ಸಂಧಿಕಾಲ

ಇಂದು ನಾವಿರುವುದು ಒಂದು ಸಂಧಿಯ ಕಾಲದಲ್ಲಿ. ಹಳೆಯದು ಹೋಗಿಲ್ಲ, ಹೊಸದು ಬಂದಿಲ್ಲ. ಮನುಷ್ಯನೊಳಗಿರುವ ವೃತ್ತಿಗಳು ಅದೆಂಥದೋ ವಿಕರಾಳ ರೂಪವನ್ನು ಧರಿಸಿ ಜಗತ್ತಿನಲ್ಲಿ ಕುಣಿಯತೊಡಗಿವೆ. ಅವಮಾನುಷವೃತ್ತಿಯು ಇದಕ್ಕಿಂತ ಕೆಳಗಿಳಿಯಲಾರದೆನ್ನುವ ಮಟ್ಟದಲ್ಲಿ ನಾವಿಂದು ನಿಂತಿದ್ದೇವೆ. ಇಂದು ಜಗತ್ತಿನಲ್ಲಿ ಮನುಷ್ಯನು ನಡೆಯಿಸಿರುವ ವಿರಾಟ ನೃತ್ಯವನ್ನು ಅವನು ಹಿಂದೆಂದೂ ನಟಿಸಿರಲಿಲ್ಲ. ಅವನ ಪ್ರವೃತ್ತಿಯೇ ಇದಾಗಿರಲಾರದೆನ್ನುವಷ್ಟರವರೆಗೆ ಗುರುತು ಸಿಕ್ಕದೆ ಹೋಗಬಹುದು. ಕಪಟ, ವಂಚನೆ, ದ್ವೇಷ, ತಿರಸ್ಕಾರ, ಪರಾಕ್ರಮಣ, ನಿರ್ದಯತೆ ಮೊದಲಾದವುಗಳು ತಮಗೆ ಅನುಕೂಲವಿರುವ ಮನುಷ್ಯ ಹೃದಯವನ್ನು ಹೊಕ್ಕು, ಅಲ್ಲಿಯ ದಯೆ ಪ್ರೀತಿಗಳನ್ನು ಕಾಲ್ತುಳಿತಕ್ಕೆ ಒತ್ತಿ ತಮ್ಮದೇ ಆದ ಧ್ವಜವನ್ನು ಎತ್ತಿ ಹಿಡಿದು, ತಾಳವಿಲ್ಲದೆ ಅಥವಾ ತಾಳತಪ್ಪಿ ಕುಣಿಯುತ್ತಿರುವವು. ಅವುಗಳ ಕಾಲ ತುಳಿತಕ್ಕೆ ಸಿಕ್ಕದವರು ಯಾರೂ ಇಲಲ. ಆ ಕುಣಿತವನ್ನು ಮೊದಲಾದವರು ಯಾರೂ ಉಳಿದಿಲ್ಲ. ಹೀಗೆ ಪ್ರತಿ ಒಬ್ಬನೂ ದೆವ್ವಕುಣಿತವನ್ನು ಮಾಡುತ್ತಿದ್ದರೂ; ಪರರು ಕುಣಿಯುವಾಗ ಕಾಲಕೆಳಗೆ ಸಿಕ್ಕು ಜಬ್ಬಾಗುತ್ತಿರುವಾಗ ಮಾತ್ರ – “ಅಯ್ಯೋ! ಇದೆಂಥ ಅನ್ಯಾಯ ನಡೆಯಿತು. ಜಗತ್ತಿನಲ್ಲಿ? ಎಂಥೆಂಥವರು ಈ ಪಾತ್ರಗಳನ್ನು ಆಡುತ್ತಾರೆ! ಈ ಕಲಿಕಾಲ ಇನ್ನೆಂದಿಗೆ ಅಳಿದು ಹೋಗುವದೋ” ಎಂದು ಚಿಂತಿಸದೆ ಇರುವುದಿಲ್ಲ. ಶ್ರೀಮಹಾತಾಯಿಯವರು ಇಂದಿನ ಸಂಕ್ರಾಂತಿ ಸಮಯವನ್ನು ಒಂದೇ ಮಾತಿನಲ್ಲಿ ರೇಖಿಸಿರುವದು ಹೇಗೆಂದರೆ –

“ದ್ವೇಷ, ರಕ್ತಪಾತ, ಪ್ರಕ್ಷುಬ್ಧತೆಗಳಿಂದ ಯುಕ್ತವಾದ ಇಂಥ ಕರಾಳ ಸಮಯವನ್ನು ಮಾನವ ಜಾತಿಯು ಹಿಂದೆಂದೂ ಎದುರಿಸಿರಲಿಲ್ಲ. ಮತ್ತು ಇದರ ಜೊತೆಯಲ್ಲಿಯೇ, ಮಾನವ ಕುಲದ ಹೃದಯಾಂತರಾಳದಲ್ಲಿ ಇಂಥ ಬಲವಾದ, ಉತ್ಸಾಹಪೂರ್ಣವಾದ ಆಶೆಯು ಕೂಡ ಹಿಂದೆಂದೂ ಜಾಗೃತವಾಗಿರಲಿಲ್ಲ. ನಮ್ಮೆದೆಯ ಕೂಗನ್ನು ನಾವು ಲಕ್ಷ್ಯಗೊಟ್ಟು ಕೇಳಿದರೆ, ನ್ಯಾಯವೂ ಸುಂದರವೂ ಸಮರಸವೂ ಸೌಹಾರ್ದ ಭ್ರಾತೃಭಾವಗಳಿಂದ ಯುಕ್ತವೂ ಆದ ಹೊಸ ರಾಜ್ಯದ ಆಗಮನವನ್ನು ನಾವೆಲ್ಲರೂ ಹೆಚ್ಚು ಕಡಿಮೆ ತಿಳುವಳಿಕೆಯಿಂದ ನಿರೀಕ್ಷಿಸುತ್ತಿರುವೆಂಬುದು ಒಮ್ಮೆಲೆ ತಿಳಿದುಬರುವದು.

