ಕನ್ನಾಡಿನ ಜನಪದ ಸಾಹಿತ್ಯಾಚಾರ್ಯನಾದ ಸರ್ವಜ್ಞ ಕವಿಯು ಹಸಿವೆ ಊಟ ಹಾಗೂ ಅವುಗಳ ಕ್ರಮ ಹೇಳಿಕೊಟ್ಟು ವೈದ್ಯರ ಗಸಣೆ ತಪ್ಪಿಸುವ ಯುಕ್ತಿಯನ್ನು ಸ್ವಲ್ಪದರಲ್ಲಿ ಹೇಳಿದ್ದನ್ನು ಬಿಟ್ಟರೆ, ಗಾದೆ ಮಾತುಗಳು ಅದನ್ನು ಸಂಕ್ಷೇಪವಾಗಿಯಾದರೂ ಸಾಕಷ್ಟು ಹೇಳಿದ್ದುಂಟು. “ಕೂಳು ಕುತ್ತ, ನೀರು ಪಿತ್ತ, ಮುದ್ದೆಗೆ ನಿದ್ದೆ ಘನ, ನಿದ್ದೆಗೆ ದಾರಿದ್ರ್ಯ ಘನ” ಮೊದಲಾದ ಗಾದೆಗಳು ಈ ಮಾತಿಗೆ ಸತ್ಯಸಾಕ್ಷಿಯಾಗಿವೆ.

“ಹೊಟ್ಟೆಯಂಥ ವೈರಿ ಯಾವುದಿಲ್ಲ” ಎಂದು ಲಾವಣಿಕಾರನು ಹೇಳಿದರೆ, “ಅಕ್ಕಿ ತಿಂದವ ಹಕ್ಕಿ, ಜೋಳ ತಿಂದವ ತೋಳ”, “ತೆನೆ ತಿಂದ ಎತ್ತು ತೆವರು ಏರುವದು” ಎಂದು ಗಾದೆಗಳು ಅದಕ್ಕೆ ಸ್ಪಷ್ಟೀಕರಣ ನೀಡುತ್ತವೆ. ಆದರೆ  “ಹಸಿದ ನಾಯಿಗೆ ಹಳಸಿದ ನುಚ್ಚು”, ‘ಪರೀಕ್ಷೆಗೆಂದು ಮೀನು ತಿಂದರೆ ಬಾಯಿ ನಾರದೆ ಇದ್ದೀತೆ?’ ಎಂಬುದನ್ನು ಮರೆಯಲಿಕ್ಕಾಗದು. “ಬಡತನಕ್ಕೆ ಮೈಯೆಲ್ಲಾ ಬಾಯಿ” ಎಂದರೆ, ಮಕ್ಕಳು ಹಸಿವೆಗೆಟ್ಟು ಮಣ್ಣು ತಿನ್ನುವುದುಂಟು. ಅದಕ್ಕಾಗಿ ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸುವ ಉಪಾಯ ಹೇಳಿದ್ದಲ್ಲದೆ, ಹುಲಿಮರಿ ಹಸಿದರೆ ಹುಲ್ಲು ತಿಂದೀತೇ? ಎಂದು ಕೇಳುತ್ತದೆ. ಮನುಷ್ಯನು ಹಿತಕರವಾದ ಆಹಾರವನ್ನೇ ತೆಗೆದುಕೊಳ್ಳಬೇಕೆಂದು ಸ್ಪಷ್ಟವಾಗಿ ಹೇಳುವ ಗಾದೆಗಳು ವಿಪುಲವಾಗಿವೆ. ಆದ್ದರಿಂದ ತೆರೋದುಡ್ಡು ತೆತ್ತು ಹುಳಿಮಜ್ಜಿಗೆ ಏಕೆ ಕುಡಿಯಬೇಕು? “ಉಣ್ಣಬೇಕಾದರೆ ಎಮ್ಮೆ ಕಟ್ಟು, ಕರು ಬೇಕಾದರೆ ಆಕಳು ಕಟ್ಟು” ಎಂದು ಹೇಳಿದ್ದ ಏತಕ್ಕಾಗಿ? ಆದರೆ “ಬೆಳೆ ಹೊಗಳಿಸಿ ಉಣ್ಣಬೇಕು, ಹಯನು ಹಂಗಿಸಿ ಉಣ್ಣಬೇಕು”.

