ಮನದಲ್ಲಿ ಮೂಡಿದ ವಿಚಾರವನ್ನು ಮಾತು ಮಾಡಿ ತೋರಿಸುವಂತೆ, ಮಾತಿನ ಮೋಡಿಯನ್ನು ಆಚಾರವು ಅಳವಡಿಸಿ ತೋರಿಸುವುದಕ್ಕೆ ತವಕಿಸುತ್ತದೆ. ವಿಚಾರ ಉಚ್ಚಾರ ಆಚಾರಗಳು ಕೈಕೈ ಹಿಡಕೊಂಡು ಬಂದರೆ ಅದು ಸಾರ್ಥಕವೆನಿಸುತ್ತದೆ. ಆದರೆ ಆಡದೆ ಮಾಡಬಲ್ಲ ಉತ್ತಮರಾಗಲಿ, ಆಡಿದ ಬಳಿಕ ಮಾಡಿಯೇ ತೋರಿಸಬಲ್ಲ ಮಧ್ಯಮರಾಗಲಿ ಸಿಗುವುದು ಕ್ವಚಿತ್. ಆಡಿಯೂ ಮಾಡಲಾಗದ ಅಧಮರು ಮಾತ್ರ ಮರದೆಲೆಗಳಂತೆ ಅಸಂಖ್ಯರಾಗಿದ್ದುದು ಎಲ್ಲೆಲ್ಲಿಯೂ ಕಂಡುಬರುತ್ತದೆ. ಹೂಗಳು ಮಧ್ಯಮ ವರ್ಗಕ್ಕೆ ಸೇರಿದರೆ, ಕಾಯಿಗಳು ಮಾತ್ರ ಉತ್ತಮ ವರ್ಗಕ್ಕೆ ಸೇರುತ್ತವೆ. ‘ಮಾತು ಮನಾರ ಕೈ ಸುಮಾರ’ ಎಂಬ ಒಂದೇ ಮಾತಿನಿಂದ ಮನಗಾಣಿಸಿ ಕೊಡುತ್ತದೆ.

ಮಾಡಿದ ವಿಚಾರವು ಸುಳಿಸುಳಿದು ಮಾತಿನ ದೊಂಬರಾಟವನ್ನು ತೋರಿಸುತ್ತದೆ. ಆ ಆಟದಲ್ಲಿ ಬಲ್ಲಿದರಾದವರೇ ಜಾತಿಡೊಂಬರೆಂದು ಶರಣರು ಹೇಳುತ್ತಾರೆ. ಅದರಿಂದ ವಿಚಾರವು ಅರ್ಥಹೀನವಾಗಿ, ಮಾತು ನಿರರ್ಥಕವೆನಿಸಿ ಕೃತಿ ತಲೆ ಅಡಗಿಸಿಕೊಳ್ಳುತ್ತದೆ. ಕೇಳಿಸುವುದೇ ಸಂತೆಯ ಗದ್ದಲ, ಗೊಂದಲ. ಯಾರ ಬಾಯಿಂದಲೋ ನುಸುಳಿದ ಶಬ್ದಗಳು, ಯಾರ ಕಿವಿಯನ್ನೂ ಸೋಂಕದೆ ಉಲ್ಕಾಪಾತದಂತೆ ಕಾಣೆಯಾಗುತ್ತವೆ. ‘ನಿರರ್ಥಕ ಶಬ್ದಗಳಿಂದ ಜಗತ್ತು ಕಿವುಡುಗಟ್ಟಿದೆ’ ಎಂದು ಶ್ರೀ ಅರವಿಂದ ಆಶ್ರಮದ ಮಾತೆಯವರು ಇದ್ದಕ್ಕಿದ್ದ ಹಾಗೆ ಹೇಳುತ್ತಾರೆ.

