ಸಹಜ ದೃಷ್ಟಿಗೆ ನಿಷಿದ್ಧವೆನಿಸಿದರೂ ಕೆಲವು ವಿಷಯಗಳು ಅನಿಷಿದ್ಧವೆಂದು ಘೋಷಿಸಿದಂತೆ. ಕೆಲವು ವಿಷಯಗಳು ವಾಸ್ತವಿಕವಾಗಿ ಅನಿಷಿದ್ಧವೆನಿಸಿದರೂ ಅವು ನಿಷಿದ್ಧವೆಂದು ಗಾದೆಗಳು ತೀರ್ಮಾನಿಸಿವೆ. ಈ ಕ್ರಮವು ಒಂದು ರೀತಿಯಿಂದ ಪ್ರಗತಿಪರವೇ ಆಗಿದೆ. ನಿಷಿದ್ಧವೆನ್ನುತ್ತ ಕುಳಿತರೆ ಯಾವುದೂ ಅನಿಷಿದ್ಧವೆನಿಸಲಾರದು. ಮೈಲಿಗೆ ಮುಡಚಟ್ಟು ಅನ್ನುತ್ತಿರುವವರಿಗೆ ಯಾವುದೂ ಮೀಸಲು ಅನಿಸುವದಿಲ್ಲ. ಯಾವುದೂ ಮುಡಚಟ್ಟು ಅಲ್ಲ, ಯಾವುದು ಮೀಸಲು ಎಂಬುದನ್ನು ನಿರ್ಣಯಿಸುವುದಕ್ಕೆ ದಾರಿಯೆಲ್ಲಿದೆ?

ದಂಡಿನಲ್ಲಿ ಕೆಟ್ಟಿದ್ದು ಹಾದರವಲ್ಲ,
ಬರದಲ್ಲಿ ಕದ್ದಿದ್ದು ಕಳವಲ್ಲ

ಹಾದರವಾಗಲಿ ಕಳವಾಗಲಿ ನಿಷಿದ್ಧ ವಿಷಯಗಳಲ್ಲಿ ಅಗ್ರಗಣ್ಯವಾಗಿವೆ. ಆದರೆ ಅವು ದಂಡಿನಲ್ಲಿ ಬರದಲ್ಲಿ ಕ್ರಮವಾಗಿ ಘಟಿಸಿದರೆ ಕ್ಷಮ್ಯವೆನಿಸಿ ಅನಿಷಿದ್ಧ ವಿಷಯಗಳಾಗಿಬಿಟ್ಟಿವೆ. ಬಲಾತ್ಕಾರಕ್ಕೀಡಾಗಿ ಧರ್ಮಾಂತರಗೊಂಡವರನ್ನು ಸ್ವಧರ್ಮದಲ್ಲಿ ಉಳಿಸಿಕೊಳ್ಳುವುದಕ್ಕೆ ದಾರಿತೋರಿದ ಈ ಗಾದೆಗಳನ್ನು ನಾವು ಶ್ಲ್ಯಾಘಿಸಬೇಕಾಗಿದೆ.

