ಮನುಷ್ಯನಿಗೂ ನಾಯಿಗೂ ಬಹು ಶತಮಾನಗಳ ಸಂಪರ್ಕವಿದೆ; ಸಾಂಗತ್ಯವಿದೆ. ನಾಯಿ ನಂಬುಗೆಯ ಪ್ರಾಣಿಯೆಂದು ಹೆಸರುಗಳಿಸಿದೆ. ಸಾಕಿದವನಲ್ಲಿ ನಾಯಿ ಇರಿಸಿಕೊಂಡಿರುವಷ್ಟು ನಂಬಿಗೆಯನ್ನು ಸಾಕಿದವನು ನಾಯಿಯಲ್ಲಿ ಇರಿಸಿಕೊಂಡಂತಿಲ್ಲ. ಸಾಕಿದವನನ್ನು ಸಂರಕ್ಷಿಸುವುದಕ್ಕೆ, ಆತನ ಅಪ್ಪಣೆ ಪಾಲಿಸುವದಕ್ಕೆ ಸದಾ ಸಿದ್ಧವಾದ ನಾಯಿ ಮನೆ ಮಾಡಲಿಲ್ಲ, ಮದಿವೆ ಆಗಲಿಲ್ಲ. ಧನಿಯನು ಹಾಕಿದ್ದನ್ನು ತಿಂದು, ಹೇಳಿದಲ್ಲಿ ಒರಗಿ ತೀರ ಅಗತ್ಯ ಎನಿಸಿದಾಗ ಹಗಲೆನ್ನದೆ ಬೀದಿಯೆನ್ನದೆ ಪ್ರೇಯಸಿಯೊಡನೆ ತೀಟೆ ತೀರಿಸಿಕೊಂಡು ಸಾಕಿದವನ ಮನೆಗೆ ಬಂದರೆ ತೀರಿತು ಕಾರ್ಯಕ್ರಮ. ಆದರೆ ಬಸವಣ್ಣನವರು ‘ಎನ್ನ ನಾಯಿತನ ಮಾಣಿಸು’ ಎನ್ನುವುದರ ಕಾರಣ ಇಲ್ಲಿ ಅಪ್ರಸ್ತುತ.

ದೀರ್ಘಕಾಲದ ಈ ನಾಯನಂಟಿನಲ್ಲಿ ಸಾಕಿದವನು ಅದರ ಗುಣಗಳನ್ನು ಕಲಿತುಕೊಂಡಿದ್ದು ಕಡಿಮೆಯೆನ್ನಬೇಕು. ನಾಯಿ ಮಾತ್ರ ಸಾಕಿದವನ ಗುಣಗಳನ್ನು ಮೂಡಿಸಿಕೊಂಡ ಕನ್ನಡಿಯಾಗಿದ್ದು ನಿಜ. ಗೋವುಗಳನ್ನು ಸಾಕಿದವನು ಗೋವಳನೆನಿಸಿದಂತೆ, ನಾಯಿ ಸಾಕಿದವನು ನಾಯಕನೆನಿಸಿದನೇನೋ. ಸಾಕಿದೊಡನೆ ನಾಯಿಯ ಹತ್ತಗಡೆ ಒಂದು ಬಗೆಯದಾದರೆ, ಒಡತಿಯ ಹತ್ತಗಡೆ ಇನ್ನೊಂದು ಬಗೆಯದು. ಮನುಷ್ಯನು ಕಂಡ ಕಲಿತು, ಉಂಡು ಅನುಭವಿಸಿ, ಉಸಿರು ಬಟ್ಟಂತೆ ಹಲವಾರು ಸತ್ಯಗಳನ್ನು ಮನಗಂಡ ಮಾತುಗಳಲ್ಲಿ ಎರಕಹೊಯ್ದಿದ್ದಾನೆ. ಅವೇ ಗಾದೆಗಳು. ಸಂಖ್ಯೆಯಿಲ್ಲದ ಭಾಗ್ಯವೆನಿಸಿದ ಆ ಭಾಗ್ಯಗಳಲ್ಲಿ ಗಾದೆಗಳಲ್ಲಿ ನಾಯಿಯನ್ನು ಕುರಿತು ಹಾಗೂ ನಾಯಿಗೆ ಸಂಬಂಧಿಸಿದ ಹಲವಾರು ಗಾದೆಗಳುಂಟು. ಅವುಗಳನ್ನು ಪ್ರಾಸಂಗಿಕವಾಗಿ ಮಾತಿನಲ್ಲಿ, ಬರವಣಿಗೆಯಲ್ಲಿ ವಿಪುಲವಾಗಿ ಬಳಸಲಾಗುತ್ತದೆ. ನಾಯಿ ನಂಬುಗೆಯನ್ನು ಗಳಿಸಿದರೆ ನಾಯಿಯನ್ನು ಕುರಿತ ಗಾದೆಗಳು ಸತ್ಯ ಪ್ರಮಾಣವನ್ನು ಸಂಗಳಿಸಿವೆ.

