ಒಂದು ಕಾಲ ಇತ್ತು – ಕ್ಯಾಮೆರಾದೊಳಕ್ಕೆ ಒಂದು ರೋಲು ಫಿಲಂ ಹಾಕಿ, ಆ ರೋಲು ಮುಗಿಯುವತನಕ ಕಾದು, ಸ್ಟೂಡಿಯೋಗೆ ಹೋಗಿ ಅದನ್ನು ತೊಳೆಸಿ ಪ್ರಿಂಟುಹಾಕಿಸಿದ ಮೇಲಷ್ಟೆ ಚಿತ್ರಗಳನ್ನು ನೋಡುವುದು ಸಾಧ್ಯವಾಗುತ್ತಿತ್ತು. ಹಾಗೆಂದು ಈಗ ನನ್ನ ತಮ್ಮನಿಗೆ ಹೇಳಿದರೆ ಅವನು ಕಿಸಿಕಿಸಿ ನಗುತ್ತಾನೆ – ತನ್ನ ಮೊಬೈಲಿನ ಐದು ಮೆಗಾಪಿಕ್ಸೆಲ್ ಕ್ಯಾಮೆರಾದಲ್ಲಿ ಚಿತ್ರಗಳನ್ನು ಪಟಪಟನೆ ಕ್ಲಿಕ್ಕಿಸಿ ಕ್ಷಣಾರ್ಧದಲ್ಲಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುವ ಕಾಲದವನು ಅವನು!

ಹೌದಲ್ಲ, ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಫೋಟೋಗ್ರಫಿ ಅದೆಷ್ಟು ಸುಲಭವಾಗಿದೆ! ಬೇರೆಬೇರೆ ರೀತಿಯ ಚಿತ್ರಗಳನ್ನು ತೆಗೆಯಲು ಹತ್ತಾರು ಸುಲಭ ಆಯ್ಕೆಗಳು, ಸ್ವಯಂಚಾಲಿತ ಆಯ್ಕೆ ಬೇಡ ಎನ್ನುವುದಾದರೆ ಮ್ಯಾನ್ಯುಯಲ್ ಸೆಟ್ಟಿಂಗುಗಳು, ಚಿತ್ರದ ಗುಣಮಟ್ಟ ಹೇಗಿರಬೇಕು ಎಂದು ತೀರ್ಮಾನಿಸುವ ಸ್ವಾತಂತ್ರ್ಯ, ಹೈ ಡೆಫನಿಷನ್ ವೀಡಿಯೋ ಚಿತ್ರೀಕರಿಸುವ ಸೌಕರ್ಯ, ದೂರದೂರದ ದೃಶ್ಯಗಳನ್ನೂ ಕಣ್ಣೆದುರಿಗೆ ತಂದುನಿಲ್ಲಿಸುವ ಮೆಗಾಜೂಮ್ – ಹೀಗೆ ಆಧುನಿಕ ಕ್ಯಾಮೆರಾಗಳಲ್ಲಿರುವ ವೈಶಿಷ್ಟ್ಯಗಳ ಪಟ್ಟಿಗೆ ಕೊನೆಯೇ ಇಲ್ಲ.

ಚಿತ್ರ ಕ್ಲಿಕ್ಕಿಸಿದ ಕೂಡಲೆ ಅದು ಹೇಗೆ ಬಂದಿದೆಯೆಂದು ನೋಡಿಕೊಳ್ಳುವ ಸೌಲಭ್ಯ ಎಲ್ಲ ಕ್ಯಾಮೆರಾಗಳಲ್ಲೂ ಇದೆ; ಸರಿಯಾಗಿ ಬಂದಿಲ್ಲದಿದ್ದರೆ ತಕ್ಷಣವೇ ಇನ್ನೊಂದು ಸಲ ಕ್ಲಿಕ್ಕಿಸಿದರೆ ಆಯಿತು! ಇಮೇಲ್‌ನಲ್ಲೋ ಫೇಸ್‌ಬುಕ್‌ನಲ್ಲೋ ಪಿಕಾಸಾ-ಫ್ಲಿಕರ್ ಮುಂತಾದ ಜಾಲತಾಣಗಳ ಮೂಲಕವೋ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಬೇರೆಯವರೊಡನೆ ಹಂಚಿಕೊಳ್ಳುವುದು ಸಾಧ್ಯ. ಬೇಕಾದಾಗ ಬೇಕಾದಷ್ಟು ಚಿತ್ರಗಳನ್ನು ಮಾತ್ರ ಮುದ್ರಿಸಿಕೊಳ್ಳುವ ಸ್ವಾತಂತ್ರ್ಯವೂ ನಮ್ಮದೇ.

ನಿಜ, ಈ ಡಿಜಿಟಲ್ ಕ್ಯಾಮೆರಾಗಳಿಂದಾಗಿ ಏನೇನೆಲ್ಲ ಬದಲಾವಣೆಗಳು ಬಂದುಬಿಟ್ಟಿವೆ!

ಡಿಜಿಟಲ್ ಕ್ಯಾಮೆರಾ ಅಂದರೇನು?

