ಗಾದೆಗಳೆಂದರೆ ಜನಪದದ ಶ್ರೀಮಂತಿಕೆ. ಜೀವನಾನುಭವದಲ್ಲಿ ಗಳಿಸಿಟ್ಟ ಸವೆಯದ ಸಂಪತ್ತು. ನಮ್ಮ ಜನಪದದಲ್ಲಿ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಂಡಿರುವ ಕೃಷಿಕರ ಮಹಾನುಭಾವ ಗಾದೆಗಳಲ್ಲಿ ಹುದುಗಿಕೊಂಡಿದೆ. ಆ ಮಹಾನುಭಾವವನ್ನು ಕೃಷಿಕ ಸಂತಾನಕ್ಕೆ ಧಾರೆಯೆರೆಯುತ್ತ ಬಂದಿದೆ.ಈ ಗಾಧಾಸಮುಚ್ಚಯ ನಾಡಿಗೆ ಹೆಚ್ಚಿನ ಸಂಪತ್ತನ್ನು ಒದಗಿಸಿಕೊಡುವ ಪರಿಶ್ರಮ ಕೃಷಿಕನಾದರೆ, ಅದರ ಮೌಲ್ಯಮಾಪನವನ್ನು ಹದಗೊಳಿಸುವ ಪರಿಶ್ರಮ ವ್ಯಾಪಾರಿಯದು. ಜನಾಂಗದ ಎಡಗೈ – ಬಲಗೈಯಂತಿದ್ದ ಈ ಕೃಷಿಕ – ವ್ಯಾಪಾರಿಗಳಿಗೆ ಸಲಹೆಯೋಪಾದಿಯಲ್ಲಿ ಕಿವಿಮಾತು ಉಸುರುವ ಗಾದೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಕೃಷಿಕನಿಗೆ ನೀಡಿದ ಸಲಹೆಗಳಲ್ಲಿ ಮೊದಲ ಪಾಠದಂತಿರುವ ಒಂದೆರಡು ಗಾದೆಗಳನ್ನು ಇಲ್ಲಿ ಅವಲೋಕಿಸೋಣ –

ಅಂಗೈ ಹಾಗೆ ಹೊಲ ಮಾಡಿದರೆ ಮುಂಗೈ ತುಂಬ ತುಪ್ಪ
ಅಂಗಲಾಗಿ ಬಿತ್ತಿದ್ದು ಅಗಲವಾಗಿ ಏರುವುದು
ಆಳವಾಗಿ ಅಗೆದರೆ ನೀಳವಾಗಿ ಬೆಳೆಯುವುದು
ಊಳುವಾಗ ಊರಿದರೆ ಕೊಯ್ಯುವಾಗ ಹಗರು
ಆದರೆ ಒಂದು ಅಡಕೆ ಮರ, ಹೋದರೆ ಒಂದು ಗೂಟಡಿಕೆ
ಅಂಗೈ ಮಣ್ಣಾದರೆ ಅಂಗಳಿಗೆ ಗಂಜಿ

ಕರಕಿ-ಕಣಗಿಲೆಗಳನ್ನು ಸಮೂಲ ನಾಶಗೊಳಿಸಿ ನೆಲಸಮ ಪಾತಳಿಯಾಗುವಂತೆ ಮಾಡುವುದೇ ಅಂಗೈ ಹಾಗೆ ಹೊಲ ಮಾಡು ಎನ್ನುವುದರ ಭಾವಾರ್ಥ. ಸಮಪಾತಳಿ ಮಾಡುವ ಮೊದಲು ಭೂಮಿಯನ್ನು ಆಳವಾಗಿ ಅಗೆದು, ಸತ್ವಯುತ ಮಣ್ಣು ಮೇಲೆದ್ದು ಬರುವಂತೆ ಮಾಡಬೇಕಾಗುವುದು. ಅಂಥ ನೆಲದಲ್ಲಿ ಬಂದ ಪಸಲು ಎತ್ತರವಾಗಿ ಬೆಳೆದು ನಿಲ್ಲುತ್ತದೆ. ಅದು ಮುಂಬರುವ ಕಾಲದಲ್ಲಿ ಎಡೆಗೊಂಡು ಬರುವ ತುಪ್ಪದೂಟ. ಅಂಗೈಯಿಂದ ಮುಂಗೈಗೆ ತುಪ್ಪ ಬರುವುದೇ ಸಮೀಚೀನವಾದ ತುಪ್ಪದೂಟ. ಮುಂದೆ ಬರಲಿರುವ ಪ್ರತಿಫಲದ ಮಾನದಿಂದ ಬೀಜಕ್ಕೆ ಬೆಲೆಯೇ ಇಲ್ಲ. ಹೊದರೆ ಕಲ್ಲು, ಬಂದರೆ ಹಣ್ಣು – ಅಂದಹಾಗೆ ಹೋದರೆ ಗೂಟಡಿಕೆ, ಬಂದರೆ ಅಡಿಕೆಮರ ಅಲ್ಲವೇ?