ರಸಿಕತನವು ಬೇಕೆಂದರೆ ಸೌಂದರ್ಯವನ್ನು ಸೃಷ್ಟಿಸಬಲ್ಲನು. ಮನುಷ್ಯನ ರಸಿಕತನಕ್ಕೆ ನಾಯಿಯೂ ಚಂದ ಕಾಣಿಸುವುದು ಯಾವಾಗ? ಪ್ರಾಯದಲ್ಲಿ. ಸಾಕಿದವನಲ್ಲಿಯೂ ಕಾಣಸಿಗದ ಸದ್ಗುಣವು ಒಮ್ಮೊಮ್ಮೆ ನಾಯಿಯಲ್ಲಿ ಕಂಡು ಬರಬಹುದು ಎಂಬುದಕ್ಕೆ ‘ನಾಯಿಗುಣ ನಾಯಕನಲ್ಲಿಲ್ಲ’ ಎಂಬ ಗಾದೆಯೇ ಸಾಕ್ಷಿ. ಶಿಸ್ತು-ಸಂಘಟನೆಗಳಿಗೆ ಪ್ರತೀಕವೆನಿಸುವ ಒಂದು ಚಿತ್ರ ಸರ್ವಪರಿಚಿತವಾಗಿದೆ. ಅದು ಯಾವುದೆಂದರೆ ನಾಯಿಗಳೊಡನೆ ದತ್ತಾತ್ರೇತಯ. ಅಂತೆಯೇ ‘ದತ್ತಾತ್ರೇಯನ ಕಾಲಬಳಿ ಹತ್ತು ನಾಯಿ’ ಈ ಗಾದೆ ಚಿತ್ರ ಪರಿಚಯದೊಂದಿಗೆ ಗುಣಪರಿಚಯವನ್ನೂ ಮಾಡಿಕೊಡುತ್ತದೆ.

ಕಾರಭಾರವೆನ್ನುವುದು ಯಾರ ಕೈಗೆ ಬಂದರೂ ಅದು ತಾನು ಮಾಡಬೇಕಾದ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರವೃತ್ತಿಯನ್ನು ಉಸರುತ್ತದೆ. ನಾಯಿಗೂ ನಾಯಕನಿಗೂ ಹತ್ತಗಡೆ ಬಹಳ ಹತ್ತಿದ್ದು. ಆದರೇನು? ‘ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು’. ನಾಯಿ ಒಮ್ಮೊಮ್ಮೆ ನಾಯಕತ್ವವನ್ನು ಮರೆತು, ಮುಮ್ಮಡಿ ನಾಯಿಯಾಗುವದಕ್ಕೂ ಹಿಂಜರಿಯುವದಿಲ್ಲ. ‘ನಾಯಕನಿಗೆ ಒಂದು ಹರದಾರಿ, ನಾಯಿಗೆ ಮೂರು ಹರದಾರಿ’ ಹಾಗೆಂದರೇನು? ಸಾಕಿದವನನ್ನು ಬೆಂಬಳಿಸಿ ಪರಸ್ಥಳಕ್ಕೆ ಹೊರಟ ನಾಯಿ ತನ್ನ ನಡಿಗೆಯ ದುಡುಕಿನಿಂದ ಬಹುದೂರ ಮುಂದೆ ಸಾಗಿ ಹೊರಳಿ ನೋಡುತ್ತದೆ. ಒಡೆಯನ ಸುಳುಹಿಲ್ಲ. ಆಗ ಅವನನ್ನು ಕೂಡಿಕೊಳ್ಳಬೇಕೆಂದು ಹೊರಳಿ ಬಂದದ್ದು ಒಡೆಯನೊಡನೆ ಸಾಗುತ್ತದೆ. ಹೀಗೆ ನಾಯಿ ಮುಮ್ಮಡಿ ದಾರಿಯನ್ನು ಕ್ರಮಿಸುತ್ತದೆ.

