ಬಸವಣ್ಣನವರು ಹೇಳಿದ ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂಬ ಮಾತನ್ನು ಅದೆಷ್ಟು ಜನಪದರು ಕೇಳಿದ್ದಾರೋ, ಕೇಳಿದವರಲ್ಲಿ ಅದೆಷ್ಟು ಜನ ತಿಳಿದಿದ್ದಾರೋ ಹೇಳಲಿ ಕ್ಕಾಗದು. ಆದರೆ ಹೊರಜೀವನವನ್ನು ರೂಪಿಸಿಕೊಂಡಂತೆ, ಒಳ ಜೀವನವನ್ನೂ ರೂಪಿಸಿ ಕೊಳ್ಳುವ ಎತ್ತುಗಡೆ ನಡೆಸಿದ್ದಾರೆ ಎನ್ನುವುದಕ್ಕೆ ಹಲವಾರು ಗಾದೆ ಮಾತುಗಳೇ ಸಾಕ್ಷಿಯಾಗಿ ನಿಂತಿವೆ. ಗಾದೆಗಳಲ್ಲಿ ಕಂಡುಬರುವ ನೀತಿಯು ಶಿಷ್ಟ ನೀತಿ ಮಾತ್ರ ಆಗಿರದೆ ವಿಶಿಷ್ಟ ನೀತಿಯೂ ಆಗಿರುವದು ಗಾದೆಗಳು ಉಸುರುವ ನೀತಿ ಶಿಷ್ಟ ಸಂಪ್ರದಾಯವಾದಂತೆ ವಿಶಿಷ್ಟ ಸಂಪ್ರದಾಯವೂ ಆಗಿದೆಯೆಂದು ಹೇಳಲು ಹಿಂದೆ ಮುಂದೆ ನೋಡುವ ಕಾರಣವಿಲ್ಲ.

ವೈಯಕ್ತಿಕ ಜೀವನದಲ್ಲಿ ಸ್ವಾರಸ್ಯವನ್ನು ಕಂಡುಕೊಳ್ಳುವುದರೊಡನೆ ಸಾಮರಸ್ಯ ಸಾಮಂಜಸ್ಯಗಳನ್ನೂ ಸಂಗಳಿಸಿಕೊಳ್ಳುವುದರತ್ತಲೂ ಗಮನಿಸಿದ್ದಾರೆಂದು ಕಂಡುಬರುತ್ತದೆ. ಅಷ್ಟೇ ಅಲ್ಲ, ಸಾಮಾಜಿಕ ಜೀವನದಲ್ಲಿಯೂ ಸ್ವಾರಸ್ಯ ಸಾಮರಸ್ಯ ಸಾಮಂಜಸ್ಯಗಳನ್ನು ತುಂಬಿಕೊಳ್ಳುವುದರತ್ತ ವಿಶೇಷ ಲಕ್ಷ್ಯ ಪೂರಯಿಸಿದ್ದಾರೆಂದು ತಿಳಿದುಬರುತ್ತದೆ. ವೈಯಕ್ತಿಕ ಹಾಗೂ ಸಾಮೂಹಿಕ ಜೀವನದಲ್ಲಿ ಸುಕುಮಾರತೆಯನ್ನೂ, ಒಳಜೀವನ-ಹೊರಜೀವನಗಳಲ್ಲಿ ಸುಚೇತನವನ್ನು ಸಂಗಳಿಸುವ ದಾರಿಯಲ್ಲಿ ಸಾಕಷ್ಟು ಕೃಷಿಮಾಡಿದ್ದು ಕಂಡುಬರುತ್ತದೆ.

‘ಆಶೆ ತಂದೆವೇ ಹೊರತು ಆಯುಷ್ಯ ತರಲಿಲ್ಲ’ ಎಂಬ ಚಿಕ್ಕ ಮಾತು ಗಮನಕ್ಕೆ ಬಂದರೂ ಕಡಿಮೆಯಿಲ್ಲ. ಆಶೆ ಕಟ್ಟಿತಂದ ಬುತ್ತಿ; ಆಯುಷ್ಯ ಸಂಗಳಿಸುವ ನೀರು. ಒಂದು ಸಂಗಳಿಸಿದ್ದು, ಇನ್ನೊಂದು ಸಂಘಟಿಸಿಕೊಳ್ಳುವಂಥದು. ಆಯುಷ್ಯ ವೃದ್ಧಿಯಾಗುವಂತೆ ನಮ್ಮ ನಡೆ-ನುಡಿಗಳಿಗೆ ರೂಢಿಸಿಕೊಳ್ಳ ಹಚ್ಚುವುದು ವಿಶಿಷ್ಟ ನೀತಿ. ಹೊರಜೀವನಕ್ಕೆ ಸಂಬಂಧಪಟ್ಟಂತೆ ತೋರಿದರೂ ಒಳಜೀವನಕ್ಕೆ ಬೆಂಬಲ ಮುಂಬಲ ನೀಡುವುದರಲ್ಲಿ ಸಂಶಯವಿಲ್ಲ.

‘ಕನ್ನಡಿಯೊಳಗಿನ ಗಂಟಿಗಿಂತ ಕೈಯೊಳಗಿನ ದಂಟೇ ಲೇಸು’ ಕೈಯಲ್ಲಿದ್ದದಂಟು ಲೇಸು ಮಾತ್ರವಲ್ಲ, ಅದು ಯಾರೂ ಕಸುಗೊಳ್ಳದ, ಆಸುಗೊಳ್ಳದ ಸುಭದ್ರ ಗಂಟು. ಕನ್ನಡಿಯೊಳಗಿನ ಗಂಟು ಅದೆಷ್ಟು ದೊಡ್ಡದಿದ್ದರೂ ಕೈಗಂಟಿಗೆ ಸಾಟಿಯಾಗಲಾರದು.

