ಎಲ್ಲರ ಬಾಯಲ್ಲಿಯೂ ಇರುವಂಥ ವ್ಯಕ್ತಿ ಆಗಬೇಕು. ಬಾಯಲ್ಲಿ ಅಂದರೆ ನಾಲಗೆಯ ಮೇಲೆ, ನಾಲಗೆಯಿಂದ ತುಸು ಸರಿದಾಡಿದರೆ ಹಲ್ಲಲ್ಲಿ ಎನ್ನುವ ಮಂತ್ರದಲ್ಲಿರುವಂಥ ಶಕ್ತಿ ಯಾಗಲಿ ಪ್ರಭಾವವಾಗಲಿ ನೂರೊಂದು ಕಿವಿಮಾತುಗಳಲ್ಲಿ ಇರಲಾರವು.

ಅತ್ತಿಮಾವಗಂಜಿ ಸುತ್ತೇಳು ನೆರಿಗಂಜಿ
ಮತ್ತನಲ್ಲನ ಧನಿಗಂಜಿ | ನಡೆದರ |
ಎಂಥ ಉತ್ತಮರ ಮಗಳಂದ ||
ಅತ್ತೀಯ ಮನಿಯಾಗ ಹತ್ತಾರು ಬಯ್ದರ
ಉತ್ತರಬ್ಯಾಡ ನನ ಮಗಳ | ನಿಮ್ಮತ್ತಿ
ಉತ್ತಮರ ಮಗಳೆಂದು ನುಡಿದಾಳ ||

ಉತ್ತಮರ ಮಗಳೆನಿಸುವುದಕ್ಕೆ ಅತ್ತೆಗೆ ಉತ್ತರಕೊಡಬೇಡ ಎನ್ನುವುದೇ ಮಹಾಮಂತ್ರವಾಗಿದೆ. ಅತ್ತದಗೆ ಉತ್ತರಕೊಡಬಾರದು – ಅಂದಾಕ್ಷಣವೇ ಬಾಯಿಹೊಲಿದು ಮಾತಾಡದೆ ಇರಬೇಕೆಂದು ಅರ್ಥವಲ್ಲ. ಕೇಳಿದ್ದಕ್ಕೆ ಮರುನುಡಿಯುವುದೇ ಬೇರೆ, ಉತ್ತರಕೊಡುವುದೇ ಬೇರೆ. ಮರುನುಡಿಯಲ್ಲಿ ಒಪ್ಪಿಗೆಯ ತಿರುಳು ಇರುತ್ತದೆ. ಉತ್ತರಕೊಡುವುದರಲ್ಲಿ ಅಸಮ್ಮತಿಯ ಗೊರಟೆಯಿರುತ್ತದೆ.

ಮೊದಲಗಿತ್ತಿಗೆ ಬುದ್ದಿ ಹೇಳುವವರಲ್ಲಿ ಸದುದ್ದೇಶವಿರುವುದಾದರೂ ಅತ್ತೆಮನಯ ಭಯಾನಕತೆಯ ಗುಮ್ಮನ ಚಿತ್ರವೂ ಅದರಲ್ಲಿ ಮೂಡಿರುತ್ತದೆ. ಅಕ್ಕರೆಯಿಂದ ಸಾಕಿದ ಗಿಳಿಯನ್ನು ಬೆಕ್ಕಿನ ಬಾಯಿಗೆ ಕೊಡುವ ಸಿದ್ಧತೆ ನಡೆದಂತೆ ಎಂದು ಭಾವಿಸಿ, ಮಗಳು ಅತ್ತೆಯ ಮನೆಗೆ ನಗುತ್ತ ಕಲೆಯುತ್ತ ಹೋಗದೆ ಅಳುತ್ತ ಕರೆಯುತ್ತ ಹೋಗುವ ಪ್ರಸಂಗಗಳನ್ನೇ ಕಾಣುತ್ತೇವೆ.

