ನನ್ನ ಆದರಣೀಯ ಸೋದರ – ಸಿಂಪಿ ಲಿಂಗಣ್ಣನವರಲ್ಲಿ ಅಂತಃಕರಣ ಪೂರ್ವಕ ವಂದನೆ.

ನಿಮ್ಮ ಅದ್ಭುತ ವಿವೇಚನೆ, ಪ್ರತಿಭೆ, ಪ್ರತಿಪಾದನೆ, ವಿಂಗಡಣೆ, ಸಂಶೋಧನೆ, ಸ್ಮರಣಶಕ್ತಿ, ಹಾಸ್ಯ ವಿಡಂಬನೆಗಳೊಡನೆ ವಿಜೃಂಭಿಸುವ ಸಮಕಾಲೀನ ಪ್ರಜ್ಞೆ, ಒಂದೊಂದು ಗಾದೆಯ ಪ್ರಸ್ತುತತೆ, ಅದರ ಶಾಸ್ತ್ರೀಯ ವೈಜ್ಞಾನಿಕ ಅರ್ಥವಿವರಣೆ, ನಿರೂಪಣೆ, ಭಾಷಾ ಶೈಲಿಯ ಬೆಡಗು ಬಿನ್ನಾಣ ಇವನ್ನೆಲ್ಲ ಮನದಂದು, ನಿಮ್ಮ ಈ ಅಪ್ರತಿಮ ಸೃಜನಶೀಲವಾದ, ಈ ಮನೋವೈಜ್ಞಾನಿಕ ವಿಶ್ಲೇಷಣಾತ್ಮಕ ಕೃತಿಗೆ ಕೌತುಕ ತಾಳಿದೆ.

“ಹೆಣ್ಣು ಕುಡಿಯುವ ನೀರು ಇದ್ದಂಗ, ಗಂಡು ಬಳಕೆಯ ನೀರು ಇದ್ದಂಗ. ಅಡಿಗೆಯ ಮಟ್ಟ ಸಾರಿನಲ್ಲಿ. ಆನೆ ತಿಂಬೋದು ಸೊಪ್ಪು, ಇರುವೆ ತಿಂಬೋದು ಸಕ್ರಿ. ಅತ್ತೆ ಮಾಗಿದ ಸೊಸೆ, ಸೊಸೆಯೆಂದರೆ ಮೊಳಕೆಯಂಥ ಅತ್ತೆ” ಇಂತಹ ಹೃದ್ಯವಾದ, ನವ್ಯವಾದ ಗಾದೆಗಲು ನಿಜವಾಗಿಯೂ ವೇದಕ್ಕೆ ಸಮಾನ.

ಕೆಲವು ಒತ್ತಿ ಬಿಚ್ಚುಮೊಗ್ಗೆ ಮಾಡಿದ ಗಾದೆಗಳು, ಅವುಗಳ ಪರಂಪರೆಯ ಅರ್ಥಪ್ರತೀತಿಗಳಿಗಾಗಿ ಶಾಸ್ತ್ರೀಯವಾಗಿ ಅಭ್ಯಸಿಸಬೇಕಾದ ಅಗತ್ಯವನ್ನು ಆಲೋಚಿಸಿದಾಗ ಅದು ಬೇಕೆನಿಸುತ್ತದೆ ಎಂಬ ಅಭಿಪ್ರಾಯಕ್ಕೆ ನಾನೂ ಬಂದಿದ್ದೇನೆ.

ವಿಫುಲ ವಿಭಾಗ ಸಾಕಷ್ಟು ವ್ಯಾಪಕವಾಗಿದೆ. ಶೃಂಗಾರ, ಹಾಸ್ಯ, ಸಮಾಜ ವಿಡಂಬನ, ಕೌಟುಂಬಿಕ ಹೀಗೆ ಕೆಲವು ವಿಭಜನೆ ಮಾಡಬಹುದಾಗಿತ್ತು.

ಭಾಷಾ ಬೆಡಗುಗಾರ ಎಂಬ ಬಿರುದು ಹೊತ್ತವರು ನೀವು. ಈ ಗಾದೆಯ ವೇದವನ್ನು ಕ್ರೋಢೀಕರಿಸಿದ ನೀವು ಇಂದಿನ ವೇದವ್ಯಾಸರು.

ಎನ್.ಕೆ. ಕುಲಕರ್ಣಿ,
ಧಾರವಾಡ