ಬಾಳಿನಲ್ಲಿ ನಡೆಯುವ ಎಲ್ಲ ಹೋರಾಟಗಳಿಗೂ ಹೊಟ್ಟೆಯೇ ಮೂಲ ಕೇಂದ್ರವಾಗಿದೆ. ಆ ಕೇಂದ್ರದಿಂದಲೇ ಹೋರಾಟದ ಹುಯಿಲು ಉಗಮಿಸಿ ಹೆದ್ದೊರೆಯಾಗಿ ಹೊಲಬು ತಪ್ಪಿಸಿದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಸಂಸಾರದಿಂದ ಹೊರಬಿದ್ದ ದಾಸರು ಹಾಡಿದ್ದುಂಟು. ತುತ್ತಿನ ಚೀಲು ತೂತಿನ ಚೀಲ ಬೇರೆ ಆಗಿದೆ. ಅಂತೆಯೇ ಆ ಚೀಲು ತುಂಬದಾಗಿದೆ. ಕೆಲವರಿಗೆ ತಿನ್ನಲೇಬೇಕೆಂದು, ಹಲವರಿಗೆ ತಿನ್ನಲೇಕೂಡದೆಂದು. ಹಸಿವೆಯಿಲ್ಲದೆ ಅನ್ನ ಕಬಳಿಸುವವರು ಭಾಗ್ಯಶಾಲಿಗಳು. ಹಸಿದು ಕಂಗಾಲಾದವರು ಭಾಗ್ಯಹೀನರು. ಅವರ ಅನ್ನಕ್ಕೆ ಹಸಿವೆಯಿಲ್ಲ. ಇವರ ಹಸಿವೆಗೆ ಅನ್ನವಿಲ್ಲ.

ದರಿದ್ರಕ್ಕೆ ಮೈಯೆಲ್ಲಾ ಹೊಟ್ಟೆ,
ಬಡತನಕ್ಕೆ ಮೈಯೆಲ್ಲಾ ಬಾಯಿ

ಬಡತನಕ್ಕೆ ಬಲಿಯಾದವರು ಬಡವರು, ದಾರಿದ್ರ್ಯಕ್ಕೆ ತುತ್ತಾದವರು ದರಿದ್ರರು. ಉಭಯರಿಗೂ ಸಮಾನಾರ್ಥದಲ್ಲಿ ಎಬಡರೆನ್ನಬಹುದು. ಎಬಡರು ಹಸಿದ ನಾಯಿಯಿದ್ದಂತೆ. ತಂಗಳು ಎಂಜಲು ತಿನ್ನುವಂತೆ ಹಳಸಿದ್ದನ್ನೂ ತಿನ್ನಬಲ್ಲರು. ಅವರೇ ನಾಯಿ, ಹಂದಿಗಳು ಪರಂಪರೆಗೆ ಸೇರಬಲ್ಲವರು.

ತಿನ್ನುವ ಆಶೆಯಿರುತ್ತದೆ, ಹಸಿವೆ ಮಾತ್ರ ಇರುವದಿಲ್ಲ. ಹೇಗೆ ಬಿಡಬೇಕೆಂದು ಹೊಟ್ಟೆಯಲ್ಲಿ ತುರುಕುವುದಕ್ಕೆ ಗಂಟಲಲ್ಲಿ ಇಳಿಸುತ್ತಾರೆ. ಮರುಗಂಟೆಯಲ್ಲಿ ವಡವಾನಲ ಚೂರ್ಣವನ್ನು ಬಾಯಿಗಿಳಿಸಬೇಕಾಗುತ್ತದೆ. ‘ಒಲ್ಲೆನೆಂದು ಹೇಳಿದರೂ ಒಲ್ಲಿ ಒಡ್ಡುವರು.’

ಹಸಿವೆಯೊಂದು ವರವೋ ಕೃಪೆಯೋ ಮಾತ್ರ ಆಗಿರದೆ ದೇವಶಕ್ತಿಯೇ ಆಗಿದೆ. ಪ್ರತಿಯೊಬ್ಬರ ಜಠರದಲ್ಲಿ ಕುಳಿತು ಅನ್ನಪಚನ ಮಾಡುವವ ನಾನೇ ಎಂದು ಯಾರು ಹೇಳಿದ್ದಾರೆ, ನೆನಪು ಮಾಡಿಕೊಳ್ಳೋಣ. ಹುಲಿ ಹಸಿದರೆ ಹುಲ್ಲೆಯ ಆಹಾರವಾದ ಹುಲ್ಲು ತಿಂದೀತೆ ಎಂದು ಕೇಳುತ್ತದೆ ಗಾದೆ.

