ದುಡಿಮೆ ಕಡಿಮೆ, ಒಲುಮೆ ಹೆಚ್ಚು – ಇದು ಕನ್ಯೆಯ ಅಪೇಕ್ಷೆ. ಅದು ಮುಗಿಲ ಮಲ್ಲಿಗೆಯಂಥ ಮಗಳ ಸುಖಕ್ಕೆ ತಾರಕವೂ ಅಹುದೆಂದ ತಾಯಿತಂದೆಗಳು ನಂಬುವುದೂ ಉಂಟು. ಮೊಟ್ಟ ಮೊದಲು ನೋಡುತ್ತಾರೆ.

ಸಾವಿರಕೊಟ್ಟರು ಸವತಿಯ ಮನಿಬ್ಯಾಡ
ಸಾವಿರದ ಮೇಲೆ ಐನೂರು | ಕೊಟ್ಟರು |
ಮಲಮಕ್ಕಳಿರುವ ಮನಿಬ್ಯಾಡ ||

ಈ ಮಾತು ವರದಕ್ಷಿಣೆಯ ಪಿಡುಗು ಹಬ್ಬದ ಕಾಲದ್ದಲ್ಲವೆನ್ನುವುದು ಸ್ಪಷ್ಟ. ಸುಮಾರು ಅರ್ಧಶತಮಾನದ ಹಿಂದೆ ಕನ್ಯಾಶುಲ್ಕ ಬಳಕೆಯಲ್ಲಿತ್ತು. ಸಾವಿರದಿಂದ ಹದಿನೈದುನೂರರವರೆಗೆ ಆ ಶುಲ್ಕದ ಬೆಲೆಯಿತ್ತೆಂದು ಈ ಪದ್ಯ ಹೇಳುತ್ತದೆ. ಸವತಿಯ ಮೇಲೆ ಕೊಡುವ ಹೆಣ್ಣಿಗೆ ಸಾವಿರವರೆಗಿನ ಶುಲ್ಕವಿತ್ತೆಂದೂ, ಮಲಮಕ್ಕಳಿದ್ದ ಮನೆಗೆ ಕೊಡುವ ಹೆಣ್ಣಿಗೆ ಅದಕ್ಕಂತ ಐನೂರು ರೂಪಾಯಿ ಹೆಚ್ಚಿಗೆ ಶುಲ್ಕವಿತ್ತೆಂದೂ ತರ್ಕಿಸಬಹುದಾಗಿದೆ. ಸವತಿಯ ಮನೆಯವರು ಸಾವಿರವೇಕೆ; ಮಲಮಕ್ಕಳ ಮನೆಯವರು ಸಾವಿರದ ಮೇ ಐನೂರೇಕೆ? ಇದು ತಿಲಿಯಲಾದರದ ಪ್ರಶ್ನೆಯೇನಲ್ಲ. ಸಹಜವೇ ಇದೆ. ಅಲ್ಲಿ ಸವತಿ ಒಬ್ಬಾಕೆಯೇ ಇದಿರಾಳು, ಇಲ್ಲಿ ಮಲಮಕ್ಕಳ ದಂಡೇ ಇದಿರಾಳು, ಪುಣ್ಯಕ್ಕೆ ಅವೆರಡೂ ಮನೆಗಳಲ್ಲಿ ಅತ್ತೆಯಿದ್ದಾಳೆನ್ನುವ ಸುಳುಹಿಲ್ಲ. ಇಷ್ಟೆಲ್ಲ ಬೆಲೆಯೇರಿಕೆ ಮದುವೆಯ ಕನ್ಯೆಯನ್ನು ಕುರಿತದ್ದೇ ಇರಬಹುದು. ಉಡಿಕೆಯ ಹೆಣ್ಣಾಗಿದ್ದರೆ ಇಷ್ಟೊಂದು ಬೆಲೆಯೇರಿಕೆ ಇರುತ್ತಿತ್ತೋ ಇಲ್ಲವೋ.

