ಹೆಸರು: ಲಲಿತ
ಊರು: ಮುಳ್ಳೂರು

 

ಪ್ರಶ್ನೆ: ಡಾಕ್ಟರಿಗೆ ನನ್ನ ನಮಸ್ಕಾರಗಳು, ಹಾಗೂ ನಿಲಯದವರಿಗೂ ಸಹ ನನ್ನ ಅಭಿನಂದನೆಗಳು. ಇದು ನಮ್ಮ ಊರಿನಲ್ಲಿ ನಡೆದ ಘಟನೆ. ಒಂದು ಹುಡುಗಿ ಅವಳಿಗೆ ಇನ್ನೂ ಮದುವೆಯಾಗಿಲ್ಲ ಅವಳಿಗೆ ಈಗ ೨೫ ವರ್ಷ. ಅವಳಿಗೆ ಘಟನೆ ನಡೆದಾಗ ೧೮ ವರ್ಷ ವಯಸ್ಸುಆಗ ಆವಳು ಅನೇಕ ಜನರ ಸಂಬಂಧ ಬೆಳೆಸಿ ಗರ್ಭಿಣಿಯಾದಳು. ಆದರೆ ಅವಳು ಈಗ ಅವರಲ್ಲಿ ಒಬ್ಬರ ಹೆಸರನ್ನು ಮಾತ್ರ ಹೇಳಿದ್ದಾಳೆ. ಆದರೆ ಗಂಡಸು ನಾನು ಮಾಡಿಲ್ಲ ಎಂದು ಹೇಳುತ್ತಾನೆ. ಈಗ ಅವಳಿಗೆ ವರ್ಷದ ಗಂಡು ಮಗು ಇದೆ. ಮಗುವಿನ ಹೋಲಿಕೆ ಅಲ್ಪ ಸ್ವಲ್ಪ ಮಾತ್ರ ಅವಳು ಹೇಳಿರುವ ಗಂಡಸಿನ ತರಹ ಇದೆ. ಹುಡುಗಿ ಮನೆಯವರು ಕಂಪ್ಲೆಂಟ್ ಕೊಟ್ಟು ಅದು ಅಷ್ಟಕ್ಕೆ ನಿಂತುಹೋಯಿತು. ಆನಂತರ ರಕ್ತ ಪರೀಕ್ಷೆ ಮಾಡಿಸಬೇಕು. ಮಗುವಿನ ರಕ್ತ ಗಂಡಸಿನ ರಕ್ತ ಒಂದೇ ಆಗಿದ್ದರೆ ಮಗು ಅವನದ್ದೇ ಎಂದು ಹೇಳಿದರು. ಆದರೆ ಪರೀಕ್ಷೆಯನ್ನು ಮಾಡಿಸಲಿಲ್ಲ. ಆದರೆ ಅದು ಅಷ್ಟಕ್ಕೆ ನಿಂತು ಹೋಗಿದೆ.

ನನ್ನ ಪ್ರಶ್ನೆ ಏನೆಂದರೆ,

. ಮಗುವಿನ ಅಪ್ಪ ಯಾರೆಂದು ತಿಳಿಯಲು ಯಾವ ಪರೀಕ್ಷೆ ಮಾಡಿಸಬೇಕು?

. ಪರೀಕ್ಷೆ ಮಾಡಿಸಲು ಖರ್ಚು ಎಷ್ಟಾಗುತ್ತದೆ?

. ಐದುಆರು ಗಂಡಸರಲ್ಲಿ ಇವರೊಬ್ಬರ ಹೆಸರು ಹೇಳಿರುವುದರಿಂದ ಗಂಡಸಿಗೆ ಯಾವ ಪರೀಕ್ಷೆ ಮಾಡಿಸಬೇಕು ಮತ್ತು ಅದು ನಿಜವಾಗಲು ಖಚಿತವಾಗಿರುವುದೇ ತಿಳಿಸಿ.

