ಏಕಪತ್ನಿವ್ರತಸ್ಥನಾಗಿರಬೇಕಾದ ಗಂಡಸು ಏಕೈಕ ಪತ್ನಿಗಳೊಡನೆ ಕ್ರೀಡಿಸಿದರೂ ಅದು ಗೃಹಸ್ಥ ಧರ್ಮಕ್ಕೆ ಬಾಹಿರವೆನಿಸದು. ಹೆಂಡತಿಯಿಲ್ಲದವನು ಬೇರೊಬ್ಬ ಹೆಂಗಸಿನೊಡನೆ ಸಂಬಂಧ ಬೆಳೆಸುವುದಕ್ಕೆ ಹೊರಬುದ್ಧಿ ಎನಿಸುತ್ತದೆ. ಲಕ್ಷ್ಮಣರೇಖೆಯನ್ನು ದಾಟುವ ಕ್ರಮ ಹಾದರವೆನಿಸುತ್ತದೆ. ಆಕೆಗೆ ಸೂಳೆಯೆನ್ನಲೂಬಹುದು, ಸೂಳೆಗೆ ತತ್ಸಮನಾದ ಪುರುಷನು ಭುಜಗ ನೆನಿಸುತ್ತಾನೆ.

ಹೆಣ್ಣು ಕುಡಿಯುವ ನೀರು ಇದ್ದಂತೆ. ಗಂಡು ಬಳಸುವ ನೀರು ಇದ್ದಂತೆ. ಕುಡಿಯುವ ನೀರಲ್ಲಿ ಒಂದು ಬೊಟ್ಟು ಅದ್ದಿದರೂ ಅದು ಕೆಟ್ಟಿತೆಂದು ಚೆಲ್ಲಿ ಬಿಡುತ್ತಾರೆ. ಆದರೆ ಬಳಸುವ ನೀರಲ್ಲಿ ಕಾಲು ಅದ್ದಿದರೂ ಅದನ್ನು ಚೆಲ್ಲುವ ಕಾರಣವಿಲ್ಲ. ಸೂಳೆಯ ಮಗನೆಂದು ಜಂಕಿಸಿದರೂ ದೋಷವಿಲ್ಲ. ಸೂಳೆಯ ಗಂಡನೆನಿಸಿಕೊಳ್ಳಲು ಯಾವ ಗಂಡಸೂ ಒಪ್ಪಲಾರನು.

ಹಾದರವಾಗಲಿ ಸೂಳೆಗಾರಿಕೆಯಾಗಲಿ ಹೆಣ್ಣು ಒಬ್ಬಳಿಂದಲೇ ಸಂಗಳಿಸಲಾರದು. ಅದಕ್ಕೆ ಗಂಡಸೂ ಅರ್ಧ ಪಾಲುಗಾರನಾಗಿರುತ್ತಾನೆ. ಆದರೆ ಅಪವಾದ ಬರುವುದು ಯಾರಿಗೆ? ಅಪರಾಧ ಹೊರುವುದು ಯಾರು? ಗಂಡಸು ನಿಚ್ಚಳವಾಗಿಯೇ ಉಳಿಯುತ್ತಾನೆ. ಯಾಕಂದರೆ ಮುದ್ದೆ ಮಾಲು ಸಿಗುವುದು ಹೆಣ್ಣಿನಲ್ಲಿ ಅಲ್ಲವೇ? ‘ಭವಳಾರಂಡಿ ನನಗೇನು ಗೊತ್ತು? ಕರೆದನೆಂದು ಹೋದೆ, ಭವಳಾರಂಡಿ ನಾನು. ಒಳಗೆ ಬಾ ಎಂದ ಭವಳಾರಂಡಿ ನನಗೇನು ಗೊತ್ತು? ಹೋದೆ. ಹೀಗೆ ಆಗುವುದೆಲ್ಲ ಆಗಿಬಿಟ್ಟಿತು. ಭವಳಾರಂಡಿ ನನಗೇನು ಗೊತ್ತು? ಮಾಲಮುದ್ದೆ ನನ್ನಲ್ಲಿಯೇ ಸಿಕ್ಕಿತು. ನಾನು ಸಿಕ್ಕುಬಿದ್ದೆ. ಹಾದರಗಿತ್ತಿಯೆನಿಸಿದೆ, ಸೂಳೆಯೆನಿಸಿದೆ. ಸೂಳೆತನ ನನ್ನ ಪದರಲ್ಲಿ ಬಿತ್ತು’.