ರೊಕ್ಕದಾಸೆಗಾಗಿಯೋ ಆಪ್ತತ್ವದ ಗಸಣೆಗಾಗಿಯೋ ಸವತಿಯ ಮನೆಗೆ ಹೆಣ್ಣು ಕೊಟ್ಟಿರಬಹುದು.ಅದರಂತೆ ಮಲಮಕ್ಕಳಿರುವ ಮನೆಗೂ ಇನ್ನೊಬ್ಬರು ಕೊಟ್ಟಿರಬಹುದು.ಆದರೆ ಇಷ್ಟೊಂದು ಲೋಕವಾಣಿಯಾಗಿ ಉಳಿಯುವಂಥ ಅನುಭವವು ಒಬ್ಬಿಬ್ಬರಿಗೆ ಬಂದರಾಗುವುದೇ ಹೀಗೆ ಮಾದ ಶುಭ ವ್ಯವಹಾರಗಳೆಲ್ಲ ದುಷ್ಪರಿಣಾಮಗಳನ್ನೂ ಬೀರಿರಬಹುದಾಗಿದೆ.

ಕೆಂಪು ಹೆಂಡತಿ ಬೇಕೆಂದು ಕರಕರಿ ಮಾಡುವ ಗಂಡುಗಳೇ ಹೆಚ್ಚು. ಅಂಥ ಸತ್ಪ್ರಸಂಗವೊದಗಿದರೂ, ಕಾಗೀಗಿ ಕಣ್ಣಿಟ್ಟ ಕರಿಯಹುಬ್ಬಿನ ಜಾಣರಿರುವುದೂ ಉಂಟು. ಇದು ಕರಿಹುಬ್ಬುಳ್ಳ ಜಾಣನ ವಿವೇಕಹೀನ ಕೃತಿಯಾದ ಮಾತ್ರಕ್ಕೆ ಕೆಂಬಣ್ಣದ ಹೆಂಡಿರೆಲ್ಲರೂ ಒಳ್ಳೆಯವರೇ ಆಗಿರುವರೆಂದು ಹೇಳಲಿಕ್ಕಾಗದು. ಯಾಕೆಂದರೆ

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತೀಯ ಹಣ್ಣು ಅತಿಕೆಂಪು | ಇದ್ದರು
ಒಡೆದು ನೋಡಿದರೆ ಹುಳಭಾಳ ||

ಅತ್ತಿಯ ಹಣ್ಣನ್ನು ಒಡೆದು ನೋಡುವ ಹವ್ಯಾಸ ಮಾಡಿದ್ದೇ ತಪ್ಪು ಹುಳಕಾಣಿಸಬಾರದಾಗಿದ್ದರೆ, ಹಣ್ಣನ್ನು ಒಡೆಯದೆ ಕಣ್ಣುಮುಚ್ಚಿ ನುಂಗುವುದೇ ಸರಳೋಪಾಯ. ಹಣ್ಣು ಕಪ್ಪೇ ಇರಲಿ, ಕೆಂಪೇ ಇರಲಿ, ಅದು ಹೆಸರು ಬೇಳೆಯಿದ್ದಂತೆ ಆ ಹೆಣ್ಣನ್ನು ಮುದುಕನಿಗೆ ಮಾತ್ರ ಕೊಡಬಾರದೆಂದು ಗರತಿ ಗಟ್ಟಿಸಿ ಹೇಳುತ್ತಾಳೆ.

ಹೆಸರಬ್ಯಾಳಿ ಒಯ್ದು ಕೆಸರ ಕಲೆಸಿದಂಗ
ಹಸುಮಗಳನೊಯ್ದು ಮುದುಕಗ | ಕೊಟ್ಟರ
ದುಸ್ಮಾನದವರು ತವರವರು ||

