ದುಡಿಮೆಯೆಂದರೆ ಹಣಗಳಿಸುವ ಪರಿಶ್ರಿಮವೆಂದೇ ತಿಳಿದಿದ್ದೇವೆ. ಆದರೆ ವೈಯಕ್ತಿಕವಾಗಿ ಮೈ – ಕೈ, ಬಟ್ಟೆಬರೆ ಅಲ್ಲದೆ ಉಪಯೋಗಿಸುವ ವಸ್ತುಗಳು ಸ್ವಚ್ಚವಾಗಿ, ದೃಢವಾಗಿ ಉಳಿಯುವಂತೆ ಆಗಾಗ ಎಚ್ಚರವಹಿಸಿ ಸರಿಪಡಿಸುವುದೇ ದುಡಿಮೆ. ‘ತಾನು ಉಣ್ಣುವ ಊಟ, ತಾನು ಭೋಗಿಸುವ ರತಿಕೂಟ ಅನ್ಯರಿಂದ ಮಾಡಿಸಬಹುದೇ’ ಎಂದು ಬಸವಣ್ಣನವರು ಕೇಳಿದ್ದಾರೆ. ಆದರೆ ಅವರ ಮಾತಿಗೆ ಸೇರಿಸಬೇಕಾದ ವಿಷಯಗಳು ಇನ್ನೂ ಬಹಳ ಇವೆ. ಕೂಸಿನ ಮೂಗು, ಕಣ್ಣು ಮೊದಲು ಮಾಡಿ, ಮುಕುಳಿ ತೊಳೆಯುವ ಕೆಲಸವನ್ನು ತಾಯಿಯಾದವಳು ಇಲ್ಲವೆ ತಾಯಿಯಂಥವಳು ( ಅಜ್ಜಿ, ಅಕ್ಕ, ಅತ್ತೆ) ಮಾಡಬೇಕಾಗುತ್ತದೆ. ಕೂಸು ಬಾಲಕನಾಗಿ ತಿಳುವಳಿಕೆ ಬಂದುಷ ಸ್ವಾವಲಂಬಿಯಾಗುವ ವಯಸ್ಸಾಗಲು ಅವನು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ರೂಢಿ, ಅಭ್ಯಾಸ ಮಾಡಿಸುವವರು ತಾಯಿ ತಂದೆಗಳೇ. ಕೈಕಾಲಿಗೆ ಹೋಗಿ ಬಂದವನು ಅದೆಂಥ ದೊಡ್ಡ ಮನುಷ್ಯನಾಗಿದ್ದರೂ ತನ್ನ ಕುಂಡಿಯನ್ನು ತಾನೇ ತೊಳೆದುಕೊಳ್ಳುವನು. ಅದಕ್ಕಿಂತ ಕೆಳಮಟ್ಟದ ಕಾರ್ಯ ಇನ್ನಾವುದಿದೆ?

ಮನೆಯೊಳಗಿನ ಕಸಗುಡಿಸುವುದು, ಮುಸುರೆ ತೆಗೆಯುವುದು, ಬಾಂಡೆ ತಾಬಾಣ ತಿಕ್ಕುವುದು, ಬಚ್ಚಲ ತೊಳೆಯುವುದು, ಸಾರಿಸುವುದು. ಅಂಗಳದಲ್ಲಿ ಕಟ್ಟಿದ ದನಗಳ ಗಂಜಳ ಬಳಿಯುದು ಮೊದಲಾದ ಕೆಲಸಗಳನ್ನು ಹೆಂಗಸರೇ ಮಾಡುತ್ತಾರೆ. ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಆಳುಗಳಿಂದ ಮಾಡಿಸಲಾಗುತ್ತದೆ.

