ಧನಹೀನನಾದ ಕಂಗಾಲನ ಪರಿಸ್ಥಿತಿಯೇ ಬಡತನವೆನಿಸುತ್ತದೆ. ಆದರೆ ಅದು ದಾರಿದ್ರ್ಯವಲ್ಲ. ಬಡತನಕ್ಕೀಡಾದ ಬಡವ ದರಿದ್ರನೆನಿಸುವದಿಲ್ಲ. ಬಡತನವು ತಿನ್ನುಣ್ಣುವುದಕ್ಕೆ ಕೊರತೆ, ಉಡುತೊಡುವುದಕ್ಕೆ ಕೊರತೆ ಒಡ್ಡಬಲ್ಲದು. ಆದರೆ ತಿನ್ನುಣ್ಣುವುದಕ್ಕಾಗಲಿ ಉಡುತೊಡುವುದಕ್ಕಾಗಲಿ ಸಾಕೆನಿಸುವಷ್ಟು ಇದ್ದರೂ ಅದನ್ನು ಭೋಗಿಸುವ ಲಿಖಿತವಿರುವುದಿಲ್ಲ.

ಬಡತನಕ್ಕಾಗಲಿ ದಾರಿದ್ರ್ಯಕ್ಕಾಗಲಿ ಲಿಂಗಭೇದವಿರುವುದಿಲ್ಲ. ಪುಲ್ಲಿಂಗ ಸ್ತ್ರೀಲಿಂಗಗಳೆಲ್ಲ ನಪುಂಸಕ ಲಿಂಗಗಳಾಗಿಯೇ ಪರಿಣಮಿಸುತ್ತವೆ. ‘ಭತ್ತವಿದ್ದೂ ಬಡತನ, ಗಂಡ ಇದ್ದೂ ರಂಡಿತನ’ ಎಂಬ ಗಾದೆ ಬಡತನ, ದಾರಿದ್ರ್ಯ ಎರಡನ್ನೂ ಒಂದೇ ಮಾತಿನಲ್ಲಿ ಪವಣಿಸಿದೆ. ‘ಹುಟ್ಟಿದ ಮನೆ ಹೋಳೀ ಹುಣ್ಣಿವೆ, ಕೊಟ್ಟಮನೆ ಶಿವರಾತ್ರಿ’ ಯಾದ ಹೆಣ್ಣಿಗೆ ಬಡತನ ದಾರಿದ್ರ್ಯಗಳೆರಡೂ ಹಿಮ್ಮಗ್ಗಲು ಮುಮ್ಮಗ್ಗಲು ಆಗಿವೆ. ಬಡತನವುಳ್ಳವನಿಗೆ ಬಡವ ಎಂಬ ಒಂದೇ ಅನ್ವರ್ಥಕನಾಮವಿದ್ದರೆ, ದಾರಿದ್ರ್ಯವುಳ್ಳವನಿಗೆ ಬರಿ ದರಿದ್ರನೆಂದರೆ ಸಾಕಾಗದು. ಅವನು ಖೋಡಿ, ಪಾಪಿ ಮೊದಲಾದ ಅನ್ವರ್ಥಕನಾಮಗಳನ್ನು ಗಳಿಸಿರುತ್ತಾನೆ.

ಖೋಡಿ ಉಳ್ಳಿಕ್ಕೆ ಕೂತರೆ ಪರ್ಯಾಣ ಒಡೀತು
ಪಾಪಿ ಹೊಳೆ ಬೀಳಹೋದರೆ ನೀರು ಮೊಳಕಾಲುದ್ದ ಮಾತ್ರ

ಖೋಡಿ, ಪಾಪಿ ಎನ್ನುವ ಅನ್ವರ್ಥಕನಾಮಗಳು ಅವನ ಮುಖದ ಮೇಲೆ ಬರೆದಿರುವುದನ್ನು ತುಸು ಪರಿಶ್ರಮಪಟ್ಟರೆ ಯಾವನಾದರೂ ಓದಿಕೊಳ್ಳಬಹುದಾಗಿದೆ. ಅದೊಂದು ಸವಕಳಿ ನಾಣ್ಯ. ಆ ನಾಣ್ಯದಿಂದ ಯಾವ ಜೀನಸೂ ದೊರೆಯಲಾರದು. ಬಹಳವಾದರೆ ಅಂಥ ನಾಣ್ಯವನ್ನು ಸತ್ತುಬಿದ್ದ ಹಾವನ್ನು ಸುಡುವಾಗ ಅದರ ಬಾಯಲ್ಲಿ ಇರಿಸಿ ಪುಣ್ಯ ಕಟ್ಟಿಕೊಳ್ಳುವದಕ್ಕೆ ಮಾತ್ರ ಉಪಯೋಗಿಸುವಂತೆ ತೋರುತ್ತದೆ.