ಒಟ್ಟಿನ ಮೇಲೆ ನಾವಿರುವ ಈ ಕಾಲವು ಸಂಧಿಕಾಲವೆಂಬುದೇನೂ ನಿಜವೇ ಸರಿ. ಆದರೆ ಈ ಸಂಧಿಸಮಯವು ಮುಂಜಾವಿನದೋ ಸಂಜೆಯದೋ ನಿರ್ಣಯಿಸುವದು ಕಠಿಣವಲ್ಲ. ಕತ್ತಲೆಯ ಕಾವಳವು ಕಳೆದು ಬೆಳಗಿನ ಬೆಳಕು ಮೂಡಿ ಬರಲೆನ್ನುವ ಹಾರಯಿಕೆಯೇ, ನಮ್ಮ ಕಾಲವು ಬೆಳಗಿನ ಸಂಧಿಯೆಂದು ಸ್ಪಷ್ಟಗೊಳಿಸುತ್ತದೆ.

ಕರಾಳ ಕಾವಳದ ಅರ್ಥವೇನು?

ರಾತ್ರಿ ಕಳೆಯತೊಡಗಿದೆ. ಆದರೆ ಕಗ್ಗತ್ತಲೆಯು ಹೆಚ್ಚುತ್ತ ಬಂದಿದೆ. ಜಗತ್ತಿನಲ್ಲಿ ಜೀವಿಸಿರುವ ಅದಾವನಿದ್ದರೂ ಅವನ ಕಣ್ಣಿಗೆ ಕತ್ತಲೆ ಕಟ್ಟಿದಂತೆ ಆಗಿದೆ. ಮೇಧಾವಿಯ ಬುದ್ಧಿ ಹರಿಯಲೊಲ್ಲದು; ಪರಾಕ್ರಮಿಯ ಸಾಹಸವು ನೆಲೆ ಹಿಡಿದಿದೆ; ಸತ್ಪುರುಷರ ಸ್ವಸ್ತಿಗೀತಿಕೆಯು ಅಸ್ತವಾಗಿ ಬಿಟ್ಟಿದೆ. ಭೂತಕಾಲದ ಎಚ್ಚರು ತಪ್ಪಿಹೋಗಿದೆ; ವರ್ತಮಾನ ಕಾಲದ ಅರಿವು ಅಳಿದಿದೆ. ಇನ್ನು ಭವಿಷ್ಯತ್ತಿನ ಬೆಳಕು ಅದೆಲ್ಲಿಂದ ಹೊಮ್ಮಿ ಬಂದಿತು? ರಾತ್ರಿಯೆಂದರೆ ಕತ್ತಲೆಯ ಸೆರಗು ಹೊದೆದು ಕರಾಳವಾಗಿ ನಿಂತಿರುವ ಭೀಕರ ಮಹಾಕಾಳಿ. ಬೆಳಗು ಬೆಳಕಿನ ಬಟ್ಟೆಯನ್ನು ಹೊದೆದುನಿಂತ ಪ್ರಸನ್ನ ದುರ್ಗಎ. ಇರುಳಿನ ಪೂರ್ವಭಾಗಕ್ಕಿಂತ ಉಷಃಕಾಲಕ್ಕೆ ಮುಂಚಿತವಾಗಿರುವ ಇರುಳಲ್ಲಿ ಕತ್ತಲೆಯು ಬಹಳ ದಟ್ಟವಾಗಿರುತ್ತದೆನ್ನುವ ಮಾತು ಎಲ್ಲರಿಗೆ ಗೊತ್ತಿಗೆ. ಬೆಳಗಿನ ಬೆಳಕು ಬರುವುದಕ್ಕಿಂತ ಮೊದಲು ಹರಡಿರುವ ಕತ್ತಲೆಯು ತೀರ ಸಾಂದ್ರವೂ ಭೀಕರವೂ ಆಗಿರುತ್ತದೆ. ಆದರೆ ಇಂದಿನ ಸಂಕ್ರಾಂತಿಯೊಳಗಿನ ಕತ್ತಲೆಯ ಇರುಳು ತೀರ ಬೇರೆ. ವಾಸ್ತವಿಕದ ಇರುಳಿಗಿಂತ ತೀರ ಬೇರೆಯಾಗಿರುವಂತೆ ತೋರುತ್ತದೆ. ಶ್ರೀ ತಾಯಿಯವರು ಈ ವಿಷಯದಲ್ಲಿ ಹೇಳುವರು-

“ಹಿಂದಿನ ಯಾವ ರಾತ್ರಿಯೂ ಇಂದಿನ ರಾತ್ರಿಯಷ್ಟು ಪೂರ್ಣ ಕತ್ತಲೆಯಿಂದೊಡಗೂಡಿ ಭೀಕರವಾಗಿ ಇಲ್ಲದಿರುವಂತೆಯೇ, ಇದುವರೆಗಿನ ಯಾವ ಉಷಃಕಾಲವೂ ಮುಂಬರುವ ಉಷ ಕಾಲದಷ್ಟು ತೇಜಸ್ವಿಯೂ ಪವಿತ್ರವೂ ಪ್ರಕಾಶಮಾನವೂ ಇದ್ದಿರಲಾರದು”

ಸಾಧಾರಣ ಕತ್ತಲೆಯು ಸಾಧಾರಣ ಉಷಃಕಾಲವನ್ನು ಬರಮಾಡುವುದಕ್ಕೆ ರ್ಪೂಚಿಹ್ನವಾಗುವದೆಂದು ಹೇಳಿದಂತಾಯಿತು. ಕತ್ತಲೆಯು ಬೆಳಗಿನ ಹರಿಕಾರ. ಬೆಳಗುಬರುವ ಸುದ್ದಿ ಹೇಳುವುದಕ್ಕೆ ಕತ್ತಲೆಯು ಮುಂಚಿತವಾಗಿ ಬರುತ್ತದೆಯೆಂದಂತಾಯಿತು.