ಆಯಗಾರನ ಮನೆಯ ಎತ್ತು,
ಅರ್ಚಕನ ಮನೆಯ ಹೆಣ್ಣು ತರಬೇಡ

ಆಯಗಾರನಲ್ಲಿ ಬೆಳೆದ ಎತ್ತು, ಅರ್ಚಕನಲ್ಲಿ ಬೆಳೆದ ಹೆಣ್ಣು ನಿಷಿದ್ಧವೆಂದು ಗಾದೆ ಹೇಳಿದ ಮಾತ್ರಕ್ಕೆ ಆ ಎತ್ತು ಆ ಹೆಣ್ಣು ರೂಪುಗೊಳ್ಳುವುದೆಲ್ಲಿ? ಎತ್ತು ಬೇರೊಬ್ಬ ಆಯಗಾರನ ಮನೆಯಲ್ಲಿಯೇ ದಕ್ಕುವಂತೆ, ಆ ಹೆಣ್ಣು ಬೇರೊಬ್ಬ ಅರ್ಚಕನ ಮನೆಯಲ್ಲಿಯೇ ದಕ್ಕುವದು. ಅಯಗಾರ ಮತ್ತು ಅರ್ಚಕ ಅವರಿಗೆ ಅನಿಷಿದ್ಧವೆನಿಸಿದ ಎತ್ತು ಹಾಗೂ ಹೆಣ್ಣು ಉಳಿದವರಿಗೆಲ್ಲ ನಿಷಿದ್ಧ ಪ್ರಾಣಿಗಳೇ ಸರಿ. ‘ಹುಗ್ಗಿ ಎಂಜಲೋ ರಾಮಾ ನಿನಗೆ | ಹೋಳಿಗೆಂಜಲೋ ರಾಮಾ ನಿನಗೆ | ಮೀಸಲ ಮೀಸಲದೊಳಗ ಯಾವುದು ಮೀಸಲಾ | ರಾಮರ ಮುಂದ ಹೇಳಿಕುಡವ್ವ ಯಾವುದು ಮೀಸಲಾ’ ಎಂದು ಗೊಂದಲಿಗರ ಹಾಡು ಪ್ರಶ್ನಿಸುತ್ತಿದೆ. ಆ ಪ್ರಶ್ನೆಯನ್ನು ಪ್ರತಿಭಟಿಸಿ ನಿಲ್ಲುವವರೆಲ್ಲರೂ ಉತ್ತರಕುಮಾರರೇ ಅಹುದು. ಹೆಸರು ಉತ್ತರಕುಮಾರ, ಗುಣ ನಿರುತ್ತರ ಕುಮಾರ!

ಅತ್ತಿಗೆ ತವರಲ್ಲ, ಹಿತ್ತಾಳಿ ಒಡವೆಯಲ್ಲ

ಅತ್ತಿಗೆಯ ಹಿರಿತನವಿದ್ದ ತವರು ಆ ಮನೆಯ ಹೆಣ್ಣುಮಕ್ಕಳಿಗೆ ಒಂದು ವಿಧದಲ್ಲಿ ನಿಷಿದ್ಧವಾದಂತೆ, ಚಿನ್ನದಂತೆ ಕಾಣುವ ಹಿತ್ತಾಳಿಯ ಒಡವೆ ಇನ್ನೊಂದು ವಿಧದಲ್ಲಿ ನಿಷಿದ್ಧವಾಗಿದೆ. ಅತ್ತಿಗೆಯಾಗಲಿ, ಹಿತ್ತಾಳಿಯಾಗಲಿ ಮೂಲತಃ ನಿಷಿದ್ಧ ವಸ್ತುಗಳೇನಲ್ಲ. ಆದರೆ ಅವೆರಡರ ಸ್ಥಾನಮಾನಗಳ ವ್ಯತ್ಯಾಸವಾದಲ್ಲಿ ನಿಷಿದ್ಧ ವಸ್ತುಗಳಾಗಿಬಿಡುತ್ತವೆ. ‘ಬೂಟಾಟಿನ ದಾಸಯ್ಯನಿಗೆ ಮೈಯೆಲ್ಲ ನಾಮ’. ಅಚ್ಚದಾಸಯ್ಯನಿಗೆ ವಾಡಿಕೆಯಂತೆ ಕೆಲವು ನಾಮಗಳ ಅಗತ್ಯವಿರುತ್ತದೆ. ಆದರೆ ದಾಸಯ್ಯನ ವೇಷ ಹಾಕುವ ಬೂಟಾಟಿನ ದಾಸಯ್ಯನಿಗೆ ವಾಡಿಕೆಯ ನಾಮಗಳು ಸಾಲದೆ ಹೋಗುವವು. ಅವನ ಮೈಗಿಂತ ನಾಮಗಳು ಮಿಗಿಲಾಗಿರುವವು. ಅಂಥ ದಾಸಯ್ಯ ನಿಷಿದ್ಧ ವರ್ಗಕ್ಕೆ ಸೇರಿದ ಬೂಟಾಳಿಯೆಂದು ಯಾರಿಗಾದರೂ ಕಂಡುಬರುವದು.