‘ಆಯುಷ್ಯ ಬರೆದವ ಅನ್ನ ಕೊಡನೇ?’ ಕೊಡುತ್ತಾನೆ. ಆದರೆ ಅದಕ್ಕಾಗಿ ಮೈಮಣ್ಣು ಮಾಡಬೇಕು. ಬೇಡಿ ತಿನ್ನಬಹುದು, ಆದರೆ ನೀಡಿದಷ್ಟೇ ತಿನ್ನಬೇಕಾಗುತ್ತದೆ. ಮಾಡಿ ತಿಂದರೆ ಬೇಡಿದಷ್ಟು ಸಿಗುತ್ತದೆ. ‘ಅರಸು ಹೇಳಿದನೆಂದು ಮರದ ಕಾಯಿ ಉದುರೀತೇ?’ ಅಜಹರಿ ಪಿನಾಕಿಗಳ ನುರುಪುವೆಂಮಿಕ್ಕರಸುಗಿರಸುಗಳ ಪಾಡೇನು ಎಂದು ಕುಶನು ತಾಯಿ ಸೀತಮ್ಮನಿಗೆ ಆವೇಶದಿಂದ ನುಡಿದಂತೆ ಹಸಿವೆ ಪೂತ್ಕರಿಸುತ್ತದೆ. ಅಧಿಕಾರ ಸುಗ್ರೀವಾಜ್ಞೆಗಳಿಗೆ ನಿಸರ್ಗವು ತಲೆಬಾಗದು, ಹೆಸರು ಹಾಲಕ್ಕಿಯಾದರೇನಾಯಿತು, ಅದರ ಬಳಿ ಹಾಲೂ ಇಲ್ಲ, ಅಕ್ಕಿಯೂ ಇಲ್ಲ. ‘ಹಾಲಕ್ಕಿಯಾದರೆ ಹಾಲು ಕರೆದೀತೇ?’

ಎಮ್ಮೆ ಆಕಳು, ಆಡು ಕುರಿ ಇವುಗಳನ್ನು ಆರಯಿಸಿದರೆ ಹಾಲು ಸಿಗುವುದು ನಿಶ್ಚಯ. ಅವು ತನ್ನ ಕರು ಮರಿಗಳೊಡನೆ ನಮಗೂ ಹಾಲುಣಿಸಿ ತಣಿಸುತ್ತವೆ. ಅಲ್ಲದೆ ಅವೇ ಮಕ್ಕಳನ್ನು ನಮ್ಮ ಕೆಲಸದಲ್ಲಿ ಸಹಕರಿಸುವಂತೆ ನಮ್ಮ ನೆರವಿಗೆ ಕಳಿಸುತ್ತವೆ. ಕೋಣ ಹೋರಿ, ಟಗರು ಹೋತುಗಳನ್ನು ಮನುಷ್ಯನು ಅವುಗಳೊಡನೆ ಆಡುವವರೆಗೆ ಆಡಿ, ಮಾಡುವವರೆಗೆ ದುಡಿಸಿಕೊಂಡು ಸಾಕೆನಿಸಿದಾಗ ಇಲ್ಲವೆ, ಬೇಕೆನಿಸಿದಾಗ ಕೊಯ್ದು ತಿಂದುಬಿಡುತ್ತಾನೆ. ಗಜ್ಜರಿಯಿಂದ ಪುಂಗಿಮಾಡಿ ಊದುವವರೆಗೆ ಊದಿ ಸಾಕಾಗಲು ತಿಂದು ಮುಗಿಸುತ್ತಾನೆ. ಆದರೇನು? ಅವು ಆಡು ಕುರಿ ಎಮ್ಮೆಗಳನ್ನು ಆರಯಿಸಿದರೆ ತೋರುಂಬಲಾಭವಿದ್ದುದು ಸುಳ್ಳೇ? ಆದರೆ ಧರಣಿಯ ಕಲ್ಲಿಗೆ ಶರಣೆಂದು ಪೂಜೆ ಮಾಡಿ ಪ್ರಯೋಜನವೇನು?

