ನೀರು ಕೊಳೆಯನ್ನು ತಿಳಿಗೊಳಿಸುತ್ತದೆ.  ನೀರಿನೊಂದಿಗೆ ಯಾವುದೇ ಕೊಳೆಯು ಬೆರೆತರೆ ಕರಗಿ ತಿಳಿಯಾಗುತ್ತದೆ.  ಎಣ್ಣೆಭರಿತ ಕೊಳೆಯು ನೀರಿನಲ್ಲಿ ಕರಗದು.  ಆಗ ಡಿಟರ್ಜೆಂಟ್‌ಗಳು ಸಹಾಯಕ್ಕೆ ಬರುತ್ತವೆ.  ಅಂದರೆ ಮೇದಾಮ್ಲ

[ಫ್ಯಾಟಿ ಆಸಿಡ್]ಗಳ ಲೋಹ ಲವಣವೇ ಸೋಪು, ಸಾಬೂನು ಹಾಗೂ ಮಾರ್ಜಕ.  ಲೋಹವೆಂದರೆ ಸೋಡಿಯಂ.  ಪೊಟ್ಯಾಸಿಯಂ ಬಳಸಿದರೆ ಸಾಬೂನು ನೀರಿನಲ್ಲಿ ಕರಗುತ್ತದೆ.  ಕ್ಯಾಲ್ಸಿಯಂ, ಅಲ್ಯೂಮಿನಿಯಂ, ಮ್ಯಾಂಗನೀಸ್, ಸತು ಮತ್ತು ಸೀಸಗಳನ್ನು ಬಳಸಿದರೆ ನೀರಿನಲ್ಲಿ ಕರಗದು.

ಸೋಪುಗಳು ವಸ್ತುವಿನ ಅಥವಾ ಜೀವಿಗಳ ಮೇಲ್ಮೈ ಮೇಲಿರುವ ಧೂಳು, ಕೊಳೆಗಳನ್ನು ತೆಗೆಯುತ್ತವೆ.  ಇವು ನೀರಿನ ಮೇಲ್ಮೈ ಕರ್ಷಣವನ್ನು ತಗ್ಗಿಸಿ ನೀರು ಹೆಚ್ಚು ತೇವಾಂಶಗೊಳ್ಳುವಂತೆ ಮಾಡುತ್ತದೆ.  ಇವುಗಳಲ್ಲಿ ನಾಲ್ಕು ವಿಧಗಳು.  ವೈಯಕ್ತಿಕ ಸ್ವಚ್ಛತೆಗೆ, ಬಟ್ಟೆ ತೊಳೆಯಲು, ಪಾತ್ರೆಗಳನ್ನು ತೊಳೆಯಲು ಹಾಗೂ ಗೃಹೋಪಕರಣಗಳನ್ನು, ವಾಹನಗಳನ್ನು ತೊಳೆಯಲು ಬಳಸುವ ಸೋಪುಗಳು.