ಖೋಡೀನ ಕರಕೊಂಡು ಬೇಡೀ ಮನೆಗೆ ಹೋದರೆ
ಬೇಡೀ ಮನಿಯಾಗ ಸಹ ಬ್ಯಾಡಬ್ಯಾಡ ಅಂದರು

ಹುಟ್ಟು ದರಿದ್ರನು ದಟ್ಟದರಿದ್ರನಿಗಿಂತ ಖೋಡಿ ಹೆಚ್ಚು ದೆಶೆಗೇಡಿ ಎನಿಸುತ್ತಾನೆ.

ಖಬರಗೇಡಿಯ ಕೈಯಲ್ಲಿ ಖೊಬ್ರಿ ಕೊಟ್ಟರ
ಅಬರಂಗ ಮಾಡಿ ಮೈಗೆಲ್ಲ ಹಚ್ಚಿಕೊಂಡಿತಂತೆ

ತಿಂದು ತಣಿಯಬೇಕಾದ ಕೊಬ್ಬರಿಯನ್ನು ಬಾಯಲ್ಲಿ ಅಬಡು-ಜಬಡು ನುರಿಸಿ ಮೈಯೆಲ್ಲ ಒರಿಸಿಕೊಳ್ಳುತ್ತದೆ. ಏತಕ್ಕಾಗಿ ಗೊತ್ತೇ? ಮೈ ಅಬರಂಗ ಹಚ್ಚಿದಂತೆ ಲಕಲಕಿಸಬೇಕೆಂದು.

‘ಕಲ್ಲು ಕಟ್ಟಿ ಹೊಲೆಯ ವಲ್ಲೀ ಹರಿ’ ಯುವ ದುರುಪಯೋಗ ಮಾಡಿಕೊಳ್ಳುತ್ತಾನೆ. ಆದ್ದರಿಂದ ಅವನಿಗೆ ಬಡವನೆನ್ನಬೇಕೋ ದರಿದ್ರನೆನ್ನಬೇಕೋ ಅನ್ನುವುದು ಹಸಿದಡ್ಡರಿಗೂ ತಿಳಿಯುತ್ತದೆ. ‘ಈಗ ಏಳು ಬೇಕೋ ಮುಂದೆ ಎಪ್ಪತ್ತು ಬೇಕೋ’ ಎಂದು ಕೇಳಿದರೆ ದಟ್ಟ ದರಿದ್ರನು ಮುಂದೆ ಎಪ್ಪತ್ತು ಬೇಕು ಅನ್ನಬಹುದಾಗಿದೆ. ಆದರೆ ಜಾಣಬಡವನು, ಈಗ ಏಳೇ ಸಾಕು ಎಂದು ಎಣಿಸಿಕೊಳ್ಳುವನು. ಕನ್ನಡಿಯೊಳಗಿನ ಗಂಟಿಗಿಂತ ಅವನಿಗೆ ಕೈಯೊಳಗಿನ ದಂಟೇ ಬೆಲೆಯುಳ್ಳದ್ದಾಗಿ ತೋರುತ್ತದೆ. ಆದರೆ ದರಿದ್ರನ ಹಂಬಲ ಕನ್ನಡಿಯೊಳಗಿನ ಗಂಟಿನ ಕಡೆಗೇ ಎಳೆಯುತ್ತದೆ.

‘ಎಲೆ ಒಣಗಿದರೆ ಗಿಡ ಚಿಗಿತೀತು ಆದರೆ ಬೇರು ಒಣಗಿದರೆ ಗಿಡ ಚಿಗತೀತೆ?’ ಬಡವನ ಮಾರ್ದೆಶೆ ಮಸುಕುಗೊಂಡಿದ್ದರೆ, ದರಿದ್ರನ ಮುಖರಚನೆ ಆದದ್ದೇ ಅರಿಷ್ಟ ಬಣ್ಣದ ಮಣ್ಣಿನಿಂದ. ಮೇಲೆ ಕಾಣಿಸಿದ ಗಾದೆಯ ಅರ್ಧಭಾಗವನ್ನು ಬಡವನ ಸಲುವಾಗಿಯೂ, ಉಳಿದರ್ಧ ಭಾಗವನ್ನು ದರಿದ್ರನ ಸಲುವಾಗಿಯೂ ಹೇಳಿದಂತಿದೆ. ಬಡವನು ಕೇಳುತ್ತಾನೆ ‘ಕಣ್ಣಿಗೆ ದೂರವಾದದ್ದೆಲ್ಲ ಕಾಲಿಗೂ ದೂರೇ?’ ತದ್ವಿರುದ್ಧವಾಗಿ ದರಿದ್ರನು ಹೇಳುತ್ತಾನೆ ‘ಕಾಲಿಗೆ ದೂರವಾದದ್ದೆಲ್ಲ ಕಣ್ಣಿಗೂ ದೂರ’ ಬಡವ ಕಣ್ಣು ತೆರೆದ ಕುರಿಯಾದರೇ ದರಿದ್ರ ಕಣ್ಣು ಮುಚ್ಚಿದ ಕುರಿ. ‘ಕಾಲು ಹಣದ ಬೆಕ್ಕು ಮುಕ್ಕಾಲು ಹಣದ ಬೆಣ್ಣೆ ತಿನ್ನಬಲ್ಲದು.’ ಅದಕ್ಕೆ ಶ್ರೀಮಂತಿಕೆ ಕಾರಣವೇ? ಬೆಕ್ಕು ನೋಡುವುದಕ್ಕೆ ಬಡವಾಗಿ ಕಂಡರೂ ಮಾಡುವ ಜಾಣ್ಮೆಯಲ್ಲಿ ಮಿಗಿಲಾಗಿದೆ. ಆದ್ದರಿಂದ ಬೆಕ್ಕು ತಿಂದು ಸುಖಪಡುವದು.

