ಭಾರ ಕೇಂದ್ರವನ್ನು ಆಶ್ರಯಿಸಿ ಮನುಷ್ಯ ಶರೀರವು ನಿಂತಂತೆ ಕಂಡರೂ ಅದು ನಿಜವಾಗಿ ಜೋತುಬಿದ್ದಿದೆ. ಗೀತೆಯಲ್ಲಿ ಹೇಳಿದ ಅಶ್ವತ್ಥ ವೃಕ್ಷದಂತೆ, ಬೇರುಗಳು ಮೇಲೆ, ತೊಂಗೆ – ತಿಸಿಲುಗಳು ಕೆಳಗೆ. ಶರೀರದ ಮೇಲ್ಭಾಗದಲ್ಲಿರುವ ಮೆದುಳು ವಿಚಾರ-ಬುದ್ಧಿಗಳನ್ನು ನಿರ್ವಹಿಸುವ ಪ್ರಮುಖ ಇಂದ್ರಿಯವಾಗಿದೆ. ಅದರಂತೆ ಹೊಕ್ಕಳನ್ನು ಆಶ್ರಯಿಸಿ ಪ್ರಾಣತ್ರಾಣವು, ಬಲ-ತೋಲಗಳನ್ನು ನಿಗ್ರಹಿಸುವ ಉಪೇಂದ್ರಿಯವಾಗಿದೆ. ಬುದ್ಧಿ ಪ್ರಾಣಗಳು ತಮಗೆ ಸಹಜವಾದ ಗುಣಕರ್ಮಗಳನ್ನು ಅಳವಡಿಸುವುದಕ್ಕೆ ಹೃದಯವನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ಮನಸ್ತರದಲ್ಲಿ ವಾಸ್ತವ್ಯ ಮಾಡಿದಾಗ ವ್ಯಕ್ತಿ ಮಾನವ ಎನಿಸುತ್ತಾನೆ. ಪ್ರಾಣದಾಸರದಲ್ಲಿ ಹೊತ್ತುಗಳೆಯುವ ವ್ಯಕ್ತಿ ಪ್ರಾಣಿಯೆನಿಸುತ್ತದೆ. ಮಾನವನಿಗೆ ಹೃದಯ ಸಂಪರ್ಕನವು ಅತ್ಯಾವಶ್ಯಕವಾದಂತೆ, ಪ್ರಾಣಿಗೂ ಹೃದಯ ಸಂಪರ್ಕವು ಅವಶ್ಯವಿರುವಷ್ಟು ದೊರಕೊಳ್ಳುತ್ತದೆ.

ಪಶುಗಳಿಗೆ ಹಾಳತಾದ ಬುದ್ಧಿಯನ್ನು ನಿಯತಿ ದಯಪಾಲಿಸಿದಂತೆ, ಪ್ರಾಣಿಗಿಂತ ತುಸು ಹೆಚ್ಚು ಬುದ್ಧಿಯನ್ನು ಅದೇ ನಿಯತಿಯು ಮನುಷ್ಯನಿಗೆ ಕೊಡಮಾಡಿದೆ. ಪಶುವಿಗಿಂತ ತುಸು ಮಾತ್ರ ಹೆಚ್ಚು ಬುದ್ಧಿಯಿದ್ದುದರಿಂದ ಅದು ಮನುಷ್ಯನ ನಿಗ್ರಹ ಶಕ್ತಿಯನ್ನು ಹದಗೆಡಿಸುವುದಕ್ಕೆ ಮಾತ್ರ ಕಾರಣವಾಗಿದೆ. ಪಶುಗಳಿಗಿರುವಷ್ಟೇ ಬುದ್ಧಿ ಮನುಷ್ಯನಿಗಿದ್ದಿದ್ದರೆ ಅವನ ನಿಗ್ರಹ ಶಕ್ತಿಯು ನಿರ್ಭಾಧವಾಗುತ್ತಿತ್ತೇನೋ. ಮನುಷ್ಯನಿಗೆ ಈಗಿದ್ದ ಬುದ್ಧಿಗಿಂತ ಹೆಚ್ಚು ಬುದ್ಧಿ ಪ್ರಾಪ್ತವಾದಾಗಲೇ ಅವನ ನಿಗ್ರಹಶಕ್ತಿಗೆ ಇಮ್ಮಡಿ ಬಲ ಬರುತ್ತದೆ.

