ಕಾವ್ಯಾನಂದ ಎಂಬ ಕಾವ್ಯ ನಾಮದಿಂದ ಪ್ರಸಿದ್ದರಾಗಿರುವ ಡಾ|| ಸಿದ್ಧಯ್ಯಪುರಾಣಿಕ ರವರು ಈ ಶತಮಾನದ ಕನ್ನಡ ಸಾಹಿತ್ಯದ ಪ್ರಸಿದ್ದ ಲೇಖಕರಲ್ಲಿ ಒಬ್ಬರು. ಇವರು ಮೂಲತಹ ಪ್ರಸಿದ್ಧ ಕವಿ, ವಸ್ತುತಃ ಶ್ರೇಷ್ಠ ವಿಚಾರವಾದಿ, ಕಾರ್ಯತಃ ಸಮರ್ಥ ಆಡಳಿತಾದಿಕಾರಿಯಾದ ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮರೆಯಲಾಗದಂತ ಕವಿ. ಇವರು ೧೯೧೮ ರಲ್ಲಿ ರಾಯಚೂರು ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ವಿದ್ಯಾಂಪುರದಲ್ಲಿ ಜನಿಸಿದರು. ಇವರು ಕಲ್ಬುರ್ಗಿ ಕಾಲೇಜು, ಹೈದರಾಬಾದ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಬಿ.ಎ.ಎಲ್.ಎಲ್.ಬಿ ಪದವಿಗಳನ್ನು ಪಡೆದರು. ಇವರು ಅನೇಕ ಸರ್ಕಾರಿ ಕಛೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಸಮರ್ಥ ಆಡಳಿತಾದಿಕಾರಿಯಾಗಿಯೂ ಹೆಸರು ಗಳಿಸಿದ್ದಾರೆ.

ಇವರು ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ಸಾಹಿತ್ಯಬಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ್ದಾರೆ. ಇವರು ಕವನ ಸಂಕಲನ, ಶಿಶುಸಾಹಿತ್ಯ, ಐತಿಹಾಸಿಕ ಕಾದಂಬರಿ, ನಾಟಕಗಳು, ಜೀವನ ಚರಿತ್ರೆ ಈ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಮಾನಸ ಸರೋವರ, ಕರುಣಾಶ್ರಾವಣ, ಮೊದಲುಮಾನವನಾಗು, ಜಲಪಾತ, ಇವು ಇವರ ಉತ್ತಮ ಕವನ ಸಂಕಲನಗಳು.

ತುಪ್ಪಾರೊಟ್ಟಿಗೇಗೇಗೇ, ಗಿಲ್ ಗಿಲ್ ಗಿಲಗಚ್ಚ, ತಿರುಗಲೆ ತಿರುಗಲೆ ತಿರುಗುಯ್ಯಾಲೆ, ಇವು ಶಿಶುಸಾಹಿತ್ಯ ಕೃತಿಗಳು. ಭಾರತವೀರ, ರಜತರೇಖೆ, ಇವು ಇವರ ನಾಟಕ ಕೃತಿಗಳು ತ್ರಿಭುವನ ಮಲ್ಲ ಇವರ ಐತಿಹಾಸಿಕ ಕಾದಂಬರಿ, ಸುಭೋಧಸಾರ, ಇವರ ಸಂಪಾದಿತ ಕೃತಿ, ಸಿದ್ಧರಾಮ, ಅಲ್ಲಮ ಪ್ರಭು ಇವು ಇವರು ಸಂಗ್ರಹಿಸಿದ ಜೀವನ ಚರಿತ್ರೆಗಳು ವಚನೋದ್ಯಾನ ಇವರ ಮೇರು ಕೃತಿಯಾಗಿದೆ. ಈ ಕೃತಿಯಲ್ಲಿ ಇವರು ನವ ವಚನಗಳ ತಳಿಯನ್ನು ಸೃಷ್ಟಿಸಿದ್ದಾರೆ.

ಲಂಚದ ಹಣದಿಂದ ಪಂಚಾಮೃತವ ತರುವರಾರೋ

ಕಾಳಸಂತೆಯ ಹಣದಿಂದ ಪಲ್ಲಕ್ಕಿ ಕೊಡಿಸುವರಾರೋ

ಹಕ್ಕಿಯ ಗೂಡೊಂದು ಕಲಾಕೃತಿ, ಹಾವಿನ ಬೀಡೊಂದು ಕಲಾಕೃತಿ

ಜೇಡನ ಬಲೆಯೊಂದು ಕಲಾಕೃತಿ, ಜೇನಿನ ಹೊಟ್ಟೊಂದು ಕಲಾಕೃತಿ

ನಿನ್ನ ಪ್ರತಿಯೊಂದು ಕೃತಿಯೂ ಕಲಾಕೃತಿಯಯ್ಯಾ

ಎದೆಯ ಮೆಚ್ಚು ಮಾಯವಾಗಿ ಹೊಟ್ಟೆಯ ಕಿಚ್ಚು ಕಿಡಿಗೆದರಿದರೆ

ಹುಚ್ಚರ ಆಸ್ಪತ್ರೆಯಾಗದೇನಯ್ಯಾ ಜಗವೆಲ್ಲಾ

ಇವರು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮಾಳವಾಡ ಪ್ರಶಸ್ತಿಕೂಡ ಇವರಿಗೆ ಲಬಿಸಿದೆ. ಭಾರತೀಯ ಪರಿಷತ್ತಿನಿಂದ ಪ್ರಪ್ರಥಮವಾಗಿ ಬಿಲ್ವರ ಪ್ರಶಸ್ತಿ ಸಹ ಗಳಿಸಿರುವ ಹೆಗ್ಗಳಿಕೆ ಇವರದು ಇವರು ೧೯೯೪ ರಲ್ಲಿ ಮರಣಹೊಂದಿದರು.