ಹಳ್ಳಿಯಲ್ಲಿ ನೂರಕ್ಕೆ ಎಪ್ಪತ್ತೈದರಷ್ಟು ಜನರಿದ್ದರೆ ಹನ್ನೆರಡು ಜನ ಆಯಗಾರರು ಇರುತ್ತಾರೆಂದು ಸಾಮಾನ್ಯವಾಗಿ ಹೇಳಬಹುದು. ಒಕ್ಕಲಿಗನಿಗೆ ಆಯಗಾರರಾಗಲಿ, ಆಯಗಾರರಿಗೆ ಒಕ್ಕಲಿಗನಾಗಲಿ ಪರಸ್ಪರಾವಲಂಬಿಗಳಾಗಿದ್ದಂತೆ, ಪರಸ್ಪರ ಆಶ್ರಿತರೂ ಸಹಜೀವಿಗಳೂ ಆಗಿದ್ದಾರೆ. ಇವರೆಲ್ಲರಿಗೆ ಮೇಟಿಯೇ ಕೇಂದ್ರ.

ಮೇಟಿ ಹಳ್ಳಿಗೆ ಬಲಗೈಯೆನಿಸಿದರೆ ರಾಟಿ ಎಡಗೈ. ರಾಟಿಯ ಕೇಂದ್ರದಲ್ಲಿ ಜೇಡ-ಬಣಗಾರರು, ಚೆಟ್ಟೆಯರೂ ಸಮಾವೇಶಗೊಂಡಿದ್ದಾರೆ. ಆ ಬಳಿಕ ಬೌದ್ಧಿಕವಾಗಿಯೋ ದೈಹಿಕವಾಗಿಯೋ ರಕ್ಷಣೆ ಒದಗಿಸುವ ಗ್ರಾಮಸ್ಥರಿಗೆ ಓಲೆಕಾರ ತಳವಾರ ವಾಲಿಕಾರ ನಾಟಿಕಾರರಿರುತ್ತಾರೆ. ಹೊಲದಿಂದ ಬಂದ ಬೆಳೆ, ನೆಯಿಗೆಯಿಂದ ಸಿದ್ಧವಾದ ಬಟ್ಟೆ ಅಂದರೆ ಸೀರೆ ಧೋತರಗಳ ವಿನಿಮಯವನ್ನು ಸುಸೂತ್ರಗೊಳಿಸುವ ಬಣಜಿಗ ಚೆಟ್ಟಿಯರದೇ ಒಂದು ವೈಶಿಷ್ಟ್ಯ.

ಈ ಮುಖ್ಯ ಗುಂಪುಗಳಿಂದ ಆಯ್ಕೆಗೊಂಡ ಕೆಲವೊಂದು ಕುಲರಸಿಕರು ಆಟ-ನೋಟ, ಭಜನೆ-ರಥೋತ್ಸವಗಳಿಂದ ಸಾರ್ವಜನಿಕರಿಗೆ ಮನೋರಂಜನೆಯನ್ನು ಒದಗಿಸುತ್ತಾರೆ. ಇವರ ವೈಶಿಷ್ಟ್ಯವನ್ನು ದಿ. ಕೆರೂರ ವಾಸುದೇವಾಚಾರ್ಯರ ಭಾಷೆಯಲ್ಲಿಯೇ ಕೇಳಬೇಕು -ಉಪಾದ್ಯರ ಕೈಜೋಳಗಿ, ಜೇಡರ ಉಂಡಾಡಿ, ಬಡಿಗರ ಉಳಿಯಪ್ಪ, ಕುಂಬಾರ ಮಗಿಯಣ್ಣ ಇತ್ಯಾದಿ.

ಈ ಎಲ್ಲ ಕುಲಕಸಬುಗಳ ಬಳಿಕ ಚಲಾವಣೆಗಳನ್ನು ಅನುಸರಿಸಿಯೇ ಗಾದೆಗಳು ಹುಟ್ಟಿಕೊಂಡಂತೆ ತೋರುತ್ತವೆ. ಆ ಗಾದೆಗಳನ್ನು ಬಗೆದಂದರೆ ಯಾರು ಏನಿದ್ದಾರೆಂಬುದು ಸ್ಪಷ್ಟವಾಗುತ್ತದೆ. ಗಾದೆಗಳು ಅವರವರ ಹೊಟ್ಟೆಯೊಳಗಿನ ಗೆರೆಗಳನ್ನೆಲ್ಲಾ ಮೂಡಿಸಿ, ಅಂತರಂಗಕ್ಕೆ ಕನ್ನಡಿ ಹಿಡಿದಹಾಗಿದೆ. ಅಂತರಂಗದೊಳಗಿನ ವಿಷಯಗಳಿಗೆ ಆ ಮುಖಗಳೇ ಪರಿವಿಡಿಯನ್ನು ಒದಗಿಸುತ್ತವೆ. ಒಮ್ಮೊಮ್ಮೆ ಮುಖಕ್ಕೆ ಹಿಡಿದ ಕನ್ನಡಿ ಭೂತಗನ್ನಡಿಯೂ ಆಗಿರುವುದುಂಟು. ಜಾತಿಗೆ ಜಾತಿ ವೈರಿ, ಆಯಗಾರರಿಗೆ ಆಯಗಾರರು ವೈರಿ ಮೊದಲಾದ ಗಾದೆಗಳೇ ಭೂತಗನ್ನಡಿಯೆನ್ನಬೇಕು.