ಒಡೆಯನು ಕಣ್ಣಿಗೆ ಬೀಳದಿರಲು ಎಲ್ಲಿ ಹೋದನೆಂದು ತಿಳಿಯದೆ ವಾಸನೆ ಹಿಡಿದು ನಾಯಿ ಸಾಗುತ್ತದೆ. ಹಸಿವೆ ನೀರಡಿಕೆಗಳ ಪರಿವೆಯಿಲ್ಲದೆ ಓಡೇ ಓಡುತ್ತದೆ. ಆದರೆ ಒಡೆಯ ಮಾತ್ರ ಕಾಣುವದಿಲ್ಲ. ಆತನನ್ನು ಕಾಣುವ ತವಕದೊಡನೆ ನೀರಡಿಕೆ ಹಿಂಗಿಸುವ ಹಾಗೂ ಜಲಾಶಯವನ್ನೂ ಸಂಗಳಿಸುವ ಆತುರ ಮಿಗಿಲಾಗಲು ದೂರದಲ್ಲಿ ಒಂದು ಬಾವಿ ಕಾಣಿಸುವದು. ತೇಕುತ್ತ ಹೋಗಿ ಹಣಿಕೆ ಹಾಕಿದರೆ ಅದು ಹಾಳು ಬಾವಿ! ಹಾಳು ಬಾವಿ ಕಂಡು ನಾಯಿ ಸಂತೋಷಪಟ್ಟಿತು. ಆದರೆ ನೀರಡಿಕೆ ಹಿಂಗಿಸಲಾಗಲಿಲ್ಲ. ಹಾಲಿಲ್ಲದ ಮೊಲೆ ಕರು ನೋಡಿದಂತಾಯಿತು ಎನ್ನಬೇಕೇ?

ಅಡಸಿರುವ ಕಾಮದಿಂ ಕಡುಕುರುಡನಾಗುವ ಪ್ರಸಂಗ ಮನುಷ್ಯನಿಗಷ್ಟೇ ಬರುವದಿಲ್ಲ. ಆತನು ಸಾಕಿದ ನಾಯಿಗೂ ಅಂಥ ಪ್ರಸಂಗ ಬರುತ್ತದೆ. ಆದರೆ ಬಿಚ್ಚಿ ಹೇಳಲು ಅದಕ್ಕೆ ಬಾಯಿ ಇಲ್ಲ. ಆ ವಿಷಯವನ್ನು ಅದರ ಚಟುವಟಿಕೆಗಳಿಂದಲೇ ಗುರುತಿಸಬೇಕು! ‘ಅಗಸನ ನಾಯಿ ಹಳ್ಳಕ್ಕೂ ಹತ್ತಲಿಲ್ಲ, ಮನೆಗೂ ಹತ್ತಲಿಲ್ಲ’ ಎಂಬ ಗಾದೆ ಸಾಕಷ್ಟು ಅನುಮಾನವನ್ನು ಹುಟ್ಟಿಸುತ್ತದೆ. ಹಳ್ಳ ಮತ್ತು ಅಗಸನ ಮನೆ ಬಿಟ್ಟು ಇನ್ನೆಲ್ಲಿ ಹೋಗಿರಬೇಕು ನಾಯಿ? ಅವಸರದ ಕೆಲಸ ಏನಿತ್ತು ಅದಕ್ಕೆ?