ಮನಸ್ತರದಲ್ಲಿದ್ದ ಮಾನವನು, ಉಚ್ಚಮನ, ಸಂಬೋಧಿಮನ, ಪ್ರಕಾಶಮನ ಎಂಬ ಮೂರು ಸ್ತರಗಳನ್ನು ದಾಟಲು ಸಮರ್ಥನಾದರೆ, ಅವನು ಅಧಿಮಾನಸಸ್ತರವನ್ನು ತಲುಪುವನು. ಅಲ್ಲಿಯ ವಾಸ್ತವ್ಯದಿಂದ ಅವನು ಅಧಿಮಾನವನೆನಿಸುತ್ತಾನೆ.

ಮಾನವನು ಮನಸ್ತರದಲ್ಲಿ ವಾಸ್ತವ್ಯ ಮಾಡಿದರೂ, ಉಚ್ಚಮನ, ಸಂಭೋದಿಮನಗಳ ಸಂಪರ್ಕ ಪಡೆದು ವಿವೇಕಾನಂದ, ರಾಮಕೃಷ್ಣ ಪರಮಹಂಸರ ಎತ್ತರಕ್ಕೇರಬಹುದು. ಅಧಿಮಾನ ಸಸ್ತರದ ಸಂಪರ್ಕ ಗಳಿಸಿದರೆ, ಶ್ರೀಕೃಷ್ಣ ಪದವನ್ನು ಪಡೆಯಬಲ್ಲನು. ೧೯೨೬ರಲ್ಲಿ ಶ್ರೀ ಅರವಿಂದರಿಗೆ ಪ್ರಾಪ್ತವಾಗಿದ್ದುದೇ ಅಧಿಮಾನಸಸ್ತರದ ನಿರಂತರ ಸಂಪರ್ಕ. ಅದನ್ನೂ ದಾಟಿ ಅತಿಮಾನಸಸ್ತರವಿದೆಯೆಂದೂ ಅದಕ್ಕೆ ಶ್ರೀ ಅರವಿಂದರ ಪೂರ್ಣಯೋಗ ಸಾಧನೆ ಅನಿವಾರ್ಯವೆಂದೂ ಹೇಳಲಾಗುವುದು.

ತಲೆಯಿಂದ ಹೊಕ್ಕಳವರೆಗಿನದು ಮನಸ್ತರದ ಕ್ಷೇತ್ರ. ಹೊಕ್ಕಳದಿಂದ ಕೆಳಗಿನದು ಪ್ರಾಣ ಸ್ತರದ ನೆಲ. ಮನ ಅಥವಾ ಬುದ್ದಿಯ ಸಲಕರಣೆಯಿಂದ ವ್ಯವಸ್ಥಿತಗೊಳ್ಳುವಾಗ ಅವನದು ಶಿಷ್ಟಪದವೆನಿಸಿದರೆ, ಪ್ರಾಣದ ಸಲಕರಣೆಯಿಂದ ವ್ಯವಸ್ಥಿತಗೊಳ್ಳುವಾಗ ಅವನು ಜನಪದವೆನಿಸುತ್ತಾನೆ. ಹೊಕ್ಕಳ ಅಥವಾ ಸೊಂಟದ ಮೇಲ್ಬಾಗದಲ್ಲಿದ್ದ ಶಿಷ್ಟನು, ಹೊಕ್ಕಳ ಅಥವಾ ಸೊಂಟದ ಕೆಳಭಾಗಕ್ಕೆ ಬಂದರೆ ಅದೇ ಶಿಷ್ಟನು ಜನಪದವೆನಿಸುತ್ತಾನೆ. ಶಿಷ್ಟ ಪದಕ್ಕೆ ಉಸಿರಾಡಿಸಲು ಉಚ್ಚ ಸಂಬೋಧಿ ಮನಗಳ ಗಾಳಿ ಸಿಗುತ್ತದೆ. ಜನಪದಕ್ಕೆ ಮನಕ್ಕಿಂತ ಕೆಳಗಿನ ಸ್ತರಗಳ ಗಾಳಿ ಉಸಿರಾಡಿಸಲು ಸಿಗುತ್ತದೆ. ಶಿಷ್ಟಪದ-ಜನಪದಗಳಿಗೆ ಹೃದಯವಂತಿಕೆಯೇ ನೀರೆರೆಯುತ್ತದೆ. ಯಾವುದು ಹೆಚ್ಚು ಯಾವುದು ಕಡಿಮೆ? ಎರಡೂ ಸತ್ಯವೆಂದು ಗ್ರಹಿಸುವುದು ಸಹಜ ಕ್ರಮವೇ ಆಗಿದೆ.