‘ಹತ್ತೆಮ್ಮೆಯಾದರೂ ತೊಳೆದೇನು, ಸಾಲಿಗ್ರಾಮ ತೊಳೆಯಲಾರೆ’ ಎನ್ನುವ ಉಪಯೋಗಿ ತಾವಾದಿಗಳು ಪಂಟುಹಿಡಿಯುವುದು ಅವಾಸ್ತವಿಕವೇನಲ್ಲ.

ವಾದಿಗೆ ಪ್ರತಿವಾದಿಯಾಗಿ ಜಗ್ಗಾಡುವುದರಿಂದ ಪ್ರಯೋಜನವೇ ಆದೀತೆಂದು ಯಾರೂ ಹೇಳಲಾರರು. ಪ್ರತಿವಾದಕ್ಕೆ ಸಾಕ್ಷಿಬೇಕು, ಸಾಕ್ಷಿ ಹೇಳುವ ಸಾಕ್ಷೀದಾರಬೇಕು. ಸಾಕ್ಷಿದಾರನ ಮನವೊಲಿಸಿದರೂ ನ್ಯಾಯಾಧೀಶನ ಮನವೊಲಿಸಿದಂತಾಗುವುದಿಲ್ಲ. ಅದರಿಂದ ಹೊಸ ತುತ್ತು ಸಿಗುವುದೊತ್ತಟ್ಟಿಗಿರಲಿ, ಇದ್ದ ತುತ್ತೂ ಕೈಬಿಡುವುದುಂಟು. ಆದ್ದರಿಂದ ಗಾದೆ ಹೇಳುತ್ತದೆ ‘ಸಾಕ್ಷಿದಾರನ ಕಾಲು ಹಿಡಿಯುವುದಕ್ಕಿಂತ ವಾದಿಯ ಕಾಲು ಹಿಡಿಯುವುದು ಲೇಸು’. ಏನಾದರೂ ಹಳೆಯನಂಟು, ಎಷ್ಟಾದರೂ ಹಿಂದಿನ ಋಣಾನುಬಂಧ. ಕಳೆದಲ್ಲೇ ಹುಡುಕಬೇಕು, ಕಳೆದ ಸ್ಥಳದಲ್ಲಿ ಕತ್ತಲಿದೆಯೆಂದು, ಬೆಳಕಿದ್ದ ಸ್ಥಳದಲ್ಲಿ ಹುಡುಕಿದರೆ ಕಳೆದದ್ದು ಸಿಗುವದೇ? ಬಾವು ಒತ್ತಟ್ಟಿಗೆ, ಬರೆ ಒತ್ತಟ್ಟಿಗೆ. ಮುಕುಳಿಯ ಮೇಲೆ ಹೊಡೆದು ಬಾಯೊಳಗಿನ ಹಲ್ಲು ಕೆಡುಹಲು ಸಾಧ್ಯವೇ?

ಕೆಲವೊಂದು ವರ್ಗದವರ ಹಸಿವೆ ಹಿಂಗುವುದಕ್ಕೆ ಅನ್ನವೇಬೇಕೆಂದು ಕಡ್ಡಾಯವಿರುವುದಿಲ್ಲ. ತನಗಿರುವ ಹೀನಸ್ಥಿತಿ ಇನ್ನೊಬ್ಬರಿಗೂ ಉಂಟೆಂದು ಕಂಡುಬಂದರೆ ಸಾಸಿವೆಯ ಮೇಲೆ ಸಾಗರ ಹರಿದುಬಂದಷ್ಟು ಸಂತೋಷವಾಗುತ್ತದೆ. ‘ಮುಂಡೆಗೆ ಮುಂಡೆಯನ್ನು ಕಂಡರೆ ಉಂಡಷ್ಟು ಸಂತೋಷವಾಗುತ್ತದೆ.’ ಸುಖಿಯಿರಲಿ ದುಃಖಿಯಿರಲಿ ಒಬ್ಬರಿಗಿಂತ ಇಬ್ಬರು ಲೇಸಲ್ಲವೇ?

