ತಾಯ ಹೊಟ್ಟೆಯಿಂದ ಹುಟ್ಟಿಬಂದ ಗಂಡು; ಹೆಂಡತಿಗೆ ಗಂಡನಾಗುವಂತೆ, ಹೆಣ್ಣು ಗಂಡನಿಗೆ ಹೆಂಡತಿಯಾಗುವುದು ಬಹುತರ ತಪ್ಪದ ನಂಟು. ಗಂಡು ಹೆಣ್ಣು ಎರಡು ಬತ್ತಿ ಹೇಗೋ ಹಾಗೆ ಅವರ ಒಲುಮೆಯ ಮನೆತವೇ ಪ್ರಣತಿ. ಎಣ್ಣೆಯಿದ್ದರೂ ಆ ದಾಂಪತ್ಯ ದೀಪವೆನಿಸದು. ಯಾಕೆಂದರೆ ಅದಕ್ಕೆ ಜ್ಯೋತಿಯನ್ನು ಯಾರೂ ಕೊಟ್ಟಿಲ್ಲ. ತಾಯಿ ತಂದೆಗಳ ಅನುಭವ, ವಧು-ವರರ ಕುತೂಹಲ, ಪಂಚಾಂಗದ ಗ್ರಹಬಲ, ಅಕ್ಷತೆ ಹಾಕಿದ ಗುರು ಹಿರಿಯರ ಶುಭಾಶಯ ಇವೆಲ್ಲ ಬುರ್‌ಬುಸ್ ಆಗಿ, ಚತುರ್ಭುಜರೆನಿಸಬೇಕಾದ ದಾಂಪತ್ಯವು ಚತುಷ್ಟಾದಿಯಾಗುವ ಸಂಭವವನ್ನು ಅಡಿಗಡಿಗೆ ಕಾಣುತ್ತಿದ್ದೇವೆ. ಬಿಡಾಡಿ ದನಗಳ ಹಾಗೆ ಅಲೆದಾಡುವ ಅಂಥ ಗಂಡು ಹೆಣ್ಣುಗಳನ್ನು ಗುರುತಿಸುವರಾರಿಲ್ಲ?

ಎತ್ತು ಎರೆಗೆ ಕೋಣ ಕೆರೆಗೆ ಎಳೆಯುವ ದಾಂಪತ್ಯವನ್ನು ಬಂಧಿಸಿದ ಹಗ್ಗದ ಪಡಮುಗಳು ಎಡಹುರಿ ಬಲಹುರಿಗಳಾಗಿರಲೇಬೇಕೆಂದು ತೋರುತ್ತದೆ. ಎರೆಯೊಳಗಿನ ತೆನೆದಂಟನ್ನು ಕಬಳಿಸಲೆಳಸುವ ಎತ್ತು, ಕೆರೆಯೊಳಗಿನ ಕೆಸರಲ್ಲಿ ಪವಡಿಸ ಬಯಸುವ ಕೋಣ ಗಂಡ ಹೆಂಡಿರ ಪ್ರತೀಕಗಳನ್ನಲು ಅಡ್ಡಿಯಿಲ್ಲ. ಅಥವಾ ಆ ದಂಪತಿಗಳೇ ಎತ್ತು ಕೋಣಗಳನ್ನು ಪ್ರತಿನಿಧಿಸುತ್ತವೆಂದರೂ ತಪ್ಪಾಗದು. ಹೊಲ ಮಾಡದ ಪೋರ, ಮನೆ ಮಾಡದ ಪೋರಿ ಎತ್ತು ಕೋಮಗಳ ಇನ್ನೊಂದು ಸ್ವರೂಪ.