ಮಕ್ಕಳ ಆರಯಿಕೆ, ಸ್ವಚ್ಛತೆ, ಶಿಸ್ತು ಕಾಯ್ದುಕೊಂಡು ಹೋಗುವ ಕೆಲಸವನ್ನು ಹೆಣ್ಣುಮಕ್ಕಳು ಮಾಡುವಂತೆ, ದನಕರುಗಳ ಪರಾಂಬರೆಯನ್ನೂ ಮಾಡಬೇಕಾಗುವುದು. ಮಕ್ಕಳೇ ಮರಿಗಳಂತೆ ಆಕಳು, ಎಮ್ಮೆ ಎತ್ತು, ಕುದುರೆ, ಆಡು, ಮಣಕ ಕರು ಮೊದಲಾವು ಸ್ವಚ್ಛವಾಗಿ ಉಳಿಯುವಂತೆ ಓರಣವಾಗಿ ಲಕಲಕಿಸುವಂತೆ ಮಾಡುವುದು ಹೆಣ್ಣುಮಕ್ಕಳಿಗೆ ಸಾಧ್ಯವಾದಷ್ಟು ಗಂಡು ಮಕ್ಕಳಿಗೆ ಸಾಧ್ಯವೂ ಆಗುವುದಿಲ್ಲ, ಸಾಧಿಸುವದೂ ಇಲ್ಲ. ದನಗಳೆಂದರೆ ಮನೆತನದ ಆಸ್ತಿ, ಜೀವಂತ ಧನ. ಅವುಗಳ ರಕ್ಷಣೆ ಆರೋಗ್ಯ ಸ್ವಚ್ಛತೆ ಮೊದಲಾದವುಗಳನ್ನು ತಾನು ಮಾಡುವುದು ಉತ್ತಮ, ಮನೆಯೊಡೆಯ ಮನೆಯೊಡತಿಯರಿಗೆ ಗೊತ್ತು ಮಗ ಮಾಡುವುದು ಮಧ್ಯಮ. ಆಲು ಮಾಡುವುದು ಹಾಳು, ಎಂಬುದರ ಮನವರಿಕೆಯೂ ಆಗಿರುತ್ತದೆ. ಆಳುಹಚ್ಚಿ ಮಾಡಿಸುವ ಶ್ರೀಮಂತಿಕೆಯಿದ್ದರೂ ದುಡಿಮೆಯ ಆನಂದ ದೊರೆಯಬೇಕಾದರೆ ಕೈಮುಟ್ಟ ಕೆಲಸ ಮಾಡಬೇಕು. ರಟ್ಟೆಯಲ್ಲಿ ಚಿಂತಾಕು ಎಂಬ ಬಂಗಾರದ ಆಭರಣವನ್ನು ಧರಿಸಿದ ಶ್ರೀಮಂತ ಮಹಿಳೆಯು, ಚಿಪ್ಪಾಟಿ ಬಳೆಯುವ ಕೆಲಸ ಅಂದರೆ, ಜಾನಪದ ಭಾಷೆಯಲ್ಲಿ ಹೆಂಡಿಕಸ ಬಳೆಯುವ ಕೆಲಸ ಮಾಡುತ್ತಿದ್ದಾಳೆಂದರೆ ಸೋಜಿಗವಲ್ಲವೇ? ಆಕೆ ಕಾರ್ಯಮಗ್ನಳಾಗಿರುವ ಹೊತ್ತಿನಲ್ಲಿ ಯಾರೋ ನೆರೆಮನೆಯವರು ಬಂದು ಕೇಳಿದರು. ಚಿಂತಾಕು ಧರಿಸುವ ಸಡಗರದಲ್ಲಿ ಚಿಂತೆಯನ್ನೆಲ್ಲ ಮರೆತುಬಿಟ್ಟಿರುವಿಯಲ್ಲ! ನಿಮ್ಮರಾಯ ಅಲ್ಲೊಬ್ಬಳ ಕೂಡ ನಗುತ್ತ ಇದ್ದಾನೆ. ಆ ಮಾತು ಕೇಳಿ ಆಕೆಗೆ ಎಷ್ಟೂ ತಳ್ಳಂಕವೆನಿಸಲಿಲ್ಲ. ತಲೆ ತಿರುಗಲಿಲ್ಲ ಸಹಜವಾಗಿಯೇ ಹೇಳಿದಳು.