ಜನಪದವು ದೇವರು ಸ್ವಾಮಿಯೆನ್ನದೆ, ಅಧಿಕಾರ ವರಿಷ್ಠಯೆನ್ನದೆ ಅಷ್ಟೇ ಏಕೆ, ತನ್ನವರು ಇನ್ನವರು ಎನ್ನದೆ ಕಣ್ಣಿಗೆ ಕಂಡವರ ಕೈಗೆ ಸಿಕ್ಕವರ ತಲೆಯ ಮೇಲೆ ಕೈಯಾಡಿಸದೆ ಬಿಡುವುದಿಲ್ಲ. ಪ್ರಸಂಗ ಬಂದರೆ ಅಂಥವರ ತಲೆಯ ಮೇಲೆ ಕೈಯಾಡಿಸದೆ ಬಿಡುವದಿಲ್ಲ. ಪ್ರಸಂಗಬಂದರೆ ಅಂಥವರ ತಲೆಯಮೇಲೆ ಮೆಣಸು ಅರೆಯುವದಕ್ಕೂ ಹಿಂಜರಿಯುವದಿಲ್ಲ. ಜಡೆಯಿರಲಿ ಜುಟ್ಟುಯಿರಲಿ ತಲೆಬೋಳಿಸುವದಕ್ಕೂ ಅನುಮಾನ ಮಾಡುವದಿಲ್ಲ. ಅಂತೆಯೇ ಅಸಂಖ್ಯಾತ ಗಾದೆಗಳು ಹುಟ್ಟಿಕೊಂಡಿವೆ. ಬರಿ ಹುಟ್ಟಿಕೊಂಡು ಕಣ್ಮರೆಯಾಗಿಲ್ಲ. ತಮ್ಮಲ್ಲಿ ಹುದುಗಿಕೊಂಡಿರುವ ಹುರುಳು ತಿರುಳುಗಳಿಂದ ಸಾರ್ವಜನಿಕರ ಮನ್ನಣೆಗಳಿಸಿಕೊಂಡು ಸಹಜವಾಗಿ ಬಳಕೆಯಲ್ಲಿ ಬಂದಿವೆ. ಗಾದೆಗಳಿಗೆ ದೀರ್ಘಾಯುಷ್ಯದಂತೆ ಅಜರಾಮರತೆಯೂ ಪ್ರಾಪ್ತವಾಗಿದೆ. ಆದರೆ ಗಾದೆಗಳು ಕಾಲವಶದಲ್ಲಿ ಕಾಣೆಯಾಗಿರಬಹುದು; ಆದರೆ ಸತ್ತಿಲ್ಲ. ಜಡದಂತೆ ಕಾಣುವ ಅವುಗಳ ಸುಪ್ತ ಚೇತನವನ್ನು ರಸಿಕರು ಜಾಗೃತಗೊಳಿಸಬಹುದಾಗಿದೆ.

ಮೊದಲಿಗೆ ದೇವರು ಸ್ವಾಮಿಗಳಿಂದ ಆರಂಭಿಸಿ ಗಾದೆಗಳನ್ನು ಸಮೀಕ್ಷಿಸೋಣ-

ಹನುಮಪ್ಪ ಹಗ್ಗ ತಿನ್ನುವಾಗ
ಪೂಜಾರೆಪ್ಪ
ಶಾವಿಗೆ ಬೇಡುತ್ತಿದ್ದನಂತೆ
ಕೊಟ್ಟವ ಕೋಡಗ ತಗೊಂಡವ ಹಣಮಂತ
ಊರ ಸುಟ್ಟರೂ ಹನುಮಪ್ಪ ಹೊರಗೆ