ಇಂಥ ಕೆಲಸ ಮಾಡುವವರು ತವರವರಂತೂ ಅಲ್ಲ. ವೈರಿಗಳು ಮಾತ್ರ ಮಾಡಬಹುದಾಗಿದೆ. ಸವತಿಯುಳ್ಳ ಮನೆಗೆ ಹೆಣ್ಣು ಕೊಡಬಾರದು ಮಲಮಕ್ಕಳಿದ್ದ ಮನೆಗೂ ಕೊಡಬಾರದು. ಕೆಂಪು ಹೆಂಡತಿ ಒಳ್ಳೆಯಳೆಂದು ಹೇಳುವುದು ಹೇಗೆ? ಕೊಡುಗೂಸನ್ನು ಮುದಿಮಗನಿಗೆ ಕೊಡುವುದೆಂದರೆ, ಹೆಸರುಬೇಳೆಯನ್ನು ಕೆಸರಲ್ಲಿ ಕಲೆಸಿದಂತೆ. ಕೆಂಪು ಬಣ್ಣದವಳು ಚೆಲುವೆಯೋ? ಚೆಲುವಿಕೆ ಕೆಂಪು ಕಪ್ಪು ಬಣ್ಣದಲ್ಲಿರುವುದಿಲ್ಲ. ತ್ವಚವು ಕೆಂಪಗಿರಲಿ, ಕಪ್ಪಗಿರಲಿ ಒಳಗಿನ ಪರಿಶುದ್ಧ ರಕ್ತದ ತೇಜವೇ ಚೆಲುವಿಕೆಯನ್ನು ತರುವುದೆಂದು ಹೇಳಲಡ್ಡಿಯಿಲ್ಲ. ಜಾನಪದರು ಶಿವನ ಹೆಂಡತಿ ಪಾರ್ವತಿಯನ್ನು ವರ್ಣಿಸಿದಂತೆ, ನೆಟ್ಟನ ಮೂಗಿನಾಕಿ | ಬಟ್ಟಲಗಣ್ಣಿನಾಕಿ | ಚೆಲುವೆಯೋ? ಚೆಲ್ವಿಕೆಯನ್ನು ನಿರ್ಣಯಿಸುವ ಅಭಿರುಚಿಯು ಪ್ರತಿಯೊಬ್ಬರಲ್ಲಿ ಬೇರೆ ಬೇರೆ ಆಗಿರುತ್ತದೆ. ಮೊಂಡ ಮೂಗು, ಹಾಯ್ದಹಲ್ಲು ಒಬ್ಬರಿಗೆ ಚೆಲುವಾಗಿ ಕಾಣಿಸಬಹುದು. ಇನ್ನೊಬ್ಬರಿಗೆ ಆನೆಕಣ್ಣು, ರಂಜಣಿಗೆಯಂಚಿನ ತುಟಿಗಲು ಸೌಂದರ್ಯವನ್ನು ತಂದೊಡ್ಡಬಹುದು.ಏನೇ ಆಗಲಿ, ಚೆಲುವೆಯಂದು ನಿರ್ಣಯಿಸಿದರೆ ತೀರಲಿಲ್ಲ. ಒಳಗಿನ ಗುಣವನ್ನೂ ಪರಿಶೀಲಿಸಬೇಕಾಗುತ್ತದೆ.

ಚೆಲುವಿನ ಚೆಲುವಿಯಂತೆ ಅತಿಬಾಯಿ ಬಿಡಬೇಡ
ಚಿಲುವಿದ್ದರೇನು ಗುಣವಿಲ್ಲ | ಕೊಳೆನೀರ
ತಿಳಿಯಿದ್ದರೇನು ರುಚಿಯಿಲ್ಲ ||

ಅಂತೆಯೇ ಹೇಳುತ್ತಾರ. ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು. ಹೆಣ್ಣುಕೊಡುವುದು ಒಂದು ದಿಗಿಲಾದರೆ, ಹೆಣ್ಣು ತೆಗೆದುಕೊಳ್ಳುವುದು ಇನ್ನೊಂದು ದಿಗಿಲು. ತೋರಿಸುವ ಹೆಣ್ಣು ಒಂದು, ಮದುಮಗಳಾಗುವುದು ಇನ್ನೊಂದು ಹೆಣ್ಣು. ಹರೆಯದವನನ್ನು ತೋರಿಸಿ, ಮುದುಕನಿಗೆ ಗಂಟುಹಾಕುವ ಯುಕ್ತಿಯನ್ನೂ ಕೆಲವರು ಮಾಡುವುದುಂಟು. ಅದೂ ಪುಣ್ಯದ ಕೆಲಸವೆಂದೇ ಭಾವಿಸಿರಬಹುದು. “ಮುದುಕ ಗಂಡನ ಮದುವ್ಯಾಗಿ ಆ ಬಾಲಿ ಇದ್ದ ಬಂಗಾರ ಇಡವೊಳ್ಳ” ವಸ್ತುವೊಡವೆ ಧರಿಸುವುದನ್ನು ಬಿಟ್ಟಾಗಲಾದರೂ ಮುದುಕ ಗಂಡನಿಗೆ ಒಪ್ಪುವ ಮಡದಿಯಂತೆ ಕಾಣಿಸಬಹುದೆಂದು ಆಕೆ ಲೆಕ್ಕಿಸುತ್ತಾಳೇನೋ.