ಉಷಃಕಾಲದ ಹೊಸತನ

ವಾಸ್ತವಿಕವಾದ ಉಷಃಕಾಲಕ್ಕಿಂತ ಭಿನ್ನವಾದ ಉಷಃಕಾಲ ಬರಲಿರುವುದೆಂದು ತಿಳಿಯಿತು. ಮುಂಬರುವ ಉಷಃಕಾಲವು ಭಿನ್ನವಷ್ಟೇ ಅಲ್ಲ. ಅದು ಸುರಮ್ಯವೂ ಆಗಿದೆ. ಸಾಧಾರಣ ಉಷಃಕಾಲವು ಇಂದಿನವರೆಗಿರುವ ನಾಗರಿಕತೆಯನ್ನು ಒದಗಿಸಲಿರುವುದೆಂದು ತಿಳಿಕೊಳ್ಳಲಿಕ್ಕೆ ಅಡ್ಡಿ ತೋರುವುದಿಲ್ಲ. ಇಂದಿನವರೆಗಿನ ನಾಗರಿಕತೆಗೆ ಬುದ್ಧಿ ಶಕ್ತಿಯೇ ಮುಖ್ಯಧಾರವಾಗಿತ್ತು. ಅದು ಜಡ ಮತ್ತು ಪ್ರಾಣಶಕ್ತಿಯೊಡನೆ ಮಾತ್ರ ವ್ಯವಹರಿಸುವಂಥದು. ಅದರಿಂದ ಜಗತ್ತಿನ ನಾಗರಿತೆಯ ಮಟ್ಟವು ಎಲ್ಲಿಗೆ ಬಂತೆಂಬುದು ಎಲ್ಲರಿಗೂ ತಿಳಿಯುವಂತಿದೆ. ಬುದ್ಧಿಶಕಕ್ತಿಯ ಪ್ರಾಮುಖ್ಯತೆಯಲ್ಲಿ ಮಾನವೀಯತೆಯು ಸಾಕಷ್ಟು ಅರಳಿತು.

“ಹೊಸ ರಾಜ್ಯವೊಂದು ಆಗಮಿಸುತ್ತಿದೆ. ಅದು ಆಧ್ಯಾತ್ಮಿಕತೆಯ ರಾಜ್ಯ. ಮಾನವೀಯತೆಯ ನಂತರ ದೈವಿಕತೆಯ ಆಗಮನ.”- ಶ್ರೀ ತಾಯಿಯವರು.

ಹೊಸ ರಾಜ್ಯ ಆಗಮಿಸಬಹುದು. ಆದರೆ ಈಗಲೇ ಆಗಮಿಸಲಿದೆಯೆನ್ನುವುದಕ್ಕೆ ಆಧಾರವೇನು? ಜಗತ್ತಿನಲ್ಲಿ ಭಗವಲ್ಲಿಲೆಯ ಕ್ರೀಡಾ ವಿಧಾನವನ್ನು ಬದಲಿಸುವುದಕ್ಕೆ ಈಗ ಭಗವದಾದೇಶವಾಗಿದೆಯೆಂದು ಶ್ರೀ ಅರವಿಂದರು ಸ್ಪಷ್ಟವಾಗಿ ಹೇಳುತ್ತಾರೆ. ಹಳೆಯ ರಾಜ್ಯದ ಮಾನವೀಯತೆಯ ಕಾಲಕ್ಕೆ ನಾವೆಲ್ಲರೂ ಬಹುತರವಾಗಿ ನಮ್ಮಷ್ಟಕ್ಕೆ ಇಲ್ಲವೆ, ನಮ್ಮ ಮನೆವಾರ್ತೆಯ ಮಟ್ಟಿಗೆ ಜೀವನವನ್ನು ನಡೆಯಿಸಿದೆವು. ಬಹಳವಾದರೆ ಜನಾಂಗ ಅಥವಾ ದೇಶದ ವ್ಯಾಪ್ತಿಯವರೆಗೆ ನಮ್ಮ ಜೀವನ ವಿಸ್ತಾರಗೊಂಡಿತು. ಈ ನಮ್ಮ ಜೀವನವಿಸ್ತಾರವು ಹೊಸ ರಾಜ್ಯಾಗಮನದ ಕಾಲಕ್ಕೆ ಅಷ್ಟೇ ಉಳಿಯಲಾರದು. ಉಳಿಯಬಾರದು. ನಮ್ಮ ಜೀವನ ಸಂಬಂಧವು ಇನ್ನು ವ್ಯಕ್ತಿ, ಕುಟುಂಬ, ಜನಾಂಗಗಳನ್ನು ದಾಟಿ ಮಾನವ ಕುಲಕ್ಕೆ ಸಂಬಂಧಪಟ್ಟುದಾಗಿರಬೇಕು. ಈ ವಿಷಯವು ಗಂಡಸರಿಗಷ್ಟೇ ಸೇರಿದ್ದಲ್ಲ. ಹೆಂಗಸರು ಸಹ ವಿಚಾರ ಮಾಡುವಂಥ ವಿಷಯವಾಗಿದೆ. ಮಗಳು, ಸೊಸೆ, ತಾಯಿಯ ರೂಪ ಧರಿಸಿ, ಜಗತ್ತಿನ ವಿವಿಧ ಹೊಣೆಯನ್ನು ಹೊತ್ತು ನಿಂತ ಗರತಿಯು ನಾಳೆ, ಅಂದರೆ ದೈವಿಕತೆಯ ಆಗಮನದ ಕಾಲಕ್ಕೆ ದಿವ್ಯ ಜನನಿಯ ಪಾತ್ರ ವಹಿಸಬೇಕಾಗುತ್ತದೆ. ಸಾವಿನ ಸೆರೆಮನೆಯಲ್ಲಿ ಜೀವಿಸುತ್ತಿರುವ ಮಾನವನನ್ನು ಅಮರಜೀವಿಯನ್ನಾಗಿಸುವ ಸಾವಿತ್ರಿಯ ಪಾತ್ರವನ್ನು ನಾಳೆ ನಮ್ಮ ಗರತಿಯು ವಹಿಸದೆ ಗತ್ಯಂತರವೆ ಇಲ್ಲ. ದಿವ್ಯ ಜನನಿಯ ಕಲ್ಪನೆಯಾಗಲಿ, ಸಾವಿತ್ರಿಯ ತತ್ವಾರ್ಥವಾಗಲಿ ಲಕ್ಷ್ಯಕ್ಕೆ ಸ್ಪಷ್ಟವಾಗಿ ಬರಬೇಕಾದರೆ ದೈವಿಕತೆಯ ಸ್ವರೂಪವನ್ನು ರೇಖಿಸಿಬಿಡಬೇಕಾಗುತ್ತದೆ. ಅದ್ದರಿಂದ ದೈವಿಕತೆಯ ಸ್ವರೂಪವೇನು-ಎನ್ನುವುದು ಪ್ರಶ್ನೆಯಾಗಿ ನಿಲ್ಲುತ್ತದೆ.