ದೊಡ್ಡ ದೊಡ್ಡ ಮನುಷ್ಯರು ಕದ್ದು ಮುಚ್ಚಿ ಬರಹತ್ತಿದರು. ಬೆಲೆ ಇಳಿಯಿತು, ಸಣ್ಣವರೂ ಬರಹತ್ತಿದರು. ‘ಕೊಡುವುದು ಕಾಸು, ಮನೆಯ ಕೌದಿಗಳನ್ನೆಲ್ಲ ಹಾಸು’ ಅನ್ನತೊಡಗಿದರು. ‘ಕಂಗೆಟ್ಟು ಕಂಬಾರನಿಗೆ ಹೋದರೆ ಮೂಗಿನ ತಟಕು ಬಾಯಲ್ಲಿ ಬಿತ್ತು’. ಉದ್ದರಿ ಗಿರಾಕಿಗಳು ಬಂದವು ಆದರಾಗಲಿ – ಎಂದೆ. ‘ಕಾಳಿಯಾಗಲಿ ಬೋಳಿಯಾಗಲಿ ಲೋಳಿಹೋದರೆ ಸಾಕು’ ಎನ್ನುವವರೂ ಸಂಗಳಿಸಿದರು. ಅರ್ಧನಾರೀ ನಟೇಶ್ವರನ ನಾಟ್ಯಕ್ಕೂ ರಂಗಸ್ಥಳವಾದೆ. ಅವನ ಕುಣಿತಕ್ಕೆ ತಾಳ ಹಾಕಿದೆ. ಮರುಕ್ಷಣದಲ್ಲಿ ತಿಳಿಯಿತು ಅವನ ಬಂಡವಲು ‘ಅಳತ ಹಡತೀ ನನಗೇನು ಕೊಡತೀ’ ಅಂದೆ. ‘ಮರೆತು ಮಲಗಿದೆ, ಮನೆಯಲ್ಲಿ ಜೋಳವಿಲ್ಲ’ ಎಂಬ ಉತ್ತರ ಬಂದಿತು. ‘ಬಂದ ದಾರಿಗೆ ಸುಂಕವಿಲ್ಲ’ ಎಂದೆ. ಒಂದೇ ಮಾತಿಗೆ ಹೋಗಿಬಿಡಬೇಕೇ? ‘ಸುಖ ತೊಡಕಾಲು ಹೊಡೆಯಿತು’ ಎಂದಕೊಂಡೆ.

‘ಮಾಡಿಕೊಂಡ ಗಂಡ ಕೂಡಿಕೊಂಡ ಮೇಲೆ ತಿಳಿಯಿತು’. ‘ಕರೆದು ಹೆಣ್ಣು ಕೊಟ್ಟರೆ ಅಳಿಯನಿಗೆ ಮಲರೋಗ’ ಬರಬೇಕೇ? ಮಾವ ಧೈರ್ಯ ಹೇಳಿದನು, ಆದರೇನು? ‘ಮಾವನದು ಮೊಳಕಾಲಿಗೆ ಬಡಿಯುವಷ್ಟು ಇದ್ದರೆ ಸೊಸೆಗೇನು ಬಂತು?’ ಇದೆಲ್ಲ ಒಂದು ನಿಟ್ಟಿನ ಕ್ರಮವಾಯಿತು. ಹೊರಬುದ್ದಿ ಹಣಿಕೆ ಹಾಕಿತು. ಪರಿಣಾಮ ಏನಾಯಿತೆಂದರೆ ‘ಬಿಟ್ಟು ಹಣಿಕೆ ಹಾಕಿದವನನ್ನು ಹಿಡಿದರು’. ನೆಲ್ಲಿ ಕಾಯಿ ತಿಂದು ನೀರು ಕುಡಿಯಬೇಕೆಂದರೆ, ಗಜ್ಜರಿ ಬೇರು ಸಿಕ್ಕಿತು. ತಿಂದು ನೀರು ಕುಡಿದರೆ ಬಾಯಿ ಸವುಳಾಯಿತು. ನೆಲ್ಲೀಕಾಯಿ ಮೇಲಿನ….ಕಾಯಿಯೆಂದು ತಿಳಕೊಂಡಿದ್ದೇ ತಪ್ಪು ಅಲ್ಲವೇ?

