ಕಾವ್ಯಲಕ್ಷಣ

ರಸವತ್ತಾದ ವಾಕ್ಯವೇ ಕಾವ್ಯವೆಂದು ಹಿರಿಯರು ಹೇಳಿದ್ದಾರೆ. ಕಾವ್ಯವು ಕಾಂತೆಯರ ಮಾತಿ ನಂತಿರುವದೆಂದೂ ಬಲ್ಲವರು ಅಭಿಪ್ರಾಯಪಡುತ್ತಾರೆ. ಅದೇ ವಿಚಾರವನ್ನು ಎತ್ತಿಕೊಂಡು ಶ್ರೀ ಬೇಂದ್ರೆಯವರು ಹೇಳಿರುವದೇನಂದರೆ-“ಕಾಂತೆಯರ ಮಾತಿನಂತಿರುವುದೇ ಕಾವ್ಯವಾದರೆ ಕಾಂತೆಯರ ಮಾತೆ ಕಾವ್ಯ ಮಾತೆಯಲ್ಲವೇ? ನಾವು ಕಾವ್ಯ ಕಾವ್ಯ ಎಂದು ಕರೆಯುವುದು ಅದೊಂದು ಸಂತಾನ. ಕಾಂತೆಯರ ಮಾತೆ ಕಾವ್ಯ ಮಾತೆ! ವೇದಕ್ಕೆ ಮಣಿಯದವರು ಶಾಸ್ತ್ರಕ್ಕೆ ಬಗ್ಗದವರು ಕಾಂತೆಯರ ಮಾತೆ ಕಾವ್ಯ ಮಾತೆ! ವೇದಕ್ಕೆ ಮಣಿಯದವರು ಶಾಸ್ತ್ರಕ್ಕೆ ಬಗ್ಗದವರು ಕಾಂತೆಯರ ಮಾತಿಗೆ ಮೆತ್ತಗೆ ಹಣ್ಣಾಗುವದನ್ನು ಕಂಡೇ ವೇದಶಾಸ್ತ್ರದ ತಿರುಳು ಕಾವ್ಯ ಮೋಹಿನಿಯ ಅವತಾರವನ್ನು ತಳೆದಿತು” ಕಾಂತೆಯೆಂದರೆ ಹೆಂಡತಿ ಅಷ್ಟೇ ಅಲ್ಲ; ಅವ್ವ; ಅಕ್ಕ, ಅಬಚಿ, ಅತ್ತೆ, ತಂಗಿ, ನಾದಿನಿ, ಮಗಳು ಮೊದಲಾದವರೆಲ್ಲರೂ ಕಾಂತೆಯರೇ ಸರಿ. ಅವರ ಮಾತುಗಳೆಲ್ಲ ಕಾವ್ಯವೇ ಅಹುದು. ಶಬ್ದ ಮಾತ್ರವೆಲ್ಲ ಕಾವ್ಯವೆಂದೂ, ಜೀವಮಾತ್ರವೆಲ್ಲ ಕವಿಯೆಂದೂ ಹೇಳುವುದು ಯಥಾರ್ಥವಾಗಿದೆ. ಕಾಂತೆಯು ತನ್ನ ಜೀವನದ ಸರ್ವ ಪ್ರಸಂಗಗಳಲ್ಲಿ ಅಂದರೆ, ನಲ್ಲನೊಡನೆ ಸರಸ, ಮಕ್ಕಳೊಡನೆ ಲೀಲೆ, ಅಕ್ಕ ತಂಗಿಯರೊಡನೆ ಅಕ್ಕರತೆ, ಅಣ್ಣ ತಮ್ಮಂದಿರೊಡನೆ ಸ್ನೇಹ, ಅತ್ತೆಯೊಡನೆ ಕದನ, ಸೊಸಿಯೊಡನೆ ಸಿಪಿಡಿ, ಭಾವ ಮೈದುನರೊಡನೆ ಕೊಂಕುತನ ಮೊದಲಾದ ಪ್ರಸಂಗಗಳಲ್ಲಿ ಮೂಡುವ ಸಿಟ್ಟು, ಪ್ರೀತಿ, ಸಲಿಗೆ, ಸ್ನೇಹ, ಕಳವಳ, ಮೊದಲಾದ ಭಾವಗಗಳನ್ನು ಮಾತಿನಿಂದಲೂ ಹಾಡಿನಿಂದಲೂ ಪ್ರದರ್ಶಿಸುವಳು, ಆ ಮಾತು ಆ ಹಾಡು ಕಾವ್ಯವೆನಿಸುವದು. ಬೀಸುವುದು, ಕುಟ್ಟುವುದು, ಬೀಜವೂರು ವುದು, ಹತ್ತಿ ಬಿಡುಸುವುದ ಮೊದಲಾದ ದುಡಿಮೆಗಳಲ್ಲಿ, ಲಾಲಿ, ಜೋಗುಳ, ಮದುವೆ, ಶೋಭನ, ದೇವಪೂಜೆ ಮೊದಲಾದ ಸಮಯಗಳಲ್ಲಿ ಅವಳು ಹಾಡುವಳು. ಉಸುರು ಉಸುರಿಗೂ ಹಾಡೂ ಸೂಸುವದು. ಅವಳ ಉಸಿರಿನ ‘ಸೋಹಂ’ದ ಶ್ರುತಿಯೊಡನೆ ತನ್ನ ಸುಖ ದುಃಖಗಳು ಶಬ್ದ ಚಿತ್ರವನ್ನು ರಾಗದ ರೇಖಾವಳಿಯಲ್ಲಿ ತುಂಬಿ ಬಣ್ಣಿಸುವಳು. ಅಂತೆಯೇ ಆಕೆ ಕಾವ್ಯಮಾತೆ. ಆಕೆಯ ಮಾತೆಲ್ಲವೂ ಕಾವ್ಯ. ಅವಳ ಜೀವನವೆಲ್ಲವೂ ಕಾವ್ಯವಸ್ತುವೇ ಆಗಿರುವದು. ಕವಿಸಂತಾನವು ಕಾವ್ಯವಸ್ತುವನ್ನು ಅರಿಸಿಕೊಂಡು ಕಾವ್ಯನಿರ್ಮಾಣಕ್ಕೆ ತೊಡಗುವದು. ಆದರೆ ಅದು ಕಾವ್ಯವಸ್ತುವನ್ನು ಬಗೆದು ಭಾವನೆಗಳಿಂದ ಬಣ್ಣಿಸಿದುದು. ಆದರೆ ಕಾವ್ಯವಸ್ತುವವೇ ಕಾವ್ಯವಾಣಿಯನ್ನು ಮಿಡಿಸನಿಂತಗ ಬರುವ ಕಾವ್ಯವು ಅದೆಷ್ಟು ಸಾರ್ಥಕವೂ ಪ್ರಯೋಜಕವೂ ಆಗುವದೆಂಬುದನ್ನು ಬೇರೆ ಹೇಳುವ ಕಾರಣವಿಲ್ಲ.

