ಜಗತ್ತು ಕರ್ತಾರನ ಕಮ್ಮಟವೆಂದಾಗ ಅಲ್ಲಿ ಅಡಿಗಲ್ಲು, ಸುತ್ತಿಗೆ, ಇಕ್ಕಳಿಕೆ, ಕಂಬಿಚ್ಚು, ಅಗಿಷ್ಟಿಗೆ ಇರತಕ್ಕುವೇ. ಆ ಉಪಕರಣಗಳೆಲ್ಲ ನಿರ್ದಯವಾಗಿ ತಮತಮಗೆ ಒಗ್ಗುವ ಕರ್ತವ್ಯಗಳನ್ನು ಮಾಡುತ್ತವೆ. ಆ ಕಾರ್ಯಕಲಾಪಗಳನ್ನೆಲ್ಲ ನಿರ್ವಹಿಸಬಲ್ಲ ಒಬ್ಬ ಕರ್ತಾರ ನಿರುತ್ತಾನೆ. ಅವನ ಕಣ್ಣರಿಕೆಯಲ್ಲಿ ಅವನ ಕೈಸನ್ನೆಯಲ್ಲಿ, ಅವನ ಬಾಯಸೂಚನೆಯಲ್ಲಿ ಕ್ರಮವಾಗಿ ಕೆಲಸಗಳು ಮುಂದುವರಿಯುತ್ತವೆ. ಲೋಕದಲ್ಲಿ ಕುಳಿತು ತಣಿಯುವ ನೆರಳಿನ ಭಾಗ ತೀರ ಕಡಿಮೆಯಾಗಿದ್ದು, ನಿಗ್ಗರದ ಬಿಸಿಲಿನ ಭಾಗವೇ ಅತಿಶಯವಾಗಿದೆ.

ಹುಟ್ಟಿದ ಕೂಸಿನಿಂದ ಆರಂಬವಾಗಿ, ಸುಡುಗಾಡಿಗೋ ಗೋರಿ ಮರಡಿಗೋ ಹೊರಟ ಮುದುಕನವರೆಗೆ ಎಲ್ಲರಿಗೂ ಒಂದಿಲ್ಲೊಂದು ಚಿಂತೆ, ಒಂದಿಲ್ಲೊಂದು ದುಃಖ ಅಡಗಿರುತ್ತದೆ. ಸತಿಯಿಲ್ಲದ ಚಿಂತೆ ಒಬ್ಬರಿಗಿದ್ದರೆ, ಸತಿಯಾದ ಚಿಂತೆ ಇನ್ನೊಬ್ಬಗಿರುತ್ತದೆ. ಸತಿಯಾದರೆ ಮಕ್ಕಳಚಿಂತೆ ಒತ್ತಟ್ಟಿಗೆ ಕಾಣಿಸಿಕೊಂಡರೆ, ಮಕ್ಕಳು ಹೆಚ್ಚಾದ ಚಿಂತೆ ಇನ್ನೊತ್ತಟ್ಟಿಗೆ ಗೋಚರಿಸುತ್ತದೆ. ಮಕ್ಕಲು ಪ್ರಭುದ್ದರಾಗಿ ತಮಗೆಟುಕುವ ಉದ್ಯೋಗ ಕೈಕೊಳ್ಳಬೇಕೆಂದು ಚಿಂತಿಸುವವರಿಗೆ ಸರಿಯಾದ ರೀತಿಯಲ್ಲಿ ಕೆಲಸಮಾಡಿ ಯಶಸ್ವಿಯಾಗಬೇಕೆನ್ನುವ ಚಿಂತೆ.