ದನಗಳೇ ತಮ್ಮಾಸ್ತಿಯೆಂದು ಭಾವಿಸಿದ ಕೃಷಿಕರು ಹಯನಿಗಾಗಿ ಎಮ್ಮೆಯನ್ನು, ಗೆಯ್ಮೆಗಾಗಿ ಎತ್ತನ್ನು ಕೊಂಡುಕೊಳ್ಳುವ ಸಮಯದಲ್ಲಿ ಚೌಕಾಸಿ ಮಾಡುವುದನ್ನು ಮರೆಯುವದಿಲ್ಲ. ಮುಖ ಮಾತ್ರ ನೋಡಿ ದನಕ್ಕೊಳ್ಳುವದಿಲ್ಲ. ಬಾಲವನ್ನೂ ನೋಡಿ ನಿರ್ಧಾರಕ್ಕೆ ಬರುತ್ತಾರೆ.

ಎಳೆ ಬಾಲದ ಎಮ್ಮೆ ಇರಬೇಕು,
ಮುದಿ ಬಾಲದ ಎತ್ತು ಇರಬೇಕು

ಹಾಗಿಲ್ಲದ ಎತ್ತು ಎಮ್ಮೆಗಳು ನಿಷಿದ್ಧವೆನಿಸುವವು. ಆದರೆ ಎಳೆಬಾಲದ ಎಮ್ಮೆ, ಮುದಿಬಾಲದ ಎತ್ತು ಇದ್ದರೆ ಅನಿಷಿದ್ಧವೆಂದು ಬಗೆದು ವ್ಯವಹಾರ ಮುಗಿಸಿಬಿಡುತ್ತಾರೆ. ‘ಕತ್ತೆ ಮೇದಲ್ಲಿ ಮತ್ತೆ ಮೇವಿಲ್ಲ’ ಇದರರ್ಥ – ಹುಲ್ಲು ಗದ್ದೆ ಹೊಕ್ಕ ಕತ್ತೆ ಅಲ್ಲಿಯ ಹುಲ್ಲನ್ನೆಲ್ಲ ಮೇದು ಆಗುಮಾಡುತ್ತದೆಂದಲ್ಲ. ಕತ್ತೆ ಮೇದುಹೋದ ಆ ಹುಲ್ಲು ಗದ್ದೆಯಲ್ಲಿ ಇನ್ನಾವ ದನಗಳೂ ಮೇಯಲಾರವು. ಕತ್ತೆ ಎಂಜಲು ಮಾಡಿದ ಹುಲ್ಲುಗಾವಲು ದನಗಳಿಗೆ ನಿಷಿದ್ಧವೆನ್ನಬೇಕೇ? ಹುಲ್ಲುಗಾವಲು ಕತ್ತೆಯ ಎಂಜಲಿಗಿಂತ ಅದರ ಗಿಂಜಲದ ವಾಸನೆ ಹತ್ತಿದ ಉಳಿದ ದನಗಳು ಬಾಯಿ ಹಾಕದೆ ದೂರ ಹೋಗುತ್ತವೆ.