ತಲೆಗಿಂತ ಮೇಲಿನ ಸ್ತರಗಳಲ್ಲಿ ಚೇತನ ಬೊಕ್ಕಸವಿದ್ದರೆ, ತಲೆಯಿಂದ ಕಾಲ್ತುದಿಯವರೆಗಿನ ಸ್ತರದಲ್ಲಿ ಅರ್ಥ ಚೇತನ – ಅವಚೇತನಗಳ ಇಡಗಂಟು ಹುದುಗಿರುತ್ತದೆ.ಕಾಲಿಗೂ ಕೆಳಗಿರುವ ನೆಲಮನೆಯಲ್ಲಿ ಅಚೇತನವು ಮಡುಗಿರುತ್ತದೆ. ಮನುಷ್ಯ ಬುದ್ದಿಯು ಮನಸ್ಸು ಮಾಡಿದರೆ ಚೇತನದ ಖನಿಯೇ ಆಗಬಲ್ಲದು. ಅದರಂತೆ ಅವಚೇತನ ಅರ್ಧಚೇತನಗಳ ಕೈಗೋಲೂ ಆಗಬಹುದು. ಅಚೇತನಕ್ಕೆ ಆಶ್ರಯವಿತ್ತವನು ಮನುಷ್ಯನಾಗಿಯೂ ಉಳಿಯುವುದಿಲ್ಲ,. ಪ್ರಾಣಿಯಾಗಿಯೂ ಉಳಿಯುವುದಿಲ್ಲ. ಅಂತರಪಿಶಾಚಿ ಮಾತ್ರ ಆಗಬಹುದೇನೋ.

ಶಿಷ್ಟ ಸಾಹಿತ್ಯದ ಮಡಿವಂತಿಕೆಯಲ್ಲಿ ಅಶ್ಲೀಲ ಶಬ್ದಗಳು ಸುಳಿಯುವಂತಿಲ್ಲ. ಸುಳಿಯಬರದು. ಆದರೆ ಜನಪದ ಸಾಹಿತ್ಯಕ್ಕೆ ಮಡಿವಂತಿಕೆಯಾಗಲಿ, ಮುಡಚೆಟ್ಟಾಗಲಿ ಇಲ್ಲ. ಆದ್ದರಿಂದ ಅದು ಧಾರಾಳವಾಗಿ “ಅಶ್ಲೀಲ” ಶಬ್ದಗಳನ್ನು ಬಳಸುತ್ತದೆ. ಅದರದು ಸೊಂಟದ ಕೆಳಗಿನ ಭಾಷೆಯೆನಿಸುತ್ತದೆ. ಅಶ್ಲೀಲವೆನಿಸುವ ಶಬ್ದಗಳನ್ನು ಬಳಸುವದೆಂದರೆ ಶಿಷ್ಟಸಾಹಿತ್ಯಕ್ಕೆ ಅಶ್ಲಾಘ್ಯ. ಅದು ಅಶ್ಲೀಲ ವಸ್ತುಗಳನ್ನು ಧಾರಾಳವಾಗಿ ಉಪಯೋಗಿಸಿದರೂ, ಉಪಭೋಗಿಸಿದರೂ ಶಬ್ದಗಳನ್ನು ಮಾತ್ರ ಬಳಸಲಾರದು, ಕಬಳಿಸಲೂ ಆರದು. ಅಂಥ ಶಕ್ತಿಯನ್ನು ಒದಗಿಸಿದ್ದು ಅದರ ಕಟ್ಟುಮಡಿವಂತಿಕೆಯೇ ಕಾರಣ.