ಅಂಥ ಮಾತು ಒಂದು ಮೈಯಿಂದ ತಾಯಿ – ತಂದೆಗಳಿಲ್ಲದ ಕಂದರಂತೆ, ಇನ್ನೊಂದು ಮೈಯಿಂದ ಸಂತಾನಕಾಣದ ಬಂಜೆಯಂತೆ ‘ಹುಟ್ಟಿದ ಗಿಡುವಿನ ಬಿಟ್ಟಲೆ’ ಎಂದು ಪ್ರಭುದೇವರ ಭಾಷೆಯಲ್ಲಿ ಹೇಳಬಹುದು.

ಹೂಟಗೇಡಿಯ ಮುಂದೆ ಹುಲ್ಲು ಹಾಕಿದರೆ,
ಗೂಟ ಕಿತ್ತಿಕೊಂಡು ಇದಿರಿಗೆ ಬರುತ್ತದೆ

ಹುಟ್ಟಾ ನಿರರ್ಥಕವಾದದ್ದು ಹೂಟಗೇಡಿ. ಅದಕ್ಕೆ ಗೂಟಕ್ಕೆ ಕಟ್ಟಿ ಹಾಕಿದರೂ ಅದು ಸಾರ್ಥಕವಾಗುವದಿಲ್ಲ. ಹುಲ್ಲು ತಿಂದು ಸಾರ್ಥಕಗೊಳಿಸದೆ ಗೂಟವನ್ನೇ ಕಿತ್ತಿಕೊಂಡು ಬಿಡಾಡಿಯಾಗಿ ಓಡುವದು. ಇದೊಂದು ನಿರರ್ಥಕತೆಯ ಶಬ್ದ ಚಿತ್ರ.

ಸಿರಿಗೇಡಿಗೆ ಸೀರೆ ಉಡಿಸಿದರೆ, ಅದು
ಹೊಲಗೇರಿಗೆ ಹೋಯಿತಂತೆ ಹೇಳಲಿಕ್ಕೆ

ಸಿರಿಗೇಡಿ, ಸೀರೆ, ಹೊಲಗೇರಿ, ಹೇಳಹೋದದ್ದು ಇವೆಲ್ಲ ಒಂದಕ್ಕಿಂತ ಒಂದು ನಿರರ್ಥಕತೆಯನ್ನು ಎತ್ತಿತೋರಿಸುತ್ತವೆ. ಖೋಡಿಗುಣವನ್ನು ಮಾಣಿಸುವ ಸಲುವಾಗಿ ಸೆರೆಮನೆಯ ದೊರೆಯನ್ನಾಗಿ ಮಾಡುವ ಸಾಹಸವೂ ಒಂದು ರೀತಿಯ ನಿರರ್ಥಕತೆಯೇ ಎನ್ನುವುದನ್ನು ಒಂದು ಗಾದೆ ಕೊರಳೆತ್ತಿ ಹೇಳುತ್ತದೆ.

ಖೋಡೀನ ಕರಕೊಂಡು ಬೇಡಿ ಮನೆಗೆ ಹೋದರೆ,
ಬೇಡೀ ಮನೆಯವರು (ಸಹ) ಬೇಡ ಬೇಡ ಅಂದರು

ಖೋಡಿಯೆನ್ನುವುದು ಎಲ್ಲಿಯೂ ಚಲಾವಣೆಯಾಗದ ನಾಣ್ಯ. ಅದನ್ನು ಮುರಿದು ಮುಸಿಗೆ ಹಾಕಬೇಕು ಇಲ್ಲವೆ ಇದ್ದಕ್ಕಿದ ಹಾಗೆ ಇಟ್ಟುಬಿಡಬೇಕು. ಇಟ್ಟ ನಾಣ್ಯವಂತೂ ನಿರರ್ಥಕ. ಇರಿಸಿಕೊಂಡ ಸ್ಥಳ ಸಹ ಅಚ್ಚ ನಿರರ್ಥಕ. ಇಂಥ ನಿರರ್ಥಕ ವ್ಯವಹಾರದಲ್ಲಿಯೇ ಇದ್ದಷ್ಟು ಆಯುಷ್ಯ ಕಳೆಯುತ್ತಿರುವಾಗ ‘ಬಡ ನೂರು ವರುಷಗಳು’ ಕಳೆಯುವುದೇನು ಮಹಾ?