ಪೂಜಾರಿಯ ಪ್ರಾಬಲ್ಯವೇ ಮಿಗಿಲಾಗಿ ಹನುಮಪ್ಪ ಕಂಗಾಲನಾದರೆ ಆಶ್ಚರ್ಯವೇನು? ಸಾಲವಾಗಿಯೋ ಕೈಗಡವಾಗಿಯೋ ಕೊಟ್ಟಿದ್ದು ಮರಳದಂತಾದಾಗ ಕೊಟ್ಟವನು ಕೋಡಗನಂತೆ ಹಣೆಗೆ ಕೈಹಚ್ಚಿಕೊಂಡು ಕೂಡುವುದೂ ತೆಗೆದುಕೊಂಡವನು ನಿಗುರಿನಿಂತು ಕೈಯೆತ್ತುವುದೂ ವ್ಯವಹಾರದಲ್ಲಿ ವಾಡಿಕೆಯಾಗಿದೆ. ಊರೆಂದರೆ ಮನೆತನಗಳ ಗುಂಪು. ಮನೆತನದಲ್ಲಿರುವ ಹೆಂಡಿರು ಮಕ್ಕಳು ಆಸ್ತಿ-ಪಾಸ್ತಿ ಎಂಥದೋ ಕಾರಣದಿಂದ ಒಮ್ಮೊಮ್ಮೆ ಸುಟ್ಟು ಹೋಗುವುದುಂಟು. ಆದರೆ ಹನುಮಪ್ಪ ಇಸ್ಪೇಟಿನಾಟದೊಳಗಿನ ಹುಕುಮದೆಕ್ಕಾ ಇದ್ದಂತೆ ತೆಪ್ಪಗಿರುತ್ತಾನೆ. ಅವನ ಆಸ್ತಿ-ಪಾಸ್ತಿಗಾಗಲಿ ಬಂಧು ಬಳಗಕ್ಕಾಗಲಿ ಯಾವ ಬಾಧೆಯೂ ಬರುವಂತಿಲ್ಲ. ಅವು ಇದ್ದರಲ್ಲವೇ ಬಾಧೆಗೀದೆಗೀಡಾಗುವುದು?

ಮಠದಯ್ಯ, ಮಠಪತಿ, ಭಟ್ಟ, ಉಪಾಧ್ಯರೆಂದರೆ ಪೂಜ್ಯಸ್ಥಾನದಲ್ಲಿದ್ದವರು ಅಷ್ಟೇ. ಆದರೆ ಅವರು ತಾವು ಕಂಡಿರದ ಅಂತರಂಗವನ್ನು ಪರಿಸರದವರು ಸಹಜವಾಗಿ ಕಂಡಿರಬಲ್ಲರು. ಕಂಡಿದ್ದನ್ನಾಡಿಕೊಳ್ಳಲಿಕ್ಕೆ ಯಾರು ಆಣೆ ಹಾಕಿದ್ದಾರೆ ಅವರಿಗೆ?

‘ಜಂಗಮ ಜಾತಿ, ಗಡಿಗ್ಯಾಗ ಮೋತಿ’ ಭಕ್ತರ ಮನೆಗೆ ಊಟಕ್ಕೆ ಬಂದಾಗ.

‘ಕೈಲಾಗದ ಸೂಳೆ ಅಯ್ಯನ ಕೂಡ ಎದ್ದು ಹೋದಳು’ ಅಯ್ಯನವರಿಗೆ ಸುಲಭಸಾಧ್ಯವಾದ ಕೆಲಸವೆನ್ನಬೇಕು.

‘ದುಡ್ಡಿಗಾಗಿ ಪಂಚಾಂಗದ ಪಾನುಗಳನ್ನೆಲ್ಲ ಉಗುಳುಹಚ್ಚಿ ತಿರುಹಿ ಹಾಕುತ್ತಾನೆ ಉಪಾಧ್ಯ’ ತಿಳಿದೋ ತಿಳಿಯದೆಯೋ ಮಾಡುವ ನಾಟಕ ಅವನಿಗೆ ಸಾಧಿಸಿದೆ. ‘ಹೇಸಿ ಗುರುವಿಗೆ ಸಮಗಾರ ಶಿಷ್ಯ ಇನ್ನಾರು?’ ವಾಸ್ತವಿಕ.

‘ಕೆಟ್ಟ ಕೂಳು ತಿಂದು ಭಟ್ಟ ನಿಟ್ಟುಸಿರಿಟ್ಟ’ ನಿತ್ಯವೂ ಹಬ್ಬದೂಟ ಉಣ್ಣುವವನಿಗೆ ದೈನಂದಿನ ಸಾದಾ ಊಟವೆಂದರೆ ಆತನ ಪಾಲಿಗೆ ಕೆಟ್ಟ ಕೂಳೇ ಅಲ್ಲವೇ? ಕರಿ ಮರಿನಾಯಿ ಕುಂಯ್ ಗುಡುವುದಕ್ಕೆ ಮತ್ತು ಭಟ್ಟರ ಬಾಯಿ ಒಟಗುಡುತ್ತಿರುವುದಕ್ಕೆ ಕಾರಣಗಳು ಬೇರೆ ಬೇರೆ ಆಗಿರುತ್ತವೆ. ಒಟ್ಟಿನಲ್ಲಿ ದಕ್ಷಿಣೆ ದಾನಗಳಿಗೆ ಅನುಸಿರಿಸಿ ಅನುಲಕ್ಷಿಸಿ ಕೊಡುವ ದಡ್ಡರಿರುವಾಗ ಬೇಡುವ ಜಾಣರಿಗೇನು ಕೊರತೆ? ಎಂದು ಇಂದಿಲ್ಲ ನಾಳೆಯಾದರೂ ಹೇಳದೆ ಗತ್ಯಂತರವಿಲ್ಲ.