ಜಿಡ್ಡು ತುಪ್ಪಿಗೆ ಮಡ್ಡು ಬಹಳವೆಂದರೂ, ನೀರಡಿಸಿದವರಿಗೆ ತುಪ್ಪ ಕೊಡುವರೇ? ಹಣ್ಣು ಹೊಟ್ಟೆಗೆ ಹಿತಕರ, ಅಹುದು. ಆದರೆ ಫಲ ನೋಡಿದರೆ ಬಾಯಾರಿಕೆ ಹಿಂಗೀತೇ? ಹಸಿವೆಯಿಂದ ಕಂಗೆಟ್ಟು ಬರಿ ಬಾಯಾಡಿಸುವವನಿಗೆ ಗುಗ್ಗರಿ ಸಿಕ್ಕರೆ ಕೇಳುವುದೇನು/ ಔಷಧದ ಪರಿಣಾಮಕ್ಕಿಂತ ಪಥ್ಯದ ಪರಿಣಾಮ ಹೆಚ್ಚಿನದು. “ಪಥ್ಯಮಾಡಿ ಪಿತ್ತ ಕೆಟ್ಟಿತು” ಪಥ್ಯಾಪಥ್ಯಗಳ ತಾರತಮ್ಯವರಿಯದೆ ತೂಗಿ ತಿಂದು ತಿಣಕಿ ಹೇಲುವ ಶೆಟ್ಟರನ್ನು ಬಿಟ್ಟರೂ ಪರಮೇಶ್ವರನ ಹೆಸರು ಹೇಳಿ ಪರಮಾನ್ನ ಉಣ್ಣುವವರು ಬಾಯಸವಿಗಾಗಿ “ನೆತ್ತಿಯ ಮೇಲೆ ಬಾಯಿದ್ದರೆ ಇನ್ನೊಂದು ತುತ್ತು ಹೆಚ್ಚಿಗೆ ಉಣ್ಣುತ್ತಿದ್ದೆ” ಎನ್ನುವ ಪರಪುಷ್ಟರ ಲೆಕ್ಕವೇ ಬೇರೆ.

“ರುಚಿಮಾಡಿಕೊಂಡು ಉಣ್ಣು, ಮೆತ್ತಗೆ ಮಾಡಿಕೊಂಡು ಉಣ್ಣು” ಎನ್ನುವ ಗಾದೆಯನ್ನು ನೆನಪಿನಲ್ಲಿಟ್ಟ “ಪುರೋಹಿತ” ವರ್ಗದವರು “ಭಕ್ತರ ಮನೆಯಲ್ಲಿ ಊಟ, ಬಸವಿಯ ಮನೆಯಲ್ಲಿ ನಿದ್ರೆ” ಮಾಡುವುದುಂಟು. ಆದರೆ ಅವರು ತಮಗೆ ಯಾರ ಹಂಗೂ ಇಲ್ಲವೆಂದು ಹೇಳುತ್ತಾರೆ. ಅಹುದು, ಅದರಲ್ಲಿ ಅರ್ಧಕ್ಕರ್ಧ ಸತ್ಯವಿರುತ್ತದೆ.ಅಂದರೆ ಉಳಿದದ್ದು ಅಕ್ರಮ. “ಯಾರ ಹಂಗೂ ಇಲ್ಲ. ಹತ್ತುಮನೆ ಭಿಕ್ಷೆ ಬೇಡಿದರಾಯಿತು” ಎನ್ನುವ ಅವರ ಮಂಡಿಗೆ ಸತ್ಯಕ್ಕಿಂತ ಸತ್ಯ! ಪಟ್ಟ ಪರಿಶ್ರಮ “ಹಬ್ಬಕ್ಕೆ ಬಾ ತಂಗೀ, ಇಬ್ಬರೂ ತಿರಕೊಂಡು ತಿನ್ನೋಣ” ಎನ್ನುತ್ತಾನೆ. ಆದರೆ ಹುಟ್ಟು ರೋಗಿಯ ಆತ್ಮವಿಶ್ವಾಸವೇ ಬೇರೆಯಾಗಿರುತ್ತದೆ.ಸಾಯುತ್ತೇನೆ, ಸಾಯುತ್ತೇನೆ ಎಂದು ಸಾವಿರ ಕೋಳಿ ಮುಗಿಸಿದರು ಎನ್ನುವ ವರ್ಗಕ್ಕೆ ಸೇರ್ಪಡೆಗೊಂಡಿರುತ್ತಾನೆ ಅವನು.

