ಗಾದೆಯ ಮಾತು ವೇದಕ್ಕೆ ಸಮಾನವೆಂದು ಜಾನಪದವು ಭಾವಿಸಿದೆ. ಆದರೆ ಕೆಲವರು ಗಾದೆಗಳಿಗೆ ಸೂತ್ರರೂಪ ಕೊಡುವುದಕ್ಕಾಗಿ ಪ್ರಾಸಗಳಿಂದ ಸಿಂಗರಿಸಲಾಗಿದೆಯೆಂದೂ ಬಗೆಯುತ್ತಾರೆ. ಇತ್ತೀಚೆಗೆ ಲೋಕೋಕ್ತಿಗಳನ್ನು ವೈಜ್ಞಾನಿಕ ದೃಷ್ಟಿಯಲ್ಲಿ ಕಂಡು, ಅವುಗಳಲ್ಲಿ ಹುದುಗಿದ ಸತ್ಯವನ್ನು ನಿಚ್ಚಳಗೊಳಿಸುವ ಕ್ರಮಕೈಕೊಂಡಿದ್ದು ಯಥಾರ್ಥವೇ ಆಗಿದೆ. ಹಾಗೆ ನಿಚ್ಚಳಗೊಂಡ ಕೆಲವೊಂದು ಗಾದೆಗಳನ್ನು ಕುರಿತು ಸಮಾಲೋಚಿಸುವಾ.

‘ಊಟಕ್ಕೆ ಮೊದಲು ಉಪ್ಪಿನಕಾಯಿ’. ಉಪ್ಪಿನಕಾಯಿಯನ್ನು ಬಾಯಿಗೆ ಹಚ್ಚುವುದೊತ್ತಟ್ಟಿಗಿರಲಿ, ಅದರ ಹೆಸರು ಕೇಳಿದ ಕೂಡಲೇ ಲಾಲಾರಸವು ಜಿಗಿದೆದ್ದು ಪಚನಕಾರ್ಯಕ್ಕೆ ಸಿದ್ಧವಾಗುವ ವಿಷಯ ಯಾರಿಗೆ ಗೊತ್ತಿಲ್ಲ? ಇದರಲ್ಲಿ ಮಾತಿನ ಮೋಡಿಗಿಂತ ವೈಜ್ಞಾನಿಕ ಜೋಡಿಯೇ ಮಿಗಿಲಾಗಿದೆ ಎಂಬುದು ಯಾರಿಗಾದರೂ ತಿಳಿಯುವಂತಿದೆ.

‘ನೆಗಡಿ ಬೇನೆಯಲ್ಲ, ಬುಗಡಿ ವಸ್ತುವಲ್ಲ’ ಈ ಬಗೆಗೆ ವೈಜ್ಞಾನಿಕ ದೃಷ್ಟಿಯು ಕಂಡು ಹಿಡಿದದ್ದೇನೆಂದರೆ ನೆಗಡಿ ಬೇನೆಯೇ ಅಲ್ಲ, ಅಹುದು. ಅದು ಬೇನೆಯಂತೂ ಅಲ್ಲ, ಬೇನೆಯ ಹರಿಕಾರ. ಅದು ಹಸಿವೆಯನ್ನು ತುಸು ಮಂದಗೊಳಿಸಿ ಬಾಯಿಗೆ ಅನ್ನವು ರುಚಿಸದಂತೆ ಮಾಡುತ್ತದೆ ಅಷ್ಟೇ. ನೆಗಡಿ ಸ್ವಯಂ ಬೇನೆಯಾಗಿರದೆ ಇನ್ನಾವುದೋ ಬೇನೆಯನ್ನು ತರುವ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅದನ್ನು ಅಲಕ್ಷಿಸುವಂತಿಲ್ಲ, ಅಲಕ್ಷಿಸಲೂ ಬಾರದು. ಉಪವಾಸದಿಂದ ಅಗ್ನಿಮಾಂದ್ಯವನ್ನೂ ರೇಚಕದಿಂದ ಮಲಬದ್ಧತೆಯನ್ನೂ ಹೊಡೆದು ಹಾಕಿದರೆ ಬರಲಿರುವ ಜಾಡ್ಯಕ್ಕೆ ಆಸ್ಪದವೇ ಇಲ್ಲದಾಗುತ್ತದೆ.