ಜನಪದವು ಅಶ್ಲೀಲ ಶಬ್ದಗಳನ್ನು ಧಾರಾಳವಾಗಿ ಬಳಸಲು ನಾಚುವುದಿಲ್ಲ, ಹೇಸುವುದಿಲ್ಲ. ಆದರೆ ಶಿಷ್ಟರಂತೆ ಉಪಭೋಗಿಸಲು ಮಾತ್ರ ಹೇಸುತ್ತದೆ, ಹಿಂಜರಿಯುತ್ತದೆ. ಮಾತೃಭಾಷೆಯಲ್ಲಿ ಅಶ್ಲೀಲ ಶಬ್ದಗಳನ್ನು ಬಳಸುವ ಬದಲು ಸಂಸ್ಕೃತ ಭಾಷೆಯಲ್ಲಿ ಅಶ್ಲೀಲ ವಸ್ತುಗಳ ಹೆಸರು ಹೇಳಿದರೆ ಶಿಷ್ಟವಂತಿಕೆಗೆ ಯಾವ ಲೋಪವೂ ಉಂಟಾಗುವುದಿಲ್ಲವಂದು ತೋರುತ್ತದೆ.

ಗಂಡಿನ ಜನನೇಂದ್ರಿಯ, ಹೆಣ್ಣಿನ ಜನನೇಂದ್ರಯ ಎಂದು ಹೇಳಿಯಾರಲ್ಲದೆ, ಅದಕ್ಕೆ ಸಮಾನಾರ್ಥ ಕೊಡುವ, ಅದಕ್ಕೂ ಮಿಗಿಲಾದ ಕಲ್ಪನೆ ಕೊಡುವ ಗ್ರಾಮೀಣವಾದ ಕನ್ನಡ ಭಾಷೆಯ ಶಬ್ದಗಳನ್ನು ಬಳಸುವುದಕ್ಕೆ ನಾಚುತ್ತಾರೆ. ನಾಲಿಗೆ ಕಚ್ಚಿಕೊಳ್ಳುತ್ತಾರೆ.

ಜನಪದ ವರ್ಗವು ಆ ಶಬ್ದಗಳನ್ನು ನಿರರ್ಗಳವಾಗಿ ಸುಲಲಿತವಾಗಿ ಬಳಸುತ್ತದೆ. ಇಷ್ಟೇ ಅಲ್ಲ, ಅಂಥ ಶಬ್ದಗಳನ್ನು ಕುರಿತು ಕವಿತ್ವಪೂರ್ಣವಾದ ಒಡಗತೆಯನ್ನೂ ಸಹ ರಚಿಸಿದೆ.

“ಆ ಕಾಲು ಡೊಂಕುತ್ತ, ಈ ಕಾಲು ಡೊಂಕುತ್ತ, ತುತ್ತೂರಿ

ಊದುತ್ತಾ ಪನ್ನೀರು ಚೆಲ್ಲುತ್ತ ಒಳಗಿಂದ ಬರ್ತಾನೆ ರಾಜಕುಮಾರ” (ಮಲವಿಸರ್ಜನೆ) ಮೇಲಿನ ಒಡಗತೆ ಜನಪದದ್ದು – ಕೆಳಗಿನದು ಶಿಷ್ಟಪದದ್ದು.

ಸಂಸ್ಕೃತ ಭಾಷೆಯ ಪರದೆಯ ಹಿಂದೆ ಬತ್ತಲೆಯೋ ಅರೆಬತ್ತಲೆಯೋ ಆಗಿ ನಿಲ್ಲಬಹುದು. ಆದರೆ ಅದೇ ವೇಷದಲ್ಲಿ ಪರದೆಯ ಮುಂದೆ ಬರಬಾರದು. ಕೆಳಗೆ ಕಾಣಿಸಿದ ವಿಷಯ ಸಂಸ್ಕೃತ ಭಾಷೆಯಲ್ಲಿದೆ. ಒಬ್ಬ ವೇಶ್ಯೆ ಇನ್ನೊಬ್ಬಳೊಡನೆ ಹೇಳುತ್ತಾಳೆ.