“ಹಾದಿಯ ಮನೆ ಹಲ್ಲ, ಬೀದಿಯ ಸಸಿ ಹೊಲ್ಲ” ಈ ಮಾತನ್ನು ಕೃಷಿಕನು ಮೊದಲು ಮನನ ಮಾಡಬೇಕು. ಹೊಲದ ಪೂರ್ವಸಿದ್ಧತೆ ಮುಗಿದ ಬಳಿಕ ನೆದಲ್ಲಿ ನೆಟ್ಟದೃಷ್ಟಿಯನ್ನು ಮುಗಿಲಿನತ್ತ ಹೊರಳಿಸುವುದು ಸ್ವಾಭಾವಿಕ ಹಾಗೂ ಕ್ರಮಾಗತ. “ಮೃಗ ಹೂಡಿತು, ಮಿರಗ ಮಿಂಚಿತು” ಆದರೆ ಮುಂದಿನ ಕ್ರಮ ಕಂಡುಬರಲಿಲ್ಲ ಅದೋ – ಬಂದಿತು ಆರಿದ್ರ.

“ಆರಿದ್ರ ಬಂದರೆ ದಾರಿದ್ರ್ಯವಿಲ್ಲ” ದಾರಿದ್ರ್ಯ ತೊಲಗುವುದೆಂದರೆ ಧನದ ರೂಪದಿಂದ ಸಂತು ಬರಲು ಬಾಗಿಲು ತೆರೆದಿಟ್ಟು ಮಾರ್ಗ ಪ್ರತೀಕ್ಷೆ ಮಾಡುವುದು.

“ಉಣ್ಣಬೇಕಾದರೆ ಎಮ್ಮೆ ಕಟ್ಟು, ಕರುಬೇಕಾದರೆ ಆಕಳು ಕಟ್ಟು” ಅಚ್ಚ ಕೃಷಿಕನು ಒಂದು ಬೇಡಿ, ಇನ್ನೊಂದು ಒಲ್ಲೆನ್ನುವುದಿಲ್ಲ. ಎರಡೂಬೇಕೆನ್ನುವ ಭಂಟ. ಉಣ್ಣಲು ಹಾಲೂಬೇಕು, ಎಮ್ಮೆಗೆ ಕರುವೂ ಬೇಕು ಅಲ್ಲವೇ? ಅವನಿಗೆ ಹಾಲು ಅನಿವಾರ್ಯವಾದಂತೆ ಕರುವೂ ಅನಿವಾರ‍್ಯವಾಗಿದೆ. ಯಾಕೆಂದರೆ – “ಎತ್ತಿಲ್ಲದವನಿಗೆ ಎಡೆಯಿಲ್ಲ” ಇಲ್ಲಿ ಊಟದ ಎಡೆಯೂ ಅಹುದು; ಹೊಲದೊಳಗಿನ ಬೆಳೆಯ ಎಡೆಯೂ ಅಹುದು.

ಆರಿದ್ರ ಮಳೆ ಬಂದರೆ ಆರೂ ಮಳೆ ಬರುವವು
ಕುರುಡು ಚಿತ್ತೆ ಎರಚಿದಂತೆ ಮಳೆ

ಇವು ಬರವಸೆಯನ್ನು ಉಸುರುವ ಗಾದೆಗಳಾಗಿವೆ.