‘ದೋಸೆಯದು ಊಟವಲ್ಲ, ದಾಸರದು ಆಟವಲ್ಲ’ ನಿಜ. ದೋಸೆಯದು ಊಟವಂತೂ ಅಲ್ಲ. ಯಾಕಂದರೆ ಅದೊಂದು ಉಪಹಾರ. ಊಟವು ಅಂಕಿಯಂತಿದ್ದರೆ, ಉಪಹಾರವು ಶೂನ್ಯವಿದ್ದಂತೆ. ಅವೆಷ್ಟು ಶೂನ್ಯಗಳು ಸೇರಿದರೂ ಒಂದು ಸಂಖ್ಯೆಯಾಗಲಾರದು. ಊಟವು ಅದೆಷ್ಟು ಸ್ವಲ್ಪವಾಗಿದ್ದರೂ ಅದು ಸಂಖ್ಯೆಯೆನಿಸುವದು. ಊಟ ಊಟವೇ ಹೊರತು, ಉಪಹಾರವು ಊಟ ಆಗದು. ದಾಸರದು ಒಂದು ವೇಳೆ ಆಟವೆನಿಸೀತು. ಆದರೆ ದೋಸೆಯದು ಮಾತ್ರ ಊಟವೇ ಅಲ್ಲ.

‘ಉಂಡು ಉಂಗುಟ ತೊಳೆ’. ಊಟವಾದ ಬಲಿಕ ಮುಖಶುದ್ಧಿಗಾಗಿ ಎಲೆ ಅಡಿಕೆ ಜಗಿಯುವುದರಿಮದ ಪಚನಕ್ರಿಯೆ ಪ್ರಜ್ವಲಿಸುವಂತೆ, ಊಟದ ತರುವಾಯ ಉಂಗಟದ ಮೇಲೆ ನೀರು ಹನಿಸಿದರೆ ಅದೆಂಥದೋ ವಿದ್ಯುತ್ ಹುಟ್ಟಿಕೊಂಡು, ಮಂದಾಗ್ನಿಯನ್ನು ದುಂದಾಗ್ನಿ ಮಾಡಿ ಪರಿಣಮಿಸುವಂತೆ ಮಾಡುವುದೆಂದು ಜನಪದ ಭಾವಿಸುತ್ತ ಬಂದಿದೆ. ಅನುಭವವು ಸವಿಯಲ್ಲ, ಅದರ ನೆನಪೇ ಸವಿಯಂತೆ. ಅದು ಅರಿತು ಆಚರಿಸುವ ಕ್ರಮವಲ್ಲವಾದರೂ ಮರೆತು ಮೈಗೂಡಿಸಿಕೊಂಡ ಸ್ವಭಾವವಾಗಿದೆ, ರೂಢಿಯಾಗಿದೆ.

