ಗಾದೆಗಳೆಂದರೆ ಜಾನಪದ ವೇದಗಳಿದ್ದಂತೆ. ಅವು ಬಹುತರವಾಗಿ ಇತ್ತೀಚಿನ ಬದುಕಿಗೆ ಹಿಡಿದ ಕನ್ನಡಿಯಾಗಿರಬಹುದು.
-ಲೇಖಕ

ಗೌಡ, ಕುಲಕರ್ಣಿಯರು ಹಳ್ಳಿಗೆ ಗ್ರಾಮಾಧಿಕಾರಿಗಳೆನಿಸುವರು. ಗೌಡನು ಬಡಿಗೆಯ ಬಂಟನಾದರೆ, ಕುಲಕರ್ಣಿ ಲೇಖನಿಯ ನೆಂಟ. ಮೊಂಡಬಡಿಗೆಗಿಂತ ಚೂಪ ಲೇಖನಿಯ ಗಾಯ ಬೇಗ ಮಾಯುವಂಥದಲ್ಲ. ಗಾಯ ಮಾಯ್ದರೂ ಕಲೆ ಹೋಗದು. ‘ಊರೂ ಸಾಕಾಯಿತು, ಗೌಡನೂ ಬೇಡವೆಂದ’ ಎನ್ನುವ ಗಾದೆಯನ್ನು ನೋಡಿದರೆ ಗೌಡನು ಹಳ್ಳಿಯಲ್ಲಿ ಉಳಿದುಕೊ ಎಂದರೆ ಉಳಿಯಬೇಕು, ಬೇಡವೆಂದರೆ ಮುಂದಿನೂರಿಗೆ ಕಂಬಿ ಕಿತ್ತಬೇಕು ಎನ್ನುವಂತಿದೆ.

ಹಸಿದ ಹಾರುವನನ್ನೂ ಉಂಡ ಮುಸ್ಲಿಮನನ್ನೂ ಕೆಣಕಬಾರದಂತೆ. ಬುದ್ಧಿಜೀವಿಯಾದ ಹಾರುವನು ಹಸಿದಾಗ ಆತನ ಜ್ಞಾನತಂತುಗಳು ಕೆರಳುವಂತೆ, ಶ್ರಮಜೀವಿಯಾದ ಮುಸ್ಲಿಮನು ಉಂಡಾಗ ಆತನ ರಟ್ಟೆಯ ಮಾಂಸಖಂಡಗಳು ಕೆರಳುತ್ತಿರಬಹುದೇನೋ. ಅವರಿಬ್ಬರನ್ನು ಬಿಟ್ಟರೆ, ಕೆಲ ಮಂಡರೋ ಬಂಡರೋ ಹಗಲು ಹನ್ನೆರಡು ತಾಸು, ವರ್ಷದ ಹನ್ನೆರಡು ತಿಂಗಳು ಹಸಿದ ಹಾರುವನಂತೆ, ಉಂಡ ಮುಸ್ಲಿಮನಂತೆ ಏಕಕಾಲಕ್ಕೆ ಕಂಡುಬರುವುದುಂಟು. ಆ ಮಾತು ಬೇರೆ.

ಹಳ್ಳಿಯ ನೂರಾರು ಮನೆತನಗಳಲ್ಲಿ ಕುಲಕರ್ಣಿ, ಪುರೋಹಿತ, ಉಪಾಧ್ಯ, ದೇಸಾಯಿ, ದೇಶಪಾಂಡೆ ಅವರಂಥವರ ನಾಲ್ಕೆಂಟು ಮನೆತನಗಳಿದ್ದರೆ ಬಹಳ ಆಯಿತು. ಆದರೆ ಅವರು ಹಿಡಿದುಕೊಂಡ ಆಯಕಟ್ಟಿನ ಸ್ಥಳಮಾತ್ರ ಮಜಬೂತವಾದದ್ದು. ಪರಂಪರೆಯಾಗಿ ಬಂದ ಆರ್ಥಿಕಾನುಕೂಲತೆಯಂತೆ, ಅನುಷಂಗಿಕವಾಗಿ ಸಂಗಳಿಸಿದ ವಿದ್ಯಾವಂತಿಕೆ, ಸ್ಥಾನಮಾನಗಳು ಮೇಲ್ಮಟ್ಟದವು. ಹಗ್ಗ ಸುಟ್ಟರೂ ಹುರಿ ಉಳಿದುಕೊಳ್ಳುವಂತೆ, ಅವರು ಬಡತನಕ್ಕೀಡಾದರೂ ಸಿರಿವಂತಿಕೆಯ ಠೀವಿಗೆ ಕೊರತೆಯಾಗದು. ಕುಳಿತುಕೊಳ್ಳಲು ಅಧಿಕಾರದ ಗದ್ದುಗೆ, ಊರ ರೈತರ ಹೊಲ-ಮನೆಗಳ ಲೆಕ್ಕದ ಮುಗದಾಣಿ ಇನ್ನೊಬ್ಬರು ಕಸಿದುಕೊಳ್ಳುವಂತಿಲ್ಲ, ಇಸಿದುಕೊಳ್ಳುವಂತೆಯೂ ಇಲ್ಲ. ಊರ ಪ್ರಭು ಎನಿಸಿದರೂ ಗೌಡ ಹೆಬ್ಬೆರಳಿನ ಗೆಣೆಯ. ಓದುವಾದಗಳೆಲ್ಲ ಕರಣಿಕನಿಗೆ ಸೇರಿದರೆ ಮೋಕ್ಷಕ್ಕೆ ಬೇಕಾದ ಎರಡಕ್ಷರಗಳೇ ಗೌಡನ ಶಿಕ್ಷಣವೆನಿಸಿತ್ತು. ಹಿಂದಿನ ಕಾಲದಲ್ಲಿ, ಅಂದಿನ ಕಾಲದಲ್ಲಿ.

