ಗಾದೆಗಳೆಂದರೆ ಅಧಿಕೃತ ನಾಣ್ಯಗಳು. ಕೊಡುಕೊಳ್ಳುವ ವ್ಯವಹಾರದಲ್ಲಿ ನಾಣ್ಯಗಳು ಅನಿವಾರ್ಯವಾದಂತೆ, ವಿಚಾರ-ವಿನಿಮಯ ವ್ಯವಹಾರದಲ್ಲಿ ಗಾದೆಗಳ ಅವಶ್ಯಕತೆಯಿದೆ. ಹತ್ತು ಮಾತನಾಡಿ ಹೊತ್ತು ಕಳೆಯುವುದಕ್ಕಿಂತ ಮುತ್ತಿನಂಥ ಒಂದು ಗಾದೆ ಮಾತು ಹೇಳಿ ವಾದವಿವಾದವನ್ನು ಪೂರ್ಣಗೊಳಿಸಬಹುದಾಗಿದೆ.

ಗಾದೆ ವ್ಯವಹಾರದ ಪರಮಾರ್ಥವಾಗಿದೆ. ಐಹಿಕ ಜೀವನೋತ್ಸಾಹವೇ ಗಾದೆಯ ಪರಮ ಅರ್ಥವೆನಿಸುತ್ತದೆ. ಸತ್ತವರಿಗಾಗಿಯೋ ಸಾಯುವವರಿಗಾಗಿಯೋ ನಿಷ್ಕಂಟಕ ದಾರಿ ಹೇಳದೆ, ಬದುಕಿದ್ದವರಿಗೆ, ಬದುಕಬೇಕೆನ್ನುವವರಿಗೆ ಉಪಯುಕ್ತವಾದ ಸಲಹೆ ನೀಡುವುದೇ ಅದರ ಧರ್ಮವಾಗಿದೆ. ಕಾಮವನ್ನು ಈಲುಮಾಡಿಕೊಂಡು ಮುಕ್ತನಾಗುವುದೇ ಅದರ ಫಲ; ಛಲ. ಅದು ದುಡಿದು ತಿನ್ನಲು ಬೋಧಿಸುತ್ತದೆ. “ಇಡಬೇಕು, ಇದ್ದುಣಬೇಕು”, “ದುಡ್ಡು ಬೇಕೆಂದರೆ ದುಡಿ”, ‘ದುಡಿತವು ದುಡ್ಡಿನ ತಾಯಿ’ – ಎಂಬ ಕಿವಿಮಾತು ಹೇಳುತ್ತದೆ. “ಬೇಡಿ ತಿನ್ನುವುದಕ್ಕಿಂತ ಕದ್ದು ತಿನ್ನುವುದು ಲೇಸಲ್ಲ”. ಬೇಡಿತಿನ್ನು ನೀಡಿದಷ್ಟು, ಮಾಡಿತಿನ್ನು ಬೇಡಿದಷ್ಟು ಎಂದು ಕಟ್ಟಪ್ಪಣೆ ಮಾಡುತ್ತದೆ. ಅಟ್ಟುಂಬವನ ಹೆಂಡತಿ, ಮೊಟ್ಟೆ ಹೊಡಿಯುವವ ಆಳು ಆಗಬಾರದೆಂದು ಗಾದೆಯ ಮತ. “ಬೊಗಳುವ ನಾಯಿ ಕಚ್ಚುವುದಿಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ” ಎಂಬ ನಾಮಗುಣದಂತೆ ನಾಯಕನ ಸ್ವಭಾವವನ್ನೂ ಬಿಚ್ಚಿಡುತ್ತದೆ.

ಕಾವ್ಯ ಸತ್ವಕ್ಕಿಂತ ವಿಚಾರಸತ್ತ್ವವೇ ಗಾದೆಗೆ ಮುಖ್ಯ. ಒಗಟು, ಒಡಗತೆಗಳು ಕಥಾಬೀಜದಂತಿದ್ದರೆ, ಗಾದೆ ಲೋಕೋಕ್ತಿಗಳು ಯಥಾರ್ಥವಾದ ವಿಚಾರ ಬೀಜದಂತಿವೆ. ಅಭ್ಯಾಸವಿಲ್ಲದೆ ಅಡಿಗೆ ಮಾಡತೊಡಗಿದರೆ ಕಿಪ್ಪಡಿಯಲ್ಲಿ ಕಿಡಿ ಬೀಳುವುದುಂಟು.

