ಹೆಣ್ಣು ಹುಟ್ಟಿದ್ದು ತವರುಮನೆ, ಕೊಟ್ಟಿದ್ದು ಅತ್ತೆಮನೆ. ಹೆಣ್ಣು ತವರುಮನೆಯಲ್ಲಿ ಮಗಳಾಗಿ ಹುಟ್ಟಿ, ಅತ್ತೆಯ ಮನೆಯಲ್ಲಿ ಸೊಸೆ, ಹೆಂಡತಿ, ತಾಯಿ ಆಗಿ, ಆಕೆ ಜೀವಿತದಲ್ಲಿ ನಾಲ್ಕು ಅವತಾರಗಳನ್ನು ತೊಡುತ್ತಾಳೆ. ಒಂದು ಬಗೆಯಿಂದ ಆ ಅವಸ್ಥೆಗಳು ಜೀವಿತ ಮರಣಗಳೇ ಆಗಿವೆ. ಹೆಣ್ಣಾಗಿ ಹುಟ್ಟಿದ್ದರೂ ತವರವರಿಂದ “ಹೆಣ್ಣಲ್ಲನಮಗ ರವಿಚಿನ್ನ” ಎನಿಸಿದವಳು. ಮದುವೆಯಾದೊಡನೆಯೇ ಅತ್ತೆಗೆ ಸೊಸೆಯಾಗಿ, ಗಂಡನಿಗೆ ಹೆಂಡತಿಯಾಗಿ, ಮಕ್ಕಲಿಗೆ ತಾಯಾಗುವ ಜನ್ಮಾಂತರಗಳ ಕಥೆಯಾರಿಗೆ ಗೊತ್ತಿಲ್ಲ? ಹೆಣ್ಣಿನ ನಾಲ್ಕು ಅವತಾರಗಳಲ್ಲಿ ಮಗಳೆನ್ನುವ ಒಂದಕ್ಕೆ ಮಾತ್ರ ತವರುಮನೆ ಲೀಲಾಭೂಮಿ. ಇನ್ನುಳಿದ ಮೂರು ಅವತಾರಗಳಿಗೆ ಅತ್ತೆಯ ಮನೆಯೇ ರಂಗಭೂಮಿ. ಅದು ಒಮ್ಮಮ್ಮೆ ಅಲ್ಲ. ಹಲವಾರು ಸಾರೆ ರಣರಂಗ ಭೂಮಿಯೂ ಆಗಬಲ್ಲದು. ನಾಯಕಿರಯ ಪಾತ್ರ ಸೊಸೆಯದು, ಹೆಂಡತಿಯದು. ಖಳನಾಯಕಿಯ ಪಾತ್ರ ಅತ್ತೆಯದು. ಮನೆತನದಲ್ಲಿ ಉಪನಾಯಕ ಪಾತ್ರಗಳಂತೆ, ಉಪಖಳನಾಯಕಿಯ ಪಾತ್ರಗಳೂ ಇರುವುದುಂಟು. ಆ ಪಾತ್ರಗಳು ಹಲವು ಸಾರೆ ತಿರುವು ಮುರುವು ಆಗುವುದನ್ನೂ ನಾವು ಕಾಣುವೆವು.

ಜಗಜ್ಜನನಿಗೆ ಮಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮಿ, ಮಹಾಸವತಿ ಎಂಬ ನಾಲ್ಕು ಸ್ವರೂಪಗಳೆಂದು ಶ್ರೀ ಅರವಿಂದರು ಹೇಳುತ್ತಾರೆ. ಜಗಜ್ಜನನಿಯ ಪ್ರತಿನಿಧಿಯೆನಿಸಿದ ನಮ್ಮ ನಿಮ್ಮ ಮನೆಯ ಹೆಣ್ಣು ತೊಡುವ ನಾಲ್ಕು ಅವತಾರಗಳು ಜಗಜ್ಜನನಿಯ ನಾಲ್ಕು ಸ್ವರೂಪಗಳಿಗೆ ಹೋಲುವವೆಂದು ಹೇಳಬಹುದು. ಜ್ಞಾನಶಕ್ತಿ ಸಂವಾದ ಸುಸಿದ್ಧಿಗಳುಜಗಜ್ಜನನಿಯ ನಾಲ್ಕು ಸ್ವರೂಪಗಳ ಗುಣಧರ್ಮಗಳಾದಂತೆ, ನಮ್ಮ ಮನೆಯ ಹೆಣ್ಣಿಗೂ ಆ ಗುಣಗಲು ಸ್ಥೂಲವಾಗಿ ಆದರೂ ಇವೆಯೆಂದು ತೋರುತ್ತದೆ.

ಮಗಳು ತವರಿನಲ್ಲಿ ತಾಯಿತಂದೆಗಳಿಗೆ ಮುದ್ದಿನಮುದ್ದೆ, ಅಣ್ಣತಮ್ಮ ಅಕ್ಕ ತಂಗಿಯರಿಗೆ ಅಕ್ಕರೆಯ ಸಕ್ಕರೆ, ಬಳಗಕ್ಕೆ ಕೊರಳ ಕಟ್ಟಾಣಿಯಾಗಿದ್ದಂತೆ, ಅತ್ತೆಯ ಮನೆಯಲ್ಲಿ ಗಂಡನಿಗೆ ಆರು ಗುಣಗಳಿಂದ ಅರಯಿಸುವ ಷಡ್ಗುಣ್ಯ ಭಾರ್ಯೆಯೆನಿಸುತ್ತಾಳೆ; ಅರ್ಧಾಂಗಿ ಎನಿಸುತ್ತಾಳೆ; ಜೀವನದ ಜೊತೆಗಾರ್ತಿ ಎನಿಸುತ್ತಾಳೆ. ತವರಿನಲ್ಲಿ ಹಿರಿಯಕ್ಕನಾಗಿ ಸದರ್ಥದಲ್ಲಿ ಹಿರಿಯಕ್ಕನ ಚಾಳಿಯೆಂಬ ಗಾದೆಗೆ ಕಾರಣಳಾದಂತೆ, ಅತ್ತೆಯ ಮನೆಗೆ ಸೊಸೆಯಾಗಿ ಹೋಗಿ ಲಂಡೋಬಂಡ ಕಾರಣಕ್ಕೆ ತೋರಣಗಳಾಗುವುದುಂಟು.