ಇಲಿ ಹಿಡಿಯುವ ಹವ್ಯಾಸವಿದ್ದರೂ ಬೆಕ್ಕಿನ ಒಡಲು ಹಾಲು ಬೆಣ್ಣೆಗಳ ಅಗರವಾಗಿರುತ್ತದೆ. ಹಾರುವರ ಹವ್ಯಾಸವಿನ್ನೇನಿದ್ದರೂ ಅವರು ಭಗವದ್ಗೀತೆಯಲ್ಲಿ ಹೇಳಿದ ಯೋಗಿಯಂತೆ ಸ್ನಿಗ್ಧವೂ ಮಧುರವೂ ಆದ ಪಥ್ಯಾಹಾರದ ಮೇಲಿದ್ದವರು. ಅದಕ್ಕಾಗಿ ಬೆಕ್ಕಿನಂತೆ ಹೊಂಚು ಹಂಚಿಕೆ ಹಾಕಿ ಸಾಧುವೇಷ ತೊಡುವುದರೊಂದಿಗೆ ಏಕಾದಶಿಯ ಉಪವಾಸವನ್ನೂ, ಶನಿವಾರದ ಒಪ್ಪೊತ್ತನ್ನು ಕಟ್ಟುನಿಟ್ಟಾಗಿ ಸಾಗಿಸಿಕೊಂಡು ಬರುವುದರಲ್ಲಿ ಹಿಂದೇಟು ಹಾಕುವವರಲ್ಲ. ಅಂತೆಯೇ ‘ಪರಮೇಶ್ವರನ ಹೆಸರು ಹೇಳಿ ಪರಮಾನ್ನ’ ಉಣ್ಣುತ್ತ ಬಂದವರೆನಿಸಿದರು.

ಅದೆಂಥದೋ ಪ್ರಸಂಗದಲ್ಲಿ ‘ಕೆಟ್ಟ ಕೂಳು ತಿಂದು ನಿಟ್ಟುಸಿರಿಟ್ಟ ಭಟ್ಟ’ ಕದ್ದು ತಿನ್ನುವ ಹಾದಿಗಿಳಿಯದೇ, ಬೇಡಿತಿನ್ನುವ ನೇರ ದಾರಿಯನ್ನೇ ಹಿಡಿಯುವನು. ತನಗೆ ದೊರಕೊಂಡ ಆ ಅನುಭವವನ್ನು ತನ್ನವರಿಗೆ ಗಾದೆಯಂತೆ ಉಸುರತೊಡಗಿದನು. ‘ಬೇಡಿ ಉಂಡ ನಾಲಗೆ ನಾಡಕಂಡಿತು.’ ಆ ಮಾತಿಗೆ ಪರಿಸರವು ‘ನಾಚಿಕೆಗೇಡಿ ನಾಲಗೆಯಿದ್ದರೆ ನಾಲ್ಕೆಮ್ಮೆಯ ಹಯನು ಮನೆಯಲ್ಲಿದ್ದಂತೆ’ ಎಂದು ಕೊಂಕು ನುಡಿಯಿತು. ಇದು ಇಸಗೊಂಡವನ ಅನುಭವಕ್ಕೆ ಹಿಡಿದ ಭೂತಕನ್ನಡಿಯಾದಂತೆ, ಕೊಟ್ಟವರ ಅನುಭವಕ್ಕೆ ತಲೆನೋವೂ ಆಗಿರುತ್ತದೆ. ಆದ್ದರಿಂದ ‘ಅಂದವರೂ ನಮ್ಮವರು, ಅನ್ನಲಾರದವರೂ ನಮ್ಮವರು’ ಎಂದು ಸಮತಾಬುದ್ಧಿಗೆ ಶರಣು ಹೋಗುವುದು ಅನಿವಾರ್ಯವಾಗುತ್ತದೆ.

ಊರು ಬಿಟ್ಟು ಅಡವಿ ಸೇರಿದರೂ, ಘಟ್ಟವನ್ನೋ ಬೆಟ್ಟವನ್ನೋ ಆಶ್ರಯಿಸಿದರೂ ತನ್ನ ಬೇಟೆಯನ್ನೇ ಅರಸುತ್ತಾನೆ ಬ್ರಾಹ್ಮಣ. ಹುಲಿ ಅದೆಷ್ಟು ಹಸಿದರೂ ಹುಲ್ಲಿಗೆ ಬಾಯಿ ಹಾಕದು; ಹರಿಣವನ್ನೇ ಹಾರಯಿಸುವದು. ‘ಬೆಟ್ಟದ ಮೇಲೆ ಕುಳಿತ ಭಟ್ಟ ಬೆಲ್ಲ ಬಯಸುವುದನ್ನು ಬಿಟ್ಟು, ಬೊಟ್ಟು ಚೀಪಿದರೆ ಹೊಟ್ಟೆ ತುಂಬೀತೇ?’