ಇಲೆಕ್ಟ್ರಾನಿಕ್ ಇಮೇಜ್ ಸೆನ್ಸರ್ ಬಳಸಿ ಅಂಕೀಯ ರೂಪದ ಛಾಯಾಚಿತ್ರಗಳನ್ನು ತೆಗೆಯುವ ಕ್ಯಾಮೆರಾಗಳನ್ನು ಡಿಜಿಟಲ್ ಕ್ಯಾಮೆರಾಗಳೆಂದು ಕರೆಯುತ್ತಾರೆ. ಬಹುತೇಕ ಡಿಜಿಟಲ್ ಕ್ಯಾಮೆರಾಗಳಲ್ಲಿ ಛಾಯಾಚಿತ್ರಗಳಷ್ಟೆ ಅಲ್ಲದೆ ವೀಡಿಯೋಗಳನ್ನೂ ಚಿತ್ರೀಕರಿಸುವುದು ಸಾಧ್ಯ. ನೀವು ಕ್ಲಿಕ್ಕಿಸಿದ ಚಿತ್ರದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಸೌಲಭ್ಯವೂ ಕೆಲ ಕ್ಯಾಮೆರಾಗಳಲ್ಲಿರುತ್ತದೆ. ಡಿಜಿಟಲ್ ಛಾಯಾಗ್ರಹಣದಲ್ಲಿ ತೊಡಗಲು ಪ್ರತ್ಯೇಕ ಕ್ಯಾಮೆರಾ ಇರಲೇಬೇಕು ಎಂದೇನೂ ಇಲ್ಲ. ಬಹುತೇಕ ಮೊಬೈಲ್ ದೂರವಾಣಿಗಳು ಹಾಗೂ ಟ್ಯಾಬ್ಲೆಟ್ ಗಣಕಗಳಲ್ಲಿ ಕ್ಯಾಮೆರಾ ಇದ್ದೇ ಇರುತ್ತದೆ. ಇನ್ನು ಕೆಲ ಕ್ಯಾಮೆರಾಗಳು ಪೆನ್ನಿನಲ್ಲಿ, ವಾಚಿನಲ್ಲಿ, ಅಂಗಿಯ ಗುಂಡಿಯಲ್ಲೂ ಅಡಗಿ ಕೂರಬಲ್ಲವು!

ಡಿಜಿಟಲ್ ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ‘ಮೆಗಾಪಿಕ್ಸೆಲ್’, ‘ಜೂಮ್’, ‘ಫೋಕಸ್’ ಮುಂತಾದ ಪದಗಳು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುತ್ತವೆ. ಇವೆಲ್ಲ ಏನು? ತಿಳಿಯೋಣ ಬನ್ನಿ.

ಪಿಕ್ಸೆಲ್ ಮತ್ತು ಮೆಗಾಪಿಕ್ಸೆಲ್

ಗಣಕದಲ್ಲಿ ಶೇಖರವಾಗುವ ಪ್ರತಿಯೊಂದು ಚಿತ್ರವೂ ಅಪಾರ ಸಂಖ್ಯೆಯ ಪುಟ್ಟಪುಟ್ಟ ಚೌಕಗಳ ಜೋಡಣೆಯಿಂದ ರೂಪಗೊಂಡಿರುತ್ತದೆ.

ಈ ಚೌಕಗಳನ್ನು ಪಿಕ್ಸೆಲ್‌ಗಳೆಂದು ಕರೆಯುತ್ತಾರೆ. ಪಿಕ್ಸೆಲ್ ಎಂಬ ಹೆಸರು ‘ಪಿಕ್ಚರ್ ಎಲಿಮೆಂಟ್’ ಎನ್ನುವುದರ ಹ್ರಸ್ವರೂಪ.

ಇಂತಹ ಪ್ರತಿಯೊಂದು ಚೌಕವೂ ಕೆಂಪು, ಹಸಿರು ಹಾಗೂ ನೀಲಿ ಬಣ್ಣಗಳ ವಿಭಿನ್ನ ಪ್ರಮಾಣದ ಮಿಶ್ರಣದಿಂದ ದೊರಕುವ ಬಣ್ಣ ಹೊಂದಿರುತ್ತದೆ. ಈ ಮೂರು ಬಣ್ಣಗಳಲ್ಲಿ ಪ್ರತಿಯೊಂದೂ ಸೊನ್ನೆಯಿಂದ ೨೫೫ರ ವರೆಗೆ ಯಾವುದೇ ಮೌಲ್ಯ ಹೊಂದಿರಬಹುದು. ಉದಾಹರಣೆಗೆ ಮೂರು ಬಣ್ಣಗಳ ಮೌಲ್ಯವೂ ಸೊನ್ನೆಯಾಗಿದ್ದರೆ ಕಪ್ಪು ಬಣ್ಣ, ಮೂರೂ ೨೫೫ ಆಗಿದ್ದರೆ ಬಿಳಿ ಬಣ್ಣ, ಕೆಂಪು ಮಾತ್ರ ೨೫೫ ಆಗಿದ್ದು ಬೇರೆಯವೆಲ್ಲ ಸೊನ್ನೆ ಆಗಿದ್ದರೆ ಕೆಂಪು ಬಣ್ಣ, ಕೆಂಪು-ಹಸಿರು ಎರಡೂ ೨೫೫ ಆಗಿದ್ದು ನೀಲಿ ಸೊನ್ನೆಯಾಗಿದ್ದರೆ ಹಳದಿ ಬಣ್ಣ – ಹೀಗೆ ಚಿತ್ರದ ಚೌಕಾಕಾರಗಳಲ್ಲಿ ಬೇರೆಬೇರೆ ಬಣ್ಣಗಳಿರುತ್ತವೆ. ಬೇರೆಬೇರೆ ಬಣ್ಣಗಳ ಲಕ್ಷಾಂತರ ಪಿಕ್ಸೆಲ್‌ಗಳು ಸೇರಿದಾಗ ನಮ್ಮ ಕಣ್ಣಮುಂದೆ ಸುಂದರ ಚಿತ್ರಗಳು ಕಾಣುತ್ತವೆ.