ಒಂದು ಸಂದರ್ಭದಲ್ಲಿ ಹಾವಿನ ಬಾಯಿಗೆ ಕಪ್ಪೆ ಸಿಲುಕಿ ಕಿರುಚ ಹತ್ತುತ್ತದೆ. ಅದರ ಕರುಣಾಸ್ವರವನ್ನು ಕೇಳಿ ಹಾದಿಹೋಕರು ಅಲ್ಲಿಗೆ ಬಂದು ಸತ್ಯಸಂಗತಿಯನ್ನು ಕಾಣುತ್ತಾರೆ. ಕಪ್ಪೆಯನ್ನು ಹಾವು ಹಿಡಿದದ್ದು ತನ್ನ ಹಸಿವೆ ತಣಿಸುವ ಸಲುವಾಗಿ, ಹಾವಿನ ಹಸಿವೆ ಹಿಂಗಬೇಕು, ಇಲ್ಲವೆ ಕಪ್ಪೆಯ ಜೀವ ಇಂಗಬೇಕು. ಹಾವಿಗೆ ಯಾವ ತೀರ್ಮಾನ ಹೇಳಬೇಕೆನ್ನುವುದೇ ಹಾದಿಹೋಕರಿಗೆ ತಿಳಿಯದಂತಾಗುತ್ತದೆ. ‘ಕೊಲ್ಲು ಅಂದರೆ ಕಪ್ಪೆಗೆ ಕೋಪ, ಬಿಡು ಅಂದರೆ ಹಾವಿಗೆ ಕೋಪ’. ಈ ಉಭಯ ಕೋಪಗಳಲ್ಲಿ ಯಾವುದು ಸೌಮ್ಯವೋ ಆ ಕೋಪಕ್ಕೀಡಾಗ ಬೇಕಾದೀತು. ಇಲ್ಲವೆ ಕಪ್ಪೆಯ ಜೀವವನ್ನೇ ಗಾಸಿಮಾಡಲು ಅಣಿಯಾದ ಹಾವನ್ನೇ ಕೊಂದು ಕಪ್ಪೆಯನ್ನು ಉಳಿಸಬಹುದಾಗಿದೆ. ಇಲ್ಲಿ ಮಾಡಬೇಕಾದ ಉಪಾಯ ನಿಷಿದ್ಧ ಅನಿಷಿದ್ಧವಾಗಿದೆ. ನಿಷಿದ್ಧಾನಿಷಿದ್ಧವಾಗುತ್ತದೆ.

‘ಎತ್ತಿನ ಹುಣ್ಣಿಗಾಗಿ ಕತ್ತೆಗೆ ಬರೆ’ ಎನ್ನುವುದಾಗಲಿ, ‘ಮುಕಳಿಯ ಮೇಲೆ ಹೊಡೆದರೆ ಬಾಯೊಳಗಿನ ಹಲ್ಲು ಬಿತ್ತು’ ಎನ್ನುವುದಾಗಲಿ ನಿಷಿದ್ಧವೆನಿಸಿದರೆ, ಮಾತಿನಲ್ಲಿ ಬೋಧಿಸುವ ಮಟ್ಟಿಗೆ ಅನಿಷಿದ್ಧವೇ ಆಗಿದೆಯೆಂದು ಕಂಡುಬರುತ್ತದೆ. ಅದೇ ಸಾಲಿನಲ್ಲಿ ‘ಎತ್ತಿಗೆ ಹೊಡೆದರೆ ಕುದುರೆ ಇರಿಯಬಂತು’ ಎಂಬ ಗಾದೆಯನ್ನೂ ಪವಣಿಸಬಹುದಾಗಿದೆ. ನಿಷಿದ್ಧ – ಅನಿಷಿದ್ಧಗಳನ್ನು ದಾಟಿ ನಿಷ್‌ಪ್ರಯೋಜಕದ ಕೆಲವು ಮಾತುಗಳನ್ನು ಮನಗಾಣಿಸುವ ಹಲವಾರು ಗಾದೆಗಳುಂಟು.

ನಾಯಿಗೆ ಕೆಲಸವಿಲ್ಲ, ಕೂಡಲಿಕ್ಕೆ ಸಮಯವಿಲ್ಲ

ಹಂದಿ ಹದಿನೈದು ಈದರೂ ಒಂದೂ ಹಯನಾಗಲಿಲ್ಲ

ನಿಷಿದ್ಧವು ಅನಿಷಿದ್ಧ ಆಗದೆ, ಅನಿಷಿದ್ಧವು ನಿಷಿದ್ಧ ಆಗದೆ ಹೊಸರುಳ್ಳಿಯಂತೆ ಬಣ್ಣ ಬದಲಿಸುವ ಪ್ರಸಂಗಗಳನ್ನು ಗಾದೆ ನಿಚ್ಚಳವಾಗಿ ಹೇಳುವದುಂಟು.

