ಆಡುಮುಟ್ಟದ ಗಿಡವಿಲ್ಲದಿರುವಂತೆ, ಗಾದೆ ಹೇಳದ ವಿಷಯವಸ್ತುವೇ ಇಲ್ಲ. ವೇದಗಳಂತೆ ದೀರ್ಘಕಾಲದ್ದಾದಂತೆ, ಗಾದೆ ದೀರ್ಘಕಾಲ ಬಾಳುವಂಥದೂ ಆಗಿದೆ. ಪಂಪ-ರನ್ನರ ಮಹಾಕಾವ್ಯಗಳು ಆದಿಕಾವ್ಯ – ಅದ್ವಿತೀಯ ಕಾವ್ಯವಾಗಿದ್ದರೂ, ಸಾಮಾನ್ಯರ ಬಾಯಲ್ಲಿ ಅವುಗಳಿಗೂ ಮುಂಚೆ ಹುಟ್ಟಿಕೊಂಡ ಗಾದೆಗಳನ್ ಎರವಲಾಗಿ ಬಳಸಿಕೊಂಡಿದ್ದು ಅವುಗಳಲ್ಲಿರುವ ಜೀವ ಸತ್ವದ ವೈಶಿಷ್ಟ್ಯ ಕಾರಣನಬಹುದಾಗಿದೆ.

ಗಾದೆಯೆನ್ನುವುದು ಜಾಣ್ಣುಡಿ, ನಾಣ್ಣುಡಿ ಆಗಿರುವಂತೆ, ಜಾಣ ನುಡಿಯೂ, ನಾಡ ನುಡಿಯೂ ಆಗಿದೆ. ಆಯುರ್ವೇದ ಔಷಧೀಯು ಹಳೆಯದಾದಂತೆ ಅದರ ಗುಣಟ್ಟವೂ ಬಲವತ್ತಾಗುವಂತೆ, ಗಾದೆ ಹಳೆಯದಾದಂತೆ ಅದರ ಗುಣಮಟ್ಟವೂ ಹೆಚ್ಚಾಗುತ್ತದೆ.

ಒಗಟು ಕವಿತೆಯ ಬೀಜವಾಗಿದ್ದರೆ ಗಾದೆ ಕಥೆಯ ಅಗಿಯಾಗಿದೆ. ಒಂದೊಂದು ಒಗಟಿನಿಂದ ಒಂದೊಂದು ಕವಿತೆ ರಚಿಸಬಹುದಾದಂತೆ, ಒಂದೊಂದು ಗಾದೆಯಿಂದ ಒಂದೊಂದು ಕಥೆಯನ್ನು ಹೆಣೆಯಬುದಾಗಿದೆ. ಮಕ್ಕಳಿಗೆ ಸಕ್ಕರೆ ಅಕ್ಕರೆಯ ತಿನಿಸಾಗಿದ್ದರೆ ರೋಗಿಗೆ ಔಷಧಿ ನೆಕ್ಕಿಸುವ ಮದ್ದಾಗಿದೆ. ಔಷಧಿಯು ಕಹಿ, ಒಗರು, ಹುಳಿ ಮುಂತಾದ ಓಕರಿಕೆ ಹುಟ್ಟಿಸುವ ವಸ್ತುವಾಗಿದ್ದರೂ ಪರಿಣಾಮದಲ್ಲಿ ಅಮಡತ ಸದೃಶವೆಂದು ಮನವರಿಕೆಯಾಗುವುದು. ಇಬ್ಬದಿಗೂ ಮುಳ್ಳಿನ ಮೈತೊಟ್ಟ ಉತ್ರಾಣಿ ಕಡ್ಡಿಯೂ ಕಡಬತ್ತಿಯಾಗಿ ಸುಟ್ಟುಕೊಂಡು ಶಿವರಾತ್ರಿಯ ದಿವಸ ಶಿವನನ್ನು ತಣಿಸುವುದು.

ಗಾದೆಯೆಂಬ ಶಬ್ದವುಗಾದಿಯಂತೆ ಮೆತ್ತಗೆನಿಸಿದರೂ ಅದು ಗುಣದಲ್ಲಿ, ಅರ್ಥದಲ್ಲಿ ಕಠೋರವಾಗಿದೆ. ಸದಾಶಿವನ ಒಲುಮೆ ಗಳಿಸಿಕೊಡುವ ಸದುವಿನಯಕ್ಕೂ, ಗಾದೆಗೂ ಮಹದಂತರ; ಕಾಂತೆಯ ಮಾತಿನಂತೆ ಕಾಂತಿಯುಕ್ತವಲ್ಲ. ಸಮಗಾರ ದೆವ್ವಿನ ಪೂಜೆಗೆ ವಿಶಿಷ್ಟ ವಸ್ತುವನ್ನು ಅಣಿಗೊಳಿಸುವಂತೆ, ವಿಡಂಬನ ಮಂತ್ರ, ತಿರಸ್ಕಾರದ ತಂತ್ರ ಅಳವಡಿಸಬೇಕಲ್ಲವೇ? ಗಾದೆಗಳಲ್ಲಿ ವಿಡಂಬನ ಮಂತ್ರಶಕ್ತಿ ಅಡಗಿದೆ. ತಿರಸ್ಕಾರದ ತಂತ್ರಯುಕ್ತಿ ಮಡಗಿದೆ.