ಎಷ್ಟೆಂದರೂ ನಾಯಿ ನಾಯಿಯೇ ಬೆಕ್ಕಿಗಿಂತ ಒಳ್ಳೆಯ ಪ್ರಾಣಿ. ಒಂದು ಅಪ್ಪಟ, ಇನ್ನೊಂದು ಕಪಟ. ‘ನಾಯಿ ಆಯ್ದುಕೊಂಡು ತಿಂದೇನೆನ್ನುತ್ತದೆ. ಬೆಕ್ಕು ಕಸಗೊಂಡು ತಿಂದೇನೆನ್ನುತ್ತದೆ. ನಾಯಿ ಅನ್ನುತ್ತದಂತೆ ‘ಮನೆಯಲ್ಲಿ ಮಕ್ಕಳು ಹೆಚ್ಚಾಗಲಿ, ಅವರು ಬಿಟ್ಟ ಎಂಜಲು ಹೆಚ್ಚು ಸಿಗಲಿ’ ಆದರೆ ಬೆಕ್ಕಿನ ಹಾರಯಿಕೆಯೇ ಬೇರೆ ‘ಮಕ್ಕಳ ಸಂಖ್ಯೆ ಮನೆಯಲ್ಲಿ ಕಡಿಮೆಯಾದರೆ ಅವರ ಪಾಲಿನ ಹಾಲೂ ನನಗೆ ಗಿಟ್ಟಿಸಲಾಗುತ್ತದೆ.’ ನಾಯಿ ಆಯ್ದುಕೊಂಡು ತಿಂದೇನೆನ್ನುತ್ತದೆ; ಬೆಕ್ಕು ಕಸಗೊಂಡು ತಿಂದೇನೆನ್ನುತ್ತದೆ. ಇಷ್ಟೊಂದು ಪ್ರಾಮಾಣಿಕತೆ ತೋರ್ಪಡಿಸಿದರೂ ‘ನಾಯಿಗೆ ಅಡಿಗೆಮನೆ ತೋರಿಸಬಾರದು’ ಅನ್ನುತ್ತಾರೆ. ಅದರಂತೆ ಅದಕ್ಕೆ ಸಲಿಗೆ ಕೊಡುವುದೂ ಸರಿಯಲ್ಲ ಎಂದು ಬಗೆಯುತ್ತಾರೆ. ಏಕೆಂದರೆ ‘ಸಲಿಗೆ ಕೊಟ್ಟ ನಾಯಿ ತಲೆಗೇರುತ್ತದೆ’.

ನಾಯಿಗೆ ಬೊಗಳುವುದೊಂದೇ ಗೊತ್ತು. ಪ್ರಾಣಿಯಿರಲಿ, ಮನುಷ್ಯನಿರಲಿ ಹೊಸಬರಾಗಿ ಕಂಡರೆ ತೀರಿತು ಅದರ ಬೊಗಳೆ ಆರಂಭವಾಗುವುದು. ಆನೆಯಂಥ ಬೃಹತ್ ಗಾತ್ರದ ಪ್ರಾಣಿಯಾಗಲಿ, ಬೃಹತ್ತರ ಯೋಗ್ಯತೆಯ ಜಗದ್ಗುರುವಾಗಲಿ ನಾಯಿಯ ಬೊಗಳಿಕೆಯನ್ನು ಚೇತರಿಸುತ್ತದೆ. ಲಕ್ಷಿಸದೆ, ತಾರತಮ್ಯವಿಲ್ಲದೆ ಬೊಗಳೇ ಬೊಗಳುತ್ತದೆ. ಅದಕ್ಕಾಗಿ ಗಾದೆ ಹುಟ್ಟಿಕೊಂಡಿತು ‘ಆನೆ ಹೋಗೇ ಹೋಗುತ್ತದೆ, ನಾಯಿ ಬೊಗಳೇ ಬೊಗಳುತ್ತದೆ’. ಆದರೆ ತಿರಪೆಯವರಿಗೂ ತಿಳಿದಿದೆ, ಕನ್ನ ಕೊರೆಯುವವರಿಗೂ ತಿಳಿದಿದೆ ‘ಬೊಗಳುವ ನಾಯಿ ಕಚ್ಚುವದಿಲ್ಲ, ಕಚ್ಚುವ ನಾಯಿ ಬೊಗಳುವದಿಲ್ಲ’ ಆದ್ದರಿಂದ ಮೂಕ ನಾಯಿಯನ್ನು ಕಂಡವರು ದೂರದಿಂದಲೇ ಬೆದರಿಸುತ್ತಾರೆ. ದೂರದಿಂದಲೇ ಬಡಿಗೆ ಬೀಸುತ್ತಾರೆ; ಕಲ್ಲು ಒಗೆಯುತ್ತಾರೆ. ಅದರಿಂದಾಗುವ ಪರಿಣಾಮ ಏನೆಂದರೆ, ‘ಮೂರು ನಾಯಿಯ ಕೂಡ ನಾಕು ನಾಯಿ ಸತ್ತವು’ ಏಕೆ? ಅವು ಮೂಕ ನಾಯಿಯ ಬಳಗಕ್ಕೆ ಸೇರಿದವುಗಳೆಂದು ತಿಳಿದದ್ದರಿಂದ, ಕಚ್ಚುವ ನಾಯಿಗಳೆಂದು ದೂರಿ ಸರಿಸಿದ್ದರಿಂದ.