ಕಡಲೆ ಬಿತ್ತಿ ಕಾಗೆ ಕಾವಲು ಹಾಕಿದರು
ಬಡತನ ಬಂದಾಗ ಬಾಳೆ ಹಾಕು
ಬೀಜಕ್ಕೆ ಬಿಡುವ ಕಾಯಿಯನ್ನು ಹೀಚಿನಲ್ಲೇ ನೋಡು

ಮೊದಲಾದವು ಎಚ್ಚರಿಕೆಯೊಡನೆ ಯುಕ್ತಿಯನ್ನು ಹೇಳಿಕೊಡುವವು. ಒಂದೊಂದು ಮಲೆಯ ಗುಣಧರ್ಮ ಹೇಳುವ ರೀತಿ ತಿಳಿಯಬೇಕಾದರೆ ಕಳಗಿನ ಗಾದೆಗಳನ್ನು ಗಮನಿಸಬೇಕು.

ಭರಣಿ ಸುರಿದು ಧರಣಿ ಬದುಕಿಸಿತು
ಸ್ವಾತೀಮಳೆ ಹೇತೆನೆಂದರೂ ಹೋಗದು
ಮಳೆ ಬಂದರೆ ಕೇಡಲ್ಲ ಮಗ ಉಂಡರೇ ಕೇಡಲ್ಲ
ಉತ್ತರಿ ಮಳೆ ಬಂದರೆ ಬರಗಾಲವಿಲ್ಲ
ಹಿರೆಸೊಸಿ ಸರಿಯಾಗಿ ಬಾಳಿದರೆ ಸೊರೆಯಿಲ್ಲ

ಮಳೆಗಾಲದ ಆರಂಭಕ್ಕೆ ರೈತನು ಮನೆಯನ್ನೂ ಗಮನಿಸಿದರೆ ಒಳ್ಳೇದು. “ಮಳೆಬರುವ ಮೊದಲು ಮಾಳಿಗೆ ನೋಡು” ಮಾಡದೆ ಹೊಲ ಕೆಟ್ಟಿತು, ನೋಡದೆ ಮನೆ ಕೆಟ್ಟಿತು.

ಹದೆಬೆದೆಯಿಲ್ಲದ ಹೆಮ್ಮೆಯ ಫಲ ಸಹ, ಹದಿಬದೆಯಿಲ್ಲದೇ ಸೈ.

ಹುರುಳಿ ಬೆಳೆದು ಕಳನಾಶಮಾಡು
ಹತ್ತೀ ಬಿತ್ತಿ ಬತ್ತಿ ಕಾಣಲಿಲ್ಲ. ಜೋಳ ಬಿತ್ತಿ ನುಚ್ಚು ಕಾಣಲಿಲ್ಲ

ಧಾನ್ಯರಾಶಿ ಮನೆಸೇರಿದ ಬಳಿಕ ಹೊಲೆಯನ ಸುಗ್ಗಿಯಂತೆ ಒಲೆಯ ಮೇಲೆ ಮುಗಿಯ ಬಾರದು. ಹೊಲದ ಬೆಳೆಯಂತೆ ಗೋದಲೆಯ ಹಯನೂ ಹದವರಿತು ಸಂಗಳಿಸಬೇಕು. ಬಂದ ಕಾಳನ್ನು ಮಾರಿಕೊಂಡು ಬಂಗಾರಕೊಳ್ಳುವುದು ಶ್ರೀಮಂತಿಕೆಯ ಲಕ್ಷಣವಲ್ಲ.

ಹಿಡಿಹೊನ್ನಿಗಿಂತ ಪಡಿಕಾಳು ಲೇಸು
ಬೆಳೆ ಹೊಗಳಿಸಿ ಉಣ್ಣಬೇಕು, ಹಯನು ಹಂಗಿಸಿ ಉಣ್ಣಬೇಕು
ಕೊಟ್ಟಸಾಲ ಕೇಳದೆ ಹೋಯಿತು.”
ಮಾಡಿದ
ಆರಂಭ ನೋಡದೆ ಹೋಯಿತು