“ನಕ್ಕರೆ ನಗಲೆವ್ವ ಅದು ನಗೆ ಮುಖದ ಕೇದಿಗೆ, ಆ ಕೇದಿಗೆಯನ್ನು ನಾನು ದಿನಾಲು ಮುಚ್ಚಿ ಮುಡಿಯುತ್ತಿದ್ದೇನೆ. ಆಕೆಯೊಂದು ಬಾರಿ ಮುಡಿಯಲಿ. ಅದಕ್ಕೇಕೆ ಚಿಂತೆ?”

ಮತ್ತಾರಾದರೂ ಹರಕಿಹೆಂಗಸಾಗಿದ್ದರೆ, ಚಿತ್ತ ಒತ್ತಟ್ಟಿಗೆ ಚಿಪ್ಪಾಟಿ ಮಾಡಿ, ಗಂಡನನ್ನು ಎಳೆತಂದು ಬೀದಿಗೆ ನಿಲ್ಲಿಸುತ್ತಿದ್ದಳೆನೋ. ಆದರೆ ಆ ಶ್ರೀಮಂತಿಯ ಮನಸ್ಸು ಸಹ ಶ್ರೀಮಂತವೇ ಆಗಿತ್ತು. ಶ್ರೀಮಂತ ಮನಸ್ಸು ಆಡಿಸಿದ ಮಾತು ಶ್ರೀಮಂತವೇ ಆಗಿರುವುದು ಸಹಜವಾಗಿದೆ. ಒಂದು ಕೈ ರಟ್ಟೆಯಲ್ಲಿ ಚಿಂತಾಕು, “ಇನ್ನೊಂದು ಕೈಯಲ್ಲಿ ಕಸಬರಿಗೆ, ರೊಜ್ಜರಾಡಿ ಬಳಿಯುವ ಕೆಲಸದಲ್ಲಿ ಆಕೆ ತಲ್ಲೀನಳಾಗಿದ್ದಾಳ ಮನೆಯ ಕೆಲಸ ಮನದ ಕೆಲಸವಾದರೆ ಬಿಟ್ಟೀಬೇಸರ ಎಲ್ಲಿಂದ ಬಂದೀತು?”

ತಮ್ಮನೇ ಆಗಲಿ, ಮಗನೇ ಆಗಲಿ, ಆ ಬೆಳ್ಳಗಿನ ಎತ್ತು; ಬೆಳ್ಳಿಯ ಬಾರಕೋಲು ಇವುಗಳೊಡನೆ ಹೊಲದ ಕೆಲಸ ಮಾಡುವನೆಂದು ಅಕ್ಕನಿಗೆ ತಾಯಿಗೆ ಪರಮಸಂತೋಷ. ಅದು ಕೀಳು ಕೆಲಸ, ದಡ್ಡರ ಧಾವತಿ ಎಂದು ಭಾವಿಸಿದವರೇ ಅಲ್ಲ. ಹೊಲತೋಟವೆಂದರೆ ಒಕ್ಕಲಿಗನಿಗೆ ಸುರಲೋಕ, ಸ್ವರ್ಗಲೋಕ. ಅಲ್ಲಿ ಹೋದರೆ ಮನೆ ಮರೆಯುತ್ತಾನೆ. ಅದಕ್ಕೆಲ್ಲ ಕಾರಣವೆಂದರೆ, ತೋಟದ ವೈಭವವೇ. ಅದನ್ನು ಕಂಡವರ ಹಸಿವೆ, ನೀರಡಿಕೆ ಹೇಳಹೆಸರಿಲ್ಲದೆ ಹೋಗಿಬಿಡುತ್ತವೆ.

ತೋಟಕ ಹೋದಣ್ಣ ಊಟಕ್ಕ ಬರಲಿಲ್ಲ
ತೋಟದ ಹೂವ ತಲೆತುಂಬ | ಇಟಕೊಂಡು |
ಊಟದ್ದಂಬಲ ಮರೆತಾನ ||

ತೋಟದ ಹೂಗಳನ್ನು ತಲೆತುಂಬ ಇಟ್ಟುಕೊಂಡು ಊಟವನ್ನು ಹಂಬಲಿಸದೆ ಮಲಗುವ ಅಣ್ಣನ ಹಾಗೂ ಎಚ್ಚರಿಕೆಯಲ್ಲಿ ಅವನ ಚೈತನ್ಯದ ಚತುರಾಯಿಯನ್ನು ತಂಗಿಯು ಹೇಳುವ ಭಾಷೆಯಲ್ಲಿಯೇ ಕೇಳಬೇಕು.