‘ರೊಟ್ಟಿ ಕುಡಿ; ನೀರು ತಿನ್ನು’ ಇದೊಂದು ಪಡವಣದ ಗಾದೆ. ಉಂಡು ನೀರು ಕುಡಿಯುವವರಿಗೆಲ್ಲ ಸಂಬಂಧಿಸಿದ ವಿಷಯ. ಆದ್ದರಿಂದ ನಮ್ಮ ಜನಪದಕ್ಕೂ ಆಪ್ಯಾಯಮಾನವಾಗಿದೆ. ಕಾರ್ಯಬಾಹುಲ್ಯದ ಅವಸರದಲ್ಲಿ ನಾವು ರೊಟ್ಟಿ ತಿನ್ನುತ್ತೇವೆ, ನೀರು ಕುಡಿಯುತ್ತೇವೆ. ಆ ಕ್ರಮವನ್ನು ಮಾರ್ಪಡಿಸಿಕೊಂಡರೆ ನಿಚ್ಚಳವಾದ ಆರೋಗ್ಯವನ್ನು ನಿಶ್ಚಯವಾಗಿ ಪಡೆಯಬಲ್ಲೆವೆಂದು ಹೇಳಬಹುದು. ರೊಟ್ಟಿಯನ್ನು ಜಗಿದು, ಜೊಲ್ಲಿನಲ್ಲಿ ನಾದಿ ಅದಕ್ಕೆ ದ್ರವರೂಪ ಕೊಟ್ಟು ಗುಟುಕರಿಸಿದರೆ ರೊಟ್ಟಿ ತಿಂದಂತಾಗದೆ ಕುಡಿದಂತಾಗುವುದರಲ್ಲಿ ಸಂದೇಹವಿಲ್ಲ. ಅದರಂತೆ ನೀರಿನ ವಿಷಯ ಕಂದೀಲಿಗೆ ಲಾಳಿಕೆಯಿಂದ ಎಣ್ಣೆ ಸುರುವಿದಂತೆ, ನಾವು ಗಂಟಲಿನಿಂದ ನೀರು ಕುಡಿದಂತೆ, ತಿನ್ನುವ ರೀತಿಯಲ್ಲಿ ಗುಟುಕು ಗುಟುಕು ನುಂಗಿದರೆ ಅನ್ನಾಶಯಕ್ಕೆ ಇಳಿದ ಅನ್ನ ಹದಗೊಳ್ಳುತ್ತದೆ. ಅದರಿಂದ ಪಾಚಕರಸಗಳು ಸ್ಫೂರ್ತಿಗೊಂಡು ಪಚನಕ್ರಿಯೆಯನ್ನು ಸರಾಗಗೊಳಿಸುತ್ತವೆ.

‘ಸುರಿದು ಉಂಡು, ಗೊರಿದು ನಿದ್ರಿಸು’ ಗಟ್ಟಿ ಪದಾರ್ಥವನ್ನು ಜಗಿಯುವುದಕ್ಕಿಂತ, ಅಳ್ಳಕವಾದುದನ್ನು ಸುರಕೊಂಡರೆ ಲಾಲಾರಸವು ಹೆಚ್ಚು ಪರಿಣಾಮವನ್ನು ತೋರಬಲ್ಲದೇನೋ. ಪಾಂಡಿಚೇರಿಯ ಶ್ರೀ ಅರವಿಂದ ಆಶ್ರಮದಲ್ಲಿ ಚಮಚೆಯಿಂದಲೇ ಬಾಯಲ್ಲಿ ಆಹಾರ ಹಾಕಬೇಕೆಂದು ಕಡ್ಡಾಯವಿದೆ. ಸುರಕೊಳ್ಳುವುದಕ್ಕಾಗಲಿ, ಚಮಚೆಯಿಂದ ತುತ್ತಿಡುವುದಕ್ಕಾಗಲಿ ಗಟ್ಟಿ ಆಹಾರವು ಪ್ರಯೋಜನವಾಗದು. ಆಹಾರವನ್ನು ತುಸು ಅಳ್ಳಕಗೊಳಿಸಿ ಚಮಚೆಯಿಂದ ಇಲ್ಲವೆ ಸುರಿಕೆಯಿಂದ ಉಂಡರೆ ಪಚನಕ್ರಿಯೆ ಸುಗಮಗೊಳ್ಳುವದು; ಅದರಿಂದ ನಿದ್ರೆ ಸುಖಕರವಾಗುವದು. ಅದೇ ಗೊರಕೆ ನಿದ್ರೆ. ಗೊರಕೆಯಿಂದ ಪರಿಸರಕ್ಕೆ ಒಂದಿಷ್ಟು ತೊಂದರೆ ಆಗಬಹುದಾದರೂ ಅದನ್ನು ತಪ್ಪಿಸಲು ಸಾಧ್ಯವಿದೆ. ಶ್ರೀ ಅರವಿಂದರಿಗೂ ಮೊದಲು ಗೊರಕೆ ನಿದ್ರೆಯಿತ್ತಂತೆ. ಆದರೆ ಅದರಿಂದ ಪರಿಸರಕ್ಕೆ ಗಲಿವಿಲಿಯುಂಟಾಗದಿರಲೆಂದು ಅವರದನ್ನು ಮಾರ್ಪಡಿಸಿಕೊಂಡರೆಂದು ತಿಳಿಯುತ್ತದೆ.