ಒಂದು ಚಿತ್ರದಲ್ಲಿ ಹತ್ತು ಲಕ್ಷ ಪಿಕ್ಸೆಲ್‌ಗಳಿದ್ದರೆ ಅದು ಒಂದು ಮೆಗಾಪಿಕ್ಸೆಲ್ ಚಿತ್ರವಾಗುತ್ತದೆ. ಅಂತಹ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾ ಒಂದು ಮೆಗಾಪಿಕ್ಸೆಲ್ ಕ್ಯಾಮೆರಾ ಎಂದು ಕರೆಸಿಕೊಳ್ಳುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಕ್ಯಾಮೆರಾಗಳು ೧೫-೧೬ ಮೆಗಾಪಿಕ್ಸೆಲ್‌ಗೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಮೊಬೈಲ್ ದೂರವಾಣಿಗಳಲ್ಲಿರುವ ಕ್ಯಾಮೆರಾ ಸಾಮರ್ಥ್ಯ ೧.೩ ಮೆಗಾಪಿಕ್ಸೆಲ್‌ನಿಂದ ಪ್ರಾರಂಭವಾಗುತ್ತದೆ; ಬಹುತೇಕ ಮೊಬೈಲುಗಳು ೨ ಹಾಗೂ ೩.೨ ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತವೆ.

೧೪ ಮೆಗಾಪಿಕ್ಸೆಲ್ ಕ್ಯಾಮೆರಾ ಎಂದಮಾತ್ರಕ್ಕೆ ಅದರಲ್ಲಿ ೧೪ ಮೆಗಾಪಿಕ್ಸೆಲ್ ಚಿತ್ರಗಳನ್ನೇ ತೆಗೆಯಬೇಕು ಎಂದೇನೂ ಇಲ್ಲ – ನಮ್ಮ ಅಗತ್ಯಕ್ಕೆ ಅನುಗುಣವಾಗಿ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಆಯ್ದುಕೊಳ್ಳುವುದು ಸಾಧ್ಯ.

ಚಿತ್ರದಲ್ಲಿ ಹೆಚ್ಚು ಮೆಗಾಪಿಕ್ಸೆಲ್ ಇದ್ದಷ್ಟೂ ಅದನ್ನು ಹೆಚ್ಚುಹೆಚ್ಚು ದೊಡ್ಡದಾಗಿ ಮುದ್ರಿಸಿಕೊಳ್ಳಬಹುದು. ಆದರೆ ಕ್ಯಾಮೆರಾ ಕೊಳ್ಳಲು ಮೆಗಾಪಿಕ್ಸೆಲ್ ಮಾತ್ರ ಮಾನದಂಡವಾಗಬಾರದು. ನಿಮ್ಮ ಬಳಕೆಗೆ ಎಷ್ಟು ಬೇಕೋ ಅಷ್ಟು ಮೆಗಾಪಿಕ್ಸೆಲ್ ಇದ್ದರೆ ಸಾಕು – ನೀವು ಚಿತ್ರಗಳನ್ನು ಸಣ್ಣಗಾತ್ರದಲ್ಲಿ ಮುದ್ರಿಸುವುದಾದರೆ ಎರಡೋ ಮೂರೋ ಮೆಗಾಪಿಕ್ಸೆಲ್ ಆದರೆ ಸಾಕು; ಹತ್ತು-ಹನ್ನೆರಡು ಮೆಗಾಪಿಕ್ಸೆಲ್ ಚಿತ್ರಗಳನ್ನು ಫ್ಲೆಕ್ಸ್ ಬ್ಯಾನರುಗಳ ಗಾತ್ರದಲ್ಲೇ ಮುದ್ರಿಸಬಹುದು!

ಜೂಮ್

ಖಾಲಿ ಸೈಟಿನಲ್ಲಿರುವ ಕಸದ ರಾಶಿಯ ಮಧ್ಯದಲ್ಲಿ ಹೂವಿನ ಗಿಡವೊಂದು ಬೆಳೆದಿದೆ ಎಂದುಕೊಳ್ಳಿ. ಆ ಗಿಡದಲ್ಲಿ ಸುಂದರವಾದ ಹೂವೊಂದು ಅರಳಿದೆ. ಅದರ ಚಿತ್ರ ತೆಗೆಯೋಣವೆಂದರೆ ಸುತ್ತಲಿನ ಕಸವೆಲ್ಲ ಕಾಣುತ್ತದೆ ಎನ್ನುವ ಕಿರಿಕಿರಿ; ಹತ್ತಿರ ಹೋಗಿ ತೆಗೆಯಲು ರಾಶಿ ರಾಶಿ ಕಸದ ಅಡಚಣೆ. ಇಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದೇ ಜೂಮ್‌ನ ಪರಿಕಲ್ಪನೆ. ಚಿತ್ರಗಳನ್ನು ಕ್ಲಿಕ್ಕಿಸುವಾಗ ಕ್ಯಾಮೆರಾ ಮುಂದಿರುವ ದೃಶ್ಯದಲ್ಲಿ ನಮಗೆ ಬೇಕಾದ್ದನ್ನಷ್ಟೆ ಆರಿಸಿಕೊಳ್ಳಲು ಜೂಮ್ ಸೌಲಭ್ಯ ಸಹಾಯಮಾಡುತ್ತದೆ. ನಿಮ್ಮ ಕ್ಯಾಮೆರಾದಲ್ಲಿ ಸಾಕಷ್ಟು ಜೂಮ್ ಸಾಮರ್ಥ್ಯ ಇದ್ದದ್ದೇ ಆದರೆ ರಸ್ತೆಯಲ್ಲೇ ನಿಂತುಕೊಂಡು ಖಾಲಿಸೈಟಿನ ಕೊಳಕಿನ ನಡುವೆ ಅರಳಿರುವ ಹೂವಿನ ಚಿತ್ರ ಕ್ಲಿಕ್ಕಿಸಬಹುದು.