ಸೋಪು ಎನ್ನುವ ಪದ ಬಂದಿದ್ದು ಸಾಪೋ ಎನ್ನುವ ಲ್ಯಾಟಿನ್ ಪದದಿಂದ.  ರೋಮನ್ ಬರಹಗಾರ ಹಾಗೂ ಪರಿಸರತಜ್ಞ [ಕ್ರಿಸ್ತಶಕ ೨೩-೭೯] ಈ ಪದವನ್ನು ತನ್ನ ಹಿಸ್ಟೋರಿಕಾ ನ್ಯಾಚುರಲಿಸ್ ಎನ್ನುವ ಪುಸ್ತಕದಲ್ಲಿ ಬಳಸಿದ.  ಕೂದಲನ್ನು ಸುಂದರಗೊಳಿಸಲು ಬಳಸುವ ಸೋಪಿನ ಬಗ್ಗೆ ಆತ ಉಲ್ಲೇಖಿಸಿದ್ದ.  ಆತನಿಗೆ ಸೋಪಿನ ಕೊಳೆ ನಿವಾರಿಸುವ ಗುಣ ತಿಳಿದಿರಲಿಲ್ಲ.  ಕ್ರಿಸ್ತಪೂರ್ವ ೨೨೦೦ರಲ್ಲಿ ಬ್ಯಾಬಿಲೋನ್‌ನಲ್ಲಿ ಮಣ್ಣು, ಅಲ್ಕಲಿ ಹಾಗೂ ದಾಲ್ಚಿನ್ನಿ ಎಣ್ಣೆ ಬಳಸಿ ಸೋಪಿನ ಮಾತ್ರೆಗಳನ್ನು ತಯಾರಿಸುವ ಕುರಿತು ಉಲ್ಲೇಖ ಉತ್ಖನನದ ಸಮಯದಲ್ಲಿ ದೊರೆತಿದೆ.  ಇದನ್ನು ನೇಯ್ಗೆಯು ಮೃದುವಾಗಲು ಬಳಸುತ್ತಿರಬಹುದು ಅಥವಾ ನೇಯ್ದ ಮೇಲೆ ಬಟ್ಟೆಯನ್ನು ಮೃದುವಾಗಿಸಲು ಬಳಸುತ್ತಿರಬಹುದು ಎನ್ನುವ ಊಹೆಯಿದೆ.  ಹೀಗೆ ಅನೇಕ ವಿಜ್ಞಾನಿಗಳು ಇದನ್ನು ಅಭಿವೃದ್ಧಿಪಡಿಸುತ್ತಾ ಬಂದರು.

ಸೋಪಿನಲ್ಲಿರುವ ಫ್ಯಾಟಿ ಆಸಿಡ್‌ನಲ್ಲಿ ಸ್ಟೆರಿಕ್ ಮತ್ತು ಪಲ್ಮಿಟಿಕ್ ಆಮ್ಲಗಳಿವೆ.  ಸೋಪಿನ ದ್ರಾವಣವು ಹೈಡ್ರೋಕಾರ್ಬನ್ ಸರಪಳಿ.  ಕಾರ್ಬಾಕ್ಸಿಲಿಕ್ ಆಮ್ಲ ಗುಂಪಿನೊಂದಿಗೆ ಬೆರೆತಿದೆ.  ತುದಿಯಲ್ಲಿ ಒಂದು ಲೋಹದ [ಸೋಡಿಯಂ ಅಥವಾ ಪೊಟ್ಯಾಸಿಯಂ] ಅಯಾನು ಸೇರಿದೆ.  ಅಯಾನು ಸೇರಿದ ತುದಿಯು ನೀರಿನೊಂದಿಗೆ ಬೆರೆಯುತ್ತದೆ.  ಹೈಡ್ರೋಕಾರ್ಬನ್ ತುದಿಯು ನೀರಿನೊಂದಿಗೆ ಬೆರೆಯದು.

ಸೋಪು ತಯಾರಿಸಲು ಅಲೀವ್ ಎಣ್ಣೆ ಬಳಸಿದರೆ ಹೆಚ್ಚು ನೊರೆ ಬರುವುದಿಲ್ಲ.  ತೆಂಗಿನೆಣ್ಣೆ ಬಳಸಿದರೆ ನೊರೆ ಹೆಚ್ಚು.  ಸೋಡಿಯಂ ಹೈಡ್ರಾಕ್ಸೈಡ್ ಬಳಸಿದರೆ ಗಟ್ಟಿಇಟ್ಟಿಗೆಯಾಗುತ್ತದೆ.  ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಬಳಸಿದರೆ ದ್ರವರೂಪದಲ್ಲಿರುತ್ತದೆ.