ಈವರೆಗೆ ಕೃಷಿಕನನ್ನು ಕುರಿತ ಕಿವಿಮಾತುಗಳನ್ನು ಕೇಳಿದೆವು. ಇನ್ನು ಕೃಷಿಕನ ಪಸಲು ಫಲಕಾರಿಯಾಗಿಸಬಲ್ಲ ದಂದೆಯೆಂದರೆ ವ್ಯಾಪಾರ, ವ್ಯವಹಾರ ವ್ಯಾಪಿಗಳಿಗೆ ಹೇಳಬೇಕಾದ ಕೆಲವು ಗಾದೆಗಳನ್ನು ಅವಲೋಕಿಸುವಾ –

ವ್ಯವಹಾರವಾಗಲಿ ವ್ಯಭಿಚಾರವಾಗಲಿ ಗುಟ್ಟಾಗಿದ್ದರೇ ಚಂದ

ಕಾಳುಕೊಟ್ಟು ಅರಿವೆಕೊಳ್ಳುವ, ಇಲ್ಲವೆ ಜೋಳ ಸುರಿದು ಕಾಯಿಪಲ್ಲೆ ಪಡೆಯುವ ಕ್ರಮದಲ್ಲಿ ಆಯಾ ವ್ಯವಹಾರಗಳನ್ನು ಎಂಥವರು ಮಾಡಿದರೆ ಫಲಕಾರಿಯೆಂಬುದನ್ನು ಕೇಳಿ ಅಚ್ಚರಿಗೊಳ್ಳಬಹುದು. “ಅರಿಯದವ ಅರಿವೆ ಮಾರಬೇಕು. ಬಲ್ಲವ ಬಾಡ ಮಾರಬೇಕು.” ನಮಗಿರುವ ತಿಳುವಳಿಕೆ ಈ ಗಾದೆಯ ಸಲಹೆಯ ಮುಂದೆ ತಿರುಗು – ಮುರುಗು ಅನಿಸಬಹುದು. ಆದರೆ ಒಂದು ಕ್ಷಣಹೊತ್ತು ತಲೆತುರಿಸಿಕೊಂಡು ಯೋಚಿಸಿದರೆ ಆ ಮಾತಿನಲ್ಲಿರುವ ಸತ್ಯತೆ ಮೂಡಿನಿಲ್ಲುತ್ತದೆ. ವ್ಯಾಪಾರವೆಂದರೆ ಎಳ್ಳುಕೊಂಡಂತೆ ಎಣ್ಣೆ ಮಾರುವುದು. ನೆರಳಲ್ಲಿ ನಡೆಯುವ ಕೊಡುಕೊಳ್ಳುವ ಮಾಟವೇ ಮಾರಾಟವಾದ ಬಳಿಕ ವ್ಯವಹಾರವೆನಿಸುವುದು. ಆದರೆ ಬಾಡ ಅಂದರೆ ಕಾಯಿಪಲ್ಲೆ ಮಾರುವುದಾಗಲಿ ಬೆಳೆಯುವುದಾಗಲಿ ಸುಲಭವಾದ ಕೆಲಸವಲ್ಲ. ಅರಿವೆ ಮಾರುವವ ಅರಿಯದವನಿದ್ದರೂ ನಡೆಯುತ್ತದೆ. ಆದರೆ ಕಾಯಿಪಲ್ಲೆಯ ಮಾರಾಟಕ್ಕೆ ಅರಿತವ ನಿದ್ದಷ್ಟು ಹೆಚ್ಚು ಒಳ್ಳೆಯದು.