ಜೂಮ್‌ನಲ್ಲಿ ಎರಡು ವಿಧ – ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್. ಆಪ್ಟಿಕಲ್ ಜೂಮ್‌ನಲ್ಲಿ ಕ್ಯಾಮೆರಾ ಲೆನ್ಸಿನ ಫೋಕಲ್ ಲೆಂಗ್ತ್ ಬದಲಿಸುವ ಮೂಲಕ ಚಿತ್ರದ ವ್ಯಾಪ್ತಿಯನ್ನು ಹಿಗ್ಗಿಸುವುದು ಸಾಧ್ಯ. ಈ ಬಗೆಯ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಬಹಳ ಚೆನ್ನಾಗಿರುತ್ತದೆ. ಕ್ಯಾಮೆರಾದಲ್ಲಿ ಹೆಚ್ಚಿನ ಆಪ್ಟಿಕಲ್ ಜೂಮ್ ಇದ್ದಷ್ಟೂ ಹೆಚ್ಚುಹೆಚ್ಚು ದೂರದ ಚಿತ್ರಗಳನ್ನು ತೆಗೆಯುವುದು ಸಾಧ್ಯವಾಗುತ್ತದೆ.

ಡಿಜಿಟಲ್ ಜೂಮ್‌ನಲ್ಲಿ ಹಾಗಲ್ಲ. ಅಲ್ಲಿ ಮೂಲ ಚಿತ್ರವನ್ನೇ ತೆಗೆದುಕೊಂಡು ನಿಮಗೆ ಬೇಕಾದ ಭಾಗವನ್ನು ಮೂಲ ಚಿತ್ರದ ಗಾತ್ರಕ್ಕೆ ಹಿಗ್ಗಿಸಲಾಗುತ್ತದೆ. ಹೀಗಾಗಿ ಡಿಜಿಟಲ್ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುವುದಿಲ್ಲ. ಅದೂ ಅಲ್ಲದೆ ಹೀಗೆ ಚಿತ್ರಗಳನ್ನು ಹಿಗ್ಗಿಸುವ ಕೆಲಸವನ್ನು ಗಣಕದಲ್ಲಿ ಸುಲಭವಾಗಿ ಮಾಡಬಹುದಾದ್ದರಿಂದ ಕ್ಯಾಮೆರಾಗಳಲ್ಲಿ ಡಿಜಿಟಲ್ ಜೂಮ್‌ಗೆ ಹೆಚ್ಚಿನ ಪ್ರಾಮುಖ್ಯವೇನೂ ಇಲ್ಲ.

ಕ್ಯಾಮೆರಾದಲ್ಲಿ ಲಭ್ಯವಿರುವ ಜೂಮ್ ಸಾಮರ್ಥ್ಯವನ್ನು ಸೂಚಿಸಲು ೧x, ೨x, ೩x,… ಮುಂತಾದ ಸಂಕೇತಗಳನ್ನು ಬಳಸಲಾಗುತ್ತದೆ. ಇಲ್ಲಿ ೧x ಎನ್ನುವುದು ಮೂಲ ಚಿತ್ರದ ಗಾತ್ರವನ್ನು ಸೂಚಿಸಿದರೆ ೨x, ೩x ಇವೆಲ್ಲ ಚಿತ್ರವನ್ನು ಎಷ್ಟು ಪಟ್ಟು ಹಿಗ್ಗಿಸಲಾಗಿದೆ ಎಂದು ತೋರಿಸುತ್ತವೆ. ೩೦xಗೂ ಹೆಚ್ಚಿನ ಜೂಮ್ ಸಾಮರ್ಥ್ಯವುಳ್ಳ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿವೆ.

ಫೋಕಸ್

ಕ್ಯಾಮೆರಾಗಳಲ್ಲಿ ಏನೆಲ್ಲ ವೈಶಿಷ್ಟ್ಯ-ವೈವಿಧ್ಯ ಇದ್ದರೂ ಒಂದು ವಿಷಯ ಮಾತ್ರ ಎಲ್ಲ ಬಗೆಯ ಕ್ಯಾಮೆರಾಗಳನ್ನೂ ಸಮಾನವಾಗಿ ಕಾಡುತ್ತದೆ. ಆ ವಿಷಯವೇ ಫೋಕಸ್. ಚಿತ್ರದ ಗಮನ ಯಾವ ವಸ್ತುವಿನ ಮೇಲೆ ಕೇಂದ್ರೀಕೃತವಾಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ.