‘ಬಡವತ ಮುಂದೆ ಬಂಟ, ಬಲ್ಲಿದರ ಮುಂದೆ ಕುಂಟ’ ತಾಯಿ ತಂದೆಗಳು ತಮ್ಮ ಮಕ್ಕಳನ್ನು ಬೆಳೆಸುವ ಕ್ರಮದಲ್ಲಿ ನಿಷಿದ್ಧ ಅನಿಷಿದ್ಧಗಳನ್ನು ತಾರತಮ್ಯ ಅರಿತು ಬಳಸುವುದುಂಟು. ಮಕ್ಕಳೆಂದರೆ ಮಗನೂ ಅಹುದು, ಮಗಳೂ ಅಹುದು. ಅವರಲ್ಲಿ ಲಿಂಗಭೇದವಿರುವಂತೆ, ಶಿಕ್ಷಣ ಕ್ರಮದಲ್ಲಿ ವ್ಯವಸ್ಥಾಭೇದವೂ ಇರುವುದುಂಟು.

ಮಗಳನ್ನು ಹೊಗಳಿ ಬೆಳೆಸಬೇಡ,
ಮಗನನ್ನು ತೆಗಳಿ ಬೆಳೆಸಬೇಡ

ಯಾಕಂದರೆ ಹೆಣ್ಣು ಗಂಡುಗಳ ತನು ರಚನೆ ಒಂದೇಯಾದರೂ ಅಣುರಚನೆ ಮಾತ್ರ ಒಂದೇ ವಿಧವಾಗಿ ಇರುವದಿಲ್ಲ. ಗಂಡಿನ ಬಲಗೈಯಲ್ಲಿ ಸಾಮುದ್ರಿಕ ಗುರುತಿಸಿದಂತೆ, ಹೆಣ್ಣಿನ ಸಾಮುದ್ರಿಕ ಆಕೆಯ ಬಲಗೈಯಲ್ಲಿರದೆ ಎಡಗೈಯಲ್ಲಿ ಚಿತ್ರಿತವಾಗಿರುತ್ತದೆಂದು ಬಲ್ಲವರು ಹೇಳುತ್ತಾರೆ. ಮಗನನ್ನು ಹೊಗಳಿ, ಮಗಳನ್ನು ತೆಗಳಿ ಬೆಳೆಸಯಿಸುವವನ ಕ್ರಮ ವ್ಯರ್ಥವಾದೀತು. ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡಹಾಗೆ. ಕಾಣಿಸದ ಕೈಗೆ ಸಿಗದ ಗಾಳಿಯನ್ನು ಕೈಯಿಂದ ಗುದ್ದುವ ಯೋಜನೆಯಿಂದ ಮೈನೋವು ಮಾತ್ರ ಸಂಗಳಿಸಬಲ್ಲದು. ಗಾಳಿ ನಿಷಿದ್ಧ, ಕೈಪೆಟ್ಟು ಅನಿಷಿದ್ಧ. ಆದರೆ ಮೈನೋವು ಮಾತ್ರ ನಿಷಿದ್ದಾನಿಷಿದ್ಧವಲ್ಲವೇ? ‘ಗೆದ್ದರೆ ಆಡುವುದಕ್ಕೆ ಬಂದಿದ್ದೆವು; ಸೋತರೆ ನೋಡುವುದಕ್ಕೆ ಬಂದಿದ್ದೆವು’ ಎನ್ನುವ ಲೋಕೋಕ್ತಿ ಬೇರೊಂದು ಬಗೆಯ ನಿಷಿದ್ದಾನಿಷಿದ್ಧ.

ದನಿಯಿದ್ದವನು ಹಾಡಿದರೆ ರಂಜನವಾಗುತ್ತದೆನ್ನುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ದನಿಯಿದ್ದವನು ಅತ್ತರೂ ಚಂದ, ಅದು ಸಹ ಒಂದು ರಂಜನವೇ. ಹಾಡುವುದು, ಅಳುವುದು ಅನಿಷಿದ್ಧವೆನಿಸುವುದಕ್ಕೆ ನಿಷಿದ್ಧವಲ್ಲದ ದನಿ ಇದ್ದುದೇ ಕಾಣವಾಗುತ್ತದೆ.