ದೈವಿಕತೆಯ ಸ್ವರೂಪ

ಮಾನವತೆಯನ್ನು ಪಡೆಯುವುದಕ್ಕೆ ಪುರುಷನೇ ಕಾರಣನಾಗಿದ್ದಾನೆಂಬುದೂ, ಅವನೇ ಇಂದಿನ ನಾಗರಿಕತೆಗೆ ಆಧಾರನೆಂಬುದೂ ಎಲ್ಲರ ಸಾಧಾರಣ ವಿಚಾರಕ್ಕೆ ನಿಲುಕುವ ಮಾತು. ಆದರೆ, ಅಂಥ ಪುರುಷರನ್ನು ಹೆತ್ತವಳು ಹೆಂಗಸೆಂಬುದನ್ನೂ, ಅಂಥ ಅಪತ್ಯವು ಪ್ರಾಪ್ತವಾಗುವ ಮೊದಲು ಅದನ್ನು ಚಿಂತಿಸಿದವಳು ಸ್ತ್ರೀಯೆಂಬುದನ್ನೂ ನಾವು ಮರೆತರಾಗದು. ಇದೆಲ್ಲ ಅಬಲೆಯ ಕಾರ್ಯವಲ್ಲವೆಂಬುದು ಒಡೆಯನ ಸೆಡುವಿನ ಮಾತು. ಬಾಲ್ಯ ಯೌವನ ವೃದ್ಧಾಪ್ಯಗಳಲ್ಲಿ ತಂದೆ ಗಂಡ ಮಗಂದಿರ ಒಡೆತನದಲ್ಲಿ ತಲೆತಗ್ಗಿಸಿ ಬದುಕುವುದು ಮಾತ್ರ ಮಹಿಳೆಯರ ಕಾರ್ಯವೆಂದು ಕೈಹಿಡಿದ ಗಂಡನ ಬಂಡನುಡಿ. ಪುರುಷನು ಈ ವಿಷಯದಲ್ಲಿ ಹೆಣ್ಣು ಮಕ್ಕಳಿಗೆ ಅದೆಷ್ಟು ಕೊಂಕು ನುಡಿದು, ಭವಿಷತ್‌ಕಾರ್ಯವು ಸ್ತ್ರೀಗೆ ಅಸಾಧ್ಯವೆಂದೂ ಸಾಧಿಸಬಹುದು. ಆದರೇನು? ದೈವಿಕತೆಯನ್ನು ಹೊತ್ತ ಜೀವಿಯು ತಾಯಿ ಗರ್ಭದಿಂದಲೇ ಭೂಮಿಗೆ ಅವತರಿಸುವದಲ್ಲವೇ? ಇಷ್ಟರಿಂದಲೇ ಹೆಣ್ಣು ಮಕ್ಕಳು ಸಂತುಷ್ಟರಾಗಿ ಕುಳಿತರೆ ಸಾಗುವದಿಲ್ಲ. ಅಂಥ ಕಾರ್ಯಕ್ಕಿರುವ ಹೊಣೆಯನ್ನು ಅರಿತುಕೊಳ್ಳುವುದು ಮೊದಲ ಕೆಲಸವಾಗಿದೆ.

ಈ ಕಾರ್ಯವು ಸದ್ಯಕ್ಕೆ ಜಗತ್ತಿನ್ನೆಲ್ಲ ನಡೆಯುತ್ತಿರುವ ಮಹಾಕಾರ್ಯದಲ್ಲಿ ಅತಿ ಮಹತ್ವದ ಭಾಗವಾಗಿದೆಯೆಂಬುದನ್ನು ಬೇರೆ ಹೇಳಬೇಕಾಗಿಲ್ಲ. – ಶ್ರೀ ತಾಯಿಯವರು.

ಜಗತ್ತಿಗೆ ಸಂಬಂಧಿಸಿದ ಅತಿ ಮಹತ್ವದ ಈ ಕಾರ್ಯಭಾಗಕ್ಕೆ ರಾಜಕೀಯ ಚದುರಂಗವು ಸಹಾಯಕವಾಗಲಾರದು; ಸಾಮಾಜಿಕ ಸತ್ರವೂ ಸಂಪುಷ್ಟಿಯನ್ನುಂಟು ಮಾಡಲಾರದು. ನೈತಿಕ ಧಾರ್ಮಿಕ ಮಾರ್ಗಗಳು ಸಹ ಅಷ್ಟೊಂದು ಮುಂದುವರಿಕೆಗೆ ಕಾರಣವಾಗಲಾರವು- ಎನ್ನುವ ಅನುಭವವು ಈಗ ಎಲ್ಲರಿಗೂ ಸಾಕಷ್ಟು ಬಂದಿದೆ. ರಾಜಕೀಯ ಕಷೇತ್ರದಲ್ಲಿ ಜಗತ್ತಿ ಶಕ್ತಿಮೀರಿ ಕೃಷಿ ಮಾಡಿದರೂ ಫಲಪ್ರಾಪ್ತಿ ಆಗಲಿಲ್ಲ. ಸಾಮಾಜಿಕ ಭೂಮಿಯನ್ನು ತೋಡಿ ಕಣಿವೆಗಳನ್ನು ನಿರ್ಮಿಸಿದರೂ ಚಿನ್ನ ರತ್ನಗಳ ದರ್ಶನವಾಗಲಿಲ್ಲ. ನೈತಿಕ ಧಾರ್ಮಿಕ ಸಮಾಧಿಯಲ್ಲಿ ಅದೆಷ್ಟು ಮೂಗು ಹಿಡಿದುಕೊಂಡು ಕುಇತರೂ ಬಾಯಿತೆರೆಯಿತೇ ಹೊರತು ದೇವದರ್ಶನವೊತ್ತಟ್ಟಿಗೆ ಉಳಿಯಲಿ, ಅನ್ನ ದರ್ಶನ ಸಹ ಸರಿಯಾಗಿ ಆಗಲೊಲ್ಲದಾಗಿದೆ. ಹಾಗಾದರೆ ಅದಕ್ಕೇನು ದಾರಿ? ದೈವಿಕತೆಯ ಆಗಮನವನ್ನು ಸೂಚಿಸಿದವರೇ ಅದರ ಉಪಾಯವನ್ನೂ ಸೂಚಿಸಿದ್ದು ಏನೆಂದರೆ-