‘ಸುಖಪಟ್ಟಳು ಸೂಳಿ ಹಾಳು ಮನೆಯಲ್ಲಿ’. ಬೆಕ್ಕು ಬೆಣ್ಣಿ ಕದಿಯುವುದಕ್ಕೆ ಮೂರಂತಸ್ತಿನ ಮನೆ ಹುಡುಕುವದಿಲ್ಲ. ಹಾಲಿನ ಕಂಪು ಸೂಸುವ ಮುರುಕು ಚಪ್ಪರವನ್ನು ಗಮನಿಸುತ್ತದೆ. ದರಿದ್ರನು ಗುಡ್ಡದ ಸುದ್ದಿ ಹೇಳುವಾಗ ಮೀನು, ಸಮುದ್ರದ ಸುದ್ದಿ ಹೇಳುವಾಗ ಇಲಿ ಆಗುತ್ತಾನೆ. ‘ಚಂದಗೇಡಿಯ ಕೊರಳಲ್ಲಿ ಚವುಕ ಕಟ್ಟಿದರೆ, ಮಂದಿ ನೋಡಲೆಂದು ಅದು ಕುಂಬಿಯ ಮೇಲೆ ಕುಳಿತಂತೆ!’ ಅದೇ ದರಿದ್ರ ಗುಣ.

ಮಾತಿನ ಮೊನಚು ಬಡವನಿಗೆ ಅರ್ಥವಾದಂತೆ ಸಹಜವಾಗಿ ದರಿದ್ರನಿಗೆ ಅರ್ಥವಾಗುವದಿಲ್ಲ. ಅವನಿಗೆ ಕೊಂಕು ನುಡಿ ಕೊರೆಯುವದಿಲ್ಲ; ಬಿರುನುಡಿ ಕೊರೆಯುವದಿಲ್ಲ. ಅಲ್ಲದೆ ‘ಹತ್ತು ಅಂದದ್ದು ತನ್ನ ಎತ್ತಿಗೆ, ನೂರು ಅಂದದ್ದು ತನ್ನ ಹೋರಿಗೆ’ ಎಂದು ತೆಪ್ಪಗೆ ಸಾಗಿ ಬಿಡುತ್ತಾನೆ ‘ತನ್ನ ಮೂಗು ಹೋದರೆ ಹೋಗಲಿ, ಕಂಡವರಿಗೆ ಅಪಶಕುನವಾದರೆ ಸಾಕು’ ಎಂದುಕೊಳ್ಳುತ್ತಾನೆ. ಬಡವನು ಕಂಡ ಓಲೆಕಿವಿಯವಳನ್ನು ದರಿದ್ರನು ಕಂಡರೆ ಒಂಟಿ ಕಿವಿಯವಳೆಂದು ಭಾವಿಸುತ್ತಾನೆ.

ದಾರಿದ್ರ್ಯದ ವಿಶಿಷ್ಟ ಲಕ್ಷಣಗಳನ್ನು ಹೇಳುವ ಗಾದೆಗಳು ವಿಪುಲವಾಗಿದೆ, ಅವುಗಳಲ್ಲಿ ಕೆಲವನ್ನು ಮಾದರಿಗಾಗಿ ಇಲ್ಲಿ ಕಾಣಿಸಲಾಗಿದೆ-