ಚಿಂತೆ ಹೆಣ್ಣಿಗೂ ಬಿಟ್ಟಿಲ್ಲ, ಗಂಡಿಗೂ ಬಿಟ್ಟಿಲ್ಲ. ಅಭೀಷ್ಟವನ್ನು ಪೂರಯಿಸಿದರೆ ಸಂತೋಷವೋ ಸುಖವೋ ಕೆಲಹೊತ್ತು ಸಂಗಳಿಸುವುದು. ಅಭೀಷ್ಟವು ಪೂರಯಿಸದಿದ್ದರೆ ದುಃಖವು ಆವರಿಸುತ್ತದೆ. ಅಕ್ಕಸಾಲಿಗನು ಚಿನ್ನದ್ದೋ ಬೆಳ್ಳಿಯದೋ ಗಟ್ಟಿಯನ್ನು ಅಜಗಣಿಯ ಮೇಲಿಟ್ಟು ಸುತ್ತಿಗೆಯಿಂದ ಬಡಿಯುತ್ತಿರುವಾಗ, ನಾಲ್ಕೇಟು ಗಟ್ಟಿಯ ಮೇಲೆ ಹಾಕಿ, ಒಂದೆರಡು ಹುಸಿಯೇಟುಗಳನ್ನು ಅಜಗಣೆಯ ಮೇಲೆ ಹಾಕುವನು. ಗಟ್ಟಿಯ ಮೇಲಿನ ಪೆಟ್ಟು ದುಃಖದ ಪ್ರತೀಕ, ಅಜಗಣೆಯ ಮೇಲೆ ಹಾಕಿದ ಪೆಟ್ಟು ಸುಖದ ಪ್ರತೀಕ ಎಂದು ಹೇಳಬಹುದು.

ಮನುಷ್ಯನು ನೂರು ವರುಷಗಳ ಕಾಲವನ್ನು ನೂಕುತ್ತ ಹೋಗುವಂತೆ ಮಾಡುತ್ತದೆ. ಸುಖವೆನ್ನುವುದು ದುಃಖವು ಬಾಲ್ಯದಿಂದ ಯೌವ್ವನಕ್ಕೂ ಯೌವನದಿಂದ ವೃದ್ಧಾಪ್ಯಕ್ಕೂ ಅಟ್ಟುವ ಕೆಲಸವನ್ನು ನಿರ್ವಹಿಸುತ್ತದೆ. ಬಡವನಿಗೆ ಗಳಿಸುವ ಚಿಂತೆ. ಗಳಿಸಿದವನಿಗೆ ಅದನ್ನು ಕಾದಿಡುವ ಚಿಂತೆ. ಕಾದಿಟ್ಟವನಿಗೆ ಅದನ್ನು ವಿನಿಯೋಗಿಸಿ ಭಾಂಡಾರವನ್ನು ಹೆಚ್ಚಿಸುವ ಚಿಂತೆ. ಅಂಥವರಿಗಾಗಿ ಜನಪದದಲ್ಲಿ ಒಂದು ಗಾದೆಯ ಮಾತೇ ಹುಟ್ಟಿಕೊಂಡು ಬಳಕೆಯಲ್ಲಿ ಬಂದಿದೆ. “ಇಟ್ಟು ಮರಗುವ ನಾಯಿ. ಕೊಟ್ಟು ಕೊರಗುವ ನಾಯಿ. ತಿತಿಮತಿಯಿಲ್ಲದೆ ತಿರುಗುವ ನಾಯಿ.” ಮನೆಯಲ್ಲಿ ಇಟ್ಟುಕೊಳ್ಳುವಬದಲು, ಸಾಲಗಾರರಿಗೆ ಸಾಲಕೊಟ್ಟ ಬಳಿಕ ಕಾಲಕಾಲಕ್ಕೆ ಬಡ್ಡಿ ಬರದಿದ್ದರೆ ಅದೊಂದು ಕೊರಗು. ಕೊಟ್ಟು ಕೊರಗುವ ರೀತಿಯದು. “ಯುಗಾದಿಯವರೆಗೆ ಬಡ್ಡಿ ಕೇಳ ಬೇಡಿರಿ” ಎಂದು ವಿನಂತಿಸುವವನ ಮನದಲ್ಲಿ “ಯುಗಾದಿ ಆದ ಬಳಿಕ ಗಂಟನ್ನೂ ಕೇಳಬೇಡಿರಿ” ಎಂಬ ಭಾವನೆಯಿರುತ್ತದೆ. “ಯವ್ವಾ ಸಾವಕಾರ್ತಿ, ಖರೇ ಹೇಳಬೇಕೆಂದರೆ ನಾವು ಒತ್ತುವಷ್ಟು ಒತ್ತಿದೆವು. ನೀವು ತಾಳುವಷ್ಟು ತಾಳಿಕೊಂಡಿರಿ. ಇನ್ನು ನಾಳಿನ ಯುಗಾದಿಗೆ ಹಿಂದಿನದೂ ಮುಂದಿನದೂ ಕೂಡಿಯೇ ಹರಿದು ಬಿಡುತ್ತೇವೆ. ಸಾವುಕಾರರಿಗೆ ಸಮಾಧಾನ ಹೇಳಿರಿ” ಇಂಥ ವ್ಯವಹಾರಗಳಿಗೆ “ಕೊಟ್ಟವ ಕೋಡಗ, ತಗೊಂಡವ ಹಣಮಂತ” ಎಂದು ಹೇಳುವುದಂಟು. ಅದಕ್ಕೆ “ಕೊಟ್ಟವ ಕೋಡಗ ಇಸಗೊಂಡವ ಈರಭದ್ರ” ಎನ್ನುವ ಪಾಠಾಂತರವೂ ಉಂಟು.