“ಮಾನವನಲ್ಲಿ ನವಪ್ರಶ್ನೆಯನ್ನು ಸೃಷ್ಟಿಸುವ ಹೊಸದೊಂದು ಆಧ್ಯಾತ್ಮಿಕ ಪ್ರವಾಹವು ಮಾತ್ರ, ಅಂದರೆ ಒಂದು ನವೀನ ಆಧ್ಯಾತ್ಮಿಕ ಪ್ರಕಾಶವು ಮಾತ್ರ, ಇಲ್ಲಿಯವರೆಗೆ ಅಜ್ಞಾತವಾಗಿರುವ ಅದೊಂದು ದೈವೀಶಕ್ತಿಯ ಆವಿರ್ಭಾವ ಮಾತ್ರ, ದೇವನ ಬಗ್ಗೆ ಅದೊಂದು ಕಲ್ಪನೆ ಮಾತ್ರ, ನಮಗಿಲ್ಲಿ ಅಪರಿಚಿತವಗಿರುವ ಒಂದು ನವರೂಪ ದರ್ಶನ ಮಾತ್ರ ಸಾಧಕರ ಮಾರ್ಗವನ್ನು ಅಡ್ಡಗಟ್ಟುವ ಅನಂತ ಕಷ್ಟಗಳ ರಾಶಿಯನ್ನು ದಾಟಿ ಮುಂದುವರಿಯಬಹುದಾಗಿದೆ.”

ಈ ಉಪಾಯದಿಂದ ಇಷ್ಟಾರ್ಥವನ್ನು ಸಿದ್ಧಪಡಿಸಿಕೊಳ್ಳಬಹುದು. ಆದರೆ ಆ ಇಷ್ಠಾರ್ಥದ ಸಪಷ್ಟಸ್ವರೂಪವನ್ನು ಮೊದಲಿಗೆ ಅರಿಯಬೇಕು. ಈಗ ಜಗತ್ತಿನ ಪರಮಾವಧಿ ಪರಿಪೂರ್ಣತೆಗೆ ಮನುಷ್ಯನೇ ಉದಾಹರಣೆ. ಮನುಷ್ಯನಿಗಿಂತ ಮೊದಲು ಮಂಗನು ಜಗತ್ತಿನ ಪರಮಾವಧಿ ಪರಿಪೂರ್ಣತೆ. ಅದರಲ್ಲಿಯೇ ನಾವು ದೈವೀ ಪ್ರಕಟಣೆಯನ್ನು ಹೆಚ್ಚು ಪ್ರಮಾಣದಲ್ಲಿ ಕಾಣಬಹುದಾಗಿತ್ತು. ಮಂಗನ ತರುವಾಯ ಮನುಷ್ಯ ಪ್ರಕಟನೆಯ ಸಂಕ್ರಾಂತಿ ಕಾಲವು ಬಂದಿತು. ಮಂಗನ ಪರಿಪೂರ್ಣತೆಯ ಅತ್ಯುಚ್ಚ ಕುರುಹುಗಳೆಂದರೆ ಚೈತನ್ಯ ಹಾಗೂ ದೈಹಿಕ ಸಾಮರ್ಥ್ಯ, ಮಂಗನು ಮಾರ್ಪಾಡು ಹೊಂದಿ ಮನುಷ್ಯನಾಗಬೇಕಾದರೆ, ತನ್ನ ಅಚ್ಯುತ್ತ ಕುರುಹುಗಳಾದ ಚೈತನ್ಯ, ದೈಹಿಕ ಸಾಮರ್ಥ್ಯಗಳನ್ನು ಕಳಕೊಂಡು, ಮನುಷ್ಯನಾಗಿ ಮಾರ್ಪಟ್ಟು ಬುದ್ಧಿಯನ್ನೂ ತಾರ್ಕಿಕ ಸಂಯೋಜಕ ಹಾಗೂ ಕಲ್ಪಕಶಕ್ತಿಯನ್ನೂ ಪಡೆಯಬೇಕಾಯಿತು. ಆದ್ದರಿಂದ ಮನುಷ್ಯನೆಂದರೆ, ಮಂಗನ ಮಾರ್ಪಾಡೇ ಆಗಿದ್ದರೂ ಮಂಗನಷ್ಟು ಚೈತನ್ಯವಾಗಲಿ ದೈಹಿಕ ಸಾಮರ್ಥ್ಯವಾಗಲಿ ಆತನಲ್ಲಿ ಉಳಿದಿಲ್ಲ. ಅವನು ಅತಿಶಯವಾದ ಮಾನಸಿಕ ಸಾಮರ್ಥ್ಯವನ್ನು ಮಾತ್ರ ಪಡೆದನು. ಅದರಿಂದಲೇ ಮನುಷ್ಯನು ಅನೇಕ ಪ್ರಯೋಜನಗಳನ್ನೂ ಅನುಕೂಲತೆಗಳನ್ನೂ ನಿರ್ಮಿಸಿಕೊಂಡು ವೈಯಕ್ತಿಕ ದೇವನಾಗಿ ಬಿಟ್ಟಿದ್ದಾನೆ. ಮಂಗನಿಂದ ಮನುಷ್ಯನಾಗುವ ಒಂದು ಸಂಕ್ರಾಂತಿ ಕಾಲವು ಹಿಂದಕ್ಕೆ ಬಂದಿದ್ದಂತೆ ಮನುಷ್ಯನಿಂದ ಅತಿಮಾನವನಾಗುವ ಇನ್ನೊಂದು ಸಂಕ್ರಾಂತಿ ಕಾಲವು ಇಂದು ಪ್ರಾಪ್ತವಾಗಿದೆ. ಮಂಗನು ಮಾರ್ಪಟ್ಟು ಮನುಷ್ಯನಾದಂತೆ ಮನುಷ್ಯನು ಮಾರ್ಪಟ್ಟು ಅತಿಮಾನವನಾಗಬೇಕಾಗಿದೆ. ಮಂಗನ ಮಾರ್ಪಡಿಗೆ ಅದರ ಚೈತನ್ಯ-ದೈಹಿಕ ಸಾಮರ್ಥ್ಯಗಳು ಇಲ್ಲವಾದಂತೆ, ಮನುಷ್ಯನ ಮಾರ್ಪಾಡಿಗೆ ಆತನ ಅತಿಶಯವಾದ ಮಾನಸಿಕ ಸಾಮರ್ಥ್ಯವು ಇಲ್ಲದಾಗುವದು ಅನಿವಾರ್ಯವಾಗಿದೆ. ಅಲ್ಲದೆ, ಮಾರ್ಪಾಡು ಹೊಂದಿ ಮನುಷ್ಯನಾಗುವಾಗ ಅವನಿಗೆ ಅತಿಶಯವಾದ ಮಾನಸಿಕ ಸಾಮರ್ಥ್ಯವು ಪ್ರಾಪ್ತವಾದಂತೆ, ಮನುಷ್ಯನು ಮಾರ್ಪಾಡು ಹೊಂದಿ ಅತಿಮಾನನಾಗುವಾಗ ಅವನಿಗೆ ಅಂರ್ಜ್ಞಾನ ಶಕ್ತಿಯು ಪ್ರಾಪ್ತವಾಗಬೇಕಾಗಿದೆ. ಮಂಗನ ಅವಸ್ಥೆಯಲ್ಲಿದ್ದರೂ ಕೆಲವು ಪ್ರಕಾರದ ಮಂಗಗಳಿಗೆ ಬುದ್ದಿಯ ಸುಳುಹು ಹೊಳಹು ದೊರಕಿದ್ದಂತೆ, ಮನುಷ್ಯಾವಸ್ಥೆಯಲ್ಲಿದ್ದರೂ ಕೆಲವು ವರ್ಗದ ಮನುಷ್ಯರಿಗೆ ಅಂತರ್ಜ್ಞಾನದ ಸುಳುಹು ಹೊಳಹು ಪ್ರಾಪ್ತವಾಗಿರುವುದನ್ನು ಕಾಣುವೆವು. ಯಾವುದು ಇದುವರೆಗೆ ಅಲ್ಲಲ್ಲಿ ಆಗೀಗ ಪ್ರಕಟವಾಗುತ್ತ ಕೇವಲ ಕೆಲವು ಜೀವಿಗಳ ಭಾಗ್ಯವಾಗಿದ್ದಿತೋ ಅದು ಇನ್ನು ಮುಂದೆ ಆಗಾಮೀ ಜೀವಜಾತಿಯ ಕೇಂದ್ರ ಲಕ್ಷಣವಾಗಿ ಪರಿಣಮಿಸುವುದು.

