“ನಾದಯೋಗಿ ವೀಣಾ ಮಹಾರಾಜ”ರೆಂದೇ ಹೆಸರು ವಾಸಿಯಾಗಿರುವ ಶ್ರೀ ದತ್ತಾತ್ರೇಯ ರಾಮಚಂದ್ರ ಸ್ವಾಮಿ ಪರ್ವತೀಕರ್ ಅವರು ಜನಿಸಿದ್ದು ೧೯೧೬ರಲ್ಲಿ: ಹೈದ್ರಾಬಾದಿನಲ್ಲಿ. ಅವರು ಮೂಲತಃ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರು. ಅವರ ತಂದೆ ಶ್ರೀರಾಮಚಂದ್ರ ಸಿತಾರ ವಾದಕರು. ತಾಯಿ ಶ್ರೀಮತಿ ಸೀತಾಬಾಯಿ ಸಂಗೀತ ಭಕ್ತೆ. ಇಂತಹ ಪರಿಸರದಲ್ಲಿ ಜನಿಸಿದ ಶ್ರೀ ದತ್ತಾತ್ರೇಯರಿಗೆ ನಾದವಿದ್ಯೆ ಬಾಲ್ಯದಲ್ಲಿಯೇ ಒಲಿಯಿತು. ಅವರಿಗೆ ತಂದೆಯೇ ಮೊದಲ ಗುರು. ನಂತರ ಗುರುಕುಲ ಪದ್ಧತಿಯಲ್ಲಿ ಹೈದ್ರಾಬಾದಿನಲ್ಲಿ ಪಂ. ನಾದಾನಂದ ಬಾಬುಜಿ ಹಾಗೂ ಪಂ. ಜನಾರ್ಧನ ಬುವಾ ಅವರಲ್ಲಿ ಸಿತಾರ ವಾದನದ ಉನ್ನತ ಶಿಕ್ಷಣ ಪಡೆದರು. ಹೈದ್ರಾಬಾದದ ಉಸ್ಮಾನಿಯಾ ವಿಶ್ವವಿದ್ಯಾಲಯದ ಬಿ.ಎಸ್‌.ಸಿ. ಪದವಿ ಪಡೆದರು. ಗ್ರಹಸ್ಥರಾದರೂ ಸಹ ಅವರು ತಮ್ಮ ಬದುಕಿನ ಬಹುಪಾಲನ್ನು ನಾದಾನಂದದಲ್ಲಿಯೇ ಕಳೆದವರು.

ಸಂಗೀತದ ಸಾಕ್ಷಾತ್ಕಾರಕ್ಕಾಗಿ ೧೯೫೪ರಲ್ಲಿ ಬದರೀನಾಥಕ್ಕೆ ಹೋಗಿ ಅಲ್ಲಿ ೧೨ ವರ್ಷ ಸಂಗೀತೋಪಾಸನೆ ಗೈದು ಸಿದ್ಧಿ ಪಡೆದುಕೊಂಡರು. ‘ಸ್ವರ ಮಂಡಲ’, ‘ಸಿತಾರ’ ಹಾಗೂ ‘ರುದ್ರವೀಣೆ’ – ಈ ಮೂರು ವಾದ್ಯಗಳ ಉತ್ತಮಾಂಶಗಳನ್ನು ಒಂದೆಡೆ ಸೇರಿಸಿ ಹೊಸದೊಂದು ತಂತುವಾದ್ಯ ಅವಿಷ್ಕರಿಸಿದರು. ಅದಕ್ಕೆ ‘ದತ್ತಾತ್ರೇಯ ವೀಣೆ’ ಎಂದು ಹೆಸರಿಟ್ಟರು. ಸಂಗೀತದಲ್ಲಿ ‘ನಾದಾನಂದ ಪದ್ಧತಿ’ ಎಂಬ ಸಂಗೀತ ಸಿದ್ಧಾಂತ ಕಂಡು ಹಿಡಿದರು. ಸಂಗೀತ ಕಲೆಯ ಬೆಳವಣಿಗೆಗಾಗಿ ಹೈದ್ರಾಬಾದಿನಲ್ಲಿ ‘ಶ್ರೀ ರಾಘವೇಂದ್ರ ಮಿಶನ್‌’ ಎಂಬ ಸಂಗೀತ ಸಂಸ್ಥೆ ಸ್ಥಾಪಿಸಿದರು. ದೇಶದೆಲ್ಲೆಡೆ ಸಂಚರಿಸಿ, ಬದರಿ, ಹೃಷಿಕೇಶ, ದೆಹಲಿ, ಬೃಂದಾವನ, ಪಾಟ್ನಾ ಹಾಗೂ ಬೆಂಗಳೂರಿನಲ್ಲಿ ಅದರ ಶಾಲೆ ಪ್ರಾರಂಭಿಸಿ ಸಂಗೀತವನ್ನು ವ್ಯಾಪಕವಾಗಿ ಪ್ರಸಾರ ಮಾಡಿದರು.

‘ಮೂಲಾಧಾರ ಸಂಗೀತ ಶಿಕ್ಷಣ’, ‘ಶ್ರೀ ರಾಮಾಯಣ ಗಾನ’, ‘ನಾದಪ್ರಭಾ’, ‘ರಾಗ ಸುಧಾ’, ‘ತಾಲ ಸುಧಾ’-ಮುಂತಾದ ೧೪ ಸಂಗೀತ ಗ್ರಂಥ ರಚಿಸಿ ಸಂಗೀತ ಕ್ಷೇತ್ರಕ್ಕೆ ಅರ್ಪಿಸಿದ್ದಾರೆ. ಸಂಗೀತವೆಂಬುದೊಂದು ನಾದಯೋಗ. ಅದು ಆಡಂಬರ ವಸ್ತು ಅಲ್ಲ. ಅದು ಸರಸ್ವತಿ ದೇವಿಯ ಸೇವೆ. ನಾದಾನಂದದ ಉಪಾಸನೆ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯುವ ಸೋಪಾನವೆಂಬುದು ಅವರ ನಂಬಿಕೆ.

ಅವರ ಸಂಗೀತ ಸೇವೆಗೆ ಗುರುತಿಸಿ ರಾಜ್ಯ; ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ. ೧೯೯೦ರ ಅಕ್ಟೋಬರ ೨೩ ರಂದು ಹೈದ್ರಾಬಾದಿನಲ್ಲಿ ವೈಕುಂಠ ವಾಸಿಗಳಾದ ನಾದಯೋಗಿ ಶ್ರೀ ವೀಣಾ ಮಹಾರಾಜರ ಸ್ಮರಣಾರ್ಥ ಗುಳೇದಗುಡ್ಡದಲ್ಲಿ ನಾದಯೋಗಿ ಶ್ರೀ ಡಿ.ಆರ್. ಪರ್ವತೀಕರ ಸಂಗೀತ ಹಾಗೂ ಸಾಂಸ್ಕೃತಿಕ ಸ್ಮಾರಕ ಸಮಿತಿ ಪ್ರತಿವರ್ಷ ಅವರ ಸ್ಮರಣಾರ್ಥ ನಾದಾಂಜಲಿ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತ ಅವರಿಗೆ ಗೌರವ ಸಮರ್ಪಿಸುತ್ತಿದೆ.