ಹೋರಿ ಬೇಕೆಂದರೆ ಆಕಳು ಸಾಕು,
ಹಾಲು
ಬೇಕೆಂದರೆ ಎಮ್ಮೆಯೇ ಬೇಕು
ಮಕ್ಕಳುಂಡರೆ
ಕೇಡಲ್ಲ, ಮಳೆ ಬಂದರೆ ಕೇಡಲ್ಲ
ಬಿತ್ತಿದ್ದು ಬೆಳಯುತ್ತದೆ
ಹತ್ತಿ ಬಿತ್ತಿ ಹಾಳಾದರು,
ಕಡಲೆ
ಬಿತ್ತಿ ಕಾಗೆಯನ್ನು ಕಾವಲಿಗಿಟ್ಟರು

ಮೊದಲಾದ ಅನುಭವಗಳು ಸತ್ತಮೇಲೆ ಸಿಗಬೇಕೆನ್ನುವ ಮೋಕ್ಷಕ್ಕಾಗಿ ಅಲ್ಲ, ಬಾಳ ಸಮಸ್ಯೆಗಳನ್ನು ಸುಗಮವಾಗಿ ಬಿಡಿಸಿ ಚಿಂತೆಗಳಿಂದ ದೂರವಿದ್ದು ಮುಕ್ತನಾಗುವ ಕ್ರಮವು ಗಾದೆಗೆ ಗೊತ್ತಿದೆ. “ಪಂಚದಶಿ”ಯನ್ನು ಬರೆದ ವಿದ್ಯಾರಣ್ಯರು “ವ್ಯವಹಾರ ಮಾಧವೀಯವನ್ನೂ ಬರೆದದ್ದೇಕೆ?” ಅನುಭಾವವು ಪರಮಾರ್ಥವೆನಿಸಿದರೆ, ಅನುಭವವು ಪರಮ ಅರ್ಥವೆನಿಸುವುದು. ಒಂದು ತನುಭಾವ, ಇನ್ನೊಂದು ಅನುಭಾವ, ನೆಲುವಿಗೆ ಜಿಗಿಯದವನು ಮುಗಿಲಿಗೆ ಜಿಗಿದಾನೇ? ತನುಭಾವವನ್ನು ಮೈಗೂಡಿಸಿಕೊಂಡವನೇ ಅನುಭಾವವನ್ನು ಅಳವಡಿಸಿಕೊಳ್ಳಬಲ್ಲನು. ಇಂದು ತಾನು ಹಾಕಿದ ಪಾತ್ರವನ್ನು ಅನುಸರಿಸಿ ಮಾತಾಡಬೇಕು, ಹಾಡಬೇಕು. ತಾನು ನಾಳೆ ಹಾಕುವ ಪಾತ್ರದ ಮಾತು – ಗೀತಗಳನ್ನು ಇಂದೇ ಹಾಡುತ್ತ ನಿಂತರೆ ಪ್ರೇಕ್ಷಕರು ನಗುವರು; ಸಾಕುಮಾಡೆಂದು ಚಪ್ಪಳಿಕ್ಕುವರು; ಕೊಟ್ಟಕೊನೆಗೆ ಪಾಷಾಣವೃಷ್ಟಿಯನ್ನು ಸುರಿಸಲೂ ಹಿಂದು – ಮುಂದು ನೋಡರು.

ಅಡಿಗೆ ಗಡ್ಡ ಬಂದರೆ ಆಚಾರ ಹೇಳಬಹುದೇ?”
ನಾರು ಉಟ್ಟವರೆಲ್ಲ ನಾರದ ಆಗಬಲ್ಲರೇ?”

ಆಚಾರ ಹೇಳುವುದಕ್ಕೆ ಗಡ್ಡೆ ಅನಿವಾರ್ಯವಲ್ಲ. ನಾರದಮುನಿಯಾಗಲಿಕ್ಕೆ ನಾರುಮಡಿಯೇ ಕಾರಣವಲ್ಲ. “ಕತ್ತೆ ಭತ್ತ ಹೊತ್ತರೆ ಅತ್ತೆ ಅಡಿಗೆ ಮಾಡುವಳೇ?”, “ಎಲೆ ಒಣಗಿದರೆ ಗಿಡಚಿಗಿಯಬಹುದು, ಬೇರು ಒಣಗಿದರೆ ಚಿಗಿಯಬಲ್ಲದೇ?”, “ಏಳಲಾರದ ಅಜ್ಜಿಗೆ ಚೇಳು ಕಡಿಯಿತು”, “ಊಟವಾದ ಬಳಿಕ ಜಾತಿ ಕೇಳಿದರು” ಇಂಥಗಾದೆಗಳಿಗೆ ಲೆಕ್ಕವಿಲ್ಲದ. ಅವು ತಮ್ಮವೇ ಆದ ನಿಶ್ಚಿತ ನೀತಿಯನ್ನು ನಿಶ್ಚಿತವಾಗಿ ಹೇಳಿ ಎತ್ತಿಹಿಡಿಯುತ್ತದೆ.