ಕುದುರೆಯ ಕುಣಸಿತ ಆನಯ ನಡಿಸುತ
ಅರಗಿಳಿಗೆ ಮಾತು ಕಲಿಸುತ | ಬರತಾನ |
ಬರಿಗೊಡದಮ್ಮ ಬದಿಗಾಗ ||

ಕುದುರೆ ಕುಣಿಸುವಾಗ ನುರಿತಸ್ವಾರ, ಆನೆ ನಡಿಸುವಾಗ ಸಮರ್ಥ ಮಾವುತ, ಇವೆರಡು ಅವನ ದೈಹಿಕ ಸಾಮರ್ಥ್ಯಕ್ಕೆ ಸ್ಪಷ್ಟಸಾಕ್ಷಿಯಾಗಿವೆ. ಅದರಂತೆ ಬೌದ್ಧಿಕ ಚಾತುರ್ಯವನ್ನೂ ಅಣ್ಣನು ಸಂಗಳಿಸಿದ್ದಾನೆ. ಅಂತೆಯೇ ಅರಗಿಳಿಗೆ ಮಾತುಕಲಿಸಬಲ್ಲವನಾಗಿದ್ದಾನೆ.

ಒಕ್ಕಲಿಗ, ತೋಟಗಾರ ಎಂದರೆ, ಬರೆ ಕೊಳಕು ಅಂಗಿಯನ್ನು ತೊಟ್ಟು, ಚಿಂದಿ ರುಮಾಲನ್ನು ಸುತ್ತುವ, ಹೊಟ್ಟೆ ಹುರಿಹಾಕಿಕೊಂಡು ಹಣೆಯಲ್ಲಿ ಹದಿನಾರು ಗಂಟು ಮೂಡಿಸಿಕೊಂಡು ನಿರಾಶೆಯ ಬಾಳಿನಲ್ಲಿ ತೊಳಲಾಡುವ ಕಂಗಾಲನಲ್ಲ. ನಗಬೇಕೆಂದರೆ ನಗುವಂಥ ಹೋರಿಗಳನ್ನು ಕಟ್ಟಿದ್ದಾನೆ. ಹಕ್ಕಿಹಾರಿದರೆ ಬೆದರುವಂಥಹೋರಿಗಳನ್ನು ಗಾಡಿಗೆ ಹೂಡಿದರೆ ಸುಂಕದ ಕಟ್ಟೆಯನ್ನು ಲೆಕ್ಕಿಸದೆ ಜಕಾತಿ ಮೀರಿಬರುವಂಥವು. ಒಕ್ಕಲಿಗನೆಂದರೆ ಬೆವರಿನಲ್ಲಿ ತೊಯ್ದು ಕೊಳಕು ವಾಸನೆ ಬೀರುವ ನಾತಬಡಕ ಕಾಡುಪ್ರಾಣಿಯಲ್ಲ. ಕೆಲಸಕ್ಕೆ ಮಣಿಯದ, ಸಿಂಗಾರಕ್ಕೆ ದಣಿಯದ ರಾಜಜೀವಿ ಆಗಿರುತ್ತಾನೆ ಒಕ್ಕಲಿಗ.

ಸರದಾರ ಬರುವಾಗ ಸುರಿದಾವ ಮಲ್ಲಿಗೆ
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನೆಬಾಗಿ ಹಾಲ ಸುರಿದಾವ ||

ಇಂಥ ಅಣ್ಣಗಳೆಂದರೆ ತಂಗಿಯ ಪಾಲಿಗೆ ಬಂಗಾರಬಳಿಯ ಮುಂದಿರುವ ಬಿಂದುಲಿ ಇದ್ದ ಹಾಗೆ. ಅವನ ಜೊತೆಗಿರುವ ಹಿಂಡುಮಂದಿ ಬಂಗಾರ ಬಳಿಯಾದರೆ, ಅಣ್ಣ ಬಿಂದುಲಿ. ಈ ಮಾತನ್ನು ಅಕ್ಕನ ಹಾಡಿನಲ್ಲಿ ಕೇಳಬೇಕು.

