ಹೆಣ್ಮಕ್ಕಳ ಹಾಡುಗಳೆಂದರೆ ಅಕ್ಷರಗಳಲ್ಲಿ ಸ್ವರಗಳಿದ್ದ ಹಾಗೆ. ಗಂಡಸರ ಹಾಡುಗಳು ವ್ಯಂಜನಾಕ್ಷರಗಳಿದ್ದಂತೆ. ಮಕ್ಕಳ ಹಾಡು ಅಯೋಗವಾಹ ಅಂದರೆ ಅಂಅಃ ಅಕ್ಷರಗಳಿದ್ದ ಹಾಗೆ. ಸ್ವರಗಳಿಗೆ ಸ್ವತಂತ್ರೋಚ್ಚಾರವಿದೆ. ವ್ಯಂಜನಗಳಿಗೆ ಸ್ವರ ಸೇರಿದಾಗಲೇ ಉಚ್ಛಾರಕ್ಕೆ ದಾರ ಯಾಗುತ್ತದೆ. ಸ್ವತಂತ್ರೋಚ್ಛಾರದ ಸ್ವರಗಳಾಗಿ ನಮ್ಮ ಗರತಿಯರ ಎದೆವಾಡು ಮಂತ್ರವಿದ್ದ ಹಾಗೆ. ಅಂತೆಯೇ ಅವು “ಸಂಸಾರವೇದ” ಅನಿಸಿವೆ. ಆಹಾಡುಗಳಲ್ಲಿ ದಿ. ಬೇಂದ್ರೆ ಅವರು ಸೌಜನ್ಯಸಿದ್ಧಿಯನ್ನು ಕಂಡಿದ್ದರಲ್ಲದೆ, ಅದನ್ನು ತಾವು ಅಪೇಕ್ಷಿಸಿದ್ದರು. ಅವರಿಗೆ ವಾಂಛಿತವಾದ ಐದು ಮಹತ್ತತ್ವಗಳಲ್ಲಿ ಸೌಜನ್ಯಸಿದ್ಧಿಯೂ ಒಂದಾಗಿದೆ. ಹೆಣ್ಣು ಮಕ್ಕಳ ಹಾಡುಗಳಿಗೆ “ಗೃಹಿಣಿ ಗೀತ” ಎಂದು ಹೆಸರಿಡಬೇಕೆಂದವರು, “ಗರತಿಯ ಹಾಡು” ಎಂದು ಕರದಿದ್ದಾರೆ. ಗೃಹಿಣಿ ಎಂಬ ಶಬ್ದಕ್ಕಿಂತ ಗರತಿ ಎಂಬ ಶಬ್ದದಲ್ಲಿ ಮಹತ್ತಾದ ಅರ್ಥವಿದೆ. ಅದೇ ಸೌಜನ್ಯ ಸಿದ್ಧಿ.

ಗರತಿಗೆ ಕೃಷ್ಣನನ್ನು ಕಾಣುವ ಹಂಬಲವು ಜೀವನದಲ್ಲೆಲ್ಲ ಇಂಬಾಗಿ ಹರಡಿದೆ.

ಕೃಷ್ಣ ಕೃಷ್ಣ ಎಂದು ಮತ್ತಬೀದಿಗಿ ಬಂದ
ಕೃಷ್ಣ ನಮಗೆಲ್ಲಿ ದೊರೆತಾನ | ಪರಿ |
ಎಷ್ಟು ದಿನ ಹೀಂಗ ಕಳೆಯಲೇ?

ವರ್ಷದ ಪ್ರತಿಯೊಂದು ದಿನ, ದಿನದ ಪ್ರತಿಯೊಂದು ನಿಮಿಷ ಕೃಷ್ಣನ ಸ್ಮರಣೆ ನಡೆಸುವುದನ್ನು ಬಿಟ್ಟವಳಲ್ಲ. ಆಕೆಗೆ ಕೃಷ್ಣ, ನಾರಾಯಣ, ಶಿವ, ಹರಿ ಎಲ್ಲಾ ಒಂದೇ. ಅದರಂತೆ ಬನದಮ್ಮ, ಮಾದೇವಿ, ಸತ್ತೆವ್ವ, ಜಕ್ಕವ್ವ ಎಲ್ಲಾ ಒಂದೇ. ಆಕೆಯು ನಂಬಿದ ದೈವತಕ್ಕೆ ಲಿಂಗಭೇದವಿಲ್ಲ. ಒಬ್ಬ ದೇವನ ವಿವಿಧರೂಪ ಕಾರ್ಯಗಳನ್ನು ಗಮನಿಸಿ ಕರೆದ ಹೆಸರುಗಳೇ ದೇವನಾಮಗಳಾಗಿವೆ.