ಅತ್ತೆ ಕತ್ತೆಯೇರಿದಾಗ ಮಾವ ಕೊಡೆ ಹಿಡಿಯಬಲ್ಲ. ಮನೆತನದಲ್ಲಿ ಸೊಸೆಯಾಗಿ ಬಂದವಳಿಗೆ ಎರಡು ವಿಷಯಗಳನ್ನು ಕಲಿಸಿಕೊಡಲು ಇಬ್ಬರು ಶಿಕ್ಷಕರಿರುತ್ತಾರೆ, ಅತ್ತೆ ಮತ್ತು ಗಂಡ. ಅತ್ತೆಯಿಂದ ಕಳವು, ಗಂಡನಿಂದ ಹಾದರ ಇವು ಅವಳು ಕಲಿಯಬೇಕಾದ ವಿಷಯಗಳೇನೋ. ಈ ಮಾತಿನ ಸತ್ಯತೆಯನ್ನು ಗಾದೆಯ ಮಾತೇ ಎತ್ತಿಹೇಳುತ್ತದೆ; ಒತ್ತಿ ಹೇಳುತ್ತದೆ. “ಅತ್ತೆ ಕಲಿಸಿದ ಕಳವು, ಗಂಡ ಕಲಿಸಿದ ಹಾದರ”. ಅತ್ತೆ ಕೇಳುತ್ತಾಳೆ. “ಬೆಲ್ಲ ಇಷ್ಟೇ ಇತ್ತೇ? ಎಣ್ಣೆ ಉಳಿದೇ ಇಲ್ಲ, ಮೊಸರು ಏನಾಯಿತು?” ಈ ಕೀಟಲೆ ಸೊಸೆಯಲ್ಲಿ ಕದ್ದು ತಿನ್ನುವ ತಂತ್ರ ಬೋಧಿಸುತ್ತದೆ. ಅದರಂತೆ ಗಂಡನ ಕಿರಿಕಿರಿ. “ಅಲ್ಲೇಕೆ ನಿಂತಿದ್ದೆ? ಯಾರೊಡನೆ ಮಾತಾಡುತ್ತಿದ್ದೆ?” ನೀನು ಹಲ್ಲು ಕಿಸಿದಾಗ ಯಾರಿದ್ದರು? ಇದು ಹೆಂಡತಿಯನ್ನು ಯಾವ ಉದ್ದಿಮೆಗೆ ಪ್ರೇರಿಸಬಲ್ಲದು? ಅದೇ ಹಾದರವಲ್ಲವೇ?

ತವರು ಮನೆಯಲ್ಲಿ ಅಡಿ ಉಂಡವಳು ಅತ್ತೆಯ ಮನೆಯಲ್ಲಿ ಅಟ್ಟು ಉಂಡಾಳೇ? ಎಂಬಶಂಕೆ. ತುಸು ಪರಿಶ್ರಮಪಟ್ಟರೆ ಅದನ್ನು ಸರಿಪಡಿಸಲು ಸಾಧ್ಯವಿದೆ. ಒಂದು ವೇಳೆ ಸರಿಪಡಿಸುವ ಆ ಪರಿಶ್ರಮ ವ್ಯರ್ಥವಾದರೆ ಮೊದಲಗಿತ್ತಿಯು ಕೈಲಾಗದ ಸೂಳೆಯೆನಿಸಲು ತಡವಾಗದು. ಅಯ್ಯನ ಕೂಡ ಎದ್ದು ಹೋಗುವುದಕ್ಕೆ ಹಿಜರಿಯುವಳಲ್ಲ ಎನಿಸಲು ತಡೆಯಾಗದು. ಆ ಒಲ್ಲದ ಗಂಡನಿಗೆ ಬೆಣ್ಣೆಯಲ್ಲಿ ಕಲ್ಲು ಕಾಣಿಸತೊಡಗುತ್ತವೆ.