ಜಾತಿಗೆ ಜಾತಿ ಸೇರುವದಿಲ್ಲವಂತೆ, ಕಸಬುದಾರನಿಗೆ ಕಸಬುದಾರ ಸೇರುವದಿಲ್ಲವಂತೆ ಅಹುದೇ? ಜಾತಿ ಕಸಬುಗಳು ತನ್ನದೇ ಆದ ಜಾತಿ ಕಸಬುಗಳನ್ನು ಕಂಡರೆ ಹೊಟ್ಟಿಯುರಿ ಉಂಟಾಗುವುದೇನೋ. ಆದರೆ ಗುಣಕ್ಕೆ ಗುಣ ಹೊಂದಿಕೆಯಾಗುವುದು ತೀವ್ರ ಹಾಗೂ ಸಹಜ. ಸಂತೆ ಜಾತ್ರೆಗಳ ಸಂಬಂಧದಲ್ಲಂತೂ ಅಪೂರ್ವವಾಗಿ ಕಾರ್ಯಸಿದ್ಧಿಯಾಗುವುದುಂಟು. ಅದನ್ನೇ ಈ ಮುಂದಿನ ಗಾದೆ ಸ್ಪಷ್ಟಪಡಿಸುತ್ತದೆ –

ಹಂತ ಹಂತವರ ಕೂಡಿ ಸಂತೀಗಿ ಹೋದ್ರ
ಸಂತ್ಯಾಗಿಬ್ಬರು ಅಂಥವರೇ ಇದ್ದರಂತೆ

ಅವರು ಹೋದದ್ದು ಸಂತೆಯಾಗಿರದೆ, ಜಾತ್ರೆಯಾಗಿದ್ದರೆ ಇನ್ನೂ ಇಬ್ಬರು ಹೆಚ್ಚಿಗೆ ಕಾಣಸಿಗುತ್ತಿದ್ದರೇನೋ. ಸಂತೆಯ ಮಾತು ಬಂದಾಗ ಇನ್ನೊಂದು ಮಾತು ನೆನಪಿಗೆ ಬರುತ್ತದೆ.

ಉದ್ದನ್ನಾಕೀ ಗಂಡ ಸಂತ್ಯಾಗ ಅಳುತ್ತಿದ್ದನಂತೆ
ಗಿಡ್ಡನ್ನಾಕೀ ಗಂಡ ಹೊಳ್ಳಾಗ ಅಳುತ್ತಿದ್ದನಂತೆ

ಆ ಗಂಡಂದಿರು ಅಳುವ ಕಾರಣ ಸಹಜವಾಗಿ ಲಕ್ಷ್ಯಕ್ಕೆ ಬರುವದು. ಸಂತೆಯಲ್ಲಿ ಉದ್ದನ್ನ ಹೆಂಗಸು ಸಹಜವಾಗಿ ಕಾಣಿಸುವಂಥವಳು. ಕಾಣಿಸಲಿಲ್ಲವೆಂದರೆ ಗಂಡ ಅಳುವುದನ್ನು ಬಿಟ್ಟು ಇನ್ನೇನು ಮಾಡಬಲ್ಲನು? ಅದರಂತೆ ಗಿಡ್ಡನ್ನಾಕಿ ಹೊಳೆಯಲ್ಲಿ ಕಾಣುವದಿಲ್ಲವೆಂದಾಗ ಮುಳುಗಿಯೇ ಹೋದಳೆಂದು ಗಂಡನಿಗೆ ಅಳುವುಬಾರದೆ ಇನ್ನೇನು ಬಂದೀತು? ಇದರಲ್ಲಿ ಸತ್ಯಾಂಶವು ಇದ್ದೇ ಇದೆ ಎನ್ನುವುದೇ ನಿರರ್ಥಕ. ಇಂಥ ಖಟಾಟೋಪಗಳು ನಿರರ್ಥಕವಲ್ಲದೆ ಇನ್ನೇನು? ಸಂತೆಯೂ ಬೇಡ, ಹೊಳೆಯೂ ಬೇಡ, ಮದುವೆಯಂಥ ಆಮೋದದ ಪ್ರಸಂಗದಲ್ಲಿಯೂ ಇದೇ ನಿರರ್ಥಕತೆ ಗೋಚರಿಸುತ್ತದೆ.