ಶೃಣು ಸಖೀ, ಕೌತುಕಮೇಕಂ
ಗ್ರಾಮೀಣ ಕುಕಾಮಿನಾ ಯದಸ್ಯಕೃತಂ
ಸುರತಸುಖ ಮಿಲಿತಾಕ್ಷಿ
ಮೃತೇತಿ ಭೀತೇನ ಮುಕ್ತಾಸ್ಮಿ

ಅದೇ ವಾಕ್ಯವನ್ನು ಕನ್ನಡದಲ್ಲಿ ಹೇಳಿದರೆ ಮಡಿವಂತಿಕೆ ಪುಟಿದೆದ್ದು ನಿಲ್ಲುವುದೋ ಏನೋ, ಅದರ ಕನ್ನಡ ಅನುವಾದ ಇಲ್ಲಿದೆ –

“ಸುಖಿಯೇ, ಒಂದು ಕೌತುಕವನ್ನು ಕೇಳು – ಗ್ರಾಮೀಣ ಕುಕಾಮಿಯೊಬ್ಬನು ನನಗೆ ನೀಡುತ್ತಿದ್ದ ಸುರತಸುಖವನ್ನು ಕಣ್ಣುಮುಚ್ಚಿ ನಾನು ಅನುಭವಿಸುತ್ತಿರುವುದನ್ನು ಕಂಡು ಆತನು, ಈಕೆ ಸತ್ತೇ ಹೋದಳೆಂದು ಭಾವಿಸಿ ನನ್ನನ್ನು ಬಿಟ್ಟು ಓಡಿಹೋದನು.”

ಕನ್ನಡದಲ್ಲಿ ಹೇಳಿದ್ದು ಅದೆಷ್ಟು ಸ್ಪಷ್ಟವೂ ನಿಚ್ಚಳವೂ ಆಗಿದೆಯೆಂಬುದು ಕನ್ನಡ ಜನಪದಕ್ಕೆ ಮನವರಿಕೆಯಾಗುವುದು. ಜನಪದದಲ್ಲಿ ಹುದುಗಿರುವ ಶಕ್ತಿಯೇ ಅಂಥದು. ಶಿಷ್ಟ ಸಜ್ಜನರಿಂದ ಸಾಧ್ಯವಿಲ್ಲದ ತುಷ್ಟಿ ಒಬ್ಬ ಗ್ರಾಮೀಣನಿಂದ ದೊರೆತದ್ದು, ಜನಪದ ಸಾಹಿತ್ಯದೊಂದಿಗೆ ಜನಪದ ಬಲಕ್ಕೂ ಹೆಮ್ಮೆ ತರುವಂಥದು.

ಅಶ್ಲೀಲ ಶಬ್ದಗಳಲ್ಲಿ ಉದಾತ್ತತೆಯನ್ನು ಮಡಗಿಸಿ, ಉದಾತ್ತತೆಯಲ್ಲಿ ಅಶ್ಲೀಲ ಶಬ್ದಗಳನ್ನು ತೇಲಿಸಿ ಹೇಳುವ ರೀತಿ ಜನಪದದಲ್ಲಿ ಕಂಡುಬರುತ್ತದೆ.

೧. ಕೈಗೂ ಬಾಯಿಗೂ ಜಗಳ ನಡೆದಿದೆ  (ಊಟ)

೨. ಮೂಗಿನ ಕೆಳಗಿನ ಮಾಡದಲ್ಲಿ ತುತ್ತಿಡುತ್ತೇನೆ  (ಊಟ)

೩. ಹೊಲದಲ್ಲಿ ಎಡೆಹೊಡೆಯುವ ಬದಲು ಇಂದು ಮನೆಯಲ್ಲಿಯೂ ಎಡೆ ಹೊಡೆದೆ  (ಊಟ)

೪. ತಂಬಿಗೆ ತಗೊಂಡು ಹೋಗು, ಬಯಲಿಗೆ ಹೋಗು, ಸಂಡಾಸಕ್ಕೆ ಹೋಗು  (ಮಲವಿರ್ಸಜನೆ)

ಮಾಧ್ಯಮಿಕ ಶಾಲೆಯೊಂದರಲ್ಲಿ ಒಬ್ಬ ಮುಸ್ಲಿಂ ವಿದ್ಯಾರ್ಥಿಯು ಸಂಸ್ಕೃತವನ್ನು ಚೆನ್ನಾಗಿ ಅಳವಡಿಸಿಕೊಂಡಿದ್ದಾನೆಂಬುದನ್ನು ಕೇಳಿ ತಪಾಸಣಾಧಿಕಾರಿಯು ವಿದ್ಯಾರ್ಥಿಗೆ ಕೇಳಿದನು “ಮಾಕು ಚೋದಾಯನಮಃ”ಅಂದರೇನು?