ಈ ದುಸ್ಥಿತಿ ಗಂಡನಿಗೇಕೆ ಬಂದಿತೋ? ಅಕ್ಕನ ಮಗಳನ್ನು ತಂದ ಪಾಪವೋ, ತಂಗಿಯ ಮಗಳನ್ನು ಬಿಟ್ಟ ಶಾಪವೋ ಅವನಿಗೇ ಗೊತ್ತು. ಗಂಡು ಹೆಣ್ಣುಗಳ ಸೇರುವೆಯ ವೈವಿಧ್ಯಗಳನ್ನು ನೋಡಿದರೆ ಕಪಟನಾಟಕ ಸೂತ್ರಧಾರನ ತಂತ್ರ ಅಗಾಧವೆನಿಸುತ್ತದೆ. ಒಂದು ಕಡೆಗೆ ಎಟ್ಟಿ ಗಂಡನಿಗೆ ಖೊಟ್ಟಿ ಹೆಂಡತಿ ಸಂಗಳಿಸಿದ್ದರ, ಇನ್ನೊಂದು ಕಡೆಗೆ ಮಳ್ಳ ಹೆಣ್ಣಿಗೆ ಕಿಸುಗಾಲ ಗಂಡ ಗಂಟುಬಿದ್ದಿರುತ್ತಾನೆ. ಗಂಡಹೆಂಡಿರ ಜಗಳ ಒಂದೆಡೆ ಉಂಡು ಮಲಗುವವರೆಗೆ ಮಾತ್ರ ಇದ್ದರೆ ಇನ್ನೊಂದೆಡೆ ಗಂಡ ಹಂಡಿರ ಜಗಳ ಒಂದೆಡೆ ಉಂಡು ಮಲಗುವವರೆಗೆ ಮಾತ್ರ ಇದ್ದರೆ ಇನ್ನೊಂದೆಡೆ ಗಂಡ ಹೆಂಡಿರ ಜಗಳದಲ್ಲಿ ಕೂಸು ಗಾಸಿ ಆಗುತ್ತದೆ. ಹೊರಸು ಆಗದ ಗಂಡ, ನೆಲ ಆಗದ ಹೆಂಡತಿ ಕಾಣಸಿಗುವಂತೆ, ಸಾವಿರ ಕುದುರೆ ಸರದಾರನು ಮನೆ ಹೆಂಡತಿಗೆ ಪಿಂಜಾರನಾದವನು ಕಾಣಿಸಿಗುತ್ತಾನೆ.

ಹೆಂಡತಿಯಿಲ್ಲದ ಮನೆ, ತಂತಿಯಿಲ್ಲದ ವೀಣೆಯೆನಿಸುವ ಪರಿಸರವಿರುವಂತೆ, ಹಿಡಿದವನಿಗೆ ಹೆಂಡತಿ, ಬಿಟ್ಟವನಿಗೆ ಸೂಳೆಯೆನಿಸುವ ಪರಿಸ್ಥಿತಿಯಿರುತ್ತದೆ. ಹೆಂಡತಿ ಜೊತೆಗಿದ್ದರೆ, ದೇಶ ಇದ್ದರೇನು, ಹೋದರೇನು ಎನ್ನುವ ಗಂಡ ಒಬ್ಬಾಕೆಗಿದ್ದರೆ, ಹಿತವಿಲ್ಲದ ಗಂಡ ಹಿಂದೆ ಮಲಗಿದರೇನು ಮುಂದೆ ಲಗಿದರೇನು ಎನಿಸುವ ಗಂಡ ಇನ್ನೊಬ್ಬಾಕೆಗೆ ಇರುತ್ತಾನೆ. ಗಂಡಸಿಗೆ ಎದೆಗಟ್ಟಿ, ಹೆಂಗಸಿಗೆ ನಡುಗಟ್ಟಿ. ಅಂತೆಯೇ ಗಂಡಿಗೆ ಗೆಲ್ಲುವ ಆಶೆ, ಹೆಣ್ಣಿಗೆ ಸೋಲಿಸುವ ಆಸೆ ಇರುತ್ತದೆ.