ಅನೇಕಬಾರಿ ನಮ್ಮ ಇಚ್ಛೆಯ ವಿಷಯದತ್ತ ಚಿತ್ರವನ್ನು ಫೋಕಸ್ ಮಾಡುವುದು ಕಷ್ಟವಾಗುತ್ತದೆ: ಬಾಲ್ಕನಿ ಕೈದೋಟದಲ್ಲಿ ಅರಳಿರುವ ಹೂವಿನ ಚಿತ್ರ ತೆಗೆಯಲು ಹೋದಾಗ ಆ ಹೂವಿಗಿಂತ ಸ್ಪಷ್ಟವಾಗಿ ಪಕ್ಕದಲ್ಲಿ ಒಣಗುತ್ತಿರುವ ಒರೆಸುವ ಬಟ್ಟೆ ಕಾಣುತ್ತಿರುತ್ತದೆ. ಯಾವುದೋ  ಪ್ರವಾಸಿ ತಾಣದಲ್ಲಿ ಪ್ರೇಯಸಿಯ ಚಿತ್ರ ಕ್ಲಿಕ್ಕಿಸಿದ್ದೇನೆ ಎಂದು ನೀವು ಅಂದುಕೊಂಡರೆ ನಿಮ್ಮ ಕ್ಯಾಮೆರಾ ಅವಳ ಹಿಂದಿರುವ ಅಜ್ಜಿಯ ಕಡೆ ಹೆಚ್ಚಿನ ಗಮನ ಕೊಟ್ಟಿರುತ್ತದೆ. ಇನ್ನು ಕೆರೆ ದಡದಲ್ಲಿರುವ ಮರದ ಬೊಡ್ಡೆಯ ಮೇಲೆ ಕುಳಿತು ಬಿಸಿಲು ಕಾಯಿಸುತ್ತಿರುವ ಬೆಳ್ಳಕ್ಕಿಯ ಚಿತ್ರ ತೆಗೆಯಲು ಹೋದಿರೋ, ಅನುಮಾನವೇ ಬೇಡ, ಅತ್ಯಂತ ಸ್ಪಷ್ಟವಾಗಿ ಬಂದಿರುತ್ತದೆ – ಮರದ ಬೊಡ್ಡೆ!

ಚಿತ್ರದ ವಿಷಯ ಏನಾಗಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆಯೋ ಅದಕ್ಕೆ ಸರಿಯಾಗಿ ಕ್ಯಾಮೆರಾವನ್ನು ಹೊಂದಿಸುವುದು ಸಾಧ್ಯವಾಗದಿದ್ದಾಗ ಈ ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳುತ್ತವೆ. ಚಿತ್ರ ‘ಔಟ್ ಆಫ್ ಫೋಕಸ್’ ಆಗಿದೆ ಎನ್ನುವುದು ಇಂತಹ ಸಂದರ್ಭಗಳಲ್ಲೇ.

ಚಿತ್ರ ಕ್ಲಿಕ್ಕಿಸುವಾಗ ಏನು ಫೋಕಸ್ ಆಗಿದೆಯೋ ಅದಕ್ಕೆ ತಕ್ಕಂತೆ ಕ್ಯಾಮೆರಾದ ಮಸೂರ ಹಾಗೂ ಸೆನ್ಸರ್‌ಗಳನ್ನು ಹೊಂದಿಸಲಾಗುತ್ತದೆ. ಕ್ಯಾಮೆರಾದ ಗಮನವೆಲ್ಲ ಫೋಕಸ್ ಆಗಿರುವಷ್ಟು ಭಾಗದ ಕಡೆಗೇ ಇರುವುದರಿಂದ ಬೇರೆಡೆಗಳ ಬಗ್ಗೆ ಹೆಚ್ಚಿನ ವಿವರ ಅದಕ್ಕೆ ದಕ್ಕುವುದಿಲ್ಲ; ಹೀಗಾಗಿ ಔಟ್ ಆಫ್ ಫೋಕಸ್ ಆಗಿ ಉಳಿದುಕೊಂಡ ಭಾಗಗಳು ಚಿತ್ರದಲ್ಲಿ ಮಬ್ಬುಮಬ್ಬಾಗಿ ಕಾಣಿಸಿಕೊಳ್ಳುತ್ತವೆ.

ಬಗೆಬಗೆ ಕ್ಯಾಮೆರಾ

ಇದೀಗ ಮಾರುಕಟ್ಟೆಯಲ್ಲಿರುವ ಡಿಜಿಟಲ್ ಕ್ಯಾಮೆರಾಗಳಲ್ಲಿ ನೂರೆಂಟು ವಿಧ. ಕೆಲವೇ ಸಾವಿರಗಳಿಂದ ಹಲವು ಲಕ್ಷಗಳವರೆಗೆ ಎಲ್ಲ ಬೆಲೆಗಳಲ್ಲೂ ಅವು ದೊರಕುತ್ತವೆ.

