ಋಷಿಗಳ ಆಶ್ರಮದಲ್ಲಿ “ಹರಿಣಾರಿಯ ಮರಿಗಳೈದೆ ನೆಕ್ಕುತಿರ್ಕುಂ” ಎಂದು ಓದಿದ್ದು ನೆನಪಿದೆ. ಆಶ್ರಮದ ಅಧಿಪತಿಯಾದ ಋಷಿಯ ಅಥವಾ ಮುನಿಯ ಪ್ರಬಾವದಿಂದ, ಪ್ರಾಣಿಗಳು ತಮ್ಮ ಹುಟ್ಟು ವೈರತ್ವವನ್ನು ಮರೆತು; ಒಂದನ್ನೊಂದು ಪ್ರೀತಿಸುತ್ತವೆಂದು ಕೇಳಿದ್ದೇವೆ. ಮನೆಯೂ ಒಂದು ಆಶ್ರಮವೇ. ಅದಕ್ಕೆ ಗೃಹಸ್ಥನ ಆಶ್ರಮವೆನ್ನಬಹುದು. ಒಂದು ಮನೆಯಲ್ಲಿ ಅತ್ತೆ – ಸೊಸೆ, ಹಿರಿ ಚಿಕ್ಕಪ್ಪಗಳ ಮಕ್ಕಳಾದ ಭಾಗಾದಿಗಳು,ಸವತಿ ಮಕ್ಕಳು ಇರುವುದುಂಟು. ಅವರೆಲ್ಲರೂ ಒಂದಕ್ಕೊಂದು ಸೇರದ ಜೀವಿಗಳು. ಒಂದೊಂದು ಮನೆಯಂತೂ ಹೇಳಿಮಾಡಿಸಿದ ಅರಗಿನಮನೆಯಂತಿರುತ್ತವೆ. ಯಾರು ಪಾಂಡವರೋ ಯಾರು ಕೌರವರೋ?

ಶಾಂತಿನಿಕೇತನ ಆಶ್ರಯದಲ್ಲಿ ದೇವೆಂದ್ರನಾಥ ಠಾಕೂರರು ಧ್ಯಾನಸ್ಥರಾಗಿ ಕುಳಿತಾಗ ಇಣಚಿಗಳು ಅವರ ತೊಡೆಯನ್ನೇರಿ ಹಣ್ಣು ತಿನ್ನುತ್ತಾ ಕುಳಿತುಕೊಳ್ಳುತ್ತಿದ್ದವಂತೆ “ಅದ್ವೇಷ್ಟಾ ಸರ್ವ ಭೂತಾನಾಂ ಮೈತ್ರಃ ಕರುಣ ಏವಚ” ದ್ವೇಷಬುದ್ಧಿಯನ್ನು ಇಲ್ಲದಾಗಿಸಿ, ಸ್ನೇಹ ಬುದ್ದಿಯನ್ನ ಸರ್ವತ್ರದಲ್ಲಿ ತೋರಿಸಬಲ್ಲ ಹಾಗೂ ಬೀರಬಲ್ಲ ಒಬ್ಬ ವ್ಯಕ್ತಿಯಿದ್ದರೂ ಸಾಕು. ಆ ದಿವ್ಯಶಕ್ತಿಯಪ್ರಬಾವದಿಂದ ಮನೆಯೊಳಗೆ ಸ್ವಾಭಾವಿಕವಾಗಿ ಕಾಣಿಸಿಕೊಳ್ಳಬಹುದಾದ ದ್ವೇಷ ಬುದ್ಧಿಯು ತಲೆಯೆತ್ತದೆ ಕರಗಿಹೋಗಬಹುದಾಗಿದೆ. ಮನೆತನದಲ್ಲಿ ಅಗ್ನಿದಿವ್ಯಕ್ಕೆ ಮುಂಚೂಣಿಯಲ್ಲಿ ನಿಂತವಳೆಂದರೆ ಮನೆಯೊಡತಿ. ಆಕೆಯ ಹಾರಯಿಕೆ, ಪ್ರಾರ್ಥನೆ ಇಂತಿದೆ.