ಹೊತ್ತುಗಳೆಯಲೆಂದೋ ಹರಟೆಹೊಡೆಯಲೆಂದೋ ಕರಣಿಕನ ಬಳಿಗೆ ಹೋದವನು ಹೋದ ಹಾಗೆ ಮರಳಿ ಬರುವುದು ಸಾಧ್ಯವಿಲ್ಲ. ಅದೆಂಥದೋ ಪತ್ರಂ ಪುಷ್ಪಂ ಕೊಟ್ಟೇ ಬರಬೇಕಾದೀತು; ಅಥವಾ ಕೊಡಲ್ಪಟ್ಟೇ ಬರಬೇಕಾದೀತು. ಇಸಗೊಳ್ಳುವ ದಾರಿ ತಿಳಿದಂತೆ, ಕಸಗೊಳ್ಳುವ ದಾರಿಯನ್ನೂ ಕರಣಿಕರು ಬಲ್ಲರು. ಅಂತೆಯೇ ಗ್ರಾಮೀಣರಲ್ಲಿ ಒಂದು ಗಾದೆ ಮೈದಾಳಿದೆ ‘ಕುಂಡ್ರಲಾರದಕ್ಕೆ ಕುಲಕರ್ಣಿಯ ಮನೆಗೆ ಹೋದರೆ, ಕುಂಡರಿಸಿ ಮೂರು ರೂಪಾಯಿತಗೊಂಡ’. ಈ ಮಾತಿನಲ್ಲಿ ಇಸಗೊಳ್ಳುವ ಕ್ರಮವಿದೆಯೋ ಕಸಗೊಳ್ಳುವ ಕ್ರಮವಿದೆಯೋ ಗಮನಿಸುವಂತಿದೆ. ಆತನಾದರೂ ಏನು ಮಾಡಿಯಾನು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಅಲ್ಲವೇ? ದಾಸರ ಈ ಹಾಡು ಕನ್ನಡದಲ್ಲಿ ಬರೆದ ಶ್ರುತಿ, ಅಥವಾ ಸ್ಮೃತಿ.

ತನ್ನಡೆಗೆ ಯಾರೂ ಬರದಿದ್ದರೆ ಹೇಗೆ? ಇಷ್ಟೂ ತಿಳಿಯದೇ ತಾವಾಗಿಯೇ ಬರುವಂತೆ ಮೋಡಿ ಮಾಡಬಹುದು; ತಲೆಯಿಂದ ನಡೆದುಬರುವಂತೆ ಮಂತ್ರ ಊದಬಹುದು, ತಂತ್ರ ರಚಿಸಬಹುದು. ಇದು ಹುಟ್ಟಿಸಿಕೊಂಡು ಆಡುವ ಇಲ್ಲವೆ ಆಡಿದ ಮಾತು ಆಗಿದ್ದರೆ ಈ ಗಾದೆ ಏಕೆ ಹುಟ್ಟಿಕೊಳ್ಳುತ್ತಿತ್ತು? ‘ಹೊಟ್ಟೆಗಿಲ್ಲದ ಶಾನುಭೋಗ ಹಳೆ ಕಡತ ಹುಡುಕಿದ’ ಏತಕ್ಕಾಗಿ?

ತನ್ನ ಮನೆಯಲ್ಲಿ ತಾನು ಕುಳಿತು ಛೂಮಂತ್ರ ಮಾಡಿದಂತೆ, ಕುಲಕರ್ಣಿಯ ಕೈಯಲ್ಲಿದ್ದ ಕಡತವು ಗುರಿಯಿಟ್ಟ ಹಾಗೆ, ಯಾರಿಗೆ ತಾಕಬೇಕೋ ಅವರಿಗೆ ತಾಕಿದರೆ ಅದು ಕಡಿತವಾಗಿ ಪರಿಣಮಿಸುವುದರಲ್ಲಿ ಸಂಶಯವೇ ಇಲ್ಲ. ಆ ಕಡಿತವು ಹೊಟ್ಟೆ ಕಡಿತವಾಗಿ ಎಷ್ಟು ಅಜಿವಾನ ತಿಂದರೂ ನೋವು ಹಿಂಗುವಂತಿಲ್ಲ. ಕುಲಕರ್ಣಿಗೆ ಶಾಂತಿ ಮಾಡಿಸಿದಾಗ ಹೊಟ್ಟೆನೋವು ಹಿಂಗುವದು. ಕುಲಕರ್ಣಿಯ ಹೊಟ್ಟೆಯೂ ತಣ್ಣಗಾಗುವದು. ಕ್ಷೌರಿಕನಂತೆ ತಿಂಡಿಯಿಲ್ಲದೆ ತುರಿಸುವಂತೆ ಮಾಡುವುದಾಗಲಿ, ಕುಂಬಾರನಂತೆ ತಪ್ಪಿಲ್ಲದೆ ಪೆಟ್ಟು ಹಾಕುವುದಾಗಲಿ ಕುಲಕರ್ಣಿಗೆ ನೀರು ಕುಡಿದಂತೆ ಸಹಜ, ಸರಳ. ‘ಕೊಡುವ ದಡ್ಡರಿರುವಾಗ ಬೇಡುವ ಜಾಣರಿಗೇನು ಕಡಿಮೆ?’

ರೈತನಾದವನು ಯಾರ್ಯಾರಿಗೆ ಅಂಜಬೇಕು? ಬುದ್ಧಿವಂತ ಕರಣಿಕನು ಹರಡಿದ ಬಲೆ ತಪ್ಪಿಸಿಕೊಳ್ಳುವುದಾಗಲಿ, ಯುಕ್ತಿವಂತ ಶೆಟ್ಟಿಯು ಹರಹಿದ ನೆಲೆ ಜಪ್ಪಿಸಿಕೊಳ್ಳುವುದಾಗಲಿ ಸುಲಭದ ಕೆಲಸವೇನಲ್ಲವೆಂದು ಮನಗಂಡಿದೆ ಜನಪದ. ಅಂತೆಯೇ ಅದು ಸಾರಿಸಾರಿ ಹೇಳುತ್ತದೆ. ‘ಬ್ರಾಹ್ಮಣನ ಹಗೆಸಲ್ಲ, ಶೆಟ್ಟಿಯ ನಗೆಸಲ್ಲ’ ಎಂದು ಹಗೆ-ನಗೆಗಳ ಬಗೆ ಬೇರೆಯಾದರೂ ಅವು ಹೊತ್ತಿಸುವ ಬೇಗೆ ಒಂದೇ.