ಧಾರ್ಮಿಕ ತಲೆಯಾಳುಗಳ ತರುವಾಯ ಅಧಿಕಾರದಿಂದ ಮಿಗಿಲೆನಿಸುವವರ ಸರತಿ ಬರುವುದು ಸಹಜಕ್ರಮ. ಆದ್ದರಿಂದ ಗ್ರಾಮಸ್ಥರೆಂದರೆ ಗ್ರಾಮಾಧಿಕಾರಿಗಳಲ್ಲಿ ಗೌಡ-ಕುಲಕರ್ಣಿಯರು ಹಿರಿಯ ಸ್ಥಾನದಲ್ಲಿ ಇದ್ದವರು ಆದರೆ ಅವರನ್ನೂ ಜರಿದು ನುಡಿಯುವ ಪ್ರಸಂಗವು ಜನಪದಕ್ಕೆ ಬಾರದೆ ಹೋಗದು.

‘ಊರಿಗೆ ಗೌಡ, ಆದರೆ ತೋಳಕ್ಕೇನು?’ ಅನ್ನಿಸಿಕೊಳ್ಳುವುದು ಊರದೊರೆ ಗೌಡನಿಗೆ ತಪ್ಪಿಲ್ಲ. ‘ಗೌಡಾ ಗೌಡಾ ಒಳ್ಳಾಗ ತೌಡಾ’ ಎಂದು ಮುದಿಕೆಯರು ಸಮವಯಸ್ಕರು ಗೇಲಿ ಮಾಡದೆ ಬಿಡುವದಿಲ್ಲ. ಗೌಡನಂತೆ ಗೌಡನ ಕೋಣ. ‘ತಾನೂ ಹಾರದು, ಬೇರೆ ಕೋಣಗಳನ್ನೂ ಹಾರಗೊಡದು’ ಎಂದು ಕುಂದಿಟ್ಟಾಡುವ ನುಡಿ ಕೇಳಸಿಗುತ್ತದೆ. ‘ಗೌಡನ ಸೂಳೆಯೆನಿಸಿಕೊಳ್ಳುವುದಕ್ಕೆ ಗೌಡನ ಅಪ್ಪಣೆಯೇಕೆ’ ಎಂದು ತಲೆತಿರುಕರು ಕೇಳುವುದುಂಟು. ‘ಗೌಡ ಬಯ್ಯುವುದು ಕಟ್ಟೆಯಲ್ಲಿ, ಹೊಲೆಯ ಬಯ್ಯುವುದು ಹೊಟ್ಟೆಯಲ್ಲಿ’ ಸುಳ್ಳೇ? ಗುದಿಗೆಯ ಗೆಣೆಯನಾದ ಗೌಡನ ನೀರೂ ಇಷ್ಟೊಂದು ಕೆಳಗಿಳಿದರೆ, ಲೇಖನಿಯ ಗೆಣೆಯನಾದ ಕುಲಕಣಿರ್ಯಯ ಒಳಗುದ್ದಿಗೆ ಹೆದರದೆ ನುಂಗಿಕೊಂಡಂತಿಲ್ಲ ಈ ಜನಪದರು. ಕುಂಡರಲಾರದ್ದಕ್ಕೆ ಕುಲಕರ್ಣಿಯ ಮನೆಗೆ ಹೋದರೆ, ಕುಂಡರಿಸಿ ಮೂರು ರೂಪಾಯಿ ತಕ್ಕೊಳ್ಳುವುದು ಎಲ್ಲರಿಗೂ ಮನವರಿಕೆಯಾದ ಮಾತೇ. ‘ಹೊಟ್ಟೆಗಿಲ್ಲದ ಶಾನುಭೋಗ ಹಳೆಕಡತ ಹುಡುಕಿದ’ ಎನ್ನುವುದರಲ್ಲಿ ಸತ್ಯಾಂಶವೇ ಅಧಿಕವಾಗಿದೆ. ‘ಹಾವು ಕಡಿದರೆ ಒಬ್ಬ ಸಾಯುತ್ತಾನೆ, ಆದರೆ ಹಾರುವ ಕಡಿದರೆ ಮನೆಮಂದಿಯೆಲ್ಲಾ ಸಾಯುತ್ತಾರೆ’ ಇದೆಂಥ ಕಹಿ ಅನುಭವ? ಇದರಲ್ಲಿ ಸಂಪೂರ್ಣ ಸತ್ಯವಿಲ್ಲದಿಲ್ಲ.