ಸಿರಿಗೇಡಿಗೆ ಸೀರೆ ಉಡಿಸಿದರೆ
ಕೆರಿ ದಂಡಿಮ್ಯಾಗ ನಿಂತು ಕೇಕೆ ಹಾಕಿದಳು

ಭಿಕಾರಿಯಾದವ ಕಾಶಿಗೆ ಹೋದರೂ
ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?’
ಬೆಕ್ಕು ಕೊಂದಿದ್ದು ಹೇಳಲಿಲ್ಲ, ಕಾಶಿಗೆ ಹೋದದ್ದೇ ಹೇಳಿದರು
ಪದವಿ ಬಂತೋ ಪಟೇಲಾ ಅಂದರೆ
ಚಪ್ಪಲಿ ತಗೊಂಡು ಛತ್ರಿ ಹಿಡಿದನಂತೆ
ನೂಲೂ ಹೆಂಡತೀನ ಬಿಟ್ಟು ಹೇಲೂ ಸೂಳೀನ ತಂದ
ನೂಲು ಹಿಡಿದು ಜೋಲುವವನ ಕಾಲು ಹಿಡಿದು ನೇತಾಡಿದರು
ನೀರ್ಗಣ್ಣಿ ಊರೆಲ್ಲ ಹಾಳುಮಾಡಿದಳು
ತಬ್ಬಲಿ ತಲೆ ಬೋಳಿಸಿಕೊಂಡರೆ, ಆನೆಕಲ್ಲು ಮಳೆ ಬಂತು
ತನ್ನ ಜೋಳ ಮಂದೀಗೆ ಕೊಟ್ಟು,
ಗೌಡರ ಜೋಳ ಹಾಡಿ ಹಾಡಿ ಬೀಸಿದಳು
ಕೆಲಸ ಇಲ್ಲದವಳು ಮನಸಿಲ್ಲದವನ ಮೋತಿ ನೋಡುತ್ತಿದ್ದಳು
ಕಾಲು ನಿಲ್ಲದೆ ಒಬ್ಬರ ಮನೆಗೆ ಹೋದರೆ,
ಬಾಯಿ ನಿಲ್ಲದೆ ಒಂದು ಮಾತು ಬರುತ್ತದೆ.
ಕತ್ತೆಯ
ಮೇಲೆ ಒಂದು ಮಾತು ಬರುತ್ತದೆ
ಕತ್ತೆಯ ಮೇಲೆ ಅತ್ತೆ ಏರಿದರೆ,
ಕೊಡೆ ಹಿಡಿಯೋಕೆ ಮಾವನೇ ಬರಬೇಕು
ಈಗಿನ ಬುದ್ಧಿ ಆಗ ಇದ್ದರೆ, ತಂದವಳನ್ಯಾಕ ತವರೀಗಿ ಕಳಿಸತಿದ್ದ
ಇದ್ದಾಕಿ ನೋಡಿ ನೋಡಿ ಇಟ್ಟಳು,
ಇರದಾಕಿ ಉಟ್ಟು ಉಟ್ಟು ಇಟ್ಟಳು

ಇಂಥ ಗಾದೆಗಳನ್ನು ಹೇಳುವುದಕ್ಕೆ ಕುಳಿತರೆ ‘ದುಡ್ಡು ಕೊಟ್ಟು ಹಚ್ಚಿ, ಎರಡು ದುಡ್ಡು ಕೊಟ್ಟು ಬಿಡಿಸಬೇಕಾಗುತ್ತದೆ’. ಗಾದೆಗಳಿಗೆ ದಾರಿದ್ರ್ಯವಿಲ್ಲವೆಂದರೂ ಹೇಳುವವರಿಗೆ ದಾರಿದ್ರ್ಯ ಸಾಕಷ್ಟು ಇರುತ್ತದೆ. ಕೇಳುವ ಕುಲ ರಸಿಕರು ಏನು ಹೇಳಿದರೂ, ಎಷ್ಟು ಹೊತ್ತು ಹೇಳಿದರೂ ಸಾಕಾಗುವುದೇ ಇಲ್ಲ. ‘ನೆತ್ತಿಯ ಮೇಲೆ ಬಾಯಿ ಇದ್ದರೆ ಇನ್ನೆರಡು ತುತ್ತು ಹೆಚ್ಚಿಗೆ ಉಣ್ಣುತ್ತಿದ್ದೆ’ ಎನ್ನುವ ವರ್ಗಕ್ಕೆ ಸೇರಿದವರಿಗೆ ಕೇಳುವುದೇ ಒಂದು ಚಟ. ಊದುಗೊಳವೆಯಲ್ಲಿ ಸುರುವಿದ ನೀರು ಉಳಿದುಕೊಳ್ಳುವುದೇ ಇಲ್ಲ. ‘ಎಲ್ಲ ಬಲ್ಲಪ್ಪ, ಕೇಳಿದರೆ ಕಲ್ಲಪ್ಪ’ ಅಹುದಲ್ಲವೇ?

ದಟ್ಟದರಿದ್ರನು ಸೊಟ್ಟ ಹಳ್ಳಿ ಬಿಟ್ಟು, ಲಠ್ಠ ಪಟ್ಟಣಕ್ಕೆ ಹೋದನೆಂದು ತಿಳಿಯೋಣ. ಅಲ್ಲಿ ಅವನು ಮಾಡುವ ಉದ್ಯೋಗ ಅದೇ. ಒನಕೆ ಸ್ವರ್ಗಕ್ಕೆ ಹೋದರೇನಾಯಿತು ಅದನ್ನು ಕುಟ್ಟುವ ಕೆಲಸಕ್ಕೇ ಬಳಸುವರು. ಕುಟ್ಟುವಾಕೆ ಹಳ್ಳಿಬಿಟ್ಟು ಪಟ್ಟಣಕ್ಕೆ ಹೋದರೂ ಕುಟ್ಟುವ ಕೆಲಸವನ್ನೇ ಹುಡುಕುವಳು.

