ಪುರಾಣವನ್ನು ಶ್ರವಣಮಾಡಿದಾಗ ಹಾಗೂ ಪುಣ್ಯಸ್ಥಳವನ್ನು ಸಂದರ್ಶಿಸಿದಾಗ ನಮ್ಮ ಜನಪದ ದೃಷ್ಟಿಗೆ ವಾಸ್ತವಿಕೆಯ ದರ್ಶನವಾಗುವಂತೆ, ಅದರ ಹಿಂದೆ ಅವೆತುಕೊಂಡಿರುವ ಇನ್ನೊಂದು ಸ್ವರೂಪವೂ ಗೋಚರಿಸುವಂತೆ ತೋರುತ್ತದೆ. ತನ್ನದೇ ಆದ ದೃಷ್ಟಿಯಲ್ಲಿ ವ್ಯಕ್ತಿಯನ್ನು ಕಂಡು, ಅವ್ಯಕ್ತವನ್ನು ಉಂಡು, ತನ್ನದೇ ಆದ ಪರಭಾಷೆಯಲ್ಲಿ ಪ್ರಕಟಗೊಳಿಸಿದ್ದನ್ನು ಅಸಂಖ್ಯ ಗಾದೆಗಳು ಹೇಳಿಕೊಡುತ್ತವೆ. ಅದನ್ನೇ ಅನುಲಕ್ಷಿಸಿ ದಿನಬಳಕೆಯಲ್ಲಿ ನುಡಿದು ತೋರಿಸುವ ಗಾದೆಗಳಾಗಿ ಉಳಿದುಕೊಂಡಿವೆ. ಅವುಗಳಲ್ಲಿ ಪುರಾಣ ಪುರುಷರ ಬಗೆಗೆ ಜನಪದದ ದೃಷ್ಟಿ, ಪುಣ್ಯಕ್ಷೇತ್ರಗಳನ್ನು ಕುರಿತ ಜನಪದದ ಕಾಣ್ಕೆ ವಾಸ್ತವಿಕತೆಯನ್ನು ಮೀರಿ ಅದರಾಚೆಗಿನ ಬೇರೊಂದು ಸತ್ಯವನ್ನು ಇದ್ದಕ್ಕಿದ್ದ ಹಾಗೆ ಹದಗೊಳಿಸಿ ಹೇಳಲು ಹವಣಿಸಿವೆ. ಅವು ನೇರವಾಗಿ ಪುರಾಣ ಪುರುಷರನ್ನಾಗಲಿ, ಪುಣ್ಯಸ್ಥಳಗಳನ್ನಾಗಲಿ ಒಲ್ಲಗಳೆದಂತೆಯೋ ಅಲ್ಲ ಗಳೆದಂತೆಯೋ ಕಂಡರೂ ಅವುಗಳಲ್ಲಿ ಬೇರೊಂದು ಹುರುಳು ಹುದುಗಿಕೊಂಡಿದ್ದು ಕಂಡುಬರುತ್ತದೆ.

‘ಪಾಪಿ ಹೊಳೆ ಬಿದ್ದರೆ ನೀರು ಮಾತ್ರ ಮೊಳಕಾಲ ಕೆಳಗೆ’ ಎನ್ನುವಂತೆ, ಜನಪದದ ಭಾವುಕದೃಷ್ಟಿಗೆ ತೋರುವುದೇನೋ. ಅವರಿಗೆ ‘ಮಂತ್ರಕ್ಕಿಂತ ಉಗುಳೇ ಹೆಚ್ಚು’ ಕಾಣಿಸಿದ್ದು ಎಲ್ಲಿ? ‘ಗುರುವಿಲ್ಲದ ಮಠ’ ಕಂಡಿದ್ದಾವಾಗ? ಹೇಸಿ ಗುರುವನ್ನು ಕಾಣುವುದಕ್ಕೆ ಕಾರಣವೇನು? ‘ಪೂಜೆಗೆ ತಕ್ಕ ಗಂಡ, ಪುಣ್ಯಕ್ಕೆ ತಕ್ಕ ಮಕ್ಕಳು’ ಗೋಚರಿಸುವುದಕ್ಕೆ ತಳಬುಡವಿದೆಯೇ? ‘ಜನ ಮರುಳೋ ಜಾತ್ರೆ ಮರುಳೋ’ ಅನಿಸಿದ್ದು ಯಾವ ಪ್ರಸಂಗದಲ್ಲಿ? ಇವನ್ನೆಲ್ಲ ವಿಚಾರಿಸಲು ನಿಂತವನ ತಲೆಕೆಟ್ಟಿದೆಯೆಂದೇ ಹೇಳುವ ಹಾಗಿದೆ.