ಜಗತ್ತೆನ್ನುವುದು ಸೆರೆಮನೆಯೆಂದೂ, ನಾವೆಲ್ಲರೂ ಅದರೊಳಗಿನ ಸೆರೆಯಾಳುಗಳೆಂದೂ, ನಮ್ಮನ್ನೆಲ್ಲ ಕರುಣಿಯೆಲ್ಲದೆ ಕಟ್ಟೆ, ಹೊಡೆಬಡಿದು ತ್ರಾಹಿತ್ರಾಹಿ ಎನಿಸಿ ಬಿಡುತ್ತದೆ. ಈ ಜನ್ಮ ತಳೆದದ್ದು ದುಃಖಭೋಗಕ್ಕಾಗಿಯೇ ಎಂದು ಸಂತರು ಹೇಳುತ್ತಾರೆ. ಇದೆಲ್ಲಅಯ್ಯನ ಜೋಳಿಗೆಯೊಳಗಿನ ಹೋಳಿಗೆ. ಅಯ್ಯಾ ಎಂದರೂ ಕೊಡುವುದಿಲ್ಲ. ಅಯ್ಯನವರೇ ಎಂದರೂ ಕೊಡುವುದಿಲ್ಲ. ಕಸುಗೊಳ್ಳುವ ತ್ರಾಣ ನಮ್ಮಲ್ಲಿಲ್ಲ. ಆದರೆ ಜೋಳಿಗೆಯೊಳಗಿನ ಹೋಳಿಗೆಯ ಆಶೆಗಾಗಿ ಜಗತ್ತು ಕೈ ಚಾಚುತ್ತದೆ. ಬೋಗಸೆಯೊಡ್ಡುತ್ತದೆ. ಕೊಡದಿದ್ದವರ ಮೇಲಿನ ಸಿಟ್ಟಿಗಾಗಿ ಹಾವುಗಾರನು ಪಾಪಿಚಂಡಾಲ ಎಂಬ ಅರಿವೆಯ ಗೊಂಬೆಯನ್ನೆತ್ತಿ ನೆಲಕ್ಕೆ ಅಪ್ಪಳಿಸಲಾಗುತ್ತದೆ. ಅದರ ಕಣ್ಣಲ್ಲಿ ಮಣ್ಣು ತೂರಲಾಗುತ್ತದೆ. ಕಾಸು ಕೊಟ್ಟವರು ಕೊಟ್ಟರು. ಕೊಡದಿದ್ದವರು ಮುಖ ಹೊರಳಿಸಿ ಬದಿಗೆ ಹೋದರು.