ಹೆಚ್ಚಿನ ಸಾಧಕ ಬಾಧಕಗಳನ್ನೆಲ್ಲ ಗಮನಿಸಿ ಸಮಾಜವು ಒಂದು ನಿರ್ಣಂಕ್ಕೆ ಬಂದು “ಒಲಿದರೆ ನಾರಿ, ಮುನಿದರೆ ಮಾರಿ” ಎಂದು ಹೇಳಿಬಿಟ್ಟಿತು. ದಿವಸಕ್ಕೆ ಹಗಲು ರಾತ್ರಿ ಇರುವಂತೆ, ಹೆಣ್ಣಿಗೆ ನಾರಿ ಮಾರಿ ಎಂಬ ಸ್ವರೂಪಗಳಿರುತ್ತವೆಂದು ಒಟ್ಟಿನಲ್ಲಿ ಹೇಳಬಹುದಾಗಿದೆ. ಆಕೆಗೆ ಒಲುಮೆ ಸ್ವಾದರಸವಾಗಿರುವಂತೆ, ಬಲುಮೆ ಪಾದರಸವಾಗಿರುತ್ತದೆ.

ನಾರಿಯಿರಲಿ ಮಾರಿಯಿರಲಿ, ಆಕೆಯಲ್ಲಿ ಗರತಿಯ ಜೀವಾಳವಿರುವುದೇನೋ ಸುಳ್ಳಲ್ಲ.ಗರತಿ ಸಂಸಾರಿ ದುಡಿಮೆಯಲ್ಲಿ ಹಿಗ್ಗಿನ ಹಾಡು ಉಸುರಿದವಳು. ಮಗುವಿಗೆ ಲಲ್ಲೆನುಡಿದು ಜೋಗುಳ ಹಾಡಿದವಳು. ಮದುವೆ – ಮುಂಜೆಗಳಲ್ಲಿ,ಉತ್ಸವ- ಆಮೋದಗಳಲ್ಲಿ ಎದೆಯೊಲವಿನ ಚಿಲುಮೆಯನ್ನು ಚಿಮ್ಮಿಸಿದವಳು. ತ್ರಿಪದಿ, ಜೋಗುಳ, ವಿಧಾನ ಹಾಡಿ, ನೋಂಪಿಯಲ್ಲಿ ಬಿನ್ನಹ ಇವೆಲ್ಲ ಆಕೆಯ ರಚನೆಗಳು. ಕಥೆ-ಒಗಟು-ಗಾದೆಗಳನ್ನೂ ಯಥೇಚ್ಛವಾಗಿ ರಚಿಸಿದ್ದಾಳೆ. ನಾರಿಯು ಹಾಡುವ ಹಾಡಿನಲ್ಲಿ, ಹೇಳುವ ಕಥೆಯಲ್ಲಿ, ನುಡಿಯುವ ಒಗಟುಗಳಲ್ಲಿ ವೈಶಿಷ್ಟ್ಯವಿರುವಂತೆ, ಆಕೆ ಒಡನುಡಿದ ಗಾದೆಗಳಲ್ಲಿಯೂ ಹೆಚ್ಚಿನ ವೈಶಿಷ್ಟ್ಯವಿದೆಯೆಂದು ನಿರ್ವಿವಾದವಾಗಿ ಹೇಳಬಹುದು.

ಹೆಣ್ಣುಮಕ್ಕಳ ಗಾದೆಗಳಲ್ಲಿ ನಾರಿಯ ಗಾದೆಗಳೆಂದೂ, ಮಾದರಿಯ ಗಾದೆಗಳೆಂದೂ ಎರಡು ವಿಧಗಳಲ್ಲಿ ವಿಂಗಡಿಸಬಹುದು. ಒಂದು ತೂಪಿರಿದರೆ, ಇನ್ನೊಂದು ಕಾಯ್ದೆಣ್ಣೆ ಎರಚುವುದು. ಅದು ಮಂತ್ರ ಮಾಟದ ಕೆಲಸ ಮಾಡಿದಂತೆ, ಇದು ಶಸ್ತ್ರಸೆಯ ಕೆಲಸ ಮಾಡುವುದು. ಖಡ್ಗಕ್ಕಿಂತ ಲೇಖನಿ ಹರಿತವಾಗಿದೆಯೆಂದು ಹೇಳಲಾಗುತ್ತದೆ. ನಾರಿಯ ನಾಲಗೆ ಸಗ್ಗಳೆಯ ನೀರಿನಿಂದ ತೀಡಿದರೆ, ಮಾರಿಯ ನಾಲಗೆ ಕಳೆನೋಡಿ ಕೇರ ಹಾಕುತ್ತದೆ. ವೈದ್ಯಕದಲ್ಲಿ ಎರಡು ಚಿಕಿತ್ಸೆಗಳಿರುವಂತೆ, ಹೆಣ್ಣಿನ ಬೋಧೆಯಲ್ಲಿ ಎರಡು ಪರಿಣಾಮಗಳಿರುತ್ತವೆ.ರೋಗನಾಶಕದೊಡನೆ ಜೀವಪೋಷಕವೂ ಬೇಕಾಗುತ್ತದೆ.

ಹೆಣ್ಣಿನ ಕೈಹಿಡಿದವನು ಗಂಡನೆನಿಸಿದರೆ, ಆಕೆಯ ಹೊಟ್ಟೆಯಲ್ಲಿ ಹುಟ್ಟಿದವನು ಗಂಡು ಎನಿಸುವನು, ಗಂಡನಿಗೂ ಬೋಜೇಸು ಮಾತೆಯೆನಿಸುವವಳಿಗೆ ಗಂಡು ಹೊಟ್ಟೆಯಲ್ಲಿ ಹುಟ್ಟಿದ ವೈರಿಯೆನಿಸುವುದುಂಟು.