‘ಭತ್ತ ಇದ್ದೂ ಬಡತನ, ಗಂಡ ಇದ್ದೂ ರಂಡಿತನ’. ಭೋಗಿಸುವ ದೆಸೆಗೇಡಿ ಇದ್ದರಂತೂ ‘ಉಂಡೂ ಉಟ್ಟೂ ಗಂಡನಿಗಳುವ ರಂಡೆ’ಯರೂ, ‘ಊರ ತುಂಬ ಗಂಡರಿದ್ದರೂ ಉಡಲಿಕ್ಕೆ ಸೀರೆ ಕಾಣದ ಮುಂಡೆ’ ಯರೂ ಸಾಕಷ್ಟು ಸಿಗುತ್ತಾರೆ. ಕಣ್ಣಿಲ್ಲದಿದ್ದರೂ ಗಂಡನ್ನೊಪ್ಪುವ ಕುರುಡೆ, ಹೆಂಗಸಿರುವಂತೆ, ಕುರುಡೆಯನ್ನೊಪ್ಪುವ ಬುದ್ಧಿ ಗುರುಡ ಗಂಡಸರೂ ಇಲ್ಲದಿಲ್ಲ. ‘ಕುರುಡೆಯ ಹಾದರಕ್ಕೆ ಊರೆಲ್ಲ ನಿದ್ರೆಗೇಡು’ ಎಂಬ ಗಾದೆ ಹುಟ್ಟಿಸಿಕೊಂಡು ಆಡಿದ್ದಲ್ಲ. ಮಧ್ಯರಾತ್ರಿಯ ನಿಸ್ತಬ್ಧ ವಾತಾವರಣದಲ್ಲಿ ಭುಜಗ ಅಂದರೆ ಮಿಂಡನ ಮನೆಯತ್ತ ಎಡಹುತ್ತ ನುಗ್ಗುತ್ತ ಕೋಲೂರುತ್ತ ಸಾಗಿ ಯಾರದೋ ಮನೆಯ ಮುಚ್ಚಿದ ತಲೆಬಾಗಿಲನ್ನು ತಟ್ಟುವಳು ‘ಯಾರವರು’ ಎಂಬ ಗಡಸುನುಡಿ ಒಳಗಿನಿಂದ ಕೇಳಿಬರುತ್ತಲೇ ತನ್ನ ತಪ್ಪು ತಿಳಿದ ಕುರುಡಿ ಸಪ್ಪಳಿಲ್ಲದೆ ಮುಂದೆ ಸಾಗುವಳು. ಮತ್ತೆ ಅದೇ ಹಾಡು. ಮತ್ತೆ ಅದೇ ಮುಂದಿನ ದಾರಿ ಅರಸುತ್ತ ಕೋಳಿ ಕೂಗುವ ಹೊತ್ತಾಯಿತೋ ಏನೋ ಎಂಬ ಎದೆಗುದಿ ಹುಟ್ಟಿದರೂ ಮುಂದೆ ಸಾಗುವ ಲವಲವಿಕೆಯಲ್ಲಿ ಹಿಂದಿರುಗದಿದ್ದರೂ ಸುತ್ತು ಬಳಸಿ ತನ್ನ ಮನೆಯ ಹೆಬ್ಬಾಗಿಲಿಗೆ ಬರುವಳು. ಹೀಗೆ ಊರೆಲ್ಲ ನಿದ್ರೆಗೇಡಾಗುವಂತೆ ಮಾಡುವ ಕುರುಡೆಯ ಹಾದರ ಅದೆಷ್ಟು ಯಶಸ್ವಿಯಾಗುವುದೋ ಅವಳಿಗೇ ಗೊತ್ತು.