“ಮಕ್ಕಳ ಕೊಡು ಶಿವನೇ” ಎಂದು ಗಂಡುಳ್ಳ ಬಾಲೆ ಹಾರಯಿಸಿದರೆ, “ಇನ್ನೊಬ್ಬ ಹೆಂಡತಿಯನ್ನು ಒದಗಿಸುವ ಗುರುವೇ” ಎಂದು, ಹೆಂಡತಿಯುಳ್ಳ ತರುಣನು ಅಪೇಕ್ಷಿಸುತ್ತಾನೆ. ಬೇಡುವ ಬಾಯಿ ಒಂದೇ ಆದರೂ ಬೇಡುವ ವಸ್ತುಗಳು ನೂರೆಂಟು. ಅಂಥ ನೂರೆಂಟು ವಸ್ತುಗಳನ್ನು ಬೇಡುವವರು ನೂರು ಸಾವಿರ ಜನರು. ಒಂದು ಬೇಡಿರೋ, ಒಂದೇ ದನಿಯಲ್ಲಿ ನೂರ್ಜನ ಬೇಡಿರೋ ಎಂದು ದೇವರ ಅಪೇಕ್ಷೆಯಿದ್ದಂತೆ ತೋರುತ್ತದೆ. ಯಾವ ಒಂದನ್ನು ಬೇಡಿದರೆ ಇನ್ನೇನೂ ಬೇಡುವ ಅಗತ್ಯವುಳಿಯುವುದಿಲ್ಲವೋ ಆ ಒಂದನ್ನು ಅರಿತು ಬೇಡಿರಪ್ಪಾ ಕೊಡುವೆನು ಅನ್ನುತ್ತಾನೆ ಶಿವ. ಒಬ್ಬ ಅನಾಥಳಾದ ಕುರುಡ ಮುದಿಕೆಗೆ ಒಲಿದು ದೇವರು – “ಒಂದೇ ಮಾತಿನಲ್ಲಿ ಬೇಕಾದ ವರವನ್ನು ಕೇಳಿಕೋ” ಅಂದಾಗ, ಆ ಮುದಿಕೆ ಕೇಳಿದಳಂತೆ – “ನನ್ನ ಮರಿ ಮಕ್ಕಳು ಬೆಳ್ಳಿ ಬಂಗಾರದ ತಾಟಿನಲ್ಲಿ ಸಕ್ಕರೆ- ತುಪ್ಪ ಉಣ್ಣುವುದನ್ನು ನನ್ನ ಕಣ್ಣು ಕಾಣಲಿ” ಆ ಮಾತಿಗೆ ದೇವನು ತಥಾಸ್ತು ಅನ್ನಲು, ಆ ಮುದಿಕೆಗೆ ಕಣ್ಣು ಬಂದವು. ಪ್ರಾಯ ಬಂತು. – ಲಗ್ನವಾಯಿತು. ಶ್ರೀಮಂತಿಕೆ ಬಂತು. ಅದು ೨-೩ ತಲೆಗಳವರೆಗೆ ಉಳಿಯಿತು. ಮರಿಮಕ್ಕಳನ್ನು ಕಾಣುವ ಭಾಗ್ಯದೊಡನೆ ದೀರ್ಘಾಯುಷ್ಯ – ಆರೋಗ್ಯಗಳು ಆಕೆಗೆ ದೊರೆತವು.