ಒಂಟಿಯಾಗಿ ಜರಿಸಿಕೊಂಡವನು ಗುಂಪಿನಲ್ಲಿಯೂ ಜರಿಸಿಕೊಳ್ಳುವನು.

ಹಾರುವನು ಮಾಡುವುದು ಪಿಂಡಕ್ಕೆ,
ಮುಸಲನು ಮಾಡುವುದು ಖಂಡಕ್ಕೆ
ಒಕ್ಕಲಿಗ ಮಾಡುವುದು ದಂಡಕ್ಕೆ
ಬ್ರಾಹ್ಮಣನ ಹಗೆ, ಶೆಟ್ಟಿಯ ನಗೆ ಸಲ್ಲ

ಇಂಥ ಮನವರಿಕೆ ಕೆಲವರಿಗಾದರೂ ಆಗಿರಬೇಕಲ್ಲವೇ? ಇನ್ನು ಒಕ್ಕಲಿಗರ ಹಾಗೂ ಆಯಗಾರರ ವಿಷಯವಾಗಿ ಹಲವಾರು ಗಾದೆಗಳು ಹುಟ್ಟಿಕೊಂಡಿವೆ.

೧. ರಸ ಬೆಳೆದು ಕಸ ತಿಂದ

೨. ಆಷಾಢ ಗಾಳಿ ಬೀಸಿ ಬೀಸಿ ಹೊಡೆಯುವಾಗ, ಹೇಸಿನನ ಜೀವ ಹೆಂಗಸಾಗಬಾರದೇ ಅಂತಿತ್ತು.

೩. ಒಕ್ಕಲಿಗನ ಸಂಪತ್ತು ಹಾರುವನ ಹಿಕಮತ್ತು.

೪. ಉದ್ಯೋಗವಿಲ್ಲದ ಬಡಿಗ ಕುಂಡಿ ಕೆತ್ತಿಕೊಂಡ.

೫. ಅಕ್ಕಸಾಲಿ ಅಕ್ಕನ ಬಂಗಾರವನ್ನೂ (ಕದಿಯದೆ) ಬಿಡನು.

೬. ಕಣಗೆಟ್ಟು ಕಂಬಾರನಿಗೆ ಹೋದರೆ, ಮೂಗಿನ ತಟಕು ಬಾಯಲ್ಲಿ ಬಿತ್ತು.

೭. ಅಗಸನಿಗೆ ಒಂದು ಕಲ್ಲು, ಪಿಂಜಾರನಿಗೆ ಒಂದು ಕಲ್ಲು.

೮. ಒಲ್ಲಿ ಒಗೆದೇನೊ ಅಗಸಾ ಅಂದರೆ, ಮೂಸಿ ನೋಡೋ ಗೌಡಾ ಅಂದನು.

೯. ಹೊಲೆಯಾಳಿಗೊಂದು ಮನೆಯಾಳು.

೧೦. ಒಲ್ಲಿಯಲ್ಲಿ ಕಲ್ಲು ಕಟ್ಟಿ ಹೊಲೆಯ ಹರಿದನು.

೧೧. ಸಮಗಾರ ದೆವ್ವಿಗೆ ಮೊಚ್ಚೆಪೆಟ್ಟು.

೧೨. ಹೇಸಿ ಗುರು ಸಮಗಾರ ಶಿಷ್ಯ.

೧೩. ಗಂಡನದನ್ನು ತಿಂದು ಮಿಂಡನ ಚಾಕರಿ ಮಾಡಿದರು.

ಮೇಟಿಯ ಕೇಂದ್ರದಲ್ಲಿರುವ ಸದಸ್ಯರನ್ನು ಕುರಿತ ಗಾದೆಗಳು ಅಸಂಖ್ಯವಾಗಿರುವಂತೆ, ರಾಟಿಯ ಕೇಂದ್ರದೊಳಗಿನ ಸದಸ್ಯರನ್ನು ಕುರಿತ ಗಾದೆಗಳೂ ವಿಪುಲವಾಗಿವೆ.

೧. ಅಜ್ಜಿ ನೂತಿದ್ದೆಲ್ಲ ಮೊಮ್ಮಗನ ಉಡುದಾರಕ್ಕೆ ಸಾಲದೆ ಹೋಯಿತು.

೨. ಹನ್ನೆರಡು ಜನ ಜೇಡರು ಕೂಡಿ ಒಂದು ಬಾಳೆಗಿಡ ಕಡಿದರು.

೩. ಕುರುಬ ಕುಂಬಾರತಿಗೆ ಹೋದರೆ, ಜೇಡ ಆಡಿನ ಕಾಲು ಮುರಿದನು.