ಅತ್ತಿಯ ಮನಿಯಾಗ ಮುತ್ತಾಗಿ ಇರಬೇಕ
ಹೊತ್ತ ನೀಡಿದರ ಉಣಬೇಕ | ತವರವರ |
ಉತ್ತಮರ ಹೆಸರ ತರಬೇಕ ||

ಎಂದು ತಾಯಿಯೋ ತಂದೆಯೋ ಹೇಳಿದರೆ, ಅಣ್ಣನು ತಂಗಿಗೆ ಒಂದಿಷ್ಟು ಹಿರಿಯ ನಾದ್ದರಿಂದ ತಾನು ಒಂದೆರಡು ಮಾತಿನಲ್ಲಿ ಸೊಸೆಯಾಗುವವಳ ಕತವ್ಯವನ್ನು ಹೇಳಿಕೊಡುತ್ತಾನೆ. ಆ ಮಾತು ಮುಂದೆ ತಂಗಿಗೆ ಹಲವು ಸಾರೆ ನೆನಪಾಗುತ್ತದೆ.

ಸರದಾರ ನನ್ನಣ್ಣ ಕರೆದು ತಾ ಹೇಳ್ಯಾನ
ನೆರಿ ಹೊರಿಯ ಮನಿಯ ಹೊಗಬೇಡ | ನನತಂಗಿ
ಬರಬಾರದ ಮಾತು ಬರತಾವ ||

ಅದೇ ಮಾತನ್ನು ತಾಯಿಯ ಭಾಷೆಯಲ್ಲಿ ಕೇಳೋಣ.

ಗುಂಡ ಮಾರಿಯ ಹೆಣ್ಣ ಚೆಂಡು ಹೂವಿನ ಬಣ್ಣ
ಕಂಡಕಂಡಲ್ಲಿ ನಗಬ್ಯಾಡ | ಎಲೆಮಗಳ
ಬರಬಾರದಪದವಾದ ಬಂದಾವ ||

ಅಳುವ ಹೆಂಗಸನ್ನೂ ನಗುವ ಗಂಡಸನ್ನೂ ನಂಬಬಾರದೆಂದು ಹೇಳುತ್ತಾರೆ. ಆದರೆ ಅತ್ತೆ ಮನೆಯ ಸೊಸೆ ನಗುವುದು ಅಪಥ್ಯ. ಅದರರ್ಥವೇ ಬೇರೆ, ಪರಿಣಾಮವೇ ಬೇರೆ. ಮೊದಲೆ ಗುಂಡಮಾರಿಯ ಹೆಣ್ಣು. ಅದಕ್ಕೆ ಚೆಂಡುಹೂವಿನ ಬಣ್ಣ ಬೇರೆ. ಕಂಡಕಂಡಲ್ಲಿ ನಗುವುದರಿಂದ ಏನದಕ್ಕೆ ಅರ್ಥ? ಅನರ್ಥವೇ. ತವರುಮನೆಯಲ್ಲಿ ಆ ನಗೆ, ಆ ಕೇಕೆ ಅದೆಷ್ಟು ಉಕ್ಕಿ ಹರಿದರೂ ಅಲ್ಲಿ ಹೆಸರಿಡುವವರಾರು? ಹೊಸ ನಂಟುತನಕ್ಕಿಂತ ಹಳೆಯನಂಟುತನ ಹಳೆಯ ಜೇನಿನಂತೆ ಸತ್ ಪರಿಣಾಮವನ್ನು ಒದಗಿಸುವುದು, ಅಂತೆಯೇ ತಾಯಿ ಹೇಳುತ್ತಾಳೆ. ಮಗಳಿಗೆ.

ಸೋದರ ಮಾವನ ಸೊಸಿಯಾಗು ನನಮಗಳ
ಬಿಸಿಲಾಗ ನೀರ ತರಗೊಡನ | ನಿಮ್ಮಾವ
ನೀರ್ಹೊಳಿಗಿ ನಿಂಬಿ ಬನನಿಲುವಿ ||

ಒಟ್ಟಿನಲ್ಲಿ ಹೇಳಬೇಕಾದರೆ, ಲೋಕದಲ್ಲಿ ಎಲ್ಲರಿಗೂ ಬೇಕಾದ ಇರಬೇಕೆನ್ನುವುದೇ ಮುಖ್ಯ ಮಾತು. ಅದು ಹೆಂಗಸಿಗಷ್ಟೇ ಹೇಳಿದ್ದಲ್ಲ, ಗಂಡಸಿಗೂ ಗಟ್ಟಿಸಿ ಹೇಳಿದ್ದೆಂದು ತಿಳಿಯಬೇಕು.