ಕತ್ತೆಮಾನವರೂ ಕೆಲವರಿರುತ್ತಾರೆಂದು ತೋರುತ್ತದದೆ. ಕೊಟ್ಟಿಗೆಯಲ್ಲಿ ತಂದು ಕಟ್ಟಿನಿಲ್ಲಿಸಿ ದವಣಿಯಲ್ಲಿ ಹುಲ್ಲುಕಣಿಕೆ ಹಾಕಿದರೆ, ಕತ್ತೆ ತಿಂದು ಸಂತಸಪಡದು. “ಕತ್ತೆಗೆ ಹೂರಣ ಮೇಸಿದಂತೆ” ಎಂಬ ಗಾದೆಯಿದೆ. ಕತ್ತೆ ಜಾತಿಯ ಹೆಣ್ಣಿಗೆ ಹೂರಣದೂಟ ಆಗಿಬರದು. ಆಕೆಗೆ ಕಾಮನಂಥ ಚೆಲುವಾದಗಂಡ ದೊರೆತರೂ ಮಾವಿನ ಹಣ್ಣಿಗಿಂತ ಬೆಳವಲಕಾಯಿಯೇ ಬಾಯಿಗೆ ರುಚಿಯೆನ್ನುವವರಂತೆ, ಬೇರೊಬ್ಬ ಅಷ್ಟದರಿದ್ರನನ್ನು ಹುಡುಕುತ್ತ ಹೋಗುವುದೂ ಉಂಟು. ಸಿರಿಗೇಡಿಗೆ ಸೀರೆಯುಡಿಸಿದರೆ ಹೊಲಗೇರಿಗೆ ಹೇಳಲಿಕ್ಕೆ ಹೋಯಿತಂತೆ.

ಬೇಲಿಮ್ಯಾಲಿನ ಹೂವ ಬೆಳ್ಳಗಿದ್ದರ ಛಾಯ
ಮಲ್ಲಿಗಿ ಹೂವಿನಂಥ ಮದವಿಗಂಡ | ಬಿಟ್ಟು
ಹುಲ್ಲಕೊಯ್ಯವನ ಹುಡುಕ್ಯಾಳ ||

ಮಲ್ಲಿಗೆ ಹೂವಿನಂಥ ಗಂಡ; ಕಂಪು ಬೀರುವ ವಸ್ತು. ಹೂಗಾರ ಮನಿಯಲ್ಲಿ ವಸತಿಮಾಡಿದ ನೆರೆಹಳ್ಳಿಯ ಮೀನುಗಾರ್ತಿಗೆ, ಮಲ್ಲಿಗೆ-ಗುಲಾಬಿ ಹೂಗಳ ಕಂಪೊಸರುವಲ್ಲಿ ನಿದ್ರೆಯೆ ಹತ್ತಲಿಲ್ಲವಂತೆ. ಕೊನೆಗೆ ಮೀನುಗಳನ್ನು ಕಟ್ಟಿತಂದಿದ್ದ ಅರಿವೆಯನ್ನು ಮುಖದಮೇಲೆ ಹಾಕಿಕೊಂಡು ಮಲಗಿದಾಗ ಗಡದು ನಿದ್ದೆ ಹತ್ತಿತಂತೆ. ಇನಿಗಂಪನ್ನೆಲ್ಲ ನುಂಗಿ, ಮೀನವಾಸನೆಯನ್ನೇ ಮೂಗಿಗೆ ಕಳಿಸುವ ಅರಿವೆಯಿಂದ ಮುಸುಕುಹಾಕಿಕೊಂಡು ಕೂಡಲೇ ಆಕೆಗೆ ನಿದ್ರೆ ಹತ್ತಿತಲ್ಲವೇ? ಮಲ್ಲಿಗೆ ಹೂವಿನಂಥ ಮದುಗಂಡನನ್ನು ಒಲ್ಲಗಳೆದು ಹುಲ್ಲುಕೊಯ್ಯುವ ಕೊರವನನ್ನು ಹುಡುಕುವವಳ ಅಭಿರುಚಿಯನ್ನು ಯಾರು ಬಲ್ಲವರು?