ಬಂಗಾರ ಬಳಿ ಮುಂದ ಬಿಂದುಲಿದ್ದರ ಚಂದ
ಹಿಂಡು ಮಂದ್ಯಾಗ ನನ್ನಣ್ಣ | ತಾ ಕೂತು
ಬಂದನೆಂದರೆ ಬಲುಚಂದ ||

ಭೂಮಿತಾಯಿಯ ಚೊಚ್ಚಿಲಮಗನೆನಿಸಿದ ಒಕ್ಕಲಿಗನ ಐಶ್ವರ್ಯದ ಮುಂದೆ, ಅರಮನೆಯ ಸಡಗರವನ್ನು ನಿವಾಳಿಸಬೇಕು. ಐಶ್ವರ್ಯವೆನ್ನುವುದು ಈಶ್ವರನ ಅಕ್ಷಯ ಸಾನ್ನಿಧ್ಯ. ಅದು ಒಕ್ಕಲಿಗನ ತುಂಬುಜೀವನಕ್ಕೆ ಮಾತ್ರ ಒಪ್ಪುತ್ತದೆ. ದುಡಿಮೆಗೆ ಹಿಂಜರಿಯದ ಸಮರ್ಥ ಮೈಕಟ್ಟು. ಹಾಲು ಹಯನುಗಳಿಂದ ಕೈತೊಳಕೊಳ್ಳುವ ಸಿರಿಯೊಟ್ಟು. ಯಾವುದಕ್ಕೂ ಅವನ ಕೈಮೇಲೆ. ಕೊಡುಗೈ ದೊರೆ ಅಂದರೆ ಅವನೇ. ಹೊಲ ಉತ್ತಲಿ. ತೋಟದಲ್ಲಿ ಮೊಟ್ಟೆ ಹೊಡೆಯಲಿ. ಬೀಳು ಭೂಮಿಯಲ್ಲಿ ದನ ಮೇಸಲಿ, ಕುರಿದಡ್ಡಿಯಲ್ಲಿ ನಾಯಿಗಳ ಜೊತೆಗೆ ಮಲಗಿಕೊಳ್ಳಲಿ ಎಲ್ಲವೂ ಚಂದವೇ. ಯಾವ ಕೆಲಸಕ್ಕೆ ನಿಂತರೂ ಮುಖ ಅರಳುವುದು. ಅದನ್ನು ಕಂಡು ಅಕ್ಕ ತಂಗಿಯರು ಹಿರಿಹಿರಿ ಹಿಗ್ಗುವರು. ದು, ಉದ್ಯೋಗ ಇವು ಬರಿ ಹೊಟ್ಟಯ ಪಾಡಲ್ಲ. ಕೈಲಾಸದಸುಖ ತಂದೊದಗಿಸುವ ಉಪಾಯ.

ತನ್ನ ಮನೆಯ ಒಂದು ಭಾಗದಲ್ಲಿ ಕೊಟ್ಟಿಗೆ ಮಾಡಿಕೊಂಡು ಅಲ್ಲಿ ದನಕಟ್ಟಿ ಮೇವು ಹಾಕಿ ಕಾಲಕಾಲಕ್ಕೆ ಸೆಗಣಿ ರೊಜ್ಜುಗಳನ್ನು ಬಳಿಯುವ ಕೆಲಸ ಹೀನವೆಂದು ಒಕ್ಕಲಿಗನು ತಿಳಿದೇ ಇಲ್ಲ. ಸೆಗಣಿಯೆಂದರೆ ದನಗಳ ಮಲ ಎಂಬರ್ಥವನ್ನು ಲೆಕ್ಕಿಸಿದರೆ ಅದನ್ನು ಮುಟ್ಟುವುದೂ ಮುಡಚಿಟ್ಟಿನ ಕೆಲಸ ಎನ್ನಬೇಕಾದೀತು. ಆದರೆ ಅದೇ ಸೆಗಣಿಯಿಂದ ಅಡಿಗೆಯಮನೆದೇವರ ಮನೆಗಳ ನೆಲವನ್ನು ಸಾರಿಸುವರೆಂದರೆ, ಸೆಗಣಿಯ ಬಗ್ಗೆ ಅವರ ಭಾವನೆ ಅದೆಷ್ಟು ಉದಾತ್ತವಾಗಿರಬಹುದೋ ತಿಳಿಯದು, ದೇವರಿಗೆ ಅಭಿಷೇಕ ಮಾಡಿಸುವಾಗ ಪಂಚಗವ್ಯಗಳನ್ನ ಅಂದರೆ ಆಕಳ ಹಾಲು, ಮೊಸರು, ತುಪ್ಪ, ಮೂತ್ರ ಸೆಗಣಿಗಳನ್ನು ಉಪಯೋಗಿಸುವುದು ಯಾರಿಗೆ ಗೊತ್ತಿಲ್ಲ?

