ಬಹುವಿಸ್ತಾರವೂ ಆಳವೂ ಆದ ಒಂದು ಸರೋವರವಿದೆ. ನೀರು ಬಾಯಲ್ಲಿ ಹಾಕಿದರೆ ಸಿಹಿ ಸಿಹಿ ಸಕ್ಕರೆ! ಹಿತವಾಗಿ ಬಳಸಿದರೆ ಆರೋಗ್ಯ. ಜೀವನವೆನ್ನುವುದು ಅಂಥ ಸರೋವರವೆಂದು ಜಾನಪದರು ಬಗೆದಿದ್ದಾರೆ. ಆ ಸರೋವರಕ್ಕೆ ಆನೆ ಒಂಟಿ, ಎತ್ತು ಕೋಣ ಬಂದು ಹೊಟ್ಟೆ ತುಂಬ ನೀರು ಕುಡಿಯುತ್ತವಂತೆ. ಗುಬ್ಬಿ ಕಾಗೆಗಳೂ, ಇಣಚಿ ನರಿಗಳೂ ಹೊಟ್ಟೆತುಂಬುವಷ್ಟು ನೀರು ಕುಡಿಯುತ್ತವೆ. ಆನೆ ಒಂಟೆಗಳ ಹೊಟ್ಟೆ ದೊಡ್ಡದು. ಗುಬ್ಬಿ ಕಾಗೆಗಳ ಒಡಲು ಚಿಕ್ಕದು. ನೀರಿನ ಪಾಲು ಸರಿಯಾಗಿಲ್ಲವೆಂದು ಯಾವ ಪ್ರಾಣಿಯೂ ಗೊಣಗುಟ್ಟುವುದಿಲ್ಲ. ಅದೇ ಪ್ರಕಾರ ಜಾನಪದರು ದೊಡ್ಡ ಹೊಟ್ಟೆಯವರಿಗಾಗಿ ಕರಬುವಂತಿಲ್ಲ; ಚಿಕ್ಕ ಹೊಟ್ಟೆಯವರಿಗಾಗಿ ಕನಿಕರಿಸುವಂತಿಲ್ಲ.

“ಬಂದಾಳ ಬಾಲಿ ಬಂದಾಳ ಹೊಲದಿಂದ ಬಂದಾಳ” ಎಂದು ಆರಂಭವಾಗುವ ದಿ. ಮುಧುರಚೆನ್ನರ ಗೀತೆ ಜನಪದ ಸಾಹಿತ್ಯವೆನಿಸಲಿಕ್ಕಿಲ್ಲ. ಆದರೆ ಜಾನಪದ ಜೀವನವನ್ನು ವಿಶ್ಲೇಷಿಸಿದ ಸಾಹಿತ್ಯವೆನ್ನಬಹುದಾಗಿದೆ. ಹಾಡಿನ ವಿಷಯ ಜಾನಪದ, ಹಾಡಿನ ದಾಟಿ ಜಾನಪದ, ಅದರ ಸ್ವಾರಸ್ಯವನ್ನು ಒಂದಿಷ್ಟು ಸವಿಯೋಣ.