ಕೃಷಿಕನು ವ್ಯಾಪಾರಿಯಂತೆ ಕೊಂಡು ಮಾರುವವನಲ್ಲ, ಬರೇ ಮಾರುವವನೂ ಅಲ್ಲ; ಬೆಳೆದು – ಹುಟ್ಟಿಸಿ ಮಾರುವವನು. ವ್ಯಾಪಾರಿ ಕಾಳು – ಹತ್ತಿ ಕೊಂಡು ಮಾರುವ ಹಾಗೆ, ದನಗಳನ್ನು ಕೊಂಡೂ ಮಾರುವನು. ಒಮ್ಮೊಮ್ಮೆ ಲಾಭದ ಬದಲು ಹಾನಿಗೂ ಈಡಾಗುನು. “ಕೊಳ್ಳುವಾಗ ಕುದುರೆ, ಮಾರುವಾಗ ಕತ್ತೆ.” ವಯಾಪಾರಿಗೆ ಕುದುರೆಯನ್ನು ಕುದುರೆಯಾಗಿಯೇ ಉಳಿಸಿಕೊಳ್ಳುವುದು ಅದೆಷ್ಟೋ ಸಾರೆ ಸಾಧ್ಯವಾಗುವುದಿಲ್ಲ. ವ್ಯಾಪಾರದ ಬೀಜಮಂತ್ರದಂತಿರುವ ಗಾದೆಯೆಂದರೆ “ಜರಿದುಕೊಳ್ಳಬೇಕು, ಹೊಗಳಿ ಮಾರಬೇಕು.” ಈ ಯುಕ್ತಿಯಿಂದ ವ್ಯಾಪಾರವು ಲಾಭಕರವಾಗಬಹುದು. ಆರೆ ಸೀರೆಯ ವ್ಯಾಪಾರದಲ್ಲಿ ಯಶವಾದೀತೋ ಇಲ್ಲವೋ ಹೇಳಲಿಕ್ಕಾಗದು. ಯಾಕೆಂದರೆ “ಸೇರು ವರಹ ಕೊಟ್ಟರೂ ಸೀರೆಯ ವ್ಯಾಪಾರಬೇಡ” ಅಂದಿದೆ ಗಾದೆ. ಸೀರೆ ಉಡುವವರೇ ಕೊಳ್ಳುವವರೂ ಆಗಿಬಿಟ್ಟರೆ ವ್ಯಾಪಾರಿ ಅಡ್ಡಕ್ಕೆ ಪಂಚೇರು ಮಾರಬೇಕಾಗುತ್ತದೆ. ಅದರಿಂದ ಲಾಭವಾಗುವ ಬದಲು ಹಾನಿಯೇ ಅಡಸುತ್ತದೆ. ಹೆಣ್ಣುಮಕ್ಕಳು ನುಡಿದ ಒಂದು ಗಾದೆ ವ್ಯಾಪಾರಿಯ ನೀರು ಇಳಿಸಿಬಿಟ್ಟಿರುವುದನ್ನು ಎಲ್ಲರೂ ಕೇಳಿರಬಹುದು.

ಇಟ್ಟು ಮರುಗುವ ನಾಯಿ, ಕೊಟ್ಟು ಮರುಗವ ನಾಯಿ
ತಿಥಿಮಿತಿಯಿಲ್ಲದೆ
ತಿರುಗುವ ನಾಯಿ

ಈ ಗಾದೆ ಬಹುಶಃ ಸೀರೆಯ ವ್ಯಾಪಾರಿಯನ್ನು ಕುರಿತೇ ಹುಟ್ಟಿಕೊಂಡಿರಬಹುದೇನೋ. ಇದೇ ವರ್ಗದಲ್ಲಿ ಸೇರುವ ಇನ್ನೊಂದು ಉದ್ದಿಮೆಯೆಂದರೆ ಬಡ್ಡಿ ವ್ಯವಹಾರ. “ಯುಗಾದಿಯವರೆಗೆ ಬಡ್ಡಿಯಿಲ್ಲ, ಯುಗಾದಿ ಆದಮೇಲೆ ಗಂಟಿಲ್ಲ” ಎಂಬುದು ಹಲವಾರು ಜನರ ಅನುಭುಕ್ಕೆ ಬಂದರೂ “ಸಾಲ ತಲೆಹೊರೆ, ಬಡ್ಡಿ ಬಂಡೀಹೊರೆ” ಮಾಡಿಕೊಂಡು ಬಿಕನಾಶಿಯಾದವರ ಲೆಕ್ಕವೇ ಹತ್ತದು. ಸಾಲಗಾರನಾಗುವುದಕ್ಕೆ ಹಲವು ಹನ್ನೆರಡು ಕಾರಣಗಳಿರಬಹುದು. ಹೊಟ್ಟೆಗಿಲ್ಲದ್ದಕ್ಕೆ, ಹೊಲ ಮನೆ ಸುಧಾರಣೆಗಾಗಿ, ಕಾಯಿಲೆಯನ್ನು ಕಳಕೊಳ್ಳುವುದಕ್ಕಾಗಿ, ಜೂಜು ಕುಡಿತಗಳ ಚಟಕ್ಕಾಗಿ ಸಾಲಮಾಡುವುದನ್ನು ಎಲ್ಲರೂ ಕೇಳಿದ್ದೇವೆ. ಆದರೆ ಹೆಂಡರಿಗೆ ಆಭರಣ ಮಾಡಿಸುವ ಸಲುವಾಗಿ ಸಾಲಲಮಾಡುವವರೂ ಇಲ್ಲದೆಯಿಲ್ಲ.ಆದರೆ ಪರಿಣಾಮದಲ್ಲಿ ಏನಾಗುತ್ತದೆ ಅಂದರೆ,