ನಡುವರೆಯದವನ ಕೆಚ್ಚು ಒಂದು ಬಗೆಯಾದರೆ, ಇಳಿವಯಸ್ಸಿನವನ ಕಿಚ್ಚು ಇನ್ನೊಂದು ಬಗೆಯದಾಗಿರುತ್ತದೆ. ಅವನದು ಬಾಯಿಯ ಮೇಲೆ ಭರವಸೆ, ಇವನದು ಹೊಟ್ಟೆಯ ಮೇಲೆ ಕಸಕಸೆ. ಅದಕ್ಕೆ ಅನ್ನುವುದು ಗಾದೆ ಹೊಸ ಕೈ ಬಾಯಿಗೆ, ಹಳೆ ಕೈ ಹೊಟ್ಟೆಗೆ. ಬಾಯಿಗೆ ಭಲೆಯೆಂದು ಕೆರಳಿಸುವನೊಬ್ಬ, ಹೊಟ್ಟೆಗೆ ಹಲೆಯೆಂದು ಕುಸುರಿಸುವವನಿನ್ನೊಬ್ಬ. ಹೇಳಿಕೇಳಿ ಬಾಯಿ ಸಣ್ಣದು ಹೊಟ್ಟೆ ದೊಡ್ಡದು. “ಸೂಜಿಯಷ್ಟು ಬಾಯಿ, ಗುಡಾಣದಷ್ಟು ಹೊಟ್ಟೆ.”

ಸಾಮಾನ್ಯವಾಗಿ ಮನುಷ್ಯನು ಹಸಿದಾಗ ಬಾಗುವುದೂ ಉಂಡಾಗ ಬೀಗುವುದೂ ಅವನ ಪ್ರಕೃತಿ ಧರ್ಮ. ಆಗ ಹಾರುವ ಈಗ ಮುಸ್ಲಿಮ. ಅವನ ಎರಡೂ ಅವಸ್ಥಗಳನ್ನು ಒಂದೇ ಮಾತಿನಲ್ಲಿ ಹೇಳಿದ ಗಾದೆಯೆಂದರೆ – ಸಿಕ್ಕಿದರೆ ಉಚ್ಚಿ ಕುಡಿದೇನು,ಸೊಕ್ಕಿದರೆ ರಕ್ತ ಕುಡಿದೇನು. ಬೊಕ್ಕಸಕ್ಕೆ ಕೊಡುಮೆ ಜಗ್ಗದು. ಸಾಧ್ಯವಿದ್ದಷ್ಟು ಅಕ್ಕಿ ಸವೆಯಬಾರದು, ಅಕ್ಕನ ಮಕ್ಕಲು ಸೊರಗಬಾರದು ಎನ್ನುವ ಧೋರಣೆ ಅಚಲವಾಗಿರುತ್ತದೆ. “ಊಟವೆಂದರೆ ಹೂಂ, ಓಟವೆಂದರೆ ಊಹೂಂ!” ಎಂದು ಆಲಸಿಕೆಯ ಮುದ್ದೆ ಆಗುತ್ತದೆ. ಆದರೆ ಹೆರರ ಬುತ್ತಿಗೆ ಉಳ್ಳೆಗಡ್ಡಿ ಸುಲಿವ ಎತ್ತುಗಡೆ ಮಾತ್ರ ಮರೆಯುವುದಿಲ್ಲ. ಇಂಥ ಪ್ರಕೃತಿಯವರು – ಮಂಡಿಹಾಕಿ ಕುಳಿತರೆ ಮಂಡಿಗೆ ಬಡಿಸುವವರಾರು?