ದಟ್ಟದರಿದ್ರನು ಅಂದರೆ ತನ್ನ ಹೊಟ್ಟೆಗೆ ಗತಿಯಿಲ್ಲದವರು ಹಬ್ಬಕ್ಕೆಂದು ತಂಗಿಯನ್ನು ಕರೆತರುತ್ತಾನೆ. ಯಾವ ಭರವಸೆಯಿಂದ? ನಾಲ್ಕು ಮುಖದ ಕುದುರೆಗೆ ಥಡಿ ಹಾಕಿದರೆ ಸುತ್ತಲಿನ ಮನೆಗಳೆಲ್ಲ ತನ್ನವೇ ಆಗುವವು. ಅಂತೆಯೇ ಅಣ್ಣನು ‘ಹಬ್ಬಕ್ಕೆ ಬಾ ತಂಗಿ, ಇಬ್ಬರೂ ತಿರಕೊಂಡು ತಿನ್ನೋಣ’ ಅನ್ನುತ್ತಾನೆ.

ಈ ಕ್ರಮ ಹೋಗದ ಊರಿಗೆ ದಾರಿ ಕೇಳಿದಂತೆ ಎಂದು ಭಾವಿಸುವವರುಂಟು. ಇಲ್ಲಿ ಬೇಕಾದದ್ದು ದಾರಿಮಾತ್ರ, ಊರಲ್ಲ. ದಾರಿ ಸಿಕ್ಕರೆ ಸಾಕು, ಅದು ಯಾವ ಊರಿಗಾದರೂ ಕರೆದೊಯ್ಯುತ್ತದೆ. ಸಿಕ್ಕ ಊರೇ ನಮಗೆ ಬೇಕಾದ ಊರು.

‘ಹಿಟ್ಟೇಕೆ ಗಂಟಾಯಿತು’ ಎಂದು ಯಾರೋ ಕೇಳಿದರಂತೆ. ಯಾರಿಗೆನ್ನುವುದು ಮುಖ್ಯವಲ್ಲ. ಯಾರಿಗೋ ಕೇಳಿದರೆ ಏನೋ ಹೇಳುತ್ತಾರೆ. ‘ಹಿಟ್ಟೇಕೆ ಗಂಟಾಯಿತು’ ಎಂದರೆ ‘ಕೋಣೆ ಕಿರಿದು’ ಅಂದರಂತೆ. ಕಿವುಡ ಬೇಡಿದ್ದು ಕಿಚ್ಚಡಿ, ಗೌಡ ಕೊಟ್ಟಿದ್ದು ಹಚ್ಚಡ. ಹಚ್ಚಡ ತಿಂದು ಕಿಚ್ಚಡಿ ಹೊದೆಯಬೇಕೇ? ಅಥವಾ ಕಿಚ್ಚಡಿ ತಿಂದು ಹಚ್ಚಡ ಹೊದೆಯಬೇಕೇ? ಯಾಕಂದರೆ ಇಲ್ಲಿ ಕಿಚ್ಚಡಿಯೂ ಇಲ್ಲ, ಹಚ್ಚಡವೂ ಇಲ್ಲ! ಕಿವುಡ-ಗವುಡ ಮಾತ್ರ ಇದ್ದಾರೆ. ‘ನಾ ಇಲ್ಲಿ ಮಲಗಲಿ’ ಎಂದು ಕೇಳಬೇಕಾಗಿದ್ದವನು ತೊದಲಿನಿಂದ ‘ನಾಯಿ ಮುಕುಳೀ’ ಎಂದು ಕೇಳಿದಂತಾಯಿತು.