ತೆನೆ ತಿಂದೆತ್ತು ತೆವರೇರಿತು
ದುಡಿಯುವ ಎತ್ತಿಗೆ ಗಾಣವೇನು, ಗಾಡಿಯೇನು?”
ಕತ್ತೆಯ ಗಾಯನಕ್ಕೆ ಬಳುವು ತಲೆದೂಗಿತು
ಕೊಲ್ಲು ಅಂದರೆ ಕಪ್ಪೆಗೆ ಕೋಪ; ಬಿಡು ಅಂದರೆ ಹಾವಿಗೆ ಕೋಪ

ಇವೆಲ್ಲ ಜನಪದಕ್ಕೆ ಸಹಜವಾಗಿ ದೊರಕೊಳ್ಳುವ ವಿಶ್ವವಿದ್ಯಾಲಯದ ಶಿಕ್ಷಣ. ಶಿಕ್ಷಕನೊಬ್ಬನಿಂದ ಕಲಿತದ್ದಲ್ಲ. ಯಾರಿಂದ ಕಲಿತನೆನ್ನುವುದು ಕಲಿತವನಿಗೇ ಗೊತ್ತು ಅಥವಾ ಅವನಿಗೂ ಗೊತ್ತಿರಲಿಕ್ಕಿಲ್ಲ. ಅಂತು ಅದು ಪಠ್ಯವಾಗಿ ಬಂದಿಲ್ಲ. ಪಠ್ಯೇತರ ಚಟುವಟಿಕೆಯಲ್ಲಿ ಕೈಗೆಟುಕಿದ್ದು. ಅದರ ಕಾಲವೂ ತಿಳಿಯದು; ಕೃತಿಯಾರದೆನ್ನುವುದೂ ತಿಳಿಯದು. ಅದೊಂದು ಜ್ಞಾನದ ಮಹಾಭಾಂಡಾರದಲ್ಲಿ ಅವಿತ ರತ್ನ.

ಮನವನ್ನು ಗೆದ್ದು ಮನೆಯನ್ನು ಗೆಲ್ಲು

ಮೊದಲು ಗೆಲ್ಲಬೇಕಾದುದು ಮನ ಮನೆಗಳನ್ನು, ತರುವಾಯ ಮಂದಿಯನ್ನು ಗೆಲ್ಲುವುದಕ್ಕೆ ಸಿದ್ದನಾಗಬೇಕು. ಮನವೆಂದರೆ ತನಗೆ ತೀರ ಹತ್ತಗಡೆಯದು, ಹತ್ತಿರದಲ್ಲಿದ್ದದ್ದು, ಸುತ್ತು – ಮುತ್ತು, ಒಳಗು – ಹೊರಗು ನೋಡಬಹುದಾಗಿದೆ ಮನವನ್ನು, ಮೈಯೆಲ್ಲ ಮನಸ್ಸುಳ್ಳ ಜಗದೀಶನಿಗೆ ಮೈಯೆಲ್ಲ ಕಣ್ಣು ಇರಬಹುದು. ಹಾಗಿರುವುದುರ ಅಗತ್ಯವೂ ಅದೆ. ಆದರೆ ನಮ್ಮ ಒಳಗಿದೆ ಮನಸ್ಸು, ಆ ಮನಂದಲ್ಲಿ ಶಿವನು ಮನೆಮಾಡಿಕೊಂಡಿರುವನೆಂದು ಜ್ಞಾನಿಗಳು ಹೇಳುತ್ತಾರೆ. ಅಂತು ಮನವೆಂದರೆ ಶಿವನ ಮನೆ, ಹಾಗೆಂದರೆ ಸುಡುಗಾಡಲ್ಲ. ಮನವನ್ನು ಗೆಲ್ಲನಿಂತವನಿಗೆ ಅಲ್ಲಿರುವ ಶಿವನ ನೆರವು ಸಿಗಬಹುದಾಗಿದೆ. ಮನವನ್ನ ಗೆದ್ದು ನಿಲ್ಲುವುದು ಸೂಕ್ತ ಸಾಧನವೆನಿಸುವುದು. ಮನವನ್ನು ಗೆದ್ದ ಬಳಿಕ ಮನೆಯನ್ನು ಗೆಲ್ಲುವುದಾಗಲಿ, ಮಂದಿಯನ್ನು ಗೆಲ್ಲುವುದಾಗಲಿ ಸಹಜ ಹಾಗೂ ಸುಲಭವೆನಿಸುತ್ತದೆ.