ಮನಸ್ಸಿಗೆ ಬಂದಿದ್ದನ್ನು ಅಪೇಕ್ಷಿಸುವುದು, ಅದು ಇಜ್ಜೋಡವಾಗಲು. “ಕೋಡಗನ್ನು ಕೋಳಿ ನುಂಗಿತ್ತ” ಎಂದು ತಂತಿ ಬಾರಿಸುವುದು “ಅಂಗಿಯ ಮೇಲಂಗಿ ತರವಲ್ಲೋ ರಾಯ” ಎಂದ ಹೆಂಡತಿ ಗಂಡನಿಗೆ ಹೊಟ್ಟೆ ಹೊಕ್ಕು ಆಲುಪರೆದು ಹೇಳಿಕೊಂಡರೂ ಅವನು ೨ನೇ ಮಡದಿಯನ್ನು ತರದೆ ಬಿಡಲಿಲ್ಲ. ಅವನು ಶಿವಭಕ್ತನೆಂದು ತೋರುತ್ತದೆ. ನಮ್ಮನ್ನು ಕಂಡು ಶಿವನು ಕಲಿತನೋ, ಶಿವನನ್ನು ಕಂಡು ನಾವು ಕಲಿತೆವೋ ಈ ಇಬ್ಬರು ಹೆಂಡಿರ ಸಮಾಗಮ ಸುಖವನ್ನು.

ಇಬ್ಬರ್ಹೆಂಡರ ಕಾಟ ಇರಳು ತಗಣಿಕಾಟ
ಕಿಬ್ಬಕ್ಕಿ ಕಾಟ ಬಲುಕಾಟ | ಜವರಾಯ |
ಒಬ್ಬ ಬಿಟ್ಟೊಳ್ಳಿ ಕೊಂಡೊಯ್ಯೋ ||

ಇಬ್ಬರು ಹೆಂಡಿರ ಕಾಟ ಎಂಥದೆಂಬುದನ್ನು ಆಳಿನಿಂದ ಅರಸನವರೆಗೆ ಎಲ್ಲರೂ, ಚೆನ್ನಾಗಿಯೇ ಬಲ್ಲರು. “ಇಬ್ಬರ ಹೆಂಡಿರ ಕಾಟಕಾಗಿ ಮಗ್ಗದ ಕುಣಿಯಾಗ ಡೊಗ್ಗಿದೆನೆಪ್ಪೋ, ಹ್ಯಾಂಗ ಮಾಡಲ್ಯೋ | ಎಪ್ಪಾ | ಹ್ಯಾಂಗ ಮಾಡಲ್ಯೋ” ಎಂದು ಜನಪದವು ಹೇಳಿಕೊಡುವ ಹಾಡಿನ ಹಾಡು ಯಾರಿಗೆ ಗೊತ್ತಿಲ್ಲ?