ಅತ್ಯಂತ ಕಡಿಮೆ ಬೆಲೆಗೆ ದೊರಕುವ ಹಾಗೂ ಅತ್ಯಂತ ಜನಪ್ರಿಯವಾಗಿರುವ ಕ್ಯಾಮೆರಾಗಳದು ಮೊದಲ ವಿಧ. ಇವುಗಳನ್ನು ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾಗಳೆಂದು ಕರೆಯುತ್ತಾರೆ. ಪುಟ್ಟಗಾತ್ರದ ಈ ಕ್ಯಾಮೆರಾಗಳನ್ನು ಬಳಸುವುದು ಬಹಳ ಸುಲಭ – ನಮಗೆ ಬೇಕಾದೆಡೆಗೆ ಕ್ಯಾಮೆರಾವನ್ನು ತಿರುಗಿಸಿ (ಪಾಯಿಂಟ್ ಮಾಡಿ) ಕ್ಲಿಕ್ಕಿಸಿದರಾಯಿತು (ಶೂಟ್); ತಾಂತ್ರಿಕ ಹೊಂದಾಣಿಕೆಗಳೆಲ್ಲ ತನ್ನಷ್ಟಕ್ಕೆ ತಾನೇ ಆಗಿಬಿಡುತ್ತವೆ. ಹೀಗಾಗಿಯೇ ಅವಕ್ಕೆ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾಗಳೆಂದು ಹೆಸರು.

ಬಳಕೆಯಲ್ಲಿನ ಸರಳತೆಯೇ ಈ ಕ್ಯಾಮೆರಾಗಳ ಮುಖ್ಯ ಉದ್ದೇಶ; ಹಾಗಾಗಿ ಇವುಗಳಲ್ಲಿ ಪ್ರಾರಂಭಿಕ ಬಳಕೆದಾರರಿಗೆ ಬೇಕಾದ ಸೀಮಿತ ಸೌಲಭ್ಯಗಳಷ್ಟೆ ಇರುತ್ತದೆ. ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯಲು ಫ್ಲ್ಯಾಶ್ ವ್ಯವಸ್ಥೆ, ವೀಡಿಯೋಗಳನ್ನು ಚಿತ್ರೀಕರಿಸುವ ಸೌಲಭ್ಯ, ಚಿತ್ರಗಳನ್ನು ತೆಗೆಯುವಾಗ ಹಾಗೂ ಆನಂತರ ನೋಡಲು ಎಲ್‌ಸಿಡಿ ಪರದೆ, ಆಟೋಫೋಕಸ್ ಸೌಕರ್ಯ, ಜೊತೆಗೆ ಕೊಂಚಮಟ್ಟಿಗಿನ ಜೂಮ್ – ಇವಿಷ್ಟು ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುತ್ತವೆ. ಕ್ಯಾಮೆರಾದೊಳಗೇ ಅಳವಡಿಸಿರುವ ಲೆನ್ಸು ಕ್ಯಾಮೆರಾ ಕಾರ್ಯನಿರತವಾಗಿದ್ದಾಗ ಮಾತ್ರ ಹೊರಬರುತ್ತದೆ. ಅವುಗಳ ಜೂಮ್ ಸಾಮರ್ಥ್ಯ ಸಾಮಾನ್ಯವಾಗಿ ೩xನಿಂದ ೬x ಆಸುಪಾಸಿನಲ್ಲಿರುತ್ತದೆ.

ಇಷ್ಟಕ್ಕಿಂತ ಹೆಚ್ಚಿನ ಸೌಲಭ್ಯವಿರುವ ಕ್ಯಾಮೆರಾಗಳೂ ಇವೆ. ಇವುಗಳಲ್ಲಿ ಪಾಯಿಂಟ್ ಆಂಡ್ ಶೂಟ್ ಕ್ಯಾಮೆರಾದಲ್ಲಿರುವ ಸೌಲಭ್ಯಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಕೆಲ ವೈಶಿಷ್ಟ್ಯಗಳಿರುತ್ತವೆ. ಕ್ಯಾಮೆರಾದ ಕೆಲವು ತಾಂತ್ರಿಕ ಹೊಂದಾಣಿಕೆಗಳನ್ನು ಛಾಯಾಗ್ರಾಹಕನೇ ಬದಲಿಸುವ ಸೌಲಭ್ಯ, ನಾಲ್ಕಾರು ಪಟ್ಟು ಹೆಚ್ಚಿನ ಜೂಮ್, ಹಾಗೂ ಕೊಂಚ ದೊಡ್ಡ ಗಾತ್ರ ಹೊಂದಿರುವ ಈ ಕ್ಯಾಮೆರಾಗಳು ಅತ್ತ ಪ್ರಾರಂಭಿಕರೂ ಅಲ್ಲದ ಇತ್ತ ವೃತ್ತಿಪರರೂ ಅಲ್ಲದ ಹವ್ಯಾಸಿ ಛಾಯಾಗ್ರಾಹಕರಿಗೆ ಅಚ್ಚುಮೆಚ್ಚು. ೨೦xರಿಂದ ೩೦x ಜೂಮ್ ಸೌಲಭ್ಯ ಹೊಂದಿರುವ ಇಂತಹ ಕೆಲ ಕ್ಯಾಮೆರಾಗಳನ್ನು ಮೆಗಾಜೂಮ್ ಕ್ಯಾಮೆರಾಗಳೆಂದೂ ಕರೆಯುತ್ತಾರೆ.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳದು ಇನ್ನೊಂದು ಬಗೆ. ಮೂಲತಃ ಇವನ್ನು ವೃತ್ತಿಪರರೇ ಹೆಚ್ಚಾಗಿ ಬಳಸುತ್ತಿದ್ದರಾದರೂ ಈಚೆಗೆ ಹವ್ಯಾಸಿ ಛಾಯಾಗ್ರಾಹಕರಲ್ಲೂ ಡಿಎಸ್‌ಎಲ್‌ಆರ್ ಬಳಕೆ ಜನಪ್ರಿಯವಾಗುತ್ತಿದೆ.