ಮನೆಯ ಬಳಗದಲ್ಲೆಲ್ಲ ತಾಯ ಹಿರಿಮೆಯೇ ಹಿರಿಮೆ. ಸರದಾಳಿಯಲ್ಲಿರುವ ತಾಳಿಯೇ ಮಂಗಲಕರ, ಶುಭಕರ, ಸುಖಕರವಾಗಿರುವುದಲ್ಲದೆ, ಭೂಷಣ ಪ್ರದವೂ ಆಗಿದೆ. ತವರುಮನೆಯೆ ದೀಪಕ್ಕೆ ಇಡಿಯ ಬಳಗವೇ ಹಣತಿ, ಬತ್ತಿ, ಎಣ್ಣೆ ಆಗಿದ್ದರೆ, ತಾಯಿಯ ನಲುಮೆಯೇ ಆ ದೀಪದ ಜ್ಯೋತಿ. ತವರುಮನೆಯ ಆ ದೀಪಕ್ಕೆ ಹ್ತುತ ಬೆರಳು ಹಚ್ಚಿ ಶರಣೆನ್ನುವ ಕೃತಜ್ಞತೆ ಇನ್ನೆಲ್ಲಿ ಕಾಣಿಸಿಕ್ಕೀತು? ಕೃತಜ್ಞತೆಯೆ ಮಾನವನ ಹಿರಿಮೆಯನ್ನು ಅಳೆಯುವ ಅಳತೆಗೋಲು. ಅಂಥ ಕೃತಜ್ಞತೆಯನ್ನು ನಾವು ಗರತಿಯಲ್ಲಿ ಕಂಡಷ್ಟು ಇನ್ನಾರಲ್ಲಿಯೂ ಕಾಣಲಾರೆವು.

ತಾಯಿ ತನ್ನ ಸಂತಾನಕ್ಕೆ ಕಣ್ಣೆಂಜಲ ಕಾಡಿಗೆಹಚ್ಚಿ, ನಿತ್ಯವಾದುದನ್ನು ಸತ್ಯವಾದುದನ್ನು ಕಾಣುವ ದೃಷ್ಟಿ ಒದಗಿಸಿದ್ದಾಳೆ. ಅದರಂತೆ ಬಾಯೆಂಜಲ ವೀಳ್ಯೆವನ್ನು ಸಂತಾನ ವರ್ಗದ ಬಾಯ್ದೆರೆಗೆ ಸವರಿ ಕಂಡ ಸತ್ಯ ಕಂಡ ನಿತ್ಯಗಳನ್ನು ನಿಚ್ಚಳವಾಗಿ ಉಸುರುವ ಶಕ್ತಿಯನ್ನು ಎರೆದಿದ್ದಾಳೆ.

ತಂದೆತಾಯಿಗಳ ನೆನಹೆಂದರೆ ಗರತಿಗೆ ಹರಿಗಡಿಯದ ಜೀವರಸವೇ ಆಗಿದೆ. ತಂದೆಯನ್ನು ನೆನೆದರೆ ತಂಗೂಳೂ ಬಿಸಿಯಾಗುವುದೆಂದೂ ಗಂಗಾದೇವಿ ಹಡೆದವ್ವನ ನೆನೆದರೆ ಮಾಸಿದತಲೆ ಮಡಿಯಾಗುವುದೆಂದೂ, ಎದೆತಟ್ಟಿ ಹೇಳುತ್ತಾಳೆ. ತಾಯಿದ್ದರೆ ತವರು ಹೆಚ್ಚೆಂದೂ ತಂದೆಯಿದ್ದರೆ ಬಳಗ ಹೆಚ್ಚೆಂದೂ ಕೈಯೆತ್ತಿ ಸಾರುತ್ತಾಳೆ. ಹಡೆದವ್ವನ ಮೋರೆನೋಡಿ ಏನುಂಡರೂ ಮೊಲೆಹಾಲು ಉಂಡಂತೆ. ಅದೇ ಶಾವಿಗೆ ಸೈದಾನಗಳ ಊಟ; ಬಾಯಿಬೇಡಿದ್ದುಣ್ಣುವ ಭೋಜನ. ಅದಕ್ಕಾಗಿ ಗರತಿ ಹೃಯ ತುಂಬಿ ಹರಸುವದೇನಂದರೆ –