“ಆದದ್ದೆಲ್ಲಾ ಒಳಿತು” ಎಂಬ ಗಾದೆಯನ್ನು ಅದೆಷ್ಟು ನಂಬಬೇಕು? ಯಾವಾಗ ನಂಬಬೇಕು? ಎನ್ನುವ ತಾರತಮ್ಯವನ್ನು ಅರಿಯದಿದ್ದರೆ ಮೋಸ ಹೋಗುವ ಸಂಭವವುಂಟು. ಕಾರ್ಯಸಾಧನೆಯ ಪ್ರಯತ್ನ ನಡೆಸಿದಾಗ ಆ ಮಾತು ನೆನಪಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಪ್ರಯತ್ನಾಂತ್ಯದಲ್ಲಿ ಪರಮೇಶ್ವರನು ಗೆಲುವನ್ನೇ ಕೊಡುವನೆಂಬ ಭರವಸೆಯಿದೆಯೇ? ಒಳ್ಳೆಯದಾಗಲೆಂದು ಬಲವಾಗಿ ಹಾರಯಿಸುವುದು ಮಾತ್ರ ಸಾಧ್ಯ. ನಿರೀಕ್ಷಿಸಿದಷ್ಟು ಸಫಲವಾಗದಿದ್ದರೆ “ಆದದ್ದೆಲ್ಲ ಒಳಿತು” ಎಂದು ಗ್ರಹಿಸಬೇಕು. ಆಗುವುದೆಲ್ಲಾ ಒಳಿತೇ ಆಗುವುದೆಂಬ ನಿಯಮವೆಲ್ಲಿದೆ? ಮನುಷ್ಯನ ಶ್ರದ್ಧೆ ಪೂರ್ಣತೆಯನ್ನು ಪಡೆದಾಗ “ಆದದ್ದೆಲ್ಲ ಒಳಿತೆ” ಆಗಬಹುದಾಗಿದೆ. ಇಲ್ಲವೆ ಒಳಿತಿಗಾಗಿಯೇ ಆಗುತ್ತದೆಂದು ಮಹಾನುಭಾವರು ಹೇಳುತ್ತಾರೆ. ಆದರೆ ಸಾಮಾನ್ಯರಾದ ನಾವು ಅಸಾಮಾನ್ಯವಾದ ಅರ್ಥಕ್ಕೆ ಜೋತು ಬಿದ್ದು ಹಿಂದಿನಿಂದ ಕುಂದಬಾರದು.

ನಿಯತಿ ನಿಯಾಮಕನು ಡೊಂಬನಿದ್ದ ಹಾಗೆ, ಕುಶಲವಾದ ಕಸರತ್ತುಗಳನ್ನು ಅಡ್ಡಿ ಅಚ್ಚರಿಗೊಳಿಸುವ ಕಾಯಕ ಅವನದು. ಅದೆಂಥ ಕುಶಲ ಕಲಾವಂತನಾಗಿದ್ದರೂ ಒಂದೊಂದು ಪ್ರಸಂಗದಲ್ಲಿ ಎಡಹುವುದುಂಟು; ತೂಕ ತಪ್ಪುವುದೂ ಉಂಟು. ಅದರಿಂದ ಹತ್ತು ಸಾರೆ ಚಪಲತೆಯಿಂದ ಗಂಡಾಂತರವನ್ನು ತಪ್ಪಿಸಿಕೊಳ್ಳಬಹುದು. ಆದರೆ ನಿಯಾಮಕ ಡೊಂಬನ ರೀತಿಯೇ ಬೇರೆ. ಡೊಂಬ ಜಾರಿದರೆ ಅದು ಒಂದು ಲಾಗವಾಗಿ ಪರಿಣಮಿಸುತ್ತದೆ. ನಿಯಾಮಕ ಡೊಂಬನನ್ನು, ಹೊಟ್ಟೆಗಾಗಿ ಲಾಗಹಾಕುವ ಡೊಂಬನು ಹಿಡ್ದು ಕಟ್ಟಬಹುದೇ?