ಹತ್ತು ಗಂಡ್ಹಡೆದರೂ ಮತ್ತೆ ಬಂಜೆಂಬರು
ದಟ್ಟಿಯ ಉಡುವ ಧರಣೀಯ | ಹಡೆದರ |
ಮಕ್ಕಳ ತಾಯೆಂದು ಕರೆವರು

ಹತ್ತು ಗಂಡು ಮಕ್ಕಳಿಗೆ ಜನ್ಮವಿತ್ತರೂ ಹೆಣ್ಣು ಮಗುವನ್ನು ಹಡೆಯುವವರೆಗೆ ತಾಯಿ ಬಂಜೆಯೇ ಸರಿ. ಹೆಣ್ಣು ಹಡೆದವಳೇ ಮಕ್ಕಳ ತಾಯಿಯೆನಿಸುವಳೆಂದು ಗರತಿ ಹೇಳುತ್ತಾಳೆ. ಆದರೆ ವಾಡಿಕೆಯಲ್ಲಿ ಗಂಡು ಹುಟ್ಟುವುದೇ ಹೆಚ್ಚು ಈಪ್ಸಿತವೆನಿಸುವುದು. ಬಸುರಿಯೊಬ್ಬಳು ಹೆಣ್ಣು ಹುಟ್ಟಲೆಂದು ಹಾರಯಿಸಿದರೆ, ಗಂಡನಾದವನು ಗಂಡು ಹುಟ್ಟಲೆಂದು ಬಗೆಯುವನು. ಹಡೆಯುವ ಮೊದಲೇ ಗಂಡಹೆಂಡಿರಲ್ಲಿ “ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುವ ಹಾಗೆ” ಮತಭೇದವುಂಟಾಯಿತು. ಹೆಂಡತಿ ತನನ ಹಟ ಬಿಡಲಿಲ್ಲ. ಗಂಡನು ರೋಸಿ “ಹೆಣ್ಣು ಒಯ್ದು ಮಣ್ಣಾಗ್ಹಾಕು, ನೀ ಹೋದರ ಹರಕತ್ತಿಲ್ಲ” ಎಂದು ಹೆಂಡತಿಯನ್ನು ಉರುಳಾಡಿಸಿ ಹೊಡೆಯುವನು ಎಂಬ ಕಥೆಯಿದೆ. ಆದರೆ ಅಪರೂಪವಾಗಿ ಹುಟ್ಟಿಬಂದ ಹೆಣ್ಣು ರವಿ ಚಿನ್ನ ಎನಿಸುತ್ತಾಳೆ. ಎಷ್ಟಾದರೂ ಹೆಣ್ಣು ಕೊಟ್ಟ ಮನೆಗೆ ಹೋಗುವ ಬದುಕು ಎನಿಸುವುದು ತಪ್ಪದು.

ಒಬ್ಬ ತಾ ಹೇಳುತ್ತಾಳೆ “ಹೆಣ್ಣು ಹಡೆದು ಅಳಿಯನ ಪಾಲು, ಗಂಡು ಹಡೆದು ಸೊಸಿಯ ಪಾಲು”. ಸೊಸೆಯಾಗಿ ಅತ್ತೆಯ ಮನೆಗೆ ಹೋದ ಮಗಳಿಗೆ ಅನಿಸುತ್ತದೆ. “ತಾಯಿ ಇದ್ದರೆ ತವರು ಹೆಚ್ಚು. ತಂದೆ ಇದ್ದರೆ ಬಹಳಗ ಹೆಚ್ಚು.” ಆದರೆ “ಗಂಜೀಯ ಕುಡಿದರೂ ಗಂಡನ ಮನೆಲೇಸು” ಎಂದು ಮೊದಲಗಿತ್ತಿ ಭಾವಿಸುವುದು ಗಂಡನ ಒಲುಮೆ ಗಳಿಸಿದ ಮೇಲೆ. ಆದರೆ ಅಲ್ಲಿಯವರೆಗೆ “ಹುಟ್ಟಿದ ಮನೆ ಹೋಳೀ ಹುಣ್ಣಿವೆ, ಕೊಟ್ಟ ಮನೆ ಶಿವರಾತ್ರಿ” ಎಂದು ಮಿಡುಕುವ ಸಂದರ್ಭ ಅನೇಕರಿಗೆ ಬರುವುದೇನೂ ಸುಳ್ಳಲ್ಲ.

ಅತ್ತೆಯೆಂದರೆ ಮಾಗಿದ ಸೊಸೆ; ಸೊಸೆಯೆಂದರೆ ಮೊಳಕೆಯಂಥ ಅತ್ತೆ. ಅಂತೇ ಅತ್ತೆಗೊಂಡು ಕಾಲ, ಸೊಸೆಗೊಂದು ಕಾಲ, ಸೊಸೆ ಮೊದಲಗಿತ್ತಿಯಾಗಿ ಬಂದಾಗ ಅತ್ತೆಯ ಕಾಲ ಆರಂಭವಾಗುತ್ತದೆ. ಮೊದಲಗಿತ್ತಿ ಬೇರುಬಿಟ್ಟು ಆಗಿ ಗಿಡವಾಗುವ ಹೊತ್ತಿಗೆ ಸೊಸೆಯ ಕಾಲ ಉದಯಿಸುತ್ತದೆ. ಮನೆಯ ಮಗನಿಗೆ ಅತ್ತ ತಾಯಿ, ಇತ್ತ ಹೆಂಡತಿ, ಯಾರುಬೇಕು, ಯಾರು ಬೇಡ? ಆ ಕಾರಣದಿಂದ ಗಂಡ ಹೆಂಡಿರಲ್ಲಿ ವಿರಸ ಹಣಿಕೆಹಾಕತೊಡಗುವದು. ಆದರೂ “ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ.” ಹುಸಿಮುನಿಸು ಹೊತ್ತುವುದಕ್ಕೂ ತಡವಾಗದು, ತಣ್ಣಗಾಗುವುದಕ್ಕೂ ತಡವಾಗದು. ನಿದ್ರೆಯಲ್ಲಿ ಹೊತ್ತು ಹೊರಡಿಸಿದರೆ ಹೊಸ ಅಧ್ಯಾಯಕ್ಕೆ ಆರಂಭ, ಅತ್ತೆಯ ಮನೆಯಲ್ಲಿ ಸೊಸೆ ಕಲಿಯುವ ಪಾಠಗಳು ಹಲವಾರು.