ನಮಗೆ ಇಬ್ಬರೂ ಸಂಬಂಧಿಗಳಾಗಬೇಕು. ಇದು ಎರಡು ಸಂಸಾರದ ವಿಷಯ ಹುಡುಗಿಗೆ ಮೋಸವಾದರೆ ಅವಳಿಗೆ ಮದುವೆ ಆಗಿಲ್ಲ. ಒಂದು ಮಗು ಬೇರೆ ಇದೆ ಇದಕ್ಕೆ ಅಪ್ಪನೇ ಇಲ್ಲ ಎಂದರೆ ಸಮಾಜದಲ್ಲಿ ಬದುಕುವುದು ಕಷ್ಟ. ಮದುವೆಯಾಗಿ ಮಕ್ಕಳಿರುವ ಅವನಿಗೆ ಕಟ್ಟುವುದಾದರೆ ಅವನ ಹೆಂಡತಿಗೆ ಇರಲು ಕಷ್ಟ ಹೀಗಿಗುವಾಗ ಯಾರು ಏನು ಮಾಡಿದರೆ ಇವರಿಗೆ ಪರಿಹಾರ ಸಿಗುತ್ತದೆ. ದಯವಿಟ್ಟು ತಿಳಿಸಿಈಗ ಮನೆಯವರೂ ಜಗಳವಾಡಿಕೊಂಡು ಸುಮ್ಮನಿದ್ದಾರೆಯೆ ಹೊರತು ಮುಂದಿನ ಭವಿಷ್ಯದ ಬಗ್ಗೆ ಯಾರು ಯೋಚನೆ ಮಾಡಿಲ್ಲ.

ದಯವಿಟ್ಟು ನನ್ನ ಪ್ರಶ್ನೆಗಳಿಗೆ ಉತ್ತರ ತಿಳಿಸುವಿರೆಂದು ನಂಬಿರುವ ನಿಮ್ಮ ವಿಶ್ವಾಸಿ.

ಉತ್ತರ: ಜಗತ್ತಿನ ಪ್ರತಿಯೊಬ್ಬ ಮನುಷ್ಯನು ತನ್ನದೇ ಆದ ಒಂದು ವಂಶವಾಹಿನಿಯ ಪಡಿಯಚ್ಚನ್ನು (Genetic Blueprint) ಹೊಂದಿರುತ್ತಾನೆ. ಇದನ್ನು DNA (Dexyribo Nucleic Acid) ಎಂದು ಕರೆಯುತ್ತಾರೆ. DNA ಎಂಬುದು ವಂಶವಾಹಿನಿ ಪರೀಕ್ಷೆ. ಈ ಪರೀಕ್ಷಿಯಿಂದ ಒಂದು ಮಗುವಿನ ನಿಜವಾದ ಅನುವಂಶಿಕ ತಂದೆ ಯಾರೆಂದು ತಿಳಿದುಕೊಳ್ಳಬಹುದು.

ಮಾನವನ ಶರೀರವು ಅಂಗಾಂಗಗಳು, ಅವಯವಗಳಿಂದ ಮಾಡಲ್ಪಟ್ಟಿರುತ್ತದೆ. ಪ್ರತಿಯೊಂದು ಅಂಗಾಂಗವು ಕೋಟ್ಯಾಂತರ ಜೀವಕೋಶಗಳಿಂದ ಮಾಡಲ್ಪಟ್ಟಿರುತ್ತದೆ. ಈ ಪ್ರತಿಯೊಂದು ಜೀವಕೋಶದ ಒಳಗೆ ನ್ಯೂಕ್ಲಿಯಸ್ ಎಂಬ ಚಿಕ್ಕ ಚಿಕ್ಕ ಕಣವಿರುತ್ತದೆ. ಈ ಕಣದೊಳಗೆ ವರ್ಣತಂತುಗಳು (Chromosome) ಇರುತ್ತವೆ. ವರ್ಣ ತಂತು ಎನ್ನುವುದು ವಂಶವಾಹಿನಿಯನ್ನು ಗುರುತಿಸುವ ಅಂಶ. ಇದು DNAಯಿಂದ ಮಾಡಲ್ಪಟ್ಟಿರುತ್ತದೆ. ಎಲ್ಲರಲ್ಲೂ ಒಂದೇ ರೀತಿಯ DNA ಇರುವುದಿಲ್ಲ. ಪ್ರತಿ DNA ಅಂಶದಲ್ಲೂ ಅನೇಕ ವಂಶವಾಹಿನಿಗಳಿರುತ್ತವೆ.  ಈ ವಂಶವಾಹಿನಿಗಳಿಗೆ ಜೀನ್ (Gene)  ಎಂದು ಕರೆಯುತ್ತಾರೆ. ಈ ವಂಶವಾಹಿನಿಗಳಿಂದಲೇ ವ್ಯಕ್ತಿಯ ಗುಣ ಮತ್ತು ನಡವಳಿಕೆಯನ್ನು ನಿರ್ಧರಿಸುವುದು. ಪ್ರತಿಯೊಂದು ವಂಶವಾಹಿನಿಯು ನಾಲ್ಕು ರಾಸಾಯನಿಕಗಳಿಂದ ಮಾಡಲ್ಪಟ್ಟಿರುತ್ತವೆ. ಅವು ಅಡಿನೈನ್ (Adenine), ಸಿಟೋಸೈನ್ (Cytosine), ಗೊನೈನ್ (Gunaine), ಮತ್ತು ಥೈಮಿನ್ (Thymine) ಈ ರಾಸಾಯನಿಕಗಳೇ ವಂಶವಾಹಿನಿಯ ಅಡಿಪಾಯಗಳಾಗಿರುತ್ತವೆ.