ಭಾಗಾದಿ ಬಲಕಿರಲಿ ವೈರಿತಾ ಎಡಕಿರಲಿ
ಛಾಡಿ ನಿನ ಮನಿಯು ಇದರಿರಲಿ | ಬಲಭೀಮ
ದೇವ ನನಮೇಲೆ ದಯವಿರಲಿ ||

ಬಲಭೀಮ ದೇವನ ದಯೆ ಮನೆಯೊಡತಿಯ ಮೇಲಿದ್ದರೆ, ತನ್ನ ಪರಿಸರದಲ್ಲಿ ಭಾಗಾದಿಯಿರಲಿ, ವೈರಿಯಿರಲಿ, ಛಾಡಿಹೇಳುವ ಪಿಸುಣಿಗರಿರಲಿ ಅವರೆನ್ನಲ್ಲ ಒಂದೇ ತಟ್ಟಿಯಲ್ಲಿ ನೀರು ಕುಡಿಸುವ ಸಾಮರ್ಥ್ಯ ಆಕೆಯಲ್ಲಿ ಉಂಟಾಗುತ್ತದೆ. ಮನೆಯ ಜನರಲ್ಲಿರುವ ವಿವಿಧ ಸ್ವಭಾವಗಳು ಅವೆಂಥವೇ ಇರಲಿ, ಮನೆಯಲ್ಲಿ ಸಾಕಿದ ನಾಯಿಯಂತೆ, ಸಾಕದಿದ್ದರೂ ಹೆಚ್ಚಿನ ಹಿರಿಮೆದೊಟ್ಟು ಮನೆಯ ಒಳ-ಹೊರಗು ಕಾರಭಾರಮಾಡುವ ಬೆಕ್ಕು ಇರುತ್ತದೆ. ಜಂತೆಯಲ್ಲಿ ಮೂಲೆ ಮೂಲೆಗಳಲ್ಲಿ ಬಿಲ ಮಾಡಿಕೊಂಡು ಇಲಿಗಳು ವಾಸಿಸುವವು. ನಾಯಿಗಂಜುವ ಬೆಕ್ಕು, ಇಲಿಗಂಜಿಸಿ ಹಿಡಿದು ನೊಣೆದು ಹಾಕುತ್ತದೆ. ಅದೇ ಮುಸಡಿಯನ್ನು ಹಾಲುಗಡಿಗೆಯಲ್ಲಿಅದ್ದಿ ಹಂಸಕ್ಷೀರನ್ಯಾಯದಂತೆ ಹಾಲಮೇಲಿನ ಕೆನೆಯನ್ನು ಮಾತ್ರನುಂಗಿ, ಬೆಕ್ಕು ಬೆಕ್ಕು ಅನ್ನುವಷ್ಟರಲ್ಲಿ ಹಾರಿಹೋಗಿರುತ್ತದೆ. ಗುಬ್ಬಿಗಳು ಚಪ್ಪರದಲ್ಲಿ ಮನೆಮಾಡಿ, ಈ ಮನೆ ತನ್ನದೇಕಲ್ಲ ಎಂದು ಕೇಳುತ್ತವೆ. ಅಗೋ ಅಲ್ಲಿ ಚೇಳು. ಇಗೋ ಇಲ್ಲಿ ಹಲ್ಲಿ, ಹಲ್ಲಿಯನ್ನು ಕಾಣುತ್ತಲೆ ಚೇಳು ಕೊಂಡಿಯನ್ನೇ ಚೆಲ್ಲುತ್ತವೆ. ಇಲ್ಲದಿದ್ದರೆ ಒಲೆಯ ಬೂದಿಯಲ್ಲಾಗಲಿ ಅಂಗಳದ ಸೆಗಣಿಯ ಬಟ್ಟಲಲ್ಲಾಗಲಿ ತಲೆಮರೆಸಿ, ಕೈಹಾಕಬಂದವರಿಗೆ ಕುಟುಕಿ, ಅಡಿಗಿಕೊಳ್ಳುವಷ್ಟರಲ್ಲಿ ಯಾರ ಕಣ್ಣಿಗಾದರೂ ಬಿದ್ದರೆ, ಕೆರವಿನಿಂದ ಕುಕ್ಕಿಸಿಕೊಂಡು, “ಚೇಳು ಬಸಿರಾಗಿದ್ದೇ ಕಡೆ” ಅದಂತೆ, ಅಂದು ಅದು ಕುಟುಕಿದ್ದೇ ಕಡೆ ಆಗುತ್ತದೆ.