ದನಗಳೆಂದರೆ ಒಕ್ಕಲಿಗನ ಒಡನಾಡಿಗಳು, ಮೂಕ ಮಿತ್ರರು, ಕೂಡಿ ದುಡಿಯುವ ಸಹಕಾರಿಗಳು, ಕೂಡಿ ಉಣ್ಣುವ ಸಹಜೀವಿಗಳು ತೆನೆಯ ಕೆಳಗಿನ ದಂಟು ತಮಗೆ ದಂಟಿನ ತುದಿಯಲ್ಲಿರುವ ತೆನೆ ಒಕ್ಕಲಿಗನಿಗೆ ಎಂಬಕಟ್ಟಳೆಯನ್ನು ಸಮ್ಮತಿಸಿವೆ. ದನಕ್ಕೆ ತೊನಸಿ ನೊಣ ಕಡಿದರೆ ಒಕ್ಕಲಿಗನು ತುರುಸಿಕೊಳ್ಳಬೇಕು. ಅಂಥ ಸಂಬಂಧವಿದೆ ಅವರಲ್ಲಿ.

ಹಂತಿಯ ಎತ್ತುಗಳ ಮೈಗೆ ಸುಂಕ ತಗುಲಿದರೆ ಒಕ್ಕಲಿಗನ ಜೀವಕ್ಕೆ ಕಸವಿಸಿ –

ಹಂತಿಯ ನಮ್ಮೆತ್ತು ಹಂತೀಲಿ ಬಂದರ
ಸೆರಗೀಲಿ ಸುಂಕ ವರಸೇನ | ತಮ್ಮನ |
ಹಂತಿಯ ಎತ್ತು ಹದಿನಾರು ||

ದುಡಿಮೆಯೆಂದರೆ ಒಕ್ಕಲಿಗನನಿಗೆ ದೇವ ಪೂಜೆಯೇ ಸರಿ. ದೇವರ ಪೂಜೆ ಮಾಡುವವನು ಮೊದಲು ತಾನು ಜಳಕ ಮಾಡಿ, ವಿಭೂತಿ ಇಲ್ಲವೆ ಗಂಧ ಧರಿಸಿ ದೇವರಿಗೆ ಮೀಸಲು ನೀರೆರೆದು ವಿಭೂತಿ ಗಂಧಧಾರಣ ಮಾಡುವನು. ದೇವರಿಗೆ ನೈವೇದ್ಯ ಮೊದಲು. ಪೂಜಿಸುವವನ ಊಟ ಹಿಂದುಗಡೆ. ಇವೆಲ್ಲ ಕ್ರಮಗಳು ದನಗಳ ಆರಯಿಕೆಯ ರೀತಿಯಲ್ಲಿಯೂ ಕಂಡು ಬರುತ್ತವೆ. ಎತ್ತು ಅಂದರೆ ಗಂಡು ದನವೆಂದು ತಿಳಿದಿಲ್ಲ ಒಕ್ಕಲಿಗ. ಬಸವಣ್ಣನೆಂದು ತಿಳಿದಿದ್ದಾನೆ.