“ಸಾಲ ಮಾಡಿ ಓಲೆ ಮಾಡಿಸಿದ, ಓಲೆ ಮಾರಿ ಬಡ್ಡಿಕೊಟ್ಟ” ಇಂಥವರೇ ಸುಗ್ಗಿಯಲ್ಲಿ ಹಿಗ್ಗಿ ಆಷಾಢದಲ್ಲಿ ತಗ್ಗುವರು. ಯಾಕೆಂದರೆಸುಂಕವನ್ನು ತಪ್ಪಿಸಿ, ಸಾಲವನ್ನು ಜಪ್ಪಿಸಿ ಉಳಿದು ಹೋಗುವುದು ಎಲ್ಲರಿಗೂ ಸಾಧ್ಯವಿಲ್ಲ; ಸುಗಮವಲ್ಲ. ಯಾಕೆಂದರೆ “ಸುಂಕದವ ಸುಳ್ಳ, ಬಣಜಿಗ ಕಳ್ಳ” ಎಂದು ಕೀರ್ತಿತರಾಗಿದ್ದಾರೆ.

“ದಟ್ಟೀ ವ್ಯಾಪಾರ ಮಾಡಿ ಶೆಟ್ಟಿ ಕೆಟ್ಟು ಹೋದ” ಎಂಬ ಮಾತಿನಲ್ಲಿ ಅದೆಷ್ಟು ಸತ್ಯಾಂಶವಿದ್ದರೂ “ಸೆಟ್ಟಿ ಸವ್ವಾಸೇರು; ಲಿಂಗ ಅಡೀಸೇರು” ಎದೆಯ ಮೇಲೆ ತೂಗಾಡುವ ಕಾರಣ ಅವನ ದಿವಾಳಿ ತೋರ್ಗಡೆಗೆ ಬರುವುದಿಲ್ಲ.

“ಕೊಂಡ ಹಾಗೆ ಮಾರಿದರೆ ಉಂಡ ಊತಕ್ಕೇನು?” ಎಂದು ಕೇಳುತ್ತಾನೆ ಶೆಟ್ಟಿ. “ನೂರಾಗುವವರೆಗೆ ನನ್ನಕಾಯಿ, ಆ ಬಳಿಕ ನಾನು ನಿನ್ನ ಕಾಯುತ್ತೇನೆ.” ಅನ್ನುತ್ತದಂತೆ ಅವನ ಮೊಳೆತ ಬಂಡವಲು. “ರೂಪಾಯಿ ಇದ್ದವ ಸಿಪಾಯಿ” ಎಂಬ ಜಂಬದಲ್ಲಿ – ಹಣ ಹಂತೀಲಿ ಕುಲ ಹಿತ್ತಲಲ್ಲಿ ಮಡಗಿಸಿರುತ್ತಾನೆ.

ಹಳ್ಳಿಯ ಮುಖ್ಯ ಉದ್ಯೋಗವಾದ ಕೃಷಿಗೂ ವ್ಯಾಪಾರಿಗೂ ಇರುವ ಸಂಬಂಧವನ್ನು ಬಗೆದು ಗಾದೆಗಳು ಹಲವಾರು ರೀತಿಯಿಂದ ಸಲಹೆ ನೀಡುತ್ತವೆಂಬುದನ್ನು ಸ್ಥೂಲವಾಗಿ ವಿವರಿಸಿದ್ದಾಯಿತು. ಇನ್ನು ಒಕ್ಕಲುತನಕ್ಕೆ ಬೇಕಾಗುವ ಆಳುಗಳನ್ನು ಕುರಿತು ಎಚ್ಚರಿಕೆಯನ್ನಿತ್ತ ಗಾದೆಗಳನ್ನು ಅವಲೋಕಿಸುವಾ –