ಸೋಪು ಮತ್ತು ಮಾರ್ಜಕಗಳನ್ನು ಅನೇಕ ರೀತಿಯಲ್ಲಿ ತಯಾರಿಸುತ್ತಾರೆ.  ದ್ರವರೂಪದ ಆಲ್ಕಲಿಯೊಂದಿಗೆ ಮೇದಸ್ಸು ಮತ್ತು ಎಣ್ಣೆಯನ್ನು ಸೂಕ್ತಪದ್ಧತಿಯಲ್ಲಿ ಮಿಶ್ರಣ ಮಾಡಿದಾಗ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಸೋಪು ಸಿದ್ಧವಾಗುತ್ತದೆ.

ಅಧಿಕ ಒತ್ತಡದ ಆವಿಯಲ್ಲಿ ಮೇದಸ್ಸು ಹಾಗೂ ಎಣ್ಣೆಯನ್ನು ಕುದಿಸಿದಾಗ ಕಚ್ಚಾ ಫ್ಯಾಟಿ ಆಸಿಡ್ ಹಾಗೂ ಗ್ಲಿಸರಾಲ್ ಸಿಗುತ್ತದೆ.  ಕಚ್ಚಾ ಫ್ಯಾಟಿ ಆಸಿಡ್‌ನ್ನು ಭಟ್ಟಿ ಇಳಿಸಿ, ಶುದ್ಧಿಗೊಳಿಸಿ, ಶುದ್ಧ ಫ್ಯಾಟಿ ಆಸಿಡ್‌ಗೆ ಆಲ್ಕಲಿ ಬೆರೆಸಿ ತಟಸ್ಥಗೊಳಿಸಿದಾಗ ಸೋಪು ದೊರೆಯುತ್ತವೆ.  ಹೀಗೆ ಸಿದ್ಧವಾದ ಸೋಪಿನಿಂದ ಗ್ಲಿಸರಾಲ್, ಹೆಚ್ಚಾದ ಆಲ್ಕಲಿ ಮತ್ತು ಉಳಿದ ತ್ಯಾಜ್ಯಗಳನ್ನು ಹೊರತೆಗೆಯಬೇಕು.  ಆಮೇಲೆ ನಿರ್ಜಲೀಕರಣಗೊಳಿಸಿದರೆ ಗಟ್ಟಿಯಾದ ಸೋಪು ಸಿಗುತ್ತದೆ.

ಮೈಯುಜ್ಜುವ ಸೋಪು ತಯಾರಿಕೆಗೆ ಮರಳುಜೇಡಿ ಮತ್ತು ಸಾಂದ್ರತೆ ಕಡಿಮೆಯಿರುವ ಅಗ್ನಿಶಿಲೆ [Pumice]ಬಳಸುತ್ತಾರೆ.  ಇವು ಸತ್ತ ಚರ್ಮದ ಪದರವನ್ನು ಉಜ್ಜುವಿಕೆಯಲ್ಲಿ ಹೋಗಲಾಡಿಸುತ್ತದೆ.  ಮೈಯುಜ್ಜುವ ಸೋಪಿಗೆ ಕೆಲವು ಖನಿಜಗಳನ್ನು ಬಣ್ಣಕ್ಕಾಗಿ ಮತ್ತು ಸುಗಂಧಕ್ಕಾಗಿ ಬಳಸುತ್ತಾರೆ.

ಸಿಂಥೆಟಿಕ್ ಡಿಟರ್ಜೆಂಟ್‌ಗಳನ್ನು ಜರ್ಮನಿ ಮೊದಲು ತಯಾರಿಸಿತು.  ಅಭಿವೃದ್ಧಿಯಾದಂತೆ ಅದರಲ್ಲಿ [cationic] ಧನ ಅಯಾನಿಕೃತ, [anionic] ಋಣ ಅಯಾನೀಕೃತ, ಅಯಾನೀಕರಣವಾಗದ, ಉಭಯಸೂಕ್ತವೆಂಬ ನಾಲ್ಕು ವಿಧಗಳಿರುತ್ತವೆ.

