟ ಕಲ್ಲಕ್ಕನಿಗೆ ಮಲ್ಲಕ್ಕನಾಗಿ ದೋಸೆ ಕೊಡುವುದು – ಇದೊಂದು ಮೊದಲ ಪಾಠ, ಕಡಬು ಕೊಡಲಿ ಬಿಡಲಿ ಕಲ್ಲಕ್ಕನಿಗೆ ಕೈಲಾದಷ್ಟು ನೆರವು ನೀಡುವುದು ಮನುಷ್ಯನಾದವನಿಗೆ ಸಹಜಧರ್ಮವಾಗಿದೆ. ತಾನು ಹೊಟ್ಟೆತುಂಬ ಉಂಡಬಳಿಕ ಉಳಿದದ್ದು ನಾಳೆಗಾಗಿ ಇರಲಿ ಎನ್ನುವುದಕ್ಕಿಂತ ಇನ್ನೊಬ್ಬರ ಹೊಟ್ಟೆಯೂ ತಣಿಯಲೆನ್ನುವುದು ವಿಶ್ವಾಸಗೊಂಡ ಉದಾಹರತೆಯೇ ಅಹುದು. ಹೆರವರಿಗೆ ನೆರವು ನೀಡುವ ಶಕ್ತಿ ತನ್ನಲ್ಲಿರದಿದ್ದರೆ ಉಳ್ಳವರಿಗೆ ಹೇಳಿಕೊಡಿಸುವುದು ಸಾಧ್ಯ. ಅದೂ ಹೋಗಲಿ “ಒಳ್ಳೆಯದಾಗಲಿ” ಎಂದು ಬಾಯಿಂದ ಗುಣಗುಣಿಸದಿದ್ದರೂ ಮನಸಿನಲ್ಲಿ ಹಾರಯಿಸುವುದು ಅಸಾಧಾರಣ ಧರ್ಮವೇ ಆಗಿದೆ.

ಹಸುವಿಗೆ ಹಾಲಕೊಟ್ಟು ಶಿಶುವಿಗೆ ಬೆಣ್ಣೆ ಕೊಟ್ಟು
ಬಿಸಲೀಗಿ ನಿಂತವರ ನೆರಳೀಗಿ | ಕರೆದರ |
ಅಸವಲ್ಲದ ಪುಣ್ಯ ಮಗನೀಗಿ ||

ಕೆಲವೊಂದು ಕೊರತೆಗಳನ್ನು ಸ್ವಂತಬುದ್ದಿಯಿಂದ ನೀಗಿಸಿಕೊಳ್ಳಲು ಸಾಧ್ಯವಿರುತ್ತದೆ. ಇನ್ನು ಕೆಲವು ಕೊರತೆಗಳನ್ನು ಬಳಗದವರಿಂದಲೋ ಸ್ನೇಹಿತರಿಂದಲೋ ಪರಿಹರಿಸಿಕೊಳ್ಳಲಿಕ್ಕಾಗುತ್ತದೆ. ಕೆಲವೊಂದು ಸೌಕರ್ಯಗಳನ್ನು ದೇವನಲ್ಲಿ ಬೇಡಿ ಪಡೆಯಬೇಕಾಗುತ್ತದೆ. ಬಿಕನಾಸಿ ಕಂಗಾಲರಿಗೆ ಬೇಡುವುದನ್ನು ಬಿಟ್ಟು, ಕೊಡುವ ದೇವದಾನಿಗೆ ಬೇಡಿಕೊಳ್ಳುವುದು ಉತ್ತಮವಾದಹಾಗೂ ಸಾರ್ಥಕಕರವಾದ ಉಪಾಯವಾಗಿದೆ. ಅದೊಂದು ಬಡವರಿಗೆ ರಾಜಮಾರ್ಗವೇ. ಯಾರಿಲ್ಲದವರಿಗೆ ನೀನೇ ಶಿವಾ ಎಂದು ಹೇಳುವುದು ಅರ್ಥಪೂರ್ಣವಾಗಿದೆ.