ತಿಳಕೊಳ್ಳುವುದು ತೀರುತ್ತಲೆ ತಿಳುವಳಿಕೆ ಉಂಟಾಗುವಂತೆ, ಬುದ್ಧಿಯೆಲ್ಲ ಹೊರ ಬಿದ್ದಾಗಲೇ ಹೊರಬುದ್ದಿ ತಲೆದೋರುತ್ತದೆ, ಇಲ್ಲವೆ ಹಣಕಿ ಹಾಕುತ್ತದೆ. ಚಪ್ಪಾಳೆ ಬಡಿಯುವುದಕ್ಕೆ ಒಂದೇ ಕೈ ಸಾಲದು, ಎರಡೂ ಕೈಗಳು ಬೇಕು. ಹೊರಬುದ್ಧಿ ಕಾರ್ಯರೂಪಕ್ಕೆ ಬರಬೇಕಾದರೆ ಗಂಡು ಹೆಣ್ಣು ಎರಡೂ ತಪ್ಪಿತಸ್ಥರಾಗಲು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬಲಾತ್ಕಾರದ ರೀತಿಯೇ ಬೇರೆ. ಬಲಾತ್ಕಾರವೆಂದರೆ ಬಲವುಳ್ಳವರ ಕೆಲಸ. ಮಾನಗೇಡಿತನವನ್ನು ಅಳವಡಿಸಿಕೊಳ್ಳುವ ಕೆಚ್ಚೇ ಬಲವುಳ್ಳವರ ಬಂಡವಲು. ಬಲಾತ್ಕಾರವು ಗಂಡಿನ ಕೆಲಸವೆಂದು ಮೇಲು ನೋಟಕ್ಕೆ ಕಾಣುತ್ತದೆ. ಆದರೆ ದೇಹಬಲಕ್ಕಿಂತ ಮನೋಬಲ ಹೆಚ್ಚಿನದು. ಅದು ಒಂದೆಡೆ ಗಂಡಿನಲ್ಲಿ ಹೆಚ್ಚಿಗಿರಬಹುದು. ಇನ್ನೊಂದೆಡೆ ಹೆಣ್ಣಿನಲ್ಲಿ ಹೆಚ್ಚಿಗಿರಬಹುದು. ಮನೋಬಲವು ದೇಹಬಲವನ್ನು ಒಂದೇಟಿಗೆ ಸೋಲಿಸಿಬಿಡಬಲ್ಲದು. ಹೆಣ್ಣಿನ ಕಣ್ಣ ನೋಟದ ಒಂದೇ ಒಂದು ಕಿರಣವಾದರೆ ಸಾಕು ಗಂಡಿನ ಕಣ್ಣು ಕುಕ್ಕಿಸುವುದಕ್ಕೆ. ತಿಂದುದನ್ನು ಕಕ್ಕಿಸಲಿಕ್ಕೆ ಮೂರ್ಛೆಗೊಳಿಸಿ ಬಿಕ್ಕಿಸಲಿಕ್ಕೆ ಹೆಣ್ಣಿನ ಮುಗುಳ್ನಗೆಯೊಂದೇ ಸಾಕು. ಗಂಡಸು ಅದೆಂಥ ಹರಿತಕತ್ತಿಯಾಗಿದ್ದರೂ ಅದು ಸ್ತ್ರೀಮುಖವ್ಯಾಘ್ರದ ಒಂದೇ ಒಂದು ಉಸಿರಿಗೆ ಮೊಂಡವಾಗಿಬಿಡುತ್ತದೆ. ಕೂದಲನ್ನು ಸೀಳಬಲ್ಲ ಗಂಡಿನ ಅಲಗು, ಬೆಣ್ಣೆ ಮುದ್ದೆಯನ್ನು ಸಹ ಇಬ್ಬಾಗಿಸಲು ಅಸಮರ್ಥವಾಗುವುದೆಂದರೆ ಆಶ್ಚರ್ಯವಲ್ಲವೇ? ಎಷ್ಟಾದರೂ ಗಂಡೆಂದರೆ ಹೆಣ್ಣಿನ ಸಂತಾಸ. ಹೆಣ್ಣಿನ ರಕ್ತದಿಂದ ಮೈದೊಟ್ಟು ಆಕೆಯ ಮೊಲೆ ಹಾಲಿನಿಂದ ಬೆಳೆದದ್ದು.