ಗಂಡಸಿನ ಕೈಯಲ್ಲಿ ಕೂಸು ನಿಲ್ಲದು, ಹೆಂಗಸಿನ ಬಾಯಲ್ಲಿ ಮಾತು ನಿಲ್ಲದು. ಏಕಂತೆ? ಕೇಳುವ ಕಾರಣವೇ ಇಲ್ಲ. ಗಂಡು ಬೆಣ್ಣೆ, ಹೆಣ್ಣು ಬೆಂಕಿ ಅಲ್ಲವೇ? ಊಟಕ್ಕೆ ಸುರಕು ಅನಿವಾರ್ಯವಾದಂತೆ, ಹೆಂಗಸಿಗೆ ಮುರಕು ಅತ್ಯಗತ್ಯ. ಕುದುರೆ – ನೀರುಗಳಂತೆ ಹೆಣ್ಣಿನ ನೆಲೆಯೂ ತಿಳಿಯದೆಂದು ಹೇಳುತ್ತಾರೆ. ಹೆಣ್ಣಿನ ಜನ್ಮಕ್ಕೆ ಹೆಜ್ಜೆಗೊಂದು ಮುಳ್ಳು ಆದರೆ ಗಂಡಿಗೆ? ಗಂಡಸು ಹೆಂಗಸಿಗೆ ಗಂಡನೆನಿಸಿದರೆ, ಗಂಡಸಿಗೆ ಸಾಲವೇ ಗಂಡನೆನಿಸುತ್ತದೆ. ಪ್ರಾಯದಲ್ಲಿ ನಾಯಿಯೂ ಚಂದವಾಗಿರುವಾಗ, ಹೆಣ್ಣು ಚಂದ ಕಾಣಿಸಿದರೆ ಆಶ್ಚರ್ಯವೇನು? ಎಲ್ಲರ ಕಣ್ಣಿಗೂ ಆ ಪ್ರಾಯ ಚಲುವಿನ ಬೀಡು. ಆದರೆ ಆ ಪ್ರಾಯದ ಕುರುಹಾಗಿ ಮೊಲೆಯೆದ್ದಾಗ ಆಕೆಗೆ ನೆಲ ಕಾಣದು. ಅದರಂತೆ ಮೀಸೆಯೆದ್ದ ಗಂಡಸಿಗೆ ದೇಶ ಕಾಣಿಸದು.

ಬಡವನ ಹೆಂಡತಿ ಒಮ್ಮೆ ಬೇಲಿಯ ಹೂ, ಇನ್ನೊಮ್ಮೆ ಊರಿಗೆಲ್ಲ ಅತ್ತಿಗೆ, ಆದರೆ ಬಡವರ ಸೊಸೆಗೆ ಬಾಯಿ ಸಡಿಲುಬಿಡುವವರೆಲ್ಲ ಅತ್ತೆಗಳೇ ಆಗಿರುತ್ತಾರೆ. ದನದಲ್ಲಿ ಹೊಡೆದರೆ ದನದಲ್ಲಿ,ಕರುಗಳಲ್ಲಿ ಹೊಡೆದರೆ ಕರುವಿನಂತೆ ಹೋಗುವ ಹುಚ್ಚಿಗೆ ತವರು ಮನೆಯೂ ಅಷ್ಟೇ, ಅತ್ತೆಯ ಮನೆಯೂ ಅಷ್ಟೇ. ಆದರೆ ಉಂಡೂ ತಿಂದೂ ಗಂಡನಿಗಳುವ ರಂಡೆಯರೂ, ಊರು ತುಂಬ ಗಂಡರಿದ್ದರೂ ಉಡಲು ಸೀರೆ ಕಾಣದ ಮುಂಡೆಯರೂ ಇರದಿದ್ದರೆ ಹೇಗೆ?