ಕಟ್ಟಿದ ಉಂಡಿ

ಕಾವ್ಯಮಾತೆಯಾದ ಕಾಂತೆಯು ತನ್ನ ಜೀವನಾನುಭವದಿಂದಲೂ ಅದನ್ನು ಬಳಸುವ ಪ್ರಸಂಗದಿಂದಲೂ ಒಂದೊಂದು ಮಾತನ್ನು ಮಾತನ್ನು ಅರೆದು, ಕೊರೆದು, ತೂಕಮಾಡಿ ಸಿದ್ಧೌಷಧಿಯಂತೆ ನಿರ್ಮಿಸಿದ್ದಾಳೆ. ಆ ಮಾತು ಶರಣದ ವಚನದಲ್ಲಿ ಮಿಂಚಿನ ಶಲಾಖೆಯೆನಿಸುವದು; ಮಾಣಿಕ್ಯದ ಮಾತು ಎನಿಸುವದು. ಸಾಣೆ ಹಿಡಿದ ಮುತ್ತು ಎನಿಸುವದು. ಅದನ್ನು ಹಸಿವೆಯಾದಾಗಲೆಲ್ಲ ತಿನ್ನುವುದಕ್ಕೆ ಬಳಸಬಹುದು. ಆದ್ದರಿಂದ ಅದು ಕಟ್ಟಿದ ಉಂಡೆಯಂತೆ. ಅಂಥ ಮಾತುಗಳನ್ನು ಗರತಿಯರು ವಿಪುಲವಾಗಿ ನಿರ್ಮಿಸಿದದಾರೆ. ಅವುಗಳಲ್ಲಿ ಕೆಲವು ಮಾತ್ರ ಉದಾಹರಿಸುವೆನು. ಅನ್ನದ ಪರೀಕ್ಷೆ ಅಗುಳಿನಿಂದ ಆಗಿಯೇ ಬಿಡುವದು.

೧. ಬೇಸತ್ತು ಬೇರೆಯಾದರೆ ಪಾಲಿಗೆ ಅತ್ತೆ ಬಂದಳು.

೨. ಅಪ್ಪನಿಗೆ ಅಪ್ಪಾ ಅನಲಿಕ್ಕೆ ಒಪ್ಪೊತ್ತಿನ ಕೂಲಿ ಬೇಡಿದರು.

೩. ಹೂಟಗೇಡಿಯ ಮುಂದೆ ಹುಲ್ಲು ಹಾಕಿದರೆ ಗೂಟ ಕಿತ್ತಿಕೊಂಡು ಎದುರಿಗೆ ಬರುತ್ತಿತ್ತು.

೪. ಮನೆಗೆ ಬಂದರೆ ಮಜ್ಜಿಗೆ ಕೊಡಲಿಲ್ಲ; ಕರೆದು ಹಾಲು ಕೊಟ್ಟರು.

೫. ತನ್ನ ಸಂಗಡ ಬರಬೇಡ ಎನ್ನುವವನಿಗೆ ಯಾವ ಎತ್ತಿನ ಮೇಲೆ ಕೂತುಕೊಳ್ಳಲಿ ಎಂದು ಕೇಳಿದಂತೆ !

೬. ಸಿರಿಗೇಡಿಗೆ ಸೀರೆ ಉಡಿಸಿದರೆ ಹೊಲಗೇರಿಗೆ ಹೇಳಿಕ್ಕೆ ಹೋಯಿತು.

೭. ಎಂದೂ ಇಲ್ಲದ ಒಮ್ಮೆ ‘ಎಲಗ’ ಅಂದರೆ ತಿಂಗಳಿಗೊಮ್ಮೆ ನಗೆ ಬಂದಿತು.

೮. ಧರ್ಮಕ್ಕೆ ದಟ್ಟೀ ಉಡಿಸಿದರೆ ದಡ್ಡಿಯಲ್ಲಿ ಒಯ್ದು ಮೊಳ ಹಾಕಿದರು

೯. ಊರ ತುಂಬ ಗಂಡರಿದ್ದರೂ ಉಡಲಿಕ್ಕೆ ಸೀರೆಯಿಲ್ಲ.

ಇಂಥ ಮಾಣಿಕ್ಯದ ಮಾತುಗಳಿಂದಲೇ ಮಾಲೆ ಪವಣಿಸಿಟ್ಟ ಹಾಗೆ ಒಂದು ತ್ರಿಪದಿಯನ್ನು ಕಾಣಬಹುದು-

ತಿಂದೋಡಿ ನಿನ ಗಂಡ ತಿಂದೇನು ಮಾಡಂದ
ತಿಂದೇಳು ಮನೆಯ ತಿರುಗೆಂದ | ಉಟ್ಟ ಶಾಲಿ |
ಉಂಗುಟಕ ಹಾಕಿ ಹರಿಯಂದ ||

ಇವು ಹೆಂಗಸರ ಬಾಯಲ್ಲಿಯ ಒಂದು ಬಗೆಯ ಬೈಗಳೇ ಸರಿ. ಇವುಗಳಿಗೆ ‘ಚುಚ್ಚು ನುಡಿ’ಯೆನ್ನಬಹುದಾಗಿದೆ. ಹಾದಿ ಬಿಟ್ಟು ಹೆಜ್ಜೆಯಿಡ ಹೊರಟವರಿಗೆ; ಇವು ಒಂದೊಂದು ಬಾರಕೋಲಿ ನೇಟಿನಂತೆ, ಮನಸ್ಸಿಗೆ ನೋವು ಉಂಟುಮಾಡಿ, ಇಷ್ಟಾರ್ಥವನ್ನು ಸಾಧಿಸಕೊಡುವವು. ಇದೇ ಮೈಕಟ್ಟಿನಲ್ಲಿ ಇನ್ನೊಂದು ಜಾತಿಯ ಮಾತುಗಳಿರುವವು. ಅವುಗಳಿಗೆ ಒಡೆಗತೆಯನ್ನುವುದು ರೂಢಿ. ಒಡಪುಗಳೆಂದೂ ಕರೆಯುವರು.

೧. ಬಂಗಾರದ ಗುಬ್ಬಿ ಬಾಲಲ್ಲಿ ನೀರು ಕುಡಿಯುತ್ತದೆ.

೨. ಬಾಯಲ್ಲಿ ತಿಂದು ಬಗಲಲ್ಲಿ ಕಾರುತ್ತದೆ.

೩. ಸಾಲು ಗಿಡಗಳು ಸಪ್ಪಳಿಲ್ಲದೆ ಬಡಿಯುತ್ತವೆ.

೪. ಅವ್ವನೆಂದರೆ ಕೂಡುವದಿಲ್ಲ. ಅಪ್ಪನೆಂದರೆ ಕೂಡುತ್ತವೆ.

೫. ಗುಡಿಯ ಹಿಂದೆ ಗುಡುಗಲ್ಲು ಬಿದ್ದಿದೆ.

೬. ತಗ್ಗಿನಲ್ಲಿ ಬಸುರಾಗಿ, ತೆವರಲ್ಲಿ ಹಡೆಯುತ್ತದೆ.

೭. ಕರೆದರೆ ಬರುವದಿಲ್ಲ, ಕೈಹಿಡಿದರೆ ಬರುತ್ತದೆ.

೮. ಹಗ್ಗ ಹಾಸಿದೆ; ಗೂಳಿ ಮಲಗಿದೆ,

೯. ಅಡ್ಡಗೋಡೆಯ ಮೇಲೆ ಗಿಡ್ಡಪ್ಪ ಕುಳಿತು ಹೋಗಿಬರುವವರಿಗೆ ಪ್ರಸಾದ ಕೊಡುತ್ತಾನೆ.

೧೦. ಗಿಡ್ಡನ ಗಿಡಕ್ಕೆ ಮುಕುರಿವೆ.