ಇಬ್ಬರ್ಹೆಂಡಿರನಾದ ಏಡಿಯ ಮುಳ್ಳಾದ
ಕೋಡಗನಾದ ಕೊರವಾದ | ಬಾಲೇರು |
ಮಾಡಿಟ್ಟ ಸಿಂಬಿ ಅರಿವ್ಯಾದ ||

ಏಕಕಾಲಕ್ಕೆ ಇಬ್ಬರು ಹೆಂಡಿರು ಸವತಿಮಕ್ಕಲಾಗಿಗಂಡನೊಡನೆ ಬಾಳ್ವೆಮಾಡಿ ಪಡೆದ ಅನುಭವ ಹಾಡಿನಲ್ಲಿ ಕೇಳುತ್ತೇವೆ. ನಡವಳಿಕೆಯಲ್ಲಿ ಕಾಣುತ್ತೇವೆ. ಏಕ ಕಾಲಕ್ಕೆ ಇಬ್ಬರು ಹೆಂಡಿರು ಮನೆಯಲ್ಲಿ ಬಾಳ್ವೆಮಾಡುವುದು ಜಟಿಲವಾದ ವಿಷಯ. ಇದ್ದೊಬ್ಬ ಹೆಂಡತಿ ತೀರಿ ಹೋಗಿ ಗಂಡನನ್ನು, ಮತ್ತು ಇದ್ದರೆ ಒಂದೆರಡು ಮಕ್ಕಳನ್ನನ ಬೀದಿಗೆ ನಿಲ್ಲಿಸಿದಾಗ ಆಬಡಪಾಯಿ ಗಂಡ ಏನು ಮಾಡಬೇಕು? ಎರಡು ಹರಕು ಸೀರೆಗಳೊಳಗಿನ ಗಟ್ಟಿಯಾದ ಭಾಗಗಳನ್ನು ಒಟ್ಟುಗೂಡಿಸಿ ಇಡಿಯ ಸೀರೆ ಮಾಡಿದಂತೆ ಆ ಸಂಸಾರ. ದಿಂಡುಹಾಕಿದ ಆ ಸೀರೆಯ ಒಂದು ತುಣುಕು ಹಸಿರು, ಇನ್ನೊಂದು ಕೆಂಪು ಅಥವಾ ನೀಲಿ ಇರಬಹುದು. ಅದು ಜಾತಗಾರ ಪರಂಪರೆಯ ಸೀರೆಯನಿಸಬಹುದು. ೨ನೇ ಮದುವೆಯಾಗಲಿ ಉಡಿಕೆಯಾಗಲಿ ಬಹುಶಃ ಜಾತಗಾರ ಸೀರೆಯ ನೆನಪು ತರುವುದರಲ್ಲಿ ಸಂಶಯವೇ ಇಲ್ಲ.

ಉಡಿಕಿಯ ಹೆಂಡತಿ ಉಡಿಯಾನ ಲಿಂಗೆಂದ
ಕಿರಿಬಳ್ಳುಹಿಡಿದ ಮಡದಿಯ |ಸಂಗಾಟ
ಸಿಡಿಪಿಡಿಯಾಕೋ ಸಿರಿರಾಯ ||

ಬೆನ್ನು ಸತ್ತ ಹೆಂಗಸು, ಬೆನ್ನು ಬಿರಿದ ಗಂಡಸು ಇವರನ್ನು ಗಂಡ-ಹೆಂಡಿರನ್ನಾಗಿ ಮಾಡುವ ಒಂದು ವಿಧಾನವೇ ಉಡಿಕೆ. ಆಕೆಯ ಜೊತೆಗೆ ಮೊದಲ ಗಂಡನ ಒಂದೆರಡು ಮಕ್ಕಳು ಇರಬಹುದು. ಈತನೊಡನೆ ಮದುವೆಯ ಹೆಂಡತಿಯಲ್ಲಿ ಹುಟ್ಟಿದ ಮಕ್ಕಳೂ ಇರಬಹುದು.ಅಂಥಲ್ಲಿ ಸಿಡಿಪಿಡಿ ಕಾಣಿಸಿಕೊಳ್ಳದೆ ಇನ್ನೆಲ್ಲಿ ಕಾಣಸಿಕೊಳ್ಳಬೇಕು?

ಇವೆರಡನ್ನೂ ಬಿಟ್ಟರೆ ಉಡಕೆಯೂ ಅಲ್ಲದ ೨ನೇ ಮದುವೆಯೂ ಅಲ್ಲದ ಒಂದು ಪದ್ಧತಿಯನ್ನು ಜೀವವು ಆಯ್ಕೆ ಮಾಡಿಕೊಂಡಿದೆ. ಸೂಳೆಗಾರಿಕೆಯ ಪ್ರಯೋಜನ ಮಾಡಿಕೊಳ್ಳುವುದೇ ಮನೆಯ ಜಂಜಾಟಕ್ಕಿಂತ ಪ್ರಶಾಂತವಾದ ಉಪಾಯ. ಮೊದಮೊದಲು ಹೆಂಡತಿಸತ್ತ ವಿದುರನು ತನ್ನ ಪೌರುಷ ಪೂರ್ಣತೆಗಾಗಿಯೆನ್ನುವಂತೆ, ಗಂಡ ಸತ್ತವಳೊಬ್ಬಳಸಂಪರ್ಕ ಬೆಲೆಸುವ ರೂಢಿ ಉಂಟಾಯಿತೇನೋ. ಆಕೆ ಗಂಡನಿಗೆ ಹೆಂಡತಿ ಗಂಡ ಸತ್ತಮೇಲೆ ರಂಡಮುಂಡೆಯಾದಳು. ಯಾರಾರಿಗೋ ರಂಡಿಯಾಗತೊಡಗಿದಳು. ಆ ದಾರಿ ಉಭಯರಿಗೂ ನಿರ್ಭಯದ ಉಪಾಯ. ಒಬ್ಬನನ್ನೇ ಹೊಂದಿಕೊಂಡವಳು ರಂಡೆಯೆನಿಸಿದಳು. ಹಲವರನ್ನು ಬರಮಾಡಿಕೊಳ್ಳುವವಳು ಸೂಳೆಯೆನಿಸಿದಳು.