ಹೊಲದಿಂದ ಮನೆಗೆ ಹೊರಟವಳು ಒಬ್ಬ ಬಾಲೆ, ಎರಡು ಮಕ್ಕಳ ತಾಯಿ, ಸಂಜೆಯಾಗಿದೆ, ಆಕೆಯ ತಲೆಯಮೇಲೆ ಉರುವಲಿನ ಹೊರೆಯಿದ್ದರೆ ಬಗಲಲ್ಲಿ ಒದುಕೂಸಿದೆ. ಒಬ್ಬ ಮಗಳು ಮುಂದೆ ಸಾಗಿದ್ದಾಳೆ; ಕೈಯಲ್ಲಿ ಆಡಿನ ಕೊರಳ ಹಗ್ಗವಿದೆ.ಮನೆಯಲ್ಲಿ ಬಿಟ್ಟು ಬಂದ ಕೂಸಿನತ್ತ ಬಾಲೆಯ ಹಂಬಲವಿರುವಂತೆ, ಮನೆಯಲ್ಲಿರುವ ಮರಿಯ ಸಲುವಾಗಿ ಆಡಿನ ಹಂಬಲವಿದೆ. ಲಗುಬಗೆಯಿಂದ ಆ ಗುಂಪು ಮನೆಗೆ ಬರುವ ಸುಳುಹು ಕಂಡು ಆಡಿನ ಮರಿಗಳು ಓಡಿಬಂದವು ಬಾಗಿಲಿಗೆ. ಆಡು ಹೋಗಿ ಅಕ್ಕರೆಯಿಂದ ಮರಿಯನ್ನು ನೆಕ್ಕಿತು. ಬಾಲೆ ಮನೆಯಲ್ಲಿ ಬಿಟ್ಟು ಬಂದ ತನ್ನ ಶಿಶುವನ್ನು ಮುದ್ದಿಟ್ಟಳು. ಬಾಲೆ ಮತ್ತು ಆಡು ಓಡಿ ಬಂದು ಮಗು ಮರಿಗಳನ್ನು ಮುದ್ದಿನಿಂದ ನೆಕ್ಕಿ ಅಕ್ಕರೆಯನ್ನು ತೋರ್ಪಡಿಸಿದಂತೆ, ಮಗಳೂ ತನ್ನ ಕೂಸನ್ನ ಮನೆಯಲ್ಲಿ ಬಿಟ್ಟು ಬಂದಿದ್ದಳಲ್ಲವೆ? ಆ ಕೂಸು ಕಟ್ಟಿಗೆಯ ಗೊಂಬೆಯಾದರೂ ಮಗಳು ಓಡಿಹೋಗಿ ಅದನ್ನೆತ್ತಿಕೊಂಡಳು. ಕರಿಗೊಂಬೆ ಕಟ್ಟಿಗೆಯದಾಗಿದ್ದರೂ ಆಕೆಯ ಮನಸ್ಸು ಹರ್ಷದಿಂದ ತುಂಬಿತು.

ಅಂಗಳದಲ್ಲಿರುವ ತನ್ನ ಸ್ಥಳದಲ್ಲಿ ನಿಂತು ಆಡು ಎಳೆಹುಲ್ಲು ಕಚ್ಚಿತು. ಮರಿ ತಾಯ ಮೊಲೆಹಾಲು ಕುಡಿಯಿತು. ಬಾಲೆಯಂತೂ ಸಂಜೆಯ ಹೊಟ್ಟೆಗೂಸಾಕಾಗುವಷ್ಟು ಅಡಿಗೆಯನ್ನು ಮುಂಜಾವಿನಲ್ಲಿಯೇ ಮಾಡಿಟ್ಟಿದ್ದಳು. ಮಕ್ಕಳು ಮರಿ ಉಂಡವು. ತಕ್ಕನೆ ತಾನೂ ಉಂಡಳು. ಆಮೇಲೆ ತಡವೇಕೆ? ಮೆತ್ತಗಿನ ಹಾಸಿಗೆ ಸಿದ್ಧವಾಯಿತು. ಗುರುವಿನನ್ನು ಸ್ಮರಿಸಿದಳು. ಹರನನ್ನು ನೆನೆದಳು. ಅದೇ ನೆನಹಿನಲ್ಲಿ ನಿದ್ದೆ ಹತ್ತಿಬಿಟ್ಟಿತು. ನಿದ್ರೆಯ ಭರದಲ್ಲಿ ಹೊಲವನ್ನೂ ಮರೆತಳು. ಮನೆಯನ್ನೂ ಮರೆತಳು. ನಿದ್ದೆಯೆಂದರೆ ಸುಖನಿದ್ರೆ, ಕನಸೆಂದರೆ ಸವಿಗನಸು.

ಬಾಲೆ ಕನಸು ಕಂಡಳು. ಮನಸ್ಸಿನ ಕೋಣೆಯಲ್ಲಿ ಹಣತಿಯ ದೀವಿಗೆ ಜಡೆಮುಡಿಯ ತಂದೆ ಬಂದು – ನೋಡು ಮಗಳೇ ಎನ್ನುತ್ತಲೇ ಬಾಲೆ “ಸ್ವುಮಿ, ಶಿರಬಾಗುವೆ, ಪ್ರೇಮೀ, ಕರವ ಮುಗಿಯುವೆ” ಎಂದಳು.