ಹಾಲುಂಡ ತವರೀಗಿ ಏನೆಂದು ಹಾಡಲೇ
ಹೊಳೆದಂಡಿಲಿರುವ ಕರಕೀಯ | ಕುಡಿಯಂಗ |
ಹಬ್ಬಲೆ ಅವರ ರಸಬಳ್ಳಿ ||

ಇದಕ್ಕಿಂತ ಮಿಗಿಲಾದ ಸೌಜನ್ಯ ಇನ್ನೇನಿದೆ?

ಗೆಳತಿಯರೊಂದಿಗೆ ವರತಿ ನೀರಿಗೆ ಹೋದಾಗ, ತಾಯಿಯನ್ನು ಕುರಿತ ಪ್ರಸಂಗಗಳು ನೆನಪಾಗುವವು. ಆ ನೆನಹು, ಕರುವನ್ನು ಕಂಡ ಆಕಳು ತೊರೆವು ಬಿಡುವಂತೆ, ಕೂಸನ್ನು ಕಂಡ ತಾಯಿಯ ಮೊಲೆಹಾಲು ವಾತ್ಸಲ್ಯದಿಂದ ಉಕ್ಕಿಬಂದಂತೆ ವರತಿನೀರಿನ ಸಲೆಲೆಯೆ ಪುಟಿದೆದ್ದು ಬರುತ್ತದೆಂದರೆ ಆಶ್ಚರ್ಯವೇನು?

ತಾಯ ಮನೆಯೇ ಕಾಶಿಕ್ಷೇತ್ರ ಗರತಿಗೆ. ತಾಯಿಯೇ ಕಾಶಿಲಿಂಗ. ಎಲ್ಲವೂ ಕಾಶಿಯೇ. ಕಾಶಿಲಿಂಗ ಅದೆಂಥದೋ ಕಂಡವರಾರು? ಆದರೆ ತವರು ಮನೆಯ ಕಾಶಿಯನ್ನು ಅಲ್ಲಿದ್ದ ಕಾಶಿಲಿಂಗವನ್ನು ಕಾಣುವುದು ಸುಲಭ ಹಾಗೂ ಸುಗಮ.

ಕಾಶೀಗಿ ಹೋಗಲಕ ಏಸೊಂದು ದಿನಬೇಕ
ತಾಸ್ಹೊತ್ತಿನ್ಹಾದಿ ತವರೂರ | ಮನಿಯಾಗ
ಕಾಶಿಕುಂತಾಳ ಹಡೆದವ್ವ ||

ಜಗಜ್ಜನನಿಯ ಪ್ರತಿನಿಧಿಯಾದ ಹಡೆದವ್ವನ ನೆನಪು ಅಡಿಗಡಿಗೆ ಆಗುತ್ತಿರುವುದೇ ಗರತಿಯ ಹಿರಿಮೆಗೆ ಸಾಕ್ಷಿ. “ಹಿಟ್ಟನ್ನೆ ಬೀಸುವಾಗ ರೊಟ್ಟೀನೆ ಮಾಡುವಾಗ ವಿಠಲ ವಿಠಲ ಅನಬಾರದೇ | ಮನಿಯಕೆಲಸದಾಗ ಅದು ಒಂದು ಕೆಲಸೆಂದು ಅನಬಾರದೇ?” ಅನ್ನುವಂತೆ ದಿನನಿತ್ಯದ ಮನೆಗೆಲಸಗಳನ್ನು ನಿರ್ವಹಿಸುತ್ತಿರುವಾಗ ಗರತಿಗೆ ತಾಯಿಯ ಕೂಹು ಫಕ್ಕನೆ ಕಣ್ಣೆದುರಿಗೆ ಬಂದು ಆನಂದಾಶ್ರುವನ್ನು ಸುರಿಸಹಚ್ಚುವುದುಂಟು. ಅಂಥ ಒಂದು ಪ್ರಸಂಗವನ್ನು ಕುರಿತು ಗರತಿ ಹಾಡಿದ್ದು ಹೇಗೆಂದರೆ –