‘ಮುಚ್ಚಿ ಹೇಳಿದ್ದು ಒಗಟು, ಬಿಚ್ಚಿ ಹೇಳಿದ್ದು ಒರಟು’, ಕನ್ನಡಿಯೊಳಗಿನ ಗಂಟಿನಂತೆ ಒಗಟು, ಮುಚ್ಚಿದ ಮುಷ್ಟಿಯಲ್ಲಿ ಏನಿದೆಯೋ ತಿಳಿಯದು. ಬಿಚ್ಚಿ ನೋಡಿದರೆ ನಿರಾಶರಾಗಬೇಕಾಗುತ್ತದೆ. ದಂಟು ಬರಿ ದಂಟು ಅಲ್ಲ, ಒರಟೂ ಅಹುದು.

ಒಗಟು ರಾತ್ರಿಯಿದ್ದ ಹಾಗೆ, ರಾತ್ರಿ ಕಳೆಯುವುದೇ ಬೇಸರದ ಕೆಲಸ. ನಿದ್ರೆ ಹತ್ತಿದರೇ ಲೇಸು. ರಾತ್ರಿ ಕಳೆಯುವ ಪ್ರಸಂಗದಾಗ ಬೆಳಗಾಗುವುದಕ್ಕೆ ಅವೆಷ್ಟು ತಿಂಗಳು ಬೇಕೋ ಅನಿಸುತ್ತದೆ. ಆದರೆ ರಾತ್ರಿ ಕಳೆಯುತ್ತಲೇ ಇರುತ್ತದೆ, ಹಗಲು ನಮ್ಮತ್ತಲೇ ಹೆಜ್ಜೆ ಹಾಕುತ್ತಿರುತ್ತದೆ. ಬಾಳಿನಲ್ಲಿ ಬರುವ ಗಂಡಾಂತರದ ಕಾಲವೆಂದರೆ ಒಂದು ಮಹಾರಾತ್ರಿ; ಶಿವರಾತ್ರಿ ಅಲ್ಲ, ಶವರಾತ್ರಿ, ರಾತ್ರಿಗಾಗಿ ವ್ಯಥೆಪಡದೆ, ಬೆಳಗಾಗದ ರಾತ್ರಿಯುಂಟೇ ಎಂಬ ಅಚಲ ನೀತಿಯನ್ನು ಅರಗಿಸಿಕೊಳ್ಳುವುದು ಅನಿವಾರ್ಯವೇ ಆಗಿದೆ. ರಾತ್ರಿಯೆಂದರೆ ಕೇಡುಕಾಲ, ‘ಕೇಡುಗಾಲಕ್ಕೆಲ್ಲ ಕೂಡುವವು ದೋಷಗಳು’

ಕೇಡುಗಾಲಕ್ಕೆ ನಾಯಿ ಮೊಟ್ಟೆ ಹಾಕುವ ಘಟನೆ ಸಂಗಳಿಸಿದರೆ, ಕೊಂದ ಪಾಪ ತಿಂದು ಪರಿಹರಿಸುವ ಪ್ರಸಂಗ ಪ್ರಾಪ್ತವಾದರೆ ಮನುಷ್ಯನಿಗೆ ದಿಕ್ಕೇ ತಪ್ಪಿಸುತ್ತದೆ; ಹಾದಿ ತಪ್ಪುತ್ತದೆ. ಮುಂದನರಿಯದ ಮಂಕನೇ ಆಗಿಬಿಡುತ್ತಾನೆ. ಅಂಥ ಪುಕ್ಕರಿಗೆ ನೆಕ್ಕಿಸುವ ಲೇಹವೊಂದಿದೆ, ಅದಾವುದೆಂದರೆ,

ದಂಡಿನಲ್ಲಿ ಕೆಟ್ಟಿದ್ದು ಹಾದರವಲ್ಲ,
ಬರದಲ್ಲಿ ಕದ್ದಿದ್ದು ಕಳವಲ್ಲ

ಅನಿವಾರ್ಯ ಪ್ರಸಂಗಕ್ಕೆ ತುತ್ತಾಗಿ ತೊತ್ತಾಗಿ ವ್ಯವಹರಿಸಿದ ಆ ಹಾದರದವಳಿಗೂ, ಕಳವಿದವನಿಗೂ ನಾಲ್ಕೊಪ್ಪತ್ತು ಬಾಳಬೇಕೆಂಬ ಧೈರ್ಯ ಉಂಟಾಗುತ್ತದೆ. ಮೊದಲಗಿತ್ತಿಗೆ ಅತ್ತೆಯ ಮನೆಯೆಂದರೆ, ಒಂದು ಮೊಲಕ್ಕೆ ಒಂಬತ್ತು. ನಾಯಿ ಬೆಂಬಳಿಸಿದ ಅಕ್ರಮ ಬೇಟ ಮಾಟ. ಆ ಮೊದಲಗಿತ್ತಿಯನ್ನು ಬಿರುಗುತ್ತಿನೊಳಗಿಂದ ಉಳಿಸುವುದಕ್ಕೆ ಗಂಡನೊಬ್ಬ ಮಾತ್ರ ಸಮರ್ಥ. ಗಂಡ ಓಲೈಸಿದರೆ, ಗುಂಡುಕಲ್ಲು ಸಹ ಓಲೈಸುವದು. ಆದರೆ ಹೆಂಡತಿಯನ್ನು ಓಲೈಸುವುದಕ್ಕೂ ಕೆಚ್ಚುಬೇಕು. ಅದು ಎಲ್ಲರಿಗೂ ಇರುವಂಥದಲ್ಲ, ಎಲ್ಲ ಗಂಡಸರಿಗಂತೂ ಇರುವುದೇ ಇಲ್ಲ. ಅದಕ್ಕೆ ‘ಇರುವೆಯಷ್ಟು ಬಲ, ಹೆಂಗಸಿನಷ್ಟು ಧೈರ್ಯಬೇಕು.’