ಜಡೆಮುಡಿಯ ತಂದೆ ಕೇಳಿದ ಒಂದೊಂದು ಪ್ರಶ್ನೆಗೆ ಬಾಲೆ ಮರು ನುಡಿದದ್ದು ಹೇಗೆಂದರೆ-

ಹೊಲ ಮನೆ ಯಾರದು?   ನೆಲಜಲ ನಿನ್ನದು
ಸುಖದ ಶಿಶು ಯಾರದುಸಕಲ ಜೀವ ನಿನ್ನದು
ನಿನ್ನವಲ್ಲ ವೇತಕೆ?          ನೀನೆ ತಂದೆ ಲೋಕಕೆ
ನೀನು ಒಡತಿ ಅಲ್ಲವೇ?    ಪ್ರಾಣ ತೊತ್ತು ಅಲ್ಲವೇ?
ಕೆಲಸ ಗೈವುದಿಲ್ಲವೇ?      ಚಲನವಲನ ಬೇಡವೆ?
ಸುಖಕೆ ನಲಿವುದಿಲ್ಲವೆ?     ನಿಖಿಲ ಲೀಲೆ ಹೊಲ್ಲವೇ?
ನಾನು ನಿನಗೆ ಮೆಚ್ಚಿದೆ. ಏನು ಬೇಕು ಹೆಚ್ಚಿಗೆ.

ಏನುಬೇಕು ಹೆಚ್ಚಿಗೆ! ಯಾವುದು ಪರಮವಸ್ತು? ದೇವನ ಮೆಚ್ಚುಗೆಗೆ. “ನಾನು ನಿನಗೆ ಮೆಚ್ಚಿದೆ!” ದೇವನು ನಮ್ಮವ, ದೇವನು ನಮ್ಮವ – ಎಂದು ನಾವೆಲ್ಲರೂ ಸಹಜವಾಗಿ, ಸುಲಭವಾಗಿ ನುಡಿಯುತ್ತೇವೆ. ಆದರೆ ಅದನ್ನೊಪ್ಪುವಂತೆ ದೇವನು – “ಇಂವ ನಮ್ಮವ” ಎನ್ನಬೇಕಲ್ಲ! “ಇವನಾರು ಇವನಾರು” ಎನ್ನುವಂತಾದರೆ ಪ್ರಯೋಜನವೇನು?

ಯಾವ ಒಂದನ್ನು ಪಡೆದರೆ ಇನ್ನೇನೂ ಪಡೆಯುವ ಅಗತ್ಯವಿಲ್ಲವೋ ಆ ಒಂದು ಯಾವುದು? ಅದು ಒಂದೇ ಒಂದಾದ ದೇವ! ಆ ದೇವನು ಎಲ್ಲಿದದಾನೆ? ಎಂದು ಕೇಳಿದವರಿಗೆ, ಆ ದೇವನು ಎಲ್ಲಿಲ್ಲ – ಎಂದು ಮರುಪ್ರಶ್ನೆ ಮಾಡಬಹುದಾಗಿದೆ; ಜಗತ್ತಿನೊಳಗಿರುವ ಯಾವ ವಸ್ತುವೂ ದೇವನಷ್ಟು ಹತ್ತಿರವಿಲ್ಲ. ಅ,ಟು ಹತ್ತಗಡೆಯವನೂ, ನಿರಂತರ ಸಂಗಡಿಗನೂ ಆದ ದೇವನೊಬ್ಬನನ್ನು ಪಡೆದರೆ, ಇಡಿಯ ಜಗತ್ತಿನ ಒಡೆಯರೇ ನಾವು. ಸಾಮ್ರಾಟರೇ ನಾವು ಎಂದು ಹೆಮ್ಮೆಪಡಬಹುದಾಗಿದೆ. ಆ ಒಬ್ಬ ದೇವನನ್ನು ಪಡೆವುದಕ್ಕೆ ಮಾಡಬೇಕಾದ ಸಾಧನವೇನು? ಸಾಧನ ಅದೇಕಾದೀತು, ಸಹಜಕ್ರಮವೆಂದರೆ ಸರಿಹೋದೀತು.

ಶ್ರಮದ ದುಡಿಮೆ, ಸಾಧಾರಣ ಊಟ, ಮಕ್ಕಳು. ಸಾಕಿದಪ್ರಾಣಿ; ಆಟದ ಗೊಂಬೆ ಮೊದಲಾದವುಗಳನ್ನು ಅಕ್ಕರೆಯಿಂದ ಪ್ರೀತಿಸುತ್ತ ಅಂತರಂಗದ ಅರಸನನ್ನು ಪ್ರಸನ್ನಗೊಳಿಸುವ ಜೀವನವೇ ಸುಖದಬಾಳು. ಬಡತನ ಒಡೆತನಗಳ ಭೇದಭಾವ್ವನ್ನು ಆಳಿಸಿಹಾಕಿ, ನಿತ್ಯ ತೃಪ್ತರಾದವರಿಗೆ ಸುಖನಿದ್ರೆ ಸವಿಗನಸು ದಿವ್ಯಕೊಡುಗೆಗಳಾಗಿವೆ.