ಇವುಗಳಿಗೆ ಬೇರೊಂದೊಂದು ಅರ್ಥ ಹೇಳಬೇಕಾಗುತ್ತದೆ. ಆ ಅರ್ಥ ತಿಳಿದಾಗ ಆಗುವ ಆನಂದವು ಕಾವ್ಯವಾಚನದಿಂದಾಗುವ ಆನಂದದ ಜಾತಿಯದೇ ಎಂದು ಕಂಡುಬರುವದು. ಮೇಲಿನ ಒಡುಪುಗಳಿಗೆ ಕ್ರಮವಾದ ಅರ್ಥವನ್ನು ಹೇಳುತ್ತಾರೆ. ಏನೆಂದರೆ ೧. ಹಣತಿಯ ದೀಪ ೨. ಬೀಸುವ ಕಲ್ಲು ೩. ಕಣ್ಣೆವೆ ೪. ತುಟಿ ೫. ತುರುಬು ೬. ಮೊಟ್ಟೆ ೭. ತಂಬಿಗೆ ೮. ಕುಂಬಳಕಾಯಿ ೯. ಚೇಳು ೧೦. ಮೆಣಸಿನಕಾಯಿ.

ಕಾವ್ಯದ ಲಕ್ಷಣ

ಎಂದೆಂದಿಗೂ ಅಳಿಯದ ಮಾತುಗಳಿರುವಂತೆ, ಎಂದೆಂದಿಗೂ ಬದಲಾಗದ ಅಭಂಗವಾದ ಹಾಡುಗಳಿರುತ್ತವೆ. ಹಳೆಯ ರಾಜ್ಯವಳಿದು ಹೊಸ ರಾಜ್ಯ ತಲೆಯೆತ್ತಿದರೂ ಹಾಡು ಬದಲಾಗದು. ಒಂದು ತಲೆಮಾರಿನವರು ಅಳಿದು ಬೇರೊಂದು ತಲೆಮಾರಿನವರು ತಲೆದೋರಿದರೂ ಹಾಡು ಹಳೆಯದಾಗದು. ಬರೆವಣಿಗೆಗೆ ಇಳಿಯದಿದ್ದರೂ ಜನಾಂಗದ ಎದೆಯಲ್ಲಿ ಶಿಲಾಳೇಖತಾಮ್ರ ಲೇಖನಗಳಂತೆ ಅಳುಕದೆ ಮೂಡಿನಿಂತುದು. ಹಾಗೆ ಸಾವಿಲ್ಲದ ಕೇಡಿಲ್ಲದ ಚೆಲುವಿನ ನುಡಿಗಾಗಲಿ ಹಾಡಿಗಾಗಲಿ ಕಾವ್ಯವೆಂದರಾಗುವದು. ನಾಗರಿಕ ಕಾವ್ಯದ ಲಕ್ಷಣಕಾರರು ಕಾವ್ಯಕ್ಕೆ ಅನೇಕ ಲಕ್ಷಣಗಳನ್ನು ಹೇಳಿದ್ದಾರೆ. ಅವೆಲ್ಲಾ ಲಕ್ಷಣಗಳನ್ನೂ ನೆನಪಿಟ್ಟು ಕಾವ್ಯವನ್ನು ತೂಗುವದೆಂದರೆ ನೂರುತರದ ಸಾಣಿಗೆಗಳಲ್ಲಿ ಹಿಟ್ಟು ಸಾಣಿಸುವ ಕೆಲಸ ಮಾಡಿದಂತಾಗುವದು. ಆದರೆ ಆ ಲಕ್ಷಣಕಾರರು ಹೇಳಿರುವ ಲಕ್ಷಣಗಳೆಲ್ಲವನ್ನೂ ಕ್ರೋಢಿಕರಿಸಿ, ಶ್ರೀಮಾಸ್ತಿ ಅವರು ಮೂರು ಲಕ್ಷಣಗಳನ್ನು ಮಾತ್ರ ಹೇಳಿದ್ದಾರೆ. ಆ ಮೂರು ಲಕ್ಷಣಗಳಿಂದ ಕಾವ್ಯವನ್ನು ಗುರುತಿಸುವುದು ಹಗುರರಾಗುತ್ತದೆ. ಆ ಲಕ್ಷಣಗಳು ಯಾವುವೆಂದರೆ ೧. ಭಾವದ ಸೊಗಸು ೨. ರೀತಿಯ ಸೊಗಸು ೩. ಮಾತಿನ ಸೊಗಸು. ಸಾಮಾನ್ಯ ದೃಷ್ಟಿಯಿಂದ ಅಸಾಮಾನ್ಯವಾದ ನೋಡುವ ವಸ್ತುವವನ್ನೇ ಅಸಾಮಾನ್ಯ ದೃಷ್ಟಿಯಿಂದ ನೋಡಿ, ಅಸಾಮಾನ್ಯವಾಗಿ ರೀತಿಯಿಂದ, ಅಸಾಮಾನ್ಯವಾದ ಮಾತಿನಲ್ಲಿ ಹೇಳಿದರೆ ಆ ಮಾತು ಸೊಗಸಾಗುತ್ತದೆ; ಆ ಹಾಡು ಸವಿಯಾಗುತ್ತದೆ. ಅಂಥ ಮಾತಿಗೆ ಅಂಥ ಹಾಡಿಗೆ ಕಾವ್ಯವೆನ್ನಬಹುದಾಗಿದೆ. ಇದೊಂದು ಸಾಮಾನ್ಯವಾದ ನಿಯಮ. ಒಂದೊಂದು ವಸ್ತುವನ್ನು ಅಂಥ ಸಾಮಾನ್ಯವಲ್ಲದ ಒಂದು ದೃಷ್ಟಿಯಲ್ಲಿ ಕಂಡು, ಸಾಮಾನ್ಯವಲ್ಲದ ಒಂದು ಪದ್ಧತಿಯಿಂದ, ಅಂಥದೇ ಒಂದು ಮಾತಿನಲ್ಲಿ ಹೇಳಿದ ಹಾಡುಗಳನ್ನು ಇಲ್ಲಿ ಉದಾಹರಿಸಬಹುದು-

ಹಾಂವು ಅಂದರ ಜೀವ ಹರಣವ ಹಾರ್ಯಾವ
ಹಾಂವಲ್ಲ ಹಂಪಿ ವಿರುಪಾಕ್ಷಿ | ನಿನಮುಂದ |
ಹಾಂವಾಗಿ ಗಂಗಿ ಹರದಾಳ ||

ಹಚ್ಚನ ಮೈಯವ ಹವಳದ ತುಟಿಯವ
ಎತ್ತ ಹೋಗಿದ್ಯೊ ಗಿಣಿರಾಮ | ತವರವ |
ಉತ್ತತ್ತಿ ಬನಕ ಉಲುವಿಲ್ಲ ||

ಬೆಳ್ಳಗ ಬೆಳಗಾಗಿ ಬೆಳ್ಳಿ ಮೂಡಲವಾಗಿ
ಒಳ್ಳೊಳ್ಳೆ ಮೀನ ಗರತಿಗೆಗೆದು | ಆಡ್ಯಾವ |
ಗರತಿ ಗಂಗಮನ ಉಡಿಯಾಗ ||

ಒರಳಸುತ್ತಲೆ ಅಕ್ಕಿ ಕೊರಳ ಸುತ್ತಲೆ ಮುತ್ತ
ಗುಡಿಸುತ್ತ ಗೂಳಿಬಸವಣ್ಣ | ಸೊನ್ನಲಗಿ |
ಸಿದ್ಧರಾಮನ ಸುತ್ತ ಸಿರಿಗಂಗಿ ||