ತನ್ನದೇ ಗೆಲ್ಲಬೇಕೆಂದು ಗಂಡು, ತನ್ನದು ಸೋಲಬಾರದೆಂದು ಹೆಣ್ಣು ಹಂಚಿಕೆ ಹಾಕುತ್ತಿರುವಂತೆ ತೋರುತ್ತದೆ. ಮಾತು ಬೇರೆಯಾದರೂ ಅರ್ಥ ಮಾತ್ರ ಒಂದೇ. ಸಾಯುವವರೆಗೆ ಉಸಿರಾಡಿಸುತ್ತೇನೆ ಎನ್ನುವುದಕ್ಕೂ ಬದುಕುವವರೆಗೆ ಉಸಿರಾಡಿಸುತ್ತೇನೆ ಎನ್ನುವುದಕ್ಕೂ ಅರ್ಥ ಭೇದವೇನಿದೆ? ‘ಗಂಡಿಗೆ ಗೆಲ್ಲುವ ಆಶೆ, ಹೆಣ್ಣಿಗೆ ಸೋಲಿಸುವ ಆಶೆ’ ಇದರಲ್ಲಿ ಯಾರ ಆಶೆ ಈಡೇರಿದರೂ ಪರಿಣಾಮ ಒಂದೇ.

ಗೆಲ್ಲಬೇಕಾದರೂ ಸೋಲಿಸಬೇಕಾದರೂ ಒಂದು ಬಲ, ಇನ್ನೊಂದು ಧೈರ್ಯಬೇಕು. ಅದರಿಂದ ಗೆಲ್ಲಲೂಬಹುದು, ಸೋಲಿಸಲೂಬಹುದು. ಕೈಯಲ್ಲಿ ಬರಿ ಯಂತ್ರವಿದ್ದರೆ ತೀರಲಿಲ್ಲ, ಅದನ್ನು ನಿರ್ವಹಿಸುವ ತಂತ್ರವೂ ಬೇಕು. ‘ಹಕ್ಕಿಗೆ ಪಕ್ಕದೊಡನೆ ಕೊಕ್ಕವೂ ಬೇಕು’. ಅವೆರಡೂ ಇದ್ದರೆ ಲೋಕದ ಭಯಕ್ಕೆ ಆಸ್ಪದವಿಲ್ಲ. ‘ಆಯುಷ್ಯ ಬರೆದವ ಅನ್ನಕೊಡನೇ?’ ಎಂಬ ಆತ್ಮವಿಶ್ವಾಸವುಳ್ಳವನು ಈ ಲೋಕದವನಲ್ಲ, ಆ ನಾಕದವನು. ‘ನಾಕದವನಿಗೆ ಲೋಕದ ಭಯವೇನು?’ ಈ ಲೋಕದ ಕ್ರಮವೇ ಬೇರೆ, ಹೊಸದರಲ್ಲಿ ತುಂಬ ಮನ್ನಣೆ. ಹೊಸತನ ತುಸು ಮಾಸಿದರೆ ಅರ್ಧಮನ್ನಣೆ. ಹೆಗಳಿಗೆ ಹಳೆಯದಾದಂತೆ ಮನ್ನಣೆ ಶೂನ್ಯಕ್ಕಿಳಿಯುವದು. ‘ಇಗೋ ಮಣೆ, ತಗೋ ಮಣೆ, ತಾಮಣೆ’ ಹೊಸದಾಗಿ ಬಂದ ಅಳಿಯನಿಗೆ ಇಗೋ ಮಣೆಯೆಂದು ಹಾಕಿ ಕುಳ್ಳಿರಿಸಲಾಗುವದು. ಅದೇ ಅಳಿಯ ಮತ್ತೊಮ್ಮೆ ಬಂದಾಗ ತಗೋ ಮಣೆಯೆನ್ನುವುದಾಗಲಿ, ಮಗುದೊಮ್ಮೆ ಬಂದಾಗ ತಾಮಣೆಯೆಂದು ನೆಂಟರು ಹಾಕಿಸಿಕೊಳ್ಳುವದಾಗಲಿ ಹುಟ್ಟಿಸಿಕೊಂಡು ಹೇಳಿದ ಮಾತಲ್ಲ.

ಅಪ್ಪನ ತಮ್ಮ ಚಿಕ್ಕಪ್ಪ ಅಹುದು. ಚಿಕ್ಕಪ್ಪನ ಹೆಂಡತಿ ಅವ್ವನ ತಂಗಿ ಆಗಲಾರಳು. ಚಿಕ್ಕಪ್ಪ ಮತ್ತು ಅಬಚಿಯರ ಸಂಬಂಧ ಕರುಳು ಬಳ್ಳಿಯದು. ಚಿಕ್ಕಪ್ಪನಿಗಾಗಲಿ, ಅಬಚಿಯ ಗಂಡನಿಗಾಗಲಿ ಇರುವ ಕರುಳು ಸುಕ್ಕಿದ ಬಳ್ಳಿ. ನೆಂಟರೆಂದರೆ ಹೇಳಿ ಕೇಳಿ ನೆಂಟರು. ಅವರ ಕರುಳು ಬಡವನ ಹರಕು ಕಾಲ್ಮರೆಯ ಅಟ್ಟೆಯಿಂದಲೇ ಆಗಿರುತ್ತದೆ. ಅಂತೆಯೇ ಹೇಳುವರು ‘ನೆಂಟರು ದೂರ ಇರಬೇಕು. ನೀರು ಹತ್ತಿರ ಇರಬೇಕು’. ಆದರೆ ನೀರು ಹತ್ತಿರವಿದ್ದರೂ ಮುಗ್ಗಲಗೇಡಿಯ ಬಾಯಲ್ಲಿ ಬೀಳುವಂತಿಲ್ಲ, ಅಲಸಿಯ ಮುಖ ತೊಳೆಯದು. ಮುಗ್ಗಲಗೇಡಿ ಮೈಗಳ್ಳರಿಗೆ ಪಾಪಿ ಅನ್ನಬೇಕಾಗುತ್ತದೆ. ‘ಪಾಪಿಗೆ ಒಮ್ಮನವಾದರೂ ಆತನ ಬರ ಹಿಂಗದು’.