ಬಂಥನಾಳ ಶರಣಯ್ಯನನ್ನು ಕುರಿತು ಪ್ರಾರ್ಥಿಸಿದ ರೀತಿಯನ್ನು ನೋಡಿದರೆ, ಇದೇ “ಬಾ”ಯ ಅಭೀಪ್ಸೆಯೆಂದು ಕಂಡು ಬರುವುದು. “ನಾ ನಿನ್ನ ಮಗಳಯ್ಯ. ಲೇಸಗಿತ್ತೆಯ್ಯ. ಬಡವೆಯ್ಯ ನನ್ನ ಮೇಲೆ ಸಾಸೀವಿ ಕಾಳಷ್ಟು ದಯೆವಿರಲಿ. “ಪರಮಾತ್ಮ ಕೃಪೆಯ ಒಂದು ಅಣುವಿನಷ್ಟು ಸ್ಪರ್ಶಿಸಿದರೂ ನಾವು ಈ ಜಗತ್ತಿನ ಭಯ-ಸಂಕಟ-ಗಂಡಾಂತರಗಳಿಗೆ ಬೆದರುವ ಕಾರಣವಿಲ್ಲ. ಬೆಚ್ಚುವ ಕಾರಣವಿಲ್ಲ. ಒಂದೇ ಒಂದು ಕೂದಲು ಸಹ ಕೊಂಕದೆ ಅದರೊಳಗಿಂದ ಪಾರಾಗಬಹುದು ಎಂದು ಶ್ರೀ ಅರವಿಂದರು ತಮ್ಮ “ಮದರ್” ಎಂಬ ಗ್ರಂಥದಲ್ಲಿ ಸ್ಪಷ್ಟ ಪಡಿಸಿದಾದ್ರೆ. ಗರತಿಯಬಾಳು ಪ್ರೇಮಾರಾಧನೆಯ ಪ್ರತೀಕ. ನೇರವಾದ ಜಪತಪಗಳಾಗಲಿ, ವ್ರತನಿಯಮಗಳಾಗಲಿ ಇರಲೇಬೇಕೆಂದೇನೂ ಇಲ್ಲ. ನಾರದ ಮುನಿಗಳು ಅನುಷ್ಠಾನದಲ್ಲಿರುವಾಗ ಅವರಿಗೆ ಕೇಳಿಸಿಬಂದ ಅಶರೀರವಾಣಿ, ಅಮರವಾಣಿ ನಮ್ಮ ಗರತಿಯ ಪರಿಸ್ಥಿತಿಯನ್ನೇ ಬಣ್ಣಿಸಿದಂತಿದೆ.

ಪ್ರೇಮದೊಳಾರಾಧಿಸೆ ದೇವನ ಜಪತಪವಿನನೇಕೆ?
ಪ್ರೇಮದೊಳಾರಾಧಿಸದಿದ್ದರೆ
ಜಪತಪವಿನ್ನೇಕೆ?
ಒಳಗು
ಹೊರಗು ದೇವನೇ ಕಾಣಲು ಜಪತಪದಿಂದೇನು?
ಒಳಗು
ಹೊರಗು ದೇವನ ಕಾಣದ ಜಪತಪದಿಂದೇನು?

ದುಡಿಮೆಯೇ ದೇವಪೂಜೆ. ಮಕ್ಕಳ ಜೋಪಾಸನೆಯೇ ದೇವನಿಗರ್ಪಿಸಿದ ಬಡಿವಾಣ. ಕೊರೆಯುವ ಚಿಂತೆಯನ್ನು ದೇವನಡಿಗೆ ಇಡುವುದೇ ದಕ್ಷಿಣೆ. ಗರತಿಗೆ ಗಂಡನಾಗಲಿ ಮಗನಾಗಲಿ ದೇವನ ಪ್ರತಿನಿಧಿಯೆಂದೇ ತೋರುವರು.