೪. ಜೇಡನ ಹೆಂಡತಿ ಬತ್ತಲೆ.

೫. ಕುರಿ ಕಾಯ್ತಿಯೋ ತೋಳಾ ಅಂದರೆ, ಸಂಬಳವಿಲ್ಲದೆ ಅಂದಿತು ತೋಳ.

೬. ಇಟ್ಟು ಮರುಗುವ ನಾಯಿ, ಕೊಟ್ಟು ಕೊರಗುವ ನಾಯಿ, ತಿಥಿಮಿತಿ ಇಲ್ಲದೆ ತಿರುಗುವ ನಾಯಿ.

(ಸಂತೆ ಸಂತೆ ತಿರುಗಿ ಅಥವಾ ಹೋದಲ್ಲಿಯೇ ಸಂತೆ ನೆರೆಯಿಸಿ ಸೀರೆ, ಕುಪ್ಪಸ ಮಾರುವ ಚಟ್ಟಿಯನನ್ನು ಕುರಿತದ್ದು).

ಚಿಕ್ಕ ತಕ್ಕಡಿಯ ಅಂಗಡಿಯನ್ನೋ, ಜವಳಿ ಅಂಗಡಿಯನ್ನಿಟ್ಟು ಕುಳಿತಲ್ಲಿಯೇ ವ್ಯಾಪಾರ ಮಾಡುವ ಕುಶಲತೆಯಿರುವುದು ಬಣಜಿಗನಿಗೆ. ಲಿಂಗವಂತರಲ್ಲಿಯೇ ಹೆಚ್ಚು ಶೀಲವಂತಿಕೆ ಅವನದು. ‘ಬಣಜಿಗ ಭಕ್ತನಲ್ಲ’ ಎನ್ನುವಲ್ಲಿ ಗುರು ಅಥವಾ ದೇವರು ಎನ್ನುವ ಶಬ್ದವು ಅಧ್ಯಾಹಾರವಾಗಿರುತ್ತದೆ. ಬಣಜಿಗನು ತಾನು ಹರದಿಗನೆಂದು ಬಹುಕಾಲದಿಂದ ಆಢ್ಯತೆಯಿಂದ ಹೇಳಿಕೊಳ್ಳುತ್ತ ಬಂದದ್ದುಂಟು. ಹರದಿಗನೆಂದರೆ ವ್ಯಾಪಾರಿ. ಹರದಿಗನು ಊಟಕ್ಕೋ ಮನೆಗೋ ಹೋದಾಗ ವ್ಯಾಪಾರ ನಿರ್ವಹಿಸಲು ಆತನ ಹೆಂಡತಿಯಾಗಲಿ ತಾಯಿಯಾಗಲಿ ಅಂಗಡಿಯಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಹರದಿಗ ಹೆಂಡತಿ ಅಥವಾ ತಾಯಿ ಹರದಿಯೆ ನಿಸುವುದು ಸಹಜ. ಆದರೆ ಹರದಿ ವ್ಯಾಪಾರಿಯೆನಿಸುವಂತೆ ಪತಿವ್ರತೆಯೆಂದೂ ಅನಿಸಿದಳು. ಆದ್ದರಿಂದಲೇ ಹರದಿ ಶಬ್ದಕ್ಕೆ ಪತಿವ್ರತೆಯೆಂಬ ಬೇರೊಂದು ಅರ್ಥ ರೂಢಿಸಿತೇನೋ.

ಬೆಳ್ಳಿಚಿಕ್ಕಿ (ಶುಕ್ರಗ್ರಹ) ಮೂಡಿ ಮೇಲೇರಿದಾಗ ಹೊತ್ತು ಹೊರಟಿತೆಂದು ಭಾವಿಸಿ ಬಣಜಿಗಳು ವ್ಯಾಪಾರದ ಸರಕು ಖರೀದಿಸಲು ಕತ್ತೆ ಮತ್ತು ಆಳುಗಳೊಂದಿಗೆ ಪ್ರಯಾಣ ಹೊರಡುತ್ತಾನೆ. ಊರು ಬಿಟ್ಟು ನಾಲ್ಕು ಹರದಾರಿ ಹೋದ ಬಳಿಕ ಕ್ಷಿತಿಜದ ಮೇಲೆ ಬೆಳ್ಳಿ ಮೂಡಿತು. ತಾನು ಇನ್ನಾವುದೋ ಹೊಳಪಿನ ಚಿಕ್ಕೆಗೆ ಬೆಳ್ಳಿಚಿಕ್ಕೆಯೆಂದು ಬಗೆದು ಅಪರಾತ್ರಿಯಲ್ಲಿ ಹೊರಟು ಮೋಸಹೋದೆನಲ್ಲ ಎಂದು ಮರುಗಿದನು. ಹಾಗಾದರೆ ಬೇರೊಂದು ಹೊಳಪಿನ ಚಿಕ್ಕೆ ಯಾವುದು? ಗುರುಗ್ರಹವೆಂದು ಹಿಂದಿನಿಂದ ತಿಳಿಯಿತು. ಅಂತೆಯೇ ಜನಪದರು ಗುರುಗ್ರಹಕ್ಕೆ ಬಣಜಿಗನ ಮಿಂಡನೆಂಬ ಹೆಸರು ಕೊಟ್ಟರು. ವ್ಯವಹಾರ ಕುಶಲತೆಯಿಂದ ಊರಿಗೇ ಚಳ್ಳೆಹಣ್ಣು ತಿನಿಸಬಲ್ಲ ಬಣಜಿಗನನ್ನು ಮೋಸಗೊಳಿಸಿದ ಗುರುಗ್ರಹ ಬಣಜಿಗನ ಮಿಂಡನೇ ಸರಿ, ಅಲ್ಲವೇ? ಬಣಜಿಗನನ್ನು ಕುರಿತು ಒಂದೆರಡು ಗಾದೆಗಳು:

೧. ಶೆಟ್ಟಿಯೇ, ಮಗ ಬಿದ್ದನೆಂದರೆ, ಲಾಭಕಾಣದೆ ಬಿದ್ದಿರಲಾರ ಅಂದನು.

೨. ಬಣಜಿಗ ಬಿಡ, ಕೋಮಟಿಗ ಕೊಡ

೩. ಸುಂಕದವ ಸುಳ್ಳ, ಬಣಜಿಗ ಕಳ್ಳ

೪. ಶೆಟ್ಟಿ ಸವ್ವಾಸೇರು, ಲಿಂಗ ಅಡಿಸೇರು

ಮೇಟಿಯ ಕೇಂದ್ರದಲ್ಲಿ ಆಯಗಾರರಂತೆ ನಾಯಿ ಬೆಕ್ಕುಗಳೂ, ಎಮ್ಮೆ ಆಕಳು ಕುದುರೆಗಳೂ ಇರುವುದುಂಟು.

೧. ಹಾಲಿದ್ದ ಕಡೆ ಬೆಕ್ಕು, ಕೂಳಿದ್ದ ಕಡೆ ನಾಯಿ

೨. ಕಚ್ಚುವ ನಾಯಿ ಬೊಗಳುವದಿಲ್ಲ, ಬೊಗಳುವ ನಾಯಿ ಕಚ್ಚುವದಿಲ್ಲ

೩. ಬೆಕ್ಕಿಗೆ ಜ್ವರ ಬಂದರೆ ಇಲಿ ಬಂದು ಮೈ ತುರುಸಿತು

೪. ಹಸಿದ ನಾಯಿ ಹಳಸಿದ ನುಚ್ಚು

೫. ನಾಯಿಗೆ ಕೆಲಸವಿಲ್ಲ, ಕೂಡಲಿಕ್ಕೆ ಸಮಯವಿಲ್ಲ

೬. ಗೂಳಿ ಬಿದ್ದರೆ ಆಳಿಗೊಂದು ಕಲ್ಲು

೭. ಸತ್ತೆಮ್ಮೆಗೆ ಸೇರು ತುಪ್ಪ

೮. ಹಾಲು ಇದ್ದಾಗ ಹಬ್ಬ ಮಾಡು

ಹಳ್ಳಿಯ ಕೇಂದ್ರಗಳ ಹಾಗೂ ಅವುಗಳಿಗೆ ಸಂಬಂಧಿಸಿದ ಕಸಬುದಾರರನ್ನು ಕುರಿತ ಗಾದೆಗಳನ್ನು ಅವಲೋಕಿಸಿದ್ದಾಯಿತು. ಇನ್ನು ಯಾವ ಕೇಂದ್ರಕ್ಕೂ ಸಂಬಂಧಿಸದ ಇಲ್ಲವೆ, ಪರ್ಯಾಯದಿಂದ ಒಂದಾನೊಂದು ಕೇಂದ್ರಕ್ಕೆ ಸಂಬಂಧಿಸಿದವರನ್ನು ಕುರಿತ ಗಾದೆಗಳನ್ನು ನಿರೀಕ್ಷಿಸಬೇಕಾಗಿದೆ. ‘ಊರು ಒತ್ತಟ್ಟಿಗೆ, ಉಪ್ಪಾರ ಒತ್ತಟ್ಟಿಗೆ’ ಇರುವುದನ್ನು ಯಾರು ಕಂಡಿಲ್ಲ? ‘ಧನಿಯನಿಗೆ ದೌಲತ್ತು ಬಂದರೆ ತೊತ್ತಿಗೆ ಮೂರು ಕೊಡ ನೀರು ಜಾಸ್ತಿ’ ಎನ್ನುವುದನ್ನು ಅಡಿಗಡಿಗೂ ಕೇಳುತ್ತಿದ್ದೇವೆ. ‘ಹೆಂಗಸಿಗೆ ಗಂಡಸು ಗಂಡನಾದರೆ, ಗಂಡಸಿಗೆ ಸಾಲವೇ ಗಂಡ.’ ‘ಇದ್ದೊಬ್ಬ ಮಗ ಕರಿಬಸವ, ಇದ್ದೊಬ್ಬ ಮಗಳು ಊರ ಬಸವಿ’ ‘ಆನೆ ತಿಂಬೋದು ಸೊಪ್ಪು, ಇರುವೆ ತಿಂಬೋದು ಸಕ್ಕರೆ’, ‘ಕೊಲ್ಲು ಅಂದರೆ ಕಪ್ಪೆಗೆ ಕೋಪ, ಬಿಡು ಎಂದರೆ ಹಾವಿಗೆ ಕೋಪ’, ‘ಪರೀಕ್ಷೆಗೆಂದು ಮೀನು ತಿಂದರೆ ಬಾಯಿ ನಾರದಿರುವುದೇ?’ ‘ಮುಂಡೆಗೆ ಮುಂಡೆ ಕಂಡರೆ ಉಂಡಷ್ಟು ಸಂತೋಷ’, ‘ಊರಿಗೊಬ್ಬಳೆ ಸೂಳೆ, ಬಾಯಲ್ಲಿ ಹಲ್ಲಿಲ್ಲ’.

ವಿಶಿಷ್ಟ ನೀತಿ ‘ದಂಡಿನಲ್ಲಿ ಕೆಟ್ಟಿದ್ದು ಹಾದರವಲ್ಲ, ಬರದಲ್ಲಿ ಕದ್ದಿದ್ದು ಕಳವಲ್ಲ’, ‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಹಾಕಿತು’, ‘ಹಿರಿಯ ಮಗ ಆಗಬಾರದು, ಬಾಗಿಲಿಗೆ ಕದ ಆಗಬಾರದು’, ‘ಮುದ್ದೆಗೆ ನಿದ್ದೆ ಘನ, ನಿದ್ದೆಗೆ ದಾರಿದ್ರ್ಯ ಘನ’, ‘ಮೈ ಬೆಳ್ಳಗಿದ್ದರೆ ನೆರಳೂ ಬೆಳ್ಳಗಿದ್ದೀತೇ?’ ‘ಕಡ ಹುಟ್ಟಿ ಬಡವ ಕೆಟ್ಟ’, ‘ದರಿದ್ರಕ್ಕೆ ಮೈಯೆಲ್ಲ ಹೊಟ್ಟೆ’, ‘ಬೀಸುವ ಕಲ್ಲು ಚಿನ್ನವಾದರೆ ಕಲ್ಲು ನನಗೆ, ಗೂಟ ನಿನಗೆ’, ‘ತಾಳಲಾರದ ವಿರಹ ತಿಣಕಿದರೆ ಹೋದೀತೇ?’, ‘ಎಲ್ಲರಿಗೂ ಒಂದು ಬಟ್ಟೆ, ಕೋಡಗನಿಗೆ ಬೇರೆ ಬಟ್ಟೆ’, ‘ಕಾಯಿದ್ದ ಮರಕ್ಕೇ ಕಲ್ಲು ಬೀಳೋದು’, ‘ಕೋಪದಲ್ಲಿ ಕೊಯ್ದ ಮೂಗು ಶಾಂತಿಯಲ್ಲಿ ಹತ್ತೀತೇ?’

ಸಹಸ್ರಾರು ಸಂವತ್ಸರಗಳಿಂದ ಹುಟ್ಟಿಕೊಳ್ಳುತ್ತ ಬಂದ ಗಾದೆಗಳಲ್ಲಿ ಉಳಕೊಂಡಿದ್ದೇ ಕಡಿಮೆಯೆಮದರೂ ಅದೊಂದು ಮಹಾನಿಧಿಯೇ ಆಗಿದೆ. ಆ ಮಹಾನಿಧಿಯಿಂದ ಮಾದರಿಗಾಗಿ ಅಲ್ಲೊಂದು ಇಲ್ಲೊಂದು ಗಾದೆಯನ್ನು ಆಯ್ದುಕೊಂಡು ವ್ಯವಸ್ಥಿತವಾಗಿ ಪರಿಣಮಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಪವಣಿಕೆಯಿಂದ ವಾಚಕರಿಗೆ ಗಾದೆಗಳ ಸಲುವಾಗಿ ಹೆಚ್ಚಿನ ಹವಣಿಕೆ ಹುಟ್ಟಿದರೆ ಅದೊಂದು ಮಹಾಸಾರ್ಥಕ್ಯ.