ಗಿಡದಾಗ ಗಿಡ ಛಲುವ ಮಾವಿನಗಿಡದ ಛಲುವ
ಹಕ್ಕಿಪಕ್ಯಾಗ ಗಿಣಿ ಛಲುವ | ಮ್ಯಾಲೀನ |
ಚಿಕ್ಯಾಗ ಛಲುವ ಚಂದ್ರಾಮ ||

ಸಾಮಾನ್ಯ ವಸ್ತುವಿಗೆ ಅಸಾಮಾನ್ಯ ವಸ್ತುವನ್ನು ಹೋಲಿಸಬೇಕೆಂದು ಲಕ್ಷಣಕಾರರು ಒತ್ತಿ ಹೇಳಿದ್ದಾರೆ. ಹಾವನ್ನು ಹೊಳೆಗೆ ಹೋಲಿಸಿದ್ದಾಗಲಿ, ಗಿಳಿಯ ತುಟಿಯನ್ನು ಹವಳಕ್ಕೆ ಹೋಲಿಸಿದ್ದಾಗಲಿ ಅಲಂಕಾರ ಶಾಸ್ತ್ರದ ದೃಷ್ಟಿಯಿಂದ ಸಮಂಜಸವೆನಿಸಲಿಕ್ಕಿಲ್ಲ. ಆದರೂ ಭಾವದ ಸೊಗಸು ರೀತಿಯ ಸೊಗಸುಗಳು ಆ ಕೊರತೆಯನ್ನು ಅಳುಕಿಸಿಬಿಟ್ಟಿವೆ. ತಿರುಗಿ ಕೇಳಿದರೆ, ಆ ಕುಂದೇ ಸುಂದರವಾಗಿ ಕಾಣಿಸತೊಗಿವೆ.

ಬಸವನ ಹೆಂಡೂತಿ ಹಸುಮಗಳು ನೀಲಮ್ಮ |
ಬಸರಾದರ್ಹ್ಯಾಂಗ ನಡೆದಾಳ | ಗೋದಿಯ |
ಸಸಿಯಾಗ ನವಿಲು ನಡಿದಾಂಗ ||

ಬಸವಮಂತ್ರಿಯ ಹೆಂಡತಿ ನೀಲಮ್ಮನನ್ನು ಸಾಮಾನ್ಯ ಜೀವಿಯಾದ ನವಿಲಿಗೆ ಹೋಲಿಸಬಾರದಿತ್ತೆನ್ನುವವರು ಅಂದುಕೊರ್ಳಳೊಲ್ಲರೇಕೆ; ಆದರೆ ಲೆಕ್ಕವಿಲ್ಲದ ಕಣ್ಣುಗಳ ಗರಿಕೆದರಿ, ಅರಸುತುರಾಯಿಯ ಮೋರೆಯ ಮೇಲೆ ಹೊಡೆಯುವ ತುರಾಯಿಯನ್ನು ತಲೆಯಲ್ಲಿರಿಸಿ ಜಪ್ಪಿಸಿ ಹೆಜ್ಜೆ ಹಾಕುವ ನವಿಲು, ಅಸಾಧಾರಣ ಜೀವಿಯೇ ಸರಿ. ಗರಿಗಣ್ಣುಗಳ ಬಣ್ಣಗಳಿಗೆ ಎಣಿಕೆಯಿದೆಯೇ? ಅದರ ಗೋಣಿನ ಹಸುರಿಗಿನ್ನಾವದಾದರೂ ಹೋಲಿಕೆಯಿದೆಯೇ? ನೀಲಮ್ಮ ನುಟ್ಟ ಸೀರೆಯ ಸೆರಗು, ಆಕೆ ತೊಟ್ಟ ಕುಪ್ಪಸದ ಬೆಡಗು, ಆಕೆಯ ನಡಿಗೆಯ ಸೊಬಗು ಇವೆಲ್ಲವೂ ‘ನವಿಲು’ ಎನ್ನುವ ಒಂದು ಶಬ್ದದಿಂದ ಮನಸ್ಸಿನ ಪರದೆಯ ಮೇಲೆ ಮೂಡಿನಿಲ್ಲುತ್ತವೆ. ಬಸುರಿಯಾದ ಗರತಿಯನ್ನೂ, ನವಿಲನ್ನೂ ಏಕಕಾಲಕ್ಕೆ ನೋಡುವ ಭಾಗ್ಯ ಎಲ್ಲರಿಗೂ ಬರಲಾರದು. ಆದರೆ ಬೇರೆ ಬೇರೆಯಾಗಿ ನೋಡಿ, ಒಂದೆಡೆಗೆ ಹೊಂದಿಸಿಟ್ಟು ಭಾವದಲ್ಲಿ ನಿಟ್ಟಿಸಬೇಕು. ಅಂದರೆ ಅದರ ಸ್ವಾರಸ್ಯವು ಕಂಡುಬರುವುದು.

ಅಡವಿ ಆರ್ಯಾಣದಾಗ ಹಡೆದಾಳ ಸೀತಮ್ಮ
ತೊಡಿಯ ತೊಳಿಯಾಕ ನೀರಿಲ್ಲ | ಹನಮಂತ |
ಸೇತುಗಟ್ಯಾನ ಸಮುದರಕ ||

ಸಮುದ್ರಕ್ಕೆ ಸೇತುಗಟ್ಟಿದ ಹನುಮಂತನಂಥ ಸೇವಕನು, ಮನಸ್ಸು ಮಾಡಿದರೆ ಭಗೀರಥನಂತೆ ಪ್ರತಿಗಂಗೆಯನ್ನೇ ಭೂಮಿಗೆ ಹರಿಯಿಸಿ ಬಿಡಬಹುದಾಗಿತ್ತು. ಆದ್ದರಿಂದ ದೈವಾನುಕೂಲವಿಲ್ಲದ್ದರಿಂದ ಸೀತಾದೇವಿ ಹಡೆಯುವ ಸಮಯದಲ್ಲಿ ಹನುಮಂತನು ಅಲ್ಲಿರಲಿಲ್ಲ. ಜನಕ ರಾಜನಂಥ ರಾಜರ್ಷಿಯ ಮಗಳು, ಶ್ರೀರಾಮಚಂದ್ರನಂಥ ಅವತಾರಿಯ ಕೈಹಿಡಿದ ಪಟ್ಟದ ರಾಣಿಯಾಗಿ, ಭೂದೇವಿಯೇ ತಾಯಿಯಾಗಿರುವ ಸೀತೆ ಹಡೆದದ್ದು ಅರಣ್ಯದಲ್ಲಿ, ಹಡೆದ ಹೊಲೆ ತೊಳೆಯಲಿಕ್ಕೆ ನೀರಿನಂಥ ಪುಕ್ಕಟೆ ಸಿಗುವ ವಸ್ತುವು ಅವಳಿಗೆ ಸಿಗಲಿಲ್ಲವೆಂದರೆ ಅದೆಂಥ ಕಷ್ಟದ ಕಾಲ ಅವಳಿಗೆ? ದೈವವು ಪ್ರತಿಕೂಲವಾಯಿತೆಂದರೆ, ಎಂಥೆಂಥ ಮಹಾಮಹಿಮರೂ ಅಸಹ್ಯವಾದ ಕಷ್ಟಭೋಗಿಸಬೇಕಾಗುತ್ತದೆನ್ನುವ ಮಾತನ್ನು ಅಚ್ಚೊತ್ತುವಂತೆ, ಹೃದಯವನ್ನು ಅಲುಗಾಡಿಸುವಂತೆ ಈ ಪದ್ಯವನ್ನು ಗರತಿಯು ಹಾಡಿದ್ದಾಳೆ. ‘ತೊಡಿಯ ತೊಳಿಯಾಕ ನೀರಿಲ್ಲ’ ಎನ್ನುವ ಮಿಂಚಿನ ಶಲಾಖೆಯಂಥ ಮಾತನ್ನು ಆದಿ ಕವಿ ವಾಲ್ಮೀಕಿ ಋಷಿಗಳು ಸಹ ಮರೆತುಬಿಟ್ಟಿರಬಹುದು. ಆದರೆ ಗರತಿಯಾದವಳಿಗೆ, ಕಾವ್ಯ ಮಾತೆಯಾದವಳಿಗೆ, ಸೀತಾದೇವಿಯ ಜೀವನದ ಜೀವಾಳದಂತಿರುವ ಪ್ರಸಂಗವನ್ನು ಮರೆಯುವದಕ್ಕೆ ಸಾಧ್ಯವಾದೀತೆ? ಒಂದು ಸಹಜದ ಮಾತನ್ನೇ ಮನಂಬುಗುವಂತೆ ಹೇಳುವ ಕಲೆಯು ಗರತಿ ಅಪೇಕ್ಷಿಸಿದಂತೆ ಕಲಸ ಮಾಡುವದೆಂಬುದನ್ನು ಅರಿತುಕೊಳ್ಳಲಿಕ್ಕೆ ಕೆಳಗಿನ ಎರಡು ಪದ್ಯಗಳು ಸಾಕು-