ಋಣ ಅಯಾನೀಕೃತ ಮಾರ್ಜಕ: ಆಲ್ಕಲಿ ಸಲ್ಫೇಟ್ಸ್, ಆಲ್ಕಲಿ ಎಥೋಕ್ಸೈಟ್ ಸಲ್ಫೇಟ್ಸ್.  ಇದನ್ನು ಬಟ್ಟೆ ತೊಳೆಯಲು, ಪಾತ್ರೆ ತೊಳೆಯಲು, ದ್ರವ ಸಾಬೂನು ಹಾಗೂ ಶಾಂಪೂಗಳಾಗಿ ಬಳಸುತ್ತಾರೆ.

ಧನ ಅಯಾನೀಕೃತ ಮಾರ್ಜಕ: ಬಟ್ಟೆಗಳನ್ನು ಮೃದುಗೊಳಿಸಲು, ಮನೆ-ವಾಹನಗಳನ್ನು ತೊಳೆಯಲು, ಶೌಚಾಲಯ ಸ್ವಚ್ಛತೆಗೆ ಬಳಕೆ. ಉದಾ: ಎಸ್ಟರ್‌ಕ್ವಾಟ್ [esterquat] ಮೋನೋ ಆಲ್ಕಲಿ ಕ್ವಾಟರ್‍ನರಿ.

ಅಯಾನೀಕರಣವಾಗದ ಸಾಬೂನು : ಎಸ್ಟರ್‍ಸ್ ಆಫ್ ಫ್ಯಾಟಿ ಆಸಿಡ್.  ಲಾಂಡ್ರಿಗಳಲ್ಲಿ ಮುಖ್ಯವಾಗಿ ಉಪಯೋಗಿಸುತ್ತಾರೆ.

ಉಭಯಸೂಕ್ತ ಮಾರ್ಜಕ: ಇವು PHನ್ನು ಅವಲಂಬಿಸಿ ತನ್ನ ರಾಸಾಯನಿಕ ಕ್ರಿಯೆ ನಡೆಸುತ್ತದೆ.  ಇದನ್ನು ಮುಖ್ಯವಾಗಿ ಶಾಂಪೂಗಳಲ್ಲಿ, ಸೌಂದರ್ಯವರ್ಧಕಗಳಲ್ಲಿ ಉಪಯೋಗಿಸುತ್ತಾರೆ.  ಉದಾ: ಆಲ್ಕೈಲ್ ಬೆಟೈನ್

ಸೋಪು ಹಾಗೂ ಮಾರ್ಜಕಗಳು ಹೇಗೆ ಕೆಲಸ ಮಾಡುತ್ತವೆ?

ಸಾಮಾನ್ಯವಾಗಿ ನೀರು ಬಟ್ಟೆಯನ್ನು ಒದ್ದೆ ಮಾಡಿದಂತೆ ಕಾಣಿಸಿದರೂ ಬಟ್ಟೆಯ ಪ್ರತಿ ಅಣುವಿನೊಂದಿಗೆ ಸೇರಿರುವುದಿಲ್ಲ.  ಕಾರಣ ನೀರಿನ ಮೇಲ್ಮೈ ಒತ್ತಡ.  ಹೀಗಾಗಿ ಬಟ್ಟೆಯಲ್ಲಿರುವ ಕೊಳೆಯನ್ನು ಪೂರ್ತಿಯಾಗಿ ತೊಳೆಯಲು ಆಗದು.  ಆದರೆ ಸೋಪು ಹಾಗೂ ಮಾರ್ಜಕಗಳನ್ನು ಸೇರಿಸಿದಾಗ ನೀರಿನ ಮೇಲ್ಮೈ ಒತ್ತಡ ಕಡಿಮೆಯಾಗುತ್ತದೆ.  ಬಟ್ಟೆಯೊಂದಿಗೆ ಪೂರ್ತಿ ಬೆರೆಯುತ್ತದೆ.  ಬಟ್ಟೆಯ ಮೇಲ್ಮೈ ಮೇಲೆ ಹರಡಿ ಕೊಳೆಯನ್ನು ನಿವಾರಿಸುತ್ತದೆ.