ಗಾದೆ ಮೂಸಿ ನೋಡದೆ ಯಾರನ್ನೂ ಬಿಟ್ಟಿಲ್ಲ. ನೆಕ್ಕಿ ನೋಡದೆ ಅದು ಯಾವುದನ್ನೂ ಮರೆತಿಲ್ಲ. ದೇವರು ದಿಂಡಿರು, ಗುರು ಸ್ವಾಮಿಗಳು, ಶ್ರೇಷ್ಠರು, ಗರಿಷ್ಠರು ಯಾರಿದ್ದರೂ ಅವರ ಕೊಂಕು ಕೊರತೆಗಳನ್ನು ಆಡಿ ತೋರಿಸಲು ಹಿಂಜರಿದಿಲ್ಲ; ನುಡಿದು ಏಡಿಸದೆ ಸೊಪ್ಪು ಹಾಕಿಲ್ಲ.

ಕೊಂಕು-ಕೊಳಕು, ಶುಂಭ-ಡಂಭ ವೇಷಧಾರಿಗಳನ್ನು ಬಯಲಿಗೆಳೆದು ಬೆನ್ನ ಬಾರವೆತ್ತದೆ ಬಿಟ್ಟಿಲ್ಲ. ಆ ಕೆಲಸವನ್ನು ಮಾಡನಿಂತವರು ಒಬ್ಬರೇ ಇಬ್ಬರೇ? ಅದರಂತೆ ಉಚ್ಚಾಟನೆಗೆ ಗುರಿಯಾದವರು ಒಬ್ಬರೇ ಇಬ್ಬರೇ? ಇಲಿಗೆ ಪ್ರಾಣ ಸಂಕಟವಾದರೂ ಬೆಕ್ಕು ತನ್ನ ಆಟವನ್ನು ಆಡಿಯೇ ಮುಗಿಸುವಂತೆ, ಗಾದೆ ತನ್ನ ಗಾರುಡಿಯಿಂದ ಇಲಿಯ ಕಳ್ಳತನಕ್ಕೆ, ಮನೆಹಾಳುತನಕ್ಕೆ ತಕ್ಕಶಾಸ್ತಿಮಾಡದೇ ಬಿಡುವುದಿಲ್ಲ.

ಈ ‘ಗಾದೆಗಳ ಗಾರುಡಿ’ ಯೊಳಗಿನ ೩-೪ ಪ್ರಬಂಧಗಳು ‘ಸಂಯುಕ್ತ ಕರ್ನಾಟಕ’ದಲ್ಲಿ ಬೆಳಕು ಕಂಡಿವೆ. ಈಗ ಇಡಿಯ ಪ್ರಬಂಧಗಳು ಬೆಳಕು ಕಾಣಲು ಹರಬಂದಿವೆ. ಗೊಳಸಂಗಿಯ ಉತ್ಸಾಹಿ ಮಿತ್ರರಾದ ಶ್ರೀ ಕಾ.ಹು. ವಿಜಾಪುರ ಹಾಗೂ ಪ್ರಿನ್ಸಿಪಾಲ ತೆಳಗಡಿಯವರು “ಜಾನಪದ ಪ್ರತಿಭಾ ಪ್ರಕಾಶನ”ದಲ್ಲಿ ೨ನೇ ಪ್ರಕಟನೆಯೆಂದು ಇದನ್ನು ಪ್ರಕಟಿಸಿದ್ದಾರೆ. ಅವರ ಸಾಹಸಕ್ಕೆ ಗೆಲುವಾದರೆ ನಾನು ಗ್ರಂಥ ಒದಗಿಸಿದ್ದಕ್ಕೆ ಸಾರ್ಥಕ್ಯ.

‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸಂಪಾದಕರಿಗೂ, ಜಾನಪದ ಪ್ರತಿಭಾ ಗ್ರಂಥಮಾಲೆಯ ಸಂಚಾಲಕರಿಗೂ ನಾನು ಆತ್ಮೀಯತೆಯಿಂದ ಅಭಿನಂದಿಸುತ್ತೇನೆ.

ಸಿಂಪಿ ಲಿಂಗಣ್ಣ
ಚಡಚಣ
೧.೩.೧೯೮೮