ಹೋಗಂದರ ಹೋಗಳು ಹೊಸ್ತಲದಾಟಳು
ಮಾರಿ ನೋಡಿ ನೋಡಿ ಅಳತಾಳ | ಕಂದಮ್ನ |
ಹ್ಯಾಂಗತ್ತಿ ಮನೆಗೆ ಕಳುವಾಲೇ ||

ತಂಗೀನ ಖಳುವ್ಯಾನ ತೆವರೇರಿ ನಿಂತಾನ
ಅಂಗೀಲಿ ನೀರು ವರಸ್ಯಾನ | ನನ್ನಣ್ಣ |
ಇಂದಿಗೀ ತಂಗಿ ಎರವಂದಾ ||

ಈ ಪದ್ಯಗಳೆರಡರಲ್ಲಿಯೂ ತವರುಮನೆಯ ಹೆಣ್ಣುಮಗಳು ಅತ್ತೆಯ ಮನೆಗೆ ಹೋಗುವಾಗಿನ ಪ್ರಸಂಗವನ್ನು ಭಾವಿಸಲಾಗಿದೆ. ಹೋಗೆಂದರೂ ಹೋಗದೆ ಹೊಸ್ತಲ ಒಳಮಗ್ಗಲು ನಿಂತು, ಅವ್ವನ ಮುಖವನ್ನು ನೋಡಿ ನೋಡಿ ಅಳುತ್ತಾಳೆ. ಮಾತಿಲ್ಲ; ಕತೆಯಿಲ್ಲ. ತಾಯಿಯನ್ನು ನೋಡುವ ದೃಷ್ಟಿ, ಆ ಕಣ್ಣೀರು, ಹೊಸ್ತಲ ಒಳಗಿನ ಆ ನಿಲುವು-ಇವು ತಾಯಿಯಾದವಳಿಗೆ ಏನು ಹೇಳಿದವೋ ಅದನ್ನು ಯಾರೂ ಹೇಳಲಾರರು. ಅದೊಂದು ಅವ್ಯಕ್ತಭಾಷೆ. ಭಾಷೆ ಅವ್ಯಕ್ತವಾದರೂ, ಅವ್ಯಕ್ತಕ್ಕೆ ಅರ್ಥವಾಗಿದೆ! “ಇಂಥ ಮಗಳನ್ನು ಅತ್ತೆಯ ಮನೆಗೆ ಹೇಗೆ ಕಳುಹಲಿ?” ಎಂಬ ಚಿಂತೆಯಲ್ಲಿ ಮುಳುಗಿ ತಾಯಿ ಚಡಪಡಿಸುತ್ತಾಳೆ. ಮಾತಿಲ್ಲದ ಮಾತಿನಿಂದ ಮಾತಿಗೂ ಮೀರಿದ ಭಾವವನ್ನು ಹೃದಯಕ್ಕೆ ತಲುಪಿಸುವ ಈ ಮೋಡಿಯೇ ಈ ಪದ್ಯದ ಜೀವ. ಅದು ಪದ್ಯಕ್ಕೆ ಜೀವವಾದರೂ ಓದಿದವನಿಗೆ ಸಂಜೀವವಾಗಿದೆ. ಓದಿಗೊಮ್ಮೆ ಜೀವವನ್ನು ಹಿಂಡುವ ಕಸವು ಅದರಲ್ಲಿದೆಯೆಂಬುದನ್ನು ಸಹೃದಯರಾದ ರಸಿಕರಿಗೆ ಬೇರೆಹೇಳುವ ಕಾರಣವಿಲ್ಲ. ಇನ್ನೊಂದು ಹಾಡಿನಲ್ಲಿ ತಂಗಿಯನ್ನು ಊರಮುಂದಿನ ಜಲಾಶಯದವರೆಗೆ ಕಳಿಸಿ ಬರುವಾಗ ಅಣ್ಣನು ತೆವರೇರಿ ನಿಂತನು. ನಿಂತು ತಂಗಿ ಹೊರಟದಾರಿಯ ಕಡೆಗೆ ಕ್ಷಣಹೊತ್ತು ನೋಡಿ, ಅಂಗಿಯಿಂದ ಕಣ್ಣೀರು ಒರಸಿಕೊಂಡನು. ‘ಇಂದೀಗಿ ತಂಗಿ ಎರವು’ ಎಂದನು. ತೆವರೇರಿ ನಿಲ್ಲುವ ಹಾಗೂ ಅಂಗಿಯಿಂದ ಕಣ್ಣೀರೊರಸಿಕೊಳ್ಳುವ ಎರಡು ಸಹಜಕ್ರಿಯೆ, ‘ಇಂದಿಗೀ ತಂಗಿ ಎರವು’ ಎನ್ನುವ ಸಣ್ಣ ಮಾತು-ಅದು ಸಹ ಸ್ಪಷ್ಟವೊ ಸ್ವಗತವೊ ತಿಳಿಯದು. ಇಷ್ಟರಿಂದ ಓದುಗನು, ಹೇಳದೆ ಬಿಟ್ಟ ಶಬ್ದಗಳನ್ನು ಸೇರಿಸಿಕೊಂಡು, ಸುತ್ತಿರಿಸಿದ ಭಾವನೆಗಳ ಸುರುಳೆಯನ್ನು ಬಿಚ್ಚಿಟ್ಟುಕೊಂಡು, ಅತ್ತೆಯ ಮನೆಗೆ ಹೋದ ತಂಗಿಯ ಅಣ್ಣನಂತೆ ತಾನೂ ಕಣ್ಣೀರೊರಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಗರತಿಯು ಅಪೇಕ್ಷೆ ಪಟ್ಟುದಕ್ಕಿಂತಲೂ ಹೆಚ್ಚಾಗಿ ಇಷ್ಟಪೂರ್ತಿಯನ್ನು ಈ ಹಾಡು ಮಾಡುತ್ತದೆಂದು ನಿರ್ವಿವಾದವಾಗಿ ಹೇಳಬಹುದು.