ಆಳು ಮಾಡುವುದು, ಹಾಳು, ಮಗ ಮಾಡುವುದು ಮಧ್ಯಮ
ಹೊಲೆಯನನ್ನು ನಂಬಿ ಹೊಲ ಮಾಡಬೇಡ, ಕಳ್ಳನನ್ನು ನಂಬಿ ನೀರಿಗಿಳಿಯಬೇಡ
ಹೊಲೆಯ ಹೊತ್ತು ಅರಿಯ, ಕಬ್ಬಲಿಗ ಕೆಲಸ ಅರಿಯ
ಹೊಲೆಯಾಳಿಗೊಂದು ಮನೆಯಾಳು

ಯಾಕೆನ್ನುವುದು ಸ್ಪಷ್ಟವೇ ಅದೆ. ಅಸ್ಪೃಶ್ಯನೆನಿಸಿದ ಹೊಲೆಯಾಳಿಗೆ ಹೊಲದಲ್ಲಿಕುಡಿಯಲು ನೀರು ಬೇಕಾದರೆ, ಒಕ್ಕಲಿಗನು ಗುಂಡದಿಂದ ಕೊಡದಲ್ಲಿ ನೀರು ತಂದಿಡಬೇಕು. ಬೊಗಸೆಯೊಡ್ಡಿ ಕುಳಿತಾಗ ತಂಬಿಗೆಯಿಂದ ನೀರು ಹನಿಸಬೇಕು. ಉಣ್ಣುವಾಗ ರೊಟ್ಟಿಯನ್ನು ಎತ್ತಿ ಕೊಡಬೇಕು. ಇವೇ ಮಾತು ತುಸು ಹೆಚ್ಚು, ತುಸು ಕಡಿಮೆ ಕಬ್ಬಲಿಗನಿಗೂ ಹೊಂದುತ್ತವೆ.

ಒಕ್ಕಲಿಗನಿಗೆ ಬೆಳೆದ ಪಸಲೇ ಧನ, ದ್ರವ್ಯ, ದೌಲತ್ತು. ಅದರಂತೆ ದನಗಳೇ ಅವನಿಗೆ ಧನಸಂಪತ್ತು. “ಆಕಳ ಹೊಟ್ಟೆಯಲ್ಲಿ ಅಚ್ಚೇರು ಬಂಗಾರ” ಎನ್ನುವುದನ್ನು ಅವನು ಸಂಪೂರ್ಣವಾಗಿ ನಂಬಿದ್ದಾನೆ. “ಆವು ಅಟ್ಟದಮೇಲೆ, ಕರು ಬೆಟ್ಟದಮೇಲೆ”ಯಾದರೆ ಗೋಸಂಗೋಪನವಾಗದು, “ಎತ್ತೆಲ್ಲ ಹಯನಾದರೆ ತುಪ್ಪಕ್ಕೆ ಬರಗಾಲವೇ?” ಎಂದು ಕೇಳುತ್ತಾರೆ.

ದನಗಳ ಪ್ರಯೋಜನವು ಒಕ್ಕಲಿಗನಿಗೆ ಅಷ್ಟಿಷ್ಟೆಂದು ಹೇಳಲಿಕ್ಕಾಗದು. “ಇಕ್ಕಿದರೆ ಹೆಂಡಿನಾದೆನೇ | ಹಚ್ಚಿದರ ಕುಳ್ಳನಾದನೇ | ದೇವರ ಮುಂದಿನ ಪರಸಾದ ನಾ ಆದೆ ಮತ್ತ್ಯಾತ ಕಾದೇನ” ಎಂದು ಹೆಗಲು ತೊಳೆದುಬಿಟ್ಟ ಮುದಿಯೆತ್ತು ಒಕ್ಕಲಿಗನ ಪ್ರಯೋಜನಕ್ಕೆ ಬರುತ್ತದೆ. ಮಿಣಿ, ಮೊಟ್ಟೆ, ಬಾರಕೋಲು, ಕೆರವು ಎಂಬ ಹಲವು ವಿಧದಲ್ಲಿ ಒಕ್ಕಲಿಗನ ಸೇವೆಗೆ ಅಣಿಯಾಗುತ್ತವೆ. ಒಕ್ಕಲಿಗನ ಸಂಪತ್ತಿನಲ್ಲಿ ಅರ್ಧಪಾಲು ದನಗಳಿಗೆ ಮೀಸಲಾಗಿರುವುದು. ದಂಟಿನ ತುದಿಯಲ್ಲಿರುವ ತೆನೆ ಒಕ್ಕಲಿಗನಿಗೆ, ತೆನೆಯ ಕೆಳಗಿನ ದಂಟು ದನಗಳಿಗೆ, ಮನೆ ಒಕ್ಕಲಿಗನದೆನಿಸಿದರೂ ಅದರ ಒಂದು ಭಾಗವು ಕೊಟ್ಟಿಗೆಯೆಂದು ದನಗಳಿಗೆ ಬೀಡಾಗಿರುತ್ತದೆ.