ಕೂಡಲ ಸಂಗಯ್ಯ ನೀಡು ಮಕ್ಕಳ ನನಗ
ನನಗಲ್ಲ ನನ್ನ ಗೆಳತಿಗೆ | ಕೊಟ್ಟರ
ಬಾಗಿಲಿಗೆ ಹೊನ್ನ ಬಡಿಸೇನ ||

ಗೆಳತಿಗಾಗಿ ಪ್ರಾರ್ಥನೆ ಮಾಡುವ ಗೆಳತಿ ದೇವರಿಗೆ ಸಲ್ಲಿಸಬೇಕಾದ ಕೃತಜ್ಞತಾ ಭಾವದ ಕಾಣಿಕೆಯನ್ನ ತಾನು ಒಪ್ಪಿಸುವೆನೆಂದು ಹೇಳುವುದು ಅದೆಂಥ ಸ್ನೇಹ, ಅದೆಂಥ ಭಕ್ತಿ, ಅದೆಂಥ ತ್ಯಾಗ? ಕೊಟ್ಟಿದ್ದು ತನಗೆ ಎನ್ನುವ ಭಾವ ಆಕೆಯಲ್ಲಿ ಮೈಗೂಡಿ ಮನ ಗೂಡಿ ಹೋದಂತಿದೆ; ರಕ್ತಗತವಾಗಿಯೂ ಬಿಟ್ಟಂತಿದೆ. ಇದೇ ಮಾದರಿಯ ಔದಾರ್ಯದ ಪ್ರಸಂಗವನ್ನು ಇಲ್ಲಿ ಉದಾಹರಿಸದೆ ಮುಂದುವರಿಯಲಿಕ್ಕಾಗದು.

ಯಾರಾಸಿ ನನಗಿಲ್ಲ ಭಾಗ್ಯದ ಬಲವಿಲ್ಲ
ಕಲ್ಲೊಳ್ಳಿ ಊರ ಕರಿರಂಗ | ವೆಂಕೋಬ
ನಿನ್ನಾಶೆ ನನಗೆ ಅನುಕೂಲ ||

ನಂಬಿದ ದೈವತವು, ಕೇಳಿದ್ದನ್ನು ಕೊಡಲು ಒಂಟಿಗಾಲ ಮೇಲೆ ನಿಂತಿರುತ್ತದೆ. ಕೂಡಲೇ ಕೊಡಬಹುದು. ಇಲ್ಲವೆ ತುಸು ತಡೆದು ಕೊಡಬಹುದು. ಆದರೆ ಬೇಡಲಾರೆ ಎನ್ನುವ ಭಕ್ತನಿಗಾಗಿ ಸರ್ವಬಾಗೀನುಗಳು ಸಿದ್ಧವಾಗಿಯೇ ಇರುವವು. ಶ್ರದ್ಧೆಯಲ್ಲಿ ಇನ್ನೂ ಸ್ಥಿರತೆ ಬಾರದಿರುವವರು ಬೇಡಲಾರೆ ಎನ್ನುವ ಧೈರ್ಯ ಮಾಡಲಾರರು. ಅದು ಸಾಮಾನ್ಯರ ತುತ್ತಲ್ಲ ಅಸಾಮಾನ್ಯರ ಗೊತ್ತು.

ಸಾವಿರಕೆ ಸತ್ಯರು ನೂರಕ ಧರ್ಮರು
ಆಗ ಬಿತ್ತ್ಯಾಗ ಬೆಳೆದಾರ ನಮ್ಮವರು
ಬಲವಂತ ಹಾರ ತರುವರು ||

ತವರವರ ಬಲುಂತಿಕೆ ಬಂಡಾಟಿಕೆಯದಲ್ಲ; ಹಗಲು ದರೋಡೆಖೋರ ತನದ್ದಲ್ಲ. ಆಗ ಬಿತ್ತಿ ಆಗ ಬೆಳೆಯಬಲ್ಲ ಸತ್ಯರ ಹಾಗೂ ಧರ್ಮರ ಬಲವಂತಿಕೆ. ಅದು ಎಲ್ಲರಿಗೂ ಎಟಕುವಂಥದಲ್ಲ. ಸಾವಿರಕೊಬ್ಬರು ಸತ್ಯರು ಸಿಕ್ಕರೆ, ನೂರಕ್ಕೊಬ್ಬರು ಧರ್ಮರು ಸಿಗುತ್ತಾರೆ.

ಕಾಣ್ಕೆಯೆಂದೋ ಆಶೀರ್ವಾದವೆಂದೋ ಐದು ತೆಂಗಿಕಾಯಿಗಳು ಗರತಿಗೆ ದೊರೆತರೆ ಆಕೆಗೆ ಹಿಗ್ಗೇನೋ ಆಯಿತು. ಆದರೆ ಅದಕ್ಕಿಂತ ಚಿಂತೆ ಹೆಚ್ಚಾಯಿತು. ಏನು ಆ ಚಿಂತೆ? ಆ ಅಯ್ದು ತೆಂಗುಗಳನ್ನು ಯಾರಾರಿಗೆ ಕಳಿಸಬೇಕು? ಎನ್ನುವುದೇ ಆಕೆಗೆ ತಿಳಿಯದಾಯಿತು. ಯಾಕೆಂದರೆ, “ನಮ್ಮಮ್ಮನ ಬಳಗವೆಂದರೆ ಬೇರುಬಿಟ್ಟಂತೆ” ತನಗರಿಸಿಕೊಳ್ಳದೆ ತೆಂಗುಗಳನ್ನೆಲ್ಲ ಬಳಗಕ್ಕೆ ಹಂಚನಿಂತರೆ, ಮೂಸಿನೋಡುವುದಕ್ಕೂ ಸಾಕಾಗುವುದಿಲ್ಲ. ಅಷ್ಟೊಂದು ದೊಡ್ಡ ಬಳಗ!