ಆಕಳ ಕರುಬಂದು ಅಂಬ ಅಂಬಾ ಎಂದು
ತಮ್ಮವ್ವನ ಮೊಲೆಯ ನಲಿನಲಿದು | ಉಂಬಾಗ |
ನಮ್ಮವ್ವನ ಧ್ಯಾನ ನನಗಾಗಿ ||

ಒಬ್ಬಮಗಳು ತಾಯಿಯನ್ನು ಇಷ್ಟೊಂದು ನೆನೆಸುತ್ತಿರುವಾಗ, ಆರೆಂಟು ಜನ ಹೆಣ್ಣು, ಮಕ್ಕಲಿಗೆ ತಾಯಿಯಾದವಳು, ಅವರನ್ನೆಷ್ಟು ನೆನೆಸುತ್ತಿರಬಹುದು? ಆಕೆಯ ಜೀವ ಆರೆಂಟು ನಿಟ್ಟಿಗೆ ಅದೆಷ್ಟು ಎಳೆಯುತ್ತಿರಬಹುದು? ಅದಕ್ಕಾಗಿ ಅದೆಷ್ಟು ಕಣ್ಣೀರು ಸೂರೆಯಾಗುತ್ತಿರಬಹುದು? ಈ ಸಂಕಟವನ್ನು ಪರಿಹರಿಸುವ ಉಪಾಯವೊಂದು ಇರಲೇಬೇಕಲ್ಲವೇ? ಗರತಿ ಹೇಳುವ ಆ ಉಪಾಯ ಯಾವುದೆಂದರೆ-

ಹೆಣ್ಣು ಮಕ್ಕಳ ಕಳುಹಿ ಹೆಂಗಿದ್ದೆನಮ್ಮವ್ವ
ಹನ್ನೆರಡಂಕಣದ ಅರಮನೆ | ಗೋಡೆ ಮೇಲೆ
ನಮ್ಮಂಥ ರೂಪ ಬರಕೋಳೇ ||

“ಅವ್ವಾ! ಅತ್ತರೆ ಕರೆದರೆ ನಾವು ನಿನ್ನ ಹತ್ತಿರ ಇದ್ದಂತಾಗುವದೇ? ಬಂದಂತಾಗುವದೇ? ನೀನು ಹುಚ್ಚಿಯೇನೆ, ಮರುಳೆಯೇನೇ ಅವ್ವಾ? ಹನ್ನೆರಡು ಅಂಕಣದ ಗೋಡೆಗಳ ಮೇಲೆಲ್ಲ ನಿನ್ನ ಹೆಣ್ಣು ಮಕ್ಕಳ ಚಿತ್ರಗಳನ್ನು ಬರೆಸಿಡು. ಗೋಡೆಯ ಮೇಲಿನ ಆ ಚಿತ್ರಗಳನ್ನು ನೋಡಿ ಮರೆಯಲಿಕ್ಕಾಗುತ್ತದೆ.”

ಹೆಣ್ಣು ಮಕ್ಕಳ ದುಃಖ ಅದೆಂಥದಿರುತ್ತದೆಂಬುದು, ತಾಯಿಯನ್ನುಬಿಟ್ಟರೆ ಇನ್ನಾರಿಗೂ ತಿಳಿಯದು. ಅದು ಹುತ್ತದೊಳಗಿನ ಸರ್ಪವಿದ್ದಹಾಗೆ. ಅದರ ಉಬ್ಬೆಗವನ್ನು ನೆತ್ತಿಯ ಮೇಲಿರುವ ಶಿವಮಾತ್ರ ಬಲ್ಲ – ಎಂದು ಗರತಿ ಲೆಕ್ಕಹಾಕುತ್ತಾಳೆ.