‘ಜಂಗಮಜಾತಿ ಗಡಿಗ್ಯಾಗ ಮೋತಿ’, ‘ಲಿಂಗಹರಿದ ಬಳಿಕ ಜಂಗಮದ ಹಂಗು ಏನು’ ಎಂಬ ಅನುಭವವು ಜನಪದಕ್ಕೆ ಬಂದದ್ದು ಅಚ್ಚರಿಯಲ್ಲವೇ?

ಗೋಕಲಾಷ್ಟಮಿಗೂ ಇಮಾಮಸಾಬನಿಗೂ ಏನು ಸಂಬಂಧ?’
ಎಲ್ಲಮ್ಮನ ಜಾತ್ರೆಯಲ್ಲಿ ಮುಲ್ಲಾನದೇನು?‘
ನಮಾಜ ಮಾಡುವಷ್ಟರಲ್ಲಿ ಮಸೀದೆ ಕೊರಳಿಗೆ ಬಿತ್ತು
ಕೊಡುವ ದೇವನು ಬಡವನೇ?’
ಗಣಪತಿಯ ಮದುವೆ ನಿತ್ಯವೂ ನಾಳೆ
ಪರಮಾತ್ಮನಾದರೂ ಸ್ಮಶಾನ ತಪ್ಪದು
ಪಾಪಿಗಳ ದೇವರೆಂದು ಪಾಪಾಸಿನಿಂದ ಹೊಡೆವರೇ?’
ಬಡದೇವರ ಕಂಡರೆ ಬೆಲಪತ್ರಿ ಬುಸ್ಸೆಂದಿತು
ಮಣ್ಣಿನ ದೇವರಿಗೆ ಮಜ್ಜನದಲ್ಲೇ ಮರಣ
ಶಿವ ಕೊಡದಿದ್ದುದನ್ನು ಶಿವಪ್ಪ ಕೊಟ್ಟಾನೇ?’
ಸಂಕಟ ಬಂದಾಗ ವೆಂಕಟರಮಣ
ಸುಳ್ಳ ದೇವರಿಗೆ ಕಳ್ಳ ಪೂಜಾರಿ
ದೇಹ ದೇವಾಲಯ, ಜೀವ ಶಿವಲಿಂಗ

ಇಂಥ ಗಾದೆಗಳಲ್ಲಿ ಪ್ರಗತಿಪರತೆ ಕಾಣಿಸಲಾರವೆಂದು ಯಾರು ಹೇಳುವರು? ಸನಾತನ ಅಂಶಗಳು ಒಡೆದು ಕಾಣುವದಿಲ್ಲವೆಂದು ತಿಳಿದವರು ಎಲ್ಲಿದ್ದಾರೆ? ‘ಗಂಗಾಸ್ನಾ ತುಂಗಾಪಾನ’ದಲ್ಲಿ ಅನುಭವದ ಆಳವಿದ್ದಂತೆ ವಾಸ್ತವಿಕತೆಯಿಲ್ಲವೆಂದು ಎಂಟೆದೆಯವರನ್ನು ಹುಡುಕಿ ತರಬೇಕಾಗಿದೆ.

‘ನಾಕದವನಿಗೆ ಲೋಕದ ಭಯವೇನು?’ ಅವತಾರಿಯು ಮತಿಗೆಟ್ಟ ಮನುಷ್ಯನಂತೆ ಕಷ್ಟ ಸಂಕಟಗಳಿಗೆ ಈಡಾಗುವುದು ನಗೆಗೇಡಿನ ವಿಷಯವೆನಿಸುವದಿಲ್ಲವೇ? ನಗುವವರ ಮುಂದೆ ಎಡವಿಬೀಳುವ ಚೋದ್ಯ ಇಲ್ಲಿ ಕಾಣುವದಿಲ್ಲವೇ? ಅದರಂತೆ ‘ಪರಲೋಕಕ್ಕೆ ಹೋದವಗೆ ನರಲೋಕದ ಭಯವೇನು’ ಎಂದು ಕೇಳುವುದು ಪುಕ್ಕರೆದೆಗೆ ಸಾಧ್ಯವೇ?