ನೀರು ಎಣ್ಣೆ ಅಥವಾ ಜಾರುಕಗಳಿಂದಾದ ಕೊಳೆಯನ್ನು ತೊಳೆಯುವುದಿಲ್ಲ.  ಕಾರಣ ಅವು ನೀರಿನಲ್ಲಿ ಕರಗದು.  ಆದರೆ ಸೋಪು ಅಥವಾ ಮಾರ್ಜಕಗಳಲ್ಲಿರುವ ರಾಸಾಯನಿಕಗಳು ಅಂತಹ ಕೊಳೆಯನ್ನು ತೊಳೆಯುವ ಗುಣ ಹೊಂದಿವೆ.  ಹೇಗೆಂದರೆ ಸೋಪು ಅಥವಾ ಮಾರ್ಜಕಗಳು ನೀರಿನೊಂದಿಗೆ ಬೆರೆತು ಎಣ್ಣೆಯ ಕಣಗಳ ಸುತ್ತಲೂ ಸೇರಿಕೊಳ್ಳುತ್ತವೆ.  ಸೋಪು ಅಥವಾ ಮಾರ್ಜಕ ಅಣುಗಳ ಒಂದು ತುದಿ ನೀರಿನ ಅಣುವನ್ನು ಹಿಡಿದುಕೊಂಡಿದ್ದರೆ ಮತ್ತೊಂದು ತುದಿ ಎಣ್ಣೆಯ ಅಣುವನ್ನು ಹಿಡಿದಿರುತ್ತದೆ.  ಹೀಗೆ ಕೊಳೆ ಅಣುವಿನ ಸುತ್ತಲೂ ಕೋಟೆ ನಿರ್ಮಾಣ ಮಾಡುತ್ತದೆ.  ಹೀಗೆ ಸೋಪು ಅಥವಾ ಸಾಬೂನಿನ ಅಣುಗಳು ಎಣ್ಣೆ ಕೊಳೆಯ ಅಣುವನ್ನು ಎಳೆದು ಎಳೆದು ನೀರಿನಲ್ಲಿ ತೇಲುವಂತೆ ಮಾಡುತ್ತದೆ.

ನೀರು ಗಡಸಾಗಿದ್ದರೆ ಅದರಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಹಾಗೂ ಕಬ್ಬಿಣದ ಅಣುಗಳು ಈ ಕಾರ್ಯವಿಧಾನಕ್ಕೆ ತೊಡಕನ್ನು ಉಂಟುಮಾಡುತ್ತವೆ.  ಹೀಗಾಗಿ ಇಂತಹ ನೀರಿನಲ್ಲೂ ಸ್ವಚ್ಛತೆಯನ್ನು ಹೆಚ್ಚಿಸಲು ವಾಷಿಂಗ್ ಸೋಡಾ [ಸೋಡಿಯಂ ಕಾರ್ಬೋನೇಟ್] ಹಾಗೂ ಬೊರಾಕ್ಸ್ [ಸೋಡಿಯಂ ಟೆಟ್ರಾಬೊರೇಟರ್] ಉಪಯೋಗಿಸಲಾಯಿತು.  ಇವು ಖನಿಜಗಳ ಅಯಾನುಗಳನ್ನು ನೀರಿನಾಳಕ್ಕೆ ನೂಕಿ ಮೇಲಿರುವ ಶುದ್ಧ ನೀರು ಬಳಕೆಯಾಗುವಂತೆ ಮಾಡುತ್ತಿತ್ತು.  ಇಷ್ಟೆಲ್ಲಾ ಆದರೂ ಬಟ್ಟೆ ತೊಳೆದಾದ ಮೇಲೆ ಎಷ್ಟೇ ನೀರನ್ನು ಹಾಕಿದರೂ ಸೋಪು ಅಥವಾ ಮಾರ್ಜಕಗಳ ಸಶೇಷ ಬಟ್ಟೆಯಲ್ಲೇ ಉಳಿದುಬಿಡುತ್ತದೆ.  ಇವು ಬಟ್ಟೆಯು ಸೆಟೆದುಕೊಳ್ಳುವಂತೆ ಅಥವಾ ಬೂದಿ ಬೂದಿ ಆಗುವಂತೆ ಮಾಡುತ್ತವೆ.