“ದೋಸೆಯದು ಊಟವಲ್ಲ ದಾಸರದು ಆಟವಲ್ಲ” ದೋಸೆಯನ್ನು ಊಟಕ್ಕೆ ಉಪಯೋಗಿಸುವುದಕ್ಕಿಂತ, ಬಾಯೆಂಜಲಿಗಾಗಿ ಮಾತ್ರಸವಿಯಬಹುದೆಂದು ತೋರುತ್ತದೆ. ಅದು ಹಸಿದು ತಿನ್ನುವಂಥದಲ್ಲ. “ಹಸಿದು ಹಣ್ಣು ತಿನ್ನು” ಎಂದಿದೆ ಗಾದೆ. ಆದರೆ ಇಂದಿನ ನಾಗರಿಕತೆ ಊಟದ ತರ್ವಾಯ ಹಣ್ಣು ತಿನ್ನಬೇಕೆಂದು ಹೇಳುತ್ತದೆ. ಆದರೆ ಒಳಗಿನಕಾರಣ ಬೇರೆಯೇ ಇರುತ್ತದೆ. “ಸುರಿದು ಉಣ್ಣಬೇಕು, ಗೊರಿದು ನಿದ್ರಿಸಬೇಕು” ಎನ್ನುವ ಪರಿಪಾಠವು ತೃಪ್ತಿಯ ದಾರಿಯೆಂದು ತೋರುತ್ತದೆ. ಇಂದಿನ ೨೦ನೇ ಶತಮಾನ್ದಲ್ಲಿ ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮವು ಚಮಚೆಯಿಂದ ಉಣ್ಣುವ ಪರಮೋಚ್ಚ ಪದ್ಧತಿಯನ್ನು ಕಡ್ಡಾಯಗೊಳಿಸಿದ್ದು ಆದರ್ಶಭೂತವಾಗಿದೆ. ಕರಕೊಂಡು ತಿನ್ನುವ ಅಥವಾ ಮುರಕೊಂಡು ತಿನ್ನುವ ಆಹಾರಕ್ಕೆ ಚಮಚೆಯ ಪ್ರಯೋಜನವಾಗದು. ಅದಕ್ಕೆ ತೀರ ಅಳ್ಳಕವಾದ ಆಹಾರವೇ ಬೇಕು. ಚಮಚೆ ಹೊಚ್ಚಹೊಸ ನಾಗರಿಕರಿಗಾದರೆ, ಜನಪದಕ್ಕೆ ಸುರಕೊಂಡು ಉಣ್ಣುವುದೇ ಶ್ರೇಷ್ಠ ಉಪಾಯವಾಗಿದೆ. ಸುರಕೊಂಡು ಉಂಡವನಿಗೆ ಗೊರಕೆಯ ನಿದ್ರೆ ಬರುತ್ತದೆ. ಅಂಬಲಿ, ನುಚ್ಚು ಮಜ್ಜಿಗೆ, ಹಾಲು ಅಥವಾ ಕಾರಬೇಳೆಯಲ್ಲಿ ಕಲಿಸಿದ ರೊಟ್ಟಿಯೇ ಸುರಕೊಂಡು ತಿನ್ನುವ ಆಹಾರವಾಗಿದೆ. “ಸುರಕು ಇಲ್ಲದ ಊಟ, ಮುರಕು ಇಲ್ಲದ ಹೆಂಡತಿ ಸಮ” ಎನ್ನುವನು ಕುಲರಸಿಕ.

ಆಯ್ಕೊಂಡು ತಿಂದವನು ಕಾಯ್ಕೋಲ ದೀವಟಿಗೆ ಆಗುತ್ತಾನಂತೆ. ಅಚ್ಚ ಹಸಿವೆಯೇ ಅದಕ್ಕೆ ಕಾರಣವೆನ್ನಬೇಕು. ಕಳ್ಳಹಸಿವೆಗೆ ಯಾವುದೂ ರುಚಿಸುವುದಿಲ್ಲ ಅಥವಾ ಇಲ್ಲದ್ದೊಂದು ಬೇಡುತ್ತದೆ. ಕೆಲವು ಪ್ರಕೃತಿಗಳು ಉಣ್ಣುವುದಕ್ಕಾಗಿಯೇ ನಿರ್ಮಾಣಗೊಂಡಂತೆ ತೋರುತ್ತದೆ. “ಜೀನ ಗಳಿಸಿದ; ಜಾಣ ಉಂಡ.” ಜಾಣನಿಗೆ ಹಸಿವೆಯೇ ಹೆಚ್ಚಿನ ರುಚಿ. ಅದಕ್ಕೆಂದೇ ಹೇಳಲಾಗುತ್ತದೆ. “ಕೆಟ್ಟ ಅಡಿಗೆ ಉಂಡವನೇ ಜಾಣ” ಎಂದು.