ಸೂಳೆಗೆ ಹೋದವನು ಏನಾದ ಎಂತಾದ
ಕಾಡು ನಾಯಾದ ಕಪಿಯಾದ | ಮುದುವ
ಸೂಳೆ ಕಾಲಿಗೆ ಕೆರವಾದ ||

ಹಸಿದ ನಾಯಿಗೂ ಹಳಸಿದ ನುಚ್ಚಿಗೂ ಗಂಟು. ಉಡುಕಿಯ ಹೆಂಡತಿಗೂ ಸೂಳೆಗೂ ಎಂದೆಂದೂ ಹೋಲಿಸುವಂತಿಲ್ಲ. ಏನಾದರೂ ಆಕೆ ಹೆಂಡತಿ. ಹೆಂಡತಿ ಹೆಂಡತಿಯೇ, ಸೂಳೆ ಸೂಳೆಯೇ.

ಸೂಳೀಗಿ ಹೋದವನ ಸುಲಿದು ಮಟ್ಟೀಕಟ್ಟಿ
ಊರ ಹೊರಗವನ ಹೆಡ ಮುರಗಿ | ಕಟ್ಟಿದರ
ಸೂಳೆಂಬ ಶಬ್ದ ಬಿಡುವವಲ್ಲ ||

ಮಾಡಿಕೊಂಡ ಹೆಂಡತಿಯನ್ನಾದರೂ ಮರೆತಾನು, ಸೂಳೆಯನ್ನು ಹೇಗೆ ಮರೆತಾನು? ಹೆಂಡತಿಯೊಂದಿಗೆ ಕ್ಕಳು ಮರಿಗಳ ಜಂಜಾಟವಿರುವುದು ಸಹಜವಷ್ಟೇ? ಅಂಥ ಪರಿಸರವು ಗಂಡನಿಗೆ ಆಗಿರಬಹುದು. ಹೆಂಡತಿಯೇನೊ ಬೇಕು. ಆದರೆ ಆ ಸಂಪರ್ಕದಿಂದ ಪ್ರಾಪ್ತವಾದ ಪ್ರತಿಫಲ ಮಾತ್ರ ಬೇಡವಾಗಿದೆ. ಆದರೆ ಸೂಳೆಮನೆಯ ಪರಿಸರವೇ ಬೇರೆ.

ಮಕ್ಕಳಿಲ್ಲ ಮರಿಯಿಲ್ಲ. ಕೂಸಿನ ಅಳುವಿಲ್ಲ. ಹಾಸಿಗೆಯ ಕೊಳೆಯಿಲ್ಲ. ಅಂದಾಗ ನಿದ್ದೆಗಣ್ಣಿನಲ್ಲಿಯೂ ಸೂಳೆಯನ್ನು ಸ್ಮರಿಸಬಹುದಾಗಿದೆ. ಅಲ್ಲಿ ಕಂಡು ಬರುವ ಉಲ್ಲಾಸವಾಗಲಿ, ಉತ್ಸಾಹವಾಗಲಿ ಭುಜಗನಿಗೆ ಮನೆಮರೆಸುತ್ತದೆ. “ಸುಖವು ಬೀದಿಯ ನೆರಳ | ದುಃಖವು ದೂಡುವ ಬಿಸಿಲ!” ಎನ್ನುವ ಮಾತನ್ನು ಗಮನಿಸಿದರೆ ಬಾಳು ಅದಾವದೋ ಪ್ರಸಾದಂತಿದೆಯೆಂದು ಹೇಳಬಹುದಾದಿಗೆ.