ಸೋಪಿನ ಪುಡಿಯ ಕುರಿತ ಇನ್ನಷ್ಟು ವಿಷಯಗಳು ಹೀಗಿವೆ.

ಅಧಿಕ ಉಷ್ಣತಾಮಾನದ ಪ್ರಯುಕ್ತ ನಮ್ಮ ದೇಶದಲ್ಲಿ ಸೋಪಿನ ಪುಡಿಗಳ ಮಾರಾಟ ಹೆಚ್ಚುತ್ತಿದೆ.  ಆದರೂ ಬಡವರು, ಕೆರೆ ನದಿಗಳಲ್ಲಿ ಬಟ್ಟೆ ತೊಳೆಯುವವರು ಹಾಗೂ ನೀರಿನ ಅಭಾವವಿದ್ದ ಕಡೆಗಳಲ್ಲಿ ಸೋಪಿನ ಪುಡಿಯ ಉಪಯೋಗ ಕಡಿಮೆ.  ಕಾರಣ, ಸೋಪಿನಪುಡಿ ಉಪಯೋಗಿಸಿದರೆ ಹೆಚ್ಚು ನೀರು ಬೇಕೆನ್ನುವುದು ಮತ್ತು ಸಾಂಪ್ರದಾಯಿಕವಾಗಿ ಬಂದಿರುವ ತಿಕ್ಕಿ ತಿಕ್ಕಿ, ಕುಸುಬಿ ಕುಸುಬಿ, ಚಚ್ಚಿ ಚಚ್ಚಿ ಬಟ್ಟೆ ತೊಳೆದರೆ ಮಾತ್ರ ಚೊಕ್ಕವಾಗುವುದೆನ್ನುವ ನಂಬಿಕೆಗಳು.

ಇಷ್ಟಾದರೂ ನಿರ್ಮಾ ಬಡವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾರುಕಟ್ಟೆಯ ಶೇ.೨೫ ಭಾಗವನ್ನು ಆಕ್ರಮಿಸಿ ಯಶಸ್ವಿಯಾಗಿದೆ.

ಮಾರುಕಟ್ಟೆಯಲ್ಲಿ ಕನಿಷ್ಠ ೧೬೦ ಬಗೆಯ ಸೋಪಿನಪುಡಿಗಳು ಸಿಗುತ್ತವೆ.  ಆದರೆ ಹೆಚ್ಚು ಚಾಲನೆಯಲ್ಲಿರುವುದು ಟಿ.ವಿ. ಜಾಹೀರಾತಿನ ಸುಮಾರು ಮೂವತ್ತು ಬಗೆಯ ಪುಡಿಗಳು ಮಾತ್ರ.

ಸೋಪಿನ ಪುಡಿಯಲ್ಲಿ ಇರುವುದೇನು?

ಮೇಲ್ಮೈ ಚುರುಕುಗೊಳಿಸುವ, ಸಡಿಲಗೊಳಿಸುವ, ಯಥಾಸ್ಥಿತಿಯಲ್ಲಿಡುವಂತೆ ಮಾಡುವ ಮಧ್ಯವರ್ತಿ ವಸ್ತುಗಳು ಮುಖ್ಯವಾಗಿವೆ.  ಕೊಳೆನಿವಾರಕ ಮಧ್ಯವರ್ತಿಗಳು, ಹೊಳಪು ನೀಡುವ, ಬಿಳಿಯಾಗಿಸುವ, ನೀಲಿಸೊಳಿಸುವ, ಸಾಂದ್ರತೆ ಹಾಗೂ ಗಟ್ಟಿತನವನ್ನು ನಿಯಂತ್ರಿಸುವ ಮಧ್ಯವರ್ತಿ ವಸ್ತುಗಳು, ಕಿಣ್ವಗಳು, ಸುಗಂಧಗಳು ಮತ್ತು ಮಣ್ಣು ಹಾಗೂ ಕೊಳೆಯನ್ನು ಬೇರ್ಪಡಿಸುವ ಮಧ್ಯವರ್ತಿ ವಸ್ತುಗಳು ಇರುತ್ತವೆ.