ತೆನ್ನಾಲಿ ರಾಮಕೃಷ್ಣನು ಸಾಕಿದ ಬೆಕ್ಕಿನ ಮರಿ ಒಮ್ಮೆ ಬಿಸಿಹಾಲಿನ ಬಟ್ಟಲಲ್ಲಿ ಬಾಯಿ ಅದ್ದಿ ಮುಸುಡಿ ಸುಟ್ಟುಕೊಂಡಿದ್ದು ಅದಕ್ಕೆ ಸಾಯುವವರೆಗೂ ಮರೆಯದ ಮಾತಾಯಿತು. ಆ ಬಟ್ಟಲಲ್ಲಿ ತಣ್ಣಗಿನ ಮಜ್ಜಿಗೆ ತಂದಿಟ್ಟರೂ ಆ ಮರಿ ದೂರದಿಂದ ನೋಡುತ್ತಲೆ ನಾಗಾಲೋಟದಲ್ಲಿ ಜಿಗಿದು ಹೋಗಿ ಮುಖ ತಪ್ಪಿಸಿಕೊಂಡು ಕುಳಿತಿತು. ಅದರಂತೆ ಕುಲಕರ್ಣಿಯ ಜನಿವಾರದ ಉರುಳಿಗೆ ಸಿಲುಕಿ ನುಸುಳಿಬಂದರೂ ರೈತನೆದೆ ಧಡಧಡಿಸುತ್ತಲೇ ಇರುತ್ತದೆ. ಅಂತೆಯೇ ಜನಿವಾರವನ್ನೂ ಜನಿವಾರದವನ್ನೂ ನೋಡುತ್ತಲೆ ಅವನ ಕಣ್ಣಿಗೆ ಬವಳಿ ಬರುತ್ತದೆ. ಆ ಮೂರ್ಛಾವಸ್ಥೆಯಲ್ಲಿ ಸುತ್ತಲು ನೆರದ ಆಪ್ತೇಷ್ಟರು ನುಡಿದ ಒಂದು ಮಾತು ಕೊರೆದು ತೆಗೆದಂತಾಗಿದೆ. ಆ ಮಾತು ಯಾವುದು? ‘ಜನಿವಾರದವನನ್ನು ಜನ್ಮ ಜನ್ಮಾಂತರಕ್ಕೂ ನಂಬಬೇಡ’.

ಬ್ರಾಹ್ಮಣನೆಂದರೆ ಉಚ್ಚ ಕುಲಗಳಲ್ಲಿ ಕಲಶ. ಕಲಶ ಕಬ್ಬಿಣದ್ದಾಗಲಾರದು, ಬೆಳ್ಳಿಯದೋ ಬಂಗಾರದ್ದೋ ಆಗಿರುವದು. ಕಲಶದ ಮಟ್ಟದಲ್ಲಿದ್ದ ಬ್ರಾಹ್ಮಣರ ಮೈಬಣ್ಣ ಬೆಳ್ಳಗೇ ಆಗಿರುವುದು ವಾಡಿಕೆ. ವಾಸ್ತವಿಕ. ಅದರಂತೆ ಕಾಲಬುಡಕ್ಕೆ ಸಿಕ್ಕ ದಲಿತವರ್ಗದ ಹೊಲೆಯನು ಕಪ್ಪಾಗಿರದೆ ಬೆಳ್ಳಗಾಗಿರಲು ಸಾಧ್ಯವೇ ಇಲ್ಲವೆನ್ನುವಷ್ಟು ವಾಡಿಕೆ, ವಾಸ್ತವಿಕ. ಆದರೆ ಕರ್ಮ-ಧರ್ಮ ಸಂಯೋಗದಿಂದಲೋ ನೋಡುವವನ ದುರದೃಷ್ಟದಿಂದಲೋ ಕಪ್ಪು ಬಣ್ಣದ ಬ್ರಾಹ್ಮಣ, ಬಿಳುಪು ಬಣ್ಣದ ಹೊಲೆದಲಿತ ಕಾಣಿಸಿಕೊಂಡನೆಂದು ತಿಳಿಯುವಾ. ಆ ಸೇರುವೆ ನಂಬಲರ್ಹವಾಗಿರದಿದ್ದರೂ ಹಿರಿಯರು ತಮ್ಮನುಭವ ಹೇಳುತ್ತಲೆ ಬಂದಿದ್ದಾರೆ. ಆ ಮಾತು ಗಾದೆಯಾಗಿ ಚಲಾವಣಿಯಲ್ಲಿದೆ, ಏನಂದರೆ,

‘ಕರಿಯ ಹಾರುವನನ್ನೂ ಬಿಳಿಯ ಹೊಲೆಯನನ್ನೂ ನಂಬಬೇಡ’

ಆ ಬಣ್ಣಗಳಿಗಾಗಿ ಅವರ ಜಾತಿಗಳನ್ನು ನಂಬಬಾರದೆಂದು ಹೇಳಿದಂತಾಯಿತೋ ಅಥವಾ ಅಂಥ ಬಣ್ಣದ ಗುಣವಿಶೇಷಗಳನ್ನು ಒಳಗೆ ಬಯತಿರಿಸಿಕೊಂಡಿದ್ದಕ್ಕಾಗಿ ಅಪನಂಬಿಗೆ ತಳೆಯಲು ಹೇಳಿದಂತಾಯಿತೋ ತಿಳಿಯದು.