ತೆರೆದ ಹೃದಯಕ್ಕೆ, ಕೊಡಬೇಕು, ಕೊಟ್ಟು ಸಂತೋಷಪಡಬೇಕು ಎನ್ನುವುದೇ ಸ್ವಾಭಾವಿಕ ಧರ್ಮ. ಕೊಟ್ಟಿದ್ದು ತನಗೆನ್ನುವ ನಂಬಿಗೆ ಪೂರ್ಣವಾಗಿರುತ್ತದೆ. ಅದು ಸ್ವರ್ಗದ ಬುತ್ತಿಯಾಗುವುದೆಂಬ ಆಶೆಯಿಲ್ಲ; ಉದ್ದೇಶವೂ ಇಲ್ಲ. ಕೊಟ್ಟದ್ದು ತನಗೆ ಎಂದರೆ, ತನಗೆ ತಾನೇ ಕೊಟ್ಟು ಕೊಂಡ ಹಾಗೆ.

ಸೊಲ್ಲಾಪುರದಣ್ಣಗ ನಿಲ್ಲದೆ ಬರಹೇಳ
ಸೀರ್ಯೊಲ್ಲ ಅವನ ಕುಬಸ್ಯೊಲ್ಲ ಅಣ್ಣನ
ಮಾರಿ ನೋಡುವ ಮನವಾಗಿ |.

ಲೌಕಿಕರಿಗೆ ಪರಮಾವಧಿ ಹೆಚ್ಚಿನ ಪ್ರೀತಿಯೆಂದರೆ ಇದೇ ಅಲ್ಲವೇ? ಸೊಲ್ಲಾಪುರದಲ್ಲಿರುವ ಅಣ್ಣನನ್ನು ಬರಹೇಳಿರಿ; ಕೂಡಲೇ ಬರಲಿ. ತಂಗಿಗೆ ಸೀರೆಬೇಕಾಗಿದೆಯೋ ಕುಬಸ ಬೇಕಾಗಿದೆಯೋ ಎನ್ನುವ ಅನುಮಾನವೇ ಬೇಡ. ಅಣ್ಣನ ಮುಖನೋಡುವ ಅಪೇಕ್ಷೆಯಾಗಿದೆ. ಅಷ್ಟೇ. ಇಲ್ಲಿ ಪ್ರೀತಿಸುವ ತಂಗಿಯೂ ಧನ್ಯಳು. ಅಂಥ ತಂಗಿಯನ್ನು ಪಡೆದು ಪ್ರೀತಿ ಪಡೆಯುವ ಭಾಗ್ಯವನ್ನೂ ಪಡೆದ ಅಣ್ಣನೂ ಧನ್ಯನು! ಪ್ರೀತಿಯಂಥ ಭಾಗ್ಯ ಈ ಜಗತ್ತಿನಲ್ಲಿ ಇನ್ನೇನಿದೆ? ಜಗತ್ತಿನ ಸಿರಿಯೆಂದರೂ ಸಿಂಗರವೆಂದರೂ ಪ್ರೀತಿಯೇ ಅಹುದು. ಸೌಂದರ್ಯವೆನ್ನುವುದು ಆ ಪ್ರೀತಿಯ ಕರುಹೇ ಆಗಿದೆ.