ಬೇಸರಿಕೆಯ ಪತಿವ್ರತೆ ನಿರ್ವಹಿಸುವ ಉದ್ಯೋಗವೇ ಬೇರೆ, ಅದನ್ನು ಗರತಿಯ ಭಾಷೆಯಲ್ಲಿಯೇ ಕೇಳಬೇಕು-

ತಿಂದೋಡಿ ನಿನಗಂಡಾ ತಿಂದೇನು ಮಾಡಂದಾ
ತಿಂದೇಳು ಮನೆಯ ತಿರುಗೆಂದ | ಉಟ್ಟ ಶಾಲಿ
ಉಂಗುಟಕ ಹಾಕಿ ಹರಿಯಂದ ||

ಇನ್ನು ಬೇಸರಿಕೆಯ ಪತಿವ್ರತೆಯರನ್ನು ಮೀರಿಸುವ ನಿಚ್ಚ ಗರತಿಯರೂ ಅಚ್ಚ ಪತಿವ್ರತೆಯರೂ ಇರುತ್ತಾರೆ. ಅವರ ಗುಣಧರ್ಮಗಳನ್ನು ಗಾದೆ ಒಂದೇ ಒಂದು ಚಿಕ್ಕ ವಾಕ್ಯದಲ್ಲಿ ಹೇಳಬಲ್ಲದು ‘ಪರಪುರುಷನಿಲ್ಲದಾಗ ಕೈಹಿಡಿದ ಪತಿಯೇ ಗತಿ’. ಕಟ್ಟುನಿಟ್ಟಿಗೆ ಹನುಮಂತ ದೇವರು ಅಂದಹಾಗೆ. ಪುಕ್ಕಟೆ ಗಂಡನಿಗೆ ಇರುಳೂ ಹಗಲೂ ದೀಪವೇಕಾಗುತ್ತದಂತೆ’.

ದಟ್ಟದರಿದ್ರರು ಆಡಾಡುತ್ತ ಪೇಚಾಟದಲ್ಲಿ ಸಿಕ್ಕುಬೀಳುವರು. ‘ಪೇಚಾಟಕ್ಕೆ ಸಿಕ್ಕಿದವನಿಗೆ ನೀಚಾಟವೇ ಪರಮೋಪಾಯ.’ ಈಸಬಾರದವನಿಗೆ ಸಂಗಡಿಯೇ ಗತಿಯಾದಂತೆ, ಪೇಚಾಟದವನಿಗೆ ನೀಚಾಟವೇ ಈಸುಗುಂಬಳ. ಬುದ್ಧಿ ಬಲಿಯದ ಬಾಲಕನಂತೆ, ಬಾಲಕರಿಗಿರುವಷ್ಟೇ ಬುದ್ಧಿಯುಳ್ಳವರಿಗಾಗಿಯೇ ಪೇಚಾಟವು ದಾರಿ ಕಾಯುತ್ತಲೇ ಕುಳಿತಿರುತ್ತದೆ. ಬುದ್ಧಿವಂತಿಕೆಯ ಮರಿಯೆನಿಸಿದ ಬಾಲಕನದೇ ಈ ಗತಿಯುಂಟಾದರೆ ಬಾಲಿಕೆ, ಕರು-ಮರಿಗಳ ಪಾಡೇನು?

ಪೋರಿ ನೆಚ್ಚಿ ಬೇರೆ ಆಗಬಾರದು,
ಹೋರಿ ನೆಚ್ಚಿ ಹೊಲ ಮಾಡಬಾರದು

ಕೊಡುವ ದೇವರು ಕೈತುಂಬ ಮನತುಂಬ ಕೊಟ್ಟರೂ ಅದನ್ನು ಹಂಚಿಕೊಳ್ಳುವವರಲ್ಲಿ ಹಂಚಿಕೆಯಿಲ್ಲದಿದ್ದರೆ ಅವರು ಅಷ್ಟದರಿದ್ರರು. ಅಷ್ಟೂ ದರಿದ್ರರು ಅಂದರೆ ಇದ್ದಷ್ಟೆಲ್ಲಾ ದಾರಿದ್ರ್ಯವೇ.