“ಹಾಲಾಬೋನವುಂಡು ಹಾಸಹೊಯ್ಯೇ ಮಗಳೇ ಅಂದರೆ ಊರ ಮಿಂಡರೊಡನೆ ನೀರು ಹೊರ್ತೆನೆ ಅಂದಳಂತೆ; ಇಂಥ” “ಅಸಲಜಾತ” ಹೆಣ್ಣುಗಳಲ್ಲದೆ ಇನ್ನೂ ಹಲವಾರು ಜಾತಿಯ ಹೆಣ್ಣುಗಳು ನೋಡಸಿಗುತ್ತವೆ, ಗಂಡನಲ್ಲಿ ವಿವಿಧ ಸ್ವಭಾವಗಳಜಾತಿಯಿರುವಂತೆ.

ತಿಂದೋಡಿ ನಿನಗಂಡ ತಿಂದೇನು ಮಾಡಂದ
ತಿಂದೇಳು ಮನೆಯ ತಿರುಗೆಂದ | ಉಟ್ಟಶಾಲಿ
ಉಂಗುಟಕ ಹಾಕಿ ಹರಿಯಂದ ||

ಈ ತಿಂದೋಡಿಯದೂ ಒಲ್ಲದ ಒಗೆತನವೇ. ಅದಕ್ಕೆಂದೇ ಆಕೆಯ ಗಂಡನು ಕೊಂಕುನುಡಿಯಲ್ಲಿ ಹೇಳುತ್ತಾನೆ. “ಉಟ್ಟಶಾಲಿ ಉಂಗುಟಕ್ಕೆ ಹಾಕಿ ಹರಿ. ಮತ್ತು ತಿಂದು ತಿಂದು ಏಳು ಮನೆಯ ತಿರುಗು” ಈ ಎಡಹುರಿ ಬಲಹುರಿ ಎಳೆಗಳನ್ನು ಒಂದಾಗಿ ಹೊಸೆಯಲು ಯಾರಿಗೂ ಸಾಧ್ಯವಿಲ್ಲ. ಕೂಡದ ಬಳಿಕ ಒಲ್ಲದ ಒಗೆತನ ಕಂಡುಬರುವುದೇ ಹೆಚ್ಚು. “’ಚೇಳು ಕಡಿಸಿಕೊಂಡು ಔಷಧಿಯ ಕಾತ್ರಿಮಾಡಿಕೊಳ್ಳಿರಿ’ ಎನ್ನುತ್ತ ಚೇಳಿನ ಔಷಧಿ ಮಾರುವವನು, ಔಷಧಿಯೊಂದಿಗೆ ಚೇಳನ್ನು ತಂದಿರುತ್ತಾನೆ. ಬೆಳೆಯಸಿರಿಯನ್ನು ಮೊಳಕೆಯಲ್ಲಿಯೇ ತೋರ್ಪಡಿಸುವ ಹೆಣ್ಣುಗಳೂ ಇರುತ್ತವೆ. ಗಂಡುಗಳೂ ಇರುತ್ತವೆ. “ಮೊಟ್ಟೆ ಹೊಡೆಯುವವನ ಆಳಾಗಬಾರದು; ಅಟ್ಟುಂಡವನ ಹೆಂಡತಿಯಾಗಬಾರದು” ಎನ್ನುವಲ್ಲಿ ಹೆಣ್ಣಿನ ಕಸಿಯೊಂದೇ ಕಂಡುಬರದೆ, ಗಂಡಿನ ಚೌಕಸಿಯೂ ಗೋಚರಿಸುತ್ತದೆ.