ಅಕ್ಕತಂಗಿಯರೆಂದರೆ ಅಡಿಗಿರುವ ಜೋಡು ಮೊಲೆಯಂತೆ. ಕಣ್ಣು ಎರಡಿದ್ದರೂ ಕಾಣ್ಕೆ ಒಂದೇ ಇರುವಂತೆ, ಮೊಲೆಯೆರಡಾದರೂ ಹಾಲು ಒಂದೇ. ಅಕ್ಕತಂಗಿಯರೆಂದರೆ ತಂತಮ್ಮ ಗಂಡನ ಮನೆಗೆ ಅಗಲಿ ಹೋಗುವ ಹಕ್ಕಿಗಳಿದ್ದಂತೆ. ಕದನವಾಡಿಯೋ ಕಚ್ಚಾಡಿಯೋ ಮುಖ ಮರೆಯಿಸುವ ರೀತಿಯಲ್ಲ. ಅಕ್ಕತಂಗಿಯರು ಎರಡು ಮನೆತನಕ್ಕೆ ಹೊಂದಿಕೊಳ್ಳುವ ಜೀವಗಳು. ಆದರೂ ಜೀವನವು ಬೇರೆ ಬೇರೆ ಅಲ್ಲ, ಒಂದೇ. ಹಕ್ಕಿಗಳಂತೆ ಒಂದರ ತಲೆಯನ್ನು ಇನ್ನೊಂದು ಕುಕ್ಕಿ ಓಡಿಸುವುದಲ್ಲ; ಓಡಿಹೋಗುವುದೂ ಅಲ್ಲ.

ಆಡೀನ ಮಲಿಹಾಂಗ ಜೋಡು ನಾವಿಬ್ಬರು
ಆಡಬೇಡ ತಂಗಿ ಕದನವ | ಜಗಳಕ
ಜೋಡಿನ ಹಕ್ಕಿ ಅಗಲ್ಯಾವ ||

ಎಂದು ಅಕ್ಕನಾದವಳು ತಂಗಿಗೆ ಹಿತನುಡಿ ಉಸಿರುತ್ತಾಳೆ. ಆ ಮಾತು ತಂಗಿಯ ಎದೆಯಲ್ಲಿ ಅಚ್ಚೊತ್ತುವುದು. ಆಗಾಗ ಅದನ್ನು ಓದಿಕೊಳ್ಳುವಳು. ಮುಂದೆ ದುರ್ದೈವದಿಂದ ಅಕ್ಕನ ಗಂಡನು ಅಗಲಿ ಶಿವನುಡಿಯನ್ನು ಸೇರುವನು. ಅಕ್ಕಮಕ್ಕಳೊಂದಿಗಳು, ಆಕೆಗೊಂದು ಚಿಕ್ಕ ತೋಟವಿದೆ. ಅದರಲ್ಲಿ ಮೆಕ್ಕೆಯನ್ನು ಬಿತ್ತಿದ್ದಾಳೆ, ತೀವ್ರ ಕಾಳುಬರಲೆಂದು. ಆದರೆ ಮಳೆರಾಯ ಕಣ್ಣು ತಪ್ಪಿಸಿ, ತನ್ನಗೆಳದಿಯ ಮನೆಯಲ್ಲಿ ತಂಗಿದನೇನೊ. ಅಕ್ಕನಿಗೆ ಸಹಾಯ ನೀಡುವಷ್ಟು ಅನುಕೂಲತೆ ತಂಗಿಗೂ ಇರಲಿಲ್ಲ. ಒಣ ಮಾಯೆ, ಮೊಲೆಯಲ್ಲಿ ಹಾಲಿಲ್ಲವೆನ್ನುವಂತಾಗಿದೆ. ಆದರೆ ಮಳೆರಾಜನನ್ನು ಒಲಿಸುವುದಕ್ಕೆ ಹದವಾದ ಹೃದಯ ಮಾತ್ರ ಆಕೆಯಲ್ಲಿದ್ದೆ. ಪ್ರಾರ್ಥನೆಯೆಂದರೆ ಹೃದಯದ ಕೂಗು, ಅದು ಹುಸಿಹೋಗದ ಬಾಣ; ರಾಮಬಾಣವೇ. ಸಫಲಗೊಳ್ಳದಿದ್ದರೆ ಅದು ಪ್ರಾರ್ಥನೆಯೆ ಅಲ್ಲವೆಂದು ನಿರ್ವಿವಾದವಾಗಿ ಹೇಳಬಹುದು.