ಹಾರುವನು ಹೀಗೆ ನಂಬುಗೆಗೆಡುವುದಕ್ಕೆ ಕಾರಣ ಹಲವಾರು ಇರಬಹುದು. ಹಲವು ಉತ್ತರಗಳನ್ನು ಹೇಳುವ ಗಣಿತವೇ ತಪ್ಪಾಗಿರಲು ಸಾಧ್ಯವಿದೆ. ಒಂದು ಗಣಿತಕ್ಕೆ ಒಂದೇ ಉತ್ತರ ವಾಸ್ತವಿಕ. ಹಾರುವನನ್ನು ನಂಬುಗೆಗೆಡಿಸಿದ್ದಕ್ಕೆ ಕಾರಣ ಒಂದು ಇರಲೇಬೇಕು. ‘ದೇವನೊಬ್ಬ ನಾಮ ಹಲವು’ ಎಂದು ವೈಜ್ಞಾನಿಕವಾಗಿ ವೈಚಾರಿಕರು ಇಂದು ಹೇಳುತ್ತಾರೆ. ಆದರೆ ಹಾರುವನ ಪಾಲಿಗೆ ಆ ಮಾತು ತಿರವು ಮುರವು ಆಗಿರಬಹುದೇ? ನಾಮ ಒಂದು ದೇವರುಗಳು ಹಲವಾರು. ಹಾರುವನಿಗೆ ರಾಮ ಬೇಕು, ಸೀತಾ ಬೇಕು, ಹನುಮಂತ ಬೇಕು, ವಾಯು ಬೇಕು, ವಾಯುಸುತ ಬೇಕು, ಗಂಡು ದೈವತ, ಹೆಣ್ಣು ದೈವತ, ಎದ್ದ ದೈವತ, ಬಿದ್ದ ದೈವತ ಬೇಕು. ಅವರೆಲ್ಲರನ್ನೂ ನಂಬಿದ್ದಾನೆಂದರೆ ಅದು ಪರಮ ಪತಿವ್ರತೆಯ ಕೆಲಸವಾದೀತೇ? ‘ಊರತುಂಬ ಗಂಡರು, ಉಡಲಿಕ್ಕೆ ಸೀರೆಯಿಲ್ಲ’ ಎನ್ನುವ ಸತಿಶಿರೋಮಣಿಯಾಗಬೇಕೇ ಆ ದ್ವಿಜೋತ್ತಮ? ಹಲವು ದೇವರುಗಳನ್ನು ನಂಬಿ ತಾನು ಕೆಟ್ಟಂತೆ; ತನ್ನನ್ನು ನಂಬುವ ಹಲವಾರು ಜನರನ್ನು ಕೆಡಿಸಿದ್ದು ಗಾದೆಯಾಗದಿರುವುದೇ? ‘ಹಲವು ದೇವರ ನಂಬಿ ಹಾರುವ ಕೆಟ್ಟ, ಹಾರುವನನ್ನು ನಂಬಿ ಹಲವರು ಕೆಟ್ಟರು’.

ಒಂದಾನೊಂದು ಕಾಲಕ್ಕೆ ಭೂಸುರನೆಂದು ಪೂಜಿತನಾಗಿ, ದ್ವಿಜೋತ್ತಮನೆಂದು ವಂದಿತನಾಗಿ, ಪ್ರಥಮ ವರ್ಣದ ಬ್ರಾಹ್ಮಣನಾಗಿ ಕಾಲಗತಿಸಿದಂತೆ ಮಡಿಮೈಲಿಗೆಗಳ ತಾಕಲಾಟದಲ್ಲಿ ಹಾರುವನಾಗಿ, ನೆರೆಹೊರೆಯ ಸಂಬಂಧದಲ್ಲಿ ಹಾಗೂ, ಪರಿಸರದ ಸಂಪರ್ಕದಲ್ಲಿ ತನ್ನ ಸ್ಥಾನಮಾನದಿಂದ ಕದಲುತ್ತ, ಚ್ಯುತನಾಗುತ್ತ, ಪದಚ್ಯುತನಾಗುತ್ತ ಕೆಳವರ್ಣಗಳ ಅವಹೇಳನಕ್ಕೆ ಈಡಾದನೆಂಬುದಕ್ಕೆ ಗಾದೆಗಳು ಪ್ರಬಲ ಹಾಗೂ ಪ್ರಖರ ಸಾಕ್ಷಿಗಳಾಗಿ ನಿಂತಿವೆ. ಶ್ರೀ ಮಾಸ್ತಿಯವರು ಒಂದು ಕಡೆಗೆ ಹೇಳಿದ ಮಾತು ಈ ಪ್ರಸಂಗದಲ್ಲಿ ನೆನಪಿಗೆ ಬರುತ್ತದೆ. ಏನೆಂದರೆ,

‘ಸತ್ಯ ನುಡಿಯುವವನು ಬ್ರಾಹ್ಮಣನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ನಾನು ಬ್ರಾಹ್ಮಣನಾದ್ದರಿಂದ ನಾನಾಡಿದ್ದು ಸತ್ಯ ನುಡಿ’.