ಹೆಂತಡಿ ಗಂಡನಿಗೆ ಅರ್ಧಾಂಗಿ, ಜೀವನದ ಜೊತೆಗಾರ್ತಿ ಅನಿಸಿದರೂ ಗಂಡಹೆಂಡಿರಲ್ಲಿ ತಾಳಮೇಳು ಇರದಿದ್ದರೆ ಅರ್ಧಾಂಗಿ ಜಾಕೀಟು ಎನಿಸುತ್ತದೆ. ಜೊತೆಗಾರ್ತಿ ನಾಯಿರಾಧೆಯೆನಿಸುತ್ತಾಳೆ. ಈ ಬಗೆಯ ವಿಷಾದಕರ ಅನುಭವವನ್ನು ಗರತಿ ತ್ರಿಪದಿಯಲ್ಲಿ ಅದೆಷ್ಟು ಸೂಕ್ತವಾಗಿ ವಿವರಿಸಿದ್ದಾಳೆ ನೋಡಿರಿ.

ಮುಗಿಲ ಮ್ಯಾಲಿನ ಹಕ್ಕಿ ಹಗಲು ಮುಡಿದರೇನ
ಆಗಲಿ ಇರುವವರ ಗೊಡವೇನ | ಮಾಣಿಕ
ಹಾವಿನ ಬದಿಲಿದ್ದು ಫಲವೇನ ||

ಪತಿಯೆಂದರೆ ಮುಗಿಲ ಮೇಲೆ ಹೊಳೆಹೊಳೆವ ಚಿಕ್ಕೆ. ಆ ಚಿಕ್ಕೆ ರಾತ್ರಿಯೂಡದೆ ಹಗಲು ಮೂಡಿದರೆ ಅದೇತರ ಹೊಳಪು? ರಾಯರು ಹಗಲು ಮಾತ್ರ ಮನೆಗೆ ಸುಳಿದು, ರಾತ್ರಿಕಾಲದಲ್ಲಿ ಎಲ್ಲಿ ಮರೆಯಾಗುತ್ತಾರೋ ತಿಳಿಯದು. ಹಗಲು ಮೂಡುವ ಚಿಕ್ಕೆ ಮಾತ್ರ ಆಗಿರದೆ ಪತಿಯು, ಮಾಣಿಕ ಧರಿಸಿದ ಹಾವೂ ಆಗಿದ್ದಾನೆ. ಅದಕ್ಕೆ ಮಾಣಿಕದ ಸಿಂಗಾರಕ್ಕಿಂತ ಇನ್ನೊಬ್ಬರನ್ನು ಕಚ್ಚಿ ವಿಷಬಾದೆಗೀಡುಮಾಡುವುದು ಈಪ್ಸಿತ.

ವರಗೇಡಿ ವಗೆತನ ಕುಡಬ್ಯಾಡ ಹಡೆದವ್ವ
ವರನೋಡ ವರನ ಗುಣನೋಡ | ಮನಿಯಾನ |
ಸಾಸೀವಿ ಕಾಳಷ್ಟು ರಿಣನೋಡ ||

ಏನಿದ್ದರೂ ಬಾಳು ಒಂದು ಪ್ರಸಾದ, ಅದನ್ನು ಒಲ್ಲೆನ್ನಲಾಗದು, ಚೆಲ್ಲಿಕೊಡಲಾಗದು. ಕಣ್ಣು ಮುಚ್ಚಿ ಬೊಗಸೆಯೊಡ್ಡಿ ಕುಡಿದು ಬಿಡಬೇಕು.