“ಕೊಯ್ದ” ಕಾಲು ನಾಯಿ ತಿಂದರೇನು, ನರಿ ತಿಂದರೇನು?” ತನ್ನ ಕಾಲೇ ತನ್ನ ಕಾಲವಾಗಿ ಉಳಿಯಲಿಲ್ಲವೆಂದಾಗ, ಅದು ಯಾರ ಹೊಟ್ಟೆಗೆ ಬಿದ್ದರೂ ಅಷ್ಟೇ; ಬೀದಿಯಲ್ಲಿ ಬಿದ್ದು ಹದ್ದು-ಕಾಗೆಗಳ ತುತ್ತಾದರೂ ಅಷ್ಟೇ. ಈ ಗಾದೆ ಶುದ್ಧ ವ್ಯಾವಹಾರಿಕವೆನಿಸಿದರೂ ಅದನ್ನು ಕೆದಕೆದಕಿ ನೋಡಿದಂತೆ, ಅದರಲ್ಲಿ ಪಾರಮಾರ್ಥಿಕದ ಕಂಪು ಸೂಸುವುದನ್ನು ಮನಗಾಣಬಹುದಾಗಿದೆ. ಇದೂ ಒಂದು ಗಾರುಡಿಯೇ ಸೈ.

ಪಂಚತಂತ್ರದಲ್ಲಿ ಹೇಳಿದಂತೆ, ರತನ್ನ ತನ್ನ ಮೂಲಸ್ಥಳ ಬಿಟ್ಟರೆ ರಾಜನ ಕೀರಿಟವನ್ನು ಸೇರುತ್ತದೆ; ಕಪ್ಪೆ ತನ್ನ ಮೂಲಸ್ಥಳ ಬಿಟ್ಟರೆ ಕಾಗೆಯ ಪಾಲು ಆಗುತ್ತದೆ. ಸಮದರ್ಶಿಗಳು ಹಿಡಿದ ಸ್ಥಳವನ್ನು ಬಿಡಲೇಬಾರದು. ಇನ್ನೊಂದು ದರ್ಜೆಯವರು ಮೂಲಸ್ಥಳದಿಂದ ಹೊರಬೀಳಲೇಬೇಕು. ಇದೇ ಗಾರುಡಿ. ಗಾರುಡಿಯೆಂದರೆ ಕೈಚಲಕವಲ್ಲ ಅದೊಂದು ನಿಜನುಡಿಯ ತಾರತಮ್ಯ.

“ಇದ್ದಲ್ಲಿ ಗವುಡ, ಹೋದಲ್ಲಿ ಕಿವುಡ”. ಸ್ವಗ್ರಾಮದಲ್ಲಿ ಗೌಡನೆಂದರೆ ಗ್ರಾಮಾಧಿಕಾರಿ; ಊರ ಪ್ರಬು. ಅವನ ಕಣ್ಣಂಜಿಕೆ – ಬಾಯಂಜಿಕೆಗಳಿಗೆ ಊರೆಲ್ಲ ತಲೆತಗ್ಗಿಸುತ್ತದೆ. ಕೈಯಂಜಿಕೆಗಂತೂ ಬೆನ್ನುಕೊಡುತ್ತದೆ. ಧನಿಯರ ಮಾತನ್ನು ದವನಮಾಡಿ ಮುಡಿಯುತ್ತಾರೆ. ಅವನ ಉಗುಲು ದಾಟುವಂತಿಲ್ಲ. ಅವನು ನನ್ನೂರಲ್ಲಿ ಇರಬೇಡವೆಂದರೆ ಮರುಮಾತಿಲ್ಲದೆ ಕಂಬಿಕಿತ್ತಬೇಕು. “ಊರೂ ಸಾಕಾಗಿತ್ತು. ಗೌಡನೂ ಬೇಡವೆಂದ” ಎಂಬ ಗಾದೆಯೇ ಈ ಮಾತಿಗೆ ಆಕರ. ಆದರೆ ಅದೇ ಗೌಡನು ಅಪರಿಚಿತವಾದ ಬೇರೊಂದೂರಿಗೆ ಹೋದರೆ, ಅವನನ್ನು ಯಾರೂ ಲಕ್ಷಿಸುವಂತಿಲ್ಲ. ಕಣ್ಣಮುಂದೆ ಹಾಯ್ದು ಹೋದರೆ ಏನೇನೋ ಆಡಿಕೊಳ್ಳುತ್ತಾರೆ. ಯಾವುದಾವುದೋ ಕುಂದಿಡುತ್ತಾರೆ. ಅದನ್ನು ಕೇಳಿಯೂ ಕೇಳದಂತೆ ಗೌಡನು ಮುಂದೆ ಸಾಗುತ್ತಾನೆ; ಕಿವುಡನ ಪಾತ್ರ ವಹಿಸುತ್ತಾನೆ. ಕಿವುಡನಂತೆ ನಟಿಸುತ್ತಾನೆ. ನಿಜವಾದ ಕಿವುಡನಿಗಿಂತ ಹೆಚ್ಚಿನ ಕಿವುಡನೆಂದೇ ಹೇಳಬೇಕಾದೀತು. “ಕಿವುಡ ಕಿಚ್ಚಡಿ ಬೇಡಿದರೆ, ಗೌಡ ಹಚ್ಚಡ ಬೇಡುತ್ತಾನೆ” ಎಂಬ ಗಾದೆಯನ್ನು ಕುರಿತು ಯೋಚಿಸಿದರೆ ಹುಟ್ಟು ಕಿವುಡನಿಗಿಂತ ಹೆಚ್ಚಿನ ಕಿವಡನೆನಿಸುವುದಿಲ್ಲವೇ ಆ ಗೌಡ? ಹೀಗೆ ಗೌಡನ ಪಾಡು ಪರಸ್ಥಳದಲ್ಲಿ “ಗೌಡ ಗೌಡ ಒಳ್ಳನ ತೌಡ” ಆದಂತೆಯೇ ಸರಿ.