ಡಿಎಸ್‌ಎಲ್‌ಆರ್ ಎನ್ನುವ ಹೆಸರು ಡಿಜಿಟಲ್ ಸಿಂಗಲ್ ಲೆನ್ಸ್ ರಿಫ್ಲೆಕ್ಸ್ ಎಂಬುದರ ಹ್ರಸ್ವರೂಪ. ಇತರೆ ಕ್ಯಾಮರಾಗಳಲ್ಲಿ ನಮಗೆ ನಾವು ಕ್ಲಿಕ್ಕಿಸಲು ಹೊರಟ ದೃಶ್ಯವನ್ನು ತೋರಿಸಲು ಒಂದು, ಫೊಟೋ ತೆಗೆಯಲು ಒಂದು ಹೀಗೆ ಪ್ರತ್ಯೇಕ ಲೆನ್ಸ್‌ಗಳಿರುತ್ತವೆ. ಆದರೆ ಎಸ್‌ಎಲ್‌ಆರ್ ಕ್ಯಾಮರಾಗಳಲ್ಲಿ ಹೀಗೆ ಬೇರೆ ಬೇರೆ ಲೆನ್ಸ್ ಇರುವುದಿಲ್ಲ. ದೃಶ್ಯ ನೋಡುವುದು ಮತ್ತು ಫೊಟೋ ತೆಗೆಯುದಕ್ಕೆ ಒಂದೇ ಲೆನ್ಸ್ ಬಳಸಲಾಗುತ್ತದೆ. ಇವುಗಳ ಡಿಜಿಟಲ್ ರೂಪವೇ ಡಿಎಸ್‌ಎಲ್‌ಆರ್. ಈ ಕ್ಯಾಮೆರಾಗಳು ಉತ್ಕೃಷ್ಟ ಗುಣಮಟ್ಟದ ಚಿತ್ರಗಳಿಗೆ ಹೆಸರುವಾಸಿ. ಬೇರೆ ಬೇರೆ ಅಗತ್ಯಗಳಿಗೆ ಬೇರೆಬೇರೆ ಲೆನ್ಸುಗಳನ್ನು ಬಳಸುವ ಸೌಲಭ್ಯ ಈ ಕ್ಯಾಮೆರಾಗಳಲ್ಲಿರುತ್ತದೆ.

ಡಿಎಸ್‌ಎಲ್‌ಆರ್ ಕ್ಯಾಮೆರಾ ಕೊಳ್ಳುವಾಗ ಅದರ ಜೊತೆಗೆ ಬರುವುದು ಒಂದೇ ಲೆನ್ಸು, ಅದು ಸಾಮಾನ್ಯ ಉಪಯೋಗಕ್ಕಷ್ಟೆ ಸಾಕಾಗುತ್ತದೆ. ನೆಲದಲ್ಲಿ ಓಡಾಡುತ್ತಿರುವ ಇರುವೆಯ ಚಿತ್ರವನ್ನೋ ದೂರದಲ್ಲಿರುವ ಮರದ ಮೇಲಿನ ಹಕ್ಕಿಯ ಚಿತ್ರವನ್ನೋ ತೆಗೆಯಲು ಅದು ಸಾಕಾಗುವುದಿಲ್ಲ. ಇವಕ್ಕೆಲ್ಲ ಬೇರೆಬೇರೆ ರೀತಿಯ ಲೆನ್ಸುಗಳು ಬೇಕಾಗುತ್ತವೆ. ಮ್ಯಾಕ್ರೋ ಲೆನ್ಸ್, ಟೆಲಿಫೋಟೋ ಲೆನ್ಸ್, ಜೂಮ್ ಲೆನ್ಸ್, ಪ್ರೈಮ್ ಲೆನ್ಸ್ – ಹೀಗೆ ಅನೇಕ ಬಗೆಯ ಲೆನ್ಸುಗಳು ಡಿಎಸ್‌ಎಲ್‌ಆರ್ ಕ್ಯಾಮೆರಾಗಳಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ನಾವು ಯಾವ ಕ್ಯಾಮೆರಾ ಬಳಸುತ್ತಿದ್ದೇವೋ ಅದಕ್ಕೆ ಸರಿಹೊಂದುವಂತಹ ಲೆನ್ಸನ್ನೇ ಬಳಸುವುದು ಕಡ್ಡಾಯ.

ಈಚಿನ ವರ್ಷಗಳಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಆದರೆ ಹೆಚ್ಚಿನ ಸಾಮರ್ಥ್ಯದ ಲೆನ್ಸುಗಳ ಬೆಲೆ ಇನ್ನೂ ದುಬಾರಿಯಾಗಿಯೇ ಇದೆ. ಹೀಗಾಗಿ ಈ ಬಗೆಯ ಕ್ಯಾಮೆರಾ ಮತ್ತು ಲೆನ್ಸುಗಳ ಖರೀದಿ ಇನ್ನೂ ಕೊಂಚ ದುಬಾರಿ ವ್ಯವಹಾರವೇ.