ಪಾಪಿ ಗಳಿಸಿದ್ದು ಪರರ ಪಾಲು
ಪುಣ್ಯವಿಲ್ಲದವನ ಕೈಯಲ್ಲಿ ಪರುಷವೂ ಪಾಷಾಣ
ಎತ್ತ ಹೋದರೂ ತನ್ನದತ್ತ ಬಿಡದು

ಪುರಾಣ ಪುಣ್ಯಕಥೆ ಕೇಳಿದವನೂ ಈ ಗಾದೆಗಳನ್ನು ಬಳಸದೆ ಬಿಡುವದಿಲ್ಲ. ತೀರ್ಥ ಕ್ಷೇತ್ರಗಳ ಯಾತ್ರೆ ಮಾಡಿದರೂ ಅದರೊಳಗಿನ ಸೂತ್ರದಿಂದ ಕಡೆಗಾಗಿ ನಿಲ್ಲಲಾರನೆಂಬುದು ಹದಿನಾರಾಣೆ ಸತ್ಯ. ಯಾಕೆಂದರೆ,

ಮಾಡಿದ ಪಾಪಕ್ಕೆ ಮನವೇ ಸಾಕ್ಷಿ
ಮನವರಿಯದ ಕಳ್ಳತನ ಇನ್ನಾವುದಿದೆ?’
ನೆಕ್ಕೋ ನಾಯಿಗೆ ಲಿಂಗವೇನು ಪೀಠವೇನು?’
ಮಾರಿಯ ಕಣ್ಣು ಹೋತಿನ ಮೇಲೆ
ಪಂಚಮದ ಶನಿ ಹಂಚಿನಲ್ಲಿ ಉಣಿಸ್ಯಾನು
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡನು

ದೇವರಾವುದು, ದೇವ ಶಕ್ತಿ ಯಾವುದು ತಿಳಿಯದ ಅಗ್ಗಳಿಕೆ ಒತ್ತಟ್ಟಿಗೆ ಎದ್ದು ಕಾಣುತ್ತಿದ್ದರೆ, ಅದು ಇಲ್ಲೇ ಇದ್ದೇನೆಂದು ಒಮ್ಮೆಯಾದರೂ ಹೇಳದಿರುವದಿಲ್ಲ. ಶರಣರ ಸಂಗವಿದ್ದರೆ ಕೈಲಾಸವೇನು ಭೂಲೋಕವೇನು? ಪುರಾಣ ಪುಣ್ಯಸ್ಥಳಗಳಂತೆ ಐತಿಹಾಸಿಕ ಸ್ಥಳಗಳೂ ಇತಿಹಾಸದಲ್ಲಿ ಹೆಸರುಳಿಸಿದ ರಾಜ ಸಚಿವರೂ ಗಾದೆಗಳ ಕಟಾಕ್ಷಕ್ಕೆ ಸಿಗದೆ ಹೋಗಿಲ್ಲ.

ಬುಕ್ಕರಾಯ ಮೆಚ್ಚಿ ಬೆಕ್ಕಿನ ಮರಿ ಕೊಟ್ಟ
ಇಜ್ಯಾಪುರದಲ್ಲಿ ಇಜಾರದವರಿಗೇನು ಕಡಿಮೆ?’

ಒಂದು ಸಂಪನ್ನರ ಸಣ್ಣ ಮನಸ್ಸು ತೋರಿಸಿಕೊಟ್ಟರೆ, ಇನ್ನೊಂದು, ವಿಜಾಪುರದಲ್ಲಿ ಧೋತರವುಡುವ ಹಿಂದುಗಳಂತೆ ಇಜಾರ ಧರಿಸುವ ಮುಸ್ಲಿಮರೂ ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ ಸಂಗತಿಯನ್ನು ಸೂಚಿಸುತ್ತದೆ.

ಇನ್ನು, ಪುಣ್ಯಸ್ಥಳಗಳ ವೈಶಿಷ್ಟ್ಯವನ್ನು ಹೇಳಿಕೊಡುವ ಗಾದೆಗಳತ್ತ ತೆರಳೋಣ.

‘ಹಂಪೆಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದು ಲೇಸು’ ಅತುಲ ವೈಭವದಿಂದ ಮೆರೆದ ವಿಜಯನಗರದೊಡನೆ ಅದರ ಮಗ್ಗುಲಲ್ಲಿದ್ದ ಹಂಪೆಯೂ ಹಾಳುಬಿದ್ದ ಶೋಚನೀಯ ಸ್ಥಿತಿಯನ್ನು ಈ ಗಾದೆ ಉಸುರುತ್ತದೆ.