ಗಂಡ ಹೆಂಡಿರಲ್ಲಿ ಇಲ್ಲವೆ ಇಬ್ಬರು ಸ್ನೇಹಿತರಲ್ಲಿ ನಡೆದ ಯೋಚನೆಯನ್ನು ಗುಟ್ಟಾಗಿ ಉಳಿಸುವುದು ಸಹಜ ಸುಸಾಧ್ಯ. ಆದರೆ ಅದೇ ವಿಷಯದಲ್ಲಿ ಮೂರನೆಯವನ ಸೇರ್ಪಡೆಯಾದರೆ ಗುಟ್ಟು ರಟ್ಟಾಗುವುದು ಗಟ್ಟಿ. ಅಂತೆಯೇ ‘ಇಬ್ಬರಲ್ಲಿ ಗುಟ್ಟು, ಮೂವರಲ್ಲಿ ರಟ್ಟು’ ಎಂಬ ಗಾದೆ ಹುಟ್ಟಿಕೊಂಡಿದೆ. ಮೂವರಿಗೆ ತಿಳಿದಿದ್ದು ಮೂರು ಲೋಕಕ್ಕೆ ತಿಳಿದು ಬರಲು ತಡವಾಗದು, ತಡೆಯೂ ಆಗದು.

ಇಬ್ಬರು ಸಹಜವಾಗಿ ಉಳಿಸಿಕೊಳ್ಳಬಹುದಾದ ಸ್ನೇಹವನ್ನು ಮೂವರಲ್ಲಿ ಉಳಿಸಿಕೊಳ್ಳಲು ಸಾಧ್ಯವಾದರೆ, ಮೂಲೋಕದೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ತಡೆ-ತೊಡಕು ಆಗುವದಿಲ್ಲೆಂದು ಪಾಶ್ಚಾತ್ಯ ಅನುಭಾವಿಗಳೊಬ್ಬರು ಹೇಳಿದ್ದುಂಟು. ಮೂವರಿಗೆ ಒಂದು ಗೂಡಲು ಸಾಧ್ಯವಾದರೆ ಮೂಲೋಕಗಳೇ ಒಂದುಗೂಡಬಲ್ಲವೆಂದಉ ಹೇಳಿದಂತಾಯಿತು. ಅಂಥ ಪ್ರಸಂಗದಲ್ಲಿ ‘ಇಬ್ಬರಲ್ಲಿ ಗುಟ್ಟು, ಮೂವರಲ್ಲಿ ರಟ್ಟು’ ಎನ್ನುವ ಕಟ್ಟು ಕಳಚಿಹೋಗಬಲ್ಲದು. ‘ಇಬ್ಬರು ಹೆಂಗಸರು ಸೇರಿದರೆ ಸಂತೆ, ಮೂವರು ಸೇರಿದರೆ ಜಾತ್ರೆ’ ಎನ್ನುವ ಗಾದೆಗೂ ನೆಲೆಯಿಲ್ಲದಾಗುತ್ತದೆ.