ಮೊದಲಿಗೆ ಮನೆತನಕ್ಕೆ ಒಗ್ಗುವಂಥ ಅಡಿಗೆ ಮಾಡುವುದನ್ನು ಕಲಿಯಬೇಕು. ಅಡಿಗೆಯ ವಿದ್ಯೆಯಲ್ಲಿ ಸೊಸೆ ಎಡಹುವುದೇ ಹೆಚ್ಚು. ಅತ್ತೆಯ ಕೈಚಲಕವು ಸೊಸೆಯನ್ನು ಎಡಹುವಂತೆ ಮಾಡುವುದಕ್ಕೂ ಹಿಂಜರಿಯುವಂತಿಲ್ಲ. ಅಡಿಗೆಗೆ ಸೊಸೆ ಉಪ್ಪು ಹಾಕಿದರೂ, ಆಕೆಗೆ ಗೊತ್ತಾಗದಂತೆ ಅತ್ತೆಯೂ ಉಪ್ಪು ಹಾಕುತ್ತಾಳೆ, ಅದರಿಂದ ಅಡಿಗೆ ಉಪ್ಪಿನ ಕಟಿ ಆಗದಿರುವುದೇ? ಇಮ್ಮಡಿ ಉಪ್ಪುತಿಂದ ಗಂಡನಿಗೆ ಸಿಟ್ಟು ಮೂಗಿನ ಮೇಲೆ, ಅದನ್ನು ಎದುರಿಸುವವಳು ಸೊಸೆ. ಅಕಸ್ಮಾತ್ ಅತ್ತೆ ಹತ್ತಿರ ಸುಳಿಯದಿದ್ದಾಗ ಅಡಿಗೆ ಸ್ವರಸ್ಯವಾದರೆ “ಎಚ್ಚ ಇದ್ದರೆ ಹುಚ್ಚಿ ಮಾಡುವಳು ಅಡಿಗೆ” ಎಂಬ ಅತ್ತೆಯ ಕೊಂಕು ನುಡಿ ಕೇಳಲಾಗುವುದು.

ಅಡಿಗೆಯನ್ನು ಕಲಿಯುವುದರೊಂದಿಗೆ, ಅತ್ತೆ ಹಾಗೂ ಗಂಡ ಅವರ ಎದ್ದಲಗಾಟದಲ್ಲಿ ಮತ್ತೆರಡು ವಿದ್ಯೆಗಳನ್ನು ಸೊಸೆಯಂದಿರು ಕಲಿತುಕೊಂಡರೆ ಆಶ್ಚರ್ಯವಲ್ಲ. “ಅತ್ತೆ ಕಲಿಸಿದ ಕಳವು, ಗಂಡ ಕಲಿಸಿದ ಹಾದರ” ಆದರೆ ಅವುಗಳಿಗೆ ತಳ-ಬುಡಗಳೇ ಇರುವುದಿಲ್ಲ. ಅತ್ತೆಗೆ ಸಂಬಂಧಿದ ಈ ಗಾದೆಗಳ ಹಿನ್ನೆಲೆಯನ್ನು ಮೆಲುಕು ಹಾಕಬಹುದಾಗಿದೆ.

೧. ಅತ್ತೆ ಕತ್ತೆ ಏರಿದಾಗ ಮಾವ ಕೊಡೆ ಹಿಡಿದ.

೨. ಅತ್ತೆ ಒಡೆದ ಗಡಿಗೆ ಹಳೆಯದು.

೩. ಕತ್ತೆಯಂಥ ಅತ್ತೆ, ಮುತ್ತಿನಂಥ ಗಂಡ.

೪. ಅತ್ತೆ ಸತ್ತು ಆರು ತಿಂಗಳಿಗೆ ಸೊಸೆ ಅತ್ತಳು.