“ಉಕ್ಕಿನ ಕೊಡಲಿಯಾದರೇನು, ಕಡಿಯಲಿಕ್ಕೆ ಕಟ್ಟಿಗೆಯ ಕಾವೇ ಬೇಕು” ಎಂಬ ಮಾತಿನಲ್ಲಿ ಬೇದನೀತಿ ಹುದುಗಿದೆ. ಕಡಿಯುವ ಕೊಡಲಿ ಉಕ್ಕಿನದು, ಕಡಿಸಿಕೊಳ್ಳುವ ದೀನಸು ಕಟ್ಟಿಗೆ. ಉಕ್ಕಿನ ಕೊಡಲಿಗೆ ಕಟ್ಟಿಗೆಯ ಬೆಂಬಲ ದೊರೆತಾಗಲೇ ಅಂದರೆ ಕಟ್ಟಿಗೆಯ ಕಾವು ಕೊಡಲಿಗೆ ಏಟು ಹಾಕಿದಾಗಲೇ ಕಟ್ಟಿಗೆಯನ್ನು ಕಡಿಯಬಲ್ಲ ಶಕ್ತಿ ಕೊಡಲಿಗೆ ಬರುತ್ತದೆ. ಅದೆಂಥ ಪರಾಕ್ರಮಿ ಸೇನಾನಿಯಾಗಿದ್ದರೂ ಭೇದನೀತಿಯಿಂದ ಎದುರಾಳಿಯೊಬ್ಬನನ್ನು ತನ್ನೆಡೆಗೆ ಮಾಡಿಕೊಂಡಾಗಲೇ ಪರಾಕ್ರಮಣ ಸಾಧಿಸುತ್ತದೆ. ಪರಕೀಯನೊಬ್ಬನ ಬೆಂಬಲ ದೊರೆತಾಗಲೇ ಪರಾಕ್ರಮಣಕ್ಕೆ ಸುಲಭ ಹಾಗೂ ಸುಗಮ ದಾರಿ ಸಿಗುತ್ತದೆ. ಈ ಮಾತು ಇತಿಹಾಸದ ಪುಟಪುಟಗಳಲ್ಲಿ ಪುಟಿದೆದ್ದು ನಿಂತಿದೆ.