ಆ ಪ್ರಶ್ನೆ ಕೇಳಿ ಬರುತರ ವಿದ್ಯಾರ್ಥಿಗಳು ಬೆಪ್ಪಾಗಿ ನಿಂತರು. ಈ ಮಾತು ಮುಸ್ಲಿಂ ಬಾಲಕರ ಬಾಯಲ್ಲಿ ಕಟ್ಟಿಹಾಕಿದ ಒಂದು ಬೈಗಳಂತಿರುವುದರಿಂದ ಕನ್ನಡದಲ್ಲಿ ಅರ್ಥ ಹೇಳುವುದು ಅಸಹ್ಯವಲ್ಲವೇ? ಆದರೆ ಜಾಣನಾದ ಆ ಮುಸ್ಲಿಂ ವಿದ್ಯಾರ್ಥಿಯು ಆ ವಾಕ್ಯವನ್ನು ಸಂಸ್ಕೃತದಲ್ಲಿ ಗ್ರಹಿಸಿ ಕನ್ನಡದಲ್ಲಿ ಅರ್ಥ ಹೇಳಿದನು :

“ಲಕ್ಷ್ಮಿ ಸ್ವರೂಪಳಾದ ಭೂಮಿಯನ್ನು ಪ್ರಚೋದಿಸುವವನಿಗೆ ನಮಸ್ಕಾರ” (ಮಾನ=ಲಕ್ಷ್ಮಿ, ಕು= ಭೂಮಿ, ಚೋದಾಯ = ಪ್ರಚೋದಿಸುವವನಿಗೆ ನಮಃ = ನಮಸ್ಕಾರ)

ಕೆಳಗಿನ ಸಾಲುಗಳ ಮಾತಿನ ರೀತಿ ಮನದನ್ನೆಯೊಡನೆ ನಡೆಸಿದ ಸರಸೋಲ್ಲಾಸದಂತಿದ್ದರೂ, ಅರ್ಥದ ನೀತಿ ಮನಗಳ್ಳನ ಸಲಿಗೆಯ ವಚೋವಿಲಾಸದಂತಿದೆ.

ಬಿಳಿಯ ಪತ್ತಲದಾಕೆ ಒಳಗs ಬಿದ್ದೀಯಾಕೆ?
ಬಳಿಗೆ ಬಾ ಹಾಸಿಗೆ ಬಿಟ್ಟು ಎದ್ದು ಮೇಲಕ್ಕೆ
ಗಳಿಗೆ ತಾಸಿಗೊಮ್ಮೆ ತುಟಿಗೆ ಮುದ್ದುಕೊಡಲಿಕ್ಕೆ || ||

ಒಂದೇ ಚಂಬನ ಸೆಳೆತಕೆ ನೀ ಕೆಂಪು ಮುಖ ಮಾಡುವಾಕೆ
ಮೈಮನ ಮರೆಸಿ ಮೈ ಚಳಿಬಿಡಿಸಿ ಬೆಚ್ಚಗ ಮಾಡುವಾಕೆ || ||

ಅವ್ವ ಅಪ್ಪನ ತುಡುಗಿಲೆ ಬಂದು ಕೈಕೈ ಹಿಡಿವಾಕೆ
ಸಂದಿಗೊಂದ್ಯಾಗ ಕರಕೊಂಡುಹೋಗಿ ಮೋಜ ಮಾಡುವಾಕೆ || ||

ನನ್ನ ನಿನ್ನ ಪ್ರೀತಿಕೂಡಿ ಎಷ್ಟೋ ದಿನಸಾತೆ
ಕೆಮ್ಮು ದಮ್ಮು ಬಂದಾಗ ನಿನ್ನ ಸಂಗಬ್ಯಾಡ ಅಂತೈತೆ || ||