ನರಿಯು ಜಾಣತನಕ್ಕೆ ಹೇಳಿಮಾಡಿಸಿದ ಕಾಡುಪ್ರಾಣಿ. ದುರ್ಬಲಯುತನ ಸೈರಣೆಯಂತೆ ದುರ್ಬಲನ ಜಾಣತನವೂ ಹಲವು ಸಾರೆ ಹುಸಿಗುಂಡು ಹಾರಿಸಿದಂತಾಗುತ್ತದೆ. ಅದಾವುದೋ ಪುಣ್ಯವಶದಿಂದ ನರಿಗೆ ಕೋಡು ಮೂಡಿದವೆಂದು ತಿಳಿಯೋಣ. ಆದರೆ ಅದರಿಂದ ನರರನ್ನು ಚದುರಿಸಲಿಕ್ಕಾಗುವುದೇ? ಹೆದರಿಸಲಿಕ್ಕಾಗುವುದೇ? ಕೊಂಬು ಕಾಣಿಸಿದ ಮಾತ್ರಕ್ಕೆ ನರಿ ಕ್ರೂರ ಪ್ರಾಣಿಯೆನಿಸದು. ನೆತ್ತರ ನೋಡಿದರೆ ಗೋತ್ರ, ಹಾಲು ನೋಡಿದರೆ ಆವಿನ ಬಣ್ಣ ತಿಳಿಯುವವೆಂದು ಯಾರು ಹೇಳುವರು? ಪದ ಬರೆಯಬಲ್ಲವನೆಂದ ಮಾತ್ರಕ್ಕೆ ಪಗಡಿಯಾಟದಲ್ಲಿ ಬಲ್ಲಿದನಾಗನು. ಪದ-ಪಗಡಿಯಾಟಗಳ ಉಗಮ ಸ್ಥಾನಗಳೇ ಬೇರೆ ಬೇರೆ ಆಗಿವೆ.

‘ಪೇಚಾಟದಲ್ಲಿ ಬಿದ್ದವನಿಗೆ ನೀಚಾಟವೇ ಗತಿ.’ ಕೈಲಾಗದವನೇ ಮೈಯೆಲ್ಲ ಪರಚಿಕೊಳ್ಳುವನು. ಗೆಲುವೆನೆಂಬ ಹೂಣಿಕೆತೊಟ್ಟು ಬಂದವನು ಪೇಚಾಟದಲ್ಲಿ ಸಿಕ್ಕುಬಿದ್ದರೆ ಗೆಲ್ಲುವ ಹೂಣಿಕೆಯ ಸ್ಥಳದಲ್ಲಿ ಸೋಲಬಾರದು ಎಂಬ ಹೇವ ಕಾಣಿಸಿಕೊಳ್ಳುತ್ತದೆ. ತಾನು ಗೆಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಎದುರಾಳಿಯನ್ನು ಗೆಲ್ಲಕೊಡಬಾರದೆನ್ನುವ ಹಾಗೂ ಎದುರಾಳಿಯಿಂದ ಸೋಲಬಾರದೆನ್ನುವ ಛಲ ನೀಚಾಟಕ್ಕೆ ಎಳೆದೊಯ್ಯುತ್ತದೆ.

‘ಬಯ್ದದ್ದೆಲ್ಲ ಹಲೇ ಎನಿಸದು, ಬೆಳೆಸಿದ್ದೆಲ್ಲ ಭಲೇ ಎನಿಸದು’, ಬಯ್ದು ಬಿರುನುಡಿ ಯಲ್ಲಿಯೇ ಬುದ್ಧಿವಾದ ಹುದುಗಿರುತ್ತದೆ. ತೆಂಗಿನ ಪರಟಿಯಲ್ಲಿ ಹುದುಗಿದ ಕೊಬ್ಬರಿಯಂತೆ. ಬೆಳೆಸಿದ ಉಬ್ಬುನುಡಿಯಲ್ಲಿಯೇ ಕೆಡುನುಡಿ ಅಡಗಿರುತ್ತದೆ. ಗೊರಲಿಯ ಮನೆಯಲ್ಲಿ ಅವೆತುಕೊಂಡ ಹುತ್ತಿನಹುಳದಂತೆ.