ಸತ್ಯವಿಲ್ಲದವನ ಕೈಯಲ್ಲಿ ಪರುಷವೂ ಒಂದು ಪಾಷಾಣವೇ
ಪರಮಾತ್ಮನಾದರೂ ಆತನಿಗೆ ಸುಡುಗಾಡವೇ ಗತಿ

ಅಲಸ್ಯ ಮೌಢ್ಯಗಳು ದೇಹ ಪ್ರಾಣಗಳಲ್ಲಿ ಹುಟ್ಟಿಕೊಮಡ ಕಿಲಬು. ಅದು ಬುದ್ಧಿವಾದದಿಂದ ತೊಳೆಯದು. ಕಟುಕಿ ನುಡಿಯಿಂದ ತಿಳಿಯದು. ಅದಕ್ಕೆ ಬಾರಕೋಲೇ ಬೇಕಾದೀತು ಇಲ್ಲವೆ, ಅದೇ ಜಾತಿಯ ಇನ್ನಾವುದೋ ಜೀನಸನ್ನು ಆಯುಧಮಾಡಿಕೊಳ್ಳಬೇಕಾದೀತು.

ಮಾನುಳ್ಳವನಿಗೆ ಮಾತಿನ ಪೆಟ್ಟು,
ಮಾನಗೇಡಿಗೆ ಮೊಚ್ಚೆಯ ಪೆಟ್ಟು

ಈ ಗಾದೆಯ ಮಾತಿಗೆ ಅದ್ಭುತವಾದ ಹಿನ್ನೆಲೆಯಿದ್ದಂತೆ ತೋರುತ್ತದೆ. ಮಾತಿನ ಪೆಟ್ಟು ಹತ್ತುವುದು ಬುದ್ಧಿಯುಳ್ಳವನಿಗೆ ಅಂದರೆ ಮಾನುಳ್ಳವನಿಗೆ. ಅವನು ತ್ರೇತಾಯುಗದ ಮಾನವನೆನಿಸುವನು. ಸತ್ಯಯುಗದವನಂತೂ ಅಲ್ಲವೇ ಅಲ್ಲ. ಸತ್ಯ ಯುಗದ ಮಾನವನಿಗೆ ಯಾರ ಬುದ್ಧಿವಾದವೂ ಬೇಕಿಲ್ಲ; ತನ್ನಷ್ಟಕ್ಕೆ ತಾನೇ ತಪ್ಪುದಾರಿಯನ್ನು ತೊರೆಯುತ್ತಾನೆ. ಸತ್ಯಯುಗದಲ್ಲಿ ಅಂತರಾತ್ಮನೇ ಆಡಳಿತ ನಡೆಸಿದಂತೆ, ತ್ರೇತಾಯುಗದಲ್ಲಿ ಮನದ ಅಂದರೆ ಬುದ್ಧಿಯ ಕೈಯಲ್ಲಿ ಆಡಳಿತ ಬರುತ್ತದೆ. ಅಂತೆಯೇ ಅವನು ಬುದ್ಧಿವಾದಕ್ಕೆ ಕಿವಿಗೊಡುತ್ತಾನೆ, ಮನಗೊಡುತ್ತಾನೆ. ದ್ವಾಪರಯುಗದ ಕಾಲದಲ್ಲಿ ಮಾನವನು ತನ್ನಷ್ಟಕ್ಕೆ ತಾನೇ ಸರಿಯಾದ ಮಾರ್ಗ ಅನುಸರಿಸನು; ಅಲ್ಲದೆ ಮನವನ್ನು ಮೃದುಗೊಳಿಸುವ ಬುದ್ಧಿವಾದಕ್ಕೂ ಹಣಿಯನು. ಆ ಕಾಲ ಪ್ರಾಣದ ಆಡಳಿತಕ್ಕೆ ಸೇರಿದ್ದು. ಪ್ರಾಣಿಗೆ ಬಾರಕೋಲು ಮಾತ್ರ ಸರಿದಾರಿ ಹಿಡಿಸುವದು. ಅವನು ನೋಡಿಯೂ ಕಲಿಯನು, ಕೇಳಿಯೂ ಕಲಿಯನು, ಅವನೇ ಮಾನಗೇಡಿ. ಮಾನಗೇಡಿಗೆ ಮೊಚ್ಚೆಯ ಪೆಟ್ಟುಬೇಕೆಂದು ಗಾದೆ ಹೇಳಿದ್ದು ವಾಸ್ತವಿಕವಾಗಿದೆ, ಸೂಕ್ತ ಕ್ರಮವೂ ಆಗಿದೆ. ಗಾದೆಯ ಮಾತು ವೇದಕ್ಕೆ ಸಮಾನವೆನಿಸಿದ್ದು ಇಂಥ ಗಾದೆಗಳಲ್ಲಿ ಹುದುಗಿದ ಆಳವಾದ ಅದ್ಭುತ ಅರ್ಥದಿಂದಲೇ ಎಂದು ಕಂಡುಬರುತ್ತದೆ.

‘ಹಸಿವಾದರೆ ಭಿಕ್ಷಾನ್ನಗಳುಂಟು, ತಂಗಲು ಹಾಳುದೇಗುಲವುಂಟು’ ಎಂದು ಅಕ್ಕಮಹಾದೇವಿ ಹೇಳಿದರೆ, ಠಕ್ಕಮಹಾದೇವಿಯೂ ಮಾತಿನ ಭರದಲ್ಲಿ ಹಾಗೆ ಹೇಳುವುದುಂಟು.