‘ಬಾವಿ ನೀರಿಗೆ ಬಡಿದಾಟ, ಹೊಳೆ ನೀರಿಗೆ ಹೊಡೆದಾಟ’ ಎಂಬ ಗಾದೆ ನಿತ್ಯಾನುಭವದ ಸಂಗತಿ. ಅಂಥದರಲ್ಲಿ ಹೆಂಗಳೆಯರ ಸಾಂಗತ್ಯವು ಇನ್ನೂ ದರಿದ್ರತಮವಾಗಿರುತ್ತದೆ. ಇಬ್ಬರು ಕೂಡಿದರೆ ಸಂತೆ, ಮೂವರು ಸೇರಿದರೆ ಜಾತ್ರೆ. ‘ಸಂತೆಯೊಳೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ’. ಆಡುವವರು ನಾಟುವುದು ಕಡಿಮೆ, ನೋಡುವವರು ನಾಚುವುದೇ ಹೆಚ್ಚು. ಅದೇ ದೊಡ್ಡಸ್ತನ.

ಅಷ್ಟದರಿದ್ರನಿಗೆ ಕರೆದರೂ ಅಷ್ಟೇ. ಮರೆದರೂ ಅಷ್ಟೇ. ಕರೆಯದೆ ಹೋಗಿ ಕೆರವಿನಿಂದ ಬಡಿಸಿಕೊಳ್ಳುವುದು ಅವನ ಹಕ್ಕುಬಾಧ್ಯತೆಯೇ ಆಗಿದೆ. ಊಟ ಹೊರಗೆ ಮಾಡಿ ತಂಬೂರಿ ಮನೆಗೆ ತರುವ ದಾಸನಿಗೂ ಈ ಅಷ್ಟ ದಾರಿದ್ರ್ಯ ತಪ್ಪದೆಂದಾಗ ದಾಸಾನುದಾಸರಾದ ಕಿಸುಬಾಯಿ ದಾಸರಿಗೆ ಅದೆಂಥ ಮರ್ಯಾದೆ ಸಿಕ್ಕೀತು? ಕಷ್ಟಕ್ಕೆ ಕರೆಯಬೇಡ, ಊಟಕ್ಕೆ ಮರೆಯಬೇಡ ಎನ್ನುವುದೇ ಅವರು ಮೈಗೂಡಿಸಿಕೊಂಡ ಮಂತ್ರವಾಗಿದೆ. ಕಾಗೆ ತನ್ನ ಬಳಗವನ್ನೆಲ್ಲ ಕರೆಯುವದಕ್ಕೆ ಒಂದು ಅಗುಳನ್ನಾದರೂ ಕಂಡಿರುತ್ತದೆ. ಆದರೆ ಎಬಡರೆನಿಸಿಕೊಂಡ ಅಷ್ಟದರಿದ್ರರು ಸೂಕ್ಷ್ಮವಾಗಿ ವಾಸನೆ ಹಿಡಿದು ಅನ್ನ ಸಂತರ್ಪಣೆಯ ಸ್ಥಳವನ್ನು ಸಂಶೋಧಿಸುವರು, ಒಳ ಹೊಕ್ಕು ಸ್ಥಳನೋಡಿ ಮಂಡೆಹಾಕಿ ಕುಳಿತುಕೊಳ್ಳುವರು ಊಟಕ್ಕೆ; ಮತ್ತೇತಕ್ಕೂ ಅಲ್ಲ. ಆದರೆ ಉಣಬಡಿಸುವವರೆಲ್ಲಿ? ‘ಮಂಡೆಹಾಕಿ ಕುಳಿತರೆ ಮಂಡಿಗೆ ಬಡಿಸುವರೇ?’

ಮೀಸೆ ಬೆಳೆದಂತೆ ಮೆದುಳು ಬೆಳೆದು ಬರಲಾರದು. ವಯಸ್ಸಿನೊಡನೆ ಬುದ್ಧಿವಂತಿಕೆ ಬೆಂಬಳಿಸುವದಿಲ್ಲ. ಅಡಿಗೆ ಗಡ್ಡ ಬಂದರೆ ಆಚಾರಿ ಆಗದು. ಕುಂಡಿ ದೊಡ್ಡದಾದರೆ ಗೌಡನೆನಿಸನು. ದಾರಿದ್ರ್ಯದ ನೆಗಡಿ ಕಿತ್ತುವುದೇ ಇಲ್ಲ. ಮೂಗು ಇರುವವರೆಗೆ ಮೂಲವಾಗಿ ಉಳಿದುಕೊಳ್ಳತಕ್ಕದ್ದೇ. ಬಡವ ಎಬಡನಾದರೆ ಇಲ್ಲವೆ ಎಬಡ ಬಡವನಾದರೆ ಸಾಕು, ದಾರಿದ್ರ್ಯವು ಹಣಿಕಿ ಹಾಕುತ್ತದೆ. ಅದರೊಂದಿಗೆ ಹೆಮ್ಮೆಯೂ ಹೆಡೆಯೆತ್ತುತ್ತದೆ. ‘ಯಾರ ಹಂಗೂ ನನಗೆ ಬೇಡ, ಹತ್ತು ಮನೆಯ ಭಿಕ್ಷೆ ಬೇಡಿದರಾಯಿತು’ ಎಂಬ ಗುಂಗು ಅವನನ್ನು ದಂಗುಗೊಳಿಸುತ್ತದೆ. ‘ಹತ್ತು ಆಡಬಹುದು, ಒಂದು ಬರೆಯಬಾರದು.’ ಒರೆದು ತೋರಿಸುವುದು ಸುಲಭ. ಆದರೆ ಬರೆದು ತೋರಿಸುವುದು ಬಿಗಿ.