ಊಟಕ್ಕೆ ಧರ್ಮಸ್ಥಲ, ನೋಟಕ್ಕೆ ನಂಜನಗೂಡು
ಭವ್ಯ ಕೆಲಸಕ್ಕೆಲ್ಲ ಹಂಪಿ, ಕುಸುರಿ ಕೆಲಸಕ್ಕೆ ಬೇಲೂರು
ಬೇಲೂರು ಒಳಗೆ ನೋಡು, ಹಳೆಬೀಡು ಹೊರಗೆ ನೋಡು

ಆಯಾ ಸ್ಥಳಗಳನ್ನು ಸಂದರ್ಶಿಸಿದಾಗ ಕಣ್ಣಾರೆ ಕಂಡ ಸತ್ಯಸಂಗತಿಯನ್ನೇ ಅಚ್ಚುಕಟ್ಟಾಗಿ ಹೇಳಿದ ನುಡಿ ಗಾದೆಯ ಮಾತಿನಂತೆ ಅಜರಾಮರವಾಗಿ ನಿಂತಿವೆ.

ಲಂಕೆಯೆಂದರೆ ರಾಮನಂಥ ಅವತಾರಿಯನ್ನೂ ದಿಗಿಲುಗೊಳಿಸಿದ ಹತ್ತು ತಲೆಯ ರಾವಣನ ರಾಜಧಾನಿ. ರಾವಣನ ಹೆಸರು ಕೇಳಿದಾಗ ಆಗುವ ಅಸವಿಸಿಯು ಲಂಕೆಯ ಹೆಸರು ಕೇಳಿದಾಗಲೂ ಆಗುವುದುಂಟು. ಆದರೆ ಅದೆಷ್ಟು ಕಾಲ? ಅದೆಷ್ಟು ಜನರನ್ನು ಭುಗಿಲುಗೊಳಿಸೀತು? ಎಂಟೆದೆಯವರು ಅಂಜುಗುಳಿಗಳ ಅಳುಕನ್ನು ಕರಗಿಸುವ ಮಾತು ಹೇಳಿದರು ‘ಲಂಕೆಯಲ್ಲಿ ಹುಟ್ಟಿದವರೆಲ್ಲ ರಾವಣರಲ್ಲ’ ಅಹುದು. ಅಲ್ಲವೇ ಅಲ್ಲ. ಆದರೆ ಅಲ್ಲಿ ಕುಂಭಕರ್ಣನಾಗಲಿ ವಿಭೀಷಣನಾಗಲಿ ಹುಟ್ಟಿದ್ದು ಸುಳ್ಳೇ? ‘ಅಂಕೆಯಿಲ್ಲದ ಕಪಿ ಲಂಕೆಯನ್ನು ಸುಟ್ಟಿತು’ ಎಂದಾಗ ಅದು ಮನುಷ್ಯನಿಗೆ ಈಡೇ ಎನ್ನುವ ಕೆಚ್ಚು ನುಡಿ ಬಿಚ್ಚಿ ಬೀಳದೇ?

ಮರದ ಹೆಸರಿನಿಂದ ಹಣ್ಣಿಗೆ ಬೆಲೆ ಬರುವುದುಂಟು. ಅದರಂತೆ, ಹೆಸರಿನಿಂದ ಹಿಂಜರಿಸುವ ಸ್ಥಳಗಳೂ ಇಲ್ಲದಿಲ್ಲ.

‘ಶೃಂಗೇರಿಗೆ ದನ ಕೊಡಬೇಡ, ವೈಕುಂಠಪುರಕ್ಕೆ ಹೆಣ್ಣ ಕೊಡಬೇಡ’. ಅಲ್ಲಿ ಮೇವಿನ ಕೊರತೆ, ಇಲ್ಲಿ ನೀರಿನ ಕೊರತೆಯಿರಬಹುದೇನೋ, ಮೇವು ಸಾಲದೆ ದನ ಮಿಡುಕಬಹುದು, ನೀರು ಹೊತ್ತು ಮೊದಲಗಿತ್ತಿ ಸಿಡುಕಬಹುದು. ಆದ್ದರಿಂದ ಆ ದಾರಿಯೇ ಬೇಡವೆಂದು ಗಾದೆ ಕೆಂಪು ಬಾವುಟ ತೋರಿಸಿರಬಹುದು.