ಹಸನುಳ್ಳ ವಿಭೂತಿ ನೊಸಲೀಗಿ ಹಚಗೊಂಡು
ಬಸವಣ್ಣಗ ಮೇವು ಕೊರೆಯುವ | ತಮ್ಮಗ |
ಬಸವೇಶ ವರವ ನೀಡ್ಯಾನ ||

ಗೊಬ್ಬರದ ಗಾಡಿ ಹೊಡೆಯುವಾಗ ಒಕ್ಕಲಿನ ವೇಷ-ಭೂಷಣಗಳನ್ನು ನೋಡಿದರೆ ಕಣ್ಣುಗಳು ಸಹ ಹೇಸಿಕೊಳ್ಳುವವು. ಆದರೆ ಆತನ ಅಕ್ಕ ತಂಗಿಯರು ಆ ದೃಶ್ಯ ಒಂದು ಬಗೆಯ ಚೆಲುವೆಂದೇ ಬಗೆಯುವರು.

ಕಬ್ಬು ಕಾರುಳ್ಳವನೆ ಹುಬ್ಬು ಸೇರುಳ್ಳವನೆ
ಗೊಬ್ಬರದ ಗಾಡಿ ಹೊಡೆವವನೆ | ಅಣ್ಣಯ್ಯನ |
ಹುಬ್ಬಿಗಿನ್ನೊಂದು ಸರಿಯುಂಟೆ?

ಭೂಮಿ ತಾಯಿಗೆ ಮೊದಲಿಗರ್ಪಣವಾಗುವುದು ಗೊಬ್ಬರ. ಆ ಬಳಿಕ ಬಿತ್ತುವ ಬೀಜ. ಮೊದಲು ಕೈಕೆಸರಾಗಬೇಕು. ಆ ಮೇಲೆ ಬಾಯಿ ಮೊಸರಾಗುವುದು. ಹಿಡಿಬಿತ್ತಿ ಪಡೆ ಬೆಳೆಯುವ ಆ ಚಲಕ ಅದ್ಭುತ ಪವಾಡವೆಂದೇ ಹೇಳಬೇಕು. ಕಣದ ಅಗಲಳತೆಯೆಷ್ಟು, ಹರಿಯೆಷ್ಟು, ಎತ್ತುಗಳ ಸಂಖ್ಯೆ ಎಷ್ಟು, ಹಂತಿ ಹೊಡೆಯುವ ಆಳುಗಳೆಷ್ಟು, ಹಾಡುವರೆಷ್ಟು, ಅವರೆಲ್ಲರ ಉತ್ಸಾಹವೆಷ್ಟು, ಬಾಯಿಂದ ಹೇಳಲಿಕ್ಕಾಗದು. ನೋಡಿಯೇ ತಣಿಯಬೇಕು. ಕಂಡೇ ತಿಳಿಯ ಬೇಕು. ಹೊಲದ ಲಕ್ಷ್ಮಿಯ ಸಾಕ್ಷಾತ್ಕಾರವಾಗುವುದು ಮದ ಮಲಗಿದಲ್ಲಿಯೇ ಮುತ್ತಿನಂತಹ ಜೋಳ, ಹವಳದಂತಹ ಗೋಧಿ – ಎಂದು ಯಾರಬಾಯಿಂದಾದರೂ ಸಹಜ ಹೊರಡುವ ಮಾತಾಗಿದೆ.

ಹನ್ನೆರಡೆತ್ತಿನ ಬಾರಿ ಹೊನ್ನ ಮೇಟಿ ಕಂಬ
ಬಾಸಿಂಗ್ದ ಕೊಳಗ ಬಲಗೈಯ | ಅಣ್ಣಯ್ಯ |
ರಾಸಿ ಅಳೆಯೋದು ಬೆಳಗಾಯ್ತು ||

ಹೀಗೆ ಒಕ್ಕಲಿಗನು ಅನುಪಮ ದಾನಿ, ಅಪ್ರತಿಮ ದಾನಿ. ಸಂದಪೆಂಪಿನಘನ ದಾನಿ. ಕೌತುಕದ ದಾನಿ, ಮಹೋನ್ನತದಾನಿಯೆನಿಸಿದರೆ ಆಶ್ಚರ್ಯವೇನು?