ಅಂತರ್ಜ್ಞಾನವೆಂದರೇನು?

ಶ್ರೀ ತಾಯಿಯವರು – “ಅಂತರಂಗದ ದೈವೀಜೀವನದ ಪ್ರತ್ಯಕ್ಷ ಅನುಭವವೇ ಅಂತರ್ಜ್ಞಾನ” ಎಂದಿದ್ದಾರೆ. ನಮಗೆ ತಿಳಿದಿರುವ ಉದಾಹರಣೆಯಿಂದ ಅಂತರ್ಜ್ಞಾನದ ಪರಿಚಯ ಮಾಡಿಕೊಡುವದಾದರೆ, ಸಂತೆಯಲ್ಲಿ ದಶಸಾವಿರ ಜನರು ನೆರೆದಿರುತ್ತಾರೆ. ಅಷ್ಟು ಜನರೆಲ್ಲರೂ ಎರಡು ಪಾತ್ರಗಳನ್ನು ಅಲ್ಲಿ ನಿರ್ವಹಿಸುತ್ತಾರೆ. ಗ್ರಾಹಕ-ವ್ಯಾಪಾರಿ ಈ ಎರಡೇ ಹೆಸರಿನಲ್ಲಿ ಅವರೆಲ್ಲರನ್ನೂ ವಿಭಾಗಿಸಬಹುದಾಗಿದೆ. ಸಂತೆಯ ದಶಸಾವಿರ ಜನರೆಲ್ಲರು ನಡೆಸಿದ ಮಾತಿನ ಗಲಬಿಲಿಯಲ್ಲಿ ಗಿರಾಕಿಯ ಮಾತೊಂದೇ ವ್ಯಾಪಾರಿಗೆ ಕೇಳಿಸುವದು. ವ್ಯಾಪಾರಿಯ ಮಾತಲ್ಲದೆ ಇನ್ನಾರ ಮಾತೂ ಗಿರಾಕಿಗೆ ಕೇಳಿಸದು. ಈ ಅವಸ್ಥೆಯಲ್ಲಿ ಗಿರಾಕಿ ವ್ಯಾಪಾರಿಗಳು ಇನ್ನುಳಿದ ಧ್ವನಿಶಬ್ದಗಳನ್ನು ಅಲಕ್ಷಿಸಿ, ತಮಗೆಗೆ ಸಂಬಂಧಿಸಿದ ವ್ಯಾಪಾರಿ-ಗಿರಾಕಿಗಳ ನುಡಿಗೆ ಲಕ್ಷ್ಯವನ್ನು ಕೇಂದ್ರೀಕರಿಸಿದರೆ ಕೇಳಿಸುವುದೇ ಅಂತರ್ಜ್ಞಾನವೆನ್ನಬಹುದು. ಮ. ಗಾಂಧಿಯವರು ವಿಶೇಷ ಪ್ರಸಂಗದಲ್ಲಿ ಅಂತರ್ಜ್ಞಾನದಿಂದಲೇ ತಮ್ಮ ವ್ಯವಹಾರವನ್ನು ಸಾಗಿಸುತ್ತಿದ್ದರು. ಆದ್ದರಿಂದಲೇ ಅವರ ಮಾತಿಗೆ ಪ್ರತಿಹೇಳಲಿಕ್ಕೆ ಯಾರೂ ಸಮರ್ಥರಾಗಲಿಲ್ಲ. ಅವರ ಕೆಲಸಕ್ಕೆ ಪ್ರತಿನುಡಿಯುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ಅಂತರ್ಜ್ಞಾನದಿಂದ ಬರುವ ವಾಣಿಯಂತೆ ನಡೆಯಬಲ್ಲವರೇ ಅದನ್ನು ಕೇಳುವ ಶಕ್ತಿಯನ್ನು ಬೆಳೆಸಿಕೊಳ್ಳಬಲ್ಲರು. ಇಲ್ಲದಿದ್ದರೆ ಅದು ಕೇಳಿಸುವುದೂ ಕಟ್ಟಾಗಿಬಿಡಬಹುದು. ಅಲ್ಲದೆ ಯಾವನು ಈ ವರೆಗಿನ ಅತಿಶಯವಾದ ತನ್ನ ಮಾನಸಿಕ ಸಾಮರ್ಥ್ಯದಿಂದ ಇನ್ನು ಮುಂದಿನ ಪ್ರಗತಿ ಸಾಧ್ಯವಿಲ್ಲವೆಂದೂ, ಆ ಅಂತರಂಗದ ಮಹಾಶಕ್ತಿಯನ್ನು ಉದ್ಘಾಟಿಸುತ್ತ ಪ್ರಕಾಶಪಡಿಸುತ್ತ ಅದನನು ಕಾರ್ಯೋನ್ಮುಖಗೊಳಿಸುವುದೇ ಇನ್ನು ಮುಂದಿನ ಮಹಾಕಾರ್ಯವಾಗಿದೆಯೆಂದೂ ದೈರ್ಯದಿಂದ ಯಾವಾಗ ಘೋಷಿಸುವನೋ ಆಗ ಅತಿಮಾನವತೆಯೆಡೆಗೆ ಆತನು ಅತಿ ಸುಲಭವಾಗಿ ಸಾಗುವನು.