ಮೈತುಂಬ ಬಂಗಾರವಿಟ್ಟು ಜರತಾರಿ ಹೊದೆದರೂ ಹೊಟ್ಟೆಯ ಹುಯಿಲು ಮುಚ್ಚಿಲ್ಲ. ಹಸಿವೆಯ ಹಣಗಲ ತಪ್ಪಿಲ್ಲ. ಅದನ್ನು ಚಿನ್ನದೊಡವೆ ತಣಿಸದು, ಪೀತಾಂಬರ ಮಣಿಸದು. ಹೊಟ್ಟೆ ಬೇಡುವುದೊಂದೇ ತುತ್ತು ರೊಟ್ಟಿ! ಜಗತ್ತಿನ ಹಣಾಹಣಿಯೆಲ್ಲ ಒಂದು ರೊಟ್ಟಿಗಾಗಿ ಅಥವಾ ಮುಷ್ಟಿ ಹಿಟ್ಟಿಗಾಗಿ. ಅದು ಬೇಡಿ ಪಡೆಯುವುದಲ್ಲ; ದುಡಿದು ಪಡೆಯುವುದು. ‘ಪೀತಾಂಬರ ಉಟ್ಟರೂ ಕೋತಂಬರಿ ಮಾರುವುದು ತಪ್ಪಲಿಲ್ಲ’ ಪೀತಾಂಬರ ಹೊಟ್ಟೆಗೆ ಮರೆಯಾದೀತೇ ಹೊರತು ಹಸಿವೆ ಹಿಂಗಿಸಲಿಲ್ಲ. ಬೇಡಿದವನಿಗೆ ಸಿಗುವುದು ನೀಡಿದಷ್ಟೇ ಮಾತ್ರ. ಮಾಡಿದವನಿಗೆ ಬೇಡಿದಷ್ಟು ಸಿಗಬಲ್ಲದು.

‘ಇದ್ದರೆ ಕೊಡು, ಇಲ್ಲದಿದ್ದರೆ ಬೇಡು’ ಅನ್ನುತ್ತದೆ ಗಾದೆ. ಬಿಕನಾಶಿಗೆ ಬಿಕನಾಶಿಯೇ ಸಿಕ್ಕಾನು. ‘ಜೋಗದವರ ಮನೆಗೆ ಜೋಗಕ್ಕೆ ಹೋದರೆ ಆಚೆಯ ಓಣಿಯನ್ನು ನಿನಗಾಗಿಯೇ ಬಿಟ್ಟುಬಂದದ್ದು ಅಂದರಂತೆ’. ಆಚೆಯ ಓಣಿಯನ್ನು ಏತಕ್ಕಾಗಿ ಬಿಟ್ಟು ಬಂದದ್ದು? ತನಗೆ ಬೇಡುವ ಜೋಗದವನು ಬೇಡಿಕೊಳ್ಳುವ ಸಲುವಾಗಿ ಅಂದಂತಾಗಲಿಲ್ಲವೇ?

ತಿಂಗಳ ದಿನ ಉಪವಾಸವಿದ್ದವರ ಮನೆಗೆ ತಂಗಳನ್ನಕ್ಕೆ ಹೋದರೆ ಏನು ಸಿಕ್ಕೀತು? ಹಸಿದು ಕಂಗಾಲಾದವನು ಕಡಲೆ ಸಿಕ್ಕರೂ ಕುಣಿದಾಡಬಹುದು. ಆದರೆ ಉಕ್ಕಿನ ಕಡಲೆ ಸಿಕ್ಕರೆ ಅದನ್ನು ತಿನ್ನಲು ವಜ್ರದ ಹಲ್ಲು ಎಲ್ಲಿಂದ ತರಬೇಕು? ಅನ್ನ ಸಿಗಲಿಲ್ಲವೆಂದು ಬೆರಳ ಬಂಗಾರವನ್ನೋ ಕೊರಳ ಸಿಂಗಾರವನ್ನೋ ತಿನ್ನುವ ಸಲುವಾಗಿ ಮೇಣದ ಹಲ್ಲು ಸಿಕ್ಕಿಸಿಕೊಳ್ಳುವ ಜಾಣರೂ ಇರಬಹುದು.

ಮುಖ ನೋಡಿದರೆ ಮನ ತಿಳಿಯುತ್ತದೆ
ಜಾತಿ ಗುಣ ಮೋರೆಯಿಂದ ತಿಳಿಯುತ್ತದೆ

ಮುಖವೆಂದರೆ, ದೇಹವೆಂಬ ಪುಸ್ತಕದ ಪರಿವಿಡಿ, ಪರಿವಿಡಿಯು ಪುಸ್ತಕದಲ್ಲಿ ಪ್ರತಿಪಾದಿಸಿದ ವಿಷಯವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಸಿಕ್ಕಿದ್ದು ಸವಿಮಾಡಿ ತಿಂದವನ ಮುಖ ಪ್ರಫುಲ್ಲವಾಗಿರುತ್ತದೆ. ಸಿಗಲಾರದ ಸವಿಯನ್ನು ಹಾರಯಿಸಿದರೆ ಕೈ ಕಾಲು ಬಾಯುವವಲ್ಲದೆ ಮುಖವೂ ಬಾಯುವದು. ‘ಬಾತವನು ಬದುಕನು, ಸೀತವನು ಸಾಯನು’.