ಇದೀನ್ನ ತಗೊಂಡು ಮದ್ವೀಗೆ ಹೋದ್ರ
ಇದ್ದಷ್ಟು ಹೋಳಿಗಿ ತಿಂದು ಇದಿರೀಗಿ ಬಂತು

ಉಳ್ಳವರು ಆನೆಯನ್ನೂ ಏರುತ್ತಾರೆ, ಕುದುರೆಯನ್ನೂ ಏರುತ್ತಾರೆ. ಆದರೆ ಇಲ್ಲದವರು ಏನು ಮಾಡಬೇಕು? ಆದರೂ ಒಂದು ಉಪಾಯ ಹುಡುಕುತ್ತಾರೆ. ಆ ಉಪಾಯ ನಿರರ್ಥಕವಾಗಿದ್ದಂತೆ, ಪರಿಣಾಮವು ಇಮ್ಮಡಿ ನಿರರ್ಥಕತೆಯನ್ನು ಬಯಲಿಗೆಳೆಯುತ್ತದೆ.

ಇದ್ದವರು ಆನೆ ಏರಿದರೆ, ಇಲ್ಲದವರು ಕುಳಬಾನ ಏರುವರು. ಆಮೇಲೆ ಏನು ಮಾಡುತ್ತಾರೆ ಗೊತ್ತೇ? ‘ನನ್ನ ನೋಡೇ ಕರಕೊಂಡು ತಿಂತಿದ್ದವಂತೆ’ ಇದೇ ಇಮ್ಮಡಿ ನಿರರ್ಥಕತೆ.

ಮಾಡಿ ಗೊತ್ತಿಲ್ಲದ ಕೆಲಸಕ್ಕೆ ಕೈಹಾಕುವುದೇ ಮೊದಲ ನಿರರ್ಥಕತೆ. ಆಮೇಲೆ ಆಗುವ ಪರಿಣಾಮ ನಿರರ್ಥಕತೆಯ ತುಟ್ಟತಿದು.

ಅಭ್ಯಾಸವಿಲ್ಲದ ಬ್ರಾಹ್ಮಣ ಯಜ್ಞಮಾಡಿ
ಗಡ್ಡ ಮೀಸಿ ಸುಟ್ಟುಕೊಂಡನು

ಅದೇ ವಿಷಯವನ್ನು ಇನ್ನೊಂದು ಗಾದೆ ಬಯಲಿಗೆಳೆಯುತ್ತದೆ. ಮಾಡುವುದು ಒಂದು, ಆಗುವುದು ಬೇರೊಂದು. ನಿರರ್ಥಕತೆಯ ಒಂದು ಬೀಜ ಮೊಳೆತು, ಅದನ್ನು ಮಿರಿಸುವ ನಿರರ್ಥಕತೆಯ ಪಸರು ಒದಗಿಸುವುದು ಆಶ್ಚರ್ಯವೇನಲ್ಲ. ‘ಉಸಿರಿಲ್ಲದಾಕೆ ಬಸಿರಾದರೆ ಉಚ್ಚೀ ಹೋಯ್ಯೂದ್ರಾಗ ಉಚಗೊಂಡು ಬಿದ್ದಿತು’. ನಿರರ್ಥಕತೆಯ ದಾರಿಗೆ ಬಿದ್ದರೆ ಹೆಜ್ಜೆ ಹೆಜ್ಜೆಗೂ ಅದೇ ಫಲ ತಂದಿಡುತ್ತದೆ. ಒಂದಕ್ಕೆ ಒಂದಲ್ಲ, ನೂರೊಂದು.