ತಾಯಿ ಹೇಳಿದ್ದೇ ಅಧಿಕೃತವಾದ ತಂದೆಯ ಹೆಸರು. ಹಾದಿಗೆ ಹೋಗುವವನ್ನು ಅಪ್ಪಾ ಎಂದು ಕರೆದರೆ, ಯಾರಿಗೆ ಹುಟ್ಟಿದೆಯೋ ಮಗನೇ ಎನ್ನುವನು. ತಾನು ಬೆಣ್ಣೆ ತಿಂದು ಹೋತಿನ ಮೇಲೆ ತಪ್ಪು ಹೊರಿಸುವ ಬೆಕ್ಕಿನಂಥ ತಾಯಂದಿರೂ ಇಲ್ಲದಿಲ್ಲ. ಈ ವಿಷಯದಲ್ಲಿ ಗಂಡನು ಮಗುವಿನ ತಂದೆಯೆನಿಸದಿದ್ದರೂ ಆ ಗಂಡನ ಹೆಂಡತಿ ಮಾತ್ರ ಮಗುವಿನ ತಾಯಿಯೆನ್ನುವುದನ್ನು ತಪ್ಪಿಸಲಿಕ್ಕಾಗದು. ಅಂತೆಯೇ ಅಪ್ಪನಿಗೆ ಅಪ್ಪಾ ಅನ್ನಲಿಕ್ಕೆ ಒಪ್ಪೊತ್ತಿನ ಕೂಲಿ ಬೇಡುವ ಮಕ್ಕಳು ಹುಟ್ಟಿಬರುತ್ತಾರೆ. ‘ಜೋಗಿತಿ ಹಾದರ ಮಾಡುವಳೆಂದು ಊರಮನೆಯಾಕೆಯೂ ಹಾದರ ಮಾಡಿದರೆ ಪೆಟ್ಟಿಗೊಮ್ಮೆ ಉದೋ ಉದೋ ಎನ್ನಬೇಕಾಗುವದು’. ಆ ಕೂಗಾಟವನ್ನು ಕೇಳಿದವರು ಆಕೆಯನ್ನು ಗಂಡನ ಬಿಟ್ಟ ಗಯ್ಯಾಳಿ ಅನ್ನುವರು. ಅದು ಸತ್ಯ ಇರದಿದ್ದರೂ ನೂರುಮಂದಿ ನೂರು ಸಾರೆ ಒಡನುಡಿದರೆ ಅದೇ ಸತ್ಯವೆಂದು ಸಿದ್ಧವಾಗುವದು.

ಇಂಥ ಸೋಲು ಗೆಲುವುಗಳಿಗೆ ಗಂಡು ಹೆಣ್ಣು ಹಿಂಜರಿಯಬಲ್ಲವೇ? ಸೋಲು ಗೆಲುವುಗಳು ದೈವಾಧೀನ. ಅದನ್ನು ಲೆಕ್ಕಿಸದೆ ಅನಾಸಕ್ತಿಯಿಂದ ಕರ್ಮ ಮಾಡುವುದೇ ಗಂಡು ಹೆಣ್ಣಿನ ಹುಟ್ಟುಗುಣವಾಗಿದೆ. ‘ಹುಟ್ಟುಗುಣವು ಹುಗಿದರೂ ಹೋಗದು’. ಹಸಿವೆ ಇದ್ದ ಹಾಗೆ ಹುಟ್ಟು ಗುಣ. ಉಂಡರೇ ಹಿಂಗುವುದೇ ಹಸಿವೆ? ಹಿಂಗಿದಂತೆ ತೋರುವದು ಮಾತ್ರ. ಸಾಂಬಶಿವನ ಎರಡು ಮೈಗಳೇ ಹೆಣ್ಣು ಗಂಡಾಗಿ ಬೇರ್ಪಟ್ಟಿರುವಾಗ ಕೂಡಿಕೆ ದೂಡಿಕೆಗಳು ಸ್ವಾಭಾವಿಕ. ಒಂದು ಧನ ವಿದ್ಯುತ್ತು, ಇನ್ನೊಂದು ಋಣ ವಿದ್ಯುತ್ತು. ಒಂಟಿಯಾಗಿ ಉಳಿದರೆ ಪ್ರಯೋಜನವಿಲ್ಲ. ಒಂದು ಗೂಡಿದರೆ ಮಾತ್ರ ಪರಮ ಪ್ರಯೋಜನ; ಬೆಳ್ಳಂಬೆಳಕು. ಅದು ಒಮ್ಮೆ ಕಣ್ಣು ಕುಕ್ಕಿಸಬಹುದು; ಇನ್ನೊಮ್ಮೆ ಕಣ್ಣು ಮುಚ್ಚಿಸಬಹುದು. ಧನ-ಋಣ ವಿದ್ಯುತ್ತುಗಳ ಕೂಟದಲ್ಲಿ ಬೆಳಕಿನ ಮಾಟ ಕಂಗೊಳಿಸುವದು. ಗಂಡು ಹೆಣ್ಣುಗಳ ಚಕಮಕಿಯಲ್ಲಿ ಸಿಡಿದ ಕಿಡಿಯೇ ಸಂತಾನದ ಕುಡಿ.