ಹೋರಿಗೆ ತೆನೆ, ಹರೆಯನಿಗೆ ಕೆನೆ. ತೆನೆ ತಿಂದ ಎತ್ತು ತೆವರೇರಿದರೆ, ಕೆನೆ ತಿಂದ ತರುಣ ಬೆವರಿಳಿಸುವನು. ಉಗುಳು ನುಂಗಿದರೆ ಹೊಟ್ಟೆ ತುಂಬುವುದೇ? ಹಸಿವೆಯನ್ನು ಹತ್ತಿಕ್ಕುತ್ತ ಬಂದ ಜೀನನ ನಾಡಿಗಳು ಸಾಯಲಾಗುತ್ತವೆ. ಅವನ ಪಾಲಿಗೆ ಅಲಾಯಿ ಹಬ್ಬದಲ್ಲಿ ಕಟ್ಟಿಕೊಂಡು ನಾಡಿಯೇ ಜೀವನಾಡಿ. “ನಾಡಿ ಆಡದವನು ಓಡಿಬಂದಾನೇ?” ಹಸಿವೆಯಿಲ್ಲದ ಊಟ, ಖುಷಿಯೆ ಇಲ್ಲದ ನಗೆ ತಣಿಸಲಾರವು. “ಹಸಿದ ಬೆಕ್ಕಿಗೆ ಹುಲಿಯೂ ಇಲಿಯಂತೆ ತೋರುವುದು.” ಆದರೆ “ಹೊಟ್ಟೆ ತುಂಬಿದಾಗ ಹುಗ್ಗಿಯೂ ಮುಳ್ಳುಮುಳ್ಳು”.

ಹೊಟ್ಟೆಯೆನ್ನುವುದು ಹುಟ್ಟುವೈರಿ ಎನಿಸುವುದಕ್ಕೆ ಹಸಿವೆಯ ಕಿಚ್ಚೇ ಕಾರಣ. ಹೊಟ್ಟೆ ಹೊಲೆಯರ ಮನೆಯನ್ನೂ ನುಗ್ಗಿಸುವುದು. ಆದ್ದರಿಂದ ಇರಬೇಕು, ಇದ್ದುಣಬೇಕು ಎಂದಿದ್ದಾನೆ ಕವಿ. ಏತಕ್ಕಾಗಿ ಇಡಬೇಕು? ಇಡುವುದಕ್ಕಾಗಿಯೇ ಇಡಬೇಕೆಂದು ಹೇಳುವವರುಂಟು. “ಇದ್ದಾಗ ನೀಡು, ಇಲ್ಲದಾಗ ಬೇಡು.” ಇದು ಸಮನ್ವಯ ಧರ್ಮ. ಇಡುವುದು ಬೇರೆ, ಕೊಡುವುದು ಬೇರೆ. “ಅಳೆದು ಕೊಟ್ಟಿದ್ದು ಸಾಲ, ಕರೆದು ಇಕ್ಕಿದ್ದು ಊಟ.” ಒಂಟಿಗನಾಗಿ ಉಂಡಿದ್ದು ನಿವಾಳಿಯೆಂದೂ, ಜೊತೆಗೂಡಿ ಉಂಡಿದ್ದು ಪ್ರಸಾದವೆಂದೂ ಹೇಳಲಾಗುತ್ತದೆ. “ಹಣ್ಣು ಹಂಚಿ ತಿನ್ನು, ಹೂ ಕೊಟ್ಟು ಮುಡಿ” ಅನ್ನುತ್ತದೆ ಗಾದೆ.

ಕದ್ದು ತಿನ್ನಬಾರದು, ಬೇಡಿ ತಿನ್ನಬೇಕು – ಇದೊಂದು ನೀತಿ. ಆದರೆ ಬೇಡಿ ತಿನ್ನುವುದಕ್ಕಾಗಿ ಬಾಯಲ್ಲಿ ನಾಚಿಕೆಗೇಡಿ ನಾಲಗೆಯನ್ನೇ ಪಳಗಿಸಿದವರಿದ್ದಾರೆ. “ನಾಚಿಕೆಗೇಡಿ ನಾಲಗೆಯಿದ್ದರೆ, ನಾಲ್ಕೆಮ್ಮೆಯ ಹಯನು ಇದ್ದಂತೆ” ಆದರೆ ದಿನಾಲು ಸಾಯುವವರಿಗೆ ಅಳುವವರಾರು? ದಿನಾಲು ಬೇಡುವ ಬಾಯಿಗೂ, ಕಂಡುಗ ತಿನ್ನುವ ಮನೆಗೂ ಕೈಗಡ ಕೊಡುವವರಾರು? ಕೊಡುವಾಗ ಕಡ, ಬರುವಾಗ ಕಟ್ಟ.