ಒಬ್ಬ ಮಗಾ ಅಂತ ಒಂಬತ್ತು ಸಾರಿ
ಸುಂತಿ ಮಾಡಿದರ

ಏನಾದೀತು ಪರಿಣಾಮ? ಇದ್ದಷ್ಟು ಇಲಿ ಕಡಕೊಂಡು ಹೋಯಿತು. ‘ಇದ್ದೂರ ಕೋರಾಣಿಯೂ ಇಲ್ಲದಾಯಿತು. ಬೇರೂರ ಭಿಕ್ಷೆಯೂ ಕೊಸರಿಕೊಂಡಿತು’. ಕೋಣನ ಮುಂದೆ ಕಿನ್ನರಿ ಬಾರಿಸಿದರೆ, ಅದಕ್ಕೆ ಶಂಭುಲಿಂಗನ ಗುಡಿಯಲ್ಲಿದ್ದೇನೆ ಎಂಬ ಅರಿವು ಬರುವುದುಂಟೆ? ಕಿನ್ನರಿಯ ನಾದವನ್ನು ಗುರುತಿಸಬಲ್ಲ ಸುಪೀಕ ತಲೆ ಕೋಣನಿಗೆಲ್ಲಿಂದ ಬಂದೀತು? ಅಲ್ಲದೆ ಆ ನಾದದ ಸುಳುಹು ಸಹ ಹಿಡಿಯದ ಎಮ್ಮೆಯ ಮಗನು ಶಂಭುಲಿಂಗನ ಗುಡಿಯಲ್ಲಿಯೇ ನಿಂತಿದ್ದರೂ ಅದನ್ನು ಗುರುತಿಸಲಾರನಲ್ಲವೇ?

ಕೈ ಬರಿದು, ಮೈಬರಿದು ಆದರೆ ರಂಭೆ ಬೇಕು, ಸಿಗದಿದ್ದರೆ ರಂಡೆಯಾದರೂ ಬೇಕು. ಒಟ್ಟಿನಲ್ಲಿ ಹೆಣ್ಣೆಂಬುವ ದೀನಸು ಸಿಕ್ಕರೆ ಸಾಕು ಎಂದು ಹಾರಯಿಸುವ ಹೇರಾಶೆಯ ಪರಿಣಾಮ ಎಂಥದು? ಆ ಪ್ರಾಣಿಗೆ ಅಳುವುದೊಂದೇ ಗತಿ.

ಕೈಯಾಗ ಕಾಸಿಲ್ಲ ಮೈಯಾಗ ಹೂಸಿಲ್ಲ,
ಹೋಗಾ ರಂಡೇರನ ಕಂಡು ಗೋಳಾಡಿ ಅಳುತ್ತಿತ್ತು

ಇದು ಗಂಡಿನ ಹುಚ್ಚಾಟ. ಇಂಥ ಹುಚ್ಚಾಟವು ಹೆಣ್ಣಿನಲ್ಲಿಯೂ ಕಾಣಸಿಗುವದು. ಗಂಡಿನ ಹುಚ್ಚಾಟವು ಪೆಚ್ಚಾಟಕ್ಕೆ ಇಳಿಸಿದರೆ, ಹೆಣ್ಣಿನ ಹುಚ್ಚಾಟವು ಪೇಚಾಟಕ್ಕೆ ಎಳೆಸುವದು. ಮೊಂಡ ಮೂಗಿದ್ದರೂ ಮುರುಕು, ಮೆಣ್ಣ ಗಣ್ಣಿದ್ದರೂ ಚುರುಕು, ಕಿವಿ ಹರಕಾಗಿದ್ದರೂ ಸುರಕುಮಾಡುವ ಹುಟ್ಟು ಗುಣ ಹೆಣ್ಣಿಗಿದೆ. ‘ಸಿಂಗಾರದಲ್ಲಿ ಬಂಗಾರದವಳಾಗಬೇಕೆನ್ನುತ್ತಾಳೆ.’