ತಂದೆಯ ಹಿಂದೆ ಮಗಬಂದನೆಂಬ ಮಾತನ್ನು ಗರತಿ ಹೇಳುವ ರೀತಿಯೇ ಬೇರೆ. ಪತಿಗಾಳಿದೇವರಾದರೆ, ಮಗುಗೂಳಿ ದೇವರು. ಆಕಳ ಹಿಂದೆ ಕರುಬಂದ ಹಾಗೆ, ತಂದೆಮಗ ಬಂದರು, ಎನ್ನುವ ವಿಷಯ ಸಂಸಾರ ವೇದದ ಒಂದು ತ್ರಿಪದಿಯಾಗಿದೆ.

ಗಾಳಿದೇವರ ಗೂಡ ಘೂಳಿದೇವರ ಬಂದಾ
ಆಕಳ ಹಿಂದೆ ಕರು ಬಂದಾ | ನನ ಮನಿಯ
ಮರಾಯರ ಹಿಂದೆ ಮಗ ಬಂದಾ ||

ಗಂಭೀರವಾದ ನಡಿಗೆ ಆಕಳದು; ಟುಣುಪುಣು ಜಿಗಿಯುತ್ತ ಬರುವ ರೀತಿ ಕರುವನದು. ಅದೇ ರೀತಿಯಲ್ಲಿ ಮಾರಾಯರ ಹಿಂದೆ ಮಗಬರುವುದು.

ಬಡತನವೆಂದರೆ ಜೀವದ ಹಂಗುದೊರೆದು ನಿಂತಸ್ಥಿತಿ ಅದಕ್ಕಾಗಿ ಆಳುಕುವವರಿದ್ದಂತೆ, ಅದಕ್ಕೆ ಗುರುಪ್ರಸಾದವನ್ನು ಸೋಂಕಿಸಿ ದಿಟ್ಟರಾಗಿ, ಧೀರರಾಗಿ ದೈತ್ಯಶಕ್ತಿಯನ್ನು ಎದುರಿಸಿ ಗೆಲುಪಡೆದವರುಂಟು. ಪ್ರಾಣಕೊಟ್ಟಾರೆ ಹೊರತು, ಸ್ವಾಭಿಮಾನವನ್ನು ಮಾರಿಕೊಳ್ಳರು. ಪೈಶಾಚಿಕ ವೃತ್ತಿಯ ಧೂಳಿಯನ್ನು ಹಾರಿಸಿ, ಈ ನೆಲವನ್ನು ಉಜ್ವಲಗೊಳಿಸಬಲ್ಲ ಪ್ರಾಸಾಧಿಕ ಜೀವನವನ್ನು ಬದುಕಿ, ಬರೆದು ಹೋದವರುಂಟು.

ಅತ್ತಿಯ ಮನೆ ಸೊಸೆ ಎತ್ತೇರಿ ಬರುವಾಗ
ಕಿತ್ತೂರ ದೊರೆಯು ನೆದರಿಟ್ಟು | ಕೇಳ್ಯಾನ |
ಹತ್ತು ರೂಪಾಯಿ ಮೊಗದೋರ ||

ಪುಂಡಪೋಕರಲ್ಲಿ ಮಾತ್ರ ಇಂತ ಹುಚ್ಚ ಮುಂಡೇಗಂಡತನ ಇರುವುದೆಂದು ಬಹುಜನರು ತಿಳಕೊಂಡಿದ್ದಾರೆ. ಆದರೆ ದೇಶವನ್ನಾಳುವ ದೊರೆಗಳಲ್ಲಿಯೂ ಸಾಕಷ್ಟಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹುಚ್ಚು ಮುಂಡೆಗಂಡತನ ಹುದುಗಿರಬಹುದು. ಅದು, ಮೊದಲಗಿತ್ತಿಯಾಗಿ ಅತ್ತೆಮನೆಗೆ ಎತ್ತೇರಿ ಬರುವ ಚಿಲುಮೆಯನ್ನು ಕಂಡು, ಕಿತ್ತೂರದೊರೆಯ ಆಶೆ ಚಿಗುರಿ ಬಾಯಿಗೆ ನೀರೂರಿತು. ಕೇಳಿಯೇ ಬಿಟ್ಟನು . “ಹತ್ತು ರೂಪಾಯಿ ಮೊಗದೋರೆ” ಆದರೆ ಆ ಮಾತು ಕೇಳಿ, ಆ ಬಾಲೆ ಬೆದರಲೂ ಇಲ್ಲ, ಬೆಚ್ಚಲೂ ಇಲ್ಲ. ನಾಚಿಕೊಂಡು ಮುಖ ತಗ್ಗಿಸಲಿಲ್ಲ. ದೋಚಿಕೊಂಡು ಓಡಿಹೋಗಲಿಲ್ಲ. ಚೊಕ್ಕಟವಾದ ಮಾತಿನಲ್ಲಿ ಮರುನುಡಿದಳು ಏನೆಂದರೆ –