ಹಗಲೆಲ್ಲ ಹಾದರ ಮಾಡಿ, ಇರುಳು ಗಂಡನ ತಲೆಯಲ್ಲಿಯ ಹೇನುತೆಗೆಯುವ ನಲ್ಲೆಯಾಗಲಿ, ಅಟ್ಟುಂಬುವನ ಹೆಂಡತಿ ಆಗಬಾರದೆನ್ನುವ ಅರ್ಧಾಂಗಿಯಾಗಲಿ ಅಪರೂಪಕ್ಕೆ ಸಿಕ್ಕುವರೆಂದು ತಿಳಿಯಬಾರದು. ಅರಸನ ಕಂಡು ಪುರುಷನ ಮರೆಯುವಂಥ ಸುಶೀಲೆಯರಿಗೇನು ಕೊರತೆಯಿಲ್ಲ. ಅವಸರದಲ್ಲಿ ಅವಕ್ ಎನ್ನುವ ಗಂಡ ಸಿಗುವ ಭಾಗ್ಯವಾಗಲಿ, ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದರೆ, ಅವಕ್ ಎನ್ನುವ ಅಕ್ಕನ ಗಂಡನಾಗಲಿ ದೊರಕೊಳ್ಳು ಸುದೈವವಾಗಲಿ ಎಲ್ಲರಿಗೂ ಲಭಿಸುವಂಥದಲ್ಲ.

ಕೂಸು ಹುಟ್ಟುವ ಮೊದಲು ಕುಲಾಯಿ ಹೊಲೆದಿಡುವ ಹೆಂಡತಿಗೆ, ನೀನು ಓಲೆಗಿವಿಯವಳನ್ನು ನೋಡಿದರೆ, ನಾನು ಒಂಟಿಕಿವಿಯವಳನ್ನು ನಡುತ್ತೇನೆ ಎನ್ನುವ ಗಂಡ ಸಿಕ್ಕಿದರೆ ಹೇಗಾದೀತು – ಕಲ್ಪಿಸುವಂತಿದೆ. ನೆರೆತಾಗಿನ ಸುಖ ಹಡೆದಾಗ ಬಂದೀತೆ ಎಂಬ ತನುಭಾವ ಬಂದವರನ್ನೂ, ಪರಪುರುಷರಿಲ್ಲದಾಗ ಕೈಹಿಡಿದ ಪತಿಯೇ ಗತಿಯೆನ್ನುವ ಅನುಭಾವ ಬಂದವರನ್ನೂ ಹೆಚ್ಚು ಹುಡುಕಬೇಕಿಲ್ಲ. ಪುಕ್ಕಟೆ ಗಂಡನಿಗೆ ಇರುಳೂ ಹಗಲೂ ದೀಪವಿಡುವ ಗೃಹಿಣಿ ಹರದಾರಿಗೊಬ್ಬರು ಸಿಕ್ಕಾರು ಈಕೆಳಗಿನಂತೆ ಉಸಿರುಗರೆದ ಧರ್ಮ ಪತ್ನಿಯರೂ ಇದ್ದಾರೆಂದರೆ ಆಶ್ಚರ್ಯವಲ್ಲವೇ?

೧. ಪೀತಾಂಬರ ಉಟ್ಟರೂ ಕೋತಂಬರಿ ಮಾರೂದು ತಪ್ಪಲಿಲ್ಲ.

೨. ಪುತ್ರರಿಲ್ಲದವರು ಸತ್ರಕ್ಕೆ ಹೋಗಬೇಕೇ?

೩. ಪೋರೀನ ನೆಚ್ಚಿ ಬೇರೆಯಾಗಬಾರದು, ಹೋರಿನ ನೆಚ್ಚಿ ಹೊಲ ಮಾಡಬಾರದು.