ಗಂಡಿನ ಬುದ್ಧಿ ಮೊಳಕಾಲ ಕೆಳಗಿರುವದಿಲ್ಲ; ಮೊಳಕಾಲಿನಿಂದ ಮೇಲೆ ಇರುತ್ತದೆ. ಅವನು ಹೇಳುತ್ತಾನೆ-

ರಂಡಿಯ ಮಗನನ್ನು ದಂಡಿಗೆ ಕಳಿಸಬೇಕು

ಗೆದ್ದು ಬಂದರೆ ಕೀರ್ತಿ, ಸೋತು ಹೋದರೆ ಪೀಡೆತಪ್ಪಿತು

ತಾರೀಪದಾಕಿಗಿ ತಾಳೀ ಕಟ್ಟಿದರ
ಮ್ಯಾಳಿಗಿಮ್ಯಾಲ ಕೂತು ಬ್ಯಾಳೀ ಒಡೀತಿದ್ದಳಂತೆ

ಇಂಥ ತಾರೀಪದಾಕೆ ಹಾಲು ಬೋನ ಉಂಡು ಹಾಸು ಹಾಕುವವಳಲ್ಲ. ಊರ ಮಿಂಡರೊಡನೆ ನೀರು ಹೊರುವುದೇ ಅವಳಿಗೆ ಹವ್ಯಾಸದ ಕೆಲಸ. ಅಕ್ಕ ಸತ್ತು ಆರು ತಿಂಗಳಾದ ಬಳಿಕ ಅವಳ ಗಂಡನ ಕೊರಳಿಗೆ ಬಿದ್ದು ಅಳುವಾಕೆ. ಆಸತ್ತು ಬೇಸತ್ತು ಅಕ್ಕನ ಮನೆಗೆ ಹೋದಾಗ ಆಕೆಯ ಗಂಡನು ಅವುಕ್ ಅಂದಿದ್ದರ ಅರ್ಥ ಅಕ್ಕ ಸತ್ತ ಬಳಿಕ ಆದಂತೆ ತೋರುತ್ತದೆ.

ತುತ್ತು ಇಲ್ಲದಾಕೀನ ತುಳಜಾಪುರಕ ಕರಕೊಂಡು ಹೋದ್ರ,
ಹಳ್ಳದ ದಂಡೀಗಿ ಕೂತು ಹದಿನಾರು ರೊಟ್ಟಿ ಉಂಡಳು

ಈಕೆಯದೂ ಒಂದು ನಿರರ್ಥಕ ತಾರೀಪೇ. ಗಂಡನದನ್ನು ತಿಂದು ಮಿಂಡನ ಚಾಕರೀ ಮಾಡುವ ಮರ್ಮ ಇಂಥವರಿಗೇ ಗೊತ್ತು. ಗೌಡನ ಸೂಳೆಯೆನಿಸಿಕೊಳ್ಳುವುದಕ್ಕೆ ತುಂಬ ಹಂಬಲಿಸುತ್ತಾಳೆ. ಅದು ಸಾಧಿಸಿದರೆ ಮಳೆಗಾಲದ ಹೆಂಡಿಯಂತೆ ಹಿಗ್ಗುತ್ತಾಳೆ.