ಹಾದಿಬಿಟ್ಟವನಿಗೆ ಹದಿನೆಂಟು ದಾರಿ ಕಾಣಿಸುತ್ತವೆ. ವೈಕುಂಠಕ್ಕೆ ದಾರಿ ಯಾವುದಯ್ಯಾ ಎಂದು ಕೇಳುವ ಕಾರಣವೇ ಇಲ್ಲ, ಮನಸ್ಸೇ ಆ ದಾರಿ ತೋರಿಸುತ್ತದೆ. ಪ್ರಸಂಗ ಬಂದರೆ ಮನಸ್ಸೇ ಆ ದಾರಿ ಆಗುತ್ತದೆ. ‘ಸಿಕ್ಕಿದರೆ ಉಚ್ಚಿ ಕುಡಿದೇನು, ಸೊಕ್ಕಿದರೆ ರಕ್ತ ಕುಡಿದೇನು’ ಎನ್ನುವ ದುರ್ಭಾವಕ್ಕೆ ಎಡೆಯಾಗುವುದೇ ದರಿದ್ರನ ಬಾಳಗುಟ್ಟು.

ಹಾವು ಮೆಟ್ಟಿಕೊಂಡು ಹಾದರ ಮಾಡುವವಳು
ಸೇದೋ ಹಗ್ಗ ನೋಡಿ ಬೆದರುವಳೇ?’

ಹುಟ್ಟುದರಿದ್ರನಿಗೆ ದಾರಿದ್ರ್ಯವೇ ವೈಕುಂಠ. ವೈಕುಂಠವನ್ನು ಹುಡುಕುತ್ತ ಹೋಗಬೇಕಿಲ್ಲ. ವೈಕುಂಠವೇ ಅವನನ್ನು ಅರಸುತ್ತ ಬರುತ್ತದೆ. ದರಿದ್ರನ ಕಣ್ಣು ಅಂದರೆ ನಾಯಿ ಮೂಗು ಇದ್ದಂತೆ. ಹೊಲಸು ಮೂಸುವ ನಾಯಿ ಮೂಗಿಗೆ ನೆಗಡಿ ಆಗುವುದುಂಟೇ? ‘ನಾಯಿಗೆ ನೆಗಡಿ ಆಗದು, ದರಿದ್ರನಿಗೆ ಕಣ್ಣು ಬೇನೆ ಆಗದು’. ಅವನ ಕಣ್ಣು ಕಂಡಿದ್ದೇ ವೈಕುಂಠ.

ಬ್ರಹ್ಮನು ಬರೆದ ಹಣೆ ಬರಹವನ್ನು ಅಳಿಸಿಹಾಕಿ ಈಪ್ಸಿತವಾದ ಲಿಖಿತವನ್ನು ಬರೆಯಿಸಿಕೊಳ್ಳುವ ಸಮರ್ಥರು ಇಲ್ಲದೆ ಇಲ್ಲ, ಅಂಥವರು ಜೀವಿತದಲ್ಲಿಯೇ ಪುನರ್ಜನ್ಮ ಪಡೆಯುತ್ತಾರೆ. ಆದರೆ ದರಿದ್ರರು ದರಿದ್ರರಾಗಿಯೇ ಬಾಳಿ, ದಾರಿದ್ರ್ಯದಲ್ಲಿಯೇ ಸತ್ತು ದರಿದ್ರರಾಗಿಯೇ ಹುಟ್ಟುವರೇನೋ. ಬದಲಾವಣೆಗೆ ಎಲ್ಲಿಯೂ ಇಂಬಿಲ್ಲ. ‘ಹೋತಿನ ಗಡ್ಡ ನೂತನವೆಂದು ಕತ್ತರಿಸಿದರೆ ಅದು ಕೋತಿ ಆದೀತೇ?’ ಕೋತಿ ಆಗುವುದಕ್ಕಿಂತ ಹೋತಾಗಿ ಉಳಿಯುವುದೇ ಒಳ್ಳೆಯದೆಂದು ದರಿದ್ರನು ದಟ್ಟವಾಗಿ ತಿಳಕೊಂಡಿದ್ದಾನೆ.

‘ಹಾಲು ಎಟಕದಿರುವಾಗ ಬೆಕ್ಕು ಪ್ರಾಮಾಣಿಕ’ ನಲ್ಲ ಒಲ್ಲೀ ಒಲ್ಲ, ನೆಲ್ಲಕ್ಕಿ ಬೋನೊಲ್ಲ ಏತಕೊಲ್ಲ? ಇಲ್ಲದಕೆ ಒಲ್ಲ, ಅಹುದಲ್ಲವೇ?