ಗಂಧ ಹಚ್ಚಕ ಬಲ್ಲಿಗಮಕಮಾಡಾಕ ಬಲ್ಲಿ
ಗಂಡನ್ನ್ಯಾಕೊಲ್ಲಿ ಗಯ್ಯಾಳಿ | ನಿನಕೆಲಸ |
ತಾಸ್ಹೊತ್ತಿನಾಗ ತೀರ್ಯಾವ ||

“ಸುಖದ ಜೀವಕ್ಕೆ ಎಮ್ಮೆಯ ಹಯನು” ಎನ್ನುವಂತೆ, ಒಂಟಿಯಾಗಿ ಆದಷ್ಟು ಮಾಡಿ, ಹೋದಷ್ಟು ತಿಂದು ಸುಖದಿಂದಿರುವುದನ್ನು ಬಿಟ್ಟು, ಗಂಡ ಗಂಡನ ಬಳಗ, ನಾಳೆಹುಟ್ಟುವ ಮಕ್ಕಳಹಿಂಡು ಇವರೆಲ್ಲರ ತರಡು ತೊಳೆಯುವ ತೊತ್ತುಗೆಲಸ ಯಾರು ಮಾಡಿಯಾರು? ಯಾಕೆ ಮಾಡಬೇಕು? ಇದ್ದ ಒಂದು ಜೀವ ಒಯ್ದು ಗಟಾರದಲ್ಲಿ ಯಾಕೆ ಚೆಲ್ಲಿಕೊಡಬೇಕು. ಎನ್ನುವ ಕನ್ಯೆಯೋ ಕೊಡಗೂಸೋ ಅಕ್ಕನ ಜಾತಿಗೆ ಸೇರಿದ ವಿರಾಗಿಣಿಯೇನಲ್ಲ.

ಹಿಂದಿನಿಂದ ನಡೆದುಬಂದ ಅನುಭವ ಪರಂಪರೆಯು ನಮ್ಮವರಿಗೆ ಅವೆಷ್ಟೋ ಬುದ್ಧಿವಂತಿಕೆಗಳನ್ನು ನೀಡಿದ್ದುಂಟು. ಭವಿಷ್ಯದಲ್ಲಿ ಒಲ್ಲದ ಒಗೆತನವಾಗಿ ಮುರಕಳಿಗೆ ಬಂದಾಗ ತಿಣಕುವುದಕ್ಕಿಂತ, ಹೊಳೆಯು ದೂರವಿರುವಾಗಲೇ ಕಾಲ್ಮರೆಗಳನ್ನು ಕೈಯಲ್ಲಿ ಹಿಡದುಕೊಳ್ಳುವುದು ಜಾಣತನವೆಂದು ಬಗೆದಿದ್ದಾರೆ. ಆ ಅನುಭವವನ್ನು ಅಲಕ್ಷಿಸಲಾಗದು; ಅಲಕ್ಷಿಸಬಾರದು ಅಲಕ್ಷಿಸಿದರೆ ಇರಳುಕಂಡ ಬಾವಿಗೆ ಹಗಲು ಬಿದ್ದರು ಎನ್ನುವಂತಾಗುತ್ತದೆ.

ವಾಲಿಕಾರ ನಿನಗ ಒಳ್ಳೆಹೆಂಡತಿ ಯಾಕೊ
ನೀ ಹೋದಿ ದೇಶ ತಿರುಗುತ | ನಿನನಾಗಿ
ಬಾಡ್ಯಾಳೊ ಬಾಳಿಸುಳಿಯಾಗಿ ||