“ಕೂಡಿ ದುಡಿಯೋಣ, ಕೂಡಿ ಉಣ್ಣೋಣ, ಹರುಷದಿಂದ ಬಾಳೋಣ” ಎಂಬ ಕಟ್ಟಳೆಗೆ ಒಕ್ಕಲಿಗನು ಒಪ್ಪಿಕೊಂಡಂತೆ, ದನಗಳೂ ಮೂಕಸಮ್ಮತಿಯನ್ನು ಸೂಚಿಸುವವು.

ಜೋಳದಾ ಬೋನಕ್ಕೆ ಬೇಳೆಯಾಗ ತೊಗೆಯಾಗಿ
ಕಾಳೆಮ್ಮೆ
ಕರೆದ ಹಯನಾಗಿ

ಎಂಬ ಮಾತಿನಿಂದಲೇ “ಹಾಲುಂಡು ಮೇಲುಂಬರೇ” ಎಂದು ಕೇಳುವಂತಾಗುವದಿಲ್ಲವೇ?

ಹೊಲದಲ್ಲಿ ಬೆಳೆದು ಬಂದ ಧಾನ್ಯದ ಸತ್ತ್ವವೇ ಉಭಯರ ಶರೀರದಲ್ಲಿ ಹರಿದಾಡುವ ರಕ್ತವಾಗಿದೆ. ಮೈಯಲ್ಲಿ ಅವೆತು ಸಂಚಲಿಸುವ ಸತ್ವವಾಗಿದೆ. ಒಂದೇ ರಕ್ತ, ಒಂದೇ ಸತ್ವ ಉಭಯರಿಗೂ ನೀಡುವ ಚೈತನ್ಯವಾಗಿದೆ.ಅದೇ ಜೀವವಾಗಿದೆ; ಅದೇ ಜೀವಾಳವೂ ಆಗಿದೆ. ಅದರಿಂದಲೇ ಜೀವನವು ಸಮೃದ್ಧವಾಗಿದೆ. ಇಷ್ಟೆಲ್ಲಾ ಸಂಗಳಿಸಲಿಕ್ಕೆ ವ್ಯಾಪಾರಿಯ ಕಸಬು ಬೇರೊಂದು ಬಗೆಯಿಂದ ಸಹಾಯ ನೀಡುತ್ತದೆ; ಸಮೃದ್ಧಿ ಒದಗಿಸುತ್ತದೆ. ಅದರಿಂದಲೇ ಕೋಟಿ ವಿದ್ಯೆಗಳಲ್ಲಿ ಮೇಟಿಯೇ ಮಿಗಿಲೆನಿಸುತ್ತದೆ. ಅದಕ್ಕೆ ವ್ಯಾಪಾರಿ “’ಕಾಣಿಯ ಸೋಲದ ಕಾಣಿಯ ಗೆಲ್ಲದ’ ಮಹಾದೇವಶೆಟ್ಟಿಯಾಗಬೇಕಾಗಿದೆ ಅಷ್ಟೇ.

ಬಣಜಿಗನು ಬರಿಯ ಹರದಿಗನಾಗದೆ ಶೆಟ್ಟಿಯೂ ಆದರೆ ರೈತನು ನಿಶ್ಚಿಂತನಾಗುವುದರಲ್ಲಿ ಸಂಶಯವೇ ಇಲ್ಲ.