ಅಸತ್ಯವನ್ನು ನುಡಿದು, ಅದು ಸುಳ್ಳು ಹೇಗೆ ಎಂದು ಸಾಧಿಸಹೊರಟರೆ ಅದು ಇಮ್ಮಡಿ ಸಟೆಯೆನಿಸುತ್ತದೆ. ಅದನ್ನು ಪರಿಸರವು ಲೆಕ್ಕಿಸದಿರುವದೇ? ಲಕ್ಷಿಸದಿರುವುದೇ? ಲಕ್ಷಿಸಿದ ಬಳಿಕ ಅದನ್ನು ಕುರಿತು ಒಂದು ಮಾತು ಆಡದಿರುವದೇ? ಹಾಗೆ ಆಡುತ್ತ ಆಡುತ್ತ ಬಂದುದೇ ಬಳಕೆಗೊಂಡು ಗಾದೆಯಾಗಿ ನಿಂತಿದೆ, ವೇದಕ್ಕೆ ಸಮಾನವೆನಿಸಿದೆ. ಅಂಥ ವೇದವನ್ನು ನಿರ್ಮಿಸಿದ ಜನಪದವು ವೇದವನ್ನೋದಿದವನನ್ನು ಹಾಕೊಂದೆಶೆ ಹನ್ನೊಂದೆಶೆ ಮಾಡಿಬಿಟ್ಟಿದೆ.

‘ಹಾರುವನ ತೊತ್ತಾಗಬೇಡ, ಗಾಣಿಗನ ಎತ್ತಾಗಬೇಡ’ ಎಂದು ಹೇಳಿದ್ದು ಸಾಕಾಗದೆ ‘ಹಾವು ಕಡಿದರೆ ಒಬ್ಬ ಸಾಯುತ್ತಾನೆ, ಹಾರುವ ಕಡಿದರೆ ಮನೆಮಂದಿಯೆಲ್ಲ ಸಾಯುತ್ತಾರೆ’ ಎಂದು ಹೇಳಿದ್ದು ಎಂಥ ಘೋರ ವಿಪರ್ಯಾಸ! ಹಾರುವನೆಲ್ಲಿ ಹಾವೆಲ್ಲಿ? ಹಾರುವನು ಹಾರಿಹಾರಿ ಹಾವಿಗಿಂತ ಮುಂದೆ ಜಿಗಿದಿದ್ದಾನೆ; ಹಾವನ್ನು ಮಿಕ್ಕಿಮೀರಿದ್ದಾನೆ. ಇದಕ್ಕೆ ಪ್ರಗತಿಪರವೆನ್ನೋಣವೇ?

ಸುಮಾರು ನಾನೂರು ವರ್ಷಗಳ ಹಿಂದೆಯೇ ಲಕ್ಷ್ಮೀಶ ಕವಿಯು ‘ಕಲಿಯುಗದಿ ವಿಪ್ರರಾಚಾರವಂ ಬಿಡುವಂತೆ’ ಎಂಬ ಉಪಮಾನವನ್ನು ಬಳಿಸಿದ್ದುಂಟು. ಆಚಾರ್ಯರೆನಿಸಿದವರಿಗೆ ಆಚಾರವೇ ಜೀವಾಳ. ಅದನ್ನು ಬಿಟ್ಟುಕೊಡುವ ಕ್ರಮ ಹಲವು ಶತಮಾನಗಳ ಹಿಂದಿನಿಂದಲೇ ಆರಂಭವಾದಂತೆ ತೋರುತ್ತದೆ. ಗಡ್ಡ ಜಡೆಗಳನ್ನು ಬೆಳೆಯಿಸಿ, ದೊಡ್ಡ ದೋತರವನ್ನುಟ್ಟು ಪಂಚಗಚ್ಚೆ ಹಾಕಿದರೂ ಜನಪದದ ಕೋಟಿ ಕಣ್ಣುಗಳನ್ನು ತಪ್ಪಿಸಿ ವ್ಯಕ್ತಿತ್ವವನ್ನು ಅಡಗಿಸಲು ಸಾಧ್ಯವಾಗಲಿಲ್ಲವೆಂದು ತೋರುತ್ತದೆ. ಜನಪದವು ಎಚ್ಚರಿಕೆಯ ಗಂಟೆ ಬಾರಿಸಿದಂತೆ ತಾನು ಕಂಡಿದ್ದನ್ನು ಆಡಿಯೇ ಬಿಟ್ಟಿತು.

ಆಡಿಗೆ ಗಡ್ಡ ಬಂದರೆ ಅದು ಆಚಾರ ಹೇಳಬಲ್ಲದೇ?’

ಧೋತ್ರ ದೊಡ್ಡದಾದರೆ ಗೋತ್ರ ದೊಡ್ಡದಾದೀತೇ?’

ಈ ಗಾದೆಗಳ ಹುಟ್ಟಿಕೊಳ್ಳುವುದಕ್ಕೆ ಯಾರು ಕಾರಣ, ಏನು ಕಾರಣ ಎನ್ನುವುದನ್ನು ಬಿಚ್ಚಿ ಹೇಳುವ ಕಾರಣವೇ ಇಲ್ಲ. ಒಳಗಿನ ಸತ್ತ್ವವೇ ಹಾರಿ ಹೋದಬಳಿಕ ಎಂಥ ವೇಷ ಧರಿಸಿದರೇನು? ಹರಳು ಹೋದ ಗೆಜ್ಜೆ! ಗಡ್ಡದಿಂದ ಆಚಾರ, ಧೋತ್ರದಿಂದ ಗೋತ್ರ ಅಳವಡಲಾರದೆನ್ನುವುದಕ್ಕೆ ಬೇರೆ ಕಡೆಗೆ ಬೆರಳುಮಾಡಿ ತೋರಿಸಬಹುದೇ?