ಮನೆ ಕಟ್ಟಿದವನಿಗೆ ಒಂದೇ ಮನೆ,
ಮನೆಯಿಲ್ಲದವನಿಗೆ ನಾನಾ ಮನೆ

ಬಾಡಿಗೆಯ ಮನೆಯಲ್ಲಿದ್ದವನು ಸಕಾಲಕ್ಕೆ ಬಾಡಿಗೆ ಕೊಡದಿದ್ದರೆ ಮನೆಯವನು ಅವನನ್ನು ಅಲ್ಲಿಂದ ಓಡಿಸಬೇಕಾಗುವದು. ಆದರೆ ಅವನು ಆ ಮನೆಯಲ್ಲಿ ತಳವೂರಿ ಕುಳಿತುಕೊಳ್ಳುವ ಎತ್ತುಗಡೆ ನಡೆಸುತ್ತಾನೆ. ಅದು ಸಾಧಿಸಿದರೆ ಬಾಡಿಗೆ ಮನೆ ಬಿಟ್ಟು ಬಾಡಿಗೆಯಿಲ್ಲದ ಮನೆಗೆ ಸಾಗಬೇಕಾದೀತು.

‘ಸುಳ್ಳು ಸುದ್ದಿ ಹೇಳಿ ಉಳ್ಳಿಕ್ಕೆ ಬಂದರು’. ಒಂದು ಸುಳ್ಳು ನುಡಿಯನ್ನು ನೂರುಸಾರೆಯೋ ಸಾವಿರಸಾರೆಯೋ ಹೇಳಿದರೆ ಅದು ಸತ್ಯ ಸಂಗತಿಯೆನಿಸುತ್ತದೆಂದು ಬಲ್ಲವರು ಹೇಳುತ್ತಾರೆ. ಪಿಂಜಾರ ಕೂಸು ಅರಮನೆಯಲ್ಲಿ ಬೆಳೆದರೂ ಅರಳಿ ಹಿಂಜುವ ಆಟ ಆಡಲಿಕ್ಕೆ ಬಿದರಿನ ಬಿಲ್ಲೇ ಬೇಡುವದು. ನೂರಕ್ಕೆ ನೂರು ಸುಳ್ಳು ಹೇಳುವವನನ್ನು ಬಲ್ಲವರು ಅವನ ಮಾತಿನ ಹಿಂದೆ ಅಡಗಿರುವ ಸತ್ಯಾಂಶವನ್ನು ಸಹಜವಾಗಿ ಗ್ರಹಿಸುತ್ತಾರೆ. ಆದರೆ ಮಹಾಸುಳ್ಳನ ಮೋಡಿಯನ್ನು ಅರ್ಥಯಿಸುವುದು ಅದಕ್ಕೂ ಕಠಿಣ ಕೆಲಸ. ಅಂತೆಯೇ ಹೇಳುತ್ತಾರೆ. ‘ಟೊಳ್ಳು ಮಾತು ಸುಳ್ಳಿಗಿಂತ ಕಡೆ’.

ಸಹಜವಾಗಿ ಕೆಲಸ ಸಾಧಿಸುವಂತಿದ್ದರೆ ಸುಲಭವಾದ ಸುಳ್ಳು ಬಳಸಬೇಕಾಗುವದು. ಕೊನೆಯಲ್ಲಿ ಎಲ್ಲಿಯದೋ ಎಳೆತಂದ ಟೊಳ್ಳುನುಡಿಯಾಡಿ ಕೆಲಸ ಸಾಧಿಸಲು ಅಣಿಯಾಗುವುದುಂಟು. ಸತ್ಯವೇ ಇರಲಿ, ಮಿಥ್ಯವೇ ಇರಲಿ, ಇಲ್ಲವೆ ಟೊಳ್ಳೇ ಇರಲಿ ಅದಕ್ಕೆ ಬಾಯಿಯೇ ಬಾನುಲಿ. ಆ ಬಾನುಲಿಯ ಬೆಂಬಲವಿದ್ದರೆ ಗೆದ್ದನೆಂದು ತಿಳಿಯಬೇಕು.

ಬಾಯಿ ಉಳ್ಳೋರು ಬರದಲ್ಲಿ ಗೆದ್ದರು
ಬಾಯಿ ಇದ್ದವನೇ ಬಲ್ಲಿದ

ತಾಯಿಯಿರಬೇಕು ಇಲ್ಲವೆ ಬಾಯಿ ಇರಬೇಕು. ತಾಯಿಯಿಲ್ಲದವನಿಗೆ ಬಾಯಿಯೇ ಗತಿ. ತಾಯಿಯಿದ್ದರೆ ಬಾಯಿ ವಕೀಲಿ ಮಾಡುವ ಕಾರಣವೇ ಇಲ್ಲ. ಒಂದು ಪ್ರಸಂಗದಲ್ಲಿ ‘ಹೇನಿಗಾಗಿ ತಲೆಬೋಳಿಸಿಕೊಳ್ಳುವುದು ಕ್ಷಮ್ಯವಾದೀತು, ಆದರೆ ಹೀನಸುಳಿ ಬೋಳಿಸಿದರೂ ಹೋಗದು’ ಎಂಬುದನ್ನು ಗಮನಿಸಬೇಕಲ್ಲವೇ? ಹೇನು ಬರಮಾಡಿಕೊಂಡಿದ್ದು, ಹೀನಸುಳಿ ಬರುವಾಗ ತಂದದ್ದು. ಹೊರಗಿನಿಂದ ಬಂದುದನ್ನು ಹೋಗಲಾಡಿಸುವುದು ಬಿಗಿಯಲ್ಲ. ಆದರೆ ಒಳಗಿನಿಂದ ಮೂಡಿದ್ದನ್ನು ನೀಗಲಾಡಿಸುವುದು ತುಂಬ ಬಿಗಿ. ಆದ್ದರಿಂದ ಹೊರಗಿನ ಹೇನಿಗೆ ಆಸ್ಪದವಿಲ್ಲದಂತೆ, ಒಳಗಿನ ಸುಳಿಗೆ ಮನಹರಿಸದಂತೆ ಮಾಡುವ ದಾರಿಯನ್ನು ಹುಡುಕಿಕೊಳ್ಳಬೇಕು.