ಇದೆಲ್ಲ ಹೆಣ್ಣು ಮಕ್ಕಳ ನಾಲ್ಕು ಅವತಾರಗಳಲ್ಲಿ ಮೊದಲನೆಯದಾದ ಮಗಳ ಅವತಾರವನ್ನು ಕುರಿತು ಹೇಳಿದಂತೆ, ಸೊಸೆ, ಹೆಂಡತಿ, ತಾಯಿ ಎಂಬ ಮೂರು ಅವತಾರಗಳನ್ನು ಕುರಿತು, ಪ್ರಾಸಂಗಿಕವಾಗಿ ಈ ಮೊದಲೇ ವಿವರಿಸಲಾಗಿದೆ. ಲೌಕಿಕ ಜೀವನದ ಯಥಾರ್ಥತೆಯನ್ನು ಯಥಾರ್ಥವಾಗಿ ಹೇಳಬಲ್ಲವಳು ಗರತಿಮಾತ್ರ. ಕುಟುಂಬ ಸಂಸ್ಥೆಯು ನಿಶ್ಚಯಾರ್ಧದಲ್ಲಿ ಒಂದ್ಗುವಂತೆ ನಡೆನುಡಿಗಳಿಂದ ಬೋಧಿಸುವ ಜಗದ್ಗುರುವಿನ ಸ್ಥಾನ ಗರತಿಗಲ್ಲದೆ ಇನ್ನಾರಿಗೂ ದಕ್ಕದು. ತಂದೆ ಸ್ಥೂಲ ಶರೀರ ಮಾತ್ರ. ತಾಯಿ ಒಳಗಿರುವ ಜೀವಸೂತ್ರ ತಾಯಿತಂದೆ ಅಂದರೆ ಉಮಾಪತಿ. ಮೂಲದಲ್ಲಿ ಸ್ವಯಂಭೂ ಎಂದೂರ ಸಾಂಬನೆಂದು ಮೊದಲೇ ಹೇಳಿದೆ.

ಜೀವನದಲ್ಲಿ ಬರುವ ಎಡರುತೊಡರು, ಭಯ ಸಂಕಟಗಳನ್ನು ಗರತಿ ಕಂಡ ಬಗೆ ಹೇಗೆಂದರೆ –

ಒಂದು ಬಂಡಿಲಿ ಕಲ್ಲು. ಒಂದು ಬಂಡಿಲಿ ಮುಳ್ಳು
ಹಿಂದಲ ಬಂಡೀಲಿ ರಣದುರಗಿ | ಕೂತುಕೊಂಡು
ಹೊಕ್ಕಲು ಕೊಣಬಿಗನರಮನೆಗೆ ||

ಇಂಥ ದೈತ್ಯ ಸಂಘಾತವನ್ನು ಕುಟುಂಬ ಸಂಸ್ಥೆಯ ಅಧ್ಯಕ್ಷಳಾದ ಗರತಿ; ತಿಳುವಳಿಕೆಯಿಂದ ತುಂಬಿದೆ ಹಾಗೂ ಸಜೀವವಾದ ಏಕತೆಯಿಂದ ಎದುರಿಸಿ ಗೆಲ್ಲಬಲ್ಲಳು. ಗೆಲುವೆನೆಂಬ ಭಾಷೆ ಹೊತ್ತ ಭಕ್ತಳು ಮಾತ್ರ ತನ್ನ ಹೊಣೆಕೆಯನ್ನು ಪೂರ್ಣಗೊಳಿಸಬಲ್ಲಳು. “ಗರತಿಯ ಹಾಡು” ಕುಟುಂಬ ಸಂಸ್ಥೆಗೆ ದಿನನಿತ್ಯದ ಪಾರಾಯಣಗೀತೆಯಾಗಿ ಮೊದಲಿನಂತೆ ಪ್ರಯೋಜನಕ್ಕೊಳಪಟ್ಟರೆ, ಸಂಸಾರವು ಅಸಾರವೆನಿಸದೆ ಸಂಸಾರವಾಗಿಯೇ ಪರಿಣಮಿಸಬಲ್ಲದೆಂದು ಆಶಿಸಲು ಅಡ್ಡಿಯಿಲ್ಲ.

ಓಂ! ಭಗವತೀ!!