ಒಂದೊಂದು ವಂಶವಾಹಿನಿಯು ವಿಭಿನ್ನ ರೀತಿಯ ರಸಾಯನಿಕ ಸಮ್ಮಿಶ್ರಣವನ್ನು ಹೊಂದಿರುತ್ತವೆ. ಅಲ್ಲದೆ ಅವುಗಳ ಉದ್ದವೂ ಬದಲಾಗುತ್ತಾ ಹೋಗುತ್ತದೆ. ಇವುಗಳ ಉದ್ದವು ಎಷ್ಟು ಅಡಿಪಾಯಗಳಿಂದ ಮಾಡಲ್ಪಟ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿವೆ. ಒಂದೊಂದು ವಂಶವಾಹಿನಿಯು ಸಾವಿರಾರು ಅಡಿಪಾಯಗಳಿಂದ ಮಾಡಲ್ಪಟ್ಟಿದವೆ. ಒಂದು ವಂಶವಾಹಿನಿ ಎಷ್ಟು ಅಡಿಪಾಯಗಳಿಂದ ಮಾಡಲ್ಪಟ್ಟಿದೆ ಎಂಬುದನ್ನು ಅಳೆಯಬಹುದು. ಇದರಿಂದ ಒಬ್ಬರ ವಂಶವಾಹಿನಿಯನ್ನು ಇನ್ನೊಬ್ಬರ ವಂಶವಾಹಿನಿಗೆ ಹೋಲಿಸಿ ನೋಡಬಹುದು. ಒಬ್ಬ ಮನುಷ್ಯನಲ್ಲಿ ಸರಿಸುಮಾರು ೩೦ ರಿಂದ ೪೦ ಸಾವಿರ ವಂಶವಾಹಿನಿಗಳು ಇರುತ್ತವೆ.

DNA ಪರೀಕ್ಷೆಯನ್ನು ಒಂದು ಮಗುವಿನ ತಂದೆ/ತಾಯಿ ಯಾರೆಂದು ಕಂಡುಹಿಡಿಯಲು, ಅಪರಾಧಿಗಳನ್ನು, ಅತ್ಯಾಚಾರಿಗಳನ್ನು ಕಂಡುಹಿಡಿಯಲು ಬಳಸಲಾಗುತ್ತದೆ.

DNA ಪರೀಕ್ಷೆ ಮಾಡಲು ಮಗು, ತಾಯಿ ಮತ್ತು ಸಂಶಯಾಸ್ಪದಗೊಂಡಿರುವ ಪುರುಷನ ರಕ್ತ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಕೆಲವು ಸಾರಿ ಮಗು ಹುಟ್ಟುವುದಕ್ಕೆ ಮುಂಚೆಯೇ ಗರ್ಭಾವಸ್ಥಯಲ್ಲಿರುವಾಗಲೇ ಅದರ ಕಣಗಳನ್ನು ತೆಗೆದುಕೊಂಡು ಪರೀಕ್ಷೆ ಮಾಡಲಾಗುತ್ತದೆ. ಆತ್ಯಾಚಾರಿ ಮತ್ತು ಅಪರಾಧಿಗಳನ್ನು ಕಂಡುಹಿಡಿಯಬೇಕಾದಾಗಲೂ ಅಪರಾಧಿಯ ರಕ್ತವನ್ನು ಅತ್ಯಾಚಾರಕೊಳಗಾದ ಮಹಿಳೆಯ ರಕ್ತವನ್ನು ಅಥವಾ ಕೆಲವು ಸಾರಿ ಆಕೆ ಮರಣ ಹೊಂದಿದ್ದರೆ ಸತ್ತವರ ಅವಯವಗಳು ಅಥವಾ ಅವಯವಗಳಿಂದ ಕೂಡಿದ ವಸ್ತುಗಳಿಂದ ಪರೀಕ್ಷೆ ಮಾಡಿ ತಪ್ಪಿತಸ್ಥರು ಯಾರೆಂದು ಕಂಡುಹಿಡಿಯಬಹುದು.