ಹುಡುಕಿದವನಿಗೆ ಸಿಕ್ಕೀತು, ತುಡುಕಿದವನಿಗೆ ದಕ್ಕೀತು ಅಂಥ ಪರಮೋಪಾಯ ಯಾವುದು? ಇದ್ದುದನ್ನು ಮರೆತು, ಇಲ್ಲದ್ದನ್ನು ತೆರೆಯುವ ದಾರಿ ಒಂದಿದೆ. ಅದು ಯಾವುದೆಂದರೆ,

‘ಶರಣ ಸಂಗವಿದ್ದರೆ ಕೈಲಾಸವೇನು ಭೂಲೋಕವೇನು?’ ಭೂಲೋಕವನ್ನೇ ಕೈಲಾಸವನ್ನಾಗಿ ಮಾರ್ಪಡಿಸುವ ಶಕ್ತಿ ಶರಣರ ಸಂಗದಲ್ಲಿ ಇದ್ದಂತಾಯಿತು. ಶರಣರೆಂದರೆ, ಶರಣು ಮಾಡುವವರೆಲ್ಲ ಶರಣರಲ್ಲ. ‘ಬಾಯಲ್ಲಿ ಬೆಣ್ಣಿ, ಕೈಯಲ್ಲಿ ಟೊಣ್ಣಿ’ ಇರಬಹುದಾಗಿದೆ. ಬಾಯಿಯೊಂದನ್ನೇ ನೋಡದೆ ಕೈಯನ್ನು ನೋಡುತ್ತಿರಬೇಕು. ಆ ಬಳಿಕ ಮುಂದಿನ ಕೆಲಸ. ‘ರೋಗಕ್ಕೆ ಮದ್ದುಂಟು, ಗುಣಕ್ಕೆ ಮದ್ದಿಲ್ಲ’ ಎಂದು ಹಿಂಜರಿಯಬೇಕು, ದೂರ ಸರಿಯಬೇಕು. ಸಟಿಗಾರನ ಮಾತು ದಿಟವಾಗಿದ್ದರೂ ನಂಬರು. ಅಂದರೆ ನಂಬಲಿಕ್ಕಾಗದು. ‘ಸತ್ಯವಂತನ ಹೆಂಡತಿ ಬತ್ತಲೆ’ಯಂತೆ. ಅದಕ್ಕಾಗಿ ಬತ್ತಲೆ ಇದ್ದವಳ ಗಂಡನನ್ನು ಶೋಧಿಸಬೇಕೆಂದಾಯಿತು.

ಕೊರಳೊಳಗಿನ ಲಿಂಗದ ಗುದ್ದೆ ನೋಡಿ ಶರಣನೆಂದು ಬಗೆದರೆ ಮೋಸ ಹೋಗುವ ಸಂಭವವುಂಟು. ಶರಣನಂತೆ ಕಂಡವನು ಶೆಟ್ಟಯೂ ಇರಬಹುದು. ಶೆಟ್ಟಿ ಸವ್ವಾಸೇರು ಲಿಂಗ ಅಡೀಸೇರು’ ಆ ಲೆಕ್ಕದಿಂದ ಶೆಟ್ಟಿ ಇಮ್ಮಡಿ ಶರಣನೆನಿಸಬಹುದಾಗಿದೆ. ಶರಣ ಸಹವಾಸವಾಯಿತು, ಸತ್ಯ ಸಂಗವಾಯಿತು. ಆದರೆ ಅದರಿಂದ ಬರುವ ಗಳಿಕೆಯೇನು? ದೊರಕುವ ಮಹತ್ತೇನು? ಮೊಟ್ಟ ಮೊದಲು ಕಲಿತುಕೊಳ್ಳುವ ಪಾಠ ಯಾವುದು?

‘ಮುಂದೆ ಹೊಗಳಬಾರದು, ಹಿಂದೆ ತೆಗಳಬಾರದು’. ಈ ಮಾತು ಹೆರರೊಡನೆ ಇಡಬೇಕಾದ ಸಂಬಂಧವನ್ನು ಕುರಿತದ್ದು. ಅದೇ ಮಾತನ್ನು ತನಗೆ ಸಂಬಂಧಿಸಿಕೊಳ್ಳದಿದ್ದರೆ ಪ್ರಯೋಜನವೇನು? ಆಗ ‘ಆತ್ಮ ಸ್ತುತಿ, ಪರನಿಂದೆ ಹೊಲ್ಲ’ ಎಂಬ ಸೊಲ್ಲು ಮೈಗೂಡುತ್ತದೆ.