ಪ್ರಯೋಜನಕ್ಕಾಗಿ ಚಕಮಕಿಯನ್ನು ಪ್ರಯೋಗಿಸಲಾಗುವದು. ಅತಿ ಪ್ರಯೋಜನಕ್ಕಾಗಿ ಅಲ್ಲ. ಅತಿಪ್ರಯೋಜನವೂ ಅಪ್ರಯೋಜನವಾಗಿಯೇ ಪರಿಣಮಿಸುವುದು ನಿಶ್ಚಯ. ದನದಷ್ಟೇ ಬುದ್ಧಿ ಮನುಷ್ಯನಿಗೂ ಇದ್ದಿದ್ದರೆ ಜನಸಂಖ್ಯಾ ನಿಯಂತ್ರಣ ಸಮಸ್ಯೆಯೇ ಕಾಣಿಸಿಕೊಳ್ಳುತ್ತಿರಲಿಲ್ಲ. ದನಕ್ಕಿಂತ ತುಸು ಹೆಚ್ಚು ಬುದ್ಧಿಯನ್ನು ನಿಸರ್ಗವು ಮನುಷ್ಯನಿಗೆ ಕೊಡದೆ, ಇನ್ನೊಂದು ಗುಂಜಿ ತೂಕ ಹೆಚ್ಚು ಬುದ್ಧಿ ಮನುಷ್ಯನಿಗಿದ್ದಿದ್ದರೆ ಈ ಅನಾಹುತವುಂಟಾಗುತ್ತಿರಲಿಲ್ಲ. ಇದನ್ನರಿತು ಮಾನವನು ತನ್ನ ಬುದ್ಧಿಶಕ್ತಿಯನ್ನು ಸೂಕ್ತ ಕ್ರಮದಲ್ಲಿ ಬೆಳೆಸಿಕೊಳ್ಳುವುದು ಅನಿವಾರ್ಯವೇ ಆಗಿದೆ.

ಅಧ್ಯಾತ್ಮದ ಒಂದು ಹನಿಯ ಸವಿಯು ಸಾವಿರಾರು ಸ್ತ್ರೀ ಸಂಭೋಗ ಸುಖವನ್ನು ಮೀರಿಸಬಲ್ಲದೆಂದು ಶ್ರೀರಾಮಕೃಷ್ಣ ಪರಮಹಂಸರು ಸ್ವಾನುಭವದಿಂದ ಎದೆತಟ್ಟಿ ಕೈಯೆತ್ತಿ ಹೇಳುತ್ತಾರೆ. ನಾತ ಹೊರಬುದ್ಧಿಯದೇ ಇರಲಿ, ಒಳಬುದ್ಧಿಯದೇ ಇರಲಿ ಆ ದುರ್ಗಂಧವನ್ನು ಹೋಗಲಾಡಿಸುವ ನೀಗಲಾಡಿಸುವ ಸೂತ್ರವಾಗಿದೆ. ಸೊಗಡು ಸುವಾಸನೆಯಾಗಬೇಕಾದರೆ ಇನ್ನಾವ ಲೋಕಕ್ಕೂ ಹೋಗುವ ಕಾರಣವಿಲ್ಲ. ‘ಸತ್ತು ಮುಂದೇನ ಕಾಂಬೆಯೋ? ಗುಹೇಶ್ವರನ ಕೂಡಿದ ಕೂಟ ಇಂದು ಸುಖ, ನಾಳೆ ಲೇಸು’ ಎಂಬ ದಿವ್ಯ ಔಷಧಿಯು ಹೊರಬುದ್ಧಿಯನ್ನು ಒಳಬುದ್ಧಿಯನ್ನಾಗಿ ಮಾರ್ಪಡಿಸಬಹುದಾಗಿದೆಯೆಂದು ಸುಸಮರ್ಥವಾಗಿ ಹೇಳಿದ್ದಾರೆ.