ಒಂದು ಮನೆಯಲ್ಲಿ ಇಷ್ಟೊಂದು ವೈವಿಧ್ಯದ ಪರಿಸರವನ್ನು ತೂಗಿಸಿಕೊಂಡು ನೀಗಿಸಿಕೊಂಡು ನಿರ್ವಹಿಸುವ ನಿಸರ್ಗಶಕ್ತಿ ಗೃಹಿಣಿಯಲ್ಲಿಯಿದೆಯೆಂದೇ ಮನೆತನದ ಹೂರಣ ಕಡುಬಿನಲ್ಲಿಯೇ ಅವಿತುಕೊಂಡಿರುತ್ತದೆ. ಪ್ರಸಂಗಾನುಸಾರವಾಗಿ ಅದು ಹೊರಬೀಳಲೂಬಹುದಾಗಿದೆ. ಮನೆಯ ಕೋಣೆ ಪಡಸಾಲೆಗಳಲ್ಲಿ ಮನೆಯವರಿದ್ದರೆ, ಕೊಟ್ಟಿಗೆಯಲ್ಲಿ ದನಕರುಗಳು ವಾಸಿಸುತ್ತವೆ. ಅಂಗಳದಲ್ಲಿಯೋ ತಲೆವಾಗಿಲಮುಂದೆಯೋ ನಾಯಿಬಿದ್ದಿರುತ್ತದೆ.ಈಎಲ್ಲ ಪ್ರಾಣಿಗಳು ಮನೆತನದ ಹೊಣೆಹೊತ್ತಹಾಗಿವೆ. ಮತ್ತು ಅಧಿಕೃತವಾಗಿ ಮನೆತನದವರೆನಿಸಿವೆ.

ಎತ್ತು ನಂದಿಯ ಅವತಾರವೆನ್ನುವಂತಿದೆ. ಅದು ಶಿವನವಾಹನವಾದರೆ ನಂದಿ, ವೃಷಭ ಎನಿಸುತ್ತದೆ. ಶಿವನಿಗೆ ವಾಹನವಾಗದ ಎತ್ತು ಬಿಡಾಡಿ ದನವೆನಿಸುತ್ತದೆ. ಆ ಪಾಪವನ್ನು ಪರಿಹರಿಸಿಕೊಳ್ಳುವ ಸಲುವಾಗಿಯೋ ಏನೋ ಒಕ್ಕಲಿಗನ ಸಹಕಾರಿಯಾಗಿ, ಸಹಜೀವಿಯಾಗಿ, ಸಹವಾಸಿಯಾಗಿರುತ್ತದೆ. ಬಸವೇಶ್ವರರು ನಂದಿಯ ಅವತಾರವಾಗಿ ಶಿವನನ್ನು ಹೊತ್ತುಕೊಂಡು ಭೂಮಿಗಿಳಿದು ಸಾವಿರ ಸಾವಿರವರುಷದ ಪ್ರಯೋಜನಕ್ಕೆ ಬರುವ ಕೆಲಸ ಮಾಡಿ ಹೋದದ್ದನ್ನು ಮರೆಯುವಂತಿಲ್ಲ. ಬಸವೇಶ್ವರ ಹೇಳಿಕೇಳಿ ಅವತಾರಿ. ಆದರೆ ಎತ್ತು ಶಾಪಗ್ರಸ್ತನಂದಿ. ಅವತಾರಿಗೆ ಮನುಷ್ಯರೂಪ ಪ್ರಾಪ್ತವಾದರೆ, ಶಾಪಗ್ರಸ್ತನಿಗೆ ದನದ ರೂಪ ಪ್ರಾಪ್ತವಾಗುತ್ತದೆ. ಆದರೆ ಸಂಪೂರ್ಣ ಶಾಖಾಹಾರಿ, ಕನಸಿನಲ್ಲಿಯೂ ಮಾಂಸವನ್ನು ಮುಟ್ಟಿದು ಹೀಗೆ ಎತ್ತು ಮನೆಯಾಶ್ರಮದಲ್ಲಿ ಒಂದು ಬಟುವಾಗಿ, ಬ್ರತಿಯಾಗಿ ಜೀವನ ಸಾರ್ಥಕಮಾಡಿಕೊಳ್ಳುತ್ತದೆ. ಬದುಕಿದ್ದರೆ ಎತ್ತು ಒಂದು ಪ್ರಯೋಜನಕ್ಕೆ ಬರುವಂತೆ, ಸತ್ತಮೇಲೆ ಹಲವಾರು ಪ್ರಯೋಜನಗಳಿಗೆ ಬರುವುದು. ಮಿಣಿ, ಬರಕೋಲು, ಕೆರವು ಮೊದಲಾದವುಗಳನ್ನು ಸತ್ತದನದ ತೊಗಲಿನಿಂದ ಮಾಡುತ್ತಾರೆನ್ನುವುದು ಯಾರಿಗೆ ಗೊತ್ತಿಲ್ಲ? ಹೀಗೆ ಎತ್ತು ಅಥವಾ ಆಕಳು ಒಕ್ಕಲಿಗನ ರಿಣವನ್ನು ಇಡಿಯಾಗಿ ತೀರಿಸುತ್ತಿರುವುದು ಆಶ್ಚರ್ಯವಲ್ಲವೇ?