ಮಾನವತೆಯಲ್ಲಿ ಗಳಿಸಿದ್ದರ ಪ್ರಯೋಜನ

ಮಾನವನು ತನ್ನ ಅತಿಶಯವಾದ ಬುದ್ಧಿ ಸಾಮರ್ಥ್ಯದಿಂದ ನಿರ್ಮಿಸಿಕೊಂಡ ವೇದಾಂತ, ಕಲೆ, ಭೌತವಿಜ್ಞಾನವೇ ಮೊದಲಾದವುಗಳು ಅತಿಮಾನವನಿಗೆ ಯಾವ ಪ್ರಯೋಜನಕ್ಕೆ ಬೇಕಾಗುವವು? ಈ ಮಹಾಪ್ರಶ್ನೆಗೆ ಉತ್ತರವೀಯುವುದಕ್ಕೆ ಶ್ರೀ ತಾಯಿಯವರೇ ಸಮರ್ಥರು. ಅವರು ಹೇಳುವುದೇನೆಂದರೆ-

“ಅವೆಲ್ಲವೂ ಇನ್ನು ಮುಂದೆ ಮನಃಪ್ರಾಣಗಳ ಮಟ್ಟಿಗೆ ಮರ್ಯಾದಿತವಾದ ಚಟುವಟಿಕೆಗಳಾಗದೆ ಮನಃಪ್ರಾಣಗಳ ಹಿಂದಿರುವ ಮಹತ್ತರ ಸತ್ಯದ ಶೋಧಗೆಯ್ಯುವುದಕ್ಕೂ, ನಮ್ಮ ಮಾನವೀಯ ಜೀವನದಲ್ಲಿ ಆ ಹೆಚ್ಚಿನ ಶಕ್ತಿಯ ಆವಾಹನಗೈಯ್ಯುವದಕ್ಕೂ ಸಾಧನಗಳಾಗುವವು. ಮತ್ತೀ ಶೋಧವೆಂದರೆ ನಮ್ಮೊಳಗಿನ ಅತಿಶ್ರೇಷ್ಠ ತತ್ವದ ನಮ್ಮ ಅಂತರಾತ್ಮನ, ನಮ್ಮ ದೈವೀ ಸ್ವಭಾವದ ಶೋಧವೇ ಆಗಿದೆ.”