ಮಹಾಕಾಲಪ್ರವಾಹದಲ್ಲಿ ಶತಮಾನಕೊಂದಾದರೂ ದಿವ್ಯಗಳಿಗೆಯೋ, ದೇವ ಮುಹೂರ್ತವೋ ಬರುತ್ತಿರುವುದನ್ನು ಇತಿಹಾಸಾವಲೋಕನದಿಂದ ತಿಳಿಯುತ್ತದೆ. ಅಂಥಗಳಿಗೆ ಅಥವಾ ಮುಹೂರ್ತ ಸಂಗಳಿಸಬೇಕಾದರೆ, ಅದರ ಸಲುವಾಗಿ ಮೊಟ್ಟಮೊದಲು ಆಶೆ ಹುಟ್ಟುತ್ತದೆ; ಆಶೆ ಅಪೇಕ್ಷೆಯಾಗುತ್ತದೆ. ಮನದ ಆಶೆಯು ಹೃದಯದ ಅಭೀಪ್ಸೆಯಾಗುತ್ತದೆ. ಆಗ ಆ ದಿವ್ಯಗಳಿಗೆ ಭೂಮಿಗಿಳಿಯಲು ಅಣಿಯಾಗುತ್ತದೆ, ಅದೇ ನಿಯತಿಯ ಗರ್ಭಧಾರಣೆ. ಅದಕ್ಕೆ ನವಮಾಸ ತುಂಬಿದ ಬಳಿಕ ಶಿಶುವಿನ ಪುಣ್ಯದರ್ಶನವಲ್ಲವೇ? ಗರ್ಭಿಣಿಯ ನವಮಾಸವಾಗಲಿ, ರಾಮರ ೧೪ ವರ್ಷದ ವನವಾಸವಾಗಲಿ ಒಂದು ಬಗೆಯ ಮೃತ್ಯುಹಾಸವೇ ಸೈ. ಜನಾಂಗವು ಗರ್ಭಿಣಿಯಂತೆ ನವಮಾಸಗಳನ್ನು ಕಳೆಯುವಾಗ ಪಥ್ಯದೂಟ, ಮಿತಾಹಾರ, ಸುಶ್ರವಣ ಮಾಡಬೇಕಾಗುತ್ತದೆ. ಅವುಗಳಿಗೆಲ್ಲ ಮಿಗಿಲಾದ ನೋಂಪಿಯನ್ನೂ ಆಚರಿಸಬೇಕಾಗುತ್ತದೆ. ನೋಂಪಿಯೆಂದರೇನು – ಎಂಬುದನ್ನು ಬಲ್ಲವರ ಶಬ್ದಗಳಲ್ಲಿ ಹೇಳಬೇಕಾದರೆ,

ಆತ್ಮಸ್ತುತಿ, ಪರನಿಂದೆಬೇಡ,
ಮುಂದೆ ಹೊಗಳಬೇಡ, ಹಿಂದೆ ತೆಗಳಬೇಡ

ಇವುಗಳಿಗೆ ಜೋಡಿಸಬಲ್ಲ ಇನ್ನೊಂದು ವಿಷಯವಿದೆ, ಆತ್ಮ ತಿರಸ್ಕಾರವೂ ಬೇಡ. ‘ಎನಗಿಂತ ಕಿರಿಯರಿಲ್ಲ’ ಎಂದ ಬಸವಣ್ಣನೇ ಇನ್ನೊಂದು ಕಡೆ ಹೇಳುತ್ತಾನೆ. ‘ಎನ್ನಲ್ಲಿ ಹುರುಳಿಲ್ಲವಯ್ಯ ಅತ್ತೀ ಹಣ್ಣು ಬಿಚ್ಚಿನೋಡಿದರೆ ಹುಳುಗಳೇ’ ಒಂದು ವಿಶ್ವದ ಮುಂದೆ ನಾನು ತೀರ ಕಿರಿಯನೆಂಬ ಭಾವವಿರುವುದರಿಂದ ಎನಗಿಂತ ಕಿರಿಯರಿಲ್ಲ ಎನ್ನುತ್ತಾನೆ. ಕಿರಿಯನೆಂದರೆ ಕಿಗ್ಗಳನೆಂದಲ್ಲ, ಅತ್ತೀ ಹಣ್ಣಿನ ಉದಾಹರಣೆ ಬೇರೊಂದು ಅರ್ಥದಲ್ಲಿ ಬಳಸಲಾಗಿದೆ, ತನ್ನೊಳಗಿರುವ ಅಂಥ ಗುಣಗಳನ್ನು ಕಂಡುಕೊಂಡವನು ಮಾತ್ರ ಹಾಗೆ ಹೇಳಬಲ್ಲನು. ಅದು ಆತ್ಮ ತಿರಸ್ಕಾರವಲ್ಲ, ದೊಡ್ಡತನದ ಇನ್ನೊಂದು ದರ್ಶನ. ಈ ಎಲ್ಲ ಸರಂಜಾಮದ ಸಿದ್ಧತೆ ಯಾದಾಗ ದಿವ್ಯಗಳಿಗೆ ಸನ್ನಿಹಿತವಾಗುತ್ತದೆ. ಅದಕ್ಕಾಗಿ ತನ್ನ ಬಗೆಗೆ, ಇನ್ನೊಬ್ಬರ ಬಗೆಗೆ ಹೊಗಳಿಕೆಯೂ ಬೇಡ, ತೆಗಳಿಕೆಯೂ ಬೇಡ ಅನ್ನುವಂತೆ ‘ಮುಂದೆ ಹೊಗಳಬೇಡ, ಹಿಂದೆ ತೆಗಳಬೇಡ’ ಎಂದಿದೆ ಜನಪದ. ಅದೊಂದು ಗಾದೆ ಆಗಿ ಗದ್ದುಗೆಯೇರಿ ನಿರಂತರ ಆಳಿಕೆ ಕೈ ಕೊಂಡಿದೆ.

ಒಕ್ಕಲುತನ ಮಾಡಲಿ, ನೇಕಾರಿಕೆ ನಿರ್ವಹಿಸಲಿ, ಕೂಲಿಯನ್ನೇ ಕೈಕೊಳ್ಳಲಿ, ವ್ಯಾಪಾರವನ್ನೇ ಸಾಗಿಸಲಿ. ಏನು ಮಾಡಿದರೂ ಆ ಉದ್ದಿಮೆಗೆ ಒಂದೊಂದು ನೀತಿ ರೀತಿ ಪದ್ಧತಿ ಇರುತ್ತವೆ, ಆ ಕ್ರಮದಲ್ಲಿ ಸಾಗಿದರೆ ಸುಗಮತೆ ಇದೆ. ಸಲ್ಲದ ದಾರಿ ಹಿಡಿದರೆ ಅಲ್ಲದ ಸ್ಥಳಕ್ಕೆ ಒಲ್ಲದ ಸ್ಥಳಕ್ಕೆ ಕೊಂಡೊಯ್ಯುತ್ತದೆ.