ಪ್ರಾಣಿಯಾದ ಎತ್ತು ಕೊಟ್ಟಿಗೆಯಲ್ಲಿ ವಾಸಮಾಡಿ ವಾನಪ್ರಸ್ಥಾಶ್ರಮಿಯಂತೆ ಶುದ್ಧ ಶಾಕಾಹಾರದಿಂದ ಬದುಕುವ, ಕಾಯಕದಲ್ಲಿ ತ್ರಿಕರಣಪೂರ್ವಕವಾಗಿ ನಿರತವಾಗುವ ಆ ಎತ್ತು, ಮನೆಯಾಶ್ರಮಕ್ಕೆ ಒಪ್ಪುವ ಒಂದು ಮಹತ್ ಪ್ರಾಣಿ. ಅದಕ್ಕೆ ಜನ್ಮ ಕೊಟ್ಟ ಗೋಮಾತೆಯಂತೂ ಗ್ರಹಸ್ಥನಿಗೆ ಮಹತ್‌ಭಾಗ್ಯ; ಪ್ರತ್ಯಕ್ಷ ದೇವತೆ. ಅದರಂತೆ ಎತ್ತು ಅಂದರೆ ಶಾಪಗ್ರಸ್ತ ಬಸವನೆಂದೇ ಒಕ್ಕಲಿಗರು ತಿಳಕೊಂಡಂತೆ ತೋರುತ್ತದೆ. ಆ ವಿಷಯವನ್ನು ಅವನು ಹಂತಿಯ ಹಾಡುಗಳಲ್ಲಿ ಬಹಳಸಾರೆ ತೋರ್ಪಡಿಸಿದ್ದಾನೆ. ಗರತಿ ಸಹ ಬೀಸುಕುಟ್ಟುವಾಗ ಹಾಡುವ ಪದಗಳಲ್ಲಿ ಬಸವನ ಹೆಸರು ಸೇರಿಸಿದ್ದು ಕಂಡುಬರುತ್ತದೆ.

ಸತ್ಯವಂತರೆಂದು ಶರಣು ಮಾಡಲಿಹೋದ
ಮುತ್ತ್ಯಾಕ ಮಾರಿ ತಿರಿವ್ಯಾರ | ಬಸವಣ್ಣ
ಮುತ್ತು ತಂದೀದ ಮಗಡಾಕ ||

ಕಸವು ಹೊಡೆದ ಕೈಯು ಕಸ್ತೂರಿನಾತಾವ
ಬಸವಣ್ಣ ನಿನ್ನ ಸೆಗಣೀಯ | ಬಳೆದಕ್ಕೆ
ಎಸಳ ಯಾಲಕ್ಕಿ ಗೊನಿನಾತ ||

ತುಂಬಿದ ಹೊಳಿಯಾಗ ಕೊಂಬು ಕಾಣಿಸತಾವ
ಇಂಬುಳ್ಳ ಇಣಿಯ ಬಸವಣ್ಣ | ಬರುವಾಗ |
ಗಂಗೆಮ್ಮ ಕೈಯ ಮುಗಿದಾಳ ||