ವೀಡಿಯೋ ಕ್ಯಾಮೆರಾ

ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲ ಡಿಜಿಟಲ್ ಕ್ಯಾಮೆರಾಗಳಲ್ಲೂ (ಮೊಬೈಲ್ ದೂರವಾಣಿ ಸೇರಿದಂತೆ) ವೀಡಿಯೋಗಳನ್ನು ಚಿತ್ರೀಕರಿಸುವುದು ಸಾಧ್ಯ. ಹಲವು ಕ್ಯಾಮೆರಾಗಳಲ್ಲಂತೂ ಉನ್ನತ ಗುಣಮಟ್ಟದ ಎಚ್‌ಡಿ ವೀಡಿಯೋ ಛಾಯಾಗ್ರಹಣ ಕೂಡ ಸಾಧ್ಯ. ಬರಿಯ ವೀಡಿಯೋ ಛಾಯಾಗ್ರಹಣಕ್ಕಾಗಿಯೇ ಮೀಸಲಾದ ಡಿಜಿಟಲ್ ಕ್ಯಾಮೆರಾಗಳೂ ಇವೆ; ಅವುಗಳನ್ನು ಸಾಮಾನ್ಯವಾಗಿ ಕ್ಯಾಮ್‌ಕಾರ್ಡರ್ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.

ಜೇಬಿನಲ್ಲಿಟ್ಟುಕೊಳ್ಳುವಷ್ಟು ಪುಟ್ಟಗಾತ್ರದ ವೀಡಿಯೋ ಕ್ಯಾಮೆರಾಗಳೂ ಇವೆ. ತಕ್ಷಣಕ್ಕೆ ನೋಡಿದರೆ ಮೊಬೈಲ್ ದೂರವಾಣಿಗಳಂತೆ ಕಾಣುವ ಇವುಗಳಿಗೆ ಪಾಕೆಟ್ ವೀಡಿಯೋ ಕ್ಯಾಮೆರಾಗಳೆಂದು ಹೆಸರು. ಚಿತ್ರೀಕರಿಸುತ್ತಿರುವ ದೃಶ್ಯವನ್ನು ನೋಡಲು ಪುಟ್ಟದೊಂದು ಎಲ್‌ಸಿಡಿ ಪರದೆ, ಎಚ್‌ಡಿ ವೀಡಿಯೋ ಛಾಯಾಗ್ರಹಣ ಸಾಮರ್ಥ್ಯ, ಕಡಿಮೆ ತೂಕ – ಇವು ಇಂತಹ ಕ್ಯಾಮೆರಾಗಳಲ್ಲಿರುವ ಕೆಲ ಸೌಲಭ್ಯಗಳು. ಈ ಬಗೆಯ ಕ್ಯಾಮೆರಾಗಳು ಮೊಬೈಲ್ ಕ್ಯಾಮೆರಾಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿವೆ. ಸ್ವಲ್ಪಕಾಲ ಜನಪ್ರಿಯವಾಗಿದ್ದ ‘ಫ್ಲಿಪ್ ವೀಡಿಯೋ’ ಸರಣಿಯ ಪಾಕೆಟ್ ವೀಡಿಯೋ ಕ್ಯಾಮೆರಾಗಳ ಮಾರಾಟವನ್ನು ಇದೇ ಕಾರಣದಿಂದಾಗಿ ಏಪ್ರಿಲ್ ೨೦೧೧ರಲ್ಲಿ ನಿಲ್ಲಿಸಲಾಯಿತು.

ಚಿತ್ರಗಳ ಶೇಖರಣೆ ಹೇಗೆ?

ಡಿಜಿಟಲ್ ಕ್ಯಾಮೆರಾ ಬಳಸಿ ತೆಗೆದ ಚಿತ್ರಗಳನ್ನು ಉಳಿಸಲು ಕ್ಯಾಮೆರಾಗಳಲ್ಲಿ ಅಲ್ಪಪ್ರಮಾಣದ ಸ್ಮರಣಶಕ್ತಿ (ಮೆಮೊರಿ) ಇರುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಚಿತ್ರಗಳು ಹಾಗೂ ವೀಡಿಯೋಗಳನ್ನು ಶೇಖರಿಸಿಡಲು ಮೆಮೊರಿ ಕಾರ್ಡುಗಳ ಬಳಕೆ ಸಾಮಾನ್ಯ. ಇವುಗಳಲ್ಲಿ ಸೆಕ್ಯೂರ್ ಡಿಜಿಟಲ್ ಅಥವಾ ‘ಎಸ್‌ಡಿ’ ಕಾರ್ಡುಗಳು ವ್ಯಾಪಕವಾಗಿ ಬಳಕೆಯಾಗುತ್ತವೆ. ಈ ಕಾರ್ಡುಗಳನ್ನು ಬಹುತೇಕ ಎಲ್ಲ ಸಂಸ್ಥೆಗಳ ಕ್ಯಾಮೆರಾಗಳಲ್ಲೂ ಬಳಸಬಹುದು.

ಮೊಬೈಲ್ ದೂರವಾಣಿಯಂತಹ ಸಣ್ಣ ಉಪಕರಣಗಳಲ್ಲಿ ಬಳಸಲಿಕ್ಕಾಗಿ ಈ ಕಾರ್ಡಿನ ಮಿನಿ ಹಾಗೂ ಮೈಕ್ರೋ ಆವೃತ್ತಿಗಳೂ ದೊರಕುತ್ತವೆ. ಕೆಲ ಕ್ಯಾಮ್‌ಕಾರ್ಡರ್‌ಗಳಲ್ಲಿ ಹಾರ್ಡ್‌ಡಿಸ್ಕ್ ಕೂಡ ಇರುತ್ತದೆ.