ಎಂಬ ತಿಳುವಳಿಕೆ ಬಂದವನು ಬೋಳಿಯಾಗಲಿ ಕಾಳಿಯಾಗಲಿ ಲೋಳಿ ಹೋದರಾಯಿತು ಎಂಬ ನಿರ್ಧಾರಕ್ಕೆ ಬರುವುದು ನಿಶ್ಚಯ.

ಮಕ್ಕಳೆಂದರೆ ಹೆಣ್ಣಿಗೆ ಪಂಚಪ್ರಾಣ. ಮಕ್ಕಳ ಒಳಿತಿಗಾಗಿ ಯಾವ ದಿವ್ಯ ವನ್ನಾದರೂ ತಾಯಿ ಮಾಡಬಲ್ಲಳು. ಮಗುವಿನ ಹೊಟ್ಟೆ ನೋವಿಗೆ ಆಕೆ ಅಜಿವಾನ ತಿನ್ನುವುದು ಎಲ್ಲರಿಗೂ ಗೊತ್ತು; ಇನ್ನೇನಾದರೂ ತಿನ್ನಬಲ್ಲಳೆಂದೂ ಹೇಳುತ್ತಾರೆ. ಆದರೆ ಮಕ್ಕಳೇ ಇಲ್ಲದಿದ್ದರೆ ಅದನ್ನು ಪಡೆಯುವ ಚಿಂತೆ, ಉಪಾಯ ಚಿಂತನಕ್ರಮ ಪ್ರಾಪ್ತ – ಮೆಚ್ಚಿ ಬಂದವಳಿಗೆ ಬಿಚ್ಚೋಲೆಯೇ ಸಾಕು, ಆದರೆ ಮೊಲೆಬಿದ್ದ ಸೂಳೆಗೇನು? ಆಕೆ ಹಾಗದ ಕಾಸಿಗೂ ಬೇಡ, ಬೀಜ ಬಿತ್ತಿಗೆಗಳಿಗೆ ಹಂಗಾಮು – ತತಿಯಿರುತ್ತದೆ.

ಮೊಲೆಕೊಟ್ಟವಳು ಮಂಗಮುಂಡೆ, ಮೈ ಕೊಟ್ಟವಳು ತುಳಜಾಭವಾನಿ. ಯಾರೂ ಇಲ್ಲದಿದ್ದರೆ ಅಕ್ಕನ ಗಂಡನೇ ಗತಿ ಎಂಬ ಸೂತ್ರಗಳೇ ಆಕೆ ಚಾಳಿಗೆ ಸುಸೂತ್ರತೆ ಆಗಿದೆ. ಆದರೆ ಸತ್ತ ಗಂಡ ಸ್ವಪ್ನಕ್ಕೆ ಬಂದರೆ ಹಿಟ್ಟುಬಟ್ಟೆ ಕೊಡುವನೇ? ಆಕೆಯ ಹಾದಿಯೇ ಬೇರೆ. ಹಾವು ಮೆಟ್ಟಿಕೊಂಡು ಹಾದರ ಮಾಡುವವಳಾಗಿಬಿಟ್ಟರೆ ಸೇದುವ ಹಗ್ಗಕ್ಕೆ ಬೆದರುವಳೇ? ಹೆಣ್ಣು ಹಾವಿಗೆ ಸಣ್ಣದೆನ್ನಳು, ಗಂಡನಿಗೆ ನನ್ನವಳೆನ್ನಳು. ಗಂಡೂ ಹಾಗೆಯೇ. ತೀಟೆ ತೀರಿದ ಬಳಿಕ ಲೌಡಿಯ ಸಂಗವೇನು ಅನ್ನುತ್ತಾನೆ. ಸರಸ-ವಿರಸಗಳೆಲ್ಲ ಸಮರಸಗೊಳ್ಳುವ ಮೊದಲು ನೆನಪಿನಲ್ಲಿಡಬೇಕಾದ ರಸಾಯನವನ್ನು ಗಾದೆಗಳು ಹೇಳಿಕೊಡುತ್ತವೆ.