ನಾಯಿಯ ಗುಣದ ಡೊಂಕು ತಿದ್ದಬಹುದು, ಅದರ ಬಾಲದ ಡೊಂಕು ತಿದ್ದಲಾಗಲ್ಲ. ಅದಕ್ಕಾಗಿ ಪ್ರಯತ್ನಪಡುವುದು ವ್ಯರ್ಥ. ‘ನಾಯಿಯ ಬಾಲ ಲಳಿಗೆಯಲ್ಲಿಟ್ಟರೂ ಡೊಂಕು ಹೋಗದು.’ ನಾಯಿಗೆ ಮೇಲಕ್ಕೆ ಕರೆದು ದೊಡ್ಡಸ್ತನ ಕೊಡುವುದೇ ಬೇಡ. ತಪ್ಪಿ ತೀರ ಬಳಿಯಲ್ಲೆ ಬಂದರೆ, ಹಳೀ ಅಂದರೆ ಸಾಕು, ಹಚ್ ಅಂದರೆ ಸಾಕು. ಅದನ್ನೋಡಿಸಲು ಇನ್ನೇನು ಬೇಡ. ‘ನಾಯಿಗೆ ಹೊಡಿಯಲು ಬಣ್ಣದ ಕೋಲೇ?’ ಆದರೆ ಎಲ್ಲ ನಾಯಿಗಳು ಒಂದೇ ರೀತಿಯವಲ್ಲ. ‘ಹಿಡಿದದ್ದೂ ಬಿಡೂದಿಲ್ಲ ಬೇಡರ ನಾಯಿ, ಹಿಡದು ಬಿಡತಾದ ಜಾಡರ ನಾಯಿ’.

ನಾಯಿ ಅಸ್ಪೃಶ್ಯ ಪ್ರಾಣಿಯೇನೂ ಅಲ್ಲ, ಆದರೆ ಅದರೊಂದಿಗೆ ನೀರ ಬಳಕೆಯಿಲ್ಲ. ಆವು, ಆಡು, ಎಮ್ಮೆಗಳ ಹಾಲು ಮನುಷ್ಯನಿಗೆ ಅನಿವಾರ್ಯ ಆಗಿವೆ. ಆದರೆ ನಾಯ ಹಾಲು? ಏತಕ್ಕೂ ಬೇಡ. ‘ನಾಯ ಹಾಲು ನಾಯಿಗಲ್ಲದೆ ಸತ್ಪಾತ್ರಕ್ಕೆ ಸಲ್ಲದು.’ ‘ನಾಯ ಮೊಲೆಯಲ್ಲಿ ನಾಲ್ಕಂಡಗ ಹಾಲಿದ್ದರೇನಂತೆ?’ ಮನುಷ್ಯನ ಊಟಕ್ಕೆ ಬರಲಾರವು.

‘ಹಸಿದ ನಾಯಿಗೆ ಹಳಸಿದ ನುಚ್ಚು’ ಈ ಸೇರುವೆ ವಾಸ್ತವಿಕ. ಆದರೆ ನಾಯಿ ಸಾಕಿದವನ ಅಂತಸ್ತಿಗೆ ಅನುಸರಿಸಿ ಅದಕ್ಕೆ ಆಹಾರ ಸಿಗುತ್ತದೆ. ಬೇಡರ ನಾಯಿಗೆ ಸಿಗುವ ಆಹಾರಕ್ಕೂ, ಜೇಡರ ನಾಯಿಗೆ ಸಿಗುವ ಆಹಾರಕ್ಕೂ ವ್ಯತ್ಯಾಸ ಬಹಳ, ಭೂಮ್ಯಾಕಾಶದಷ್ಟು, ಅಂತೆಯೇ ಅವು ಬೇಟೆ ಹಿಡಿಯುವ ಕ್ರಮದಲ್ಲಿಯೂ ತೀರ ವ್ಯತ್ಯಾಸವಿದೆ. ಆ ಕ್ರಮವು ಕೌತುಕವನ್ನು ಉಂಟುಮಾಡುತ್ತದೆ.

ನಾಯಿಗೂ ಮನುಷ್ಯನಿಗೂ ಇರುವ ಘನಿಷ್ಠ ಸಂಬಂಧ ಎಂಥದೆನ್ನುವುದು ಗಾದೆಯ ಮಾತುಗಳಿಂದ ತಿಳಿದುಬರುತ್ತದೆ.