ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲರಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದ ಜನಪದ ಸಾಹಿತ್ಯ ಮತ್ತು ಸಂಗ್ರಹ ಮತ್ತು ಜಾನಪದ ಅಧ್ಯಯನ ಕ್ಷೇತ್ರದ ಪ್ರಾತಃಸ್ಮರಣೀಯರಲ್ಲಿ ಪ್ರಮುಖರಾದ ಡಾ. ಸಿಂಪಿ ಲಿಂಗಣ್ಣನವರು ತಮ್ಮ ಅನುಭವ, ಅಧ್ಯಯನ ಮತ್ತು ಆಲೋಚನೆಗಳನ್ನು ನಿರಂತರವಾಗಿ ತಮ್ಮ ಮಾತು ಮತ್ತು ಬರಹಗಳಲ್ಲಿ ಪ್ರಕಟಿಸುತ್ತ ಬಂದವರು. ಕನ್ನಡ ಜನಪದ ಸಾಹಿತ್ಯದ ಆಚಾರ್ಯ ಕೃತಿಯಾದ ಗರತಿಯ ಬಾಳು (೧೯೩೧)ವಿನ ಪ್ರಕಟಣೆಯಿಂದ ತೊಡಗಿ ತಮ್ಮ ಕೊನೆಯ ದಿನಗಳವರೆಗೂ ಕರ್ನಾಟಕದ ಜನಪದ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಸಂಗ್ರಹಿಸಿ, ವ್ಯಾಖ್ಯಾನಿಸಿ, ಪ್ರಕಟಿಸಿ ಕನ್ನಡ ಜನಪದ ಸಾಹಿತ್ಯಕ್ಕೆ ಅಧ್ಯಯನದ ಮನ್ನಣೆಯನ್ನು ತಂದುಕೊಟ್ಟಿದ್ದಾರೆ. ವಸಾಹತುಶಾಹಿ ಜ್ಞಾನದ ಜಾನಪದ ಅಧ್ಯಯನವೆಂಬ ಶಿಸ್ತು ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಆಗಮನವಾಗುವ ಮೊದಲೇ ಸಾಂಸ್ಕೃತಿಕ ಅಧ್ಯಯನದ ವಿಶಿಷ್ಟ ಮಾದರಿಯೊಂದನ್ನು ಸಿಂಪಿಯವರು ಕನ್ನಡ ಜಾನಪದ ವಿದ್ವತ್‌ ಕ್ಷೇತ್ರಕ್ಕೆ ಒದಗಿಸಿಕೊಟ್ಟಿದ್ದಾರೆ. ದೇಸಿ ಸವಾಲಿನ ಈ ಸಂದರ್ಭದಲ್ಲಿ ವಸಾಹತೀಕರಣಕ್ಕೆ ಪೂರ್ವದ ಸಿಂಪಿಯವರ ಜಾನಪದ ಅಧ್ಯಯನದ ಕೃತಿಗಳು ಮತ್ತೆ ಹೊಸತಾಗಿ ಓದಿಸಿಕೊಳ್ಳಲು ಅವಕಾಶ ಕಲ್ಪಿಸಿವೆ.

ಗರತಿಯ ಬಾಳು, ಜನಾಂಗದ ಜೀವಾಳ, ಜನಪದ ಸಾಹಿತ್ಯದಲ್ಲಿ ಕಿರಿದರೊಳ್‌ ಪಿರಿದರ್ಥದ ಚಲಕ, ಹೆಡಿಗೆ ಜಾತ್ರೆ, ಗರತಿಯ ಬಾಳ ಸಂಹಿತೆ ಮತ್ತು ಗಾದೆಗಳ ಗಾರುಡಿ ಎನ್ನುವ ಸಿಂಪಿಯವರ ಆರು ಗ್ರಂಥಗಳು ಇಲ್ಲಿ ಸಮಾಗಮಗೊಂಡು ಸಮಗ್ರ ಸಿಂಪಿ ಜನಪದ ಸಂಪುಟವೊಂದು ರೂಪು ತಾಳಿದೆ. ಸಿಂಪಿಯವರ ಎಲ್ಲ ಬರವಣಿಗೆಯಲ್ಲೂ ಕಾಣುವ ವಿಶಿಷ್ಟವಾದ ಗುಣಗಳೆಂದರೆ ಅನುಭವದ ಮೂಸೆಯಲ್ಲಿ ಹರಳುಗಟ್ಟಿದ ಜಾನಪದ ತಿಳಿವಳಿಕೆ, ಜನಾಂಗದ ಅವಿನಾಭಾವ ಸಂಬಂಧದ ಮೂಲಕ ಜಾನಪದವನ್ನು ಪರಿಭಾವಿಸುವ ಪೂರ್ಣದೃಷ್ಟಿ, ಜನಪದ ಬದುಕಿನ ಅತಿಸಾಮಾನ್ಯವೆಂದು ಭಾವಿಸಲಾಗುವ ಸಂಗತಿಗಳನ್ನು ಎತ್ತಿಕೊಂಡು ಹಸನಾದ ಬದುಕನ್ನು ಕಲ್ಪಿಸುವ ಉತ್ಸಾಹ, ಜನಪದರನ್ನು ಮತ್ತು ಜನಪದ ಸಾಹಿತ್ಯನ್ನು ಬೇರ್ಪಡಿಸಲಾಗದ ಅಖಂಡ ದೃಷ್ಟಿಕೋನ, ಸಮುದಾಯಿಕತೆಯ ನಡುವೆ ಎಲ್ಲರೊಡನೆ ಒಂದಾಗಿ ಸಂವಾದಿಸುವ ಶೈಲಿಯ ಬರವಣಿಗೆ, ಹೀಗೆ ವಸಾಹತೋತ್ತರ ಕರ್ನಾಟಕದಲ್ಲಿ ಜಾನಪದ ಅಧ್ಯಯನವನ್ನು ಮರುನಿರ್ವಚನ ಮಾಡಿಕೊಳ್ಳಬೇಕಾದ ಸನ್ನಿವೇಶದಲ್ಲಿ ಡಾ. ಸಿಂಪಿ ಲಿಂಗಣ್ಣ ಅವರ ಈ ಸಮಗ್ರ ಜನಪದ ಸಂಪುಟದ ಬರಹಗಳು ತುಂಬಾ ಮುಖ್ಯವಾಗಿವೆಯೆಂದು ಭಾವಿಸುತ್ತೇನೆ.

ಡಾ. ಸಿಂಪಿ ಲಿಂಗಣ್ಣನವರ ಈ ಜನಪದ ಸಂಪುಟವನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಸಂಪಾದಿಸಿಕೊಟ್ಟಿರುವ ಅವರ ಪುತ್ರರೂ ಕನ್ನಡದ ಉತ್ತಮ ಪ್ರಬಂಧಕಾರ ಹಾಗೂ ವಿಮರ್ಶಕರೂ ಆಗಿರುವ ಪ್ರೊ. ವೀರೇಂದ್ರ ಸಿಂಪಿ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಪ್ರಕಟಣೆಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರ ಸಹಕಾರವನ್ನು ನೆನೆಯುತ್ತೇನೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.

ಬಿ. ಎ. ವಿವೇಕ ರೈ
ಕುಲಪತಿ