‘ಹೆಂಡತಿ ಜೊತೆಯಲ್ಲಿದ್ದರೆ ದೇಶ ಇದ್ದರೇನು ಹೋದರೇನು’ ಎಂಬ ಗಾದೆ ಶ್ರೀರಾಮ ಚಂದ್ರನು ಸೀತಾ, ಲಕ್ಷ್ಮಣರೊಡನೆ ವನವಾಸಕ್ಕೆ ಹೊರಟಾಗ ಹುಟ್ಟಿಕೊಂಡಂತಿದೆ. ಅದಿಂದು ನಮಗೆ ನಿಮಗೆ ಎನ್ನದೆ ಎಲ್ಲರಿಗೂ ಹೊಂದಿಕೊಳ್ಳುವ ಹಾಗಿದೆ. ಹೆಂಡತಿಗೆ ಅರ್ಧಾಂಗಿಯಾದರೆ ಗಂಡ ಅರ್ಧಾಂಗವೇಕಲ್ಲ? ಗಂಡ ಹೆಂಡತಿ ಹೊಂದಿದಾಗಲೇ ಒಂದು ಇಡಿಯಾದಂತೆ, ಪಟ್ಟಾಧಿಕಾರದ ಮೇಲೆ ನೀರುಬಿಟ್ಟು, ಒಂದಲ್ಲ ಎರಡಲ್ಲ ಹದಿನಾಲ್ಕು ವರುಷ ಕಾಡಿನ ತೊಂದರೆಗಳನ್ನೆಲ್ಲ ಸಂತೋಷದಿಂದ ಸಹಿಸುವುದಕ್ಕೆ ಸಾಧ್ಯವಾದದ್ದು ಹೆಂಡತಿ ಜೊತೆಯಲ್ಲಿದ್ದುದೇ ಕಾರಣವೆನ್ನಬೇಕು. ದೇಶ ಇದ್ದರೇನು, ಇಲ್ಲದಿದ್ದರೇನು? ರಾಮ-ಸೀತೆಯರ ಪರಂಪರೆಗೆ ಕುಡಿಗಳಾದ ನಾವು ದೇಶ ಇದ್ದರೇನು ಹೋದರೇನು ಎಂಬುದನ್ನು ಲೆಕ್ಕಿಸದೆ ಹೆಂಡತಿ ಜೊತೆಯಲ್ಲಿ ಇದ್ದರೆ ಸಾಕು – ಎನ್ನುವ ಅಪ್ಪಟ ಸ್ವಾರ್ಥಿಗಳಾಗಿದ್ದೇವೆ. ಆ ಮಾತು ಬೇರೆ.

ರಾಜ್ಯಕ್ಕೆ ಅಧಿಕೃತ ಪಟ್ಟಾಧಿಕಾರಿಯಾದ ರಾಮನಿಗೆ ಹೆಂಡತಿಯ ಜೊತೆ ಅಪ್ಯಾಯಮಾನವಾಗಿರುವಾಗ ‘ಸಾವಿರ ಕುದರೀ ಸರದಾರನು ಮನೆಯ ಹೆಂಡತಿಗೆ ಪಿಂಜಾರ’ ನಾಗಲು ಸಿದ್ಧನಾಗುವುದು ಅತ್ಯಂತ ಅನಿವಾರ್ಯವಾಗಿದ್ದರೆ ಆಶ್ಚರ್ಯವೇನು? ಗಾಂಧಿಯವರ ಆದರ್ಶವನ್ನು ಕಣ್ಣುಮುಂದಿರಿಸಿಕೊಂಡ ಬಳಿಕ ಮನೆಯ ಹೆಂಡತಿಗೆ ಪಿಂಜಾರನಾಗಿ ಹಂಜಿ ಸಿದ್ಧಪಡಿಸಿಕೊಡುವುದು ಪರಮ ಹಾಗೂ ಪ್ರಥಮ ಕರ್ತವ್ಯವೆನಿಸುತ್ತದೆ. ಗಂಡನಾದವನು ಹಂಜಿಮಾಡಿ ಕೊಡಬೇಕು. ಹೆಂಡತಿಯಾದವಳು ನೂಲು ತೆಗೆಯಬೇಕು. ಆಗ ಅದು ಹೊಂದಿಕೆಯ ಸಂಸಾರವೆನಿಸುತ್ತದೆ. ಇಲ್ಲದಿದ್ದರೆ ನೂಲೊಲ್ಲ್ಯಾಕ ಚೆನ್ನೀ ಎನ್ನುತ್ತಲೇ ಇರಬೇಕಾಗುತ್ತದೆ.