ಅಕ್ಕನ ಊರಾಗ ಮೆಕ್ಕಿಯ ಫಡದಾಗ
ಗಕ್ಕನೆ ಬಾರೊ ಮಳೆರಾಜ | ನನ್ನಕ್ಕ |
ಮಕ್ಕಳ ತಾಯಿ ಮರಗ್ಯಾಳೋ ||

ತಾಯಿಯಿದ್ದರೆ ತವರು ಹೆಚ್ಚು; ತಂದೆಯಿದ್ದರೆ ಬಳಗ ಹೆಚ್ಚು. ಗೆಳತಿಯೆಂದರೆ ಒಂದು ವಿಧದಲ್ಲಿ ನಡೆಪಥದ ಸಹೋದರಿಯೇ. ನಡೆಪಥಕ್ಕೆ ಕುಲಭೇದವಾಗಲಿ, ಜಾತಿಭೇದವಾಗಲಿ ಇರುವುದಿಲ್ಲ. ಹೆರವರಿಗೆ ಹಾಗೆ ಕಾಣಿಸುವುದೂ ಇಲ್ಲ. ಕಳೆಯಿದ್ದರೆ ಗುಣ ಹೊಂದಿಕೆಯಾಗುವುದಲ್ಲದೆ, ದನಿಹೊಂದಿಕೆಯೂ ಆಗುವುದೆಂದರೆ ಆಶ್ಚರ್ಯವಲ್ಲವೇ? ಸಮಾನ ಶೀಲರಾದವರಲ್ಲಿ ಸಖ್ಯವುಂಟಾಗುವುದೆಂದು ಹಿರಿಯರು ಹೇಳುತ್ತ ಬಂದಿದ್ದಾರೆ.

ಮನೆಯ ಮುಂದಿನ ಗೆಳದಿ ದನಿಯ ಕೂಡಿಸಬಾರೆ
ದನಿಸುದ್ದ ನಿನ್ನ ಗುಣಸುದ್ದ | ಗೆಳದೆವ್ವ |
ಗುಣಕ ಕಟ್ಟೀನಿ ಗೆಳತನ ||

ಗೆಳತಿಯರ ಬಳಗದಲ್ಲಿ ಅತಿ ಚೆಲುವೆಯಾದ ಆ ಗೆಳದಿಯ ತಲೆ ಕೂದಲು ಚೊಗಚಿಯ ಕಾಯಂತೆ, ನಿಗುಚಿ ಬೈತಲೆ ತಗೆದಿದ್ದಾಳೆಂದರೆ “ಸಿರಿಗೇನು ಕಡಿಮೆ ಸಿಂಗರಕೇನುಕಡಿಮೆ ಸೌಂದರ್ಯಕೇನು ಕಡಿಮೆ” ಎನ್ನಬಹುದಾಗಿದೆ. ಅಂಥ ಗೆಳತಿಯನ್ನು ಒಡಗೂಡಿ ನೀರಿಗೆ ಹೋದಾಗ, ಕೂಡಿದವರು ಕುಲಕೇಳುವರು, ಏನು ಹೇಳಬೇಕು?

ನಾನು ನನ್ನ ಗೆಳತಿ ಕೂಡಿ ನೀರಿಗಿ ಹೋಗಿ
ಕುಲವಕೇಳ್ಯಾರ ಬಹುಮಂದಿ | ಕೇಳಿದರ |
ಕುಲವೆರಡು ನಮ್ಮಮನ ಒಂದು ||

ಕುಲವೊಂದಾಗುವುದಕ್ಕಿಂತ ಮನವೊಂದಾಗುವುದರಲ್ಲಿ ಸಾರ್ಥಕತೆ ಹೆಚ್ಚು. ಮನ ಒಂದಾದಲ್ಲಿ ಧಾರಾಳತೆ ಕಾಣಿಸಿಕೊಳ್ಳುವುದು. ಧಾರಾಳತೆಯೆಂದರೆ ಒಂದು ಕೊಟ್ಟು ಎರಡು ಬೇಡುವುದಲ್ಲ. ಕೊಟ್ಟು ಹಿಗ್ಗುವುದು, ಈ ಕಿಸೆಯಿಂದ ತೆಗೆದ ವಸ್ತುವನ್ನು ಆ ಕಿಸೆಯಲ್ಲಿ ಹಾಕುವುದು. ಅವು ಒಂದೇ ಅಂಗಿಯ ಎರಡು ಕಿಸೆಗಳು. ಒಬ್ಬನೆ ತೊಟ್ಟ ಅಂಗಿ ಅದು.

ಗೆಳತಿ ಹಡೆದಾಳಂತ ನಗತ ಬಾಗೀಣೊಯ್ದ
ಜರತಾರದಂಗಿ ಮುಯ್ಯೊಯ್ದು | ಗೆಳದೆವ್ವ |
ಜನಕೊಪ್ಪುವ ಮಗನ ಹಡೆದಾಳ ||

“ಮಗ, ನಿನ್ನ ಹಡಿಲಾಕ ಮುಗಿಲು ಮುಟ್ಟಿತು ಜೀವ” ಎನ್ನುವ ಗೆಳತಿಯ ಆನಂದೋತ್ಸವದಲ್ಲಿ ಭಾಗಿಯಾಗುವ ಸಂದರ್ಭವೊದಗಿದ್ದು ಒಂದು ಆನಂದೋತ್ಸವವೇ.