‘ಮೊದಲಿದ್ದವಳೇ ವಾಸಿ, ಎಬ್ಬಿಸಿದರೆ ಉಣ್ಣುತ್ತಿದ್ದಳು’ ಅಂದರೆ, ಈಗಿದ್ದವಳು ಹಿಂದು ಗಡೆಯವಳು, ಮುಂಚಿನವಳಂತೆ ಮುಸುಕುಹಾಕಿ ಸೆಟಗೊಂಡು ಮಲಗಿದವಳು, ಎಬ್ಬಿಸಿದರೂ ಉಣ್ಣುತ್ತಿದ್ದಿಲ್ಲವೆಂದಾಯಿತು. ಅದು ಕೊನೆಗೂ ಖೇದ ಪರ್ಯವಸಾಯ, ನಿಷಿದ್ಧಕ್ಕಿಂತ ತುಸು ಒಳ್ಳೆಯದು; ಅನಿಷಿದ್ಧ ಮಾತ್ರ ಅಲ್ಲವೇ ಅಲ್ಲ. ಅದಕ್ಕಾಗಿಯೇ ಅನ್ನುವುದು ‘ಹೆಂಡ ಮಂಡೆ ಗೇರಿದ್ದು ಕುಂಡಿ ಬಡಕೊಂಡರೂ ಇಳಿಯದು’. ಅಹುದೆಂದರೆ ಬಯ್ಯುವ, ಅಲ್ಲವೆಂದರೆ ಬಯ್ಯುವ ಗಸಣೆ ತಪ್ಪುವದಿಲ್ಲವೆಂದಾಗ ಅದು ನಿಷಿದ್ಧ ಅಷ್ಟೇ ಅಲ್ಲ, ಅನಿಷಿದ್ಧವೂ ಆಗಿದೆಯೆನ್ನದೆ ಗತಿಯಿಲ್ಲ.

ಹುಚ್ಚಿ ಮಾಡಿದ ಅಡಿಗೆಯೂ ಒಮ್ಮೊಮ್ಮೆ ರುಚಿಕಟ್ಟಾಗಿರುತ್ತದೆ. ಯಾವಾಗೆಂದರೆ ಎಚ್ಚವಿದ್ದ ಪ್ರಸಂಗದಲ್ಲಿ. ಆದರೆ ಅದು ಅರಿತು ಮಾಡಿದ ಅಡಿಗೆ ಅಲ್ಲ; ಮರೆತು ಮಾಡಿದ್ದೂ ಅಲ್ಲ. ಎಚ್ಚದ ಪುಣ್ಯದಿಂದ ಸಿದ್ಧವಾದ ಅಡಿಗೆ ರುಚಿಕಟ್ಟಾಗದೆ ಇನ್ನೇನಾದೀತು? ಸಾರು ಸಹ ಒಬ್ಬೊಬ್ಬರ ಕೈಗುಣದಿಂದ ಬೀರು ಆಗಿ ಪರಿಣಮಿಸುತ್ತದೆ. ಬೇಕಾಗಿದ್ದು ಸಾರು, ಆಗಿ ಕುಳಿತಿದ್ದು ಖೀರು. ಆದರೆ ಅತ್ತೆ ಮಾಡಿದ್ದೆಲ್ಲ ಒಳ್ಳೆಯದೇ. ಸಂಗಳಿಸಿದ ಕೆಡುಕಿನಲ್ಲಿಯೂ ಒಳ್ಳೆಯದೇ ಅಳವಟ್ಟಿರುತ್ತದೆ. ‘ಅತ್ತೆ ಒಡೆದ ಗಡಿಗೆ ಹಳೆಯದು’. ಆದರೆ ಅದೇ ಹಳೆಗಡಿಗೆ ಒಡೆಯುವುದಕ್ಕೆ ಸೊಸೆ ಕಾರಣಳಾಗಿದ್ದರೆ ಅದು ಹೊಸ ಗಡಿಗೆ ಅನಿಸುತ್ತಿತ್ತು!