‘ಕಡ ಹುಟ್ಟಿಬಡವ ಕೆಟ್ಟ’ ಎಂಬ ಗಾದೆಯಿದೆ. ಬಡವನಾಗಿದ್ದರೂ ಅವನಿಗೆ ಒಂದಾನೊಂದು ಪ್ರಸಂಗದಲ್ಲಿ ಕಡ ಹುಟ್ಟುತ್ತದೆ. ಆದರೆ ಅದನ್ನು ಮರಳಿಸುವುದು ಯಾವಾಗ? ಅಸಾಧ್ಯವಲ್ಲವಾದರೂ ದುಸ್ಸಾಧ್ಯವಿದ್ದುದು ನಿಜ. ಕೈಗಡದ ಗಸಣೆಗೆ ಬಡವ ಸಿಕ್ಕುಬಿದ್ದರೆ ಕೆಡುವುದೇ ನಿಶ್ಚಯವೆಂದಾಗ ದರಿದ್ರನ ಪಾಡೇನು, ಗತಿಯೇನು?

ದರಿದ್ರನಿಗೆ ಪಾಡೂ ಇಲ್ಲ, ಗತಿಯೂ ಇಲ್ಲ; ಕೈಗಡವೂ ಇಲ್ಲ, ಬಾಯ್ ಗಡವೂ ಇಲ್ಲ. ಬಡವನಿಗೆ ಮೈಯೆಲ್ಲಾ ಬಾಯಿಯಿದ್ದರೂ ಬೇಡಿದರೆ ಕೊಡುವವರಾರು?

‘ಬಡವನ ಸುಂಕ ಮನೆತುಂಬ, ಅರಸನ ಸಂಕಟ ನಾಡತುಂಬ’ ಆದರೆ ನಿತ್ಯ ದರಿದ್ರನಿಗೆ ನಿಶ್ಚಿಂತೆ.

‘ಅನುಗಾಲವೂ ಚಿಂತೆಯು’ ಎಂದು ದಾಸರು ಹಾಡಿದ್ದಾರೆ, ಹಾಡಿ ಕುಣಿದಿದ್ದಾರೆ; ಕುಣಿ ಕುಣಿದು ಹಾಡಿದ್ದಾರೆ. ‘ಮನವು ಮಾಧವನೊಳು ಮರೆಯಾಗುವತನಕ ಅನುಗಾಲವೂ ಚಿಂತೆ’ ಎಂದು ನಿಶ್ಚಿತಗೊಳಿಸಿದ್ದಾರೆ. ಆದರೆ?

‘ನಮ್ಮ ನಿತ್ಯ ದರಿದ್ರನಿಗೆ ನಿಶ್ಚಿಂತೆ’ ಎಂದು ಗಾದೆ ಹೇಳುತ್ತದೆ.

ಈಗ ಸಂಸಾರಿಗರೆಲ್ಲ ದಾಸರ ದಾರಿ ತುಳಿಯಬೇಕೋ, ನಿತ್ಯ ದರಿದ್ರರ ದಾರಿ ಹಿಡಿಯಬೇಕೋ? ಇವೆರಡೂ ದಾರಿಗಳನ್ನು ಬಿಟ್ಟರೆ ಮೂರನೇ ದಾರಿ ಇರುವುದನ್ನು ಯಾರಾದರೂ ಕಂಡಿರುವರೇ?

ಸಂಸಾರವೆಂದರೆ ಚಿಂತೆಯ ಸಂತೆಯೆಂದು ಭಾವಿಸಿದವರು, ದಾಸರ ದಾರಿ ಹಿಡಿಯಬಾರದೆಂದು ನಿಯತಿಯು ಅವರಿಗೆಲ್ಲಾ ದಾರಿದ್ರ್ಯದ ಪ್ರಧಾನಮಾಡಿ ನಿಶ್ಚಿಂತನಾಗಿರುವುದಕ್ಕೆ ನೆರವಾಗುತ್ತಿರಬಹುದೇ?

ಅಹುದು, ನಿಯತಿಯ ಸಹಾಯ ನಮಗೆ ದೊರೆತದ್ದು ನಿಜ. ಅಂತೆಯೇ ನಾವು ದಟ್ಟದಾರಿದ್ರ್ಯದ ದಾರಿಹಿಡಿದು, ನಿಶ್ಚಿಂತ ಪುರುಷರಾಗುವ ಹವ್ಯಾಸಕ್ಕೆ ಬಿದ್ದಿರುವಂತೆ ತೋರುತ್ತದೆ. ದಾಸರ ದಾರಿಯಲ್ಲಿಯೇ ಆಗಲಿ, ದರಿದ್ರರ ದಾರಿಯಲ್ಲಿಯೇ ಆಗಲಿ ನಾವೆಲ್ಲರೂ ನಿಶ್ಚಿಂತರಾದರೆ ಸಾಕಲ್ಲವೇ?