ಪಾಪ ಕಳಕೋಬೇಕೆಂದು ಮೂರು ಸಂಜೀಲೆ
ಗುಡೀಗಿ ಹೋದ್ರ ಪೂಜಾರಿ ಬಂದು ದೀಪ ದೊಡ್ಡದು ಮಾಡಿದ

ಈ ಗಾದೆ ಇಂಥ ಚೆನ್ನೆಯರನ್ನು ಕುರಿತೇ ಹುಟ್ಟಿಕೊಂಡಿರಬಹುದೇನೋ. ಆಕೆ ಗುಡಿಗೆ ಹೋಗುವುದೂ ಪೂರ್ವನಿಯೋಜಿತ ಯೋಜನೆಯೇ ಆಗಿರಬೇಕೆಂಬ ತರ್ಕದಲ್ಲಿ ಸತ್ಯಾಂಶವೇ ಅಧಿಕವಾಗಿದೆ. ದೇವರ ಪೂಜೆ ಪೂಜಾರಿಯಿಂದಾದರೆ, ಪೂಜಾರಿಯ ಪೂಜೆ ಇಂಥ ಚೆನ್ನೆಯರಿಂದಲೇ ಆಗಬೇಕಲ್ಲವೇ? ಬೇಕಾದ ಮಾತು ಬೇತಲದಾಗ, ಬೇಡಾದ ಮಾತು ಒಲೆಯಲ್ಲಿ. ಗುಡಿಯ ದೇವರು ಒಲಿಯಬೇಕಾದರೆ ಪೂಜಾರಿಯ ಒಲುಮೆ ಮೊದಲು ಗಳಿಸಬೇಕಾಗುವದು.

ಅಂಥ ಇಂಥಚರ ರಂಡಿಯ ಮಗ ರಾಜಕುಮಾರನೆನಿಸಿದರೆ, ಪೂಜಾರಿಯ ರಂಡಿಯ ಮಗ ರಾಜಕುಮಾರರಲ್ಲಿ ಅಗ್ರಗಣ್ಯನಾಗಲಾರನೇ? ಗಂಡನಿಗೆ ಮುತ್ತಯ್ದೆ, ಮಿಂಡನಿಗೆ ರಂಡೆ. ಆ ಮುತ್ತಯ್ದೆಯ ಮದುವೆಗೆ ಯಾರು ಮುಹೂರ್ತ ತೆಗೆದುಕೊಟ್ಟಿದ್ದಾರು? ಎಂಥ ಹಂದರದಲ್ಲಿ ಆ ವಿವಾಹೋತ್ಸವ ನಡೆದಿರಬಹುದು? ಅಕ್ಷತೆಯ ಕಾಲಕ್ಕೆ ಯಾವ ವಾದ್ಯ ಬಾರಿಸಿದ್ದಾರು?

ಶುಭಾನುಡಿಯೆ ಸೊಸಿಮುದ್ದೇ ಅಂದರೆ,
ಹಂದರದಾಗ ಕೈ ಬಡಿದು ಹೊಯ್ಕೋತೀ ಎಂದಳಂತೆ

ಸೊಸಿ ಮುದ್ದು ನುಡಿದಂತೆ ನಡೆದೇ ತೋರಿಸಿರಬಹುದೇನೋ. ಆ ಮದುವೆಯಾದ ಬಳಿಕ ಕೊಡುಗೂಸು ಮುತ್ತಯ್ದೆ ಎನಿಸುವಂತೆ, ಮುತ್ತಯ್ದೆಯಾಗದೆ ಸೂಳೆಯಾದರೆ ಚಿರಮುತ್ತಯ್ದೆಯೆನಿಸುವುದು ವಾಡಿಕೆಯೇ ಆಗಿದೆ.