ಊಟ ಅಂಕಿಯಿದ್ದ ಹಾಗೆ, ಉಪಹಾರ ಶೂನ್ಯವಿದ್ದಹಾಗೆ. ಅವೆಷ್ಟು ಶೂನ್ಯಗಳು ಸೇರಿದರೂ ಒಂದು ಅಂಕಿ ಆಗಲಾರದು. “ಖಂಡುಗ ಫಳಾರ ಮಾಡಿದರೂ ಉಂಡಂತಾಗದು.”, ಇಲ್ಲದಕ್ಕೆ ಒಲ್ಲೆನ್ನುವವನನ್ನು ಬಿಟ್ಟರೆ, ಭತ್ತವಿದ್ದೂ ಬಡತನ, ಗಂಡನಿದ್ದೂ ರಂಡೆತನ ಭೋಗಿಸುವವರಿಗೆ ಉಪಹಾರ ಒಂದೇ ಸೊನ್ನೆಯಲ್ಲ; ಊಟವೂ ಸೊನ್ನೆಯೇ. ಅಂಥವರ ಪಾಲಿಗೆ “ಬಾಯಿಗೆ ಬಂದದ್ದೇ ಬಾಸುಂದಿ. “ ಮುಂಗಾಲಪುಟಿಕೆಯವರ ಸ್ವಭಾವವೇ ಬೇರೆ, ಅವರು “ಬೆಣ್ಣೆ ತಿಂದು ತಿಂದು ಹುಲ್ಲು ಹೋದವು” ಎಂದು ಒಮ್ಮೆ ಹೇಳಿದರೆ, ಇನ್ನೊಮ್ಮೆ “ಹಲ್ಲು ಹೋದಮೇಲೆ ಕಲ್ಲು ಜಗೀದೇನು” ಎಂದು ಹೇಳಲಿಕ್ಕೆ ಹಿಂಜರಿಯುವುದಿಲ್ಲ. ಉಣಿಸುತಿನಿಸುಗಳಲ್ಲಿಕಟ್ಟುಪಾಡು ಹೇಳುವ ಹಲವಾರು ಗಾದೆಗಳು ನಮ್ಮ ಆರೋಗ್ಯ ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲವು. ಅವುಗಳ ಮಾದರಿ ಬೇಕಲ್ಲವೇ?

೧. ಕಾಯಿ ಕಚ್ಚಬೇಡ, ಹುಳಿ ಸುರಿಯಬೇಡ.

೨. ಸತ್ಯವೂ ಪಥ್ಯವೂ ಕೆಡಿಸುವುದಿಲ್ಲ.

೩. ಮಗ ಉಂಡರೆ ಕೇಡಲ್ಲ, ಮಳೆ ಬಂದರೆ ಕೇಡಲ್ಲ.

೪. ಅಡಿಗೆಯ ಗುಣ ಸಾರಿನಲ್ಲಿ ನೋಡು.

೫. ನೆಗಡಿಗೆ ಊಚ, ಜ್ವರಕ್ಕೆ ಉಪವಾಸ.

೬. ಬಾಯಿ ಉಳ್ಳೋರು ಬರದಲ್ಲಿ ಗೆದ್ದರು.

೭. ತಾಯಿ ಬೇಕು, ಇಲ್ಲವೆ ಬಾಯಿ ಬೇಕು.

೮. ಹಸಿದು ಹಣ್ಣು ತಿನ್ನು, ಉಂಡು ಕಬ್ಬತಿನ್ನು.

೯. ಹಾಲಿದ್ದಾಗ ಹಬ್ಬ ಮಾಡು.

ಅಚ್ಚ ಅನುಭವದ ನುಡಿಗಳಾಗಿ ಸವಕಳಿಯಿಲ್ಲದ ನಾಣ್ಯಗಳಂತೆ ಹತ್ತಾರು ಶತಮಾನಗಳಿಂದ ವ್ಯವಹಾರದಲ್ಲಿ ಬಳಕೆಯಾಗುತ್ತಿರವ ಗಾದೆಗಳೆಂದರೆ ಭಾಷೆಯ ಆಸ್ತಿ; ಇಡುಗಂಟು. ಅವು ಅಚ್ಚಳಿಯದೆ ಬಹುಕಾಲ ಬದುಕಿಕೊಳ್ಳುವ ಬಲ ಪಡೆದಿವೆ; ಮಾತಿಗೆ ಬಲಕೊಡುವ ಛಲ ಪಡೆದಿವೆ.