ಗಡ್ಡ ಧೋತ್ರಗಳಂತೆ ನಾಮ ಜನಿವಾರಗಳೂ ಅಡ್ಡಕ್ಕೆ ಪಂಚೇರುಗಳಾಗಿ ಬಿಟ್ಟವೆಂದೇ ಹೇಳಬೇಕು. ‘ಮೂರು ನಾಮದವ ಸ್ವರ್ಗಕ್ಕೆ ಹೋದರೆ, ಹನ್ನೆರಡು ನಾಮದವ ಎಲ್ಲಿಗೆ ಹೋಗುತ್ತಾನೆ’ ಎಂದು ಒತ್ತಟ್ಟಿಗೆ ಹೀಗಳಿಕೆ, ಇನ್ನೊತ್ತಟ್ಟಿಗೆ ‘ಮೂರೆಳೆಯ ಜನಿವಾರ ಧರಿಸಿದವನನ್ನು ವೈಕುಂಠಕ್ಕೆ ಕರೆದೊಯ್ದರೆ, ನೂರೆಳೆಯ ಕೌದಿಯನ್ನು ಧರಿಸಿದವನನ್ನು ಅದೇಕೆ ಕರೆದೊಯ್ಯುವದಿಲ್ಲ’ ಎಂದು ಮೂದಲಿಕೆ ಮರುದನಿಗೊಡುತ್ತದೆ.

ತಾವು ಹುಟ್ಟಾಜಾಣರೆಂದೂ, ವಿದ್ಯೆಯೆನ್ನುವುದು ತಮ್ಮ ಜನ್ಮಸಿದ್ಧ ಸೊತ್ತೆಂದೂ ತಿಳಿಯುವ ಮಟ್ಟಿಗೆ ಹಾರುವರು ತಿಳಕೊಳ್ಳುವಷ್ಟು ಕಣ್ಣು ಮುಚ್ಚಿ ಸಾಗಿದರೇನೋ. ಆದರೆ ‘ಹಾರುವರ ಮೋರಿಯಾದರೇನು, ತೊಳೆಯದಿದ್ದರೆ ನಾರದೇ?’ ಹಳ್ಳಿಗಳಲ್ಲಿ ನಡೆಯುವ ಹೋಳಿ ಹುಣ್ಣಿವೆಯ ಸೋಗುಗಳಲ್ಲಿ ಉಪಾಧ್ಯ ಹಾಗೂ ಅವನ ಮಗ ಕೃಷ್ಟ್ಯಾ ಸೋಗುಗಳು ಬರುತ್ತವೆ. ಸಂಡಾಸಿಗೆ ಹೋಗಿಬಂದ ಮಗನಿಗೆ ತಂದೆ ಕೇಳಿದನು ‘ಕೃಷ್ಟ್ಯಾ ತಾಲೀ ಎಲ್ಲಿಟ್ಟಿ?’ ಮಗ ಹೇಳುತ್ತಾನೆ ‘ಹೊರಕಡೆ ಕೂತಲ್ಲಿ’. ತಂದೆಯ ಮರುಪ್ರಶ್ನೆ ‘ಹೊರಕಡಿಗೆಲ್ಲಿ ಕೂತೆಯೋ?’ ಜಾಣ ಮಗನು ಹೇಳುತ್ತಾನೆ ‘ತಾಲೀ ಇಟ್ಟಲ್ಲಿ’.

ತಡೆಯಿಲ್ಲದೆ ವಟವಟಿಸುವವನ ಬಾಯಿ ಉಪಾದ್ಯಾನ ಮುಕುಳಿ ಆಗಿದೆ ಎನ್ನುತ್ತಾರೆ ಗಾವಿಲರು.

ಆದರೆ ‘ಸೊನಕನ ಹಳ್ಳಿಯ ಕುದುರೆ ಕಡ್ಡಲ್ಲ, ಹಲಸಂಗಿಯ ಹಾರುವ ದಡ್ಡಲ್ಲ’ ಎಂಬ ಲೋಕೋಕ್ತಿ ಬಳಕೆಯಲ್ಲಿದೆ. ಆ ಮಾತು ಹೆಮ್ಮೆಯಿಂದ ಹೇಳಿಕೊಂಡಿದ್ದೂ ಆಗಿರಬಹುದು ಅಥವಾ ಬಿಮ್ಮಿನಿಂದ ಹೊಗಳಿಕೊಂಡಿದ್ದೂ ಆಗಿರಬಹುದು. ಆದರೆ ಆರ್ಥಿಕ ಒತ್ತಡವು ಉಳಿದವರಂತೆ ಅವರನ್ನೂ ಹತ್ತಿಕ್ಕಿದ್ದು ಸುಳ್ಳಲ್ಲ. ತುಪ್ಪೆಂದರೆ ತುಟಿಗೆ ತುಟಿ ಕೂಡಿಸುವುದೆಂದು ಹೇಳುವ ಹೊತ್ತು ಬಂತು. ಜನಿವಾರವೆನ್ನುವುದು ಕಿವಿಗೆ ಬಿದ್ದ ಕಂಬರಗೋಲಿನ ಕಡೆಮಿಣಿಯೆನಿಸಿತು. ಮನೆತನದ ಸ್ಥಿತಿ ಶಿವರಾತ್ರಿಯ ಮನೆಗೆ ಗೋಕುಲಾಷ್ಟಮಿ ಹೊಕ್ಕಂತಾಗಿದೆ. ಹಾಗೂ ಹೀಗೂ ಕೊಂಡ ಧಾರಣಿಗೆ ಬಂದ ಕಾರಣದಿಂದ ಹಾರುವರ ಹರೆಯದ ಮಕ್ಕಳು ಹೇಳತೊಡಗಿದರು ‘ಹತ್ತೆಮ್ಮೆಯಾದರೂ ತೊಳೆದೇನು, ಸಾಲಿಗ್ರಾಮ ತೊಳೆಯಲಾ’ ಒಂದಾನೊಂದು ಕಾಲಕ್ಕೆ ‘ಪರಮೇಶ್ವರನ ಹೆಸರು ಹೇಳಿ ಪರಮಾನ್ನ ಉಂಡರು’ ಎನಿಸಿಕೊಂಡವರಿಗೆ ಸಾಲಿಗ್ರಾಮಗಳು ಭಾರವಾದದ್ದು ಆಶ್ಚರ್ಯವಲ್ಲವೇ?