ಹೀಗೆ ಕೊಳೆ, ಕಲೆ, ಧೂಳು, ಬೆವರಿನ ವಾಸನೆಯನ್ನು ಮಾತ್ರ ಹೋಗಲಾಡಿಸಿ ಬಣ್ಣ ಬಿಡದಂತೆ, ಬಟ್ಟೆ ಸವೆಯದಂತೆ ವರ್ತಿಸುವ ಸೋಪಿನಪುಡಿಗಳು ಹೆಚ್ಚು ಜನಪ್ರಿಯ.  ಅಂತೆಯೇ ಕೈ ಉರಿದರೆ, ಹೆಚ್ಚು ನೊರೆ ಬರದಿದ್ದರೆ ಅಂತಹ ಪುಡಿಯನ್ನು ಉಪಯೋಗಿಸುವವರೂ ಕಡಿಮೆಯಾಗುತ್ತಾರೆ.

ಸೋಪಿನ ಪುಡಿಗಳು ಸಾಮಾನ್ಯವಾಗಿ ಪರಿಸರ ಸ್ನೇಹಿಗಳು.  ಇದರಲ್ಲಿರುವ ರಾಸಾಯನಿಕಗಳನ್ನು ಬ್ಯಾಕ್ಟೀರಿಯಾಗಳು ೨೮ ದಿನದೊಳಗೆ ಅಔ೨ ಆಗಿ ಪರಿವರ್ತಿಸುತ್ತಿರುವುದು ಕಂಡುಬಂದಿದೆ.  ಆದರೂ ಇದರ ಪ್ರಮಾಣ ಶೇ.೬೦ ಮಾತ್ರ ಎಂದು ಕನ್ಸೂಮರ್ ವಾಯ್ಸ್ ವರದಿ ಮಾಡಿದೆ.  ಜೊತೆಗೆ ಎಲ್ಲಾ ಕಲೆಯನ್ನು ಮಸಿ ನುಂಗಿತು ಎನ್ನುವಂತೆ ನೀರಿನ ಗಡಸುತನವನ್ನು ಕಡಿಮೆಗೊಳಿಸಲು ಬಳಸುವ ಫಾಸ್ಪೇಟ್ ರಾಸಾಯನಿಕವು ಸುಲಭವಾಗಿ ವಿಭಜಿಸಲ್ಪಟ್ಟರೂ, ವಿಭಜಿಸಲಾದ ಅಂಶಗಳೇ ಕೆರೆ, ಕೊಳ, ನದಿಗಳನ್ನು ಸೇರಿದಾಗ ಅಲ್ಲಿ ಬ್ಲೂಗ್ರೀನ್ ಅಲ್ಲೇ ಬೆಳೆಯಲು ಕಾರಣವಾಗುತ್ತದೆ.  ಅನಂತರ ಆಲ್ಗೆಯು ಕೆರೆ, ಕೊಳ, ನದಿಗಳ ತುಂಬಾ ಬೆಳೆದು ಬೆಳಕು ನೀರೊಳಗೆ ಬರದಂತೆ ಮಾಡುತ್ತವೆ ಮತ್ತು ನೀರು ವಿಷಯುಕ್ತವಾಗುತ್ತದೆ.  ಹೀಗಾಗಿ ಸೋಪಿನ ಪುಡಿಗಳು ಪರಿಸರ ಸ್ನೇಹಿಗಳಲ್ಲ ಹಾಗೂ ಸಾವಯವವಲ್ಲ ಎನ್ನಬಹುದು.  ಕೆಲವು ದೇಶಗಳು ಈ ಕಾರಣಕ್ಕಾಗಿಯೇ ಸೋಪಿನ ಪುಡಿಗಳನ್ನು ಬ್ಯಾನ್ ಮಾಡಿವೆ.