ಚಳಿಗಾಲದ ಬಸುರಿನಲ್ಲಿಯೇ ಬೇಸಗೆ ಹುಟ್ಟುವಂತೆ, ದಾಂಪತ್ಯದ ಸರಸ ಜೀವನದಲ್ಲಿ ಮಗುಗಳು ಒಂದೆರಡಾಗಿ ಮೂರಾಗುವ ಹೊತ್ತಿಗೆ “ಮಕ್ಕಳೆಂದರೆ ನೊಣದ ಪಾಯಸ” ವೆನಿಸತೊಡಗುತ್ತದೆ. ಗಂಡವಿಶ್ವಾಮಿತ್ರನಂತೆ ಒಂದು ಕೈ ಹಣೆಗೆ ಅಡ್ಡಯಿಸಿ, ಇನ್ನೊಂದು ಕೈಯನ್ನು ಮೇಲಕ್ಕೆತ್ತಿ ಹೊಣೆಹಾರಿಸಿಕೊಳ್ಳುವನು. ಆಗ ಎತ್ತು ಎರೆಗೆ, ಕೋಣ ಕೆರೆಗೆ ಎಳೆಯಹತ್ತುವವು. ಆ ದೂಡಿಕೆಯಲ್ಲಿ “ಗಂಡ ಹೊಡೆದ ಹೆಂಡತಿಯದು ಸೋಮವಾರ ಒಪ್ಪುತ್ತು” ಆಗಿಬಿಡುವುದು. “ಗಂಡನಿಗೆ ಹೊರಸು ಆಗದು, ಹೆಂಡತಿಗೆ ನೆಲ ಆಗದು.” ಉಂಡು ಮಲಗುವವರೆಗೆ ಗಂಡಹೆಂಡಿರ ಜಗಳವಿದ್ದುದು, ಆವಾಗ “ಗಂಡಹೆಂಡಿರ ಜಗಳದಲ್ಲಿ ಕೂಸು ನುಗ್ಗು” ಆಗ ಹತ್ತುವದು. ಗಂಡ ಎಂದಿಲ್ಲದೊಮ್ಮೆ ಎಲಗ ಅಂದರೆ, ಹೆಂಡತಿಗೆ ತಿಂಗಳಿಗೊಮ್ಮೆ ನಗೆ ಬರುವುದು. ಅಂಥದರಲ್ಲಿ ಅತ್ತೆಯ ಕಾಟವು ತಗಣಿಯ ಕಾಟವಾಗಿ ಪರಿಣಮಿಸಿ, ಯಾವ ಕಡೆಗೂ ಮಗ್ಗಲೂರಗೊಡದಂತೆ ಆಗುದು. ಅದು ಮನೆತನದಲ್ಲಿ ಬಿರುಕು ಹುಟ್ಟಿಸಿ ಒಂದಕ್ಕೆರಡು ಒಲೆಗಳಾಗುವವು. ನಾಲ್ವರು ಹಿರಿಯರು ಬಂದು ಆಸ್ತಿಪಾಸ್ತಿ ಪಾಲು ಮಾಡಿಕೊಡುವರು. ಸುತ್ತು ದಾರಿಯಲ್ಲಿ (ಇರುಳು) ಗಾಡಿ ಹೊಡೆದರೂ ಬೆಳಗಾಗುವ ಹೊತ್ತಿಗೆ ಸುಂಕದ ಕಟ್ಟೆಯಲ್ಲಿ ಸುಂಕ ಕೊಡುವುದು ತಪ್ಪಲಿಲ್ಲ. ಎನ್ನುವಂತೆ, “ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬರಬೇಕೇ?” ಆ ಪ್ರಸಂಗವು ಮೊದಲೇ ಸೊಂಟ ನೋವಿನಿಂದ ಬಳಲುವ ಆಕೆಗೆ ಕುತ್ತುಸಿರು ಬಿಡಿಸಚ್ಚುವುದು. ಆಮೇಲೆ ಮತ್ತೆ ಮರಳಿ ಮನೆಗೆ.

“ಹಿತವಿಲ್ಲದ ಗಂಡ ಹಿಂದೆ ಮಲಗಿದರೇನು, ಮುಂದೆ ಮಲಗಿದರೇನು?” ಎಂದು ಹೆಂಡತಿ ಸಹನೆ ತೋರಿದಳೇ ಹೊರತು, ಕೈಲಾಗದ ಸೂಳೆಯಂತೆ ಯಾವನೋ ಅಯ್ಯನೊಡನೆ ಎದ್ದು ಹೋಗಲಿಲ್ಲ. ಗಂಡನೂ ತನ್ನ ಮಟ್ಟಿಗೆ ಎಂಥದೋ ಒಂದು ಯೋಜನೆಯನ್ನು ಅಳವಡಿಸಿಕೊಂಡನು. “ಹಿಡಿದವನಿಗೆ ಹೆಂಡತಿ, ಬಿಟ್ಟವನಿಗೆ ಸೂಳೆ” ಎನ್ನುವ ಎಚ್ಚರಿಕೆಯನ್ನು ತಳೆಯುವನು.“ಗಂಡಸಿಗೆ ಎದೆಗಟ್ಟಿ, ಹೆಂಗಸಿಗೆ ನಡುಗಟ್ಟಿ” ಆದ್ದರಿಂದ ಅವರ ಸಂಸಾರವು ಒಗ್ಗಾಲಿಯಾಗದೆ ಮೆಲ್ಲನೆ ಮುಂದುವರಿಯುವುದು.

“ಉಂಡೂ ತಿಂದೂ ಗಂಡನಿಗೆ ಅಳುವ ರಂಡೆಯರೂ, ಊರತುಂಬ ಗಂಡರಿದ್ದರೂ ಉಡಲಿಕ್ಕೆ ಸೇರೀಯಿಲ್ಲದ ಮಂಡೆಯರೂ ಇಲ್ಲದಿಲ್ಲ”. ಅದರಂತೆ, “ದನದಲ್ಲಿ ಹೊಡೆದರೆ ದನದಲ್ಲಿ, ಕರುವಿನಲ್ಲಿ ಹೊಡೆದರೆ ಕರುವಿನಲ್ಲಿ ಹೋಗುವ ಹುಚ್ಚಿಯಾಗಲಿ, ಗಂಡನ ಮನೆಯೂ ಅಷ್ಟೇ, ತವರು ಮನೆಯೂ ಅಷ್ಟೇ” ಎಂದು ಭಾವಿಸುವ ಪೆದ್ದಿಯಾಗಲಿ ಸಿಕ್ಕುವುದು ಅಪರೂಪ. ಕೆಲವರಿಗೆ ಅಟ್ಟ ಮೇಲೆ ಒಲೆ ಉರಿದಂತೆ, ಗಂಡನನ್ನು ಕಳಕೊಂಡ ಮೇಲೆ ಬುದ್ಧಿಬರುವುದುಂಟು. ಆ ಅನುಭವವನ್ನೇ ಮುಂದಿನಾಯುಷ್ಯದಲ್ಲಿ ಆಚಾರ ಹೇಳಲು ಉಪಯೋಗಿಸಲಾಗುತ್ತದೆ. “ಬುದ್ಧಿಯಿರುವಾಗ ಗಂಡನಿಲ್ಲ, ಗಂಡನಿರುವಾಗ ಬುದ್ದಿಯಿಲ್ಲ”. ಆಕೆಯ ಆಚಾರ ಸಂಹಿತೆಯಲ್ಲಿ ಬರುವ ಕೆಲವು ಮಣಿಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

೧. ಕಾಯಂ ಸೂಳೆಯೇ ಹೆಂಡತಿ, ತಾತ್ಪೂರ್ತಿಕ ಹೆಂಡತಿಯೇ ಸೂಳೆ.