ಪಾಲಿಕಾರನಿಗೆ ಹೆಂಡತಿಯೇನೋ ಬೇಕು; ಇದರಲ್ಲಿ ಸಂಶಯವಿಲ್ಲ. ಆದರೆ ಒಳ್ಳೆಯ ಹೆಂಡತಿಯಾಗಿದ್ದರೂ ಬಾಳಿ ಸುಳಿಯಾಗಿ ಬಾಡುವಹೆಣ್ಣು ವಾಲಿಕಾರನ ಜೀವನಕ್ಕೆ ಹೊಂದಿಕೆ ಆಗಲಾರದು. ವಾಲಿಕಾರನು ದೇಶವನ್ನೆಲ್ಲ ಸುತ್ತಿ ಮನೆಗೆ ಬರುವಹೊತ್ತಿಗೆ ಹೆಣ್ಣೆಂಬ ಜೀನಸು ಅವನ ಕಣ್ಣಿಗೆ ಬಿದ್ದರೆ ಸಾಕು. ಒಲ್ಲದ ಒಗೆತನವು ಸಲ್ಲದ ಒಗೆತನವಾಗಿ, ಗಂಡನಿದ್ದು ಹೆಣ್ಣುರಂಡಿ ಆಗುವದಾಗಲಿ, ರಂಡಿತನ ಭೋಗಿಸುವುದಾಗಲಿ ಈಪ್ಸಿತವಾಗದು.

ಕುಂಬಾರ ನಿನಗ್ಯಾಕೋ ಗೊಂಬೆಮಾಟದ ಹೆಣ್ಣು
ತುಂಬೆದ ಮಣ್ಣ ತುಳಿಯೆಂದ | ಮನೆಮನೆಗೆ |
ಹೊತ್ತು ಮಾರೆಂದ ಹೊಸಮಡಕೆ ||

ಮಣ್ಣನ್ನು ಬುಟ್ಟಿಯಲ್ಲಿ ತುಂಬು. ಮಣ್ಣಿನಲ್ಲಿ ನೀರುಹಾಕಿ ತುಳಿ. ಮಾಡಿಟ್ಟ ಮಡಿಕೆಗಳನ್ನು ಹೊತ್ತು ಮನೆ ಮನೆಗೆ ಹೋಗಿ ಮಾರಾಟ ಮಾಡು ಎನ್ನುವಂಥ ನೂರಾರು ಕೆಲಸಗಳನ್ನು ನಿರ್ವಹಿಸಬಲ್ಲವಳೇ ಗೊಂಬೆ ಮಾಟದ ಹೆಣ್ಣು. ಆಕೆಯ ಮುಖನೋಡಿದ ಕೂಡಲೇ ಝಳ ಝಳ ಗೊತ್ತಾಗುತ್ತದೆ. ಇದು ಕುಂಬಾರನಿಗೆ ದಕ್ಕುವಂಥ ಕನ್ಯೆ ಅಲ್ಲ ಎಂದು. ಆ ಗೊಂಬೆಮಾಟದ ಹೆಣ್ಣು ಕುಂಬಾರರ ಮನೆಯಲ್ಲಿ ಹೇಗೆ ಹುಟ್ಟಿತೋ? ಅವರಲ್ಲಿ ಮಡಕೆ ಮಾಡುವ ಉದ್ಯೋಗ ಇರಲಿಲ್ಲವೇ? ಇನ್ನು ಆ ಗೊಂಬೆಮಾಟದ ಹೆಣ್ಣನ್ನು ಕುಂಬಾರಕಿ ಮಾಡಲಾರದ ಕುಂಬಾರನಿಗೆ ಕೊಟ್ಟಿದ್ದರೆ ಒಗೆತನ ಒಲ್ಲದ್ದಾಗುತ್ತಿರಲಿಲ್ಲ. ಅಡ್ಡಹೆಸರಿನ ಕುಂಬಾರ ಸಿಕ್ಕರೆ ಮಾತ್ರ ಆಕೊಡಗೂಸಿನ ದೈವ ತೆರೆಯಿತೆಂದು ತಿಳಿಯಬೇಕು. ದೈವವೆನ್ನುವುದೂ ಮುಚ್ಚಿದ ಮುಷ್ಟಿಯಿದ್ದಂತೆ. ಮುಷ್ಟಿ ತೆರೆದಾಗ ಗೊತ್ತಾಗುವುದು ಅರ್ಥ ರೇಖೆಯೊಡನೆ ಆಯುಷ್ಯ ರೇಖೆಯೂ ಇದೆಯೋ ಇಲ್ಲವೋ ಎನ್ನುವುದು.