“ಆರಂಭ ವರುಷ ವ್ಯಾಪಾರ ನಿಮಿಷ” ಕಾಳು, ಕಾಯಿಪಲ್ಲೆ ಮೊದಲಾದವುಗಳನ್ನು ಬೆಳೆಯಲು ಕೃಷಿಕನು ವರ್ಷಧ ಹನ್ನೆರಡೂ ತಿಂಗಳು ದುಡಿಯಬೇಕಾಗುತ್ತದೆ. ಅವನು ಬೆಳೆದ ಪಸಲು ಮಾಸದಂತೆ ಜೋಪಾನವಾಗಿ ಪೇಟೆಗೆ ತರುತ್ತಾನೆ; ಮಾರಾಟಕ್ಕಾಗಿ. ಆದರೆ ಪೇಟೆಯಲ್ಲಿ ಧಾರಣಿ ಹೇಗಿದ್ದರೂ ತನ್ನ ಬದುಕನ್ನು ಕೊಡದೆ ಗತ್ಯಂತರವಿಲ್ಲ. ಪೇಟೆಗೆ ಬರುವ ಬದುಕು ಬಹಳವಾದಾಗ ಧಾರಣೆ (ಬೆಲೆ) ಸಗಜವಾಗಿಯೇ ಇಳಿಯುತ್ತದೆ, ಧಾರಣಿ ಇಳಿದಂತೆ, ವ್ಯಾಪಾರಿ ಚೆಂಡಿಗೇರುತ್ತಾನೆ. ಕೃಷಿಕ ಗುಂಡಿಗೆ ಬೀಳುತ್ತಾನೆ. ಆದರೆ ಮರುಕ್ಷಣದಲ್ಲಿ ವ್ಯಾಪಾರಿಯ ಕಡೆಗೆ ಬರುವ ಪರಸ್ಥಳದ ಖರೀದಿಗಾರರು ಬರಿಗೈಯಲ್ಲಿ ಮರಳ ಬಾರದೆಂದು ಏರಿದ ಬೆಲೆಗೆ ಒಪ್ಪುತ್ತಾರೆ. ಕೃಷಿಕನ ಶ್ರಮಕ್ಕೆ ತಕ್ಕ ಪರಿಹಾರ ದೊರೆಯುವುದಕ್ಕೆ ಇಡಿಯ ವರುಷ ಸಾಲದೆ ಹೋಗುತ್ತದೆ. ಆದರೆ ವ್ಯಾಪಾರಿ ಮಾಲು ಖರೀದಿಸಿದ ಮರುಕ್ಷಣದಲ್ಲಿಯೇ ಇಮ್ಮಡಿ ಮುಮ್ಮಡಿ ಲಾಭ ಪಡೆಯುತ್ತಾನೆ. ಮೊದಲೇ ಬಡವನಾಗಿದ್ದ ಕೃಷಿಕನು ಕಡುಬಡವನಾಗುತ್ತಾನೆ.

ಆದರೆ ವ್ಯಾಪಾರಿಗಿದ್ದ ಹುಟ್ಟಾ ಶ್ರೀಮಂತಿಕೆಯು ಮುಗಿಲಿಗೇರುತ್ತದೆ.ಆತನ ಮನೆಯಲ್ಲಿ ನಲಿದಾಡುವ ಲಕ್ಷ್ಮೀ ಕಾಲುಮುರಿದುಕೊಂಡು ಬಿದ್ದುಬಿಡುತ್ತಾಳೆ. ಅದರಿಂದ ವ್ಯಾಪಾರಿ ಲಕ್ಷ್ಮೀಪತಿಯಾಗುತ್ತಾನೆ, ಲಕ್ಷಾಧೀಶನೆನಿಸುತ್ತಾನೆ. ಪತಿಯೆಂದರೆ ಹರಕು ಅರಿವೆಗೆ ಹಚ್ಚಿದ ತೇಪೆ, ಅರಿವೆ – ತೇಪೆಗಳ ಗಂಟು ಬಹುಕಾಲ ಕೂಡಿ ನಡೆಯದು, ಅರಿವೆ ಹರಿದರೆ ತೇಪೆ, ತೇಪೆ ಉಚಿದರೆ ಅರಿವೆ ಒಂಟಿಯಾಗಿ ಉಳಿಯುವದು, ಅಂದರೆ ಶ್ರೀಮಂತನು ಬಡತನದ ಇಳುಕಲಿಗೆ ಬಿದ್ದನೆಂದೇ ಹೇಳಬೇಕು.

“ಇದ್ದರೆ ಈ ಊರು, ಎದ್ದರೆ ಮುಂದಿನೂರು” ಈ ಗಾದೆ ಸಂಚಾರಿ ಜನಾಂಗವನ್ನು ಗಮನಿಸಿ ಹೇಳಿರಬಹುದೇ? ಅಹುದು, ಸಾಧ್ಯವಿದೆ. ಆದರೆ ಬದುಕಿನಲ್ಲಿ ಕಾಲೂರಿ ನಿಲ್ಲುವುದಕ್ಕೆ ಸಾಧ್ಯವಾಗುವವರೆಗೆ ಈ ಊರು, ಕಾಲು ಹಾರಿದರೆ, ಕೋಲು ಜಾರಿದರೆ ಅಲ್ಲಿ ನಿಲ್ಲಲಿಕ್ಕಾಗುವುದಿಲ್ಲ; ಕಂಬಿ ಕಿತ್ತಬೇಕಾಗುತ್ತದೆ; ಗುಡಿಚಾಪಿ ಎತ್ತಬೇಕಾಗುತ್ತದೆ. ಈ ಊರು ತನ್ನದಾಗದೆ ಮುಂದಿನ ಊರು ತನ್ನದೆನಿಸುತ್ತದೆ. “ಅದು ನಮ್ಮ ಊರು, ಅದು ನಿಮ್ಮ ಊರು, ತಂತಮ್ಮ ಊರೋ ಧೀರಾ” ಎಂದಿಲ್ಲವೇ ಕವಿವಾಣಿ?