೨. ರಂಡಮುಂಡೆಯ ಮಗ ರಾಜಕುಮಾರ, ಸೂಳೆಯ ಮಗ ಸುಭೇದಾರ.

೩. ಗಂಡ ಬಯ್ದುದ್ದು ಹುಚ್ಚು, ಮಿಂಡ ಬಯ್ದದ್ದು ಮೆಚ್ಚು.

೪. ಮುಪ್ಪಿನ ಸೂಳೆ ಮಹಾ ಪತಿವ್ರತೆ.

೫. ಸೂಳೆಯ ಕಣ್ಣು ಗಂಡಸರ ಮೇಲೆ, ಕಳ್ಳಿಯ ಕಣ್ಣು ಗಡಿಗೆಯ ಮೇಲೆ.

೬. ಕುರುಡೆಯ ಹಾದರಕ್ಕೆ ಊರೆಲ್ಲ ನಿದ್ರೆಗೇಡು.

೭. ಹಗಲೆಲ್ಲ ಹಾದರ ಮಾಡಿ, ಇರುಳು ಗಂಡನ ತಲೆಯೊಳಗಿನ ಹೇನು ತೆಗೆದಳು.

೮. ತೊಡೆ ಏರಿದವಳು. ತೋಳಿಗೆ ಬಾರಳೇ?

ಗಂಡನಿಗೆ ಹೆಂಡತಿಯಾಗಿ ಹೋದವಳು ಮಗುವಿಗೆ ತಾಯಾಗುವ ಸಂದರ್ಭಕ್ಕೆ “ನೆರೆದಾಗಿನ ಸುಖ ಹಡೆದಾಗ ಇಲ್ಲ” ಎಂಬ ಅನುಭವ ಪಡೆದಿರುತ್ತಾಳೆ. “ಗಂಡನಿಗೆ ಗಂಟು ತೋರಿಸಬೇಡ, ಮಕ್ಕಳಿಗೆ ಸಿಹಿ ತೋರಿಸಬೇಡ” ಎಂಬ ತಿಳುವಳಿಕೆ ಕೇಳಸಿಗುತ್ತದೆ. ತವರು ಮನೆಯ ಪರಿಸರಕ್ಕೂ ಅತ್ತೆಯ ಮನೆಯ ಪರಿಸರಕ್ಕೂ ಇರುವ ಭೇದವು ಸ್ಪಷ್ಟವಾಗಿ ಕಾಣಿಸಗುವುದು ಹೇಗೆಂದರೆ “ಗಂಡನ ಮನೆಯಲ್ಲಿ ಹಾಲು ಕುಡಿದದ್ದು, ತವರು ಮನೆಯಲ್ಲಿ ನೀರು ಕುಡಿದದ್ದು” ಆಕೆಗೆ ಸಮವೆನಿಸುತ್ತದೆ. “ನೆಲ್ಲಿಕಾಯಿ ತಿಂದು ತವರಿಗೆ ಹೋಗು, ಗಜ್ಜರಿ ತಿಂದು ಅತ್ತೆಯ ಮನೆಗೆ ಹೋಗು” ಎಂದು ಹೇಳಬಲ್ಲವಳಾಗುತ್ತಾಳೆ. ಅತ್ತೆಯ ಸ್ಥಾನಕ್ಕೇರಿದರೂ ತಾಯಿತನದಲ್ಲಿದ್ದ ಸೊಸೆಯರ ಬಗೆಗೆ ಒಂದು ನಿಲುಮೆಗೆ ಬಂದು ‘ಮಗ ಮಲಗುವುದಕ್ಕೆ ಹೋಗಿಕೆಟ್ಟರೆ, ಸೊಸೆ ಬೀಸುವುದಕ್ಕೆ ಹೋಗಿ ಕೆಟ್ಟಳು’ ಎಂಬ ಎಚ್ಚರಿಕೆ ವಹಿಸುತ್ತಾಳೆ. ಬಸಿರು- ಹೆರಕಿಗೆಗಳ ವಿಷಯವನ್ನು ಗೃಹಿಣಿ ನೀರು ಕುಡಿದಂತೆ ಉಸಿರಬಲ್ಲಳು. “ಆರು ತಿಂಗಳಲ್ಲಿದೆ ಬಸುರಲ್ಲ, ಮೂರು ತಿಂಗಳಲ್ಲದೆ ಮಕ್ಕಳಲ್ಲ” ಮಕ್ಕಳನ್ನು ಬೆಳೆಸುವ ಕಲೆಯನ್ನು ಕಂಡು ಹಿಡಿದ ತಾಯಿ “ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸಬೇಕು” ಎಂದು ಸಲಹೆ ನೀಡುತ್ತಾಳೆ. “ಮಗಳನ್ನು ಹೊಗಳಿ ಬೆಳೆಸಬೇಡ, ಮಗನನ್ನು ತೆಗಳಿ ಬೆಳೆಸಬೇಡ” ಎಂಬ ಉಪಾಯ ಹೇಳಿಕೊಡುತ್ತಾಳೆ.