ನನಗಾಗಿ ನೀ ನಿನ್ ನದೇಹ ಅಂಗಾರ ಮಾಡಿಬಿಟ್ಟಿ
ನಿನ್ನ ಪ್ರೀತಿ ನೆನಪಿಗೆ ನಾ ಬೆಳ್ಳೀ ಉಂಗುರ ಕೊಟ್ಟೆ || ||

ಒಬ್ಬ ಶಿಕ್ಷಕ ಬಂಧು ಶೀಲ ಅಶ್ಲೀಲ ಮಡಿ ಮೈಲಿಗೆಗಳಿಂದ ಸಾಹಿತ್ಯವನ್ನು ಸಮೀಕ್ಷಿಸುವುದು ಸರಿಯಲ್ಲವೆಂದು ಹೇಳಿದರೆ, ಮಡಿವಂತರು ಮೂಗು ಮುರಿಯಬಹುದು. ಬಿಡು ಅಂದರೆ ಹಾವಿಗೆಕೋಪ, ಬೇಡ ಅಂದರೆ ಕಪ್ಪಗೆ ಕೋಪ – ಎಂಬ ಗಾದೆಯಂತೆ ತೊಂದರೆಗೀಡು ಮಾಡಬಹುದು.

ಹಾವು ಕಪ್ಪೆಯನ್ನು ಬಾಯಲ್ಲಿ ಹಿಡಿದಾಗ ನೋವು ತಾಳಲಾರದೆ ಕಪ್ಪೆ ಕಿರಚುತ್ತದೆ. ಹಾವಿಗೆ ಯಾರು ಹೇಳಬೇಕು, ಏನು ಹೇಳಬೇಕು ಎನ್ನುವುದೇ ತಿಳಿಯಲಾರದ ಸಂದರ್ಭವನ್ನು ಗಮನಿಸಿದಾಗ ಈ ಗಾದೆ ಹುಟ್ಟಿಕೊಂಡಹಾಗಿದೆ.

ಚೇತನದ ವಾಸ್ತವ್ಯವನ್ನು ಕುರಿತು ಸ್ಪಷ್ಟವಾಗಿ ತಿಳಿಯಲಾರದವರಿಗೆ ಸಮಸ್ಯೆಗಳು ಜಟಿಲಕ್ಕೆ ಜಟಿಲವಾಗಿ ಬಿಡುತ್ತವೆ. ಜನಪದದಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳು ಚೇತನಾ ಚೇತನ ಅವಚೇತನಗಳ ದಂದುಗದಲ್ಲಿಯೂ ಹೃದಯದೊಡನೆ ನೇರವಾದ ಸಂಪರ್ಕವಿರಿಸಿಕೊಂಡಿದ್ದರಿಂದ “ಸಂಸಾರವೇದ” ಎನಿಸುವ ತ್ರಿಪದಿಗಳನ್ನು ಅಸಂಖ್ಯವಾಗಿ ಉಸರಿದ್ದಾರೆ. ಆ ತ್ರಿಪದಿಯೆಂದರೆ ಕನ್ನಡ ಗಾಯಿತ್ರಿಯೇ ಸೈ. ಚೇತನಾ ಚೇತನ ಅವಚೇತನಗಳೆಂದರೆ ಅವರ ಪಾಲಿಗೆ ಮೂರು ಮೂಲ ಬಣ್ಣಗಳೇ ಆಗಿವೆ. ಅವುಗಳ ವಿವಿಧ ಮಿಶ್ರಣ ಕೌಶಲದಿಂದ ನೂರಾರು ಬಣ್ಣಗಳನ್ನ ಮಾಡಿಕೊಂಡಿದ್ದಾರೆ. ಅಗೋ ಅಲ್ಲಿ ಕಾಮನ ಬಿಲ್ಲು!  ಇಗೋ ಇಲ್ಲಿ ಸಂಧ್ಯಾರಾಗ!  ಮುಂಬೆಳಗಿನ ಕೆಂಪು ರಸಿಕೆ!!  ಉಷಾದರ್ಶನ ಚಿತ್ರಿತವಾಗಿದೆ ಒಂದು ಕಡೆ, ಆಕಾಶದಲ್ಲಿ ಜಲರಾಗ ರೇಖಿಸಲಾಗಿದೆ ಇನ್ನೊಂದು ಕಡೆ, ಪ್ರಪಂಚವೆಂದರೆ ಸ್ತ್ರೀಸಂತಾನದ ವಾಸ್ತವ್ಯ, ಅಪ್ಪಿತಪ್ಪಿ ಗಂಡು ಹುಟ್ಟಿದಂತಿದೆ. ಜೋಳದ ಬೆಳೆಯೊಳಗಿನ ಬಾಂಡದಂಟಿನಂತೆ. ಅದಕ್ಕೆ ತೆನೆಯಿಲ್ಲ, ಕಬ್ಬಿನಂತೆ ತಿನ್ನುವುದೇ ಅದರ ಪ್ರಯೋಜನ.