ಸಂವಾದ ಚಾತುರ್ಯ

ಭಾವದ ಸೊಗಸು, ಮಾತಿನ ಸೊಗಸಿನಲ್ಲಿ ಮಿಂದು, ರೀತಿಯ ಸೊಗಸಿನಲ್ಲಿ ಮುಡಿಯುಟ್ಟುಕೊಂಡಂತೆ, ಕಾವ್ಯಮಾತೆ ಹಾಡುವ ಹೇಳುವಳು. ಸಂವಾದವು ರೀತಿಯ ಸೊಗಸಿನಲ್ಲಿ ಎದ್ದು ಕಾಣುವ ಒಂದು ವಿಧವಾದರೂ ಭಾವ ಹಾಗೂ ಮಾತುಗಳೂ ಮೈದುಂಬಿ ನಿಲ್ಲುವವು.

ಸರದು ನಾ ಮಲಗಟಿಗೆ ಸರಗೀಯ ಕೊಂಡ್ಯೊತ್ತಿ
ಕಾಲುಂಗರೊತ್ತಿ ಬಳೆಯೊತ್ತಿ | ರಾಯರ |
ನೆತ್ತೊತ್ತಿ ನಿದ್ದೆ ಬಾರದ ||

ಜಾಡಿ ಜಮಖಾನ್ಯೊತ್ತಿ ಕಂಬಳಿಯ ಕರಿಯೊತ್ತಿ
ಉಂಗುರುಗೂಣಿ ಖಡೆಯೊತ್ತಿ | ಸತಿಯಳ |
ಮುರುವೊತ್ತಿ ನಿದ್ದಿ ಬಾರದ ||

ರಾಯರಿಗೂ ಅವರ ಸತಿಯಳಿಗೂ ನಡೆದ ಸಂಭಾವನೆ ಇದು. ಹುಸಿ ಕದನ. ಸರಗಿ, ಕಾಲುಂಗರ, ಬಳೆ, ನತ್ತು ಈ ವಸ್ತುಗಳನ್ನು ರಾಯರು ತನಗಿಡಿಸಲಿಲ್ಲವೆಂದು ಹೇಳುವ ಮಾತನ್ನೇ, ಆ ವಸ್ತುಗಳನ್ನೂ ಇಟ್ಟುಕೊಂಡು ಮಲಗಿದ್ದರಿಂದ ಅವು ಕ್ರಮವಾಗಿ ಕೊರಳಿಗೂ ಕಾಲಬೆರಳಿಗೂ, ಮುಂಗೈಗೂ ಮೂಗಿಗೂ ಚುಚ್ಚಿದ್ದರಿಂದ ನಿದ್ರೆ ಬರಲಿಲ್ಲವೆಂದು ಹೆಂಡತಿ ಒಂಕು ನುಡಿಯುವಳು. ಅದಕ್ಕೆ ಪತಿಯು ಅಂಥದೇ ಮಾತಿನಿಂದ ಅದೇ ರೀತಿಯಲ್ಲಿ ಉತ್ತರ ಕೊಡುತ್ತಾನೆ. ಹೆಂಡತಿ ತವರು ಮನೆಯಿಂದ ತರಬೇಕಾದ ಜಾಡಿ ಜಮಖಾನೆ ಕಂಬಳಿಗಳನ್ನೂ ತನಗೆ ಸಲ್ಲಿಸಬೇಕಾದ ಉಡುಗೊರೆಯ ಉಂಗುರ, ಖಡೆ, ಮುರುವುಗಳನ್ನೂ ತಂದು ಸಲ್ಲಿಸಲಿಲ್ಲವೆಂಬ ಮಾತನ್ನು ಸಲ್ಲಿಸಿದ್ದಾಳೆಂಬ ಸುಳ್ಳು ಮಾತನ್ನಾಗಿಟ್ಟುಕೊಂಡು, ಆ ಹಾಸಿಗೆ-ಹೊದಿಕೆಗಳಿಗೂ ಹೊನ್ನಿನಾಭರಣಗಳೂ ನಟ್ಟಿದ್ದರಿಂದ ತನಗೂ ನಿದ್ದೆ ಬರಲಿಲ್ಲವೆಂದು ಮಾತಿಗೆ ಮರುಮಾತು ಕೊಡುತ್ತಾನೆ. ಇದೇ ತರದ ಸರಸ ಮಾತಿನ ಸಂವಾದವಿನ್ನೊಂದರಲ್ಲಿ ಕೆಂಪು ಮೈ ಬಣ್ಣದ ಹೆಣ್ಣಿಗಾಗಿ ಧೊರೆಯ ಮಗನು ಕುದುರೆಯಿಂದ ಇಳಿದು ಕಂಗಾಲಾಗಿ ಬಂದನೆಂದು ಬೇರೊಂದು ಬಗೆಯಲ್ಲಿ ಅಣಕವಾಡುವ ಆ ಹಾಡು-

ಕೆಂಪನ ಹೆಣ್ಣೀಗಿ ಸಂಪೀಗಿ ತೆನಿಯೆಂದ
ಅಂತರಲೆ ಬೆಳೆವ ಹುಣಚಿಯ | ಕಾಯೀಗಿ |
ಎಂಥವರು ಬಾಯಿ ಬಿಡತಾರೆ |
ಕರ್ರನ ಹೆರ್ಣಣೀಗಿ ಕಮಳದ ಹೂವೆಂದು
ಕರಲಾಗ ಬೆಳೆವ ಕಡಲೀಯ | ಗಿಡಕಾಗಿ |
ಧೊರಿಮಗ ತೇಜಿ ಇಳಿದಾನ ||

ಕೆಂಪು ಹೆಣ್ಣಿಗೆ ಸಂಪಿಗೆಯ ತೆನೆಯನ್ನುವುದಾಗಲಿ, ಕಪ್ಪು ಹೆಣ್ಣಿಗೆ ಕಮಲದ ಹೂವೆನ್ನುವುದಾಗಲಿ ಭ್ರಾಂತಿಯಲ್ಲದೆ ಏನು? ಅಂತರದಲ್ಲಿ ತೂಗಾಡುವ ಹುಣಚಿಯು ಕೆಂಪು ಬಣ್ಣದ್ದಾದರೂ ಅದರ ಹುಳಿಗೆ ಎಂಥ ಹಿರಿ ಮನುಷ್ಯನ ಬಾಯಿಗಾದರೂ ನೀರೂರುವದಿಲ್ಲವೇ? ಕಪ್ಪು ಹೆಣ್ಣು ಕರಲು ಹೊದಲ್ಲಿ ಬೆಳೆವ ಕಡಲಿಯ ಗಿಡವಿದ್ದ ಹಾಗೆ. ಅದನ್ನು ಹಾದಿಗೆ ಹೋಗುವವರು ಕಿತ್ತಿ ತಿನ್ನುವುದೂ ಸುಲಭವಾದ ಕೆಲಸವೇ. ಧೊರೆಯ ಮಗನು ಕುದುರೆ ಇಳಿಯುವುದು ತರವಲ್ಲ. ಸರಸವನ್ನು ಸಂವಾದದಲ್ಲಿ ಅರಳಿಸುವಂತೆ ಬುದ್ಧಿಯ ಮಾತನ್ನೂ ಸಂವಾದದಲ್ಲಿ ತೃಪ್ತಿಕರವಾಗಿ ಮೂಡಿಸಬಹುದಾಗಿದೆ-