ತಳ ಊರಿದ್ದೇ ತನ್ನ ಊರು, ತಳ ಕಿತ್ತಿದ್ದೇ ಅನ್ಯರೂರು. ಬೀಡಾರ ಬಿಟ್ಟಿದ್ದೇ ವಾಸ್ತವ್ಯದ ಊರು. ಬೀಡಾರ ಕಿತ್ತಿದ್ದೇ ಹಿಂದಿನೂರು. ಒಂದು ಅಂಕಿತನಾಮವಾದರೆ ಇನ್ನೊಂದು ಅಡ್ಡ ಹೆಸರು ಆಗುತ್ತದೆ.

ಶ್ರೀಕೃಷ್ಣನ ಕೈಯಲ್ಲಿ ಗರುಡಗೆರೆಯಿತ್ತೆಂದು ಹೇಳುತ್ತಾರೆ. ಗಾದೆಯ ಎದೆಯಲ್ಲಿ ಗಾರುಡಿಯಿರುತ್ತದೆಂದು ಧಾರಾಳವಾಗಿ ಹೇಳಬಹುದು. ಅದರ ಕೈಚಲಕ ಒಂದು ಬಗೆಯಾದರೆ, ಅದರ ಕಣ್ಮಸಕು ಇನ್ನೊಂದು ಬಗೆಯದಾಗಿದೆ. ಗಾರುಡಿಗನು ಗಾಳಿಗೆ ಗಾಳಿ, ಧೂಳಿಗೆ ಧೂಳಿ – ಎಂದು ಕೈಜಾಡಿಸುತ್ತ ಹೇಳಿ ಆಟ ಮುಗಿಸುತ್ತಾನೆ. ಆದರೆ ಗಾದೆ ಮಾತ್ರ ಗಾಳಿಗೆ ಗಾಳಿಯೂ ಅಲ್ಲ, ಧೂಳಿಗೆ ಧೂಳಿಯೂ ಅಲ್ಲ. ಗಾದೆಯ ಹೆಜ್ಜೆ ಉಸುಕಿನಲ್ಲಿ ಮೂಡಿದ್ದಲ್ಲ. ಕಲ್ಲಮೇಲೆ ಕೆತ್ತಿ ತೆಗೆದ ಹೆಜ್ಜೆ. ಹೆಜ್ಜೆಗೂ ಗೆಜ್ಜೆ ನುಡಿಸುತ್ತಾ ಸಾಗಬಲ್ಲ ಗಾದೆ ನುಡಿಯು ಬೊಕ್ಕಸದೊಳಗಿನ ಅತಿ ಅಮೂಲ್ಯವಾದ ಬದುಕು. ಮಣ್ಣಿಗೆ ಮಸಣಿಸದೆ, ಕಣ್ಣಿಗೆ ಗಸಣಿಸದೆ ಅಂತಃಕರಣವನ್ನು ತಟ್ಟುವ ಶಕ್ತಿ ಗಾದೆಗಿದೆ.

ಅದು ನಮ್ಮ ಗಾದೆ, ಅದು ನಿಮ್ಮ ಗಾದೆ
ತಂತಮ್ಮ ಗಾದೆ ನೋಡಾ

ಎಂದು ಹಾಡಿಸುವಂಥದಾಗಿದೆ. ಗಾದೆ ವೇದಕ್ಕೆ ಸಮಾನವೆನಿಸಿದೆ. ವೇದ ಋಷಿಯ ರಚನೆ, ಗಾದೆ ಗಾವಿಲನ ಸೊಲ್ಲು. ಅದು ದೇವವಾಣಿ, ಇದು ಜೀವವಾಣಿ, ದೇವವಾಣಿ ದೇವನತ್ತ ಎಳೆದರೆ, ಜೀವವಾಣಿ ಜೀವನತ್ತ ಎಳೆಯುವದು. ಅಲ್ಲಿ ಸಲ್ಲುವವನಾಗ ಬೇಕೆನ್ನುವವನು, ಇಲ್ಲಿ ಸಲ್ಲುವವನಾಗಿಸಲು ಗಾದೆ ಸುಸಮರ್ಥವಾಗಿದೆ.