ಪುರಾಣ ಪುರುಷರ ಅಂತಃಶಕ್ತಿಯನ್ನು ಒಂದೇ ಮಾತಿನಲ್ಲಿ ಹೇಳಿ ಕೃತಾರ್ಥವಾದ ಗಾದೆಗಳು ಇಲ್ಲಿವೆ, ಕೇಳಿರಿ-

ಬಲದಲ್ಲಿ ವಾಲಿ, ಛಲದಲ್ಲಿ ರಾಮ
ರಾಮನ ಬಾಣಕ್ಕೆ ಹುಸಿಯಿಲ್ಲ, ವಾಲಿಯ ಮೈಗೆ ಕಲೆಯಿಲ್ಲ

ಸತ್ತ್ವ ಶಾಲಿಗಳು ತಮ್ಮ ಅಂತಶ್ಯಕ್ತಿಯನ್ನು ಕಳಕೊಂಡು, ಹರಳು ಹೋದ ಗೆಜ್ಜೆಯಾಗುವುದಕ್ಕೆ ಕಾರಣವೇನೆಂಬುದನ್ನು ಗಾದೆ ಹೇಳದೆ ಬಿಟ್ಟಿಲ್ಲ.

ಹೆಣ್ಣಿನಿಂದ ರಾವಣ ಕೆಟ್ಟ, ಮಣ್ಣಿನಿಂದ ಕೌರವ ಕೆಟ್ಟ
ಉತ್ತರನ ಪೌರುಷ ಒಲೆಯ ಮುಂದೆ,
ನನ್ನ
ಪೌರುಷ ಎಲೆಯ ಮುಂದೆ

ಒಂದೊಂದು ಕಾರಣದಿಂದ ಒಬ್ಬೊಬ್ಬ ವ್ಯಕ್ತಿ ಕೆಡುತ್ತಾನೆ. ಗಣಪತಿ ಮಾಡುವಷ್ಟರಲ್ಲಿ ತಪ್ಪಿ ಮಂಗವಾಗಬಹುದು, ಇಲ್ಲವೆ ಜೋಕುಮಾರ ಆಗಬಹುದು. ಮಾಡುವಷ್ಟರಲ್ಲಿ ತಪ್ಪು ಆದೀತೆಂದು ಮಾಡುವುದನ್ನು ಯಾರೂ ಬಿಡಲಾರರು. ಮಾಡಿ ಕೆಟ್ಟವರಲ್ಲಿ ರಾವಣ ಕೌರವ ಅಗ್ರಗಣ್ಯರು. ಆದರೆ ಹಾಗೆ ಮಾಡುವೆ ಹೀಗೆ ಮಾಡುವೆ ಎಂದು ಒಲೆಯ ಮುಂದೆ ಪೌರುಷದ ಮಾತು ಹೇಳುವುದನ್ನು ಬಿಟ್ಟಿಲ್ಲ. ಉತ್ತರನು ಒಲೆಯ ಮುಂದೆ ಪೌರುಷ ಹೇಳಿದರೆ ನಿರುತ್ತರರಾದ ನಾವು, ಎಲೆಯ ಮುಂದೆ ಮಾತ್ರ ಪೌರುಷ ಹೇಳಿಕೊಳ್ಳುವೆವು. ಹೊಟ್ಟೆಬಾಕರಾದ ತಿಂದೋಡಿಗಳಿಗೆ ಅದೇ ಪೌರುಷ.

ಎದುರಾಳಿಯಾಗಿ ದಂಡಿನಲ್ಲಿ ನಿಂತವನು ಸೋದರಮಾವನೇ ಆಗಿದ್ದರೂ ಅವನು ವಧ್ಯನೇ ಎಂಬುದಕ್ಕೆ ‘ದಂಡಿನಲ್ಲಿ ಸೋದರಮಾವನೇ’ ಎಂದು ಕೇಳುತ್ತದೆ ಗಾದೆ. ಕುರುಬರ ಡೊಳ್ಳಿನಂತೆ ಒತ್ತಟ್ಟಿಗೆ ಟುಂ, ಇನ್ನೊತ್ತಟ್ಟಿಗೆ ಡುಬ್ ಎನ್ನುವ ನೀತಿ ಕೆಲವರಿಗೆ ಇರುವುದುಂಟು. ಅದು ಮಹಾಭಾರತದ ಕಾಲಕ್ಕೂ ಇತ್ತು. ‘ಪಕ್ಷ ಪಾಂಡವರಲ್ಲಿ, ಊಟ ಕೌರವರಲ್ಲಿ’ ಇದೇ ಭೀಷ್ಮ ನೀತಿ. ಅವನನ್ನು ಕುರಿತು ಗಾದೆ ಹೇಳುತ್ತದೆ. ‘ಭೀಷ್ಮಾಚಾರ್ಯರಿಗೆ ಆಜನ್ಮ ನೆಗಡಿ’.