ಹಾಗಾದರೆ ಸೋಪಿನ ಪುಡಿಗಳನ್ನು ಉಪಯೋಗಿಸುವುದು ತಪ್ಪೇ…? ಹಾಗೇನಿಲ್ಲ.  ಸೋಪಿನ ಪುಡಿಯಲ್ಲಿ ಬಟ್ಟೆ ತೊಳೆದ ಮೇಲೆ ನೀರನ್ನು ಬಚ್ಚಲಿನಲ್ಲಿ ಹರಿಯಬಿಡಬೇಡಿ.  ಬದಲು ಬಾಳೆಗಿಡ, ತೊಂಡೆಬಳ್ಳಿ, ಹುಲ್ಲುಜಾತಿ ಸಸ್ಯಗಳಿಗೆ ಅಥವಾ ದೊಡ್ಡ ಮರಗಳಿಗೆ ಹಾಕಬಹುದು.  ಸಾಧ್ಯವಾದಷ್ಟು ಕಡಿಮೆ ಬಳಕೆ ಮಾಡಿ ಮತ್ತು ಉತ್ತಮವಾದ ಸೋಪಿನ ಪುಡಿಯನ್ನೇ ಬಳಸಿ.

ಇಷ್ಟಾಗಿಯೂ ಸಾವಯವ ಮತ್ತು ಪರಸರ ಉಗ್ರವಾದಿಗಳು ಸೋಪು, ಸೋಪಿನ ಪುಡಿಯ ಬದಲು ಬಿಸಿನೀರು, ಅಂಟುವಾಳ ಕಾಯಿ, ನಿಂಬೆಹುಳಿ ಇತ್ಯಾದಿಗಳಿಂದ ಬಳಸಿ ಬಟ್ಟೆ ತೊಳೆಯಲು ಹೇಳುತ್ತಾರೆ.

ಸೋಪಿನ ಪುಡಿಯ ವಿಂಗಡಣೆ

ಹೆಸರು

ಬೆಲೆ
(೧ ಕಿಲೋಗ್ರಾಂಗೆ ರೂಪಾಯಿಗಳಲ್ಲಿ)

ಸ್ಥಾನಮಾನ
(ಉತ್ತಮ ಶೇಕಡಾ)

ಸರ್ಫ್ ಎಕ್ಸೆಲ್

೧೨೫

೯೨ [ಅತ್ತ್ಯುತ್ತಮ]

ಏರಿಯಲ್ ವಿತ್ ಮೈಕ್ರೋಶೈನ್

೧೩೦

೮೭

ಸರ್ಫ್ ವಾಶ್ ಬೂಸ್ಟರ್

೬೯

೮೫

ಹೆನ್ಕೋ ಸ್ಟೈನ್ ಚಾಂಪಿಯನ್

೬೯

೮೪

ಟಾಟಾ ಶುದ್ಧ

೩೬

೭೩

ರಿನ್ ಪವರ್‌ವೈಟ್

೩೬

೬೮

ನಿರ್ಮಾ ಸೂಪರ್

೪೨

೬೫

ನಿರ್ಮಾ

೧೬

೬೫

ಏರಿಯಲ್ ಸೂಪರ್ ಸಾಕರ್

೩೮

೫೬

ಫೇನಾ

೧೭

೫೬

ಟಿ.ಸೀರೀಸ್

೧೬.೫೦

೫೫

ಹಿಪ್ಪೋಲಿನ್

೧೬.೫೦

೫೫

೫೫೫

೧೭

೫೫

ವ್ಹೀಲ್

೧೭

೫೫