ಅತಿಮಾನವನ ಜನನಿ

ಗರತಿಯು ಮಾನವನ ತಾಯಿಯಾಗಿ ಜೋಗುಳವಾಡಿದಳು. ಮಗುಗಳನ್ನೆತ್ತಿ ಲಲ್ಲೆಗೈದಳು. ಅಕ್ಕತಂಗಿಯರಿಗೆ ಸಕ್ಕರೆಯಾದಳು. ನಲ್ಲನಿಗೆ ಒಲವಿನ ಸತಿಯಾದಳು. ಸೊಸೆಗೆ ಅತ್ತೆಯೂ ಆದಳು. ಸಂಸಾರದ ರಂಗಭೂಮಿಯ ಮೇಲೆ ನಿಂತು ತನ್ನನ್ನು ತಾನು ಮರೆತು, ತನ್ನವರೆಂಬುದನ್ನು ಅರಿಯದೆ ಬೈದಳು, ಝಂಕಿಸಿದಳು, ಪ್ರತಿಭಟಿಸಿದಳು, ಕೊಲ್ಲಿಸಿದಳು, ಕೊಂದಳು. ಇದೆಲ್ಲವೂ ಮಾನವತೆಯಲ್ಲಿ ಗರತಿ ನಡೆಯಿಸಿದ ಲೀಲೆಯಾಯಿತು. ಲೀಲಾನಾಯಕನ ಲೀಲೆಯಲ್ಲಿ ಮನಃಪೂರ್ವಕವಾಗಿ ಅಭಿನಯಿಸಿ ‘ಭಲೆ’ಯೆನಿಸಿಕೊಂಡಳು. ಆದರೆ ಆ ಲೀಲೆಗೆ ಕೆಳಪ್ರಕೃತಿಯಲ್ಲಿ ನಿಂತ ತಿಳುವಳಿಕೆಯೇ ಆಧಾರವಾಗಿತ್ತು. ಇನ್ನು ಮಾನವತೆಯು ದೈವಿಕತೆಯಲ್ಲಿ ರೂಪಾಂತರ ಹೊಂದಬೇಕಾಗಿರುವ ಕಾಲವು ಸನ್ನಿಹತವಾಯಿತು. ಆ ದೈವಿಕತೆಯಲ್ಲಿಯ ಅರಿವು ತನ್ನಲ್ಲಿ ಸರ್ವವೂ ಸರ್ವತ್ರದಲ್ಲಿ ತಾನೂ ಎಂಬುದು ಅಳವಡಬೇಕಾಗಿದೆ. ಅದಕ್ಕೂಮೊದಲು ತನ್ನತನದ ಅರಿವು ಅಂಗವಿಸಬೇಕಾಗಿದೆ. ಶರೀರ ಪ್ರಾಣ ಮನಸ್ಸುಗಳೇ ತಾನೆಂಬ ಹುಸಿಯರಿವು ಹಿಂಗಿ, ಅವುಗಳನ್ನು ಧರಿಸಿದ ಅಂತರಾತ್ಮವು ತಾನೆಂಬ ನಿಜವಾದ ಅರಿವು ಅರಳಬೇಕು. ಆಗ ಮರೆತ ಮಾನವತೆಯು ಅರಿತ ಶರಣತನದ ಮೈದಾಳವದು. “ಉಂಬುವ ಬಟ್ಟಲು ಬೇರೆ ಕಂಚಲ್ಲ. ಕಾಂಬುವ ಕನ್ನಡಿ ಬೇರೆ ಕಂಚಲ್ಲ”ವಾದರೂ ಅವುಗಳ ಪರಿಯೇ ಬೇರೆಯಾಗಿರುವದು. ಅಂತರಾತ್ಮನ ಅರುಹಿನೊಡನೆ ಜೀವನ ನಡೆಯಿಸುವವರಿಗೆ, ಅಂತರ್ಜ್ಞಾನವು ಸಮೀಪಿಸುವುದೆಂದೂ, ಅಂತರ್ವಾಣಿಯು ಸುಲಭವಾಗುವುದೆಂದೂ ತಿಳಿದಿರುವೆವು. ಅಂತ ಜೀವವು ಅತಿ ಮಾನವತೆಯ ನಿರಂತರ ಮನನದಿಂದ ಅದನ್ನು ಪಡೆಯಬಲ್ಲ ಪ್ರಕೃತಿಯಾದೀತು; ಅಂಥ ಪಿಂಡವನ್ನು ಧರಿಸಬಲ್ಲ ದಿವ್ಯ ಗರ್ಭವಾದೀತು. ಆ ಗರ್ಭದಿಂದ ಅತಿಮಾನವನು ಜನ್ಮವೆತ್ತಿಯಾನು. ಗರತಿಯು ಅತಿಮಾನವನ ತಾಯಿಯಾದಾಳು. ಆಗ ಗರತಿಯ ಹಾಡು ದೇವಶಿಶುವಿನ ಜೋಗುಳ ಗೀತವಾದೀತು. ಗರತಿಯ ಬಾಳು ದೇವಜನ್ಮದ ಲೀಲೆಯಲ್ಲಿ ಆನಂದಪುಷ್ಪಹಾರವಾಗಿ ಭಾಗಿಯಾದೀತು. ಅಂಥ ಕಾಲವು ಬೇಗನೆ ಬರಲಿದೆಯೆನ್ನುವ ಮಾತು ಕೈಗೂಡಿಬರಲಿ.

ಭಾರತದ ಕಾಣಿಕೆ

ಕೊನೆಯದಾಗಿ ಶ್ರೀ ಅರವಿಂದ ಭಗವಾನರ ಒಂದು ಸಂದೇಶವನ್ನು ವಿವರಿಸಬೇಕಾಗಿದೆ.- “ಜಗತ್ತಿಗೆ ತನ್ನ ಅಧ್ಯಾತ್ಮಕದ ಕಾಣಿಕೆಯನ್ನು ಭಾರತವು ಈಗಾಗಲೇ ಕೊಡಲಾರಂಭಿಸಿದೆ. ಭಾರತದ ಆಧ್ಯಾತ್ಮ ತತ್ವವು ಹೆಚ್ಚಿನ ಪ್ರಮಾಣದಲ್ಲಿ ಯುರೋಪು-ಅಮೆರಿಕಗಳಲ್ಲಿ ಪ್ರವೇಶಿಸುತ್ತಲಿದೆ. ಅದರ ಗತಿ ಇನ್ನೂ ತೀವ್ರವಾಗುವದು. ಸದ್ಯದ ಆಪತ್ಕಾಲದಲ್ಲಿ ಹೆಚ್ಚು ಹೆಚ್ಚು ಜನರ ದೃಷ್ಟಿಗಳು ಆಸೆಗಣ್ಣಿನಿಂದ ಭಾರತದ ಕಡೆಗೆ ನೋಡಹತ್ತಿವೆ. ಇಲ್ಲಿ ಕೂಡ ಉತ್ಕ್ರಾಂತಿಯು ಆಗಬೇಕಾದರೆ ಆಧ್ಯಾತ್ಮವೃತ್ತಿಯ ಮತ್ತು ಅಂತಃಪ್ರಜ್ಞೆಯ ವಿಕಾಸದ ದಾರಿಯಿಂದಲೇ ಅದು ಆಗಬೇಕಾದೀತು. ಈ ಉಪಕ್ರಮವೂ ಭಾರತದಿಂದಲೇ ಆಗಬಲ್ಲದು. ಈ ಉಪಕ್ರಮದ ವ್ಯಾಪ್ತಿಯು ಜಗದಗಲವಾಗಬೇಕಿದ್ದರೂ ಅದರ ಶಕ್ತಿ ಕೇಂದ್ರವು ಮಾತ್ರ ಭಾರತದಲ್ಲಿಯೇ ನೆಲೆಸೀತು.”

ಈ ಸಂದೇಶವು ನಮ್ಮೆಲ್ಲರ ಜೀವನವನ್ನು ಪ್ರಚೋದಿಸಲಿ.

ಓಂ ಭಗವತೀ