ತಮ್ಮದೇ ಆದ ಪ್ರಥಮ ದರ್ಜೆಯಲ್ಲಿ ಸೇರಿದ ಹಲವಾರು ಪುಣ್ಯಪುರುಷರಿದ್ದಾರೆ. ಅವರಲ್ಲಿ ಕೆಲವರ ಹೆಸರನ್ನು ಮಾದರಿಗಾಗಿ ಹೇಳಬಹುದಾಗಿದೆ.

ಬಕಾಸುರನ ಊಟ, ಕುಂಭಕರ್ಣನ ನಿದ್ರೆ
ಆಗುಭೋಗಕ್ಕೆ ಅಗಸ್ತೇಶ್ವರ
ಸತ್ಯ ಪ್ರಮಾಣಕ್ಕೆ ಮಾರ್ಕಂಡೇಯ
ರಾಜಯೋಗ ದರಿದ್ರ ಜಾತಕ

ಪುರಾಣ ಪುಣ್ಯಕಥೆಗಳನ್ನು ಹೇಳಿಕೊಂಡು ಹೊಟ್ಟೆಹೊರೆದುಕೊಳ್ಳುವವನ ಸ್ವಭಾವಕ್ಕೆ ಬೇರು ಯಾವುದು ಎಂದು ಕೇಳುವ ಕಾರಣವೇ ಇಲ್ಲ. ‘ಓದುವುದು ಕಾಸೀಖಂಡ, ತಿನ್ನುವುದು ಮಸಿಕೆಂಡ’ ಅಲ್ಲಿ ಕೇಳಿಬರುವುದು ಮಂತ್ರ ಮಾತ್ರ. ಆದರೆ ಸಿಡಿದುಬರುವುದು ತುಂತುರ ಉಗುಳು. ಬರಬರುತ್ತ ಅದು ತಿರುವುಮುರುವಾಗಿ ಮಂತ್ರಕ್ಕಿಂತ ಉಗುಳೇ ಜಾಸ್ತಿಯಾಗಿ ಬಿಡುತ್ತದೆ. ಆ ಉಗುಳು ಸಿಡಿದೇ ಬೆಂಕಿಯಂಥ ಮಂತ್ರ ತೊಳೆದ ಕೆಂಡವಾಗಿ ಮಸಿಕೆಂಡ ಅನಿಸಿತೇನೋ.

ಗುಡ್ಡದ ಸುದ್ದಿ ಇಲಿಗೆ ತಿಳಿದಷ್ಟು ಮೀನಿಗೆ ತಿಳಿಯದು. ಕಡಲ ಸುದ್ದಿ ಮೀನು ಅರಿತಷ್ಟು ಇಲಿ ಅರಿಯದು. ಆದರೆ ಇಲಿ-ಮೀನುಗಳು ತಮಗೆ ತಿಳಿಯದ ವಿಷಯವನ್ನು ಡಂಗುರಿಸ ತೊಡಗುತ್ತವೆ. ಗುಡ್ಡದ ಸುದ್ದಿ ಮೀನು, ಕಡಲ ಸುದ್ದಿ ಇಲಿ ಹೇಳಿದರೆ ತಳಬುಡವಿಲ್ಲದ ಸುಳ್ಳು ಜೊಳ್ಳು ಅನಿಸುತ್ತದೆ. ಪುರಾಣಿಕರಾಗಲಿ, ಪ್ರವಚನಕಾರರಾಗಲಿ ಇಲಿ ಮೀನುಗಳ ಕಾರ್ಯ ನಿರ್ವಹಿಸಿದ್ದನ್ನು ಕಂಡ ಜನಪದವು ತೆಪ್ಪಗೆ ಕುಳಿತುಬಿಡಲಿಲ್ಲ. ಒಂದು ಗಾದೆಯನ್ನೇ ರೂಢಿಗೆ ತಂದಿತು. ‘ಗುಡ್ಡದ ಸುದ್ದಿ ಮೀನು ಹೇಳಿದ್ದು, ಸಮುದ್ರದ ಸುದ್ದಿ ಇಲಿ ಹೇಳಿದ್ದು’ ಹೀಗೆ ಜನಪದದ ತಿಳುವಳಿಕೆಯನ್ನು ತಿಳಿಗೆಡಿಸಿದ ಮೇಲೆ ಅದನ್ನು ತಿಳಿಗೊಳಿಸುವವರು ಯಾರು? ಎಲ್ಲಿ ಆ ಪುರಾಣಿಕರು, ಎಲ್ಲಿ ಆ ಪ್ರವಚನಕಾರರು? ಊರು ಸುಟ್ಟರೂ ಹನುಮಪ್ಪನಂತೆ ಹೊರಗೆ ಹಾಯಾಗಿರುತ್ತಾರೆ.