ಹತ್ತು ನಿನ ರೂಪಾಯಿ ನತ್ತೀನ ಬೆಲೆಯಿಲ್ಲ
ಅತ್ತಿಹೊಟ್ಟೇಲಿ ಅರ್ಜುನ್ನ | ಕಾಲಾನ್ನ
ಮೆಟ್ಟಿನ ಬೆಲೆಯು ನಿನಗಿಲ್ಲ ||

ಆಕೆಯ ಮೊನೆಮಾತು ಆತನ ತಿಳಿಗೇಡಿತನವನ್ನು ತಿವಿದು ಎಚ್ಚರಗೊಳಿಸಿರಲೇಬೇಕು. ಕಟು ನುಡಿದು ಹೆಣ್ಣನ್ನು ಹಿಡಿತಂದು ದಗ್ಗುದುಳಿಯ ಬೇಕೆಂದು ವಿಚಾರಿಸಿರಲೇಬೇಕು. ಗಂಡ ಅರ್ಜುನನಾಗಿದ್ದಾನೆ. ಆತನ ಕಾಲ್ಮರೆಯ ಬೆಲೆ ದೊರೆಯ ಕಿಸೆಯಲ್ಲಿ. ಎಂಥ ಮಾತು ಮರುನುಡಿದದ್ದು! ಮಾನವಂತರು ಮುಖತೋರದೆ ಉರುಲು ಹಾಕಿಕೊಂಡು ಸಾಯಬೇಕು! ಜಾನಪದದಲ್ಲಿ ಈ ಕತೆ ಮುಗಿಯುವುದಿಲ್ಲ. “ಅವನು ಹೇಳಿಕೇಳಿ ಕಿತ್ತೂರಿನ ದೊರೆ. ಕಡು ಪೀಡೆಕಾರ. ನನಗಾಗಿ ನನ್ನ ಮಾತಿಗಾಗಿ ಕುನಸಿಟ್ಟು, ಹಂಗುದೊರೆದು ನನ್ನನ್ನೂ, ನನಗಾಗಿ ನನ್ನ ಮನೆತನದವರನ್ನೂ ಕ್ರೂರೋಪಾಯಗಳಿಂದ ಮಣ್ಣುಗೂಡಿಸಬಹಹುದು, ಧೂಳಿಹಾರಿಸಬಹುದು.ಮನೆತನದವರ ಹೆಣಗಳನ್ನು ಹದ್ದು ಕಾಗೆಗಳಿಗೆ ಹಬ್ಬದಡಿಗೆ ಮಾಡಿ ಎಡೆಬಡಿಸಬಹುದು. ಆದ್ದರಿಂದ ಪ್ರಸಂಗವೇ ಬಂದೊದಗದಂತೆ, ಅದರ ಬೇರನ್ನೇ ಕತ್ತರಿಸಿ ಹಾಕುವುದು ಪರಮೋಪಾಯ”ವೆಂದು, ಅದೆಂಥದೋ ವಿಷ ತೆಗೆದುಕೊಂಡು ಆ ಮೊದಲಗಿತ್ತಿ ಅಸುನೀಗಿ ಭವಿಷ್ಯತ್ತಿನಲ್ಲಿ ಮನೆತನಕ್ಕೆ ಅಡಸುವ ಘೋರ ವಿಪತ್ತಿನಿಂದ ಉಳಿಸಿದಳಂತೆ.

ಹುಟ್ಟಿದ ಮನೆಗೂ ಕೊಟ್ಟ ಮನೆಗೂ ಏಕಕಾಲಕ್ಕೆ ಕೀರ್ತಿತರುವ ಹೆಣ್ಣು ಮಕ್ಕಳಿರುವುದು ನಾಡಿನ ಭಾಗ್ಯವೇ. ಆದರೆ ಅಕ್ಕಿಯಲ್ಲಿ ಅಪ್ಪಿತಪ್ಪಿ ಒಂದೊಂದು ಹರಳು ಕಾಣಿಸುವುದೂ ಉಂಟು. ಅದು ಅಕ್ಕಿಯಿಂದ ಹೊರಬಿದ್ದು ಉಸುಕಿನಲ್ಲಿ ಬೆರೆತರೆ ಅದು ಒಂದು ಭೂಷಣವೇ. ಬಳಗದಲ್ಲಿ ಸೇರಿಕೊಂಡಂತೆಯೇ, ಸಾರ್ಥಕವೆನಿಸದು.