ಉಂಡ ಉಪವಾಸಿಗೂ ಹಸಿದ ಉಪವಾಸಿಗೂ ಇರುವ ಭೇದವನ್ನು ಸಹಜವಾಗಿ ಗುರುತಿಸಬಹುದು. ಅವು ನೋಡದಿದ್ದರೂ ಹಾಲಿನ ಬಣ್ಣ ಬಿಳಿಯದೆಂದು ಹೆಬಗನೂ ಹೇಳಬಲ್ಲನು. ಆದರೆ ಹಾಲಿನಿಂದ ಆವಿನ ಬಣ್ಣ ಹೇಳಬಲ್ಲವರು ಯಾರಿದ್ದಾರೆ? ಸಾರಿನ ರುಚಿ ನಾಲಗೆ ಹೇಳುವಂತೆ ಸವುಟು ಹೇಳಬಹುದೇ? ನಾಲಗೆ ಶರೀರದೊಳಗಿನ ಸವುಟು. ಆದರೆ ಭಾಂಡದೊಳಗಿನ ಸವುಟು ನಾಲಗೆಯಾಗಲಾರದು. ನಾಲಗೆ ಷಡ್ರಸಗಳನ್ನು ಸವಿದು ನವರಸಗಳನ್ನು ಉಸುರಬಲ್ಲ ಶಕ್ತಿಯನ್ನು ಪಡೆದಿದೆ; ಹೇಳಿ ಕೇಳಿ ರಸನೆ ರಸಿಕ. ನಾಲಗೆ ಕಳಿಸಿದ ಷಡ್ರಸಗಳನ್ನು ಬಯತಿರಿಸಿಕೊಳ್ಳುವ ಹೊಟ್ಟೆ ಷಡ್ರಸಗಳನ್ನೆಲ್ಲ ಒಂದು ಗೂಡಿಸಿ ಜೀವರಸವನ್ನು ಕೆರಳಿಸುತ್ತದೆ, ಭಾವರಸವನ್ನು ಅರಳಿಸುತ್ತದೆ.

ತನ್ನ ಹೊಟ್ಟೆಯನ್ನು ನಾಲಗೆ ತಣಿಸುವುದಲ್ಲದೆ, ತನ್ನವರ ಕಿವಿಯನ್ನೂ ತಣಿಸುತ್ತದೆ. ಅನ್ನದಿಂದಲ್ಲ, ಮಾತಿನಿಂದ. ಅನ್ನ ಸವಿಯುವಾಗ ನಾಲಗೆ ಮರದ ಬೇರು ಆಗುತ್ತದೆ. ಆದರೆ ನಾಲಗೆ ಒಡನುಡಿಯುವಾಗ ಅದೇ ಮರಕ್ಕೆ ಕೆಂಚಿಗುರು ಪಲ್ಲವಿಸುತ್ತದೆ. ಒಡಲು ಎಂಬ ಶಬ್ದವು ಹೊಟ್ಟೆಗಿರುವ ಇನ್ನೊಂದು ಹೆಸರು ಇರುವಂತೆ ದೇಹಕ್ಕಿರುವ ಬೇರೊಂದು ಹೆಸರೂ ಅಹುದು. ಹೊಟ್ಟೆಗಿದ್ದದ್ದು ದೇಹಕ್ಕೂ ಉಂಟು, ದೇಹಕ್ಕಿಲ್ಲದ್ದು ಹೊಟ್ಟೆಗೂ ಇಲ್ಲ.

ಹಗಲಿರುಳೆಂಬ ಭೇದವಿಲ್ಲದೆ ಸತತವೂ ಒಡಲು ಹೊಟ್ಟೆಯಾಗಿ ದೇಹದೊಡಲನ್ನು ಪರಾಮರಿಸುತ್ತದೆ. ಅದಕ್ಕಾಗಿ ಹೊಟ್ಟೆ ಅನ್ನ ಬೇಡುತ್ತದೆ. ದೇಹವು ಜೀವರಸ ಬೇಡುತ್ತದೆ. ಅದೇ ಜೀವವಾಗಿ ಜೀವನಕ್ಕೆ ಕಳೆ ನೀಡುತ್ತದೆ.