ಹರಕೀಗಿ ನೆರಕೀ ಕಟ್ಟಿದರ,
ಹರಕೊಂಡು ಹೋಗಿ ಕುಲಕರ್ಣೀರ ಹೊಲ ಮೆಯ್ದಿತ್ತಂತೆ

ಈ ಮಾತು ಉಡಾಳ ದನವನ್ನು ಕುರಿತು ಹೇಳಿದಂತೆ ತೋರಿದರೂ ಹೊರ ಬುದ್ಧಿಯ ಸವಿಗಾರನಿಗೂ ಹೊಂದುತ್ತದೆ. ಹೇಳಬೇಕಾದುದನ್ನು ಪರ್ಯಾಯವಾಗಿ ಹೇಳಿದೆ. ಕೊಂಕುನುಡಿ ಏಕಲ್ಲ?

ಹಸಗೇಡೀನ ತಂದು ಹಾಸಿಗ್ಯಾಗ ಹಾಕಿದರ,
ಮಿಸಗಾಡಿ ಮೂರುಮೊಳ ಕೌದಿ ಹರಿದಿತ್ತಂತೆ

ಹರಕಿಯೇ ಹಸಗೇಡಿ, ಹಸಗೇಡಿಯೇ ಹರಕಿ. ಗಂಡಸಿರಲಿ ಹೆಂಗಸಿರಲಿ ಹಸಗೆಟ್ಟವರೆಲ್ಲ ಹಸಗೇಡಿಗಳೇ. ಗಂಡಹೆಂಡಿರ ಜಗಳ ಉಂಡುಮಲಗುವವರೆಗೆ. ಆದರೆ ಜಗಳ ವಿಕೋಪಕ್ಕೆ ಹೋದರೆ ಊಟವೆಲ್ಲಿ? ಊಟವೇ ಇಲ್ಲದಿದ್ದರೆ ಬಯ್ದಾಟ ಹೊಯ್ದಾಟವಲ್ಲದೆ ಇನ್ನೊಂದು ದಾರಿಯೇ ಇಲ್ಲ. ಜಗಳಾಡುತ್ತಲೇ ಊಟ ತೀರಿಸಿದರೆ ಜಗಳದ ದಿಶೆಯೇ ಬದಲಾಗಿಬಿಡುತ್ತದೆ. ಆಟ-ಕಾಟಗಳೆಲ್ಲ ಕೂಟವಾಗಿ ಪರಿಣಮಿಸುವವು

ಹೊಸಸೀರಿ ಉಟಗೊಂಡು ಆರತಿ ಮಾಡs ಅಂದ್ರೆ
ತುದಿಗಟ್ಟೀ ಮ್ಯಾಲನಿಂತು ತುರಿಸಿಕೋತಿತ್ತಂತೆ

ಹೀಗೆ ಕಟುನುಡಿಗೆ ಗುರಿಯಾದ ಹೆಂಗಸಿನ ಜಾತಿಗೆ ಸೇರಿದ ಗಂಡಸರೂ ವಿಪುಲವಾಗಿ ಸಿಗುತ್ತಾರೆ. ಹೊರಬುದ್ಧಿಯ ಮುಂಡೆ ಮುಂದೆ ನಿಂತವರನ್ನೇ ತೆಗಳುತ್ತದೆ. ಅತ್ತೆ ಕಳವು ಕಲಿಸಿದ ಗುರುತಾಯಿ, ಗಂಡ ಹಾದರ ಕಲಿಸಿದ ಗುರುದೇವ- ಎಂದು ಗಾದೆ ಹೇಳಿದ್ದು ಶಿಲಾ ಶಾಸನವಾಗಿ ನಿಂತಿಲ್ಲವೇ?

ಗಾದೆಗಳನ್ನು ಸುಳ್ಳು ಮಾಡಿ ತೋರಿಸುವ ಅಪವಾದಾತ್ಮಕ ಜೀವಿಗಳಿಂದ ಗಾದೆಗಳ ಗೋಗರಿಕೆಯನ್ನು ನಿರರ್ಥಕಗೊಳಿಸಿದಂತಾಗುವದಿಲ್ಲವೇ?