ಮಂತ್ರ ತಂತ್ರಗಳಲ್ಲಿ ತಜ್ಷರೆನಿಸಿಕೊಳ್ಳುತ್ತ ಹಲವು ಶತಮಾನಗಳನ್ನೇ ಕಳೆದವರ ಬಾಯಿಂದ ‘ಮಂತ್ರಕ್ಕಿಂತ ಉಗುಳೇ ಹೆಚ್ಚು’ ಸಿಡಿಯತೊಡಗಿತು. ಪುರಾಣ ಪುಣ್ಯಕಥೆಗಳ ಪಾರಾಯಣ ‘ಮಜ್ಜಿಗೆಯ ಪೂರ್ತಿ ರಾಮಾಯಣ’ ಎನಿಸಿಕೊಳ್ಳುವ ಪ್ರಸಂಗ ಬರದೆ ಇರಲಿಲ್ಲ. ತುತ್ತಿನ ಚೀಲು ತುಂಬುವುದಕ್ಕೂ ಬ್ರಹ್ಮವಿದ್ಯೆ ಅಸಮರ್ಥವಾದ ಕಾಲವಿದು. ‘ಓದುವುದು ಕಾಶೀಖಂಡ, ತಿನ್ನುವುದು ಮಸಿಕೆಂಡ’ ಎಂದು ಸುತ್ತಲಿನ ಗಾವಿಲರು ಆಡಿಕೊಳ್ಳುವಂತಾಯಿತು.

ಮೋಕ್ಷಕ್ಕೆ ಎರಡಕ್ಷರಗಳೇ ಸಾಕೆಂದರೂ ಹಾರುವರು ಧೂರ್ತತೆಯಿಂದ ಮೂಲಾಕ್ಷರಗಳನ್ನೆಲ್ಲ ಎಲ್ಲರಿಗಿಂತ ಮುಂಚಿತವಾಗಿ ಕಲಿತು ‘ಅರಿತವರು’ ಅನಿಸಿಕೊಂಡರು; ನುರಿತವರಾದರು. ಪ್ರಾಪ್ತಿ ಸಹಜವಾಗಿಯೇ ದ್ವಿಗುಣಿಸಿತು. ‘ಅರಿಯುವವನಿಗೆ ಇನ್ನೂರು, ಬರೆಯುವವನಿಗೆ ಮುನ್ನೂರು’ ಆಯಿತು. ಆದರೇನು ಅದು ಕಟ್ಟಿದ ಬುತ್ತಿ, ಎತ್ತಿ ಕೊಟ್ಟಿದ್ದು. ಹೊಗಳು ಬಿದ್ದಲ್ಲೇ ಬಿದ್ದು, ಬಿದ್ದಂತೆ ಬಿದ್ದು ಗೂಟ ಸಹ ನೆಡದಷ್ಟು ದಡ್ಡುಗಟ್ಟಿದವು. ಪರಿಣಾಮವೇನಾಯಿತೆಂದರೆ ‘ಶೃಂಗೇರಿಗೆ ದನ ಕೊಡಬೇಡ, ವೈಕುಂಠಪುರಕ್ಕೆ ಮಗಳನ್ನು ಕೊಡಬೇಡ’ ಎಂದು ಹೇಳಿಸಿಕೊಳ್ಳುವ ಪ್ರಸಂಗ ಬಂತು.

ಸಂಪ್ರದಾಯಗಳೆಲ್ಲ ಸೈಗೆಟ್ಟವು. ಆದರೆ ವಿಧವೆಯರ ಮಟ್ಟಿಗೆ ಜೀವ ಹಿಡಿದವು. ಬಾಲ ವಿಧವೆ ನಾಯಿದನ ಮುಂದೆ ಕುಳ್ಳಿರಿಸಲ್ಪಟ್ಟಾಗ ಆಕೆಯ ಕಣ್ಣೀರು ಉದುರುವುದು ಸಹಜ. ಅದನ್ನು ಕಂಡು ಕ್ಷೌರಿಕನು ಕೇಳಿದನಂತೆ ‘ಕ್ಷೌರದ ಕತ್ತಿ ಚಲೋದು, ಯಾಕೆ ಅಳ್ತೀರೆಮ್ಮ?’ ಬಾಲವಿಧವೆ ಒಂದಕ್ಕತ್ತರೆ, ಕ್ಷೌರಿಕ ಇನ್ನೊಂದಕ್ಕೆ ಸಮಾಧಾನ ಹೇಳುವ ಮಟ್ಟಿಗೆ ಗಾದೆಗಳಲ್ಲಿ ಹಾರುವರ ಹಗರಣ ಸಾಕಷ್ಟು ಹೊರಬಿದ್ದಿದೆ. ಇಷ್ಟಕ್ಕೇ ಮುಗಿದರೆ ಒಳ್ಳೆಯದು. ಆ ಕಾಲ ತೀವ್ರ ಬರಲಿ.