ಬೀಸಲಾರದೆ ಹೋಗಿ ಬೀದ್ಯಾಗ ನಿಂತೇನ |
ದೇಸಾಯಿ ಅಣ್ಣ ಕರೆದೊಯ್ಯೋ | ನಿನ ಮನಿಯ ಕೂಸೆತ್ತ ಹೊತ್ತು ಗಳೆದೇನ
ಕೂಸೆತ್ತಿ ಹೊತ್ತುಗಳೆದೇನ ||

ಕೂಸನಾದರೂ ಎತ್ತಿ ಏಸು ದಿನ ಕಳೆದವ್ವ
ಲೇಸ್ಹೋಗು ನಿನ್ನ ಒಗೆತನ | ಕಿದ್ದರ |
ಏಸೊಂದು ಬಣ್ಣ ಉಡಿಸೇನ ||

ದೊಡ್ಡ ಖರ್ಚಿನ ಮನೆಗೆ ಕೊಟ್ಟ ತಂಗಿಯು ಬೀಸುವ ಕೆಲಸಕ್ಕೆ ಬೇಸತ್ತು ಇದ್ದುಳ್ಳವನಾದ ಅಣ್ಣನ ಮನೆಯಲ್ಲಿ ಅವನ ಕೂಸುಗಳನ್ನೆತ್ತಿಕೊಳ್ಳುವ ಕೆಲಸ ಮಾಡಿ ಹೊತ್ತು ಕಳೆಯಬಹುದೆಂದೂ ತನ್ನಿಚ್ಛೆಯನ್ನು ತೋರ್ಪಡಿಸಿಕೊಳ್ಳಲು, ಇದು ಏಸು ದಿನ ಕಳೆಯುವ ಉಪಾಯ? ನಿನ್ನ ಒಗೆತನವೇ ಲೇಸು. ಬಂದಾಗೊಮ್ಮೆ ಸೀರೆ-ಕುಪ್ಪಸ ಬೇಕಾದಷ್ಟು ತಕ್ಕೊಂಡು ಹೋಗೆಂದು ಅಣ್ಣನು ಬುದ್ಧಿವಾದ ಹೇಳುತ್ತಾನೆ.

ರಾತರಿಯನ್ನೆಲ್ಲಿಯೋ ಕಳೆದು ಗಂಡನು ಬೆಳಗಾಗುವ ಹೊತ್ತಿಗೆ ತನ್ನ ಮನೆಗೆ ಬರುವನು. ಹೆಂಡತಿಯು – “ಇಂಥ ಅಪರಾತ್ರಿಯಲ್ಲಿ ಮನೆಯೊಳಗೆ ನಾನೊಬ್ಬಳೇ ಇದ್ದೆ. ನೀವೆಲ್ಲಿಗೆ ಹೋಗಿ ಬಂದಿರಿ?” ಎಂದು ಕೇಳುವಳು.

ಗಂಡ – ತನುಘಾಳಿಗ್ಹೋಗಿದ್ದೆವು.

ಹೆಂಡತಿ-ಎದೆಯ ಮೇಲಿನ ಘಾಯಿ ಎಳೆಯ ಚಂದ್ರಮನಂಗ, ನೀವೆಲ್ಲಿ ಹಾದು ಬಂದ್ರಿ?

ಗಂಡ-ಹುಬ್ಬು ಹುಬ್ಬಿನ ಘಾಯಿ | ಹುಬ್ಬೆಲ್ಲ ಚೂರು ಘಾಯ. ಇದೇನು?

ಹೆಂಡತಿ-ಜಾಣೀ! ತೋಟದಾಗ ಇರುವ ನೀಟುಳ್ಳ ಗಜನಿಂಬಿ ಗರಿ ತಾಕ್ಯಾವ.

ಹೆಂಡತಿ-ನಾರ್ಯಾಗ್ಹಚ್ಚೋ ಹಲ್ಪುಡಿ ನಿಮ್ಹಗಿಲ್ಲಿಗ್ಯಾಕ ಹತ್ಯಾವ?

ಗಂಡ-ಗೊಲ್ಲರೋಣ್ಯಾಗ ಹಾದು ಬರುವಾಗ ಅವರು ತಂದು ಹಲ್ಲಿಗೆ ಹಚ್ಚಿದರು.

ಹೆಂಡತಿ-ಮೈಮೇಲಿನ ಹೂವಿನ ಶಾಲ್ಗೋಳು ಮಾಸಿವೆ. ನೀವು ಇಷ್ಟೇಕೆ ಬೆವತಿರುವಿರಿ?

ಗಂಡ-ಗರಡೀಯ ಮನೆಯೊಳಗ ಸಗತಿ ಹೊಡೆವಾಗ ಕಿರಿಬೆವರ ಬಿಟ್ಟಿವೆ.