ವಧು ವರನನ್ನು ಮೆಚ್ಚುವುದು ಅದೆಷ್ಟು ಅನಿವಾರ್ಯವೋ, ಅದಕ್ಕಿಂತ ಹೆಚ್ಚಿನ ಅನಿವಾರ್ಯವೆಂದರೆ ವಧುವಿನ ತಾಯಿ ವರನನ್ನು ಮೆಚ್ಚುವುದು. ಅಂತೆಯೇ ತಾಯಿ ಮೆಚ್ಚಿದರೆ ನಾಯಿಗೆ ಕೊಡಬಹುದೆಂದು ಹೇಳಲಾಗುತ್ತದೆ. ಆದರೆ “ಕದ್ದು ಮದುವೆ ಮಾಡಿಕೋತೀನಿ, ಬಗ್ಗಿ ವಾಲಗ ಊದು” ಅಂದರಾದೀತೇ? ಹೆತ್ತ ಮಗನ ಮದುವೆಯಾಗಿ ಆತನ ಹೆಂಡತಿಗೆ ಅತ್ತೆಯಾದರೂ ಒಮ್ಮೊಮ್ಮೆ ಆಕೆಯ ಸೊಸೆತನ ಹಿಂಗುವುದಿಲ್ಲ. ಯಾಕೆಂದರೆ ಆಕೆಗೂ ಒಬ್ಬ ಅತ್ತೆ ಇದ್ದಾಳೆ. ಮರಿಯತ್ತೆಗೊಬ್ಬ ಮುದಿಯತ್ತೆ “ಇಪ್ಪತ್ತು ಮಕ್ಕಳ ಹೆತ್ತೋಳಿಗೆ ತಿಪ್ಪೆಯ ಮೇಲೆ ಆರತಿ” ಸದೋಷಕ್ರಮ, ಅಥವಾ ಬಿಡಲಾರದ ಕರ್ಮ.

ಗರತಿಗೆ ಪತಿಯೇ ಗತಿಯೆನ್ನುವುದು ಆಶ್ಚರ್ಯವಲ್ಲ. ಆದರೆ ಹೊರಬುದ್ದಿಯವಳಿಗೂ ಪತಿಯೇ ಗತಿಯೆನ್ನುವ ಸರತಿ ಬೇರೊಂದು ಕ್ರಮದಿದಂ ಬರುವುದುಂಟು “ಪರಪುರುಷನಿಲ್ಲದಾಗ ಕೈಹಿಡಿದ ಪತಿಯೇ ಗತಿ” ಅಲ್ಲವೇ? ಕೈಹಿಡಿದವನು ಕೈಬಿಟ್ಟರಪೆ ಅಥವಾ ಕೈಕೊಟ್ಟರೆ ತನ್ನ ಗತಿ ಯೇನಾದೀತು, ಯಾರು ಹೇಳಬಲ್ಲರು? ಆಕೆಯ ಜೀವನಾನುಭವಗಳೇ ಬೇರೆ. ಆದರೆ ಕೇಳಲು ಸ್ವಾರಸ್ಯವಾಗಿವೆ –

೧. ಪುಕ್ಕಟೆ ಗಂಡನಿಗೆ ಇರುಳೂ ಹಗಲೂ ದೀಪ.

೨. ಬಯಸಿ ಭಾವನ ಬಳಿಗೆ ಹೋದರೆ – ಕಿಸುಗಾಲ ಮಗು ಹುಟ್ಟಿತು.

೩. ಮಾವನದು ಮೊಳಕಾಲಿಗೆ ಬಡಿದರೆ ಸೊಸೆಗೇನು ಬಂತು.

೪. ಕಂಗೆಟ್ಟು ಕಂಬಾರಗೆ ಹೋದರೆ ಮೂಗಿನ ತಟಕು ಬಾಯಲ್ಲಿ ಬಿತ್ತು.

ಮಗಳ ಅವತಾರವು ಮಾರ್ಪಟ್ಟಂತೆ ಆಕೆ ಕಾಣುವ ದೃಷ್ಟಿಯೇ ಬೇರೆ ಆಗುತ್ತದೆ. ಆಕೆಯ ಕಾಣ್ಕೆಯೇ ಬೇರೆ ಆಗುತ್ತದೆ. ಮಗಳು ಸೊಸೆ ಆದಾಗ, ಮಾಸದ ಬುದ್ದಿ ಸೊಸೆ ಆದಾಗ ಅದಕ್ಕಿಂತ ಹೆಚ್ಚು ಮಾಸಿದ ಬುದ್ದಿ ಅತ್ತೆಯಾದಾಗ ಬರುವುದುಂಟು. ಅತ್ತೆಯ ಅತ್ತೆಯಾದಾಗಲಂತೂ ಅದನ್ನು ಕೇಳುವುದೇ ಬೇಡ. ಅಂಥ ಸೊಸೆಯ ಅತ್ತೆಗೆ ಬಂದ ಮಾಸಿದ ಬುದ್ಧಿವಂತಿಕೆಯ ಮಾದರಿ ಬೇಕಾದರೆ ಕೇಳಿರಿ :

೧. ಕುಣಿಯಲರಾದ ಸೊಳೆ ನೆಲ ಡೊಂಕು ಅಂದಳು.

೨. ಹೊಟ್ಟಿ ಕಟ್ಟಿ ತೊಟ್ಟಿಲ ಕಟ್ಟು.

೩. ಹಾಗೆಯೇ ಬಾಯಾಡಿಸುವವಳು ಅವಲಕ್ಕಿಯೆಂದರೆ ಬಿಟ್ಟಾಳೇ?

೪. ಸತ್ತ ಗಂಡ ಸ್ವಪ್ನಕ್ಕೆ ಬಂದರೆ ಹಿಟ್ಟು ಬಟ್ಟೆ ಕೊಟ್ಟಾನೇ?

೫. ಲೇಸಿಗೆ ಬಂದವಳು ಕೂಸು ತೂಗಿಯಾಳೇ?

೬. ಬಿಕ್ಕಿಬಿಕ್ಕಿ ಅತ್ತರೆ ಬೀಸೂಕಲ್ಲು ತಿರುಗೀತೇ?

೭. ಬಾಚಣಿಕೆಯಿಂದ ಬಾಚದವಳು ಬಾಚಿಯಿಂದ ಬಾಚುವಳೇ?