ವಾತ ಪಿತ್ತ ಕಫಗಳಲ್ಲಿ ಯಾವುದು ಉಲ್ಬಣಗೊಂಡರೂ ಸ್ವಾಸ್ಥ ತಪ್ಪುತ್ತದೆ. ಆದರೆ ಅದು ದೈಹಿಕ ಅಸ್ವಾಸ್ಥ್ಯ. ಇನ್ನು ಮನದ ಅಸ್ವಾಸ್ಥ್ಯವೇ ಬೇರೆ ಬಗೆಯದು. ‘ಮನಗುದಿಗೆ ಮದ್ದಿಲ್ಲ’ ಎಂದು ಗಾದೆ ಹೇಳುತ್ತದೆ. ಮನಗುದಿಗೆ ಈಡಾದವರ ಸ್ಪಷ್ಟ ಉದಾಹರಣೆ ಬೇಕೆಂದರೆ, ಶರಣರಿಗೆ ದಾಸರಿಗೆ ಶರಣು ಹೋಗಬೇಕು. ‘ಆವ ರೋಗವೊ ಎನಗೆ ದೇವ ಧನ್ವಂತ್ರೀ, ಸಾವಧಾನದಿ ಎನ್ನ ಕೈವಿಡಿದು ನೋಡೋ’ ಎಂದು ದಾಸರು ನಾಡಿ ಪರೀಕ್ಷೆ ಮಾಡಿಸುತ್ತಾರೆ. ಮತ್ತು ತಮ್ಮನ್ನು ತೊಂದರೆಗೀಡು ಮಾಡಿದ ಅಸ್ವಾಸ್ಥ್ಯಗಳನ್ನು ವಿವರಿಸುತ್ತಾರೆ. ‘ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ, ಹರಿಕೀರ್ತನೆಯು ಕೇಳಿಸದು ಎನ್ನ ಕಿವಿಗಳಿಗೆ’ ಇದೇ ನಿಜವಾದ ಮನಗುದಿ. ಅಂಥದೇ ಮನಗುದಿ ಬಸವಣ್ಣನಿಗೂ ಇತ್ತು. ‘ಕೂಡಲ ಸಂಗಯ್ಯನು ಒಲಿದಾನೋ ಇಲ್ಲವೋ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು’ ಎಂದು ಹೇಳಿದ ಬಸವಣ್ಣನು ಇನ್ನೂ ಒಂದು ಮರೆತಿದ್ದನೆಂದು ತೋರುತ್ತದೆ. ಏನೆಂದರೆ, ಹಾಸಲೂ ಹೊದೆಯಲೂ ಇದ್ದಂತೆ ಆ ಚಿಂತೆ ತಲೆದಿಂಬಿಗೂ ಸಾಲುವಷ್ಟಿತ್ತು ಎಂದಿದ್ದರೆ ಪೂರ್ತಿಯಾಗುತ್ತಿರಲಿಲ್ಲವೇ ಮನಗುದಿಯ ವರದಿ? ಮನಗುದಿಗೆ ಮದ್ದಿಲ್ಲವೆನ್ನುವುದು ನಿಜ. ಆದರೆ ಅದಕ್ಕೆ ಉಪಾಯವಿಲ್ಲದಿಲ್ಲ. ಅದೇ ಯೋಗಸಾಧನ, ಪ್ರಾರ್ಥನೆ.

ಹೀಗೆ ಲೋಕೋಕ್ತಿಗಳ ಮೇಲೆ ಬೀರಿದ ವೈಜ್ಞಾನಿಕ ‘ಕ್ಷ’ ಕಿರಣದ ವಿಷಯವನ್ನು ಇಲ್ಲಿ ಮಾದರಿಗಾಗಿ ಸ್ವಲ್ಪದರಲ್ಲಿ ವಿವರಿಸಿದೆ. ಇಡಿಯಾಗಿ ವಿವರಿಸಲು ಇಲ್ಲಿ ಸಾಧ್ಯವೂ ಇಲ್ಲ, ಸ್ಥಳವೂ ಇಲ್ಲ.