ಇಲ್ಲಿಯ ಮಾತಿನ ಚಮತ್ಕೃತಿಗೆ ಎಲ್ಲರೂ ಬೆರಗಗುವರು. ಹೆಣ್ಣು-ಗಂಡಿನ ಸ್ವಾಭಾವಿಕ ಭಾವನೆಗಳನ್ನು ಯಥಾವತ್ತಾಗಿ ಸೊಗಸಾದ ಮಾತಿನಲ್ಲಿ ವಿಚತ್ರವಾದ ರೀತಿಯಿಂದ ಚಿತ್ರಿಸಲಾಗಿದೆ. ಹೆಂಡತಿಯ ಮುಂದೆ ಸುಳ್ಳು ಕಾರಣಗಳನ್ನು ಹೇಳಿ ತಾನು ನಿರಪರಾಧಿಯೆಂದು ತೋರಿಸಿಕೊಡಲು ಪ್ರಯತ್ನಿಸಿದರೂ ಕಡೆಯಲ್ಲಿ ಬಾಯಿ ಸವರುವ ಪ್ರಸಂಗವು ಗಂಡನಿಗೆ ತಪ್ಪಲಿಲ್ಲ. ಅದರಂತೆ ಹೆಂಡತಿಗೆ ನೂಲಲಿಕ್ಕೆ ತೊಡಗಿಸಬೇಕೆಂದು ಗಂಡನು-“ನೂಲೊಲ್ಯಾಕ ಚೆನ್ನಿ” ಎಂದು ಆರಂಭಿಸುವನು. ಆಕೆ ರಾಟಿಯಿಲ್ಲವೆನ್ನಲು, ಗಂಡನು ಮನೆಯ ಬಂಡಿಯನ್ನೇ ಮುರಿಸಿ ರಾಟಿ ಮಾಡಿಸಿಕೊಡುವನು. ಮತ್ತೆ “ನೂಲೊಲ್ಯಾಕ ಚೆನ್ನಿ ?” ಎಂದು ಕೇಳಲು, ರಾಟಿಗೆ ಚಿಲ್ಲವಿಲ್ಲವೆಂದು ಉತ್ತರ ಬಂದಿತು. ಈ ಸಾರೆ ಮನೆಯೊಳಗಿನ ಕೋಣವನ್ನೇ ಕಡಿಸಿ ಚಿಲ್ಲ ಮಾಡಿಸಿಕೊಟ್ಟು “ನೂಲೊಲ್ಯಾಕ ಚೆನ್ನಿ?” ಎಂದು ದುಂಬಾಲ ಬೀಳುವನು. ಕದಿರು ಇಲ್ಲವೆಂದಾಗ ಹಾರಿ ಮುರಿಸಿ ಕದಿರು ಮಾಡಿಸಿಕೊಟ್ಟಾಗಲೂ ಅದೇ ಹಾಡು. ಕೂತು ನೂಲುವುದಕ್ಕೆ ಕಟ್ಟೆಯಿಲ್ಲವೆಂದು ಹೇಳಿ, ಕಟ್ಟೆ ಕಟ್ಟಿಸಿಯಾದ ಮೇಲೆ, ಗುಗ್ಗರಿ ಬೇಕೆನ್ನುವಳು; ಅದೂ ಸಿದ್ಧವಾಗುತ್ತದೆ. ಗೆಳತಿಯರು ಜೊತೆಗೆ ಬೇಕೆಂದರೆ ಅದೂ ದೊರೆಯುವದು. ಎಲ್ಲವೂ ಸಿದ್ಧವಾದ ಮೇಲೆ ಚೆನ್ನಿ ಇನ್ನಾವ ನೆಪವನ್ನು ಹೇಳಲಿಕ್ಕೂ ಸಾಧ್ಯವಿಲ್ಲವಾಯಿತು. ಆಗ “ನೂಲೊಲ್ಯಾಕ ಚೆನ್ನಿ?” ಎಂದು ಕೇಳಿದಾಗ “ನನಗೆ ಬರೂದಿಲ್ಲೋ ಜಾಣ” ಎಂದು ಬಾಯಿ ಸವರುವಳು. ಈ ಹಾಡಿನ ರೀತಿ ವಾದ ಪದ್ಧತಿಯಿಂದಲೇ ಹಿಗ್ಗುತ್ತ ಬಂದರೂ ಅದೊಂದು ಬಗೆಯೇ ಬೇರೆ. ಸಂವಾದವಿದ್ದರೂ ಇಲ್ಲದಂತೆ, ಅದಿಲ್ಲವೆಂದರೂ ಸಂವಾದಕ ಶೈಲಿ ಕಂಗೊಳಿಸುವಂತೆ ಹೇಳುವ ಇನ್ನೊಂದು ರೀತಿಯ ಹಾಡು ಇಲ್ಲಿ ಉದಾಹರಿಸಬಹುದಾಗಿದೆ. ಮಗಳನ್ನು ತನ್ನ ತಮ್ಮನಿಗೆ ಮದುವೆ ಮಾಡಿಕೊಟ್ಟ ಒಬ್ಬ ಅಕ್ಕ ಹೇಳುವ ಹಾಡಿದು. ತಮ್ಮನು ತನ್ನ ಮಡದಿಯನ್ನು ಬಿಟ್ಟುಕೊಟ್ಟು ಸೂಳಿಗೇರಿಯಲ್ಲಿ ಸುಳಿದಾಡುತ್ತಾನೆ. ಆಗ ಅಕ್ಕನು ಕೇಳುವಳು-

ವಾರಿರುಮ್ಮಾಲಸುತ್ತಿ ಓಣ್ಯಾಗ ನಿಂತಾನ |
ಹ್ವಾರೇನಿಲ್ಲೇನೋ | ಹೊಲದಾಗ ಹೊಲದಾಗ |
ಹ್ವಾರ್ಯಾನಿಲ್ಲೇನೋ ||

ಹ್ವಾರ್ಯಾನಿಲ್ಲ ಏನೋ ಹೊಲದಾಗ ಚಂದರಾಮ |
ನಾರ್ಯಾರಿಲ್ಲೇನೊ | ಮನಿಯಾಗ ಮನಿಯಾಗ |
ನಾರ್ಯಾರಿಲ್ಲೇನೋ ||

ಕೋಮಲೆಯೂ ಪವಿತ್ರಳೂ ಆದ ಮಗಳನ್ನು ಬಣ್ಣಿಸಿ, ಒಂದು ಬಗೆಯಿಂದ ಆತನ ದುರ್ದೈವಕ್ಕೆ ಕನ್ನಡಿ ಹಿಡಿಯುವಳು.

ಮಕಮಕ ಮಲ್ಲೀಗಿ ಅದರಾಗ ಕ್ಯಾದೀಗಿ |
ಬಿಚ್ಚಿನೋಡಿದರ | ಬಿಳಿಯೆಲಿಯೊ ಬಿಳಿಯಲಿಯೋ | ಬಿಚ್ಚಿ ನೋಡಿದರ ||
ಬಿಚ್ಚೀನೆ ನೋಡಿದರ ಬಿಳಿಯಲಿಯಂಥವಳು |
ಬಿಟ್ಟು ಮಲಗೂದು | ಛಂದೇನೋ ಛಂದೇನೋ ಬಿಟ್ಟು ಮಲಗೂದು ||

ಆತನ ಸುಳಿದಾಟದ ಕಾರಣವು ಬೇರೆಯಾಗಿ ತೋರುವದು. ತನ್ನ ಹೆಂಡತಿಯು ಕೆಟ್ಟಿರಬಹುದೇನೆಂದು ಪರೀಕ್ಷಿಸಲಿಕ್ಕೆ ಹಾಗೆ ಸುಳಿಯುತ್ತಿದ್ದಾನೆಂದು ಭಾವಿಸುವಳು. “ಬಿಟ್ಟಾಕೆಯ ಮೇಲೆ ನಿನ್ನ ಮನಸ್ಸೇಕೆ? ಕಟ್ಟಿ ಕಲ್ಲಾಗಿ ನಿನ್ನ ಮಟ್ಟಿಗೆ ಇದ್ದುಬಿಡು” ಎಂದು ಅಕ್ಕನು ನುಡಿಯುವಳು. ಅಲ್ಲದೆ-

ಬಾಳಿಕೊಯ್ದರ ತೋಟ ಹಾಳಾಗುದರಿದೇನೊ
ಆಳಲ್ದರಾಯ | ಮಡದೀಗೊ ಮಡದಿಗೋ |
ಆಳಲ್ದರಾಯ ||
ಆಳಲ್ದ
sರಾಯ ಮಡದೀಗ ಬಿಟ್ಟರ |
ಬಾಳಿ ಹಣ್ಣೇನೊ | ಕೊಡಲಾಕೊ ಕೊಡಲಾಕೊ | ಬಾಳಿ ಹಣ್ಣೇನೋ ||
ಮಲ್ಲಿಗ್ಹೂವಿನ ದಂಡಿ ಅಲ್ಲಿಟ್ಟ ಇಲ್ಲಿಟ್ಟ |
ಕಲ್ಲ ಮ್ಯಾಲಿಟ್ಟ | ಕೈಯಾಗಿಟ್ಟ ಕೈಯಾಗಿಟ್ಟ | ಕಲ್ಲ ಮ್ಯಾಲಿಟ್ಟ ||
ಕಲ್ಲ ಮ್ಯಾಲ ಇಟ್ಟ ಕೈಯಾಗಿಟ್ಟ ಚಂದರಾಮಾ |
ಪಾದ ಮ್ಯಾಲಿಟ್ಟ | ಶರಣೆಂದ ಶರಣೆಂದ |
ಪಾದ ಮ್ಯಾಲಿಟ್ಟ ||