ಒಂದೊಂದು ಪ್ರಸಂಗದಲ್ಲಿ, ನಿಷಿದ್ಧವೆನಿಸಿದ ವಸ್ತುಗಳೂ ಮೂಲೆಹಿಡಿದು ಕುಳ್ಳಿರುವದಿಲ್ಲ. ಗೌಡರ ಕೋಣ ಹಾರಲಾರದೆಂದು ಲೋಕಕ್ಕೆಲ್ಲ ಮನದಟ್ಟಾಗಿದ್ದರೂ ಅದು ಎಮ್ಮೆಯ ಬಳಿಗೆ ಹುಮ್ಮಸದಿಂದ ಬರುವುದನ್ನು ಬಿಡುವದಿಲ್ಲ. ಉಲುಕಿನಿಂದ ಹಾರುವುದಕ್ಕೆ ಬಂದಿತೆನ್ನ ಬೇಕೇ? ಅದೂ ಇಲ್ಲ. ಹಾರಬಲ್ಲ ಕೋಣವನ್ನು ತಡೆಯುವುದಕ್ಕೆ ಮಾತ್ರ ಅದು ಹೋರಾಡುತ್ತದೆ, ಆದ್ದರಿಂದಲೇ ಹೇಳಲಾಗುತ್ತದೆ-

‘ಗೌಡರ ಕೋಣ ತಾನೂ ಹಾರದು, ಇನ್ನೊಂದಕ್ಕೂ ಹಾರಗೊಡದು’ ತಾನು ನಿಷಿದ್ಧವಾದಂತೆ, ಇನ್ನೊಂದನ್ನೂ ನಿಷಿದ್ಧಗೊಳಿಸುವ ಎತ್ತುಗಡೆ ನಡೆಸುತ್ತದೆ.

ಗಂಗಾಳ ಕಳೆಯಿತೆಂದು ಯಾವನೋ ಕಣಿಯ ಕೇಳಲು ಹೋದನಂತೆ. ಕಣಿ ಹೇಳುವವನ ಮುಂದಿಟ್ಟು ಕೈಮುಗಿಯುವುದಕ್ಕೆ ದಕ್ಷಿಣೆ ಬೇಕಲ್ಲವೇ? ಅದಕ್ಕೊಂದು ಉಪಾಯ ಮಾಡಲಾಯಿತು. ಅದೇನೆಂದರೆ – ಕಣಿಗಾರನ ಮುಂದೆ ಚಂಬು ಇಟ್ಟು ಕೈಮುಗಿದನಂತೆ. ಗಂಗಾಳ ಕಳ್ಳನ ಪಾಲಾಯಿತು, ಚಂಬು ಸುಳ್ಳನ ಪಾಲಾಯಿತು. ಒಂದು ಕಳೆಯಿತು, ಇನ್ನೊಂದು ಕಳೆಯಲ್ಪಟ್ಟಿತು.

ಅಂತೂ ಇಂತೂ ಗಂಗಾಳ ಚಂಬು ಎರಡೂ ಮನೆಯಿಂದ ತೆರಳಿದವು. ಅವುಗಳೊಂದಿಗೋ ಅವುಗಳನ್ನು ಹಿಂಬಾಲಿಸಿಕೊಂಡೋ ಆತನ ಬುದ್ಧಿಯೂ ಹೊರಟುಹೋಗಿ ತುರುಮಂದಿಯಲ್ಲಿ ಮೆಲಕಾಡಿಸುತ್ತಿತ್ತು.

ಹೀಗೆ ಜನಪದದ ನಿತ್ಯ ವ್ಯವಹಾರಗಳಲ್ಲಿ ನಿಷಿದ್ಧ -ಅನಿಷಿದ್ಧಗಳು ಹಾಸು ಹೊಕ್ಕಾಗಿದ್ದಲ್ಲದೆ, ಅದಕ್ಕೊಂದು ಬಣ್ಣವನ್ನೂ ಒದಗಿಸಿ ಕಳೆತಂದಿವೆಯೆಂದು ಹೇಳಬಹುದಲ್ಲವೇ?