ಹಾದಿಯ ಹೊಲನೋಡೊ ಗೋದಿಯ ಬೆಳೆನೋಡೊ
ಹಾದು ಹೋಗವನ ನಗಿನೋಡೋ | ನಂ ಬಸವ |
ಆರಾಮ ನೋಡೊ ಅಡಿವ್ಯಾಗ ||

ಕಲ್ಲ ಕಲ್ಲ ಹಸಿರು ಹಳದಿಯಕಲ್ಲು
ಹೆಸರಾದ ಕಲ್ಲ ಕೊಡೆಕಲ್ಲ | ಬಸವಗ
ಹೆಸರುಗಲ್ಲೀಪ ಹೊಲಿಸೇನ ||

ಹೆಣ್ಣುಮಕ್ಕಳು ಅರಲಿನಿಂದ ಎತ್ತು ಮಾಡಿ, ಬಸವನೆಂದು ಪೂಜಿಸುವ ಪರಿಪಾಠ ಎಲ್ಲ ಕಡೆಗುಂಟು. ಆಗ ಹೇಳುವ ಪದದ ಸೊಗಸು ಕೇಳಿದರೇ ಗೊತ್ತಾಗುವುದು, “ಬಸವಗ ಬಸವೆನ್ನಿರೆ ಶರಣೆನ್ನಿರೇ” ಎಂದು ಆರಂಭವಾಗುವ ಹಾಡು –

ಒಂದು ಸುತ್ತಿನ ಕ್ವಾಟಿ | ಅದರಾಗ | ಬಂದುಕೂತಾನ ಬಸವ
ಎರಡು ಸುತ್ತಿನ ಕ್ವಾಟಿ | ಅದರಾಗ | ಎದ್ದು ಕೂತಾನ ಬಸವ
ಮೂರು ಸುತ್ತಿನ ಕ್ವಾಟಿ | ಅದರಾಗ | ಮೂಡಿಕೂತಾನ ಬಸವ

ಹೀಗೆ ನಾಕು ಸುತ್ತಿನ ಕೋಟೆಯಲ್ಲಿ ನಾಟಿ, ಐಯ್ದು ಸುತ್ತಿನ ಕೋಟೆಯಲ್ಲಿ ಹೊಯ್ದು, ಆರುಸುತ್ತಿನ ಕೋಟೆಯಲ್ಲಿ ಹಾರಿ, ಏಳುಸುತ್ತಿನ ಕೋಟೆಯಲ್ಲಿ ಹೇಳಿ…. ಹೀಗೆ ಹತ್ತುಸುತ್ತಿನ ಕೋಟೆಯವರೆಗೆ ಸಾಗುತ್ತದೆ.

ಸನ್ನಾ ಸಿಗೊಂದು ಆಶ್ರಮವಿರುವಂತೆ, ಗೃಹಸ್ಥನಿಗೂ ಒಂದು ಆಶ್ರಮುರುತ್ತೆದನ್ನುವುದು ಸ್ಪಷ್ಟವಾಯಿತು.ಸನ್ನಾ ಸಿಯು ಲೋಕದ ಅಂತರಂಗದ ಕಿಲ್ಪಿಷವನ್ನು ಕಳೆಯುವ ಎತ್ತಗಡೆ ನಡೆಸಿದರೆ, ಲೋಕದ ಬಹಿರಂಗವು ಬಾಳಿಬದುಕುವುದಕ್ಕೆ ತಕ್ಕುದಾಗುವಂತೆ ಗೃಹಸ್ಥನು ಕೆಚ್ಚನ್ನು ಒದಗಿಸುತ್ತಾನೆ. ಸನ್ನ್ಯಾಸಿ ಅರಣ್ಯವಾಸಿ, ಗೃಹಸ್ಥ ಗ್ರಾಮವಾಸಿ. ಗೃಹಸ್ಥರಲ್ಲಿ ಒಕ್ಕಲಿಗನು ಪ್ರಮುಖ ಪಾತ್ರವಹಿಸುತ್ತಾನೆ. ಅವನಿಗೆ ಎತ್ತು ಆಕಳುಗಳೇ ಸಹಕಾರಿ.