“ತಿಳಕೊಳ್ಳುವುದು ತೀರುತ್ತಲೆ ತಿಳುವಳಿಕೆ ಉಂಟಾಗುವುದು” ಎಂಬುದನ್ನು ತಿಳಕೊಳ್ಳುವುದೇ ಜ್ಞಾನಭಾಂಡಾರ, ಅದರಲ್ಲಿಯೇ ನವರಸದ ಸತ್ವ ಹುದುಗಿದೆ. ಗಾದೆ ಒಡಗತೆಗಳು ಹಿಡಿದೆನೆಗಳಂತೆ ಮೂಡಿಕೊಂಡು ನಿಂತಿವೆ. ಮುಂದಿನ ಕೃಷಿಗಾಗಿ, ತಿಳಿಮೆ – ಕವಿತ್ವಗಳ ಬೀಜಗಳಾದ ಗಾದೆ – ಒಡಗತೆಗಳು ಅವರ ನಾಲಿಗೆ ತುಂಬ ಚೆಲ್ಲುವರಿದಿವೆ; ಮೊಳೆತು ಪಲ್ಲವಿಸುವ ಸಲುವಾಗಿ ಅವು ಸಾವಿರ ಸಾವಿರ ಸಂಖ್ಯೆಯಲ್ಲಿದ್ದಂತೆ ಸಾವಿರದ ಅಜರಾಮರತೆಯ ಕೋಶದಲ್ಲಿಯೂ ಬೀಡುಬಿಟ್ಟಿವೆ. ಬಾಳಿನಲ್ಲಿ ಅಡಿಗಡಿಗೂ ತಡೆಯೊಡ್ಡುವ ಜಟಿಲ ಸಮಸ್ಯೆಯನ್ನು ಸುಲಭಗೊಳಿಸುವ ಭಗೀರಥ ಸಾಹಸದ ದ್ಯೋತಕವಾಗಿ ಜಾನಪದ ಸಾಹಿತ್ಯ ಒಟ್ಟಿನಿಂತಿದೆ. ಸಾವಿಲ್ಲದ ಕೇಡಿಲ್ಲದ ಅಂಥ ಸಾಹಿತ್ಯ ನಮ್ಮ ಜೀವನಕ್ಕೆ ಪ್ರತಿಭೆಯಾಗಿ, ಜೀವನವು ಸಾಹಿತ್ಯಕ್ಕೆ ಪ್ರತಿಬಿಂಬವಾಗಿ ಚೇತನವನ್ನು ಬಡಿದೆಬ್ಬಿಸುತ್ತಿದೆ.ಇನ್ನೊಂದು ಅರ್ಥದಲ್ಲಿ ಜನ್ಮವೆಂದರೆ ಮರಣವೇ ಆಗಿದ್ದರೂ, ಬಾಳಿನ ರಂಗಭೂಮಿಯಲ್ಲಿ ಚಿರಂಜೀವಿಯಾಗಿ ನಿಲ್ಲುವಂತೆ ಮಾಡಿದ್ದು, ಚೇತನಾ ಚೇತನ – ಅವಚೇತನಗಳೆಂದೇ ಹೇಳಬೇಕಾಗುತ್ತದೆ. ಆದರೆ ಅವು ಹೃದಯದ ಅಪಾರವಾದ ಅಖಂಡವಾದ ಹಿಂಬಲ ಮುಂಬಲ ಪಡೆದಿವೆ.