ಕೂಡಿದರ ಕೂಡಬೇಕು ಬೇಡರ ಹುಡುಗನ
ಪಾವುಡದ ಚುಂಗು ಮೊಳದುದ್ದ | ಬಿಟಗೊಂಡು,
ಓಡ್ಹೋಗೋ ಮೊಲನ ಜಡಿದಾನ ||

ಕಿತ್ತೂರ ದೊರೆಗೆ ಮಾರ್ಮಿಕ ಉತ್ತರ ನೀಡಿದ ಮೊದಲಗಿತ್ತಿಯಲ್ಲಿ ಒಂದು ಕ್ಷಾತ್ರವೃತ್ತಿ ಕಾಣಿಸಿಕೊಂಡರೆ, ಈ ಕೊಡುಗೂಸಿನಲ್ಲಿ ಅಲ್ಲ, ಕನ್ಯೆಯಲ್ಲಿ ಇನ್ನೊಂದು ಕ್ಷಾತ್ರವೃತ್ತಿ ಹಣಿಕೆ ಹಾಕುತ್ತದೆ.ಅದು ಜೀವವನ್ನೇ ಬಲಿದಾನವಿತ್ತ ದುರಂತವಾದರೆ, ಇದು ಜೀವವನ್ನೇ ಪಣಕ್ಕಿಟ್ಟ ಬಲಿದಾನದ ಪ್ರಸಂಗಕ್ಕೂ ಸಿದ್ದವಾದ ಹೂಣಿಕೆ.

ಹುಟ್ಟಿಬಂದ ಮನುಷ್ಯರಿಗೆಲ್ಲ ಸುಪ್ರಸಂಗಗಳು ಬರುವಂತೆ, ಪರೀಕ್ಷಾಪ್ರಸಂಗಗಳೂ ಬರುವುದುಂಟು. ಸುಪ್ರಸಂಗವು ಪ್ರಸಾದವೆನಿಸಿದರೆ, ಪರೀಕ್ಷಾಪ್ರಸಂಗವು ಪರಮೌಷಧಿಯೆನಿಸುತ್ತದೆ. ಪ್ರಸಾದವಾಗಲಿ ಔಷಧವಾಗಲಿ ಹೊಟ್ಟೆ ತುಂಬ ತಿನ್ನುವ ದೀನಸಲ್ಲ. ಪ್ರಮಾಣವನ್ನು ಮೀರಿ ಸ್ವೀಕರಿಸಿದರೆ ವಿಪರೀತ ಪರಿಣಾಮವುಂಟಾಗುವುದು ನಿಶ್ಚಯ. ಒಬ್ಬರಿಗೆ ಪ್ರಸಾದವಾದದ್ದು ಇನ್ನೊಬ್ಬರಿಗೆ ಆಗಲಿಕ್ಕಿಲ್ಲ. ಒಬ್ಬ ರೋಗಿಗೆ ಕೊಡಮಾಡಿದ ಔಷಧಿ ಇನ್ನೊಬ್ಬ ರೋಗಿಗೆ ತಾರಕವಾದೀತೆಂದು ಹೇಳಲಿಕ್ಕಾಗದು.

ತಿರುಗಿ ಕೇಳಿದರೆ ಮಾರಕವೇ ಆದೀತು. ಪ್ರಸಾದವನ್ನೇ ಆಗಲಿ, ಔಷಧವನ್ನೇ ಆಗಲಿ ಪ್ರಸನ್ನ ಭಾವದಿಂದ ಸ್ವೀಕರಿಸುವುದೇ, ಪರಮಾತ್ಮನಿಗೆ ಒಪ್ಪಿತವಾದ ಬಾಳು. ಹುಟ್ಟಿದ ತಪ್ಪಿಗಾಗಿ ಬದುಕುವುದು ಬಾಳಲ್ಲ. ಬಾಳನ್ನು ಒಪ್ಪುವು ಮಾಡಿಕೊಂಡು ಜೀವಿಸುವುದೇ ಬದುಕು.