ಸುಟ್ಟು ಹೋದ ಊರಿನ ಹೊರಗೆ ನಿಂತು ಹನುಪ್ಪ ಗಳಿಸುವುದೇನು? ‘ಇದ್ದೂರ ಕೋರಾನ್ನ, ಬೇರೂರ ಭಿಕ್ಷೆ ಎರಡೂ ಕೈಕೊಡುವವು’ ಅಪ್ಪಿತಪ್ಪಿ ಬರುವ ನೈವೇದ್ಯಕ್ಕೆ ಸಂಚಕಾರ. ‘ದೇವರ ಕಡೆಗೆ ಕಯ್, ಮನೆಯ ಕಡೆಗೆ ಒಯ್’ ಜನರನ್ನು ಒಲಿಸಿಕೊಳ್ಳುವ ಸಲುವಾಗಿ ಹನುಮಪ್ಪ ಮೇಷ ಬದಲಿಸಬಹುದು. ನಾರಬಟ್ಟೆಯುಟ್ಟು ಮುನಿಯಂತೆ ಕಾಣಲೆಳಸಬಹುದು. ಆದರೆ ‘ನಾರು ಉಟ್ಟವರೆಲ್ಲ ನಾರದರಾಗಬಲ್ಲರೇ?’ ಹನುಮಪ್ಪನು ಹಸಿದು ಹಗ್ಗತಿನ್ನುವಾಗ ಪೂಜಾರಿಗೆ ಶಾವಿಗೆಯ ಊಟ ತಪ್ಪದು. ಯಾಕೆಂದರೆ ‘ಪರಮೇಶ್ವರನ ಹೆಸರು ಹೇಳಿದವರು ಪರಮಾನ್ನ ಉಂಡರು’. ಅಂಥವರ ಬಾಳು ಬಂಗಾರದ್ದು. ‘ಭಕ್ತರ ಮನೆ ಊಟಕ್ಕೆ ಬಸವಿಯ ಮನೆ ನಿದ್ರೆಗೆ’.

ssಸಾವಿರಾರು ವರ್ಷಗಳಿಂದ ಗಾದೆಗಳು ಗೇಲಿಮಾಡಿ ಪುರಾಣ ಪುಣ್ಯ ಕ್ಷೇತ್ರಗಳನ್ನು ಮೂದಲಿ ಸುತ್ತಲೇ ಬಂದಿವೆ. ವೇದಗಳಿಗೆ ಮಣಿಯದವರು ಗಾದೆಗಳಿಗೆ ಹಣಿಯುವರೇ? ನಾಯಬಾಲಿನ ಡೊಂಕು ಲಳಿಗೆಯಲ್ಲಿ ಹಾಕಿನೋಡದೆ ಕೊಯ್ದು ಒಗೆದರೆ ಹೋದೀತೇನೋ – ನೋಡಬೇಕೆಂದವರೂ ಇದ್ದಾರೆ. ಆದರೆ ಪ್ರಭುದೇವರಂಥ ಶ್ರೇಷ್ಠ ಸತ್ಪುರುಷರು ‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರಗೋಷ್ಠಿ’ ಎಂದು ಹೇಳಿಬಿಡುವ ಪ್ರಗತಿಪರ ವಿಚಾರಕ್ಕೆ ಗಾದೆಗಳೇ ತಳಹದಿ ಆಗಿರಬಹುದೇ ಎಂಬ ಅನುಮಾನವುಂಟಾಗುತ್ತದೆ.