೮. ತುಪ್ಪ ಅನ್ನ ಉಣ್ಣಲಿಕ್ಕೆ ನಾಯ ಉಚ್ಚೆಯಲ್ಲಿ ಕೈ ತೊಳಿಸಿದರು.

೯. ಚಂದಗೇಡಿಯ ಕೊರಳಲ್ಲಿ ಚವರಿ ಕಟ್ಟಿದರೆ, ಮಂದಿ ನೋಡಲೆಂದು ಕುಂಬಿಯ ಮೇಲೆ ಕುಳಿತಿತ್ತು.

ಈ ಸಂಕ್ಯೆಯನ್ನು ಇನ್ನೂ ಬೆಳೆಸಬಹುದು. ಆದರೆ ಈ ಉದಾಹರಣೆಗಳನ್ನು ಅತ್ತೆಯಾದವಳು ಸೊಸೆಯಂದಿರಿಗೆ ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಉಸುರಿದಳು ಅನ್ನುವುದಕ್ಕಿಂತ ಪಿಸುಗುಟ್ಟಿದಳು ಅನ್ನುವುದನ್ನು ವಿಚಾರಿಸುವಂಥದಾಗಿದೆ. ಬಡವನ ಹೆಂಡತಿ ಬೇಲಿಯ ಹೂ! ಬಡವರ ಸೊಸೆಗೆ ಬಾಯಿ ಸಡಿಲು ಬಿಡುವರೆಲ್ಲ ಅತ್ತೇಗಳೇ! ಅಂದಾಗ, ಸೊಸೆಗೆ ಸಿಕ್ಕಿಂತೆ ಆಡಿ, ಕಂಡಂತೆ ಆಡಿಸಾಡಿ ಮರಿಯತ್ತೆಯನ್ನು ಸಿದ್ಧಗೊಲಿಸುವ ಎತ್ತುಗಡೆ ಮನೆಮನೆಯಲ್ಲಿ ನಡೆಯುತ್ತದೆ. ಅತ್ತೆಯ ಉವಾಚುಗಳಿಗೆ ಸೊಸೆ ಉತ್ತರಾಧಿಕಾರಿಯಾಗಿ ಬಳಸುತ್ತಿರುವುದನ್ನು ಜನಪದವು ದಿನಾಲು ಕೇಳುತ್ತದೆ.

ಹೆಣ್ಣಿನ ಹರಿತ ನಾಲಿಗೆಯೆಂದರೆ ಆಕೆಯ ಅಂತಃಕರಣದ ಪಾದ ತೀರ್ಥದಲ್ಲಿ ಬೇರು ಬಾಚಿದ ತಾವರೆಯೇ ಆಗಿದೆ. ಆದರೆ ಆ ಹೆಣ್ಣು ನಾಲ್ಕು ಅವತಾರಗಳನ್ನು ಮೀರಿನಿಂತಾಗ ಆಕೆಯ ಒಂದೊಂದು ಮಾತು ಆಳವಾದ ಅನುಭಾವದ ಲೇಹ್ಯವನ್ನು ಅರಗಿಸಿಕೊಂಡಿರುತ್ತದೆ. ಒಮ್ಮೊಮ್ಮೆ ಅದು ಬೈಗಳ ಮುಖದಮೇಲೆ ಹೊಡೆಯಬಲ್ಲ ರಸಭವನ್ನೂ ತಳೆಯಬಹುದಾಗಿದೆ. ಮಾದರಿಗಾಗಿ ಒಂದೆರಡು ಕೇಳೋಣ:

೧. ಮೊಲೆಬಿದ್ದ ಸೂಳೆ ಹಾಗದ ಕಾಸಿಗೂ ಬೇಡ.

೨. ಮೊಲೆಕೊಟ್ಟವಳು ಮಂಗಮುಂಡೆ, ಮೈ ಕೊಟ್ಟವಳು ತುಳಜಾಭವಾನಿ.

೩. ಯಾರೂ ಇಲ್ಲದಿದ್ದರೆ ಅಕ್ಕನ ಗಂಡನೇ ಗತಿ.

೪. ಮೊದಲಿದ್ದವಳೇ ವಾಸಿ, ಎಬ್ಬಿಸಿದರೆ ಉಣ್ಣುತ್ತಿದ್ದಳು.

೫. ತೀಟೆ ತೀರಿದ ಮೇಲೆ ಲೌಡಿಯ ಸಂಗವೇನು?

ಇವಗಳಿಗೆ ಗಾದೆ ಅನ್ನಬೇಕೋ ತಗಾದೆ ಅನ್ನಬೇಕೋ? ಒಂದೊಂದು ಗಾದೆಯನ್ನು ಕುರಿತ, ಸಂದರ್ಭ, ಹಿನ್ನೆಲೆಗಳನ್ನು ಕುರಿತು ಒಂದಿಷ್ಟು ಸೂಚಿಸಿದರೆ ಅದರ ಅರ್ಥವ್ಯಾಪ್ತಿ ಕಣ್ಣ ಮುಂದೆ ಕಟ್ಟುತ್ತದೆ. ಅದ್ಬುತ ಜೀವನ ಬದುಕಿದವರೇ ಇಂಥ ವೈಶಿಷ್ಟ್ಯಪೂರ್ಣವಾದ ಸತ್ವಪೂರ್ಣವಾದ ಮಾತನ್ನು ಅಚ್ಚುಕಟ್ಟಾಗಿ ಹೇಳಬಲ್ಲರು. ಮೊದಲೇ ವೇದಕ್ಕೆ ಸಮಾನವೆನಿಸಿದೆ ಗಾದೆ. ಅದರಲ್ಲಿಯೂ ಹೆಣ್ಣು ಮಕ್ಕಳ ಗಾದೆಗಳು ವೇದಕ್ಕೂ ಮಿಕ್ಕಿನಿಂತ ಶಾಶ್ವತ ಸತ್ಯವನ್ನು ತಳೆದಿವೆಯೆಂದು ಹೇಳಲು ಅಡ್ಡಿಯಿಲ್ಲ.