ಬಿಕ್ಕಿ ಬಿಕ್ಕಿ ಅತ್ತರೆ ಬೀಸೂಕಲ್ಲು ತಿರುಗುವದೇ?’
ಮುಕುಳಿಯ ಮೇಲೆ ಹೊಡೆದರೆ,
ಬಾಯೊಳಗಿನ ಹಲ್ಲು ಉದುರುವದೇ?’

ಕಲ್ಲು ಎಂದು ಬಗೆದರೆ ಕಲ್ಲು, ದೇವರೆಂದು ಬಗೆದರೆ ದೇವರು. ‘ಬಿದ್ದ ಕಲ್ಲು ಅಗಸನದು; ಎದ್ದ ಕಲ್ಲು ಪೂಜಾರಿಯದು’. ಒಬ್ಬನು ದೇವನನ್ನು ಕಲ್ಲೆಂದು ಬಗೆಯುತ್ತಾನೆ; ಇನ್ನೊಬ್ಬನು ಕಲ್ಲನ್ನು ದೇವನೆಂದು ಭಾವಿಸುತ್ತಾನೆ. ಯಾರದು ತಪ್ಪು? ತಪ್ಪು ಹುಡುಕಿದರೆ ಇಬ್ಬರದೂ ತಪ್ಪು. ಒಪ್ಪು ಹುಡುಕಿದರೆ ಇಬ್ಬರದೂ ಒಪ್ಪು.

ಹಾಲಿನಿಂದ ಆವಿನ ಬಣ್ಣ ತಿಳಿಯದು
ರಕ್ತದಿಂದ ವ್ಯಕ್ತಿಯ ಗುಣ ಪರೀಕ್ಷೆ ಆಗದು

ಬುಗ್ಗಿಯ ನೀರು ಜಿಗಿದು ಬರುತ್ತದೆ, ಬಾವಿಯ ನೀರು ಹಗ್ಗದಿಂದ ಎಳೆದು ತರಬೇಕಾಗುತ್ತದೆ. ಶಾಸ್ತ್ರದ ಅಧ್ಯಯನವು ಕದಿಯಲಿಕ್ಕೆ ಕರೆದೊಯ್ಯುವದೇ? ಕನಸಿನಲ್ಲಿ ಕಂಡ ಗಂಡ ಎಚ್ಚರದಲ್ಲಿ ಕಾಣಸಿಗುವನೇ? ಎಚ್ಚರದಲ್ಲಿ ಕಾಣಿಸಲಿ ಬಿಡಲಿ, ಆದರೆ ಕನಸಿನಲ್ಲಿ ಕಂಡದ್ದು ಸುಳ್ಳಲ್ಲ. ಸುಳ್ಳಲ್ಲವೆಂದರೆ, ಹೆಂಡತಿಗೆ ಹಿಟ್ಟು ಬಟ್ಟೆ ಏಕೆ ಕೊಡಲಿಲ್ಲ? ಅದೇ ಮಾತನ್ನು ಬೇರೊಂದು ಗಾದೆ ಹೇಳಿದ್ದು ಹೀಗೆ-

ಸತ್ತ ಗಂಡ ಸ್ವಪ್ನಕ್ಕೆ ಬಂದರೆ ಹಿಟ್ಟು ಬಟ್ಟೆ ಕೊಟ್ಟಾನೇ?’
ಮುಖ ನೋಡಿದರೆ ಮನಸ್ಸು ತಿಳಿಯುತ್ತದೆ

ಅಹುದು, ಮುಖವೆಂದರೆ ಮನುಷ್ಯನೆಂಬ ಗ್ರಂಥಕ್ಕಿರುವ ಪರಿವಿಡಿ. ಪುಸ್ತಕದಲ್ಲಿ ಸಂಗಳಿಸಿದ ವಿಷಯಗಳ ವಿವರಣೆಯನ್ನು ತೀರ ಸಂಕ್ಷೇಪವಾಗಿ ಪರಿವಿಡಿ ಅಳವಡಿಸಿರುತ್ತದೆ. ಅದರಂತೆ ಮುಖದಲ್ಲಿ ಮನುಷ್ಯನ ಅಂತರಂಗದ ಗುಣವಿಶೇಷಗಳು ಕೆಲವೇ ಗೆರೆ, ಬಣ್ಣ ಕುಳಿಗಳಿಂದ ರೇಖಿತವಾಗಿರುತ್ತವೆ.

ಸಾಯುತ್ತೇನೆ, ಸಾಯುತ್ತೇನೆ ಎಂದು ಬಡಬಡಿಸುತ್ತಿರುವ ರೋಗಿಯ ಮುಖವೇ ಹೇಳುತ್ತದೆ – ಏನಾದರೂ ತಿನ್ನಲು ಕೊಡಿರಿ ಎಂದು ಅದೇ ವಿಷಯವನ್ನು ಗಾದೆ ತನ್ನದೇ ಆದ ರೀತಿಯಲ್ಲಿ ಹೇಳುತ್ತದೆ.

ಸಾಯುತ್ತೇನೆ, ಸಾಯುತ್ತೇನೆ ಎಂದು
ಸಾವಿರ ಕೋಳಿ ಮುಗಿಸಿದರು

ಗಾದೆಗಳಲ್ಲಿ ಬರುವ ವಿಶಿಷ್ಟ ನೀತಿಯನ್ನು ಹೇಳಿ ಅಥವಾ ಬರೆದು ಮುಗಿಸಲು ಯಾರಿಗೆ ಸಾಧ್ಯ? ಅದೊಂದು ಮಾರವಾಡಿಯ ಮುಂಡಾಸು. ಸಾಕೆನ್ನುವವರೆಗೆ ಸುತ್ತಿಕೊಳ್ಳುವುದು, ಉಳಿದುದನ್ನು ಗುಂಡಾಳಿ ಮಾಡಿ ತಲೆಗೆ ತುರುಕಿ ಹೊರಡುವುದು. ಇದೂ ಒಂದು ಗಾದೆಯ ಗಾರುಡಿಯೇ ಸರಿ.